ನಕಲಿ ದೇಶ ಭಕ್ತರು ಮತ್ತು ಅವರ ನಕಲಿ ದೇಶಭಕ್ತಿ
ಕಡು ಬಡತನದಿಂದ ಕಂಗಾಲಾದವರ ಮಕ್ಕಳು ಹೊಟ್ಟೆಪಾಡಿಗಾಗಿ ಸೇನೆಗೆ ಸೇರುತ್ತಾರೆ ಎಂದು ದಿನೇಶ್ ಅಮೀನ್ ಮಟ್ಟು ಅವರು ನೀಡಿದ ಹೇಳಿಕೆ ವಿವಾದದ ಅಲೆ ಎಬ್ಬಿಸಿದೆ. ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ನಕಲಿ ರಾಷ್ಟ್ರಭಕ್ತರು ಮಟ್ಟು ವಿರುದ್ಧ ಕರ ಪತ್ರಗಳಂತಿರುವ ಕೆಲ ಪತ್ರಿಕೆಗಳಲ್ಲಿ ವಾಂತಿ ಭೇದಿ ಮಾಡಿಕೊಳ್ಳುತ್ತಿದ್ದಾರೆ. ಈ ಹೇಳಿಕೆ ವರದಿಯಾದಾಗ ನಾನು ಹುಬ್ಬಳ್ಳಿಯಲ್ಲಿದ್ದೆ. ಅಲ್ಲಿನ ‘‘ರಾಷ್ಟ್ರಭಕ್ತರು’’ ಮೆರವಣಿಗೆ ಮಾಡಿ ಧಿಕ್ಕಾರದ ಕೂಗು ಹಾಕಿದರು. ಇದೇ ಸಂದರ್ಭದಲ್ಲಿ ಕಾರವಾರ ಜಿಲ್ಲೆಯ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಇಸ್ಲಾಮ್ ಧರ್ಮದ ವಿರುದ್ಧ ಅತ್ಯಂತ ವಿವಾದಾಸ್ಪದ ಹೇಳಿಕೆ ನೀಡಿದರು. ‘‘ಇಸ್ಲಾಮ್ ಜೀವಂತ ಇರುವವರೆಗೆ ಭಯೋತ್ಪಾದನೆ ನಿಯಂತ್ರಣ ಸಾಧ್ಯವಿಲ್ಲ’’ ಎಂಬ ಆತನ ಹೇಳಿಕೆ ಬಗ್ಗೆ ಎಲ್ಲೂ ವಿವಾದವಾಗಲಿಲ್ಲ. ಕೆಲ ಮುಸ್ಲಿಮ್ ಸಂಘಟನೆಗಳನ್ನು ಹೊರತು ಪಡಿಸಿದರೆ ಉಳಿದವರ್ಯಾರೂ ಬಾಯಿ ಬಿಡಲಿಲ್ಲ. ತಕ್ಷಣ ಕ್ರಮಕೈಗೊಳ್ಳಬೇಕಾದ ರಾಜ್ಯದ ಗೃಹ ಸಚಿವ ಪರಮೇಶ್ವರ್, ಬರೀ ‘ದುರುದೃಷ್ಟಕರ ಹೇಳಿಕೆ’ ಎಂದು ಹೇಳಿ ಸುಮ್ಮನಾಗಿಬಿಟ್ಟರು. ಕನ್ಹಯ್ಯಾ ಕುಮಾರ ಹೇಳಿದಂತೆ ದೇಶಭಕ್ತಿಯನ್ನು ಕೆಲವರು ತಮ್ಮ ಪೇಟೆಂಟ್ ಮಾಡಿಕೊಂಡಿರುವ ಈ ದಿನಗಳಲ್ಲಿ ಏನನ್ನು ಮಾತಾಡಿದರೂ ಈ ಪೇಟೆಂಟ್ ದೇಶಭಕ್ತರಿಂದ ಬೆದರಿಕೆ ಕರೆಗಳು, ಅಸಭ್ಯ ಸಂದೇಶಗಳು ಬರುತ್ತವೆ. ಈಗ ದೇಶಭಕ್ತಿ ಕೆಲವರ ಪೇಟೆಂಟ್ ಮಾತ್ರ ಆಗಿ ಉಳಿದಿಲ್ಲ. ಅದು ಕಾರ್ಪೊರೇಟ್ ಕಂಪೆನಿಗಳ ಹಿತರಕ್ಷಿಸುವ ಪಕ್ಷಗಳ ಪರಿವಾರಗಳ ಮಾರುಕಟ್ಟೆ ಸರಕಾಗಿದೆ.
ದೇಶಭಕ್ತಿಯನ್ನು ಮಾರುಕಟ್ಟೆಯ ಸರಕನ್ನಾಗಿ ಮಾಡಿಕೊಂಡು ಅದನ್ನು ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತಗೊಳಿಸಿ ಜನರನ್ನು ವಿಭಜಿಸುತ್ತಿರುವ ಈ ಸನ್ನಿವೇಶದಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೂ ತೀವ್ರ ಸ್ವರೂಪದ ಗಂಡಾಂತರ ಎದುರಾಗಿದೆ. ದಿನೇಶ್ ಅಮೀನ್ ಮಟ್ಟು ಹೇಳಬಾರದ ಮಾತನ್ನೇನೂ ಹೇಳಿರಲಿಲ್ಲ. ನಮ್ಮ ಸೈನ್ಯ ಸೇರುವವರೆಲ್ಲ ಯಾರೆಂದು ಎಲ್ಲರಿಗೂ ಗೊತ್ತಿದೆ. ಉತ್ತರ ಕರ್ನಾಟಕದ ಅದರಲ್ಲೂ ನಮ್ಮ ಬಿಜಾಪುರ ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲೂ ಸೇನೆಗೆ ತಮ್ಮ ಮಕ್ಕಳನ್ನು ಕಳಿಸಿದ ಕುಟುಂಬಗಳಿವೆ. ನಾನು ಬಾಲ್ಯದಿಂದ ಅಂಥ ಕುಟುಂಬಗಳನ್ನು ನೋಡಿಕೊಂಡೇ ಬೆಳೆದಿದ್ದೇನೆ. ವರ್ಷಕ್ಕೊಮ್ಮೆ ರಜೆ ಹಾಕಿ ಊರಿಗೆ ಬರುತ್ತಿದ್ದ ಸೈನಿಕರ ಕತೆ ಕೇಳಿದ್ದೇನೆ. ನಿರಂತರವಾಗಿ ಬರಗಾಲ ಪೀಡಿತವಾದ ನಮ್ಮ ಬಿಜಾಪುರ ಜಿಲ್ಲೆಯಲ್ಲಿ ಮಳೆಯಾಗುವುದು ಅಪರೂಪ. ಹೀಗಾಗಿ ಮಳೆಯಾಗದೆ ಗೋವಾ, ಕೊಲ್ಲಾಪುರಗಳಿಗೆ ಮಕ್ಕಳು ಮರಿ ಗಂಟು ಗದರಿ ಕಟ್ಟಿಕೊಂಡು ಸಾವಿರಾರು ಜನ ಪ್ರತಿ ವರ್ಷ ಗುಳೆ ಹೋಗುತ್ತಾರೆ. ಗುಳೆ ಹೋಗದ ಕೆಲ ಕುಟುಂಬಗಳು ಊರಲ್ಲಿ ಉಳಿದಿರುತ್ತವೆ. ಆ ಕುಟುಂಬಗಳ ಮಕ್ಕಳು ಸೇನೆಗೆ ಭರ್ತಿಯಾಗಿರುತ್ತಾರೆ. ಪ್ರತೀ ತಿಂಗಳು ಸಂಬಳವನ್ನು ಮನೆಗೆ ಕಳಿಸಿ ಕುಟುಂಬವನ್ನು ಬದುಕಿಸುತ್ತಾರೆ.
ಊರಿನ ಸಿರಿವಂತರ ಮಕ್ಕಳು, ಗೌಡರ ಮಕ್ಕಳು, ಪಾಟೀಲರ ಮಕ್ಕಳು, ದೇಶಪಾಂಡೆ, ದೇಶ್‌ಮುಖ್‌ರ ಮಕ್ಕಳು ಸೇನೆಗೆ ಸೇರುವುದಿಲ್ಲ. ಇವರಿಗೆ ನೂರಾರು ಎಕರೆ ಭೂಮಿ ಇರುತ್ತದೆ. ಇವರಲ್ಲಿ ಅಕ್ಷರ ಕಲಿತವರು, ವ್ಯಾಸಂಗ ಮಾಡುತ್ತ ಮುಂದೆ ಹೋದವರು ಹಿಂದೆಲ್ಲ ಡಾಕ್ಟರ್‌ಗಳಾಗಿ, ಇಂಜಿನಿಯರ್‌ಗಳಾಗಿ, ಮಹಾನಗರಗಳನ್ನು ಸೇರುತ್ತಿದ್ದರು. ಈಗ ಹೆಚ್ಚಿನವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಅಮೆರಿಕ, ಇಂಗ್ಲೆಂಡ್‌ಗಳಿಗೆ ಹೋಗುತ್ತಿದ್ದಾರೆ. ಊರ ಗೌಡರ ಮಕ್ಕಳು ಹೆಚ್ಚು ಓದಲಾಗದವರು, ಓದಿದರೂ ನೌಕರಿಗೆ ಹೋಗಲಿಚ್ಛಿಸದವರು ರಾಜಕಾರಣ ಸೇರಿ ಶಾಸಕರಾಗಿ, ಮಂತ್ರಿಗಳಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ, ತಾಪಂ ಅಧ್ಯಕ್ಷರಾಗಿ ಅಭಿವೃದ್ಧಿ ಯೋಜನೆಗಳಲ್ಲಿನ ಪರ್ಸೆಂಟೇಜು ಹೊಡೆಯುತ್ತಾ, ಕಂಟ್ರಾಕ್ಟರ್‌ಗಳಿಂದ ಗಿಫ್ಟ್ ಪಡೆಯುತ್ತಾ, ವಿಸ್ಕಿ ಚಪ್ಪರಿಸುತ್ತ, ದೇವಸ್ಥಾನ ಕಟ್ಟುತ್ತ ಊರಲ್ಲಿರುತ್ತಾರೆ. ಇದು ನಮ್ಮ ಗ್ರಾಮೀಣ ಭಾರತದ ಚಿತ್ರ. ಊರಲ್ಲಿ ಉಳಿದು ಇಲ್ಲವೇ ಅಮೆರಿಕ ಸೇರಿ ಸದಾ ರಾಷ್ಟ್ರಭಕ್ತಿಯ ಪಾಠ ಮಾಡುವ ಕೆಲವರು ತಮ್ಮ ಮಕ್ಕಳನ್ನು ಅಪ್ಪಿತಪ್ಪಿಯೂ ಸೇನೆಗೆ ಕಳಿಸುವುದಿಲ್ಲ. ಸೇನೆಗೆ ಭರ್ತಿಯಾಗುವವರೆಲ್ಲ ಬಡವರ ಮಕ್ಕಳು. ಅದರಲ್ಲೂ ದಲಿತರು, ಅಲ್ಪಸಂಖ್ಯಾತ ಸಮುದಾಯದ ತರುಣರು. ಊರಲ್ಲಿ ಉದ್ಯೋಗವಿಲ್ಲದೆ ಬೇರೆ ದಾರಿ ಕಾಣದೆ ಸೇನೆಯನ್ನು ಸೇರುತ್ತಾರೆ.
ಇಂಥ ತರುಣರು ಶತ್ರುದಾಳಿಗೆ ಬಲಿಯಾದಾಗ ಅಂಥವರ ಮೃತದೇಹ ಊರಿಗೆ ಬರುತ್ತದೆ. ಆಗ ಸ್ಥಳೀಯ ಶಾಸಕರು, ಮಂತ್ರಿಗಳು, ಜಿಪಂ ಅಧ್ಯಕ್ಷರು ಅಲ್ಲಿ ಬಂದು ಪಾರ್ಥಿವ ಶರೀರದ ಮೇಲೆ ಹಾರಹಾಕಿ ಅವರ ದೇಶಭಕ್ತಿಯನ್ನು ಕೊಂಡಾಡುತ್ತಾರೆ. ಆದರೆ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಾಗಿ ಯಾವ ರಾಜಕಾರಣಿಯೂ ಹೇಳುವುದಿಲ್ಲ. ದೇಶಭಕ್ತಿಯ ಬಗ್ಗೆ ಧಾರಾಳವಾಗಿ ಉಪದೇಶ ನೀಡುವ ಯಾವ ರಾಜಕಾರಣಿಯೂ ತಮ್ಮ ಮಕ್ಕಳನ್ನು ಸೇನೆಗೆ ಕಳಿಸುವುದಿಲ್ಲ. ತಮ್ಮ ಮಕ್ಕಳನ್ನು ವಿಧಾನಸಭೆಗೆ ಹೋಗಬೇಕು, ಸಂಸತ್ತಿಗೆ ಹೋಗಬೇಕೆಂದು ಎಲ್ಲ ರಾಜಕಾರಣಿಗಳು ಬಯಸುತ್ತಾರೆ. ಆದರೆ ಬಡವರ, ದಲಿತರ ಮಕ್ಕಳು ಮಾತ್ರ ಸೇನೆಗೆ ಸೇರಬೇಕು. ಸಿಯಾಚಿನ್ ಹಿಮದ ದಾಳಿಯಲ್ಲಿ ಅವರು ಹೂತು ಹೋದರೆ ಹೋಗಲಿ ಎಂಬುದು ಇವರ ಒಳಮನಸ್ಸಿನ ಅನಿಸಿಕೆ. ವಾಸ್ತವವಾಗಿ ಸೇನೆಗೆ ಹೋಗುವ ಬಡವರ ಮಕ್ಕಳಿಗೆ ತಮ್ಮ ಕುಟುಂಬದ ಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆ ಆಗಿರುತ್ತದೆ. ಇದರೊಂದಿಗೆ ತಮಗೆ ಅರಿವಿಲ್ಲದೆ ಅವರು ದೇಶಕ್ಕಾಗಿ ತ್ಯಾಗ ಮಾಡುತ್ತಾರೆ. ಈ ಯೋಧರು ರಣರಂಗದಲ್ಲಿ ಸತ್ತಾಗ ಅವರ ಮನೆಗಳ ಬೆಳಕಿನ ದೀಪ ಆರಿಹೋಗುತ್ತದೆ. ಸಂಸತ್ತಿನ ಉಪ್ಪರಿಗೆಯ ಮೇಲೆ ಕುಳಿತು ‘ಐಷಾರಾಮಿ ಮಹಲುಗಳಲ್ಲಿ ಗುಂಡು ಹಾಕುತ್ತ ದೇಶಭಕ್ತಿಯ ಬಗ್ಗೆ ಮಾತಾಡುವವರಿಗೆ ಬಡವರ ಮನೆಯನ್ನು ಆವರಿಸಿದ ಕತ್ತಲು ಕಾಣಿಸುವುದಿಲ್ಲ. ಮೃತಪಟ್ಟ ಯೋಧನ ಪ್ರಾರ್ಥಿವ ಶರೀರ ಊರಿಗೆ ಬಂದಾಗ ಹೂಹಾರ ಹಾಕಿ ಫೋಟೊ ತೆಗೆಸಿಕೊಂಡು ಪತ್ರಿಕೆಯಲ್ಲಿ ಪ್ರಕಟಿಸಲು ಲಾಬಿ ಮಾಡುವುದೇ ಇಂಥವರ ದೇಶಕ್ಕೆ ಸಲ್ಲಿಸುವ ಸೇವೆ. ಗಡಿಯಲ್ಲಿ ಸೆಣಸಾಡುವುದೇ ದೇಶಭಕ್ತಿ ಎಂಬುದು ಇವರ ವ್ಯಾಖ್ಯಾನ. ಆದರೆ ದೇಶದ ಒಳಗೆ ತಮ್ಮ ನೆತ್ತರು ನೀರು ಮಾಡಿಕೊಂಡು ಈ ರಾಷ್ಟ್ರ ಕಟ್ಟಲು ಶ್ರಮಿಸುವ ದುಡಿಯುವ ಜನ ಇವರಿಗೆ ಕಾಣವುದಿಲ್ಲ. ಅಂಥ ದುಡಿಯುವ ಜನರ ಪರವಾಗಿ ದನಿಯೆತ್ತಿದರೆ ಕನ್ಹಯ್ಯಿ ಕುಮಾರ್‌ರಂಥವರನ್ನು ದೇಶದ್ರೋಹಿ ಎಂದು ಜೈಲಿಗೆ ಹಾಕಿಸುತ್ತಾರೆ. ರೋಹಿತ್ ವೇಮುಲಾರಂಥವರನ್ನು ಜೀವಂತ ಕೊಲ್ಲುತ್ತಾರೆ.
ಈ ದೇಶದ ಗಡಿ ರಕ್ಷಿಸುವ ಸೈನಿಕರಷ್ಟೇ ಮಹತ್ವದ ಸೇವೆಯನ್ನು ನಮ್ಮ ನಗರ, ಪಟ್ಟಣಗಳನ್ನು ಶುಚಿಯಾಗಿಡುವ ಪೌರ ಕಾರ್ಮಿಕರೂ ಸಲ್ಲಿಸುತ್ತಾರೆ. ಹೊಲಸು ನಾರು ಚರಂಡಿಯ ಗುಂಡಿಗಳಲ್ಲಿ ಇಳಿದು ಸ್ವಚ್ಛಗೊಳಿಸುತ್ತಾರೆ. ಇಂಥವರಲ್ಲಿ ಕೆಲವರು ಗಾಳಿಯಾಡದ ಈ ಚರಂಡಿಯಲ್ಲಿ ಉಸಿರುಗಟ್ಟಿ ಸತ್ತು ಹೋಗುತ್ತಾರೆ. ಇದು ರಾಷ್ಟ್ರಕ್ಕಾಗಿ ನಮಗಾಗಿ ಮಾಡಿದ ಬಲಿದಾನವಲ್ಲವೇ? ನಮ್ಮ ನಗರಗಳ ರಸ್ತೆ, ಚರಂಡಿಗಳನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರೆಲ್ಲ ದಲಿತರು. ಇದು ಅವರಿಗೆ ಮೀಸಲಾದ ಕೆಲಸ ಎಂದು ಈ ವ್ಯವಸ್ಥೆ ತೀರ್ಮಾನಿಸಿದೆ. ಯಾವ ಬ್ರಾಹ್ಮಣನೂ, ಲಿಂಗಾಯತನೂ, ಮೇಲ್ಜಾತಿಯವನು ಈ ಚರಂಡಿ ಕೆಲಸಕ್ಕೆ ಬರುವುದಿಲ್ಲ. ನಿತ್ಯವೂ ಇಡೀ ದೇಶವನ್ನು ಸ್ವಚ್ಛಗೊಳಿಸುವ ಇವರು ನಮ್ಮ ಪ್ರಧಾನಿ ಮತ್ತು ಅವರ ಪರಿವಾರದವರಂತೆ ಮೀಡಿಯಾ ಕ್ಯಾಮರಾಕ್ಕೆ ಪೋಸ್ ನೀಡಿ ಪ್ರಚಾರ ಪಡೆಯುವುದಿಲ್ಲ. ಇದು ಭಾರತದ ಕತೆ. ದೇಶದ ಗಡಿ ಕಾಯಲು, ಸಾಯಲು ಬಡವರ ಮಕ್ಕಳು ಬೇಕು. ದಲಿತರ ಮಕ್ಕಳು ಬೇಕು. ದೇಶದೊಳಗೆ ರಸ್ತೆ ಚರಂಡಿಗಳನ್ನು ಸ್ವಚ್ಛವಾಗಿ ಇಡಲು ದಲಿತರ ಮಕ್ಕಳು ಬೇಕು. ಹಾಗಿದ್ದರೆ ನಿಮ್ಮ ಕೆಲಸವೇನು ಗುಡಿ ಗುಂಡಾರಗಳಲ್ಲಿ ಗಂಟೆ ಬಾರಿಸುತ್ತ ದಕ್ಷಿಣೆ ಲಪಟಾಯಿಸಿ ದೇಶಭಕ್ತಿ ಬಗ್ಗೆ ತುಟ್ಟಿಸೇವೆ ಸಲ್ಲಿಸುವುದೇ ನಿಮ್ಮ ಕೆಲಸವೇ?
ದೇಶವೆಂದರೆ ಏನು? ಬರೀ ಕಲ್ಲು ಮಣ್ಣು ಮಾತ್ರ ದೇಶವೇ? ದೇಶವೆಂದರೆ ಅಂಬಾನಿ, ಅದಾನಿ, ಮಿತ್ತಲ್‌ಗಳು ಸಂಪತ್ತನ್ನು ಲೂಟಿ ಹೊಡೆಯುವ ತಂಗುದಾಣವೇ? ಈ ಲೂಟಿಕೋರರನ್ನು ದಗಾಕೋರರನ್ನು ರಕ್ಷಿಸಲು ಕಾಪಾಡಲು ಬಡವರ ಮಕ್ಕಳು ಗಡಿಯಲ್ಲಿ ಸಾಯಬೇಕೇ?
ಇದೇ ವಾಸ್ತವ ಸಂಗತಿಯನ್ನು ಇದ್ದುದನ್ನು ಇದ್ದಂತೆ ಮಾತಾಡಿದರೆ ಈ ಐಷಾರಾಮಿ ರಾಷ್ಟ್ರಭಕ್ತರಿಗೆ ಯಾಕೆ ಕೋಪ ಬರುತ್ತದೆ. ರಾಷ್ಟ್ರದ ಬಗ್ಗೆ ಇಷ್ಟೆಲ್ಲ ಮಾತಾಡುವ ಸಂಘಪರಿವಾರದ ಯಾವ ಸ್ವಯಂ ಸೇವಕ ಗಡಿಯಲ್ಲಿ ಹೋಗಿ ಬಲಿದಾನ ಮಾಡಿದ್ದಾನೆ? ದೇಶದೊಳಗೆ ಒಡಕಿನ ವಿಷಬೀಜ ಬಿತ್ತುವುದನ್ನು ಬಿಟ್ಟು ಇವರು ಬೇರೇನನ್ನು ಮಾಡಿದ್ದಾರೆ? ಇದು ನಮ್ಮ ದೇಶದ ದುರಂತ. ಎಂಧೆಂತವರಿಂದ ನಾವು ದೇಶಭಕ್ತಿಯ ಪಾಠ ಕೇಳಬೇಕಾಗಿ ಬಂದಿದೆ. ಏಕಲವ್ಯನ ಹೆಬ್ಬೆರಳು ಕತ್ತರಿಸಿದವರು, ಶಂಭುಕವಧೆ ಮಾಡಿದವರು ಪುರಾಣ ಕತೆಗಳಲ್ಲಿ ಹೂತು ಹೋಗಿದ್ದಾರೆ. ಆದರೀಗ ಅದೇ ಪರಂಪರೆಗೆ ಸೇರಿದ ಹೊಸ ರಾಷ್ಟ್ರಭಕ್ತರು ಹುಟ್ಟಿಕೊಂಡಿದ್ದಾರೆ. ಇವರು ಗೋಡ್ಸೆ ಆರಾಧಕರು ಮಾತ್ರವಲ್ಲ, ಗಣಿಲೂಟಿ ಮಾಡಿದವರು. ಜನತಂತ್ರದ ಪವಿತ್ರ ಸದನದಲ್ಲಿ ಕುಳಿತು ಬ್ಲೂಫಿಲಂ ನೋಡಿದವರು. ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದವರು. ಅತ್ಯಾಚಾರದ ಕಲಂಕ ಅಂಟಿಕೊಂಡವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ. ಈ ದೇಶ ನಮ್ಮದು. ಶತಮಾನಗಳಿಂದ ಇಲ್ಲಿ ನೆಲೆಸಿದ ದಲಿತರದು, ಆದಿವಾಸಿಗಳದು, ದುಡಿಯುವ ಜನರದ್ದು. ನಮಗೆ ದೇಶಭಕ್ತಿಯ ಪಾಠ ಮಾಡಲು ಹೊರಟರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಡಾ.ಅಂಬೇಡ್ಕರ್ ನೀಡಿದ ಸಂವಿಧಾನ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯಬೇಡಿ.