ಸಂಘಪರಿವಾರದ ದಲಿತ ದ್ವೇಷ
ಈ ದೇಶ ಕೇವಲ ಪುರೋಹಿತಶಾಹಿಯವರಿಗೆ ಸೇರಿಲ್ಲ. ಶೂದ್ರ ಸಮುದಾಯಗಳಿಗೆ ಅವರದ್ದೇ ದೇವರುಗಳಿವೆ, ಸಂಕೇತಗಳಿವೆ. ದೇಶದ ಉಳಿದೆಡೆ ದೀಪಾವಳಿಯಲ್ಲಿ ಬಲಿ ಚಕ್ರವರ್ತಿಯನ್ನು ವಿಷ್ಣು ವಾಮನಾವತಾರ ತಾಳಿ ಕೊಂದ ದಿನವೆಂದು ಆಚರಿಸಲಾಗುತ್ತದೆ. ಕೇರಳದಲ್ಲಿ ಇದಕ್ಕೆ ಪ್ರತಿಯಾಗಿ ಓಣಂ ಆಚರಿಸಿ ಬಲಿಚಕ್ರವರ್ತಿಯನ್ನು ಆರಾಧಿಸುತ್ತಾರೆ. ಕೇಂದ್ರದ ಬಿಜೆಪಿ ಸರಕಾರ ಈ ಓಣಂ ಹಬ್ಬ ನಿಷೇಧಿಸುವುದೇ? ದುರ್ಗೆಯನ್ನು ತನ್ನ ಹೊಲಸು ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಳ್ಳಲು ಹೋಗಿ ಸ್ಮತಿ ಇರಾನಿ ಸಂಸತ್ತಿನಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಆದರೆ ಈಕೆಯ ಅವಿವೇಕದ ಭಾಷಣ ಮೋದಿಗೆ ತುಂಬಾ ಇಷ್ಟವಾಗಿದೆಯಂತೆ. ಯಾವುದೇ ಅಧ್ಯಯನ ಮತ್ತು ಆದರ್ಶ ಇಲ್ಲದ ಬಣ್ಣದ ಜಗತ್ತಿನ ಜನ ಸಂಸತ್ತಿಗೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಸ್ಮತಿ ಇರಾನಿ ಒಂದು ಉದಾಹರಣೆ.
ರೆಹಿತ್ ವೇಮುಲಾ ಆತ್ಮಹತ್ಯೆ ಮತ್ತು ಕನ್ಹಯ್ಯೆ ಕುಮಾರ್ ಬಂಧನ ಪ್ರಕರಣದಲ್ಲಿ ಸಂಘ ಪರಿವಾರದ ಹಿಂದುತ್ವ ಮುಖವಾಡ ಕಳಚಿಬಿದ್ದಿದೆ. ಆರೆಸ್ಸೆಸ್ ಎಂಬುದು ಬರೀ ಮುಸ್ಲಿಮ್, ಕ್ರೈಸ್ತ, ಕಮ್ಯುನಿಸ್ಟ್ ವಿರೋಧಿ ಸಂಘಟನೆ ಮಾತ್ರವಲ್ಲ, ಅದು ದಲಿತ ಆದಿವಾಸಿ ವಿರೋಧಿ ಸಂಘಟನೆ ಎಂಬುದು ಸಾಬೀತಾಗಿದೆ. ಕಾರ್ಪೊರೇಟ್ ಬಂಡವಾಳಶಾಹಿಯೊಂದಿಗೆ ರಾಜಿ ಮಾಡಿಕೊಂಡು ಮನುವಾದಿ ಪುರೋಹಿತಶಾಹಿ ಹಿಂದೂ ರಾಜ್ಯ ಸ್ಥಾಪಿಸುವುದು ಅದರ ಗುರಿ ಎಂಬುದು ಈಗ ಸ್ಪಷ್ಟವಾಗಿದೆ. ಈ ಫ್ಯಾಸಿಸ್ಟ್ ಪರಿವಾರದ ರಾಷ್ಟ್ರೀಯತೆಯ ಕರಾಳಸ್ವರೂಪ ಬಯಲಿಗೆ ಬಂದಿದೆ.
ಮನುವಾದಿ ಪುರೋಹಿತಶಾಹಿಯ ದೃಷ್ಟಿಯಲ್ಲಿ ಮುಸಲ್ಮಾನರು ಮಾತ್ರವಲ್ಲ, ಬಟ್ಟೆ ಹೊಲಿದು ಜೀವಿಸುವ ದಲಿತ ತಾಯಿಯ ಪುತ್ರ ರೋಹಿತ್ ಕೂಡ ದೇಶದ್ರೋಹಿಯಾಗುತ್ತಾನೆ. ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ ಪಡೆಯುವ ಅಂಗನವಾಡಿ ಕಾರ್ಯಕರ್ತೆಯ ಮಗ ಕನ್ಹಯ್ಯಾ ಕುಮಾರ್ ರಾಷ್ಟ್ರದ್ರೋಹಿಯಾಗುತ್ತಾನೆ. ದಲಿತರ, ಬಡವರ ಮಕ್ಕಳನ್ನು ರಾಷ್ಟ್ರದ್ರೋಹಿಗಳೆಂದು ಕಗ್ಗೊಲೆ ಮಾಡುವ, ಜೈಲಿಗೆ ಅಟ್ಟುವ ಈ ನೀಚರು ಚರಿತ್ರೆಯುದ್ದಕ್ಕೂ ಇಂತಹ ಪಾತಕ ಕೃತ್ಯಗಳನ್ನು ಮಾಡುತ್ತ ಬಂದಿದ್ದಾರೆ.
ದಮನಿತ ದಲಿತ ಸಮುದಾಯದ ನಡುವಿನಿಂದಲೇ ಬಂದ ಡಾ.ಅಂಬೇಡ್ಕರರನ್ನು ಈ ಜಾತಿವಾದಿಗಳು ದೇಶದ್ರೋಹಿಯೆಂದು ಟೀಕಿಸುತ್ತಿದ್ದರು. ಈ ಬಗ್ಗೆ ಗಾಂಧೀಜಿ ಜೊತೆ ವಾಗ್ವಾದ ನಡೆಸಿದರು. ಬಾಬಾ ಸಾಹೇಬರು ‘‘ನನಗೊಂದು ತಾಯ್ನೆಲ ಎಂಬುದಿಲ್ಲ. ಹಂದಿನಾಯಿಗಳಿಗಿಂತ ಕಡೆಯಾಗಿ ಜೀವಿಸುತ್ತಿರುವ, ಕುಡಿಯುವ ನೀರು ಸಿಗದಿರುವ ನೆಲ ನನ್ನ ತಾಯ್ನೆಲವೇ ಎಂದು ಪ್ರಶ್ನಿಸಿದ್ದರು. ಕೆಲವರು ನಮ್ಮನ್ನು ದೇಶದ್ರೋಹಿ ಎಂದು ಕರೆದರೂ ದುಃಖವಿಲ್ಲ. ನನ್ನ ಜನರ ನೋವಿಗೆ ದನಿ ನೀಡುತ್ತೇನೆ’’ ಎಂದು ಹೇಳಿದ್ದರು.
ಅಂದಿಗೂ ಇಂದಿಗೂ ಅಸ್ಪಶ್ಯರ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಸ್ವತಂತ್ರ ಭಾರತದಲ್ಲಿ ವಿಶ್ವವಿದ್ಯಾನಿಲಯವೊಂದರಲ್ಲಿ ರೋಹಿತ್‌ನಂತಹ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದರೆ ಏನರ್ಥ? ಇದರಿಂದ ರೋಸಿ ಹೋದ ಕನ್ಹಯ್ಯಾ ಕುಮಾರ್ ಬಂಡವಾಳದಿಂದ ಆಝಾದಿ, ಬ್ರಾಹ್ಮಣವಾದದಿಂದ ಆಝಾದಿ, ಶೋಷಣೆಯಿಂದ ಆಝಾದಿ ಎಂದು ಕೂಗಿದರೆ, ಈ ನಕಲಿ ದೇಶಭಕ್ತರಿಂದ ದೇಶದ್ರೋಹಿಯೆಂದು ಜೈಲಿಗೆ ಹೋಗಬೇಕಾಗಿ ಬಂದಿದೆ.
ದಲಿತರು ಮಾತ್ರವಲ್ಲ, ಈ ದೇಶದ ಮೂಲನಿವಾಸಿಗಳಾದ ಆದಿವಾಸಿಗಳು ಈ ಆರ್ಯಪಿಂಡಗಳ ದೃಷ್ಟಿಯಲ್ಲಿ ರಾಷ್ಟ್ರವಿರೋಧಿಯಾಗಿದ್ದಾರೆೆ. ಅಂತಲೇ ಬಸ್ತಾರ್‌ನಲ್ಲಿ ಗಿರಿಜನರ ನರ ಭೇಟೆ ನಡೆದಿದೆ. ಆದಿವಾಸಿ ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದ ಅದೇ ಜನಾಂಗದ ಸೋನಿ ಸೂರಿ ಮುಖಕ್ಕೆ ಆ್ಯಸಿಡ್ ಹಾಕಿದ್ದಾರೆ. ಎರಡು ಮಕ್ಕಳ ಆ ತಾಯಿ ದವಾಖಾನೆಯಲ್ಲಿ ವಿಲಿವಿಲಿ ಒದ್ದಾಡುತ್ತಿದ್ದಾಳೆ. ಈ ಹಿಂದೆ ಆಕೆ ನಕ್ಸಲ್ ಬೆಂಬಲಿಗರೆಂದು ಪೊಲೀಸರು ಆಕೆಗೆ ನಾನಾ ಚಿತ್ರಹಿಂಸೆ ನೀಡುತ್ತಿದ್ದಾರೆ.
ಇನ್ನು ಮುಸಲ್ಮಾನ ಪೊಲೀಸರ ಮೇಲೆ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ಮಹಾರಾಷ್ಟ್ರದ ಲಾತೂರಿನಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಯೂನುಸ್ ಶೇಖ್ ಎಂಬವರನ್ನು ಥಳಿಸಿ, ಗಡ್ಡ ಬೋಳಿಸಿ ಅವರ ಕೈಯಲ್ಲಿ ಭಗವಾಧ್ವಜ (ರಾಷ್ಟ್ರಧ್ವಜ ಅಲ್ಲ) ಕೊಟ್ಟು ಮಾಡಿದ ಅನಾಗರಿಕ ಕೃತ್ಯ ನಡೆದಿದೆ.
ಬರೀ ಇವರಿಂದಲೇ ಅಲ್ಲ, ಇಂದಿನ ಕೇಂದ್ರ ಸರಕಾರ ದಲಿತ ವಿರೋಧಿ, ಮನುವಾದಿ ಸರಕಾರ ಎನ್ನಲು ಹಲವಾರು ಉದಾಹರಣೆ ನೀಡಬಹುದು. ಸ್ನಾತಕೋತ್ತರ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಕತ್ತರಿಪ್ರಯೋಗ ಮಾಡಲಾಗಿದೆ. ಇಂತಹ ಯಾತನೆಗಳನ್ನು ಅನುಭವಿಸಿ ರೋಹಿತ್ ಆತ್ಮಹತ್ಯೆ ಮಾಡಿಕೊಂಡ. ಆತನ ಜೊತೆಗಾರರು ಇಂದಿಗೂ ಬೀದಿಯಲ್ಲಿದ್ದಾರೆ. ಇದ್ಯಾವುದಕ್ಕೂ ಮಾನವೀಯ ಸಹಾನುಭೂತಿ ತೋರದ ಬಿಜೆಪಿ ಮಂತ್ರಿಗಳು ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ರೋಹಿತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಸುಳ್ಳು ಹೇಳಿದ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಅನಗತ್ಯವಾಗಿ ಮಹಿಷಾಸುರನ ಬಗ್ಗೆ ಉಲ್ಲೇಖಿಸಿದರು. ಜೆಎನ್‌ಯು ಕ್ಯಾಂಪಸ್‌ನಲ್ಲಿ ದಲಿತ ಹಿಂದುಳಿದ ವಿದ್ಯಾರ್ಥಿಗಳು ಮಹಿಷಾಸುರ ವಧೆ ಮಾಡಿದ ದಿನವನ್ನು ವಿರೋಧಿಸಿದ್ದಾರೆ ಎಂದು ಟೀಕಿಸಿ ಇದನ್ನು ದೇಶದ್ರೋಹ ಎಂದರು. ಆದರೆ ಈ ದೇಶದಲ್ಲಿ ಮೇಲ್ಜಾತಿಯ ಜನರಿಗೆ ಮಹಿಷಾಸುರನನ್ನು ಕೊಂದ ದುರ್ಗೆ ದೇವತೆಯಾದರೆ, ದಲಿತ ದಮನಿತ ಸಮುದಾಯಗಳಿಗೆ ಮಹಿಷಾಸುರ ಸ್ವಾಭಿಮಾನದ ಸಂಕೇತ.
ಈ ದೇಶದ ಮೂಲನಿವಾಸಿಗಳಾದ ದಲಿತ ಸಮುದಾಯಕ್ಕೆ ಸೇರಿದ ರಾಜನಿಗೆ ಅಸುರ ಎಂದು ಹೆಸರಿಟ್ಟು ಆತನನ್ನು ರಾಕ್ಷಸನನ್ನಾಗಿ ಮಾಡಿ ಆತನನ್ನು ಕೊಂದ ದಿನವನ್ನು ದುರ್ಗಾಷ್ಟಮಿಯೆಂದು ಸಂಭ್ರಮದಿಂದ ಆಚರಿಸುತ್ತಾರೆಂದು ದಲಿತ ಸಮುದಾಯದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ವಿಭಿನ್ನವಾಗಿ ಆಚರಿಸಿದ್ದರು.
ಈ ದೇಶ ಕೇವಲ ಪುರೋಹಿತಶಾಹಿಯವರಿಗೆ ಸೇರಿಲ್ಲ. ಶೂದ್ರ ಸಮುದಾಯಗಳಿಗೆ ಅವರದ್ದೇ ದೇವರುಗಳಿವೆ, ಸಂಕೇತಗಳಿವೆ. ದೇಶದ ಉಳಿದೆಡೆ ದೀಪಾವಳಿಯಲ್ಲಿ ಬಲಿ ಚಕ್ರವರ್ತಿಯನ್ನು ವಿಷ್ಣು ವಾಮನಾವತಾರ ತಾಳಿ ಕೊಂದ ದಿನವೆಂದು ಆಚರಿಸಲಾಗುತ್ತದೆ. ಕೇರಳದಲ್ಲಿ ಇದಕ್ಕೆ ಪ್ರತಿಯಾಗಿ ಓಣಂ ಆಚರಿಸಿ ಬಲಿಚಕ್ರವರ್ತಿಯನ್ನು ಆರಾಧಿಸುತ್ತಾರೆ. ಕೇಂದ್ರದ ಬಿಜೆಪಿ ಸರಕಾರ ಈ ಓಣಂ ಹಬ್ಬವನ್ನು ನಿಷೇಧಿಸುವುದೇ? ದುರ್ಗೆಯನ್ನು ತನ್ನ ಹೊಲಸು ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಳ್ಳಲು ಹೋಗಿ ಸ್ಮತಿ ಇರಾನಿ ಸಂಸತ್ತಿನಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಆದರೆ ಈಕೆಯ ಅವಿವೇಕದ ಭಾಷಣ ಮೋದಿಗೆ ತುಂಬಾ ಇಷ್ಟವಾಗಿದೆಯಂತೆ. ಯಾವುದೇ ಅಧ್ಯಯನ ಮತ್ತು ಆದರ್ಶ ಇಲ್ಲದ ಬಣ್ಣದ ಜಗತ್ತಿನ ಜನ ಸಂಸತ್ತಿಗೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಸ್ಮತಿ ಇರಾನಿ ಒಂದು ಉದಾಹರಣೆ.
ರೋಹಿತ್ ವೇಮುಲಾನನ್ನು ಕೊಲ್ಲುವ, ಕನ್ಹಯ್ಯ ಕುಮಾರ್‌ನನ್ನು ರಾಷ್ಟ್ರದ್ರೋಹಿಯೆಂದು ಸೆರೆಮನೆಗೆ ಅಟ್ಟುವ, ಸೋನಿ ಸೂರಿ ಮುಖಕ್ಕೆ ಆ್ಯಸಿಡ್ ಹಾಕುವ ಇವರ ಹಿಂದುತ್ವ ವಾದವು ಇತಿಹಾಸದಲ್ಲಿ ಬಸವಣ್ಣನವರನ್ನು ಬಲಿ ತೆಗೆದುಕೊಂಡ, ಏಕಲವ್ಯನ ಹೆಬ್ಬೆರಳು ಕತ್ತರಿಸಿದ ಹಿಂದುತ್ವ, ಸಂತ ತುಕಾರಾಮನನ್ನು ಕೊಂದ ಹಿಂದುತ್ವವಲ್ಲದೇ ಬೇರೇನೂ ಅಲ್ಲ.
ಸಂಘ ಪರಿವಾರದ ಈ ಮನುವಾದಿ ಹಿಂದುತ್ವದ ವಿರುದ್ಧ ಇಡೀ ದೇಶದ ದಲಿತ ಸಮುದಾಯ ಈಗ ಸಿಡಿದೆದ್ದಿದೆ. ಹಿಂದುಳಿದ ವರ್ಗಗಳಲ್ಲೂ ಹೊಸ ಜಾಗೃತಿ ಮೂಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿ ಯುವಜನ ಸಮುದಾಯ ಹೋರಾಟಕ್ಕಿಳಿದಿದೆ. ಹೀಗಾಗಿ ಗೋಡ್ಸೆವಾದಿಗಳಿಗೆ ಚಡಪಡಿಕೆ ಶುರುವಾಗಿದೆ.
ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಉದಯಿಸಿದಾಗ, ದಲಿತರನ್ನು ಸುಟ್ಟ ಬೆಂಕಿ ದೇಶವನ್ನು ಸುಡುತ್ತದೆ ಎಂಬ ಘೋಷಣೆ ಎಲ್ಲೆಡೆ ಕೇಳಿ ಬರುತಿತ್ತು. ಈಗ ದಲಿತರನ್ನು ಕೊಲ್ಲುತ್ತಿರುವ ಸಂಘಿ ಮೃಗದ ವಿರುದ್ಧ ಎಲ್ಲ ಸಮುದಾಯದ ಬಡವರು ಒಂದಾಗುತ್ತಿದ್ದಾರೆ.