ಅವರು ಆ ಧರ್ಮದ ಎಲ್ಲರ ಹಾಗಲ್ಲ....
ಒಂದು ಪುಟ್ಟ ಕಥೆ
-ಮಗು
‘‘ವಿಷಯ ಗೊತ್ತಾ?’’
‘‘ಏನು?’’
‘‘ಬೆಳ್ಳಂಬೆಳಗ್ಗೆ ನಿಮಗೆ ಗದ್ದಲ ಕೇಳಿಸಲಿಲ್ಲವಾ?’’
‘‘ಹೌದು...ವಾಹನ ಬಂದ ಸದ್ದು, ಮಾತು, ಅಳು....’’
‘‘ಅದೇ, ಕಳೆದ ವಾರ ಬಾಡಿಗೆಗೆ ಬಂದ್ರಲ್ಲ, ಅವರ ಮನೆಗೆ ಬೆಳ್ಳಂಬೆಳಗ್ಗೆ ಪೊಲೀಸರು ಬಂದಿದ್ದರು. ಮನೆಯವರನ್ನೆಲ್ಲ ಎಳ್ಕೊಂಡು ಹೋದ್ರು....’’
‘‘ಅಯ್ಯೋ...ಹೌದಾ? ಏನಂತೆ? ಯಾಕಂತೆ?’’
‘‘ಯಾರಿಗೆ ಗೊತ್ತು? ಬುರ್ಖಾ ಹಾಕಿದ ಹೆಂಗಸು ಜೋರು ಅಳುತ್ತಾ ಇತ್ತು...’’
‘‘ಅಯ್ಯೋ ದೇವ್ರೇ...ಆಕೆಯ ಗಂಡನ ಗಡ್ಡ ನೋಡಿಯೇ ನನಗೆ ಅನ್ನಿಸಿತ್ತು. ನಾನು ಓನರ್ ಜೊತೆ ಹೇಳಿದ್ದೆ....ಆ ಜಾತಿಯವ್ರಿಗೆ ಬಾಡಿಗೆಗೆ ಕೊಡ್ಬೇಡಿ...ಇಲ್ಲಿರುವ ಉಳಿದವರಿಗೆಲ್ಲ ಪ್ರಾಬ್ಲಂ ಆಗತ್ತೆ...ಅಂತ. ಕೇಳಿಲ್ಲ...ಈಗ ನಾವೆಲ್ಲರೂ ಅನುಭವಿಸಬೇಕಾಗಿದೆ...ಅದಿರ್ಲಿ...ಆ್ಯರೆಸ್ಟ್ ಆದದ್ದು ಯಾಕೆ ಗೊತ್ತಾ?’’
‘‘ಮತ್ಯಾಕೆ ಆ್ಯರೆಸ್ಟ್ ಮಾಡ್ತಾರೆ....ಅವರ ಮಗ ಒಬ್ಬ ಇದ್ದಾನಂತಲ್ಲ. ಅವನ ಬಗ್ಗೆ ಏನಾದರೂ ಅವರು ನಮ್ಮಲ್ಲಿ ಮಾತನಾಡಿದ್ದಾರ...?’’
‘‘ಓ...ಅವರಿಗೆ ಮೂರು ಹೆಣ್ಣು ಮಕ್ಕಳಲ್ಲದೆ ಒಬ್ಬ ಗಂಡು ಮಗ ಇದ್ದಾನ? ಗೊತ್ತೇ ಇರಲಿಲ್ಲ...’’
‘‘ಮೊನ್ನೆ ಬಾವಿ ಕಟ್ಟೆಯಲ್ಲಿ ನಾನು ಆ ಹೆಂಗಸಿನೊಟ್ಟಿಗೆ ಕೇಳಿದ್ದೆ, ನಿಮ್ಮ ಗಂಡು ಮಗ ಎಲ್ಲಿದ್ದಾನೆ ಅಂತ? ಅವಳು ಸರಿಯಾಗಿ ಉತ್ತರವೇ ಕೊಡಲಿಲ್ಲ...ಮುಖ ಇಷ್ಟು ದೊಡ್ಡದು ಮಾಡಿ ಹೊರಟು ಹೋದಳು...’’
‘‘ಅಂದ್ರೆ...ಟೆರರಿಸ್ಟಾ...?’’
‘‘ಮತ್ತೆಂತ್ತ? ಇಲ್ಲದಿದ್ದರೆ ಮನೆಗೆ ಒಂದು ದಿನವಾದರೂ ಮನೆಗೆ ಬರ್ತಿರಲಿಲ್ಲವಾ? ಈಗ ಮನೆಯವರನ್ನು ಸುಮ್ನೆ ಯಾರಾದ್ರೂ ಆ್ಯರೆಸ್ಟ್ ಮಾಡಿ ಕೊಂಡೋಗ್ತಾರ? ನಮ್ಮನ್ನೆಲ್ಲ ಯಾಕೆ ಆರೆಸ್ಟ್ ಮಾಡುವುದಿಲ್ಲ...? ಅವರನ್ನೇ ಯಾಕೆ ಆ್ಯರೆಸ್ಟ್ ಮಾಡಬೇಕು?’’
‘‘ಅವಳ ಗಂಡನ ಇಷ್ಟುದ್ದ ಗಡ್ಡ ನೋಡಿಯೇ ಅನುಮಾನ ಬಂದಿತ್ತು ನನಗೆ...ಅದಲ್ಲ, ಈ ಓನರ್‌ಗಳು ಬಾಡಿಗೆ ಸಿಗ್ತದೆ ಎಂದು ಸಿಕ್ಕಿದವರಿಗೆಲ್ಲ ಬಾಡಿಗೆ ಕೊಡ್ತಾರಲ್ಲ...ಇವರನ್ನು ಮೊದಲು ಸ್ಟೇಷನ್‌ಗೆ ಕರ್ಕೊಂಡು ಹೋಗಿ ನಾಲ್ಕು ಒದೀಬೇಕು...’’
‘‘ಅಲ್ಲ, ಹೀಗಾದ್ರೆ ನಮ್ಮಂಥವರೆಲ್ಲ ಸಮಾಜದಲ್ಲಿ ಓಡಾಡುವುದು ಕಷ್ಟ. ಜನರನ್ನು ನಂಬುವುದಾದರೂ ಹೇಗೆ?’’
‘‘ಸಂಜೆ ಮನೆ ಓನರ್ ಬಂದ ಕೂಡ್ಲೆ...ನಾವೆಲ್ಲ ಗಂಡಂದಿರ ಜೊತೆಗೆ ಹೋಗಿ ಹೇಳ್ಬೇಕು....ಇನ್ನು ಮುಂದೆ ಹೀಗೆಲ್ಲ ಆದರೆ ನಾವು ಮನೆ ಖಾಲಿ ಮಾಡ್ತೇವೆ ಅಂತ...’’
‘‘ಹೌದೌದು...ಛೆ...ಮರ್ಯಾದೆಯಿಂದ ಬಾಳುತ್ತಿದ್ದ ನಮ್ಮ ಕಾಲನಿಗೇ ಪೊಲೀಸರು ಬರುವಂತಾಯಿತಲ್ಲ...’’
‘‘ಅನ್ನ ಕೊಟ್ಟ ನೆಲಕ್ಕೆ ದ್ರೋಹ ಬಗೆಯುವವರು...ನಂಬಲೇ ಬಾರದು ಅವರನ್ನು’’
***
‘‘ಏನು ಎಲ್ಲ ಒಟ್ಟಿಗೆ ಬಂದಿದ್ದೀರಿ....ಮನೆ ಬಾಡಿಗೆ ಏರಿಸಿರುವುದಕ್ಕ? ಏರಿಸದೇ ಉಪಾಯವೇ ಇಲ್ಲ. ಕಳೆದ ಬಾರಿ ಕೂಡ ಏರಿಸಿಲ್ಲ. ಈಗ ಎಲ್ಲ ದುಬಾರಿ ಅಲ್ಲವ?’’
‘‘ಅದಲ್ಲ...ವಿಷಯ...’’
‘‘ಮತ್ತೆಂತ?’’
‘‘ಅದೇ...ನಾವು ನಿಮ್ಮ ಕಾಲನಿಯಲ್ಲಿ ಇರಬೇಕೋ, ಬಿಟ್ಟು ಹೋಗಬೇಕೋ?’’
‘‘ಏನಾಯ್ತು? ಎಂತಾಯಿತು? ನೀರು, ಕರೆಂಟು ಎಲ್ಲ ಸರಿ ಉಂಟಲ್ಲ...’’
‘‘ಅಲ್ಲ, ಸಮಾಜದಲ್ಲಿ ಗೌರವ ಮುಖ್ಯ. ನೀವು ಹಣದಾಸೆಗೆ ಯಾರ್ಯಾರಿಗೋ ಬಾಡಿಗೆಗೆ ಮನೆ ಬಾಡಿಗೆ ಕೊಟ್ಟು...ಈಗ ನೋಡಿ...’’
‘‘ಎಂತ ವಿಷಯ ಹೇಳಿ...ವಿವರಿಸಿ ಹೇಳಿ...’’
‘‘ವಿವರಿಸುವುದು ಎಂತ. ನೀವು ಮುಚ್ಚಿಟ್ಟರೂ ಊರಿಗೆ ಗೊತ್ತಾಗದೇ ಇರುತ್ತದ? ಪೇಪರಿನವರು ನಿಮ್ಮನ್ನು ಹುಡುಕಿಕೊಂಡು ಬಂದದ್ದು ಗೊತ್ತಾಯಿತು. ನಾಳೆ ಇಡೀ ಪೇಪರಿನಲ್ಲಿ ಈ ಕಾಲನಿಯ ಹೆಸರು ಬರುವುದಿಲ್ಲವ? ಅವರಿಂದಾಗಿ ನಮಗೆಲ್ಲ ಅವಮಾನ ಅಲ್ಲವಾ?’’
‘‘.......?’’
‘‘ಅದೇ ಬೆಳಗ್ಗೆ ಪೊಲೀಸರು ಬಂದು ಕರೆದುಕೊಂಡು ಹೋದದ್ದು...’’
‘‘ಓ ಅದಾ? ಅದರಿಂದ ನಮಗೆ ಅವಮಾನ ಎಂತ? ನಮಗೆಲ್ಲ ಹೆಮ್ಮೆ ಅಲ್ಲವಾ?’’
‘‘ಎಂತದು ಹೆಮ್ಮೆ? ’’
‘‘ನಿಮಗೆ ಗೊತ್ತಿಲ್ಲವಾ? ಕಳೆದ ವಾರ ಪಕ್ಕದ ಮನೆಗೆ ಬಾಡಿಗೆ ಬಂದವರ ಹೆಸರು ಗಫಾರ್ ಖಾನ್ ಅಂತ. ನೀವು ಪರಿಚಯ ಮಾಡಿಕೊಳ್ಳಲಿಲ್ಲವಾ?’’
‘‘ಅವರ ಗಡ್ಡ ನೋಡಿಯೇ ನಮಗೆಲ್ಲ ಗೊತ್ತಾಗಿತ್ತು ಆಗಲೆ....’’
‘‘ಎಂತ ಗೊತ್ತಾದದ್ದು? ಅವರ ಹಿರಿಯ ಮಗ ಇದ್ದಾನಲ್ಲ...ಅವನ ಹೆಸರು ಮುಸ್ತಫಾ ಅಂತ...ಅವನು ಮಿಲಿಟರಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇದ್ದ. ತುಂಬಾ ಒಳ್ಳೆಯ ಹುಡುಗನಂತೆ...ಈ ಬಾರಿ ಮದುವೆ ಮಾಡಿ ಬಿಡಬೇಕು ಎಂದು ಹುಡುಗಿಯನ್ನು ನಿರ್ಧರಿಸಿ ಆಗಿತ್ತು. ನೋಡಿದರೆ ಮೊನ್ನೆ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಗುಂಡು ತಾಗಿ ಮತಪಟ್ಟಿದ್ದಾನೆ....ಜಿಲ್ಲಾಧಿಕಾರಿಗಳಿಗೆ ನಿನ್ನೆ ಬೆಳಗ್ಗೆ ಸುದ್ದಿ ಬಂದಿದೆ. ಆದುದರಿಂದ ಬೆಳಗ್ಗೆ ಎಸ್ಪಿಯವರೇ ಬಂದು ಯೋಧನ ತಂದೆಯನ್ನು, ಕುಟುಂಬವನ್ನು ಕರೆದುಕೊಂಡು ಹೋಗಿದ್ದಾರೆ. ನಾಳೆ ಬೆಳಗ್ಗೆ ಮತದೇಹ ಬರುತ್ತದೆಯಂತೆ....ಜಿಲ್ಲಾ ಭವನದಲ್ಲಿ ವಿಶೇಷ ಕಾರ್ಯಕ್ರಮ ಇಟ್ಟಿದ್ದಾರೆ.....ನಾವೆಲ್ಲ ಹೋಗಿ ಬರೋಣ....ಆ ಹುಡುಗನ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೆ?............’’
‘‘................’’
‘‘.........................’’
‘‘ಹೌದು...ನಾನು ಒಮ್ಮೆ ಅವರೊಟ್ಟಿಗೆ ಮಾತನಾಡಿದ್ದೆ....ಮೊದಲ ಮಾತಿನಲ್ಲೇ ಗೊತ್ತಾಯಿತು...ಅವರು ಆ ಧರ್ಮದ ಎಲ್ಲರ ಹಾಗಲ್ಲ...ಅಂತ. ಇವರು ಎಲ್ಲರ ಹಾಗಲ್ಲ, ತುಂಬಾ ಒಳ್ಳೆಯವರು ಎಂದು ಹೆಂಡತಿಗೆ ನಾನು ಹೇಳಿದ್ದೆ.....ಬೇಕಾದರೆ ಕೇಳಿ....’’