ಮಿಥ್ಯಮೇವ ಜಯತೆ!
ಈ ದೇಶದಲ್ಲಿ ಸದ್ಯ ನಿಯಮಬದ್ಧವಾಗಿ ನಡೆಯುವ ಒಂದೇ ಕೆಲಸವೆಂದರೆ ಸುಳ್ಳು ಹೇಳುವುದು. ಇದು ನಮ್ಮ ಅರ್ವಾಚೀನ ಪರಂಪರೆಯ ಆರ್ಷೇಯ ವೌಲ್ಯವಾಗಿ ವೈಭವೀಕರಿಸಲ್ಪಟ್ಟು ಬೆಳೆದಿದೆ. ಸುಳ್ಳು ಹೇಳಬಹುದೆಂಬುದಕ್ಕೆ ಸಮರ್ಥನೆಂಾಗಿ ನಿದರ್ಶನಗಳು ಹೇರಳವಾಗಿ ಸಿಗುತ್ತವೆ. ಸತ್ಯವನ್ನು ಹೇಳು, ಪ್ರಿಯವಾದದ್ದನ್ನು ಹೇಳು, ಆದರೆ ಅಪ್ರಿಯವಾದ ಸುಳ್ಳನ್ನು ಮಾತ್ರ ಹೇಳಬೇಡ (ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ) ಎಂದು ನಮ್ಮ ದಾರ್ಶನಿಕರು ಹೇಳಿದ್ದಾರೆ. ಆದರೆ ಇದನ್ನು ಅತಿಕ್ರಮಿಸಿ ನಾನು ಸುಳ್ಳಿನ ಕುರಿತ ಅಪ್ರಿಯವಾದ ಸತ್ಯವನ್ನು ಹೇಳತೊಡಗಿದ್ದೇನೆ. ಪಂಚತಂತ್ರದಲ್ಲಿ ಬರುವ ಕಥೆಯೊಂದರಲ್ಲಿ ಒಬ್ಬಾತ ತನಗೆ ದಾನವಾಗಿ ಬಂದ ಆಡೊಂದನ್ನು ಹೆಗಲ ಮೇಲೆ ಹೊತ್ತು ಮನೆಗೆ ಮರಳುತ್ತಿರುತ್ತಾನೆ. ಅದನ್ನು ಲಪಟಾಯಿಸುವ ಸಂಚು ಹೂಡುವ ಮೂರು ಕಳ್ಳರು ಒಬ್ಬನಾದ ಮೇಲೆ ಒಬ್ಬ ಬಂದು ಆತನಲ್ಲಿ ಇದೇನು ಹಂದಿಯನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿರುವೇ? ಎಂದು ಪ್ರಶ್ನಿಸುತ್ತಾರೆ.
ಮೊದಲ ಸಲ ಆತ ನಂಬದಿದ್ದರೂ ಎರಡನೆ ಬಾರಿ ಸ್ವಲ್ಪ ನಂಬುಗೆ ಬರುತ್ತದೆ. ಮೂರನೆ ಬಾರಿಯಂತೂ ಇವರೆಲ್ಲರೂ ಹೀಗೆ ಕೇಳಬೇಕಾದರೆ ತಾನು ಕೊಂಡೊಯ್ಯುತ್ತಿರುವುದು ಆಡಲ್ಲ ಯಾವುದೋ ಭೂತವಿರಬೇಕೆಂದುಕೊಂಡು ಅದನ್ನು ಎಸೆದು ಹೋಗುತ್ತಾನೆ. ಕಳ್ಳರು ಆ ಆಡನ್ನು ಒಯ್ಯುತ್ತಾರೆ. ಪುರಾಣಗಳಲ್ಲೂ ಇಂತಹ ಐತಿಹ್ಯಗಳು ಹೇರಳವಾಗಿವೆ. ಮಹಾಭಾರತದಲ್ಲಿ ಅಶ್ವತ್ಥಾಮ ಎಂಬ ಆನೆಯನ್ನು ಕೊಂದು ಅದನ್ನು ಗಟ್ಟಿಯಾಗಿ ಹೇಳುವಂತೆ ಧರ್ಮರಾಜನಲ್ಲಿ ಹೇಳಿ ಆತ ಅಶ್ವತ್ಥಾಮ ಹತಃ ಕುಂಜರಃ ಎಂದು ಹೇಳುವಾಗ ಕೊನೆಯ ಕುಂಜರಃ (ಆನೆ) ಎಂಬ ಪದವನ್ನು ಉದ್ಗರಿಸುವಾಗ ಕೃಷ್ಣನು ಪಾಂಚಜನ್ಯವನ್ನೂದಿ ಅದು ಕೇಳದಂತೆ ಮಾಡಿ ಅಶ್ವತ್ಥಾಮನು ಗತಿಸಿದನೆಂಬ ವ್ಯಾಕುಲತೆಯಿಂದ ದೇಹವನ್ನು ತ್ಯಜಿಸಿ ಆತನ ಶವವನ್ನು ಹುಡುಕಲು ಹೋದ ದ್ರೋಣಾಚಾರ್ಯರನ್ನು ದೃಷ್ಟದ್ಯುಮ್ನನು ಕಡಿದು ಬಿಸಾಡಿದ ಪ್ರಸಂಗ ಬರುತ್ತದೆ. ಧರ್ಮರಾಜನಿಗೆ ಸತ್ಯ ಹೇಳುವವನು ಎಂದಿದ್ದ ಖ್ಯಾತಿಯನ್ನು ಹೀಗೆ ದುರುಪಯೋಗಪಡಿಸಲಾಯಿತು. ಜೊತೆಗೇ ಸತ್ಯ ಹೇಳುತ್ತಾರೆಂದು ಒಮ್ಮೆ ಹೆಸರಾದರೆ ಆತ ಏನು ಹೇಳಿದರೂ ಅದನ್ನು ಪರಾಮರ್ಶಿಸದೆ ಸ್ವೀಕರಿಸಲಾಗುತ್ತಿತ್ತೆಂದೂ ಸ್ಪಷ್ಟವಾಯಿತು.
ಸುಳ್ಳು ಎಂದರೆ ಸುಳ್ಳಷ್ಟೇ ಅಲ್ಲ; ಅದರ ಸೋದರ ಭಾವದ ವಂಚನೆ, ಇತ್ಯಾದಿಗಳೂ ಸೇರುತ್ತವೆ. ಇವೆಲ್ಲ ಸೇರಿ ಅಲ್ಲವೇ ಒಂದು ಮಿಥ್ಯಾ ದರ್ಪಣ ಸೃಷ್ಟಿಯಾಗುವುದು? (ಇಂತಹ ಸುಳ್ಳು, ವಂಚನೆಯ ಪ್ರಸಂಗಗಳು ಜಗತ್ತಿನ ಯಾವ ಮೂಲೆಗೆ ಹೋದರೂ ಶಿಷ್ಟ ಸಾಹಿತ್ಯದಲ್ಲಿ, ಜನಪದರಲ್ಲಿ ಲಭ್ಯವಿವೆ.) ಹಿಟ್ಲರನ ಸಂಗಾತಿ ಗೋಬೆಲ್ಸ್ ಈ ತಂತ್ರವನ್ನು ಅರ್ಥಮಾಡಿಕೊಂಡಿದ್ದ ಮತ್ತು ಹಿಟ್ಲರನ ರಾಜಕೀಯ ಪರಿಕ್ರಮದಲ್ಲಿ ಅಳವಡಿಸಿಕೊಂಡಿದ್ದ. ಇದನ್ನು ಇಡೀ ವಿಶ್ವವೇ ಸಖೇದಾಶ್ಚರ್ಯದಿಂದ ಗಮನಿಸಿತ್ತು. ಹೀಗೆ ಅನೇಕರು ಒಂದು ಸುಳ್ಳನ್ನು ಹೇಳಿದರೆ ಅಥವಾ ಒಬ್ಬನೇ ವ್ಯಕ್ತಿಯಾದರೂ ಅನೇಕ ಬಾರಿ ಸುಳ್ಳನ್ನು ಪರಿಣಾಮಕಾರಿಯಾಗಿ ಹೇಳಿದರೆ ಸಮಾಜದ ಬಹುಪಾಲು ಜನರು ಅದನ್ನು ಸತ್ಯವೆಂದೇ ಭ್ರಮಿಸುತ್ತಾರೆ. ಅದನ್ನು ತರ್ಕದ ನಿಕಷಕ್ಕೊಡ್ಡಿ ವಿವೇಕದಿಂದ, ವಿವೇಚನೆಯಿಂದ ತನ್ನ ತೀರ್ಮಾನವನ್ನು ಕೈಗೊಳ್ಳುವವರ ಸಂಖ್ಯೆ ಬಹು ಚಿಕ್ಕದು. ಹೀಗಾಗಿ ಸುಳ್ಳು ಬಹುಬೇಗ ಪ್ರಸಾರ-ಪ್ರಚಾರವಾಗುತ್ತದೆ. ಸತ್ಯವು ಒಳಗೇ ನರಳುತ್ತದೆ. ನಾವು ಹೆಮ್ಮೆಪಟ್ಟುಕೊಳ್ಳಬಹುದಾದ ವಿಚಾರವೆಂದರೆ ಈ ಗೋಬೆಲಿಸಂ ಎಂದು ಕರೆಯುವ, ಸುಳ್ಳೇ ಸತ್ಯವಾಗಿ ಪರಿಣಮಿಸುವ ಮತ್ತು ವಿಜೃಂಭಿಸುವ ಋಣಾತ್ಮಕ ವೌಲ್ಯವು ಪಂಚತಂತ್ರದ ಕಾಲದಲ್ಲೇ ನಮ್ಮಲ್ಲಿ ಪ್ರಚಲಿತವಿತ್ತು. ಆದ್ದರಿಂದ ಜಗತ್ತಿಗೆ ಶೂನ್ಯವನ್ನು ಕೊಟ್ಟವರು ನಾವೆಂದು ಹೇಳಿಕೊಳ್ಳುವಾಗ ಇದನ್ನೂ ಸೇರಿಸಿಕೊಳ್ಳಬಹುದೆಂದು ಕಾಣುತ್ತದೆ.
ಆರಂಭದಲ್ಲಿ ಹೇಳಿದ ಸತ್ಯವನ್ನು ಹೇಳು, ಪ್ರಿಯವಾದ್ದನ್ನು ಹೇಳು, ಆದರೆ ಅಪ್ರಿಯವಾದ ಸುಳ್ಳನ್ನು ಮಾತ್ರ ಹೇಳಬೇಡ ಎಂಬ ಮಾತಿನಲ್ಲಿರುವ ಆಕರ್ಷಕ ಪಲಾಯನವಾದ ಮತ್ತು ಬದುಕುವ ಕಲೆಯನ್ನು ಗಮನಿಸಿದರೆ ನಮಗೆ ಯಾರೂ ಬದುಕಲು ಕಲಿಯಿರಿ ಎಂದು ಹೇಳಬೇಕಾಗಿಲ್ಲವೇನೋ ಅನ್ನಿಸುತ್ತದೆ. ಈ ಉಕ್ತಿಯಲ್ಲಿರುವ ಸತ್ಯವನ್ನು ಹೇಳು ಎಂಬ ಪದಗಳ ಹಿಂದೆ ಹೋದ ಮಂದಿಯನೇಕರು ಹುತಾತ್ಮರಾದರು; ಆದರೆ ಅವರ ಹುತಾತ್ಮತೆಯನ್ನು ವೈಭವೀಕರಿಸಿ ಸತ್ಯಕ್ಕೇ ಅಂತಿಮ ಗೆಲುವು ಎಂಬ ನೀತಿಪಾಠವನ್ನು ಹೇಳತೊಡಗಿದೆವು. ಇದನ್ನೇ ಸತ್ಯಮೇವ ಜಯತೆ ಎಂದು ಪ್ರತಿಷ್ಠಾಪಿಸಿದೆವು. ಅಪ್ರಿಯವಾದ ಸತ್ಯವನ್ನು ಹೇಳಬೇಡ ಎಂಬಲ್ಲಿ ಇದ್ದ ಸೂತ್ರವಾದರೂ ಏನು? ಸತ್ಯಕ್ಕೆ ಒಂದು ಷರತ್ತು ವಿಧಿಸಿದಂತೆ ಮತ್ತು ಸತ್ಯವು ಪ್ರಿಯವಾದರೆ ಮಾತ್ರ ಅದು ಬಳಸತಕ್ಕ ವೌಲ್ಯ ಎಂಬ ನಂಬಿಕೆ. ಹಾಗಾದರೆ ನಾವು ಹೇಳಬೇಕಾದ ಸತ್ಯ ಯಾವುದು? ಅದು ವರ್ಣರಹಿತವಾಗಿರಬೇಕು; ಗುಣ ರಹಿತವಾಗಿರಬೇಕು; ನಿರಾಕಾರವಾಗಿರಬೇಕು. ಏಕೆಂದರೆ ಯಾವುದು ಭೌತಿಕ ಲಕ್ಷಣಗಳಿಗೆ ಹೊಂದುತ್ತದೆಯೋ ಅದು ಭಿನ್ನ ಪ್ರಕೃತಿಯ ವೈವಿಧ್ಯಮಯ ಸಮಾಜದಲ್ಲಿ ಎಲ್ಲರಿಗೂ ಪ್ರಿಯವಾಗಲಾರದು. ಆದ್ದರಿಂದ ಎಲ್ಲರಿಗೂ ಸಲ್ಲುವ ಅದೆಷ್ಟೇ ಅವಾಸ್ತವವಾಗಿರಲಿ, ಅಂತಹ ಸತ್ಯಗಳನ್ನಷ್ಟೇ ಹೇಳಬಹುದೆಂಬುದು ತಾತ್ಪರ್ಯ. ಈಗ ಹಗಲು; ಅಥವಾ ಈಗ ರಾತ್ರಿ ಇಂತಹ ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಮಾತುಗಳಷ್ಟೇ ಸತ್ಯವೆಂದು ಪರಿಭಾವಿಸಲು ಅರ್ಹವಾಗುತ್ತವೆಯೆಂದು ಭಾವಿಸುತ್ತೇವಲ್ಲವೇ? ಒಂದು ಕಡೆ ಇಬ್ಬರು ಕುಡುಕರು ಆಕಾಶದ ಚಂದ್ರನನ್ನು ನೋಡಿಕೊಂಡು ವಾದಿಸುತ್ತಿದ್ದರಂತೆ. ಒಬ್ಬ ಅದು ಚಂದ್ರ ಎಂದರೆ ಇನ್ನೊಬ್ಬ ಅದು ಸೂರ್ಯ ಎಂದು ಜಗಳಾಡುತ್ತಿದ್ದರು. ಆಗ ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದ ಪರವೂರ ಸಂಭಾವಿತನೊಬ್ಬನನ್ನು ಈ ಕುಡುಕರು ತಮ್ಮ ವಿವಾದವನ್ನು ಹೇಳಿ ಇತ್ಯರ್ಥಮಾಡುವಂತೆ ಕೋರಿಕೊಂಡರು. ಆ ಮನುಷ್ಯ ಸತ್ಯ ಹೇಳಿ ಈ ಇಬ್ಬರಲ್ಲಿ ಒಬ್ಬನ ಅಪ್ರಿಯತೆ ಸಾಧಿಸುವುದಕ್ಕಿಂತ ತಪ್ಪಿಸಿಕೊಳ್ಳುವುದೇ ಲೇಸೆಂದು ಬಗೆದು ತನ್ನ ಊರಿನಲ್ಲಾದರೆ ಹೇಳಬಹುದಿತ್ತು ಆದರೆ ಈ ಊರಿನಲ್ಲಿ ತನಗೆ ಅಷ್ಟಾಗಿ ಪರಿಚಯವಿಲ್ಲವೆಂದು ಹೇಳಿ ಮುಂದೆ ಸಾಗಿದ. ಅಂದರೆ ಎಲ್ಲರಿಗೂ ಗೊತ್ತಾಗಬಹುದಾದ ಸತ್ಯವನ್ನೂ ನಾವು ನಮ್ಮ ಕ್ಷೇಮಕ್ಕಾಗಿ ದೂರವಿಡುತ್ತೇವೆ. ಸತ್ಯವನ್ನು ಶ್ರೇಷ್ಠವೆಂದು ಹೇಳುತ್ತಲೇ ಸುಳ್ಳನ್ನು ಪೋಷಿಸಿಕೊಂಡೇ ಕಾಲ ಕಳೆದಿದೆ. ಸುಳ್ಳು ಬಯಲಾಗಿ ಸತ್ಯ ಅನಾವರಣಗೊಳ್ಳುವ ಹೊತ್ತಿಗೆ ಸಾಕಷ್ಟು ಹಾನಿಯಾಗಿರುತ್ತದೆ. ನಮ್ಮ ವ್ಯಾಪಾರಿ ಸಿನೆಮಾಗಳು ಈ ತಂತ್ರವನ್ನೇ ಬಹುಪಾಲು ಬಳಸಿಕೊಂಡು ನೋಡುಗರ ಮೇಲೆ ನಿಯಂತ್ರಣ ಸಾಧಿಸಿವೆ. ಸತ್ಯ ಹರಿಶ್ಚಂದ್ರರ ಸಿನೆಮಾವೂ ಸೇರಿದಂತೆ ಅನೇಕ ಹದಿನೆಂಟಕ್ಕೂ ಮಿಕ್ಕಿ ರೀಲುಗಳ ದೀರ್ಘ ಸಿನೆಮಾದಲ್ಲಿ ಸತ್ಯವಂತರು ಬೇಕಷ್ಟು ಕೊರಗು, ಸಾವು-ನೋವು, ಹಿಂಸೆ, ಅನುಭವಿಸದರೂ ಕೊನೆಯ ರೀಲಿನಲ್ಲಿ ಮಿಥ್ಯವಂತರು ಸೋತು ಎಲ್ಲವೂ ಸರಿಯಾಯಿತು ಎಂದು ಶುಭಂ ಎಂಬ ಫಲಕವನ್ನು ಹಾಕುವುದಕ್ಕೆ ಈ ಬಗೆಯ ನಡವಳಿಕೆಯೇ ಕಾರಣ ಎನ್ನಬಹುದು. ಮೊದಲ ಬಹುಪಾಲು ಬದುಕಿನಲ್ಲಿ ಅನುಭವಿಸಿದ ತೊಂದರೆಗಳಿಗೆ ಸಮರ್ಥನೆಯೂ ಇಲ್ಲ; ಪರಿಹಾರವೂ ಇಲ್ಲ.All’s well that ends we;
; ಅಂದರೆ ಸುಖಾಂತವಾದರೆ ಕಳೆದ ಕಷ್ಟಗಳು ಲೆಕ್ಕಕ್ಕಿಲ್ಲವೆಂಬ ಕೃತಕ ಸಮಾಧಾನವನ್ನು ಬಿಂಬಿಸುವ ಸೂತ್ರ. ಇದನ್ನು ನಾವು ಜೀವನ ಧರ್ಮವೆಂದು ಅಂಗೀಕರಿಸಿದ್ದೇವೆ. ಇದಕ್ಕೆ ನಮ್ಮ ಸಾಹಿತ್ಯದಲ್ಲಿ ಬೇಕಷ್ಟು ಸಮರ್ಥನೆಗಳಿವೆ. ಸುಳ್ಳು ಜಯಿಸಿದ ನೂರೆಂಟು ಉದಾಹರಣೆಗಳು ನಮ್ಮ ಸುತ್ತಮುತ್ತ ಅನುದಿನ ಸಿಗುತ್ತವೆ. ಮಣ್ಣಿನ ಮುದ್ದೆಯ ಹಾಗೆ ಇವನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡರೆ ಎಲ್ಲಿ ಹೇಗೆ ಬೇಕಾದರೂ ಉಪಯೋಗಿಸಬಹುದು. ಸಪ್ತರ್ಷಿಗಳು, ಅಷ್ಟ ದಿಕ್ಪಾಲಕರು ದೇವ ಸಭೆೆಯಲ್ಲಿ ಮಾತ್ರವಲ್ಲ, ರಾವಣನ ಆಸ್ಥಾನದಲ್ಲೂ ಇದ್ದರಂತಲ್ಲ!
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ಎಂದು ಕನಕದಾಸರು ಹಾಡಿದಂತೆ, ಈ ಸುಳ್ಳಿನ ಉಪನ್ಯಾಸದಲ್ಲೂ ತೊರೆದು ಜೀವಿಸಬಹುದೆ ರಾಜಕಾರಣಗಳ ಎಂದು ಕೇಳಬಹುದು. ರಾಜಕಾರಣವನ್ನು ಗಮನಿಸಿದರೆ ಕೆಲವೊಂದು ಅಪಥ್ಯ ಮಿಥ್ಯಗಳು ದಿನನಿತ್ಯ ಬೆಳಕಿಗೆ ಬರುತ್ತವೆ:
Lies, damn lies, and statistics (ಸುಳ್ಳುಗಳು, ಘೋರ ಸುಳ್ಳುಗಳು ಮತ್ತು ಅಂಕಿಅಂಶಗಳು) ಎಂಬ ಮಾತಿದೆ. ಸುಳ್ಳುಗಳು ಸಾಧಿಸದ್ದನ್ನು ಘೋರ ಸುಳ್ಳುಗಳಿಂದ ಮತ್ತು ಅದೂ ಸಾಧ್ಯವಾಗದಿದ್ದರೆ ಅಂಕಿ-ಅಂಶಗಳಿಂದ ಸಾಧಿಸಬಹುದು ಎಂದು ತಾತ್ಪರ್ಯ. ಯಾವುದಾದರೊಂದು ಪ್ರಶ್ನೆಗೆ ನೀವು ಹತ್ತು ಲಕ್ಷ, ಒಂದು ಕೋಟಿ ಹೀಗೆ ಸಮಾಂತ್ಯದ ಅಂಕೆಗಳನ್ನು ಹೇಳಿ; ನೀವು ಬುರುಡೆ ಬಿಡುತ್ತೀರೆಂದು ಜನರು ತಿಳಿಯುತ್ತಾರೆ. ಅದೇ ಪ್ರಶ್ನೆಗೆ ನೀವು ಯಾವುದೋ ವಿಷಮಾಂತ್ಯ ಅಥವಾ ದಶಮಾಂಶ ಲೆಕ್ಕದ ಅಂಕೆಗಳನ್ನು ಹೇಳಿ; ಸರಿಯಿರಬಹುದೆಂದು ಜನರು ಭಾವಿಸುತ್ತಾರೆ. ನಮ್ಮ ಸರಕಾರಗಳ ಆಯವ್ಯಯಪತ್ರಗಳನ್ನೂ. ಸಂಸತ್ತು ಹಾಗೂ ಶಾಸನ ಸಭೆಗಳ ಪ್ರಶ್ನೋತ್ತರಗಳನ್ನೂ ಗಮನಿಸಿದರೆ ಇಂತಹ ತಂತ್ರಗಳು ಸ್ಪಷ್ಟವಾಗಬಹುದು. ಕಪ್ಪುಹಣದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ನಮ್ಮ ರಾಜಕಾರಣಿಗಳು ನೀಡುವ ಹೇಳಿಕೆಗಳನ್ನು ಗಮನಿಸಿ: ಎಷ್ಟೊಂದು ಆಕರ್ಷಕ! ಇನ್ನೇನು ಸ್ವಿಸ್ ಹಣ ಬಂದು ಇಲ್ಲಿ ರಾಶಿಯಾಗಿದೆ ಎಂದನ್ನಿಸಬೇಕು. ಹಾಗಿರುತ್ತದೆ ವರಸೆ. ಬದಲಾಗಿ ಅದನ್ನು ಜನರಿಂದ ಮರೆಸಿ ಈಗ ದೇಶಿ ಕಪ್ಪುಹಣದ ಘೋಷಣೆಗೆ ರಿಯಾಯಿತಿ ಘೋಷಿಸಲಾಗಿದೆ. ಸುಳ್ಳು ಹೇಳುವುದರ ಹೊರತಾಗಿ ನನಗಿನ್ನಾವ ಕೆಟ್ಟ ಚಟವೂ ಇಲ್ಲ ಎಂದರೆ ಹೇಗಿದ್ದೀತು?
ಈ ದೇಶದಲ್ಲಿ ಒಟ್ಟಾರೆ ನೆಟ್ಟ ಮರಗಳ ಸಂಖ್ಯೆಯ ಅಂಕಿಅಂಶಗಳನ್ನು ಪರಿಶೀಲಿಸಿದರೆ ಮತ್ತು ಅವನ್ನು ಯಥಾರ್ಥವಾಗಿ ನೆಟ್ಟ ಮರಗಳ ಜೊತೆ ತಾಳೆ ಮಾಡಿದರೆ ಸುಳ್ಳಿನ ಅಗಾಧ ಸತ್ಯ ಗೊತ್ತಾದೀತು! ಕಳೆದ ಆರು ದಶಕಗಳಲ್ಲಿ ಬಡವರ ಉದ್ಧಾರಕ್ಕೆ ವೆಚ್ಚ ಮಾಡಿದ ಹಣವನ್ನು ಲೆಕ್ಕ ಹಾಕಿದರೆ ಎಲ್ಲ ಬಡವರೂ ಇಂದು ಸ್ವರ್ಗಸುಖದ ಅದಾನಿ-ಅಂಬಾನಿಗಳಾಗಬೇಕಿತ್ತು! ಆದರೆ ಇದಕ್ಕೆ ಬದಲಾಗಿ ಬಡವರು ಸ್ವರ್ಗದಲ್ಲೋ ಇಲ್ಲವೇ ಸಾಲಗಾರರ ಬಲೆಯಲ್ಲೋ ಇದ್ದಾರೆ. ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬುದು ಇನ್ನೊಂದು ಪ್ರಸಿದ್ಧ ಉಕ್ತಿ. ಆಧುನಿಕ ಜಗತ್ತಿನಲ್ಲಿ ಕೃಷಿಯೆಂಬುದು ಕೊನೆಯ ವೃತಿಯಾಗಿದೆ. ಒಬ್ಬ ಕೃಷಿಕ ಕಷ್ಟಪಟ್ಟು ದುಡಿದು ಸಂಪಾದನೆ ಮಾಡುವುದನ್ನು ಒಬ್ಬ ಕೃಷಿ ಲೇಖಕ ಬೆವರಿಳಿಸದೆ ಸಂಪಾದನೆ ಮಾಡಬಹುದಾಗಿದೆ. ಕೃಷಿಕರ ಬವಣೆ ಮತ್ತು ಸರಣಿ ಆತ್ಮಹತ್ಯೆ ಸಹಿಸದ ಒಬ್ಬರೆ ಮುಂದಿನ ಬಜೆಟಿನಲ್ಲಿ ಹುರಿಹಗ್ಗದ ಬೆಲೆ ತಗ್ಗಿಸಿದರೆ ಆತ್ಮಹತ್ಯೆಯ ವೆಚ್ಚ ಕಡಿಮೆಯಾಗಬಹುದು ಎಂದು ಹೇಳಿದರು! ಇಂತಹ ಕಟು ಸತ್ಯ ಯಾರಿಗೆ ಬೇಕು? ಬದಲಾಗಿ ಸಿಹಿಸುಳ್ಳು ಸರ್ವ ಮಾನ್ಯವಾಗಬೇಕು. ಏಕೆಂದರೆ ಸುಳ್ಳು ಇಂದು ನಿನ್ನೆಯದಲ್ಲ; ಅದೂ ಸತ್ಯದಷ್ಟೇ ಅರ್ವಾಚೀನ. ಒಂದು ಮಾತಿದೆ: ಸತ್ಯ ಹೇಳಿದವರು ಸತ್ತು ಹೋಗುತ್ತಾರೆ; ಅನ್ಯಾಯ ಮಾಡಿದವರು ಅನ್ನ ತಿನ್ನುತ್ತಾರೆ. ಅನ್ಯಾಯ ಎಂಬುದರ ಬದಲಿಗೆ ಸುಳ್ಳು ಎಂಬುದು ಸರಿಯಾದ ಪದ. ಆದರೆ ಈ ಉಕ್ತಿಯನ್ನು ಸೃಷ್ಟಿಸಿದವನಿಗೆ ಅನ್ನ ಎಂಬ ಪದಕ್ಕೆ ಬೇರೆ ಪದ ಸಿಕ್ಕಿರಲಿಕ್ಕಿಲ್ಲ; ಅದಕ್ಕೇ ಅನ್ಯಾಯ ಎಂಬ ಪದವನ್ನು ಬಳಸಿದ್ದಾನೆ. ಒಟ್ಟಿನಲ್ಲಿ ನಿಗೂಢ ಸತ್ಯ ಒಂದೇ!
ಇದೆಲ್ಲವುಗಳಿಗೆ ಪರಿಹಾರವೆಂದರೆ ಸುಳ್ಳು ಎಂಬುದನ್ನು ನಮ್ಮ ಪದಪ್ರಪಂಚದಿಂದ ಮಾತ್ರವಲ್ಲ, ವಿಚಾರ, ಪದ, ವಾಸ್ತವ ಇವೆಲ್ಲವುಗಳಿಂದ ದೂರಮಾಡುವುದು; ಮಿಥ್ಯಮೇವ ಜಯತೆ ಎಂದು ಘೋಷಿಸುವುದು!