ಆಗಸದಲ್ಲಿ ಇಂದು ಗುರುಪೂರ್ಣಿಮೆಯ ಸಂಭ್ರಮ
ಉಡುಪಿ, ಮಾ.7: ಚಂದ್ರನಿಂದ ನಮಗೆ ತಿಂಗಳಿ ಗೊಮ್ಮೆ ಹುಣ್ಣಿಮೆಯಾದರೆ, ಗುರುಗ್ರಹದಿಂದ ವರ್ಷಕ್ಕೊಮ್ಮೆ ಹುಣ್ಣಿಮೆ. ಚಂದ್ರನ ಹುಣ್ಣಿಮೆಯಂದು ಭೂಮಿ ಅಕ್ಕಪಕ್ಕದಲ್ಲಿ ಸೂರ್ಯಚಂದ್ರರಿರುವಂತೆ, ಗುರು ಪೂರ್ಣಿಮೆಯಂದು ಭೂಮಿಯ ಅಕ್ಕಪಕ್ಕ ಒಂದು ಕಡೆ ಸೂರ್ಯನಾದರೆ, ಮತ್ತೊಂದು ಕಡೆ ಗುರುಗ್ರಹವಿರುತ್ತದೆ.
ಚಂದ್ರನ ಹುಣ್ಣಿಮೆಯಂದು ಪಶ್ಚಿಮ ದಿಕ್ಕಿ ನಲ್ಲಿ ಸೂರ್ಯಾಸ್ತವಾದೊಡನೆ, ಪೂರ್ವ ದಿಕ್ಕಿ ನಲ್ಲಿ ಚಂದ್ರೋದಯವಾಗಿ ರಾತ್ರಿ ಹೊತ್ತು ಕೂಡ ಆಕಾಶದಲ್ಲಿ ಕಾಣಿಸುವಂತೆ, ಗುರುಗ್ರಹ ಹುಣ್ಣಿಮೆ ಯಂದು ಸೂರ್ಯಾಸ್ತವಾದೊಡನೆ, ಪೂರ್ವ ದಿಕ್ಕಿ ನಲ್ಲಿ ಗುರುಗ್ರಹ ಉದಯವಾಗಿ ರಾತ್ರಿಯಿಡೀ ಆಕಾಶ ದಲ್ಲಿ ಕಾಣಿಸಿಕೊಳ್ಳುತ್ತದೆ. ಮಾ.8ರಂದು ಗುರು ಪೂರ್ಣಿಮೆ.
ವರ್ಷಕ್ಕೊಮ್ಮೆ ನಡೆಯುವ ಈ ವಿದ್ಯಮಾನದ ವಿಶೇಷವೆಂದರೆ ಗುರುಗ್ರಹ ದೊಡ್ಡದಾಗಿ, ಹೆಚ್ಚಿನ ಪ್ರಭೆಯಿಂದ ಕಾಣಿಸುವುದು. ಆಗ ಭೂಮಿಗೆ ಗುರುಗ್ರಹ ಸುಮಾರು 25 ಕೋಟಿ ಕಿ.ಮೀ. ಸಮೀಪ ವಿರುತ್ತದೆ. ಸೌರವ್ಯೆಹದಲ್ಲಿಯೇ ದೊಡ್ಡದಾದ, ಸೂರ್ಯನಿಂದ ಐದನೆಯದಾದ ಗುರುಗ್ರಹವು ಸೂರ್ಯನಿಂದ ಸರಾಸರಿ 78 ಕೋಟಿ ಕಿ.ಮೀ. ದೂರ ದಲ್ಲಿ, ಭೂಮಿ 15 ಕೋಟಿ ಕಿ.ಮೀ. ದೂರದಲ್ಲಿದೆ. ಭೂಮಿ ಹಾಗೂ ಗುರುಗ್ರಹಕ್ಕೆ ಸರಾಸರಿ ಅಂತರ 63 ಕೋಟಿ ಕಿ.ಮೀ. ಆದರೆ ಈ ದೂರದಲ್ಲಿರುವುದು ಒಂದು ವರ್ಷದಲ್ಲಿ ಕೆಲವೇ ದಿನಗಳು ಮಾತ್ರ. ಅದು ಈಗ. ಭೂಮಿ, ಸೂರ್ಯನ ಸುತ್ತ ಒಂದು ಸುತ್ತು ಬರುವ ಒಂದು ವರ್ಷದಲ್ಲಿ ಭೂಮಿ, ಗುರುಗ್ರಹಗಳ ದೂರದ ಅಂತರ 63 ಕೋಟಿಯಿಂದ 93 ಕೋಟಿ ಕಿ.ಮೀ.ಯಾಗಲಿದೆ. ಈಗ ಮಾರ್ಚ್‌ನಲ್ಲಿ 63 ಕೋಟಿ, ಆದರೆ ಮುಂದೆ ಆರು ತಿಂಗಳಲ್ಲಿ ಅಂದರೆ ಸೆಪ್ಟಂಬರ್ ಹೊತ್ತಿಗೆ 93 ಕೋಟಿ ಕಿ.ಮೀ. ಆಗುತ್ತದೆ.
ಗುರುಗ್ರಹ ದ್ರವ್ಯರಾಶಿಯಲ್ಲಿ ಭೂಮಿಗಿಂತ 300 ಪಟ್ಟು ದೊಡ್ಡದು. ಗಾತ್ರದಲ್ಲಿ 1,400 ಪಟ್ಟು ದೊಡ್ಡದು. ಮಾ.8 ಹಾಗೂ 9ರಂದು ಸಂಜೆ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಆಸಕ್ತರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಎ.ಪಿ.ಭಟ್ (ಮೊ:9448309077) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಭೂಮಿಯು ಗುರುಗ್ರಹ ಸಮೀಪವಿರುವ ಈ ಸಮಯ ದೂರದರ್ಶಕದಲ್ಲಿ ಗುರುವಿನ ವೀಕ್ಷಣೆಗೆ ಅತ್ಯುತ್ತಮ ಕಾಲ. ಅದರ ಮೇಲ್ಮೈ, ಧೂಳಿನ ಪಟ್ಟಿಗಳು ಹಾಗೂ ಅದರ ನಾಲ್ಕು ಚಂದ್ರರನ್ನು ನೋಡಿ ಸಂತೋಷ ಪಡಬಹುದು. ಈ ಅಮಾವಾಸ್ಯೆಯ ರಾತ್ರಿ ಬರಿಗಣ್ಣಿನಲ್ಲಿ ಉಜ್ವಲವಾಗಿ ಕಾಣಿಸಲಿದೆ. ಸುಮಾರು 67 ಚಂದ್ರರನ್ನು ಹೊಂದಿರುವ ಗುರುಗ್ರಹವು ‘ಗ್ರಹಗಳ ರಾಜ’ ಎಂಬ ಹೆಸರನ್ನೂ ಪಡೆದಿದೆ.