varthabharthi


ಒರೆಗಲ್ಲು

ದಲಿತ ಬಂಡಾಯ: ಏಳು ಬೀಳು

ವಾರ್ತಾ ಭಾರತಿ : 4 Mar, 2016

1979ರಲ್ಲಿ ನವ್ಯಕವಿ ಪ್ರೊ.ಎಂ.ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ಅ.ಭಾ. ಸಾಹಿತ್ಯ ಸಮ್ಮೇಳನ ಜರಗಿತು. ಅದೇ ದಿನ ಬೆಂಗಳೂರಿನಲ್ಲಿ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಒಂದು ಜನಾಂಗದ ಕಣ್ಣು ತೆರೆಸಿದ ಕವಿಯೆಂದು ಹೆಸರಾಗಿದ್ದ ಅಡಿಗರು ಧರ್ಮಸ್ಥಳದ ಸಮ್ಮೇಳನದಲ್ಲಿ ಅಧ್ಯಕ್ಷರಾದುದರ ವಿರುದ್ಧ ಪ್ರತಿಭಟನೆ, ಅದಕ್ಕಿಂತಲೂ ಹೆಚ್ಚಾಗಿ ಈ ಸಮ್ಮೇಳನದಲ್ಲಿ ಪ್ರೊ.ಚೆನ್ನಣ್ಣ ವಾಲೀಕಾರ ಮತ್ತಿತರರು ಸೂಚಿಸಿದ್ದ ದಲಿತ ಸಾಹಿತ್ಯಗೋಷ್ಠಿಗೆ ಅವಕಾಶ ನೀಡದಿದ್ದುದೇ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಸ್ಫೂರ್ತಿಯಾಯಿತು.
‘ಖಡ್ಗವಾಗಲಿ ಕಾವ್ಯ: ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬುದೇ ಬಂಡಾಯದ ಧ್ಯೇಯವಾಕ್ಯ. ಇದನ್ನು ಕಲ್ಪಿಸಿ ಕೊಟ್ಟವರು ಚಿಂತಕ ಡಾ.ಡಿ.ಆರ್.ನಾಗರಾಜ. ಆದರೆ ಹತ್ತೇ ವರ್ಷಗಳಲ್ಲಿ ಇದೇ ನಾಗರಾಜ ಹುಬ್ಬಳ್ಳಿಯಲ್ಲಿ ಜರಗಿದ ಡಾ.ಆರ್.ಸಿ.ಹಿರೇಮಠರ ಅಧ್ಯಕ್ಷತೆಯ ಅ.ಭಾ. ಸಾಹಿತ್ಯ ಸಮ್ಮೇಳನದ ಎದುರಾಗಿ ‘ಶ್ರೇಷ್ಠ ಸಾಹಿತ್ಯ ಸಮ್ಮೇಳನ’ವನ್ನು ಬೆಂಗಳೂರಲ್ಲಿ ಜರಗಿಸಲು ಒತ್ತಾಸೆ ನೀಡಿದರು. ಹತ್ತೇ ವರ್ಷಗಳಲ್ಲಿ ಬಂಡಾಯ ಈ ದುಃಸ್ಥಿತಿಗೆ ತಲುಪುವಂತಾದುದು ಹೇಗೆ? ಯಾಕೆ? ಎಂಬ ಜಿಜ್ಞಾಸೆ ಈ ಅಂಕಣದ ಉದ್ದೇಶ.
ಬಂಡಾಯ ಸಾಹಿತ್ಯ ಸಂಘಟನೆ ಧ್ವನಿಯಿಲ್ಲದ ಸಮಾಜದ ಕೆಳಸ್ತರದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಧ್ವನಿ ನೀಡಿದ್ದು ಸಾಮಾನ್ಯ ಸಂಗತಿಯೇನಲ್ಲ. ಸಂಘಟನೆ ಹುಟ್ಟಿಕೊಳ್ಳುವಾಗ ಮೂವರು ಸಂಚಾಲಕರಲ್ಲಿ ಒಬ್ಬರು ದಲಿತ ಸಾಹಿತಿಗಳಿರತಕ್ಕುದೆಂಬ ಸಿದ್ಧಾಂತ ಹೊಂದಿತ್ತು; ಅದೇ ಪ್ರಕಾರ ಮುಂದುವರಿದುದೂ ನಿಜ.
 ಯಜಮಾನ ಸಂಸ್ಕೃತಿಯ ವಿರುದ್ಧ ಹಾಗೂ ಈ ಸಂಸ್ಕೃತಿಯ ಪ್ರತಿಪಾದಕ ಸಂಸ್ಥೆಗಳ (ಆಕಾಶವಾಣಿ, ಕಸಾಪ, ವಿವಿಧ ಅಕಾಡಮಿಗಳು) ವಿರುದ್ಧ ಸಮೂಹ ಸಂಸ್ಕೃತಿಯನ್ನೆತ್ತಿ ಹಿಡಿಯುವ ಖಚಿತ ಧ್ಯೇಯವನ್ನು ಬಂಡಾಯ ಹೊಂದಿತ್ತು. ಪ್ರಗತಿಪರ ಲೇಖಕರ ಒಕ್ಕೂಟ, ಬಿ.ಬಸವಲಿಂಗಪ್ಪ ಪ್ರಕರಣ (‘ಬೂಸಾ’ ಸಂಸ್ಕೃತಿ), ದಲಿತ ಸಂಘರ್ಷ ಸಮಿತಿಯ ಉದಯ, ತುರ್ತು ಪರಿಸ್ಥಿತಿಯ ವಿರುದ್ಧ ಜನಜಾಗೃತಿ ಇವುಗಳೊಂದಿಗೆ ಆಂಧ್ರದ ‘ವಿರಸಂ’, ಮರಾಠಿ ಮತ್ತು ಕ್ರಾಂತಿಕಾರಿ ಜಾಗತಿಕ ಸಾಹಿತ್ಯ ಸಂಸ್ಕೃತಿಗಳ ಪರಿಚಯ ಮತ್ತು ಮುಖಾಮುಖಿ ಬಂಡಾಯದ ನೆಲೆಗಟ್ಟನ್ನು ಗಟ್ಟಿಗೊಳಿಸಿದವು.
ಯಜಮಾನ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಸ್ಥೆಗಳಿಂದ ದೂರಿವಿರುವ ಈ ವಿಧಿ ನಿಷೇಧದ ಕಲ್ಪನೆಯನ್ನು ಕಟ್ಟಾ ಬಂಡಾಯಗಾರರು ಪಾಲಿಸಿದರು. ಹಿರಿಯ ಬಂಡಾಯ ಸಾಹಿತಿಗಳು ತಾವೇ ರೂಪಿಸಿದ ನಿಯಮಗಳನ್ನು ಗಾಳಿಗೆ ತೂರಿದರು. ಕಿರಿಯರು ಪ್ರಶ್ನಿಸಿದರೆ ‘ಬಂಡಾಯ ಗಟ್ಟಿಯಾಗಿದೆ. ನಾವು ನಮ್ಮ ವಿಚಾರಗಳನ್ನು ಎಲ್ಲಾ ವೇದಿಕೆಗಳಲ್ಲಿ ಪ್ರತಿಪಾದಿಸುತ್ತೇವೆ’ ಎಂಬ ಉತ್ತರ ಬರುತ್ತಿತ್ತು. ಸ್ವತಃ ಕಸಾಪ ಆಶ್ರಯದಲ್ಲೇ ಬಂಡಾಯ ಸಾಹಿತ್ಯ ಚಳವಳಿಯ ದಶಮಾನೋತ್ಸವ ನಡೆಸಲಾಯಿತು; ಕರ್ನಾಟಕದ ಕೆಲಭಾಗಗಳಲ್ಲಿ ಬರಗಾಲವಿದ್ದಾಗ ವಿಶ್ವಕನ್ನಡ ಸಮ್ಮೇಳನ ಜರಗಿದಾಗಲೂ ಬಂಡಾಯದ ಹಿರಿಯ ಲೇಖಕರು ಭಾಗವಹಿಸಿದರು. ಇದನ್ನೆಲ್ಲ ಗಮನಿಸಿದಾಗ ಈ ವಿಧಿ ನಿಷೇಧದ ಕಲ್ಪನೆಯೇ ಬಂಡಾಯವನ್ನು ಶಿಥಿಲಗೊಳಿಸಿತೇ ಎಂದು ಚಿಂತಿಸುವಂತಾಗುತ್ತದೆ.
ಬಂಡಾಯ ಸಾಹಿತ್ಯ ಸಂಘಟನೆ ರೂಪುಗೊಂಡ ಬೆನ್ನಲ್ಲೆ ಪ್ರೊ.ಯು.ಆರ್.ಅನಂತಮೂರ್ತಿ ಸಂಪಾದಕತ್ವದಲ್ಲಿ ‘ರುಜುವಾತು’ ಪತ್ರಿಕೆ ಹೊರಬಂದಿತು. ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಬಂಡಾಯದ ಮುಖಂಡರ ಬಗ್ಗೆ ಅನಂತಮೂರ್ತಿ ಹೇಳಿದ ಮಾತುಗಳು ‘ಸ್ಥಾನಮಾನ ಗೌರವಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ, ಅದೆಲ್ಲಾ ದೊರಕಿದ ಮೇಲೆ ಈ ಹೋರಾಟ ತಣ್ಣಗಾಗಲಿದೆ’ ಎಂಬರ್ಥದ್ದು ಕೆಲವೇ ವರ್ಷಗಳಲ್ಲಿ ನಿಜವಾಯಿತು. ನನ್ನಂಥವರು ಇದು ಪೂರ್ವಾಗ್ರಹವೆಂದು ಅನಂತಮೂರ್ತಿ ಅವರನ್ನು ಖಂಡಿಸಿದ್ದು ನಿಷ್ಫಲವೆನಿಸಿತು.
ವರ್ಷಕ್ಕೊಮ್ಮೆ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ವಿವಿಧೆಡೆ ಜರಗಿದಾಗಲೆಲ್ಲ ಭಾಗವಹಿಸುತ್ತಿದ್ದೆ. 13 ಕವಯಿತ್ರಿಯರ ಕವನ ಸಂಕಲನಗಳ ವಿಮರ್ಶೆ ‘ಸಂಕ್ರಮಣ’ಕ್ಕಾಗಿ ಬರೆಯುವ ನೆವದಲ್ಲಿ ‘ಮಹಿಳಾಪ್ರಜ್ಞೆ ಮತ್ತು ಕಾವ್ಯ’ ಎಂಬ ಲೆನಿನ್‌ವಾದಿ ದೃಷ್ಟಿಕೋನದ ದೀರ್ಘ ಲೇಖನ ಬರೆದೆ. ಮಹಿಳಾವಾದಿ ಸಿದ್ಧಾಂತ ದ್ವಂದ್ವಾತ್ಮಕ ದೃಷ್ಟಿಕೋನದಲ್ಲಿ ಪ್ರಕಟವಾದ ಮೊತ್ತಮೊದಲ ಸಮೀಕ್ಷೆ ಅದು. ಬಂಡಾಯ ಸಂಘಟನೆಯ ಹೊರಗಿದ್ದೂ ಮಹಿಳಾವಾದದ ಸೂಕ್ಷ್ಮತೆಯನ್ನು ಅರಗಿಸಿಕೊಂಡ ಲೇಖಕರನ್ನು ಗುರುತಿಸುವ ಔದಾರ್ಯ ನನ್ನಲ್ಲಿ ಆವತ್ತು ಇತ್ತು; ಇವತ್ತೂ ಇದೆ.
ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ವಹಿಸಿದ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಯತ್ನಿಸಿದೆ. ನನ್ನ ಪ್ರಕಾರ ಎಡಪಂಥೀಯ ವಿಚಾರಧಾರೆಯ ಬಂಡಾಯ ಸಹಿತ್ಯ ಸಂಘಟನೆ ಸುಭದ್ರವಾಗಿ ನೆಲೆಗೊಳ್ಳಬೇಕಾದರೆ ತಿಂಗಳಿಗೊಂದಾದರೂ ವಿಚಾರಗೋಷ್ಠಿ ಅಥವಾ ಅಧ್ಯಯನ ತರಗತಿ ರಾಜ್ಯದ ವಿವಿಧೆಡೆ ಜರಗಬೇಕು, ಅಲ್ಲಿ ಮಂಡಿಸಲಾದ ಪ್ರಬಂಧದ ಬಗ್ಗೆ ವ್ಯಾಪಕ ಚರ್ಚೆಯಾಗಿ, ಆ ಚರ್ಚೆಯ ಮುಖ್ಯಾಂಶಗಳನ್ನು ಅಳವಡಿಸಿಕೊಂಡು ಪ್ರಬಂಧವನ್ನು ಪರಿಷ್ಕರಿಸಿ ಕಿರುಹೊತ್ತಿಗೆಯ ರೂಪದಲ್ಲಿ ಪ್ರಕಟಿಸಬೇಕು. ಮುಂದಿನ ತಿಂಗಳು ವಿಚಾರಗೋಷ್ಠಿ ನಡೆಯುವ ವೇದಿಕೆಯಲ್ಲಿ ಈ ಕಿರುಹೊತ್ತಿಗೆಯ ಬಿಡುಗಡೆಯಾಗಬೇಕು. ಈ ವಾದವನ್ನು ತುಂಬ ಬಂಡಾಯ ಲೇಖಕರು ಅಂಗೀಕರಿಸಿದರಾದರೂ, ಇದು ಅಕ್ಷರಶಃ ಜಾರಿಗೆ ಬರಲಿಲ್ಲ. ಪ್ರೊ. ಬರಗೂರು ರಾಮಚಂದ್ರಪ್ಪ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದಾಗ ನಾನು ಪ್ರಸ್ತಾಪಿಸಿದ ಕೆಲವು ಭೂಮಿಕೆಗಳ ಮೇಲೆ ವಿಚಾರಗೋಷ್ಠಿ ನಡೆಯಿತೆಂಬುದು ಸಮಾಧಾನದ ಸಂಗತಿ.
ವಿವಿಧ ಪರಿಷತ್ತು, ಅಕಾಡಮಿ, ಪ್ರಾಧಿಕಾರಗಳಲ್ಲಿ ಅಧ್ಯಕ್ಷತೆ ವಹಿಸಿದ ಹಿರಿಯ ಬಂಡಾಯ ಲೇಖಕರು ಬಂಡಾಯವನ್ನು ವಿವಿಧ ಜ್ವಲಂತ ಸಮಸ್ಯೆಗಳ ವಿರುದ್ಧದ ನಿರಂತರ ಹೋರಾಟವನ್ನಾಗಿ ಮುಂದುವರಿಸುವಲ್ಲಿ ವಿಫಲರಾದರು. ‘ಬಂಡಾಯ ಒಂದು ಮನೋಧರ್ಮ’ ಎಂದು ಉದ್ಗರಿಸಿ ಹೊಣೆಗಾರಿಕೆಯಿಂದ ನುಣುಚಿಕೊಂಡರು. ‘ಬಂಡಾಯ ಸತ್ತಿದೆಯೇ?’ ಎಂಬ ಶೀರ್ಷಿಕೆಯಡಿ ಮಂಗಳುರು ಆಕಾಶವಾಣಿಯಿಂದ ಭಾಷಣಕ್ಕೆ ಆಹ್ವಾನ ಬಂದಾಗ ನಾನು ‘ಸ್ಥಗಿತವಾಗಲೊಲ್ಲದ ಬಂಡಾಯ’ ಎಂಬುದಾಗಿ ಶೀರ್ಷಿಕೆ ಬದಲಿಸಿ, ಪ್ರಾದೇಶಿಕವಾಗಿಯಾದರೂ (ಕೊಪ್ಪಳ, ಉಕ, ದಕ) ಬಂಡಾಯ ಚಳವಳಿ ಜೀವಂತವಾಗಿರುವ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದೆ. ಈ ಭಾಷಣ ‘ಕೆಂಬಾವುಟ’ ವಿಶೇಷಾಂಕದಲ್ಲಿ ಪ್ರಕಟವಾದಾಗ ಹಿರಿಯ ಬಂಡಾಯ ಸಾಹಿತಿಯೊಬ್ಬರು, ಅಲ್ಲಿ ಸ್ಥೂಲವಾಗಿ ಹೇಳಲಾದ ಮಾತುಗಳನ್ನು ತನಗೆ ಅನ್ವಯಿಸಿಕೊಂಡು ರೇಗಿ ಬರೆದರು. ‘ನಿಮ,್ಮ ಜಾತಿಗುಣ ದು ನಿಮ್ಮ ಬಗ್ಗೆ ಸಂಪಾದಕೀಯ ಬರೆಯಲಿದ್ದೇನೆ’ ಎಂದು ಕುಟುಕಿದರು. ನಾನು ಚಿವಲಿತವಾಗದೆ, ‘ಏನು ಬೇಕಾದರೂ ಬರೆಯಿರಿ. ಮುಂದಿನ ಸಂಚಿಕೆಯಲ್ಲಿ 10-20 ಪುಟಗಳಷ್ಟು ಜಾಗ ನನಗಾಗಿ ಮೀಸಲಿಡಿ; ನನ್ನ ಪರವಾಗಿ ನಾನು ಬರೆಯುವುದಿಲ್ಲ; ಬೇಕಷ್ಟು ಜನ ನನ್ನ ಪರವಾಗಿ ಬರೆಯುವವರಿದ್ದಾರೆ’ ಎಂದು ಬರೆದೆ. ಅಲ್ಲಿಗೆ ಆ ಪ್ರಕರಣ ಮುಕ್ತಾಯವಾಯಿತು.
ತುಳುವಿನಲ್ಲೊಂದು ಗಾದೆ: ‘ಉದ್ಯಾವರೊಗು ಪೋನಗ ಸುಬ್ಬಿಡ ಪಾತೆರ್ಲ’ (‘ಉದ್ಯಾವರಕ್ಕೆ ಹೋದಾಗ ಸುಬ್ಬಿಯೊಂದಿಗೆ ಮಾತಾಡು’). ತೀರಾ ಔಪಚಾರಿಕವಾಗಿ ಮಾತಾಡುವ, ನಡಕೊಳ್ಳುವ ವ್ಯಕ್ತಿಗಳನ್ನು ಈ ಗಾದೆ ಚೆನ್ನಾಗಿ ವಿಡಂಬಿಸುತ್ತದೆ. ನನಗೆ ಸುಬ್ಬಿಯ ಬಳಿ ಮಾತಾಡಲಿಕ್ಕಿದ್ದರೆ ಅದಕ್ಕಾಗಿಯೇ ಉದ್ಯಾವರಕ್ಕೆ ಹೋಗುತ್ತೇನೆ; ಆಕಸ್ಮಿಕವಾಗಿ ಹೋದಾಗ ಮಾತಾಡುವುದಿಲ್ಲ. ಇದನ್ನೇ ಸಿಪಿಎಂ ಮಹಾನಾಯಕ ಇಎಂಎಸ್ ಮಾತಿನಲ್ಲಿ ಹೇಳುವುದಾದರೆ ‘ಜನ ನಮ್ಮನ್ನು ನೋಡುತ್ತಿರುತ್ತಾರೆ; ನಾವು ಬೇರೆಡೆ ನೋಡುತ್ತೇವೆ’. ಇದು ಬಂಡಾಯದಂಥ ಎಡಪಂಥೀಯ ಸಾಹಿತ್ಯಕ ಸಂಘಟನೆಗಳ ದುರಂತ.
2007ರಲ್ಲಿ ಉಡುಪಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಘ ಪರಿವಾರದ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅಧ್ಯಕ್ಷರಾದುದನ್ನು ಪ್ರತಿಭಟಿಸಿ ನಾವು ‘ಸೌಹಾರ್ದ ಸಾಹಿತ್ಯ ಸಮ್ಮೇಳನ’ ಎಂಬ ಹೆಸರಿನಲ್ಲಿ 9-12-2007ರಂದು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಯಶಸ್ವಿಯಾಗಿ ಉತ್ಸವ ಜರಗಿಸಿದೆವು. ಅದರ ಉದ್ಘಾಟಕರಾಗಿ ‘ದಲಿತ ಕವಿ ಗೋವಿಂದಯ್ಯ ಮಾತಾಡುತ್ತಾ ದಲಿತ ಸಾಹಿತ್ಯ ಬಂಡಾಯಕ್ಕೆ ಬಲಿಯಾಯಿತು; ಸೌಹಾರ್ದ ಸಮ್ಮೇಳನದಲ್ಲಿ ಇದರ ಬಗ್ಗೆ ಚಿಂತನೆ ನಡೆಯಬೇಕು’ ಎಂದು ಅಪ್ಪಣೆ ಕೊಡಿಸಿದರು. ದಸಂಸವಾಗಲಿ, ಬಂಡಾಯವಾಗಲಿ, ಯಾವ ಸಂಘಟನೆಯಲ್ಲೂ ಕ್ರಿಯಾಶೀಲರಾಗಿರದ ವ್ಯಕ್ತಿವಾದಿ ಒಲವಿನ ಗೋವಿಂದಯ್ಯ, ಮನಜಾ ಅರವಿಂದ ಮಾಲಗತ್ತಿ ಮುಂತಾದವರು ಅಸ್ಮಿತೆಯ ಬಿಕ್ಕಟ್ಟಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ಇಂಥ ಅಸಂಬದ್ಧ ಪ್ರಲಾಪಗಳು ನಡೆಯುತ್ತವೆ ಎಂದು ನಾನು ಪ್ರತಿಕ್ರಿಯಿಸಿ ಪತ್ರಿಕೆಗಳಲ್ಲಿ ಬರೆದದ್ದಿದೆ. ಮಾಲಗತ್ತಿ ಅವರು ದಲಿತ ಸಾಹಿತ್ಯವನ್ನು ‘ದಲಿತೀಯ’, ‘ದಲಿತೇಯ’, ‘ಆಂಶಿಕ ದಲಿತ ಸಾಹಿತ್ಯ’ ಎಂಬಂತೆ ವಿಲಕ್ಷಣವಾಗಿ ವಿಭಜಿಸಿರುವುದನ್ನು ಗಮನಿಸಬಹುದು. ಈ ದಲಿತ ಲೇಖಕರ್ಯಾರೂ ಮೊದಲ ಜನಾಂಗದ ಸುರಕ್ಷಿತ ದಲಿತರಲ್ಲ ಎಡಪಂಥೀಯ ದಸಂಸ-ಬಂಡಾಯ ಸಾಹಿತ್ಯ ಸಂಘಟನೆಗಳಲ್ಲಿ ಗುರುತಿಸಿಕೊಳ್ಳಲಾರದಷ್ಟೂ ಆಸ್ಮಿತೆಯ ಬಿಕ್ಕಟ್ಟು ರೂಢಿಸಿಕೊಂಡವರು. ಇಂಥವರನ್ನು ‘ನಿರವಯವಿ ಸಾಹಿತಿ’ಗಳೆಂದು ವಿಶ್ಲೇಷಿಸಬಹುದು. ನಮಗೆ ಬೇಕಾಗಿರುವುದು ‘ಸಾವಯವಿ ಸಾಹಿತಿ’ಗಳು. ಅಂದರೆ ಎಡಪಂಥೀಯ ಸಂಘಟನೆಗಳಲ್ಲಿ ಭಾಗಿಯಾದವರು. ಇಂಥವರಿಗೆ ‘ದೇವನೂರರ ಸಾಹಿತ್ಯವನ್ನು ನಿಕಷಕ್ಕೊಡ್ಡುವಷ್ಟು ಬಂಡಾಯ ಬೆಳೆದಿಲ್ಲ’ ಎಂದು ಆಡುವುದು ಸುಲಭವಾಗುತ್ತದೆ. ಇಂಥವರಿಗೆ ಬಂಡಾಯ ಸಾಹಿತ್ಯದಲ್ಲೇ ದಲಿತ ಸಾಹಿತ್ಯ ಅಳವಡುತ್ತದೆಂಬ ಪ್ರಾಥಮಿಕ ಸಂಗತಿ ತಿಳಿಯಲಾರದಷ್ಟೂ ಅರಾಜಕತವಾದ; ಅಸ್ಮಿತೆಯ ಬಿಕ್ಕಟ್ಟು ಗೋವಿಂದಯ್ಯರ ‘ಆ ಮತ್ತು....’ ಕವಿತೆ ‘ರುಜುವಾತು’ನ ಮೊದಲ ಸಂಚಿಕೆಯಲ್ಲಿ ಪ್ರಕಟವಾದಾಗ, ಅದನ್ನು ಸಮಾಜವಾದಿ ದೃಷ್ಟಿಕೋನದಿಂದ ವಿಮರ್ಶಿಸಿ ಲೇಖನ ಬರೆದಿದ್ದೆ. ಅದು ಕ್ರಮೇಣ ಪಿಯುಸಿ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಕೊಂಡಿತು. ಈ ಕವಿತೆಯಲ್ಲಿ ಗೋವಿಂದಯ್ಯ ಪಡೆದ ಯಶಸ್ಸನ್ನು ಮುಂದಿನ ಕವಿತೆಗಳಲ್ಲೇಕೆ ಸಾಧಿಸಲಾಗಿಲ್ಲ? ಎಂದು ಅನಂತಮೂರ್ತಿ ಸ್ವತಹ ಪ್ರಶ್ನಿಸುವಂತಾಯಿತು. ಪುಸ್ತಕ ವಿಮುಖಿ, ಜ್ಞಾನ ಸಂವಾದ ದ್ವೇಷಿ ಸಾಹಿತಿಗಳು ಯಾವ ಜಾತಿಯವರಾದರೂ ಸರಿಯೆ, ಸಮಾಜಕ್ಕೇನೂ ನೀಡಲಾರರೋ ಏನೋ ಎಂದು ಆತಂಕಿಸುವಂತಾಗಿದೆ.
ಬಂಡಾಯದಲ್ಲೇ ದಲಿತ ಸಾಹಿತ್ಯ ಒಳಗೊಳ್ಳುತ್ತದೆಂಬುದು ನಮ್ಮ ಸಂಘಟನೆಯ ನಿಲುವಾಗಿದ್ದಾಗಲೇ ಅಸ್ಮಿತೆಯ ಬಿಕ್ಕಟ್ಟಿನಿಂದಾಗಿ ಸಂಘಟನಾಶೀಲರಲ್ಲದ, ಹೋರಾಟದಲ್ಲಿ ನಂಬುಗೆಯಿಲ್ಲದ ಗೋವಿಂದಯ್ಯರಂಥ ದಲಿತ ಲೇಖಕರು ‘ದಲಿತ ಬಂಡಾಯ’ ಎಂಬ ಶೀರ್ಷಿಕೆಯಡಿ ಬರೆಯಬೇಕೆಂದು ಒತ್ತಾಯಿಸಿದ್ದು ನನ್ನ ಗಮನದಲ್ಲಿದೆ. ಬಿ.ಕೃಷ್ಣಪ್ಪ, ನಗರಿ ಬಾಬಯ್ಯ, ಬಿ.ಗಂಗಾಧರ ಮೂರ್ತಿ ಅಂಥ ಹಿರಿಯ ಹೋರಾಟಗಾರರೊಂದಿಗೆ ಎರಡು ದಿನಗಳ ಕಾಲ ಕೋಲಾರದಲ್ಲಿ ಜಾಥಾ-ಸಂವಾದ-ಸಂಘಟನಾತ್ಮಕ ನೀತಿ ನಿರೂಪಣೆಯಂಥ ಹೊಣೆಗಾರಿಕೆಯ ಜವಾಬ್ದಾರಿ ನಿರ್ವಹಿಸುವ ವೇಳೆ, ಯಾವ ಗೋವಿಂದಯ್ಯ-ಮನಜ-ಮಾಲಗತ್ತಿ ಅಂಥವರು ನನ್ನೊಂದಿಗಿರಲಿಲ್ಲ. ಯಾವ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಳ್ಳದೆ, ದಲಿತರ ಸಮಸ್ಯೆಗಳ ನಿವಾರಣೆಗಾಗಿ ತೀವ್ರವಾದ ಹೋರಾಟ ಕೈಗೊಳ್ಳುವ ಮೂಲಕ ದಸಂಸದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕೆಂಬ ಸರ್ವಾನುಮತದ ತೀರ್ಮಾನಕ್ಕೆ ಬಂದರೂ, ರಾಮಕೃಷ್ಣ ಹೆಗಡೆಯ ಸರಕಾರ ರೂಪುಗೊಳ್ಳಲು ಯಾರು ಕಾರಣ? ಯಾರ ತೀರ್ಮಾನ, ಪತ್ರಿಕಾ ಹೇಳಿಕೆ ಕಾರಣ? ಇಂಥವೆಲ್ಲ ಸಂಗತಿಗಳು ಗೌಣವೆನಿಸುವ ದಲಿತ ಲೇಖಕರ ಬಗ್ಗೆ ಬರೆಯುವುದೇ ಲಜ್ಜೆಗೇಡಿತನವೆನಿಸುತದ್ದೆ. ಇದು ನನ್ನಂಥವರು ಹೋರಾಟಗಳಿಂದ ಪಡೆದ ಅನುಭವ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)