ರಂಗ ಶಿಕ್ಷಣದ ಪ್ರಯೋಗಗಳು....
ಮಂಗಳೂರಿನ ಕುಂಜತ್ತಬೈಲಿನಲ್ಲಿರುವ ‘ರಂಗ ಸ್ವರೂಪ’ ಸಂಸ್ಥೆ ತನ್ನ ದಶಕದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಅದರ ಹಿನ್ನೆಲೆಯಲ್ಲಿ ಹೊರತಂದಿರುವ ದಶಮಾನೋತ್ಸವ ನೆನಪಿನ ಸಂಪುಟ ‘ರಂಗ ಸ್ವರೂಪ’ ದಶಕದ ಸಂಭ್ರಮ ಕೃತಿ. ಡಾ. ವಸಂತಕುಮಾರ್ ಪೆರ್ಲ ಇದರ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ‘‘ಹೃದಯದಲ್ಲಿ ಬರೆಯಲಾಗದವರು ಗೋಡೆಗಳಲ್ಲಿ ಬರೆಯುತ್ತಾರೆ’’ ಎಂಬ ಮಾತಿದೆ. ಗೋಡೆಗಳಲ್ಲಿ ಎಲ್ಲರೂ ಬರೆಯುತ್ತಾರೆ. ಹೃದಯಗಳಲ್ಲಿ ಬರೆಯುವ ಕೆಲಸವನ್ನು ಕೆಲವರು ಮಾತ್ರ ಮಾಡುತ್ತಾರೆ. ಅಂಥವರು ನಿಜವಾದ ಗುರುಗಳು. ಗುರು ಎಂದರೆ ಪುಸ್ತಕದಲ್ಲಿ ಇರುವುದನ್ನು ಓದಿಸುವವನಲ್ಲ. ಶಿಷ್ಯನಿಗೆ ಒಳನೋಟಗಳನ್ನು ನೀಡಿ ಹಾದಿ ತೋರಿಸುವವನು. ಶಿಷ್ಯನ ಮಸ್ತಕವನ್ನು ಬೆಳೆಸಿ ಮುಂದಿನ ತಲೆಮಾರಿಗೆ ಬೆಳಕನ್ನು ತೋರಿಸುವವನು. ವ್ಯಾವಹಾರಿಕ ಶಿಕ್ಷಣದ ಜೊತೆಗೆ ವೌಲ್ಯಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಸಚ್ಚಾರಿತ್ರವಂತರನ್ನಾಗಿ ರೂಪಿಸುವ ಗುಣಶೀಲದ ಅಧ್ಯಾಪಕರು ನಮಗೆ ಬೇಕಾಗಿದ್ದಾರೆ. ಕುಂಜತ್ತಬೈಲಿನಲ್ಲಿ ಅಂತಹ ಬೆಳಕಿನ ಕಿರಣವೊಂದು ಕಂಡು ಬರುತ್ತಿದೆ ಎಂಬುದಕ್ಕೆ ಈ ಸಂಪುಟದಲ್ಲಿರುವ ಇಷ್ಟೊಂದು ಮಂದಿ ಬರಹಗಾರರು ತಮ್ಮ ಅಭಿವ್ಯಕ್ತಿಯನ್ನು ಮಾಡಿರುವುದು ಸಾಕ್ಷಿಯಾಗಿದೆ’’ ಹೀಗೆಂದು ಪೆರ್ಲ ಅಭಿಪ್ರಾಯ ಪಡುತ್ತಾರೆ.
ಈ ಕೃತಿ ಒಂದು ಸಂಸ್ಥೆಯ ಸೃಜನಶೀಲ ಸಾಧನೆಗಳಿಗೆ ಮೀಸಲಾಗಿದೆ. ಶಿಕ್ಷಣವನ್ನು ವೈವಿಧ್ಯಪೂರ್ಣವಾಗಿ ಹೇಗೆ ಮಂಡಿಸಬಹುದು ಎನ್ನುವುದರ ಪ್ರಯೋಗಗಳು ಈ ಸಂಸ್ಥೆಯಿಂದ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಇಲ್ಲಿನ ಬರಹಗಳು ಸಂಸ್ಥೆಯ ವಿವರಗಳನ್ನು ತೆರೆದಿಡುತ್ತದೆ. ವಸಂತಕುಮಾರ್ ಪೆರ್ಲ, ಸುಬ್ರಹ್ಮಣ್ಯ ಕಾಸರಗೋಡು, ಪ್ರೇಮ್‌ನಾಥ್ ಮರ್ಣೆ, ರೆಹಮಾನ್ ಖಾನ್, ಸುಮಾಡ್ಕರ್, ಅಕ್ಷತಾ, ಸಂಧ್ಯಾಶ್ರೀ ಎಸ್, ಎನ್. ಶಿವಪ್ರಕಾಶ್, ಕುದ್ರೋಳಿ ಗಣೇಶ್, ಸಂಧ್ಯಾ ಪ್ರೇಮ್‌ನಾಥ್, ತಾರಾನಾಥ ಕೈರಂಗಳ, ಸುಜಯಾ ಕೆ. ಶೆಟ್ಟಿ, ದಿನೇಶ್ ಹೊಳ್ಳ ಮೊದಲಾದವರ ಬರಹಗಳು ಸಂಪುಟದಲ್ಲಿವೆ. ಸಂಪುಟದ ಮುಖಬೆಲೆ 100 ರೂ. ಆಸಕ್ತರು 9448384391 ದೂರವಾಣಿಯನ್ನು ಸಂಪರ್ಕಿಸಬಹುದು.