ಖುದ್ದು ಹಾಜರಾಗಲು ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು ಪ್ರಾಂಶುಪಾಲರಿಗೆ ಹೈಕೋರ್ಟ್ ಸೂಚನೆ
ಕಮ್ಮಿ ಅಂಕ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ
ಬೆಂಗಳೂರು.ಮಾ.9:ತನಗೆ ಕಮ್ಮಿ ಅಂಕ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶಿಸಿದೆ.
ಕುಂದಾಪುರ ತಾಲೂಕು ಮೂಡ್ಲಕಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿ ಎಸ್.ಮುನವರ ಸುಲ್ತಾನ್, ಕಮ್ಮಿ ಅಂಕ ಬಂದಿರುವ ಬಗ್ಗೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಬಾರಿ ನೋಟಿಸ್ ನೀಡಿದ್ದರೂ, ಸಂಸ್ಥೆಯು ಈ ಬಗ್ಗೆ ವಿವರಣೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಇದು ನ್ಯಾಯಂಗ ನಿಂದನೆ ದಾಖಲಿಸುವಂತಹ ಪ್ರಕರಣವಾಗಿದೆ. ಕೋರ್ಟ್ ಆದೇಶಗಳಿಗೆ ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಕಾಲೇಜು ಆಡಳಿತ ಮಂಡಳಿಯ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಪ್ರಾಂಶುಪಾಲರಿಗೆ ಖುದ್ದು ಹಾಜಗಾರುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ವಿದ್ಯಾರ್ಥಿನಿಗೆ ಮೊದಲ ಹಾಗೂ ಎರಡನೇ ಸೆಮಿಸ್ಟರ್‌ನ ಗಣಿತ ವಿಭಾಗದ ಆಂತರಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡಿದ್ದರೂ, ಅಂಕಪಟ್ಟಿಯಲ್ಲಿ ಕಮ್ಮಿ ಅಂಕ ನಮೂದಿಸಲಾಗಿತ್ತು. ಆಗ ಹೈಕೋರ್ಟ್ ಮೆಟ್ಟಿಲೇರಿ ನ್ಯಾಯ ದೊರಕಿಸಿಕೊಳ್ಳುವಲ್ಲಿ ವಿದ್ಯಾರ್ಥಿನಿ ಸಫಲರಾಗಿದ್ದಳು. ಇದೀಗ ಎಂಟನೆ ಸಮಿಸ್ಟರ್‌ನಲ್ಲೂ ಇದೇ ಪುನರಾವರ್ತನೆ ಮಾಡಲಾಗಿದೆ ಎಂಬುದು ವಿದ್ಯಾರ್ಥಿನಿಯರ ಆರೋಪವಾಗಿದೆ.