ಕನ್ಹಯ್ಯಾನ ಆಝಾದಿ ಕೂಗು!
ಸಂಗಾತಿಗಳೇ,
ಜೆಎನ್‌ಯು ಎಸ್‌ಯು ಅಧ್ಯಕ್ಷನಾಗಿ ನಾನು, ನಮ್ಮನ್ನು ಬೆಂಬಲಿಸಿದ ಈ ದೇಶದ ಸಮಸ್ತ ಜನತೆಗೆ ನಿಮ್ಮೆಲ್ಲರ ಪರವಾಗಿ ಇಲ್ಲಿ ನೆರೆದಿರುವ ಮಾಧ್ಯಮಗಳ ಮೂಲಕ ಧನ್ಯವಾದ ಸಮರ್ಪಿಸುತ್ತೇನೆ. ನಮ್ಮ ಜೊತೆ ನಿಂತ ಪ್ರತಿಯೊಬ್ಬರಿಗೂ ನನ್ನ ಸಲಾಮ್. ಜಗತ್ತಿನ ಬೇರೆ ಬೇರೆ ಭಾಗಗಳ ಜನ ಕೂಡ ಜೆಎನ್‌ಯು ಜೊತೆ, ಬಂಧಿತರಾದವರ ಜೊತೆ ನಿಂತು, ನಮಗಾಗಿ ದನಿ ಎತ್ತಿದ್ದಾರೆ. ಅವರೆಲ್ಲರಿಗೂ ನಿಮ್ಮ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಮೀಡಿಯಾದ ಮೂಲಕ ನಮಗೆ ಬೆಂಬಲ ಸೂಚಿಸಿದ ಎಲ್ಲರಿಗೂ, ಪತ್ರಕರ್ತರು, ಸಾಹಿತಿಗಳು, ರಾಜಕಾರಣಿಗಳು, ರಾಜಕಾರಣದಿಂದ ಹೊರತಾಗಿರುವವರು.. ಹೀಗೆ ಯಾರೆಲ್ಲ ಜೆಎನ್‌ಯು ಗೆ ನ್ಯಾಯ ದೊರಕಿಸಿಕೊಡಲು ಹೋರಾಡ್ತಿದ್ದಾರೋ, ರೋಹಿತ್ ವೇಮುಲಾನ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿದ್ದಾರೋ ಅವರೆ ಲ್ಲರಿಗೂ ಲಾಲ್ ಸಲಾಮ್ ಸಲ್ಲಿಸುವ ಮೂಲಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಹಾಗೇ ಪಾರ್ಲಿಮೆಂಟಿನಲ್ಲಿ ಕುಳಿತು ಯಾವುದು ಸರಿ, ಯಾವುದು ತಪ್ಪುಅಂತ ನಿಶ್ಚಯಿಸುವ ಈ ದೇಶದ ದೊಡ್ಡ ದೊಡ್ಡ ಮಹಾನುಭಾವರಿಗೆ ಧನ್ಯವಾದ, ಅವರ ಪೊಲೀಸರಿಗೆ ಧನ್ಯವಾದ, ಅವರ ಮುಖವಾಣಿಯಂತಿರುವ ಮೀಡಿಯಾದ ಆ ಚಾನೆಲ್‌ಗಳಿಗೂ ನನ್ನ ಧನ್ಯವಾದ. ನಮ್ಮ ಕಡೆ ಒಂದು ಮಾತಿದೆ. ಹೆಸರು ಹಾಳಾದರೇನು ಹೋಯ್ತು? ಹೆಸರಂತೂ ಬಂತು!! ಜೆಎನ್‌ಯುವಿನ ಹೆಸರುಗೆಡಿಸೋಕೆಂದೇ ಅವರು ಪ್ರೈಮ್ ಟೈಮಿನಲ್ಲಿ ಜಾಗ ಕೊಟ್ಟರು. ಅವರಿಗೂ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ನಮಗೆ ಯಾರ ಕುರಿತೂ ದ್ವೇಷವಿಲ್ಲ. ಅದರಲ್ಲೂ ಎಬಿವಿಪಿ ಕುರಿತು ಇಲ್ಲವೇ ಇಲ್ಲ. ಬದಲಿಗೆ ಸಹಾನುಭೂತಿಯಿದೆ.
ನಮ್ಮ ಕ್ಯಾಂಪಸ್ಸಿನಲ್ಲಿರುವ ಎಬಿವಿಪಿ ಹೊರಗಿನ ಎಬಿವಿಪಿಗಿಂತ ಹೆಚ್ಚು ರ್ಯಾಷನಲ್ ಆಗಿದೆ. ಚರ್ಚೆಯಲ್ಲಿ ನಾವು ಹೇಗೆ ಅವರ ನೀರಿಳಿಸಿದೆವೆಂದು ನೀವು ನೋಡಿದ್ದೀರಿ. ಅವರ ಬಗ್ಗೆ ನಮಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ಅವರಿಗಿಂತ ಹೆಚ್ಚು ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದೀವಿ. ನಾವು ನಿಜಕ್ಕೂ ಸಂವಿಧಾನದಲ್ಲಿ ನಂಬಿಕೆ ಇರಿಸಿದ್ದೀವಿ. ಆದ್ದರಿಂದ ಎಬಿವಿಪಿಯನ್ನು ಶತ್ರುವಿನಂತೆ ನೋಡದೆ ವಿರೋಧ ಪಕ್ಷವೆಂದು ಪರಿಗಣಿಸ್ತೀವಿ. ಎಬಿವಿಪಿ ಗೆಳೆಯರೇ, ನಾನು ನಿಮ್ಮನ್ನು ಬೇಟೆಯಾಡುವುದಿಲ್ಲ. ಶಿಕಾರಿಗೆ ಲಾಯಕ್ಕಾದವರನ್ನು ಮಾತ್ರ ಶಿಕಾರಿ ಮಾಡಲಾಗ್ತದೆ. ಜೆಎನ್‌ಯು ಮೊದಲ ಬಾರಿಗೆ ಇಷ್ಟು ದೊಡ್ಡ ದನಿಯಾಗಿ ಎದ್ದು ನಿಂತಿದೆ. ಸರಿಯನ್ನು ಸರಿಯೆಂದೂ ತಪ್ಪನ್ನು ತಪ್ಪೆಂದೂ ಗಟ್ಟಿಯಾಗಿ ಕೂಗಿ ಹೇಳುವ ಎದೆಗಾರಿಕೆ ತೋರಿದೆ. ಇದು ಜೆಎನ್‌ಯುವಿನ ತಾಖತ್ತು. ನಮಗೆ ಆಝಾದಿ ಬೇಕು. ಹೌದು. ಆಝಾದಿ ಬೇಕು ಅಂತ ಕೇಳೋದು ತಪ್ಪೇನು? ಈ ದೇಶದ ನೆಲದಲ್ಲಿ ನಿಂತು ಸರಿಯನ್ನು ಸರಿ, ತಪ್ಪನ್ನು ತಪ್ಪು ಅಂತ ಹೇಳುವ ಆಝಾದಿ ನಮಗೆ ಬೇಕು. ಒಂದು ಮಜದ ವಿಷಯ ಗೊತ್ತಾ? ನಮ್ಮದು ಆಯಾ ಕ್ಷಣದ ಪ್ರತಿಕ್ರಿಯೆ. ಆಯಾ ಸಂದರ್ಭಗಳಿಗೆ ತಕ್ಕಂಥ ಸ್ಪಾಂಟೆನಸ್ ಆದ ಪ್ರತಿಕ್ರಿಯೆ. ಆದರೆ ಅವರದ್ದು ಪೂರ್ತಿ ಉಲ್ಟಾ. ಅವರದ್ದೆಲ್ಲ ಪೂರ್ವ ನಿಯೋಜಿತ. ಆದರೆ ನಮ್ಮದು ಆಯಾ ಹೊತ್ತಿಗೆ ನಮ್ಮ ಒಳಗಿನಿಂದ ಹೊಮ್ಮುವ ಪ್ರತಿಕ್ರಿಯೆ. ಅದಕ್ಕೇ ನಮ್ಮ ದನಿ ಗಟ್ಟಿಯಾಗಿದೆ. ನ್ಯಾಯವಾಗಿದೆ. ಈ ದೇಶದ ಸಂವಿಧಾನದಲ್ಲಿ, ದೇಶದ ಕಾನೂನಿನಲ್ಲಿ, ಈ ದೇಶದ ನ್ಯಾಯ ಪ್ರಕ್ರಿಯೆಯಲ್ಲಿ ನಮಗೆ ಭರವಸೆ ಇದೆ. ಹಾಗೇ, ಬದಲಾವಣೆಯೇ ಸತ್ಯ ಅನ್ನೋ ಮಾತಿನಲ್ಲೂ ಭರವಸೆ ಇದೆ. ಎಲ್ಲವೂ ಬದಲಾಗುತ್ತವೆ. ನಾವು ಬದಲಾವಣೆಯ ಪಕ್ಷದಲ್ಲಿ ನಿಂತಿದ್ದೀವಿ. ಬದಲಾವಣೆ ಸಾಧಿಸಿ ತೋರಿಸ್ತೀವಿ. ಸಂವಿಧಾನದ ಮೇಲೆ ನಮಗೆ ಸಂಫೂರ್ಣ ಭರವಸೆ ಇದೆ. ಸಂವಿಧಾನದ ಆಶಯಗಳ ಜೊತೆ ನಾವು ಗಟ್ಟಿಯಾಗಿ ನಿಲ್ತೀವಿ. ಪ್ರಸ್ತಾವನೆಯಲ್ಲಿ ಹೇಳಲಾಗಿರುವ ಅದರ ಎಲ್ಲ ಧಾರೆಗಳ ಜೊತೆ ಪ್ರವಹಿಸ್ತೀವಿ. ಸಮಾಜವಾದ, ಧರ್ಮನಿರಪೇಕ್ಷತೆ, ಸಮಾನತೆ, ಇವುಗಳ ಜೊತೆ ಬೆಸೆದುಕೊಂಡಿದ್ದೀವಿ. ನಾನು ಈ ಹಿಂದೆಲ್ಲ ಸಾಕಷ್ಟು ಪ್ರಶ್ನೆಗಳನ್ನು ಕೇಳ್ತಿದ್ದೆ. ನಾನಿವತ್ತು ಭಾಷಣ ಮಾಡೋದಿಲ್ಲ. ನನ್ನ ಅನುಭವಗಳನ್ನ ನಿಮ್ಮ ಜೊತೆ ಹಂಚಿಕೊಳ್ತೀನಿ. ಮೊದಲು ಭಾಷಣಕ್ಕೆ ಮುಂಚೆ ಸಿಕ್ಕಾಪಟ್ಟೆ ಓದ್ತಾ ಇದ್ದೆ, ವ್ಯವಸ್ಥೆಯನ್ನು ಛೇಡಿಸ್ತಿದ್ದೆ. ಈ ಸಲ ಓದಿದ್ದು ಕಡಿಮೆಯಾಗಿದೆ ಮತ್ತು ಛೇಡಿಸೋಕೆ ಸಾಕಷ್ಟಿದೆ. ಒಬ್ರು ಹೇಳ್ತಾರೆ, ಜೆಎನ್‌ಯುನ ಜಾಲಾಡಿದೀನಿ ಅಂತ. ಅವರೊಂದಷ್ಟು ದಾಖಲೆ ಕೊಡ್ತಾರೆ. ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಇದೆ ಅಂತ ಹೇಳ್ತಾರೆ! ಈಗ ನ್ಯಾಯಾಲಯದ ಅಧೀನದಲ್ಲಿರೋ ಸಂಗತಿ ಬಗ್ಗೆ ನಾನು ಏನೂ ಹೇಳೋದಿಲ್ಲ. ಆದ್ರೆ ಒಂದು ಮಾತು, ಸಂವಿಧಾನವನ್ನು ನಿಜಕ್ಕೂ ಪ್ರೀತಿಸುವ, ಬಾಬಾ ಸಾಹೇಬರ ಕನಸುಗಳನ್ನ ಸಾಕಾರಗೊಳಿಸಲು ಬಯಸುವ ಈ ದೇಶದ ಜನತೆ, ನಾನು ಏನು ಹೇಳಬಯಸ್ತಿದ್ದೀನಿ ಅನ್ನೋದನ್ನ ಇಷಾರೆಗಳಲ್ಲೇ ಅರ್ಥ ಮಾಡಿಕೊಂಡಿರುತ್ತೆ.
ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದಾರೆ; ಹೇಳಿದ್ದಾರೆ, ‘‘ಸತ್ಯಮೇವ ಜಯತೆ!’’. ನಾನೂ ಹೇಳ್ತೀನಿ, ‘‘ಪ್ರಧಾನ ಮಂತ್ರೀ ಜೀ, ನಿಮ್ಮ ಜೊತೆ ಬಹಳವೇ ಮತಭೇದವಿದೆ. ಆದ್ರೆ ಸತ್ಯಮೇವ ಜಯತೆಯ ಘೋಷ ಬರೀ ನಿಮ್ಮ ಪಾಲಿಗಲ್ಲ, ಈ ದೇಶದ ಪಾಲಿಗೂ ಇದೆ, ಸಂವಿಧಾನದ ಪಾಲಿಗೂ ಇದೆ. ನಾನೂ ಕೂಡ ಹೇಳ್ತೀನಿ, ಸತ್ಯಮೇವ ಜಯತೇ!’’ ಮತ್ತು ಸತ್ಯಕ್ಕೆ ಜಯವಾಗುತ್ತೆ, ಮತ್ತು ಈ ಹೋರಾಟದಲ್ಲಿ ತೊಡಗಿಕೊಂಡಿರುವ ಸಮಸ್ತ ಜನತೆಗಾಗಿ ನನ್ನ ಅನುಭವಗಳನ್ನ ಹಂಚಿಕೊಳ್ತೀನಷ್ಟೆ. ಮೊದಲನೆಯದಾಗಿ, ಕೆಲವು ವಿದ್ಯಾರ್ಥಿಗಳ ಮೇಲೆ ಒಂದು ರಾಜಕೀಯ ಅಸ್ತ್ರವಾಗಿ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ ಅಂತ ಅಂದುಕೊಳ್ಬೇಡಿ. ಅದನ್ನ ತಿಳಿಯಬೇಕಿರೋದು ಹೀಗೆ. ನಾನಿದನ್ನು ಈ ಹಿಂದೆಯೂ ಬಹಳ ಸಲ ಹೇಳಿದೀನಿ. ನಾವು ಹಳ್ಳಿಯಿಂದ ಬಂದವರು. ನಿಮಗೆ ಈಗಾಗ್ಲೇ ನನ್ನ ಮನೆಜನರ ಪರಿಚಯವಾಗಿರಬೇಕು. ನಮ್ಮ ಕಡೆ ರೈಲ್ವೇ ಸ್ಟೇಷನ್ ಹತ್ರ ಆಗಾಗ ಜಾದೂ ಪ್ರದರ್ಶನ ನಡೀತಾ ಇರುತ್ತೆ. ಜಾದೂಗಾರ ಜಾದೂ ತೋರಿಸ್ತಾನೆ, ಹೆಬ್ಬೆಟ್ಟಿನ ಮಂದಿ ಅದನ್ನ ನೋಡ್ತಾರೆ. ಜಾದೂ ತೋರಿಸಲು ಅವರು ಬಳಸೋದು ನಮ್ಮೆಲ್ಲರ ಮೆಚ್ಚಿನ ಉಂಗುರವನ್ನ್ನು. ಉಂಗುರ ಮುಷ್ಟಿಯಲ್ಲಿ ಹಿಡಿದು ಛೂಮಂತರ್ ಅಂದ್ರೆ ಅದು ಮಾಯವಾಗುತ್ತೆ. ಇಲ್ಲಾ, ಮಾಯವಾದ ಉಂಗುರ ಬಂದುಬಿಡತ್ತೆ. ಈ ದೇಶ ಆಳೋರ ಕಥೆಯೂ ಹೀಗೇನೇ. ಅವ್ರ ಹೇಳ್ತಿದ್ರು, ಕಪ್ಪು ಹಣ ಬರುತ್ತೆ ಅಂತ. ‘‘ಹರ ಹರ ಮೋದಿ!! ಬೆಲೆ ಏರಿಕೆ ಗಗನ ಮುಟ್ಟಿದೆ. ಎಷ್ಟೂಂತ ಸಹಿಸ್ತೀರಿ? ಈ ಸಲ ಮೋದಿಯನ್ನ ಆರಿಸಿ’’ ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’’ ಅಂತೆಲ್ಲ. ಆ ಎಲ್ಲ ಆಶ್ವಾಸನೆಗಳನ್ನ ಜನ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಭಾರತೀಯರು ಬಹಳ ಬೇಗ ಮರೀತೇವೆ. ಆದ್ರೆ ಈಸಲದ ತಮಾಷೆ ಎಷ್ಟು ಜೋರಿತ್ತು ಅಂದ್ರೆ, ಅದನ್ನ ಮರೆಯೋದಕ್ಕೇ ಆಗ್ತಿಲ್ಲ. ಈ ಜುಮ್ಲಾಗಳನ್ನ ಜನ ಮರೆಯುವಂತೆ ಮಾಡೋಕೆ ಅವರು ಪ್ರಯತ್ನಿಸ್ತಿದ್ದಾರೆ. ಮೊದಲು ಸುಳ್ಳುಗಳನ್ನ ಸೃಷ್ಟಿಸೋದು. ಆಮೇಲೆ ಈ ದೇಶದಲ್ಲಿ ಯಾರೆಲ್ಲ ರಿಸರ್ಚ್ ಸ್ಕಾಲರುಗಳಿದ್ದಾರೋ ಅವರ ಫೆಲೋಶಿಪ್ ನಿಲ್ಲಿಸಿಬಿಡೋದು. ಜನ ಆಗ ಏನ್ಮಾಡ್ತಾರೆ? ‘‘ಫೆಲೋಶಿಪ್ ಕೊಟ್ಬಿಡಿ, ಫೆಲೋಶಿಪ್ ಕೊಟ್ಬಿಡಿ’’ ಅಂತ ಬೆನ್ನು ಬೀಳ್ತಾರೆ. ಇವ್ರ ಹೇಳ್ತಾರೆ, ಮೊದಲೇನು ಕೊಡ್ತಿದ್ವೋ ಐದರಿಂದ ಎಂಟು ಸಾವಿರ? ಅಷ್ಟನ್ನೇ ಮುಂದುವರೆಸ್ತೀವಿ ಅಂತ. ಇದರರ್ಥ, ಹೆಚ್ಚಿಸೋ ಮಾತಿಗೆ ಅವಕಾಶವೇ ಇಲ್ಲ ಅಂತ. ಈಗಯಾರು ಮಾತಾಡೋದು? ಜೆಎನ್‌ಯು! ಆದ್ರಿಂದ ನಿಮಗೆ ಬೈಗುಳ ಬೀಳ್ತಾ ಇದ್ರೆ ಚಿಂತೆ ಮಾಡ್ಬೇಡಿ. ಏನನ್ನ ಗಳಿಸಿದೀವೋ ಅದನ್ನೇ ತಿನ್ತಾ ಇದ್ದೀವಿ ನಾವಿವತ್ತು. ಈ ದೇಶದಲ್ಲಿ ಜನವಿರೋಧಿ ಸರಕಾರವಿದೆ. ಈ ಜನವಿರೋಧಿ ಸರಕಾರ ಆದೇಶ ಕೊಟ್ರೆ ಸಾಕು, ಅದರ ಸೈಬರ್ ಸೆಲ್ ಏನ್ಮಾಡತ್ತೆ ಹೇಳಿ? ಅದು ಡಾಕ್ಟರ್ಡ್ ವೀಡಿಯೊ ತಯಾರಿಸುತ್ತೆ!! ನಿಮ್ಮ ಮೇಲೆ ಬೈಗುಳಗಳ ಮಳೆ ಸುರಿಸುತ್ತೆ. ಮತ್ತು ಅದು ನಿಮ್ಮ ಡಸ್ಟ್ ಬಿನ್ನಿನಲ್ಲಿ ಎಷ್ಟು ಕಾಂಡೋಮ್ ಇವೆ ಅಂತ ಗಣತಿಗೆ ಶುರುವಿಡತ್ತೆ!
ಈಗ ಸಮಯ ಬಹಳ ಗಂಭೀರವಾಗಿದೆ. ಈ ಗಂಭೀರ ಸಮಯದಲ್ಲಿ ನಾವು ಯೋಚಿಸಬೇಕಿರೋದು ಬಹಳ ಇದೆ. ಜೆಎನ್‌ಯು ಮೇಲೆ ನಡೆಸಿದ ದಾಳಿ ಒಂದು ನಿಯೋಜಿತ ದಾಳಿಯಾಗಿತ್ತು ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಅಕ್ಯುಪೈ ಯುಜಿಸಿ ಚಳವಳಿಯನ್ನು ಮುಂದುವರೆಸೋಕೆ ಬಯಸಿದ್ದರಿಂದಲೇ ಈ ದಾಳಿ ರೂಪುಗೊಳಿಸಲಾಗಿದೆ. ರೋಹಿತ್ ವೇಮುಲಾನ ಸಾವಿಗೆ ನ್ಯಾಯ ದೊರಕಿಸುವ ಹೋರಾಟವನ್ನು ಕೈಗೆತ್ತಿಕೊಂಡಿದ್ದೇವಲ್ಲ, ಈ ಹೋರಾಟವನ್ನು ಮುಗಿಸಿಬಿಡುವ ಉದ್ದೇಶದಿಂದ ಈ ದಾಳಿ ರೂಪಿಸಲಾಗಿದೆ. ನೀವು ಜೆಎನ್‌ಯು ಸಂಗತಿಯನ್ನು ಪ್ರೈಮ್ ಟೈಮಿಗೆ ತಂದಿರೋದೇ ಈ ಕಾರಣಕ್ಕೆ ಅಂತ ನಮಗೆ ಗೊತ್ತಿದೆ. ಮಾನನೀಯ ಎಕ್ಸ್ ಆರೆಸ್ಸೆಸ್.. ನೀವು ಈ ದೇಶದ ಜನರ ಮನಸ್ಸಿನಿಂದ ಸಾಕಷ್ಟು ವಿಷಯಗಳನ್ನು ಅಳಿಸಿಹಾಕುವ ಹುನ್ನಾರದಲ್ಲಿದ್ದೀರಿ. ಈ ದೇಶದ ಪ್ರಧಾನಿ ಪ್ರತಿಯೊಬ್ಬರ ಖಾತೆಯಲ್ಲಿ ಹದಿನೈದು ಲಕ್ಷ ರೂಪಾಯಿ ಜಮೆ ಮಾಡುವ ಮಾತಾಡಿದ್ದರು. ಆದರೆ ಒಂದು ಮಾತು ಹೇಳೋಕೆ ಬಯಸ್ತೀನಿ. ಜೆಎನ್‌ಯುನಲ್ಲಿ ಪ್ರವೇಶ ಪಡೆಯೋದು ಸುಲಭದ ಮಾತಲ್ಲ. ಜೆಎನ್‌ಯುನಲ್ಲಿರುವವರ ಬಳಿ ಮಾತು ಮರೆಸೋದು ಕೂಡ ಸುಲಭವಲ್ಲ. ನೀವು ಬಯಸೋದಾದ್ರೆ ನಾವು ಮರೆತುಹೋಗ್ತೀವಿ.
ಆದ್ರೆ ನಾವೂ ನಿಮಗೆ ಮತ್ತೆ ಮತ್ತೆ ನೆನಪಿಸೋಕೆ ಇಷ್ಟಪಡ್ತೀವಿ, ಯಾವಾಗೆಲ್ಲ ಈ ದೇಶದ ಆಡಳಿತ ಯಂತ್ರ ಅತ್ಯಾಚಾರ ನಡೆಸಿದೆಯೋ ಆಗೆಲ್ಲ ಜೆಎನ್‌ಯುನಿಂದ ಗಟ್ಟಿಯಾದ ದನಿ ಮೊಳಗಿದೆ. ಮತ್ತು ನಾವು ಈಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ, ಈ ಮಾತನ್ನು ನಾನು ಮತ್ತೆಮತ್ತೆ ಹೇಳಲು ಬಯಸ್ತೀನಿ. ನೀವು ನಮ್ಮ ಹೋರಾಟವನ್ನು ದುರ್ಬಲಗೊಳಿಸೋಕೆ ಸಾಧ್ಯವಿಲ್ಲ. ನೀವೇನು ಹೇಳ್ತೀರಿ? ಒಂದು ಕಡೆ ದೇಶದ ಯುವಕರು ಗಡಿಗಳಲ್ಲಿ ಕಾದಾಡಿ ಜೀವ ಕೊಡ್ತಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳನ್ನು ಸಲ್ಲಿಸ್ತೀನಿ. ನನ್ನದೊಂದು ಪ್ರಶ್ನೆಯಿದೆ. ನಾನು ಜೈಲಲ್ಲಿ ಒಂದು ಪಾಠ ಕಲಿತುಬಂದೆ. ವಿಚಾರಧಾರೆಯ ಸವಾಲುಗಳನ್ನು ಎತ್ತುವಾಗ ಸುಖಾಸುಮ್ಮನೆ ಯಾರೊಬ್ಬ ವ್ಯಕ್ತಿಗೂ ಪಬ್ಲಿಸಿಟಿ ಕೊಡಕೂಡದು ಅಂತ. ಆದ್ದರಿಂದ ನಾನು ಆ ಲೀಡರ್‌ನ ಹೆಸರು ಹೇಳೋದಿಲ್ಲ. ಬಿಜೆಪಿಯ ಒಬ್ಬ ನೇತಾರ ಲೋಕಸಭೆಯಲ್ಲಿ ಹೇಳಿದ್ರು ಈ ದೇಶದ ಗಡಿಗಳಲ್ಲಿ ಯುವಕರು ಸಾಯ್ತಿದ್ದಾರೆ ಅಂತ. ಅವರಿಗೆ ನಾನು ಕೇಳ್ತೀನಿ, ಅವರು ನಿಮ್ಮ ತಮ್ಮಂದಿರೇನು? ಈ ದೇಶದೊಳಗೆ ಕೋಟ್ಯಂತರ ರೈತರು ಸಂಕಟ ಪಡ್ತಿದ್ದಾರೆ. ನಮಗಾಗಿ ಅನ್ನ ಬೆಳೆಯುವವರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಡಿಯಲ್ಲಿ ನಿಂತಿರುವ ಆ ಯುವಕರ ತಂದೆಯಂದಿರೂ ಅಂಥವರಲ್ಲಿ ಸೇರಿದ್ದಾರೆ.
ಈ ಜನರ ಬಗ್ಗೆ ನೀವು ಏನು ಹೇಳ್ತೀರಿ? ಹೊಲದಲ್ಲಿ ದುಡಿಯುವ ರೈತ ನನ್ನಪ್ಪ. ನನ್ನ ಅಣ್ಣ ಸೇನೆಗೆ ಸೇರಿಕೊಳ್ತಾನೆ. ರೈತನಾದ ನನ್ನಪ್ಪನೂ ಸಾಯುತ್ತಾನೆ, ಗಡಿಯಲ್ಲಿ ನಿಂತ ಅಣ್ಣನೂ ಸಾಯ್ತಾನೆ. ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ನೀವು ಇದನ್ನೊಂದು ಸರಕಾಗಿಸ್ಕೊಂಡು ವಾಗ್ವಾದ ಶುರುಹಚ್ಚಬೇಡಿ. ನನ್ನ ಜನರು ದೇಶದ ಒಳಗೂ ಸಾಯ್ತಾರೆ. ನನ್ನ ಜನರು ದೇಶದ ಗಡಿಯಲ್ಲೂ ಸಾಯ್ತಾರೆ. ನನ್ನ ಪ್ರಶ್ನೆ ಇದೆ ನಿಮಗೆ, ಪಾರ್ಲಿಮೆಂಟಿನಲ್ಲಿ ನಿಂತು ಯಾರಿಗೋಸ್ಕರ ರಾಜಕೀಯ ಮಾಡ್ತಿದ್ದೀರಿ? ಅಲ್ಲಿ ಸಾಯ್ತಿರುವವರ ಜವಾಬ್ದಾರಿ ಯಾರು ಹೊರುತ್ತಾರೆ? ಸಾಯುವವರು ಜವಾಬ್ದಾರರಲ್ಲ, ಯುದ್ಧಕ್ಕೆ ಹಚ್ಚುವವರು ಜವಾಬ್ದಾರರು. ನನ್ನ ತಂದೆ, ನನ್ನ ಅಣ್ಣ ಇವರೆಲ್ಲ ಹೇಗೆ ಸಾಯ್ತಿದ್ದಾರೆ ನೋಡಿ. ಪ್ರೈಮ್ ಟೈಮಿನಲ್ಲಿ ಕೂತವರು ಎರಡು ಕಾಸಿನ ಸ್ಪೀಕರ್ ಮುಂದೆ ಕಿರುಚಾಡುತ್ತಾರಷ್ಟೆ. ಇಂಥವರಿಗೆ ನನ್ನ ಪ್ರಶ್ನೆಗಳಿವೆ. ದೇಶದೊಳಗೆ ಸಮಸ್ಯೆಗಳಿವೆ. ಈ ಸಮಸ್ಯೆಗಳಿಂದ ಮುಕ್ತಿ ಬಯಸೋದು ತಪ್ಪಾ? ಅವರು ಕೇಳ್ತಾರೆ, ‘‘ಯಾರಿಂದ ಆಝಾದಿ (ಸ್ವಾತಂತ್ರ್ಯ) ಕೇಳ್ತಿದ್ದೀಯ?’’ ಅಂತ. ‘‘ನೀನೇ ಹೇಳು, ಭಾರತ ಯಾರನ್ನಾದ್ರೂ ಗುಲಾಮರನ್ನಾಗಿ ಮಾಡಿಟ್ಟುಕೊಂಡಿದೆಯೇನು? ಹೇಳು ನೋಡೋಣ?’’ ಇಲ್ಲ? ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಸರಿಯಾಗಿ ಕೇಳಿಸ್ಕೊಳ್ಳಿ, ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ? ಭಾರತದಲ್ಲಿ ಸ್ವಾತಂತ್ರ್ಯ ಕೇಳ್ತಿದ್ದೀವಿ. ಇಂದ ಮತ್ತು ಅಲ್ಲಿ ? ಈ ಪ್ರತ್ಯಯಗಳಲ್ಲಿ ವ್ಯತ್ಯಾಸವಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಈ ದೇಶದ ಜನ ಅದನ್ನು ಹೋರಾಡಿ ಪಡೆದಿದ್ದಾರೆ. ಈಗ ನಾನು ನನ್ನ ಅನುಭವ ಹೇಳ್ತೀನಿ ಕೇಳಿ. ಪೊಲೀಸರು ಕೇಳಿದ್ರು, ‘‘ನೀವು ಲಾಲ್ ಸಲಾಮ್, ಲಾಲ್ ಸಲಾಮ್ ಅಂತ ಕೂಗ್ತಿದ್ರಲ್ಲ ಯಾಕೆ?’’ ಅದೇನೂ ಔಪಚಾರಿಕ ವಿಚಾರಣೆಯಾಗಿರಲಿಲ್ಲ. ನನ್ನನ್ನು ಊಟ ತಿಂಡಿಗೆ, ಮೆಡಿಕಲ್ ಚೆಕಪ್ಪಿಗೆ ಕರೆದ್ಕೊಂಡು ಹೋಗುವಾಗ ಅವೆಲ್ಲ ಮಾತಾಡ್ತಿದ್ವಿ. ನನಗಂತೂ ಸುಮ್ಮನಿರೋಕೇ ಬರೋದಿಲ್ಲ. ನಾವು ಜೆಎನ್‌ಯು ನವರು ಸುಮ್ಮನೆ ಇರಬಲ್ಲೆವಾದ್ರೂ ಹೇಗೆ!? ನಾನು ಅವರೊಂದಿಗೆ ಹರಟುತ್ತಿದ್ದೆ. ಮಾತುಮಾತಲ್ಲೆ ನನಗೆ ಗೊತ್ತಾಯ್ತು, ಆ ಮನುಷ್ಯನೂ ನನ್ನ ಥರದವರೇ ಅಂತ. ಪೊಲೀಸ್ ಇಲಾಖೆಯಲ್ಲಿ ಯಾರು ಕೆಲಸ ಮಾಡ್ತಾರೆ ಹೇಳಿ? ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಹಿಂದುಳಿದ ವರ್ಗಗಳಿಂದ ಬಂದವರು ? ಇಂಥವರೇ ಪೊಲೀಸ್ ನೌಕರಿಗೆ ಸೇರೋದು. ನಾನು ಕೂಡ ಈ ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಬಿಹಾರದಿಂದ ಬಂದವನು. ನಾನೂ ಬಡ, ರೈತ ಕುಟುಂಬದಿಂದ ಬಂದವನು. ಪೊಲೀಸ್ ಇಲಾಖೆಯಲ್ಲೂ ಬಡ ಪರಿವಾರದ ಜನರೇ ಹೆಚ್ಚು ಕೆಲಸ ಮಾಡೋದು. ನಾನು ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್, ಇನ್‌ಸ್ಪ್ಪೆಕ್ಟರ್‌ವರೆಗಿನವರ ಬಗ್ಗೆ ಹೇಳ್ತಿದೀನಿ. ಐಪಿಎಸ್ ಮಾಡಿದ ಸಾಹೇಬರೊಂದಿಗೆ ನನಗೆ ಹೆಚ್ಚು ಮಾತುಕತೆಯಿಲ್ಲ. ಅಲ್ಲಿದ್ದ ಸಿಪಾಯಿಗಳೊಂದಿಗೆ ನಾನು ಮಾತಾಡಿದೆ. ನಾನು ಹೇಳೋಕೆ ಹೊರಟಿರೋದು ಆ ಮಾತುಕತೆಯ ತುಣುಕುಗಳನ್ನೇ. ಒಬ್ಬ ಸಿಪಾಯಿ ಕೇಳಿದ, ‘‘ಈ ಲಾಲ್ ಸಲಾಮ್ ಲಾಲ್ ಸಲಾಮ್ ಏನು!?’’ ನಾನೇಳಿದೆ, ‘‘ಲಾಲ್ ಅಂದ್ರೆ ಕ್ರಾಂತಿ. ಸಲಾಮ್ ಅಂದ್ರೆ ಕ್ರಾಂತಿಗೊಂದು ಸಲಾಮು’’ ಅಂತ. ಅವನಿಗೆ ಅರ್ಥವಾಗ್ಲಿಲ್ಲ. ‘‘ನಿಮಗೆ ಇಂಕ್ವಿಲಾಬ್ ಜಿಂದಾಬಾದ್ ಗೊತ್ತಾ?’’ ಅಂತ ಕೇಳಿದೆ. ಅವನು ತಲೆಯಾಡಿಸ್ತಾ ಹೇಳಿದ, ‘‘ಕ್ರಾಂತಿಯನ್ನ ಉರ್ದುವಿನಲ್ಲಿ ಇಂಕ್ವಿಲಾಬ್ ಅಂತಾರೆ ಅಲ್ವ? ಈ ಸ್ಲೋಗನ್ ಎಬಿವಿಪಿಯವ್ರೂ ಹಿಡ್ಕೊಂಡಿರ್ತಾರೆ!’’ ನಾನು ಹೇಳಿದೆ, ‘‘ಅದು ನಕಲಿ ಇಂಕ್ವಿಲಾಬ್. ನಮ್ಮದು ಅಸಲಿ ಇಂಕ್ವಿಲಾಬ್!!’’ ಅವನು ಮತ್ತೂ ವಿಚಾರಿಸಿದ, ‘‘ಜೆಎನ್‌ಯುನಲ್ಲಿ ನಿಮಗೆ ಎಲ್ಲವೂ ಸಸ್ತಾದಲ್ಲಿ ಸಿಗ್ತವೆ ತಾನೆ?’’ ಅಂತ. ಅವನು ದಿನಕ್ಕೆ ಹದಿನೆಂಟು ಗಂಟೆ ಡ್ಯೂಟಿ ಮಾಡ್ತಿದ್ದನ್ನು ನಾನು ಗಮನಿಸಿದ್ದೆ.
ಆದ್ರೂ ಓಟಿ ಪಡೆಯೋಕೆ ಪರದಾಡಬೇಕಿತ್ತು. ನಿನಗ್ಯಾಕೆ ಸುಸ್ತಾದಲ್ಲಿ ಯಾವುದೂ ಸಿಗೋದಿಲ್ಲ ಅಂತ ನಾನು ಕೇಳಿದೆ. ಆತ ಅಷ್ಟು ಕೆಲಸ ಮಾಡಿಯೂ ಬಡ್ತಿ ಬೇಕು ಅಂದ್ರೆ, ಸವಲತ್ತುಗಳು ಬೇಕು ಅಂದ್ರೆ ಭ್ರಷ್ಟಾಚಾರಕ್ಕೆ ಒಳಗಾಗಬೇಕಿತ್ತು. ನಾನು ಅದನ್ನೇ ಹೇಳಿದೆ. ‘‘ಈ ಕಾರಣಗಳಿಗಾಗಿಯೇ ನಾವು ಆಝಾದಿ ಬೇಕು ಅಂತ ಕೆಳ್ತಿರೋದು. ಹಸಿವಿನಿಂದ ಆಝಾದಿ, ಭ್ರಷ್ಟಾಚಾರದಿಂದ ಆಝಾದಿ? ಇವುಗಳ ಬೇಡಿಕೆಯಿಂದಲೇ ಒಂದು ಆಂದೋಲನ ಶುರುವಾಗಿಬಿಡ್ತು. ನಿಮಗ್ಗೊತ್ತಾ, ದಿಲ್ಲಿಯ ಬಹಳಷ್ಟು ಪೊಲೀಸರು ಹರ್ಯಾಣಾದಿಂದ ಬಂದವರಾಗಿರ್ತಾರೆ. ಅವ್ರ ತುಂಬಾ ಶ್ರಮಜೀವಿಗಳು. ಅವನು ಮಾತಾಡ್ತಾ ಹೇಳಿದ, ‘‘ಜಾತಿವಾದ ಬಹಳ ಕೆಟ್ಟದ್ದು’’. ನಾನು ಹೇಳಿದೆ, ‘‘ನಾವು ಕೇಳ್ತಿರೋದು ಈ ಜಾತಿವಾದದಿಂದ ಆಝಾದಿ ಬೇಕು ಅಂತಲೇ!’’ ಅವನು ಹೇಳಿದ, ಇದೇನೂ ತಪ್ಪಲ್ವಲ್ಲ! ಇದು ದೇಶದ್ರೋಹ ಹೇಗಾಗತ್ತೆ? ನಾನು ಕೇಳಿದೆ, ‘‘ಹೇಳಿ ನೋಡೋಣ, ವ್ಯವಸ್ಥೆಯಲ್ಲಿ ಅತಿ ಹೆಚ್ಚು ಅಧಿಕಾರ ಇರೋದು ಯಾರಿಗೆ?’’ ಅವನು ಠೀವಿಯಿಂದ ಹೇಳಿದ ‘‘ನಮ್ಮ ದಂಡಕ್ಕೆ’’. ‘‘ಸರಿಯೇ ಸರಿ. ನೀನು ಈ ದಂಡವನ್ನು ನಿಮ್ಮ ಇಚ್ಛೆಯಿಂದ ಚಲಾಯಿಸಬಲ್ಲೆಯೇನು?’’ ‘‘ಇಲ್ಲ’’ ‘‘ಹಾಗಾದ್ರೆ ಅಧಿಕಾರವೆಲ್ಲ ಯಾರ ಬಳಿ ಹೋಯ್ತು?’’ ‘‘ಭರ್ಜಿ, ಟ್ವೀಟ್ ಗಳ ಮೂಲಕ ಸ್ಟೇಟ್ಮೆಂಟ್ ಕೊಡೋರ ಹತ್ತಿರ!!’’ ‘‘ ಈ ಭರ್ಜಿ ಇಟ್ಕೊಂಡು, ಟ್ವೀಟ್ ಮಾಡಿಕೊಂಡು ಇರೋ ಸಂಘಿಗಳಿಂದ ಆಝಾದಿ ಬೇಕಂತಲೇ ನಮ್ಮ ಹೋರಾಟ ಇರೋದು!’’ ಅವನಂದ, ‘‘ಹಾಗಾದ್ರೆ ನಾನೂ ನೀನೂ ಈಗ ಒಂದೇ ಕಡೆ ನಿಂತಿದ್ದೀವಿ ಅಂತಾಯ್ತು!’’. ಇಲ್ಲೊಂದು ಅಡ್ಡಿ ಇದೆ. ನಾನು ಎಲ್ಲ ಮೀಡಿಯಾದವರಿಗೂ ಈ ಮಾತು ಹೇಳ್ತಿಲ್ಲ. ಎಲ್ಲರಿಗೂ ಅಲ್ಲಿಂದ ಕಪ್ಪ ಕಾಣಿಕೆ ಬರೋದಿಲ್ಲ. ಕೆಲವ್ರಿಗೆ ಮಾತ್ರ ಅದು ಬರೋದು. ಕೆಲವರು ಕುಳಿತಲ್ಲಿಯೆ ಕತೆ ಹೆಣೆದು ನನ್ನನ್ನು ಹೇಗೆ ಬಿಂಬಿಸಿದ್ರು ಅಂದ್ರೆ, ಆ ಸಿಪಾಯಿ ನನ್ನನ್ನು ಜೈಲಿಗೆ ಹಾಕಿದಾಗ ನನಗೆ ಸರಿಯಾಗಿ ಬಾರಿಸಬೇಕು ಅಂದ್ಕೊಂಡಿದ್ನಂತೆ.
ಅದಕ್ಕಾಗೇ ನನ್ನ ಹೆಸರನ್ನ ಎಲ್ಲಕ್ಕಿಂತ ಮೇಲೆ ಬರೆದಿಟ್ಟುಕೊಂಡಿದ್ನಂತೆ. ನನ್ನ ಜೊತೆ ಮಾತುಕತೆಯಾಡಿದ ಮೇಲೆ ಅವನು ಹೇಳಿದ್ದನ್ನ ನಿಮಗೆ ಹೇಳ್ತೀನಿ ಕೇಳಿ. ಅವನೀಗ ಹಾಗೆಲ್ಲ ನನ್ನನ್ನು ಬಿಂಬಿಸಿದವನಿಗೆ ಒಂದು ಗತಿ ಕಾಣಿಸ್ಬೇಕು ಅಂತ ಯೋಚಿಸತೊಡಗಿದ್ದ. ಆ ಸಿಪಾಯಿ ನನ್ನ ಹಾಗೇ ಬಡ ಹಿಂದುಳಿದ ವರ್ಗದಿಂದ ಬಂದವನು. ಒಂದು ಕಾಲದಲ್ಲಿ ತಾನೂ ಉನ್ನತ ಶಿಕ್ಷಣ ಪಡೀಬೇಕು ಅನ್ನೋ ಆಸೆ ಇದ್ದವನು. ಆದರೆ ಹಣದ ಅಭಾವ ಅವನ ಆಸೆಯನ್ನು ಪೂರೈಸಲಿಲ್ಲ. ಅವನಲ್ಲಿ ಸಾಮರ್ಥ್ಯವಿತ್ತು. ಆದರೆ ಅದನ್ನು ಪೂರೈಸಿಕೊಳ್ಳುವ ಹಣಬಲವಿರಲಿಲ್ಲ. ಈ ಜನ ಇಂಥವರು ಉನ್ನತ ಶಿಕ್ಷಣ ಪಡೆಯೋದನ್ನು ತಡೀತಾರೆ. ಇವರಿಗೆ ನನ್ನ ಸಮುದಾಯದವರು, ಹಿಂದುಳಿದವರು ಪಿಎಚ್ಡಿ ಮಾಡೋದು ಬೇಕಿಲ್ಲ. ಯಾಕಂದ್ರೆ ನಮ್ಮ ಬಳಿ ವಿದ್ಯೆಯನ್ನ್ನು ಕೊಳ್ಳೋಕೆ ಹಣವಿರೋದಿಲ್ಲ. ಇಂಥವರಿಗಾಗಿ ಜೆಎನ್‌ಯು ದನಿ ಎತ್ತಿದೆ, ಎತ್ತುತ್ತಲೇ ಇರುತ್ತೆ. ಅದು ರೈತನಿರಲಿ, ಕಾರ್ಮಿಕ.... ಜೆಎನ್‌ಯು ಅವರಿಗಾಗಿ ಹೋರಾಡುತ್ತೆ. ಬಾಬಾ ಸಾಹೇಬರು ಹೇಳಿದ್ದರು, ರಾಜನೈತಿಕ ಲೋಕತಂತ್ರದಿಂದಷ್ಟೆ ಕೆಲಸ ಆಗೋದಿಲ್ಲ, ನಾವು ಸಾಮಾಜಿಕ ಲೋಕತಂತ್ರವನ್ನು ಸ್ಥಾಪಿಸೋಣ ಅಂತ. ಆದ್ದರಿಂದಲೇ ನಾನು ಮತ್ತೆ ಮತ್ತೆ ಸಂವಿಧಾನದ ಮಾತಾಡೋದು. ‘ಡೆಮಾಕ್ರಸಿ ಇಸ್ ಇನ್ಡಿಸ್ಪೆನ್ಸಬಲ್ ಟು ಸೋಷಿಯಲಿಸಮ್’ ಅಂತಾನೆ ಲೆನಿನ್. ಆದ್ರಿಂದ್ಲೇ ನಾವು ಸಮಾಜವಾದದ ಮಾತಾಡ್ತೀವಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತಾಡ್ತೀವಿ. ಸಮಾನತೆಯ ಮಾತಾಡ್ತೀವಿ. ಒಬ್ಬ ಚಪ್ರಾಸಿಯ ಮಗ, ಒಬ್ಬ ರಾಷ್ಟ್ರಪತಿಯ ಮಗ ? ಇಬ್ರೂ ಒಂದೇ ಸ್ಕೂಲಲ್ಲಿ ಜೊತೆಯಾಗಿ ವಿದ್ಯೆ ಪಡೆಯುವಂತಾಗಬೇಕು ಅನ್ನೋದು ನಮ್ಮ ಬಯಕೆ. ಅದಕ್ಕಾಗಿ ನಾವು ದನಿ ಎತ್ತುತ್ತೇವೆ. ಆದ್ರೆ ನೀವು, ನಮ್ಮ ಸದ್ದಡಗಿಸೋಕೆ ಯತ್ನಿಸ್ತಿದ್ದೀರಿ. ಆದರೆ ಎಂಥಾ ಪವಾಡ ನೋಡಿ! ವಿಜ್ಞಾನ ಹೆಳುತ್ತೆ, ನೀವು ಎಷ್ಟು ದಬಾಯಿಸಿ ತಳ್ತೀರೋ ಅಷ್ಟು ಹೆಚ್ಚಿನದಾಗಿ ಪುಟಿದೇಳುತ್ತೆ ಅಂತ.
ವಿಜ್ಞಾನ ಓದೋದು ಒಂದು ಥರವಾದ್ರೆ, ವೈಜ್ಞಾನಿಕವಾಗಿರೋದು ಇನ್ನೊಂಥರ. ಎರಡೂ ಬೇರೆಬೇರೆ. ಯಾರು ವೈಜ್ಞಾನಿಕವಾಗಿ ಆಲೋಚಿಸಬಲ್ಲರೋ ಅವರಿಗೆ ಇವೆಲ್ಲ ಅರ್ಥವಾಗುತ್ತೆ. ಹಸಿವು ಮತ್ತು ಬಡತನಗಳಿಂದ ಆಝಾದಿ, ಭ್ರಷ್ಟಾಚಾರ ಮತ್ತು ಅತ್ಯಾಚಾರಗಳಿಂದ ಆಝಾದಿ ಹಾಗೂ ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅಧಿಕಾರಕ್ಕಾಗಿ ನಾವು ಆ ಆಝಾದಿಯನ್ನ ಪಡೆದೇ ತೀರುತ್ತೀವಿ. ಮತ್ತು ಅದನ್ನು ಇದೇ