ವಿಚಾರವಾದಿ ಅರಸರ ಸಹನೆ ದೊಡ್ಡದು-ಎಂ.ಸಿ.ನಾಣಯ್ಯ
ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ(76)ನವರು ಹುಟ್ಟಿ ಬೆಳೆದದ್ದು ಕೊಡಗಿನಲ್ಲಿ. ಓದಿದ್ದು ಕಾನೂನು ಪದವಿ, ಮಾಡಿದ್ದು ಮಡಿಕೇರಿಯಲ್ಲಿ ವಕೀಲಿಕೆ. ನಾಣಯ್ಯನವರು ಯಾವುದೇ ಪಂಥ, ಸಿದ್ಧಾಂತ, ಗುಂಪಿನೊಡನೆ ಗುರುತಿಸಿಕೊಂಡವರಲ್ಲ, ಆದರೆ ಜಾತ್ಯತೀತ ನಿಲುವು, ಪ್ರಗತಿಪರ ಧೋರಣೆ ಮತ್ತು ವೈಚಾರಿಕ ಚಿಂತನೆ ಗಳನ್ನು ಬುದ್ಧಿಬಲದಿಂದ ಮೈಗೂಡಿಸಿಕೊಂಡವರು. ಆರೆಸ್ಸೆಸ್ ಮತ್ತು ಬಲಪಂಥೀಯ ನೀತಿ-ನಿಲುವುಗಳನ್ನು ಕಟುವಾಗಿ ಟೀಕಿಸಿದವರು. ಇವತ್ತಿಗೂ ಅದೇ ಸೈದ್ಧಾಂತಿಕ ನಿಲುವುಗಳಿಗೆ ಬದ್ಧರಾಗಿ, ನೇರ ನಿಷ್ಠುರತೆಗೆ ಹೆಸರಾಗಿ ತಮ್ಮದೇ ಆದ ವ್ಯಕ್ತಿತ್ವವನ್ನು ಕಟ್ಟಿಕೊಂಡವರು. 1967 ರಲ್ಲಿ, 27ನೆ ವಯಸ್ಸಿನಲ್ಲಿ, ಅಂದಿನ ಕಾಂಗ್ರೆಸ್‌ನ ಮಂತ್ರಿ ಎ.ಪಿ.ಅಪ್ಪಣ್ಣನವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗುವ ಮೂಲಕ ಚುನಾವಣಾ ರಾಜಕಾರಣಕ್ಕೆ ಧುಮುಕಿದ ನಾಣಯ್ಯನವರಿಗೆ ಸೋಲು ಸಹಜವಾಗಿತ್ತು. ಅವರು ಚುನಾವಣೆಗೆ ಸ್ಪರ್ಧಿಸಿದ್ದು ಗೆಲ್ಲಬೇಕೆಂಬ ಹಟದಿಂದಲ್ಲ, ಅಪ್ಪಣ್ಣರ ಮೇಲಿನ ದ್ವೇಷದಿಂದಲ್ಲ ಮತ್ತು ಹಣ ಮಾಡಬೇಕೆಂಬ ಸ್ವಾರ್ಥದಿಂದಲೂ ಅಲ್ಲ. ರಾಜಕಾರಣ ದಲ್ಲಿ ಪ್ರಬಲ ವಿರೋಧ ಪಕ್ಷವಿರಬೇಕು, ಆಡಳಿತ ಪಕ್ಷಕ್ಕೆ ಅಂಕುಶವಿರಬೇಕು, ಪ್ರಜಾಪ್ರಭುತ್ವದ ರೀತಿ-ರಿವಾಜುಗಳು ಪಾಲನೆಯಾಗಬೇಕು ಎಂಬ ಕಾರಣಕ್ಕೆ. ಮಡಿಕೇರಿ ಪುರಸಭಾ ಅಧ್ಯಕ್ಷರಾಗಿ, ವಕೀಲರಾಗಿ ಜನಪ್ರಿಯರಾದ ನಾಣಯ್ಯನವರಿಗೆ ಕಾಂಗ್ರೆಸ್‌ನ ಗುಂಡೂರಾವ್ ಮತ್ತು ಎಫ್.ಎಂ.ಖಾನ್ ಆತ್ಮೀಯ ಸ್ನೇಹಿತರು. ಆ ಸ್ನೇಹಕ್ಕೆ ಕಟ್ಟುಬಿದ್ದು 1978ರಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದರು. ಆ ಮೂಲಕ ದೇವರಾಜ ಅರಸರ ಸಂಪರ್ಕಕ್ಕೆ ಬಂದರು. ಅರಸು ಆಡಳಿತದ ಕೊನೆಯ ದಿನಗಳಲ್ಲಿ ಸಚಿವರಾದ ನಾಣಯ್ಯನವರು, ಮುಂದೆ ಸರಕಾರ ಬಿದ್ದುಹೋದ ಮೇಲೆ, ಅರಸು ಅವರನ್ನು ಬಿಟ್ಟು ಕ್ರಾಂತಿರಂಗ ಸೇರಿದರು. ಕ್ರಾಂತಿರಂಗ ಜನತಾ ರಂಗವಾಗಿ, ಪಕ್ಷವಾಗಿ, ದಳವಾಗಿ ಅಧಿಕಾರಕ್ಕೆ ಬಂದಾಗ, ವಾರ್ತಾ ಮತ್ತು ಪ್ರಚಾರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ತರ್ಕಬದ್ಧ ವಿಚಾರಮಂಡನೆ ಮತ್ತು ವಿನಯವಂತಿಕೆಯಿಂದಾಗಿ ಪ್ರಜ್ಞಾವಂತರ ಗಮನ ಸೆಳೆದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಶಾಸನ ಸಭೆಯಲ್ಲಿರಲೇಬೇಕಾದ ಸಂಪನ್ಮೂಲ ವ್ಯಕ್ತಿ ಎನಿಸಿಕೊಂಡರು. ನಾಡು ಕಂಡ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ನಾಣಯ್ಯನವರೂ ಒಬ್ಬರು ಎಂದು ಹೆಸರಾದರು. ಸದ್ಯಕ್ಕೆ ಜೆಡಿಎಸ್‌ನಲ್ಲಿದ್ದರೂ ತಟಸ್ಥವಾಗುಳಿದಿರುವ ನಾಣಯ್ಯ ನವರು, ದೇವರಾಜ ಅರಸು ಎಂದಾಕ್ಷಣ ರೋಮಾಂಚಿತರಾಗುತ್ತಾರೆ, ಅವರೊಂದಿಗೆ ಕಳೆದ ಆ ಆತ್ಮೀಯ ನಾಲ್ಕು ವರ್ಷಗಳ ನೆನಪು ಮಾಡಿಕೊಂಡು, ಅದನ್ನಿಲ್ಲಿ ಮೆಲುಕು ಹಾಕಿದ್ದಾರೆ... ವಿಚಾರವಾದಿ ಅರಸು
ದೇವರಾಜ ಅರಸು ಅವರಲ್ಲಿ ಬಹಳ ದೊಡ್ಡ ವಿಚಾರವಾದಿಯನ್ನು ಕಂಡವನು ನಾನು. ಕರ್ನಾಟಕದ ರಾಜಕಾರಣದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾದ ನಂತರ ಬಂದುಹೋದ ಮುಖ್ಯಮಂತ್ರಿಗನ್ನೆಲ್ಲ ಒಂದು ತಕ್ಕಡಿಗೆ ಹಾಕಿ, ಮತ್ತೊಂದು ತಕ್ಕಡಿಗೆ ಅರಸರನ್ನು ಹಾಕಿದರೆ, ಅರಸರದೇ ಒಂದು ತೂಕ. ಅವರ ಸಮಕ್ಕೆ ಮತ್ತೊಬ್ಬರು ಬರಲು ಸಾಧ್ಯವೇ ಇಲ್ಲ. ಈ ನಮ್ಮ ಕರ್ನಾಟಕ ಇವತ್ತು ಇಷ್ಟರಮಟ್ಟಿಗೆ ಇರಲು ಕಾರಣ ದೇವರಾಜ ಅರಸು. ಅಂತಹ ಮುತ್ಸದ್ದಿಯನ್ನು, ದೂರದೃಷ್ಟಿಯುಳ್ಳ ನಾಯಕನನ್ನು ನಾನು ಇಲ್ಲಿಯವರೆಗೆ ಕಂಡಿಲ್ಲ. 1978ರವರೆಗೂ ದೇವರಾಜ ಅರಸು ಅವರನ್ನು ನಾನು ಖುದ್ದಾಗಿ ಕಂಡವನಲ್ಲ. ಆದರೆ ಅವರ ಆಡಳಿತವನ್ನು, ಮುಖ್ಯಮಂತ್ರಿಯಾಗಿ ಮಾಡಿದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು; ನಾಡಿನ ಶೋಷಿತರು, ದಮನಿತರು ಮತ್ತು ಹಿಂದುಳಿದವರ ಬಗ್ಗೆ ತಳೆದ ದಿಟ್ಟ ನಿಲುವುಗಳನ್ನು ತಿಳಿದವನು. ಅದರಿಂದ ನಾಡಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಾದ ಬದಲಾವಣೆಗಳನ್ನು ಖುದ್ದು ಕಂಡವನು. ಆರ್.ಗುಂಡೂರಾವ್‌ಗೆ ನಾನು ಲೀಗಲ್ ಅಡ್ವೈಸರ್ ಆಗಿದ್ದೆ, ಆ ಸ್ನೇಹ-ಸಂಪರ್ಕದಿಂದಾಗಿ ಒಂದು ದಿನ ಎಫ್.ಎಂ.ಖಾನ್ ಜೊತೆಗೂಡಿ ನನ್ನನ್ನು ಹುಡುಕಿಕೊಂಡು ಬಂದರು. ನಾನಾಗ ಯಾವುದೇ ಪಕ್ಷಕ್ಕೂ ಸೇರಿರಲಿಲ್ಲ, ಯಾವ ಗುಂಪಿನೊಂದಿಗೂ ಗುರುತಿಸಿಕೊಂಡಿರಲಿಲ್ಲ. ಆದರೂ ಅವರ ಕಣ್ಣಿಗೆ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಂಡಿದ್ದೆ. ನಿಲ್ಲಬೇಕೆಂದು ಒತ್ತಾಯಿಸಿದರು, ನಾನು ಆಗಲ್ಲ ಎಂದಿದ್ದೆ. ಈ ಚುನಾವಣೆ ಯಾಕೆ ಬಂತು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ. ಸರಕಾರಕ್ಕೆ ಸಂಚಕಾರ
ತುರ್ತು ಪರಿಸ್ಥಿತಿಯ ನಂತರ ಬಂದ 1977ರ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಧೂಳೀಪಟವಾಗಿತ್ತು. ಜನತಾಪಕ್ಷ ಅಧಿಕಾರಕ್ಕೇರಿತ್ತು. ಇಂದಿರಾ ಗಾಂಧಿ ಸೋತು ಮೂಲೆ ಸೇರಿದ್ದರು. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರವನ್ನು ವಿನಾಕಾರಣ ಕಿತ್ತುಹಾಕಿ ಜನತಾ ಪಕ್ಷ ಅಧಿಕಾರಕ್ಕೇರಲು ಹವಣಿಸುತ್ತಿತ್ತು. ಅಂಥಾದ್ದೆ ಒಂದು ಕೆಟ್ಟ ರಾಜಕಾರಣ ಕರ್ನಾಟಕದಲ್ಲೂ ನಡೆದಿತ್ತು. ಜನತಾ ಧುರೀಣರಾದ ರಾಮಕೃಷ್ಣ ಹೆಗಡೆ, ದೇವೇಗೌಡ, ವೀರೇಂದ್ರ ಪಾಟೀಲ್, ಬೊಮ್ಮಾಯಿ, ಜನಸಂಘದ ಎ.ಕೆ.ಸುಬ್ಬಯ್ಯನವರೆಲ್ಲ ಅರಸು ಅವರ ಚುನಾಯಿತ ಸರಕಾರವನ್ನು ಕಿತ್ತೊಗೆಯಲು ದಿಲ್ಲಿಗೆ ಓಡಿದ್ದರು. ಕೇಂದ್ರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಾಜನಾರಾಯಣ್‌ರನ್ನು ರಾತ್ರಿ 2:30ಕ್ಕೆ ಭೇಟಿ ಮಾಡಿ, ಅವರ ಮೂಲಕ ಗೃಹಮಂತ್ರಿ ಚರಣ್ ಸಿಂಗ್‌ರನ್ನು ಕಂಡು ಮನವೊಲಿಸಲು ನೋಡಿದರು. ಆದರೆ ಚರಣ್ ಸಿಂಗ್ ಒಪ್ಪಿಲ್ಲ. ಕಡೆಗೆ ಪ್ರಧಾನಿ ಮೊರಾರ್ಜಿ ದೇಸಾಯಿ ಬಳಿಗೆ ಹೋಗುತ್ತಾರೆ. ಅವರಿಗೆ ಅರಸು ಕಂಡರೆ ಗೌರವ. ಅವರ ಆಡಳಿತ ಮತ್ತು ಕಾರ್ಯಕ್ರಮಗಳ ಬಗ್ಗೆ ಕೇಳಿ ತಿಳಿದಿದ್ದವರು. ಅದೆಲ್ಲಕ್ಕಿಂತ ಹೆಚ್ಚಾಗಿ ವ್ಯಕ್ತಿಯಾಗಿ ಅರಸು ಎಂಥವರು ಎಂದು ಗೊತ್ತಿದ್ದವರು. ಅವರು ಆಗುವುದಿಲ್ಲ ಎನ್ನುತ್ತಾರೆ. ಇಂಥವನ್ನೆಲ್ಲ ನನ್ನ ಮುಂದೆ ತರಬೇಡಿ ಎನ್ನುತ್ತಾರೆ. ಏಕಾಂಗಿ ಹೋರಾಟ
1978, ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಜನತಾ ಪಕ್ಷದ ನಾಯಕರ ಪರ ಪ್ರಚಾರಕ್ಕೆ ಕೇಂದ್ರ ಸರಕಾರದ ಮಂತ್ರಿಗಳು ಸಹಜವಾಗಿಯೇ ಜನತಾ ಧುರೀಣರು ಬಹಳ ಹುಮ್ಮಸ್ಸಿನಿಂದ, ಹುರುಪಿನಿಂದ ಓಡಾಡತೊಡಗಿದರು. ಜನತಾ ಪಕ್ಷದವರ ಆರ್ಭಟದ ನಡುವೆಯೂ, ಇಂದಿರಾ ಕಾಂಗ್ರೆಸ್‌ನಲ್ಲಿ ಬಹಳ ದೊಡ್ಡ ಗುಂಪೇ ಇತ್ತು. ಆ ಗುಂಪಿಗೆ ಅರಸು ಅವರದೇ ನೇತೃತ್ವ. ಅರಸು ಆಗಲೂ ಏಕಾಂಗಿ. ಒಬ್ಬರೇ ಚುನಾವಣೆಯನ್ನು ಎದುರಿಸಿದರು. ಈ ಸಂದರ್ಭದಲ್ಲಿಯೇ ನಾನು ಅವರನ್ನು ಭೇಟಿಯಾದದ್ದು. ವೀರಾಜಪೇಟೆಗೆ ಜಿ.ಕೆ. ಸುಬ್ಬಯ್ಯ, ಸೋಮವಾರಪೇಟೆಗೆ ಗುಂಡೂರಾವ್ ಅಭ್ಯರ್ಥಿಗಳಾದರು. ಮಡಿಕೇರಿಗೆ ಅಭ್ಯರ್ಥಿಯೇ ಇಲ್ಲ. ಜೊತೆಗೆ ಜನಸಂಘದಿಂದ ಎ.ಕೆ.ಸುಬ್ಬಯ್ಯನವರು ನಿಂತಿದ್ದಾರೆ. ಅರಸು ಸರಕಾರದ ವಿರುದ್ಧ ಪ್ರತಿನಿತ್ಯ ಚಾಟಿ ಬೀಸಿದ್ದು, ಟೀಕಿಸಿ ಲೇವಡಿ ಮಾಡಿದ್ದು, ಮಂತ್ರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದು ಸುದ್ದಿ ಮಾಡಿದ್ದು- ಆ ಕಾಲಕ್ಕೆ ಅವರು ರಾಜಕಾರಣದಲ್ಲಿ ಚಾಂಪಿಯನ್. ಅವರ ಎದುರಾಳಿಯಾಗಿ ನಿಲ್ಲಲು ಯಾರೂ ಸಿದ್ಧರಿಲ್ಲ.
ಗೆಲ್ಲಿಸಿ, ಗೆದ್ದ ಅರಸು
ಗುಂಡೂರಾವ್, ಎಫ್.ಕೆ.ಖಾನ್ ಬಂದು, ನೀವು ಅಭ್ಯರ್ಥಿಯಾಗಬೇಕು ಎಂದರು. ನಾನು ಸಾಧ್ಯವೇ ಇಲ್ಲ ಎಂದೆ. ಗುಂಡೂರಾವ್ ನನ್ನ ಒಳ್ಳೆಯ ಸ್ನೇಹಿತರಾದ್ದರಿಂದ ಅರಸು ಅವರನ್ನು ಮಡಿಕೇರಿಗೆ ಕರೆಸಿ, ಕೋರ್ಟ್‌ನಲ್ಲಿದ್ದ ನನ್ನನ್ನು, ಅರಸು ನಿಮ್ಮನ್ನು ನೋಡಬೇಕಂತೆ ಬನ್ನಿ ಎಂದು ಕರೆದುಕೊಂಡು ಹೋದರು. ಅಲ್ಲಿಯವರೆಗೆ ಅರಸು ಅವರನ್ನು ಒನ್ ಟು ಒನ್ ಭೇಟಿಯಾಗಿಲ್ಲ. ಅರಸು ಅವರಿಗೆ ಮಡಿಕೇರಿ ಕ್ಷೇತ್ರ ಪ್ರತಿಷ್ಠೆಯ ಕಣವಾಗಿತ್ತು. ಕಾರಣ ಎ.ಕೆ.ಸುಬ್ಬಯ್ಯನವರು. ಅವರ ಬಾಯಿ ಮುಚ್ಚಿಸಬೇಕಾಗಿತ್ತು, ಸೋಲಿಸಿ ಸದ್ದಡಗಿಸಬೇಕಾಗಿತ್ತು. ಹಾಗಾಗಿ ಅವರ ಕಣ್ಣಿಗೆ ಸುಬ್ಬಯ್ಯನವರ ಎದುರು ಸಮರ್ಥ ಅಭ್ಯರ್ಥಿಯಾಗಿ ನಾನು ಕಂಡಿದ್ದೆ. ನನ್ನನ್ನು ‘ನೀವು ಗೆಲ್ಲುತ್ತೀರಿ, ನಾವಿದ್ದೇವೆ ನಿಲ್ಲಿ’ ಎಂದು ಹುರಿದುಂಬಿಸಿದರು. ನಾನು, ‘ನೋಡಿ ಸಾರ್, ನಾನು ಕಾಂಗ್ರೆಸ್ ಮತ್ತು ಜನಸಂಘದ ಬದ್ಧ ವಿರೋಧಿ. ಇವತ್ತಿನವರೆಗೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡವನಲ್ಲ. ಸುಬ್ಬಯ್ಯನವರು ನನ್ನ ಸ್ನೇಹಿತರು. ಅವರೂ ವಕೀಲರು ನಾನೂ ವಕೀಲ. ಆ ಕಾರಣಕ್ಕಾಗಿಯೇ ಹಿಂದೊಮ್ಮೆ ಅವರನ್ನು ಬೆಂಬಲಿಸಿದ್ದೆ. ಆದರೆ ಅವರು ಮಡಿಕೇರಿ ಯ ಬೈಠಕ್‌ಗೆ ಬಂದಾಗಲೆಲ್ಲ ನಾಣಯ್ಯನ ವರನ್ನು ರಾಜಕಾರಣದಿಂದ ದೂರವಿಡುವುದು ಹೇಗೆ ಎಂದೇ ಯೋಚಿಸುತ್ತಿದ್ದವರು. ಅದು ರಾಜಕಾರಣ. ಹಾಗಂತ ನಾನು ಅವರ ವಿರುದ್ಧ ಸ್ಪರ್ಧಿಸುವುದು ಎಷ್ಟು ಸರಿ. ಸೋತರೆ ಅದು ನನ್ನ ಇಮೇಜ್‌ಗೆ ಧಕ್ಕೆಯಾಗುತ್ತದೆ. ಮುಂದೆ ನಾನು ಇಲ್ಲಿ ಓಡಾಡಲು, ವಕೀಲಿಕೆ ಮಾಡಲು ಅಡ್ಡಿಯಾಗುತ್ತದೆ’ ಎಂದೆ. ಅರಸು ತಾಳ್ಮೆಯಿಂದ ಕೇಳಿದರು. ಅದಕ್ಕೂ ಅವರ ಬಳಿ ಅಸ್ತ್ರಗಳಿದ್ದವು, ಪ್ರಯೋಗಿಸಿದರು, ಮನವೊಲಿಸಿದರು, ಕಣಕ್ಕಿಳಿಸಿಯೇಬಿಟ್ಟರು. ಎ.ಕೆ. ಸುಬ್ಬಯ್ಯನವರಂತಹ ಛಾಂಪಿಯನ್ ಎದುರು, ದೇಶದಾದ್ಯಂತ ಜನತಾ ಅಲೆ ಇರುವಾಗ, ಮೂರು ಸಾವಿರ ಮತಗಳ ಅಂತರದಿಂದ ನಾನು ಗೆದ್ದಿದ್ದೆ. ಅರಸು ಅವರು ಮಿಕ್ಕ ರಾಜಕಾರಣಿಗಳಿಗಿಂತ ಭಿನ್ನವಾಗಿ ಕಾಣುವುದು ಈ ಕಾರಣಕ್ಕಾಗಿಯೇ. ಅವರಲ್ಲಿದ್ದ ರಾಜಕೀಯ ವ್ಯಾವಹಾರಿಕತೆ ಮತ್ತು ಪ್ರಗತಿಪರತೆ ಗೋಚರಿಸುವುದು ಇಲ್ಲಿಯೇ.
ಅಲ್ಪಾವಧಿ ಮಂತ್ರಿ ಬಹುಮತ ಪಡೆದು ಸರಕಾರ ರಚನೆಯಾದಾಗ ಮೊದಲ ಬಾರಿಗೆ ಗೆದ್ದಿದ್ದ ನನ್ನನ್ನು ಅರಸು ಮಂತ್ರಿ ಮಾಡಲಿಲ್ಲ. ಗುಂಡೂರಾವ್‌ಗೂ ಅವರಿಗೂ ಭಿನ್ನಾಭಿಪ್ರಾಯ ತಲೆದೋರಿದಾಗ ಗುಂಡೂರಾಯರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ನನ್ನನ್ನು ಮಡಿಕೇರಿ ಕೋಟಾದಿಂದ ಮಂತ್ರಿ ಮಾಡಿದರು. ಆಗ ನಾನು ಅರಸು ಅವರಿಗೆ, ‘ಗುಂಡೂರಾಯರು ನನ್ನ ಸ್ನೇಹಿತರು, ಅವರ ಮೂಲಕವೆ ನಾನು ರಾಜಕಾಕರಣಕ್ಕೆ ಬಂದಿದ್ದು, ಗೆದ್ದಿದ್ದು. ವಿಪರ್ಯಾಸವೆಂದರೆ, ಅವರನ್ನು ಕೈಬಿಟ್ಟು ಅದೇ ಸ್ಥಾನವನ್ನು ನನಗೆ ಕೊಡುವುದು ನನಗಿಷ್ಟವಿಲ್ಲ, ಅದು ನನಗೆ ಬೇಡ, ತಪ್ಪು ತಿಳಿಯಬೇಡಿ’ ಎಂದೆ. ‘ನೋ ನಾಣಯ್ಯ, ಐ ವಾಂಟ್ ಯೂ, ನಿಮ್ಮನ್ನು ನಾನು ಎ.ಕೆ.ಸುಬ್ಬಯ್ಯನವರನ್ನು ಸೋಲಿಸಿದಾಗಲೇ ಮಂತ್ರಿ ಮಾಡಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ, ಆದ ತಪ್ಪನ್ನು ತಿದ್ದಿಕೊಂಡು ಈಗ ಮಾಡುತ್ತಿದ್ದೇನೆ, ಒಪ್ಪಿಕೊಳ್ಳಿ’ ಎಂದರು. ಮನಸ್ಸಿಲ್ಲದ ಮನಸ್ಸಿನಲ್ಲಿ ಮಂತ್ರಿಯಾದೆ. ನನ್ನ ದುರದೃಷ್ಟಕ್ಕೆ ಅದು ಅರಸು ಆಡಳಿತದ ಕೊನೆಯ ದಿನಗಳಾಗಿದ್ದವು. ಕೇವಲ 20 ದಿನಗಳು ಮಾತ್ರ ಮಂತ್ರಿಯಾದ ನಾನು, ಅರಸು ಅವರ ಮಂತ್ರಿ ಮಂಡಲದಲ್ಲಿ ಅತ್ಯಂತ ಕಡಿಮೆ ಅವಧಿಯ ಮಂತ್ರಿ ಎಂಬ ಹೆಸರು ಪಡೆದೆ. ಒಂದು ಸಲ, ಅರಸು ಅವರಿಗೆ ಪತ್ರಕರ್ತರು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರು. ಆಗ ಅರಸು, ‘ಹೌದಪ್ಪ, ರಾಜಕಾರಣ ಮಾಡಲು ಭ್ರಷ್ಟನಾದದ್ದು ನಿಜ. ಆದರೆ ಆ ಹಣವನ್ನು ನಾನು ಮುಟ್ಟಿಲ್ಲ. ಅದು ಚುನಾವಣೆಗೆ ಬೇಕು, ಪಾಪದವರಿಗೆ ಕೊಡಲು ಬೇಕು, ಶಾಸಕರನ್ನು ಸಾಕಲು ಬೇಕು, ಹೈಕಮಾಂಡಿಗೆ ಬೇಕು’ ಎಂದರು. ಯಾರಾದರೂ ದುಡ್ಡು ಕೊಟ್ಟರೆ ಅದನ್ನು ಆರ್.ಎಂ.ದೇಸಾಯಿಗೆ ಕೊಡಿ ಅನ್ನುತ್ತಿದ್ದರು. ದೇಸಾಯಿ ಎಲ್ಲರಿಗೂ ಹಂಚುತ್ತಿದ್ದರು. ಆದರೆ ಅರಸು ವೈಯಕ್ತಿಕವಾಗಿ ಹಣ ಮಾಡಿದವರಲ್ಲ, ಹಣಕ್ಕಾಗಿ ಆಸೆ ಪಟ್ಟವರೂ ಅಲ್ಲ. ಡೆಮಾಕ್ರಸಿಗೆ ಬೆಲೆ ತಂದ ರಾಜೀನಾಮೆ 1980ರಲ್ಲಿ, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲೇ ದೇವರಾಜ ಅರಸು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದರು. ಅಲ್ಲಿದ್ದ ಶಾಸಕರೆಲ್ಲ ಬೇಡವೆಂದು ಎಷ್ಟು ಗೋಗರೆದರೂ, ಕಣ್ಣೀರು ಹಾಕಿದರೂ ಅರಸು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಆಗ ನಡೆದುಕೊಂಡ ರೀತಿಯಿದೆಯಲ್ಲ, ಅದು ಅರಸು ಅವರ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಘನತೆ ಗೌರವಗಳನ್ನು ತರುತ್ತದೆ. ಅವತ್ತು ಅರಸು ಜೊತೆ 136 ಶಾಸಕರಿದ್ದರು, ಸೋತಿರುವುದು ಲೋಕಸಭೆ. ಆದರೂ ತಮ್ಮ ಪಕ್ಷ ಮೂರನೆ ಸ್ಥಾನದಲ್ಲಿದೆ ಎಂಬುದನ್ನು ಕೇಳುತ್ತಿದ್ದಂತೆ, ಜೆ.ಸಿ.ಲಿನ್‌ರನ್ನು ಕರೆದು, ‘ನಾನು ಜನಾಭಿಪ್ರಾಯ ಕಳೆದುಕೊಂಡಿದ್ದೇನೆ, ಅಧಿಕಾರದಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ, ಆ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಎರಡು ಸಾಲಿನ ನೋಟ್ಸ್ ಕೊಟ್ಟು, ಪತ್ರ ರೆಡಿ ಮಾಡಲು ಹೇಳಿದರು. ಲಿನ್ ಅಲ್ಲಿಯೇ ಟೈಪ್ ಮಾಡಿದರು, ಪತ್ರ ಸಿದ್ಧವಾಯಿತು. ತೆಗೆದುಕೊಂಡು ನೇರವಾಗಿ ರಾಜಭವನಕ್ಕೆ ಹೋದರು, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಕೊಟ್ಟರು. ಅವರು ಸ್ವೀಕರಿಸಲು ಸಿದ್ಧರಿಲ್ಲ. ಇವರೂ ಬಿಡಲಿಲ್ಲ. ಕೊನೆಗೂ ಕೊಟ್ಟೇ ಬಂದರು. ಮಾರನೆ ದಿನ ಬೆಳಗ್ಗೆ ಬಸವಲಿಂಗಪ್ಪನವರಿಂದ ಫೋನ್, ‘ನಾನು ಸೀನಿಯರ್ ಮೋಸ್ಟ್, ಸಿಎಂ ಆಗಬೇಕೆಂಬ ಆಸೆ ಇದೆ, ಅರಸು ರಾಜೀನಾಮೆ ಕೊಟ್ಟಿದ್ದಾರೆ, ನೀನು ಅರಸುಗೆ ಹೇಳಿ ಒಪ್ಪಿಸು’ ಎಂದರು. ‘ಅದು ಹೇಗೆ ಸಾಧ್ಯ, ನನ್ನ ಮಾತನ್ನು ಅವರು ಕೇಳುತ್ತಾರೆಯೇ’ ಎಂದೆ. ಅದಕ್ಕವರು, ‘ನನಗಿಂತ ಅವರಿಗೆ ನೀನೇ ಬಹಳ ಹತ್ತಿರ, ನಿನ್ನ ಮಾತನ್ನು ಕೇಳುತ್ತಾರೆ, ಹೇಳು’ ಎಂದರು. ಇದನ್ನು ಹೇಗೆ ವ್ಯಾಖ್ಯಾನಿಸುವುದು?
ಎಚ್.ಸಿ.ಶ್ರೀಕಂಠಯ್ಯ ನನ್ನ ಗೆಳೆಯ. ಆತನ ಮನೆಗೆ ಹೋದೆ. ಅಲ್ಲಿ ಆಗಲೇ ಶಾಸಕರನ್ನು ಕೂಡಿಹಾಕಿ ಸಹಿ ಮಾಡಿಸುತ್ತಿದ್ದರು. ಆ ದೃಶ್ಯ ನೋಡಿ ಸಿಟ್ಟು ಬಂತು, ‘ಏ, ಶ್ರೀಕಂಠಯ್ಯ’ ಅಂತ ಕೂಗಿದೆ. ಬಾಗಿಲ ತೆರೆದವರು, ‘ಓ ನಾಣಯ್ಯನವರೂ ಬಂದರು’ ಎಂದರು. ‘ನಾನು ಬಂದಿದ್ದು ಸಹಿ ಮಾಡಲಿಕ್ಕಲ್ಲ, ಗುಂಡೂರಾವ್‌ರನ್ನು ಸಿಎಂ ಮಾಡಲಿಕ್ಕೂ ಅಲ್ಲ’ ಎಂದು ಜೋರಾಗಿ ಕಿರುಚಿದೆ. ‘ನಿನಗೇನು ಮಾನ ಮರ್ಯಾದೆ ಇದೆಯೇ’ ಎಂದು ಬಯ್ದೆ. ಶ್ರೀಕಂಠಯ್ಯ, ‘ಗುಂಡೂರಾವ್ ನನ್ನನ್ನು ಡೆಪ್ಯೂಟಿ ಸಿಎಂ ಮಾಡ್ತೀನಿ ಅಂದಿದ್ದಾನೆ, ಆಸೆ, ಬಂದ್ಬುಟ್ಟೆ, ನನ್ನಿಂದ ತಪ್ಪಾಗಿದೆ, ಅರಸರಿಗೆ ಕ್ಷಮೆ ಕೇಳಲೂ ಮುಖವಿಲ್ಲ, ನೀನೇ ಹೇಳು’ ಅಂದ. ಇದನ್ನು ಅರಸುಗೆ ಹೇಗೆ ಹೇಳುವುದು?