ರಾಣಿಬಾಗ್ ಮೃಗಾಲಯದೊಳಗೆ 63 ಗಾರ್ಡನ್‌ಗಳ ವಿಕಾಸದ ಸಿದ್ಧತೆ
ಭೈಕಲಾದ ಪ್ರಖ್ಯಾತ ರಾಣಿಬಾಗ್ ಮೃಗಾಲಯದಲ್ಲಿ ಹಿಂದಿನ ಆಕರ್ಷಣೆ ಕಡಿಮೆಯಾಗಿದೆ. ಮುಂಬೈಗೆ ಬರುವ ಪ್ರವಾಸಿಗರಿಗೆ ಮುಂಬೈ ದರ್ಶನ್ ಬಸ್ಸುಗಳಲ್ಲಿ ಮುಂಬೈಯ ಪ್ರಮುಖ ಪ್ರೇಕ್ಷಣೀಯ ತಾಣಗಳನ್ನು ಒಂದು ದಿನದಲ್ಲಿ ಸುತ್ತಾಡಬಹುದು. ಆದರೆ ಹೆಚ್ಚುದಿನ ಇರುವ ಪ್ರವಾಸಿಗರು ಬೊರಿವಲಿಯಲ್ಲಿರುವ ನೇಷನಲ್ ಪಾರ್ಕ್, ಭೈಕಲಾದ ರಾಣಿಬಾಗ್ ಮೃಗಾಲಯ..... ಇತ್ಯಾದಿಗಳನ್ನು ವೀಕ್ಷಿಸಲು ಇಚ್ಛಿಸುವುದಿದೆ. ಆದರೆ ರಾಣಿಬಾಗ್ ಮೃಗಾಲಯದಲ್ಲಿ ಪ್ರಾಣಿಗಳೇ ಕಾಣೆಯಾಗುತ್ತಿದ್ದು ಒಂದಷ್ಟು ವಿದೇಶಿ ಪಕ್ಷಿಗಳಷ್ಟೇ ಸದ್ಯ ಗಮನ ಸೆಳೆಯುತ್ತಿವೆ.
ಇದೀಗ ರಾಣಿಬಾಗ್‌ನ ಒಳಗಡೆ ಚಿಕ್ಕಚಿಕ್ಕ ಗಾರ್ಡನ್‌ಗಳನ್ನು ನಿರ್ಮಿಸಿದ್ದು ಇವುಗಳ ವಿಕಾಸಕ್ಕಾಗಿ ಮನಪಾ ಆಡಳಿತವು 14 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಧರಿಸಿದೆ. ಗಾರ್ಡನ್‌ನ್ನು ಲ್ಯಾಂಡ್‌ಸ್ಕೋಪಿಂಗ್ ಹುಲ್ಲಿನಿಂದ ಶೋಭಿಸುವಂತೆ ಮಾಡಿ ಪ್ರವಾಸಿಗರನ್ನು ಸೆಳೆಯುವ ಕೆಲಸ ಆರಂಭವಾಗಲಿದೆ. ಆವಾಗ ಇಲ್ಲಿ ಕೂರಲು ಪ್ರವಾಸಿಗರು ಖುಷಿ ಪಡುತ್ತಾರೆ.
ಭೈಕಲಾದ ರಾಣಿಬಾಗ್ ಉದ್ಯಾನವನು ನವೀಕರಣಗೊಳಿಸುವ ಕೆಲಸ ನಡೆಯುತ್ತಿದೆ. ಭೈಕಲಾದಲ್ಲಿ 2,10,437 ವರ್ಗ ಮೀಟರ್ ವ್ಯಾಪ್ತಿಯಲ್ಲಿ ರಾಣಿಬಾಗ್ ಮೃಗಾಲಯವಿದ್ದು ಮನಪಾ ಆಡಳಿತವು ಇದರ ನವೀಕರಣಕ್ಕೆ ಇಳಿದಿದೆ. ಹಾಗೂ ಮೃಗಾಲಯಕ್ಕೆ ಹೊಸ ಪ್ರಾಣಿಗಳನ್ನು ತರುವ ಸಿದ್ಧತೆಯಾಗುತ್ತಿದೆ. ಅಷ್ಟೇ ಅಲ್ಲ, ಪೆಂಗ್ವಿನ್ ಅಂತಹ ಪಕ್ಷಿಗಳನ್ನೂ ತರಲಾಗುವುದಂತೆ. ಇದಕ್ಕೆಲ್ಲ 105 ಕೋಟಿ ರೂಪಾಯಿ ಖರ್ಚು ಬರಲಿದ್ದು, ಮನಪಾ ಕಮಿಷನರ್ ಅಜೋಯ್ ಮೆಹ್ತಾ ಅವರು ಖರ್ಚಿನಲ್ಲಿ ಸದ್ಯ ಕಡಿತಗೊಳಿಸಿ ಖರ್ಚನ್ನು 65 ಕೋಟಿ ರೂಪಾಯಿಗೆ ಇಳಿಸಿದ್ದಾರೆ. ಹಾಗಿದ್ದೂ ಒಳಗಿರುವ 63 ಚಿಕ್ಕ ಚಿಕ್ಕ ಗಾರ್ಡನ್‌ಗಳ ವಿಕಾಸಕ್ಕಾಗಿಯೇ 14 ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದೆ. ಮುಂದಿನ ಆರು ತಿಂಗಳೊಳಗೆ ಈ ಕೆಲಸ ಪೂರ್ಣಗೊಳಿಸಲು ಮನಪಾ ಆಡಳಿತ ನಿರ್ಧರಿಸಿದೆ. ರಾಣಿಬಾಗ್ ಮತ್ತೆ ಆಕರ್ಷಿಸಲಿದೆ.
ನಕಲಿ ವಾಟರ್ ಬಾಟ್ಲಿಗಳ ವಿಪರೀತ ಹಾವಳಿ
ಕೋಲ್ಡ್ ವಾಟರ್, ಪ್ಯಾಕಿಂಗ್ ವಾಟರ್, ಫ್ಲೇವರ್ ವಾಟರ್ ...... ಇತ್ಯಾದಿಗಳ ಅನಧಿಕೃತ ನಿರ್ಮಾಣದ ವಿರುದ್ಧ ಕಠಿಣ ಕಾರ್ಯಾಚರಣೆ ಕೈಗೊಳ್ಳುವಂತೆ ಇಂಡಿಯನ್ ಬೋಟಲ್ಡ್‌ವಾಟರ್ ಮೆನ್ಯುಫಾಕ್ಚರರ್ಸ್ ಎಸೋಸಿಯೇಶನ್ ಎಫ್.ಡಿ.ಎ. ಮುಂದೆ ದೂರು ದಾಖಲಿಸಿದೆ.
ಮುಂಬೈ ಮಹಾನಗರದ ಪರಿಸರದಲ್ಲಿ ಮಾತ್ರವಲ್ಲ, ವಸಾಯಿ ವಿರಾರ್ - ಭಾಯಂದರ್ - ಪನ್ವೇಲ್.... ಮೊದಲಾದೆಡೆ ಅನಧಿಕೃತ ರೂಪದಿಂದ ಬೋಟಲ್ಡ್ ವಾಟರ್ ಉತ್ಪಾದಕರು ಪ್ಯಾಕಿಂಗ್ ನೀರನ್ನು ವಿತರಿಸುತ್ತಿರುವುದು ಇಂಡಿಯನ್ ಬೋಟಲ್ಡ್ ವಾಟರ್ ಮೆನ್ಯುಫಾಕ್ಚರ್ ಎಸೋಸಿಯೇಶನ್‌ಗೆ ತಿಳಿದು ಬಂದಿದೆಯಂತೆ.ಇವರು ಸರಿಯಾದ ಲೈಸನ್ಸ್ ಇಲ್ಲದೆ, ಐಎಸ್‌ಐ ಮಾರ್ಕ್ ಇಲ್ಲದೆ ನೇರವಾಗಿ ಮಾರುಕಟ್ಟೆಗೆ ಈ ನೀರಿನ ಬಾಟಲಿಗಳನ್ನು ವಿತರಿಸುತ್ತಿದ್ದಾರೆ.
ಇದನ್ನು ಗಮನಿಸಿ ಎಸೋಸಿಯೇಷನ್‌ನ ಪ್ರತಿನಿಧಿ ಮಂಡಲವು ಮುಂಬೈಯ ಎಫ್.ಡಿ.ಎ. ವಿಭಾಗದಲ್ಲಿ ವಿಜಿಲೆನ್ಸ್ ಜಾಯಿಂಟ್ ಕಮಿಷನರ್ ಹರೀಶ್ ಬೈಜಲ್ ಮತ್ತು ಅಸಿಸ್ಟೆಂಟ್ ಕಮಿಷನರ್ ಅಭಿಮನ್ಯು ಕೇರ್ವೆ ಅವರನ್ನು ಭೇಟಿಯಾಗಿ ಸಂಬಂಧಿಸಿದ ದಾಖಲೆಗಳನ್ನು ನೀಡಿದೆ.
106 ವರ್ಷದ ಭೈಕಲಾ ಜೈಲ್‌ನಲ್ಲಿ ಕೈದಿಗಳಿಗೆ ಸ್ನಾನಕ್ಕೆ ಜಾಗವಿಲ್ಲ
ಮುಂಬೈಯಲ್ಲಿ ಕ್ರೂರ ಅಪರಾಧಗಳನ್ನು ಮಾಡಿದ ಕುಖ್ಯಾತ ಅಪರಾಧಿಗಳನ್ನು ಭೈಕಲಾ ಜೈಲ್‌ನಲ್ಲಿ ಹಾಕುತ್ತಾರೆ. ಆದರೆ ಅಲ್ಲಿನ ಶೋಚನೀಯ ಪರಿಸ್ಥಿತಿ ಎಂದರೆ ಇಂತಹ ಅಪರಾಧಿಗಳಿಗೆ ಅಲ್ಲಿ ಬಾತ್‌ರೂಮ್ ಇಲ್ಲ.ಹಾಗಾಗಿ ಹೊರಗಡೆ ಎಲ್ಲರ ಎದುರು ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ. ಅಲ್ಲಿನ ಮಹಿಳಾ ಕೈದಿಗಳಿಗೂ ಇದೇ ಪರಿಸ್ಥಿತಿ.
ಈ ಸಂಗತಿ ಬೆಳಕಿಗೆ ಬಂದದ್ದು ಮುಂಬೈ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಒಂದು ವರದಿಯ ಕಾರಣ.ಇಲ್ಲಿ ಇನ್ನೂ ಒಂದು ಸಂಗತಿ ಎಂದರೆ 26 ಮಹಿಳಾ ಅಪರಾಧಿಗಳ ಮಕ್ಕಳೂ ಇದೇ ಸ್ಥಿತಿಯಲ್ಲಿ ಜೈಲ್‌ನಲ್ಲಿ ಉಳಕೊಂಡಿದ್ದಾರೆ.ಜನ ಅದಾಲತ್ ಮಂಚ್ ಈ ವರದಿಯನ್ನು ನ್ಯಾಯಾಲಯದಲ್ಲಿ ದಾಖಲಿಸಿದೆ. ವರದಿಯ ಪ್ರಕಾರ ಭೈಕಲಾ ಜೈಲ್‌ನಲ್ಲಿ ಒಟ್ಟು 209 ಮಹಿಳಾ ಕೈದಿಗಳಿದ್ದಾರೆ. ಇದರಲ್ಲಿ 202 ಅಂಡರ್ ಟ್ರಾಯಲ್ ಇದ್ದಾರೆ ಮತ್ತು 7 ಜನ ದೋಷಿ ಎಂದು ತೀರ್ಪು ಬಂದಿದೆ. ಜೈಲ್‌ನಲ್ಲಿ ಪುರುಷ ಕೈದಿಗಳ ಸಂಖ್ಯೆ 305 ಇದೆ. ಇವರಲ್ಲಿ 266 ಅಂಡರ್ ಟ್ರಾಯಲ್ ಮತ್ತು 39 ದೋಷಿ ಎಂದು ತೀರ್ಪು ಬಂದಿದೆ.
ಜೈಲ್‌ನಲ್ಲಿ ಯಾವ ಮಕ್ಕಳು ತಮ್ಮ ತಾಯಿಯ ಜೊತೆಗಿದ್ದಾರೋ ಅವರ ಶಿಕ್ಷಣ ಮತ್ತು ಆರೈಕೆ ಹೇಗಿರಬೇಕು ಎನ್ನುವ ಬಗ್ಗೆ ಈ ತನಕವೂ ಸರಕಾರದ ವತಿಯಿಂದ ಯಾವುದೇ ಹೆಜ್ಜೆ ಇರಿಸಿಲ್ಲ ಎಂದು ವರದಿಯಲ್ಲಿ ಚಿಂತೆ ವ್ಯಕ್ತಪಡಿಸಲಾಗಿದೆ.
ಇನ್ನು ಸುರಕ್ಷೆಯ ವಿಷಯವಾಗಿ ಗಾರ್ಡ್‌ಗಳ ಸಂಖ್ಯೆಯೂ ಕಡಿಮೆ ಇದೆ. ಹಾಗೂ 150 ರಷ್ಟು ಸುರಕ್ಷಾ ಗಾರ್ಡ್‌ಗಳ ಅಗತ್ಯವಿದೆ. ಪ್ರತಿ ಬ್ಯಾರಕ್‌ನಲ್ಲಿ 32 ಕೈದಿಗಳಿದ್ದಾರೆ. ಆದರೆ ಟಾಯ್ಲೆಟ್ ಕೇವಲ ನಾಲ್ಕು ಮಾತ್ರ. ಈ ದೃಶ್ಯವೇ ಜೈಲ್‌ನ ಪರಿಸ್ಥಿತಿಯನ್ನು ತಿಳಿಸುವುದಕ್ಕೆ ಸಾಕು.
ಈ ವರದಿಯಲ್ಲಿ ಹೇಳಿದಂತೆ 106 ವರ್ಷ ಹಳೆಯದಾದ ಭೈಕಲಾ ಜೈಲ್‌ನ ಕಟ್ಟಡದ ಪುನರ್‌ನಿರ್ಮಾಣ ಅಗತ್ಯವಿದೆ. ಗೋಡೆಗಳು ಬಿರುಕು ಬಿಟ್ಟಿವೆ.ಅನೇಕ ಸ್ಥಳಗಳಲ್ಲಿ ಮಣ್ಣು ಉದುರಿ ಬೀಳುತ್ತಿದೆ. ಜೈಲ್‌ನ ಗೋಡೆಗಳು 21-22 ಅಡಿ ಇರಬೇಕು. ಆದರೆ ಇಲ್ಲಿ 15-17 ಅಡಿ ಮಾತ್ರ ಇದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಈ ವರದಿಯನ್ನು ವಿಚಾರಣೆ ಗೈದ ನ್ಯಾಯಾಧೀಶ ವಿ.ಎಂ.ಕನಾಡೆ ಮತ್ತು ರೇವತಿ ಮೋಹಿತೆ ಡೆರೆ ಅವರ ಪೀಠವು ಸರಕಾರದಿಂದ ಈ ಪ್ರಕರಣದಲ್ಲಿ ಉತ್ತರ ಕೇಳಿದೆ.
ಸಂಜಯ್ ದತ್‌ನ ವರದಿ ಮಾಡಲು ಹೊರಟ ಪತ್ರಕರ್ತರ ಮೊಬೈಲ್ ಮಾಯ
ಮುಂಬೈ ಸರಣಿ ಬಾಂಬ್ ಸ್ಫೋಟ ಕಾಂಡದಲ್ಲಿ ಜೈಲು ಸಜೆ ಅನುಭವಿಸಿ ಯೆರವಾಡ ಜೈಲ್‌ನಲ್ಲಿ ಕೈದಿ ನಂಬರ್ 16,656 ಆಗಿದ್ದ ಬಾಲಿವುಡ್ ನಟ ಸಂಜಯ್ ದತ್ 25-2-2016 ರಂದು ಬಿಡುಗಡೆಗೊಂಡು ಮುಂಬೈಯ ತನ್ನ ಮನೆ ಇಂಪೀರಿಯಲ್ ಹೈಟ್ಸ್‌ಗೆ ತಲುಪಿದ ನಂತರ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು.ಬಾಂದ್ರಾ ಪಾಲಿಹಿಲ್‌ನ ಈ ಮನೆಗೆ ಬರುವಾಗಲೇ ಅಭಿಮಾನಿಗಳು, ಪತ್ರಕರ್ತರು, ಕ್ಯಾಮರಾಮೆನ್‌ಗಳು ಕಿಕ್ಕಿರಿದು ಸೇರಿದ್ದರು.ಸ್ಟಂಟ್‌ಮೆನ್‌ಗಳೂ ಅಲ್ಲಿದ್ದು ಸಂಜಯ್‌ನ ಕೈಕುಲುಕುವುದಕ್ಕೆ ಉತ್ಸಾಹಿತರಾಗಿದ್ದರು. ಆದರೆ ಈ ಸಂದರ್ಭದಲ್ಲಿ ಮೊಬೈಲ್ ಕಳ್ಳರಿಗೆ ಸುಗ್ಗಿಯೇ ಸುಗ್ಗಿ. ಅಲ್ಲಿನ ನೂಕುನುಗ್ಗಲಿಗೆ ಸುಮಾರು 25 ಜನರ ಮೊಬೈಲ್‌ಗಳನ್ನು ಕಳ್ಳರು ಕದ್ದರು. ಎನ್.ಎನ್.ಐಯ ವರಿಷ್ಠ ಪತ್ರಕರ್ತ ರಜಿಕ್ ಖಾನ್, ಕ್ಯಾಮರಾಮೆನ್ ಜೋ, ರವಿ ನಿಕಮ್, ಎಬಿಪಿ ಮಝಾ ಮರಾಠಿ ಚ್ಯಾನೆಲ್‌ನ ಕ್ಯಾಮರಾಮೆನ್ ರವಿ, ದಿ ವೀಕ್‌ನ ಜನಕ್ ದತ್, ಟೈಮ್ಸ್ ನೌ ಪತ್ರಕರ್ತರು..... ಹೀಗೆ ಹತ್ತರಷ್ಟು ಮೀಡಿಯಾ ಕರ್ಮಿಗಳ ಮೊಬೈಲ್ ಆವಾಗ ಕಳ್ಳತನವಾಯಿತು. ಅತ್ತ ಸ್ಟಂಟ್ ಮ್ಯಾನ್, ಕಿರುತೆರೆ ಕಲಾವಿದರಲ್ಲಿ ಕೆಲವರ ಮೊಬೈಲ್‌ಗಳೂ ಕಳೆದು ಹೊದವು. ಗುಂಪಿನ ಲಾಭವನ್ನು ಮೊಬೈಲ್ ಕಳ್ಳರು ಚೆನ್ನಾಗಿ ಬಳಸಿದರು.
ರಾತ್ರಿ ಶಾಲಾ ವಿದ್ಯಾರ್ಥಿಗಳಿಗಾಗಿ ಇ-ಬಸ್ಸು
ರಾತ್ರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗಾಗಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ನಂತಹ ಸೌಲಭ್ಯಗಳು ಈ ತನಕ ದೊರೆತಿಲ್ಲ.ಈ ಕೊರತೆಯನ್ನು ನೀಗಿಸಲು ಸಾಮಾಜಿಕ ಸಂಸ್ಥೆಯೊಂದು ಇ-ಬಸ್ಸು ತಂದಿದೆ. ಆಧುನಿಕ ಶಿಕ್ಷಣದ ಎಲ್ಲಾ ಉಪಕರಣಗಳು ಅದರಲ್ಲಿವೆ. ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ನಿಂದ ವಂಚಿತರಾದ ಮಕ್ಕಳು ಈ ಸೇವೆಯ ಲಾಭವನ್ನು ಎತ್ತಿಕೊಳ್ಳಲಿರುವರು.ಬಡತನದಲ್ಲಿ ಬದುಕು ಸಾಗಿಸುತ್ತಿರುವ ವಿದ್ಯಾರ್ಥಿಗಳು ಹಗಲು ತಮ್ಮ ಪರಿವಾರದವರಿಗಾಗಿ ಕೆಲಸ ಮಾಡುತ್ತಿದ್ದು ಸಂಜೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಈ ರಾತ್ರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಪಠ್ಯಪುಸ್ತಕಗಳ ಜ್ಞಾನ ಸಿಗುತ್ತದೆ. ಆದರೆ ಇಂದಿನ ಆಧುನಿಕ ಶಿಕ್ಷಣದಲ್ಲಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ನ ಬೇಡಿಕೆ ಇದ್ದರೂ ಈ ಮಕ್ಕಳಿಗೆ ಸಿಕ್ಕಿಲ್ಲ. ಈ ಕೊರತೆಯನ್ನು ಹೋಗಲಾಡಿಸಲು ರಾತ್ರಿ ಶಾಲಾ ವಿದ್ಯಾರ್ಥಿಗಳಿಗಾಗಿ ಕೆಲಸ ಮಾಡುವ ಎನ್.ಜಿ.ಒ. ಮಾಸೂಮ್ ಮೊಬೈಲ್ ಬಸ್ಸು ಸೇವೆ ಆರಂಭಿಸಲು ಹೊರಟಿದೆ. ಫೆಬ್ರವರಿ 23 ರಿಂದ ಈ ಬಸ್ಸು ಸೇವೆ ಪ್ರಾರಂಭವಾಗಿದೆ. ಈ ಬಸ್ಸಿನಲ್ಲಿ ಕಂಪ್ಯೂಟರ್, ಇಂಟರ್‌ನೆಟ್, ಲ್ಯಾಪ್‌ಟಾಪ್.... ಇಂತಹ ಆಧುನಿಕ ಸೌಲಭ್ಯಗಳು ಇರುವುದು.ಈ ಬಸ್ಸಿನಲ್ಲಿ ನಿಯಮಿತ ಪಠ್ಯಕ್ರಮದ ಜೊತೆಗೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪಠ್ಯಕ್ರಮ ಕೂಡಾ ಓದಿಸಲಾಗುವುದು.ಈ ಬಸ್ಸಿನಲ್ಲಿ ಒಂದು ಹಿಂದಿನ ಬಾಗಿಲು ಇರುವುದು.ಒಂದು ವೇದಿಕೆ ಇರುವುದು. ಈ ಬಸ್ಸನ್ನು ನಾರ್ವೆಯ ಎಲ್ಕೇಮ್ ಕಂಪೆನಿ ನಿರ್ಮಿಸಿದೆ. ಇದರಲ್ಲಿ ಏಕಕಾಲಕ್ಕೆ 25 ಮಕ್ಕಳು ಕೂರಬಹುದಾಗಿದೆ. ಈ ಯೋಜನೆಯ ಮುಖ್ಯಸ್ಥರಾಗಿದ್ದಾರೆ ವಿಶ್ವಜೀತ್ ಪವಾರ್.
ಈ ಬಸ್ಸಿನ ಸೌಲಭ್ಯ ಮೊದಲಿಗೆ 5 ರಾತ್ರಿ ಶಾಲೆಗಳ 8ನೆ ಮತ್ತು 10ನೆ ತರಗತಿಯ ವಿದ್ಯಾರ್ಥಿಗಳಿಗೆ ಸಿಗುವುದು.ಪ್ರತೀ ಶಾಲೆಗೆ ಒಂದು ಗಂಟೆ ಕಾಲ ಸವಯಾವಕಾಶ ಇರುವುದು.
ಮುಂಬೈಕರ್ ಸೇವೆಯಿಂದ 30 ಆ್ಯಂಬುಲೆನ್ಸ್‌ಗಳು ಹೊರಕ್ಕೆ
ಹೃದಯಾಘಾತ, ದುರ್ಘಟನೆ ಮತ್ತು ಅನ್ಯ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಆರಂಭಿಸಲಾದ 108 ಕ್ರಮಾಂಕ (ಇ.ಎಂ.ಎಸ್) ಆ್ಯಂಬುಲೆನ್ಸ್‌ಗೆ ಉತ್ತಮ ಪ್ರತಿಕ್ರಿಯೆಗಳು ದೊರೆತ ಹೊರತಾಗಿಯೂ ಮುಂಬೈಕರ್‌ರ ಉದಾಸೀನತೆಯ ಕಾರಣ 30 ಆ್ಯಂಬುಲೆನ್ಸ್‌ಗಳನ್ನು ಮುಂಬೈ ಮಹಾನಗರದಿಂದ ತೆಗೆದು ಗ್ರಾಮೀಣ ಕ್ಷೇತ್ರಗಳಿಗೆ ಕಳುಹಿಸಲಾಗಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಮಿಶನ್ ಮತ್ತು ಮಹಾರಾಷ್ಟ್ರ ರಾಜ್ಯದ ಸಾರ್ವಜನಿಕ ಸ್ವಾಸ್ಥ್ಯ ಮಿಶನ್‌ನ ಅನ್ವಯ ಎರಡು ವರ್ಷ ಮೊದಲಿಗೆ ಈ ಯೋಜನೆ ಆರಂಭಿಸಲಾಗಿತ್ತು.ಈ ಯೋಜನೆ ಆರಂಭವಾದ ನಂತರ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಸಹಾಯ ಪಡೆದಿದ್ದಾರೆ.ಈ ಯೋಜನೆಯಂತೆ 937 ಸುಸಜ್ಜಿತ ಅಂಬ್ಯುಲೆನ್ಸ್ ಉಪಲಬ್ಧಗೊಳಿಸಲಾಗಿತ್ತು.ಮುಂಬೈಯಲ್ಲಿ ದುರ್ಘಟನೆಗಳನ್ನು ಮುಂದಿಟ್ಟು 142 ಆ್ಯಂಬುಲೆನ್ಸ್‌ಗಳನ್ನು ಇರಿಸಲಾಗಿತ್ತು.ಆದರೆ ಈ ಉಚಿತ ಸೇವೆಗಾಗಿ ಮುಂಬೈಕರ್‌ರಿಂದ ಬಹಳ ಕಡಿಮೆ ಫೋನ್‌ಗಳು ಬರುತ್ತಿತ್ತಂತೆ. ಮುಂಬೈಯ ಮಹತ್ವಪೂರ್ಣ ರೈಲ್ವೆ ಸ್ಟೇಷನ್‌ಗಳಲ್ಲಿ, ಆಸ್ಪತ್ರೆ, ಮಂತ್ರಾಲಯಗಳಲ್ಲಿ ಆ್ಯಂಬುಲೆನ್ಸ್ ಇರಿಸಲಾಗುತ್ತದೆ. 108 ನಂಬರ್‌ಗೆ ಡಯಲ್ ಮಾಡಿದರೆ 15-20 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಅಂಬ್ಯುಲೆನ್ಸ್ ಬರುತ್ತದೆ. ಇದೀಗ ಮುಂಬೈಯ 30 ಆ್ಯಂಬುಲೆನ್ಸ್‌ಗಳನ್ನು ತೆಗೆದು ಮರಾಠವಾಡ ಕೊಂಕಣ ಕ್ಷೇತ್ರ ಇತ್ಯಾದಿ ಸ್ಥಳಗಳಿಗೆ ಕಳುಹಿಸಲಾಗಿದೆ.
ಅನಧಿಕೃತ ಬ್ಯಾನರ್ಸ್-ಹೋರ್ಡಿಂಗ್ ತಾಗಿಸದಿರಲು ಶಿವಸೈನಿಕರಿಗೆ ಉದ್ಧವ್ ಸೂಚನೆ ಮುಂಬೈಯಲ್ಲಿ ದೊಡ್ದ ಪ್ರಮಾಣದಲ್ಲಿ ಅನಧಿಕೃತ ಬ್ಯಾನರ್ಸ್ ಮತ್ತು ಹೋರ್ಡಿಂಗ್ ತಾಗಿಸಲಾಗುತ್ತಿದೆ. ಇವುಗಳನ್ನು ತೆಗೆಸಲು ಮಹಾನಗರಪಾಲಿಕೆ ಭಾರೀ ಒದ್ದಾಟ ನಡೆಸುತ್ತಿದೆ. ಇದಕ್ಕಾಗಿ ಮನಪಾಕ್ಕೆ ಪ್ರತೀದಿನ ಒಂದೂವರೆ ಲಕ್ಷ ರೂಪಾಯಿ ವ್ಯರ್ಥ ಮಾಡಬೇಕಾದ ಸ್ಥಿತಿ ಇದೆ. ಇದರಲ್ಲಿ ಲೈಸನ್ಸ್ ಇನ್ಸ್‌ಪೆಕ್ಟರ್‌ರ ಜೊತೆ ಕಾರ್ಮಿಕರ ಮತ್ತು ವಾಹನದ ಖರ್ಚು ಸೇರಿದೆ. ದೂರು ಬಂದ ನಂತರ ಈ ಕಾರ್ಮಿಕರು ಅಲ್ಲಿಗೆ ತೆರಳಿ ಅನಧಿಕೃತ ಬ್ಯಾನರ್ಸ್ ಮತ್ತು ಹೋರ್ಡಿಂಗ್‌ಗಳನ್ನು ಕಿತ್ತು ಹಾಕುತ್ತಾರೆ.
ಹೈಕೋರ್ಟ್‌ನ ನಿರ್ದೇಶನದ ನಂತರ ಮನಪಾ ಶಹರದಲ್ಲಿ ಬ್ಯಾನರ್ಸ್‌ಗೆ ಅನುಮತಿ ನೀಡುವುದನ್ನು ತಡೆ ಹಿಡಿದಿದೆ. ಇದರ ಹೊರತಾಗಿಯೂ ರಾಜಕೀಯ ರಂಗದ ಜನರು ಮತ್ತು ಸಾಮಾಜಿಕ ಸಂಘಟನೆಗಳು ಅನಧಿಕೃತ ರೂಪದಿಂದ ಪೋಸ್ಟರ್ಸ್ ಮತ್ತು ಬ್ಯಾನರ್ಸ್ ತಾಗಿಸಿ ಶಹರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಮುಂಬೈಯಲ್ಲಿ ಅನಧಿಕೃತ ಹೋರ್ಡಿಂಗ್ ಮತ್ತು ಬ್ಯಾನರ್ಸ್ - ಪೋಸ್ಟರ್ಸ್‌ಗಳನ್ನು ಮುಂದಿಟ್ಟು ಹೈಕೋರ್ಟ್ ಕಠಿಣ ನಿಲುವು ತಳೆದಿದೆ. ಸಮಯ ಸಮಯಕ್ಕೆ ಇವುಗಳನ್ನು ತೆಗೆದುಹಾಕಲು ಆದೇಶ ನೀಡುತ್ತದೆ. ಮನಪಾದ ಲೈಸನ್ಸ್ ವಿಭಾಗದ ಅಧೀಕ್ಷಕ ಎಸ್.ಬಿ.ಬಾಂಡೆ ಅವರು ಕಳೆದ ಕೆಲವು ವರ್ಷಗಳಿಂದ ಬ್ಯಾನರ್ಸ್ ಮತ್ತು ಪೋಸ್ಟರ್ಸ್ ತಾಗಿಸಲು ಅನುಮತಿಯನ್ನು ಮನಪಾ ತಡೆಹಿಡಿದಿದೆ ಎಂದಿದ್ದಾರೆ.ಜೊತೆಗೆ ಕೆಲವು ವಿಶೇಷ ಕಾರ್ಯಕ್ರಮಗಳಲ್ಲಿ ಮಾತ್ರ ಬ್ಯಾನರ್ಸ್ - ಹೋರ್ಡಿಂಗ್‌ಗೆ ಮನಪಾ ಅನುಮತಿ ನೀಡುತ್ತದೆ. ಮನಪಾ ಲೈಸನ್ಸ್ ವಿಭಾಗದ ಅನುಸಾರ ಕಳೆದ ವರ್ಷದಲ್ಲಿ 15,021 ಅನಧಿಕೃತ ಹೋರ್ಡಿಂಗ್ಸ್ - ಬ್ಯಾನರ್ಸ್‌ಗಳ ಕುರಿತಂತೆ ಕಾರ್ಯಾಚರಣೆ ನಡೆಸಿದೆ. ಇವುಗಳಲ್ಲಿ ಏಳು ಸಾವಿರ ರಾಜಕೀಯ, ನಾಲ್ಕು ಸಾವಿರ ಧಾರ್ಮಿಕ ಮತ್ತು ಒಂದು ಸಾವಿರ ಕಮರ್ಶಿಯಲ್ ಹೋರ್ಡಿಂಗ್ಸ್‌ಗಳು ಸೇರಿತ್ತು.
ಶಿವಸೇನಾ ಪ್ರಮುಖ ಉದ್ಧವ್ ಠಾಕ್ರೆಯವರು ಇದನ್ನು ಗಮನಿಸಿ ಶಿವಸೈನಿಕರಿಗೆ ಅನಧಿಕೃತ ಹೋರ್ಡಿಂಗ್ - ಬ್ಯಾನರ್ಸ್‌ಗಳನ್ನು ತಾಗಿಸದಂತೆ ಸ್ಪಷ್ಟ ಆದೇಶವನ್ನು ನೀಡಿದ್ದಾರೆ. ಯಾರಿಗಾದರೂ ಬ್ಯಾನರ್ಸ್ ತಾಗಿಸುವುದು ಅಗತ್ಯವೆಂದು ಕಂಡು ಬಂದರೆ ಮನಪಾ ಅಥವಾ ನಗರಪಾಲಿಕೆಯ ಅನುಮತಿ ಪಡೆದು ಶುಲ್ಕ ತುಂಬಿಸಿ ರಸೀದಿ ಪಡೆದು ತಾಗಿಸುವಂತೆ ಅವರು ತಿಳಿಸಿದ್ದಾರೆ.
ಎಚ್.ಎಸ್.ಸಿ. ಪರೀಕ್ಷೆ: ಮೊದಲ ದಿನ
46 ವಿದ್ಯಾರ್ಥಿಗಳು ನಕಲು ಮಾಡಿ ಸಿಕ್ಕಿ ಬಿದ್ದರು
ಮಹಾರಾಷ್ಟ್ರ ಎಜ್ಯುಕೇಶನ್ ಬೋರ್ಡ್‌ನ 12ನೆ ತರಗತಿಯ (ಎಚ್.ಎಸ್.ಸಿ) ಪರೀಕ್ಷೆ ಇಂಗ್ಲಿಷ್ ವಿಷಯದ ಜೊತೆ ಆರಂಭವಾಗಿದೆ. ಈ ಪರೀಕ್ಷೆಯ ಮೊದಲ ದಿನವೇ 46 ವಿದ್ಯಾರ್ಥಿಗಳನ್ನು ನಕಲು ಮಾಡಿದ ಆರೋಪದಲ್ಲಿ ಹಿಡಿಯಲಾಗಿದೆ. ಔರಂಗಾಬಾದ್‌ನಲ್ಲಿ ಅತಿಹೆಚ್ಚು 17 ವಿದ್ಯಾರ್ಥಿಗಳು, ನಾಶಿಕ್‌ನಲ್ಲಿ 13 ವಿದ್ಯಾರ್ಥಿಗಳು ಸಿಕ್ಕಿ ಬಿದ್ದರೆ, ಮುಂಬೈಯಲ್ಲಿ ಮೊದಲ ದಿನ ಒಬ್ಬ ವಿದ್ಯಾರ್ಥಿ ಮಾತ್ರ ನಕಲು ಮಾಡಿ ಸಿಕ್ಕಿ ಬಿದ್ದಿದ್ದ. ಎಜ್ಯುಕೇಶನ್ ಬೋರ್ಡ್‌ನಿಂದ ದೊರೆತ ಮಾಹಿತಿಯಂತೆ ಈ ಸಲ ಸುಮಾರು 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಚ್.ಎಸ್.ಸಿ. ಪರೀಕ್ಷೆಗೆ ಕುಳಿತಿದ್ದಾರೆ.
ಮುಂಬೈ ಮನೆ ವಿಳಾಸದ 35 ಸಂಸದರಹೊಸ ಫೋರಂ
ಮುಂಬೈ ಮಹಾನಗರ ಪಾಲಿಕೆಗೆ ಮುಂದಿನ ವರ್ಷ 2017 ರಲ್ಲಿ ಚುನಾವಣೆ ನಡೆಯಲಿದ್ದು ಮುಂಬೈಗಾಗಿ ಈ ವರ್ಷ ಬಜೆಟ್‌ನಿಂದ ಹೆಚ್ಚು ಫಂಡ್ ಸಂಗ್ರಹಕ್ಕಾಗಿ ಶಿವಸೇನೆ ಸಂಸದರಾದ ರಾಹುಲ್ ಶೆವಾಲೆ ಚುನಾವಣಾ ಕಾರ್ಡ್ ತಯಾರಿಸಿದ್ದಾರೆ. ಅವರು ಮುಂಬೈಯ ಮನೆ ವಿಳಾಸ ಇರುವ 35 ಸಂಸದರನ್ನು ಒಟ್ಟಾಗಿಸಿ ಮುಂಬೈಯ ಜೋಳಿಗೆಗೆ ಈ ಬಾರಿಯ ಬಜೆಟ್‌ನಿಂದ ಹೆಚ್ಚು ಫಂಡ್ ಸಂಗ್ರಹಿಸುವ ಯೋಜನೆ ತಯಾರಿಸುತ್ತಿದ್ದಾರೆ. ಇದಕ್ಕಾಗಿ 35ಃ ಮುಂಬೈಕರ್ ಹೆಸರಲ್ಲಿ ಹೊಸ ಫೋರಂ ರಚನೆಯ ಘೋಷಣೆಯನ್ನು ಶಿವಸೇನಾ ಸಂಸದರು ಮಾಡಿದ್ದಾರೆ.
ಇದರಲ್ಲಿ ಮುಂಬೈಯ 6 ಸಂಸದರ ಹೊರತಾಗಿ ಮುಂಬೈಯ ಮನೆ ವಿಳಾಸ ನೀಡುವ 35 ಸಂಸದರ ಸೂಚಿ ತಯಾರಿಸಲಾಗುವುದು.ಹಾಗೂ ಇವರೆಲ್ಲಾ ಮುಂಬೈಗಾಗಿ ಫಂಡ್ ತೆಗೆಸಿಕೊಡಲು ಧ್ವನಿ ಎತ್ತುವರು.ಇದಕ್ಕಾಗಿ ಕೇಂದ್ರ ಸರಕಾರದ ಮೇಲೆ ಒತ್ತಡವನ್ನೂ ತರಲಾಗುವ ಸಿದ್ಧತೆ ನಡೆದಿದೆ.
ಬಜೆಟ್ ಅಧಿವೇಶನದ ಮೊದಲು ನಡೆಯುವ ಸಂಸದರ ಸಾಮಾನ್ಯ ಬೈಠಕ್ ಈ ಬಾರಿ ನಡೆದಿಲ್ಲ. ದಿಲ್ಲಿಯಲ್ಲಿ ಮಹಾರಾಷ್ಟ್ರ ಸದನದಲ್ಲಿ ಈ ಬಗ್ಗೆ ಬೈಠಕ್ ನಡೆಯುವ ಸಾಧ್ಯತೆ ಕೇಳಿ ಬಂದಿದೆ. ಕೇಂದ್ರ ಸರಕಾರದಲ್ಲಿ ಪಾಲುದಾರ ಆಗಿದ್ದ ಹೊರತೂ ಶಿವಸೇನೆ ಸಂಸದರ ನೇರ ಬೇಡಿಕೆಯು ಹಲವು ರಾಜಕೀಯ ಅರ್ಥಗಳನ್ನು ಮೂಡಿಸಿದೆ. ಶೆವಾಲೆ ಅವರು ರೈಲ್ವೆ ಬಜೆಟ್‌ನಲ್ಲೂ ಮುಂಬೈ ಲೋಕಲ್ ನೆಟ್‌ವರ್ಕ್‌ಗಾಗಿ 21 ಸಾವಿರ ಕೋಟಿ ರೂಪಾಯಿ ನೀಡುವಂತೆಯೂ ಆಗ್ರಹಿಸಿದ್ದರು.
ಇತ್ತ ರಾಜ್ಯಸಭಾ ಸಂಸದ ಮಾಜಿದ್ ಮೆಮನ್ ಅವರೂ ಮುಂಬೈಯ ಪ್ರಗತಿಗಾಗಿ ಕೈಗೊಳ್ಳುವ ಯಾವುದೇ ಹೆಜ್ಜೆಗೂ ಜೊತೆಗೂಡಲು ತಾನು ಸಿದ್ಧ ಎಂದಿದ್ದಾರೆ.ಇಲ್ಲಿ ಸಂಸದರು ಯಾವುದೇ ಕ್ಷೇತ್ರದವರಾಗಿರಲಿ, ಅವರ ಮನೆ ವಿಳಾಸ ಮುಂಬೈಯದ್ದಾಗಿರಬೇಕು. ಲೋಕಸಭೆ ರಾಜ್ಯಸಭೆಗಳಲ್ಲಿ 16 ಮತ್ತು 19 ಸಂಸದರ ಅಧಿಕೃತ ಮನೆ ವಿಳಾಸ ಮುಂಬೈಯದ್ದಾಗಿದೆ. ಅವರಲ್ಲಿ ಕೆಲವರು ಅನ್ಯ ರಾಜ್ಯಗಳಲ್ಲೂ ಚುನಾವಣೆ ನಿಂತು ಗೆದ್ದಿದ್ದಾರೆ. ಇದು ಶಿವಸೇನಾ ಸಂಸದರ ರಾಜಕೀಯ ಆಟ ಎನ್ನಲಾಗಿದೆ.