ಜೆಎನ್‌ಯು ವಿವಾದ ಮತ್ತು ಸಂಘ ಪರಿವಾರದ ಅಸಲಿ ಕಾರ್ಯಸೂಚಿ
ಭಾಗ-1
2014ರ ಮೇ ತಿಂಗಳಿನಿಂದೀಚೆಗೆ ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ದೇಶದ ಅಲ್ಪಸಂಖ್ಯಾತರನ್ನು, ದಲಿತರನ್ನು, ಆದಿವಾಸಿಗಳನ್ನು ದಮನಿಸಿ ಅವರನ್ನೆಲ್ಲ ಎರಡನೆ, ಮೂರನೆ ದರ್ಜೆಯ ಪ್ರಜೆಗಳಾಗಿಸುವ ಹುನ್ನಾರವೊಂದು ಜಾರಿಯಲ್ಲಿರುವುದನ್ನು ಗುರುತಿಸಬಹುದು. ಸಂವಿಧಾನಕ್ಕೆ ತಿಲಾಂಜಲಿಯಿತ್ತು ಮನುಸ್ಮತಿಯನ್ನು ರಾಷ್ಟ್ರಗ್ರಂಥವಾಗಿಸಿ ಜಾತಿಪದ್ಧತಿಯನ್ನು ಮುಂದುವರಿಸಲು ಬಯಸುತ್ತಿರುವಂತಹ ಈ ಆರೆಸ್ಸೆಸ್‌ನ ಗುರು ಗೋಳ್ವಲ್ಕರ್ ಬಹಳ ಸ್ಪಷ್ಟವಾಗಿ ಹೇಳಿರುವಂತೆ ಹಿಂದೂ ರಾಷ್ಟ್ರೀಯವಾದಿಗಳೆ ದೇಶಭಕ್ತರು, ಮಿಕ್ಕವರೆಲ್ಲ (ಅರ್ಥಾತ್ ಮುಸ್ಲಿಮರು, ಕ್ರೈಸ್ತರು, ಕಮ್ಯೂನಿಸ್ಟರಂಥವರು) ದೇಶದ್ರೋಹಿಗಳು; ಭಾರತದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತಿರುವುದು ಭಗವಾ ಧ್ವಜವೆ ಹೊರತು ತ್ರಿವರ್ಣಧ್ವಜವಲ್ಲ. ಇದೆಲ್ಲವೂ ಗೋಲ್ವಲ್ಕರ್ ವಿರಚಿತ ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್‌ಡ್ ಮತ್ತು ಬಂಚ್ ಆಫ್ ಥಾಟ್ಸ್ ಎಂಬ ಎರಡು ಹೊತ್ತಗೆಗಳಲ್ಲಿ ನಿರೂಪಿಸಲ್ಪಟ್ಟಿದೆ. ಇವು ಸಂಘ ಪರಿವಾರದ ಧರ್ಮಗ್ರಂಥಗಳೆಂದೆ ಪರಿಗಣಿಸಲ್ಪಟ್ಟಿವೆ. ಇವತ್ತಿನ ಸನ್ನಿವೇಶದಲ್ಲಿ ಪ್ರಸ್ತುತವಾಗುವ ಕೆಲವು ಅಣಿಮುತ್ತುಗಳು:
ಹಿಂದುಸ್ಥ್ತಾನದಲ್ಲಿರುವ ವಿದೇಶೀಯ ಜನಾಂಗಗಳು (ಅರ್ಥಾತ್ ಮುಸ್ಲಿಮರು ಮತ್ತು ಕ್ರೈಸ್ತರು)..... ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ತ್ಯಜಿಸಿ ಹಿಂದೂ ಜನಾಂಗದೊಳಕ್ಕೆ ಸೇರಿಕೊಳ್ಳಬೇಕು. ಇಲ್ಲಾ ಯಾವುದಕ್ಕೂ ಆಗ್ರಹಿಸದೆ, ಯಾವುದೇ ಸವಲತ್ತುಗಳಿಗೂ, ವಿಶೇಷ ಸೌಕರ್ಯಗಳಿಗೂ ಅರ್ಹರಾಗದೆ, ನಾಗರಿಕ ಹಕ್ಕುಗಳನ್ನು ಸಮೇತ ಕೇಳದೆ ಹಿಂದೂ ರಾಷ್ಟ್ರಕ್ಕೆ ಪೂರ್ತಿ ಅಧೀನರಾಗಿ ದೇಶದೊಳಗಿರಬಹುದು (ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್‌ಡ್).
ಯಾರು ಹಿಂದೂ ಜನಾಂಗವನ್ನು ಹಾಗೂ ಹಿಂದೂ ರಾಷ್ಟ್ರವನ್ನು ಕೊಂಡಾಡಿ, ಅವುಗಳನ್ನು ತಮ್ಮ ಹೃದಯಕ್ಕೆ ಸಮೀಪವಾಗಿರಿಸುವ ಹೆಬ್ಬಯಕೆಯೊಂದಿಗೆ ಚಟುವಟಿಕೆಯಲ್ಲಿ ತೊಡಗಲು ಪ್ರೇರೇಪಿತರಾಗಿ, ಗುರಿಸಾಧನೆಗಾಗಿ ದುಡಿಯುತ್ತಾರೋ ಅವರು ಮಾತ್ರ ರಾಷ್ಟ್ರೀಯವಾದಿ ದೇಶಭಕ್ತರು. ಮಿಕ್ಕವರೆಲ್ಲರೂ ಒಂದೋ ದೇಶದ್ರೋಹಿಗಳು ಮತ್ತು ರಾಷ್ಟ್ರೀಯ ಧ್ಯೇಯೋದ್ದೇಶದ ಶತ್ರುಗಳು ಅಥವಾ ಒಂದಿಷ್ಟು ಉದಾರತೆಯಿಂದ ಕರೆಯುವುದಾದರೆ, ಮೂರ್ಖರು (ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್‌ಡ್).
ನಮ್ಮ ನಾಯಕರು ನಮ್ಮ ದೇಶಕ್ಕಾಗಿ ಹೊಸದೊಂದು ಧ್ವಜವನ್ನು ಅಳವಡಿಸಿಕೊಂಡಿದ್ದಾರೆ. ಅವರೇಕೆ ಹಾಗೆ ಮಾಡಿದರು? ಅದು ಗೊತ್ತುಗುರಿಯಿಲ್ಲದಿರುವಿಕೆ ಮತ್ತು ಅನುಕರಣೆ..... ನಮ್ಮದು ಭವ್ಯ ಇತಿಹಾಸವಿರುವ ಪ್ರಾಚೀನ ಹಾಗೂ ಮಹಾನ್ ದೇಶ. ಹಾಗಾದರೆ ನಮಗೆ ನಮ್ಮದೇ ಆದ ಧ್ವಜ ಇರಲಿಲ್ಲವೇ?...... (ಬಂಚ್ ಆಫ್ ಥಾಟ್ಸ್).
ಭಾರತದ ಮಹಾನ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತಿರುವುದು ಭಗವಾ ಧ್ವಜ (ಜುಲೈ 14, 1946, ನಾಗಪುರದಲ್ಲಿ ಶ್ರೀ ಗುರೂಜಿ ಸಮಗ್ರ ದರ್ಶನ್‌ನಲ್ಲಿ ಉಲ್ಲೇಖಿಸಿರುವಂತೆ).
ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಫೂರ್ತಿ ಪಡೆಯುತ್ತಿರುವ ಆರೆಸ್ಸೆಸ್ ಈ ಮಹಾನ್ ದೇಶದ ಮೂಲೆಮೂಲೆಗಳಲ್ಲೂ ಹಿಂದೂತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ (1940, ಮದ್ರಾಸ್‌ನಲ್ಲಿ - ಶ್ರೀ ಗುರೂಜಿ ಸಮಗ್ರ ದರ್ಶನ್ ನಲ್ಲಿ ಉಲ್ಲೇಖಿಸಿರುವಂತೆ). ಫ್ಯಾಶಿಸಂ ಮತ್ತು ನಾಝಿಸಂಗಳಿಗೂ ಸ್ಫೂರ್ತಿಯಾಗಿದ್ದುದು ಇದೇ ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತ ಎಂಬುದನ್ನು ಗಮನಿಸಬೇಕಾಗಿದೆ.
ಭಗವಾ ಧ್ವಜ, ಏಕನಾಯಕತ್ವ ಮತ್ತು ಹಿಂದುತ್ವ ಸಿದ್ಧಾಂತದಿಂದ ಸ್ಫೂರ್ತಿ ಪಡೆಯುವ ಆರೆಸ್ಸೆಸ್‌ಗೆ ಕೇಂದ್ರದಲ್ಲಿ ತನ್ನದೇ ಮೋದಿ ಸರಕಾರ ಬಂದ ನಂತರ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಲು ಮುಕ್ತ ರಹದಾರಿ ದೊರೆತಿದೆ. ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಅಜೆಂಡಾದ ಭಾಗವಾಗಿಯೆ ಇಂದು ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ವಲಯಗಳ ಕೇಸರೀಕರಣ ನಡೆಯುತ್ತಿದೆ. ಐಸಿಎಚ್‌ಆರ್, ಐಸಿಸಿಆರ್, ಮದ್ರಾಸ್ ಐಐಟಿ, ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಹೈದರಾಬಾದ್ ವಿವಿ ಇತ್ಯಾದಿಗಳ ನಂತರ ಇದೀಗ ಜವಾಹರ್‌ಲಾಲ್ ನೆಹರೂ ವಿವಿ (ಜೆಎನ್‌ಯು) ಸರದಿ. ಭವಿಷ್ಯದಲ್ಲಿ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ಮತ್ತು ಇಂತಹದೇ ಇನ್ನಿತರ ಸಂಘಸಂಸ್ಥೆಗಳ ಸರದಿ ಬರಲಿರುವುದಂತೂ ನಿಶ್ಚಿತ.
ಈಗ ಜೆಎನ್‌ಯು ಘಟನೆಯಲ್ಲಿ ವಿವಾದದ ಕೇಂದ್ರಬಿಂದುವಾದ ಅಂಶವನ್ನು ಎತ್ತಿಕೊಳ್ಳೋಣ. ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಝಲ್ ಗುರು ಅಪರಾಧಿ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಮಾನಿಸಿದ ಹನ್ನೆರಡು ವರ್ಷಗಳ ನಂತರ 2013ರ ಫೆಬ್ರವರಿ 9ರಂದು ಆತನನ್ನು ಗಲ್ಲಿಗೇರಿಸಲಾಯಿತು. ಆದರೆ ಕಾಶ್ಮೀರದ ಪ್ರಜಾಸತ್ತಾತ್ಮಕ ಜನತಾ ಪಕ್ಷ (ಪಿಡಿಪಿ) ಮತ್ತು ಜೆಎನ್‌ಯುನ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಡಿಎಸ್‌ಯು) ಸೇರಿದಂತೆ ಅನೇಕರ ಪಾಲಿಗೆ ಇವತ್ತಿಗೂ ಅವನೊಬ್ಬ ಹುತಾತ್ಮ. ಅಫ್ಝಲ್ ಗುರು ಮತ್ತು ಮಕ್ಬೂಲ್ ಭಟ್ ಸಾವುಗಳನ್ನು ನ್ಯಾಯಾಂಗದಿಂದಾದ ಹತ್ಯೆ ಎಂದು ಕರೆದ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ ಅದನ್ನು ಪ್ರತಿಭಟಿಸುವ ಸಲುವಾಗಿ ಜೆಎನ್‌ಯು ಕ್ಯಾಂಪಸ್‌ನಲ್ಲೊಂದು ಸಾಂಸ್ಕೃತಿಕ ಸಭೆ ನಡೆಸಲು ನಿರ್ಧರಿಸಿತು. ಬಳಿಕ ನಿಯಮಾವಳಿಗಳ ಅನುಸಾರ ಆಡಳಿತದಿಂದ ಅನುಮತಿಯನ್ನೂ ಪಡೆದುಕೊಂಡಿತು.
ಆದರೆ ಕಾರ್ಯಕ್ರಮ ಆರಂಭವಾಗಲು ಇನ್ನೇನು 20 ನಿಮಿಷಗಳಿದ್ದಾಗ ಇದ್ದಕ್ಕಿದ್ದಂತೆ ಅನುಮತಿಯನ್ನು ಹಿಂದೆಗೆದುಕೊಳ್ಳಲಾಯಿತು. ಇದರಲ್ಲಿ ಸಂಘ ಪರಿವಾರದ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಕೈವಾಡ ಇರುವುದು ಮೇಲುನೋಟಕ್ಕೇ ಸ್ಪಷ್ಟವಿದೆ. ಇದರ ಹಿನ್ನೆಲೆ ಹೀಗಿದೆ: ಜೆಎನ್‌ಯುವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊಂಚು ಹಾಕುತ್ತಲೆ ಇದ್ದ ಸಂಘ ಪರಿವಾರ ಕೆಲವು ತಿಂಗಳುಗಳ ಹಿಂದೆ ತನ್ನ ಬಂಟ ಡಾ. ಸುಬ್ರಮಣ್ಯನ್ ಸ್ವಾಮಿಯನ್ನು ಅಲ್ಲಿ ಉಪಕುಲಪತಿಯಾಗಿ ನೇಮಿಸಲು ಯತ್ನಿಸಿತ್ತು. ಈ ಪ್ಲಾನ್ ವಿಫಲವಾದ ಬೆನ್ನಿಗೆ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಚುನಾವಣೆಗಳಲ್ಲಿಯೂ ಎಬಿವಿಪಿಗೆ ಸೋಲಾಗಿತ್ತು. ಹೀಗೆ ಎರಡೆರಡು ಬಾರಿ ಸೋಲನುಭವಿಸಿದ್ದ ಸಂಘ ಪರಿವಾರ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿತ್ತು. ಅಫ್ಝಲ್ ಗುರು, ಮಕ್ಬೂಲ್ ಭಟ್ ಸಾವಿನ ವಿರುದ್ಧದ ಈ ಪ್ರತಿಭಟನಾ ಕಾರ್ಯಕ್ರಮ ಅದರ ಪಾಲಿಗೆ ದೈವದತ್ತ ಅವಕಾಶವಾಗಿ ಬಂದಿದೆ.
ಗಮನಾರ್ಹ ವಿಷಯವೆಂದರೆ ಇಂತಹದೊಂದು ಕಾರ್ಯಕ್ರಮ ಕಳೆದ ವರ್ಷ ಕೂಡ ನಡೆದಿದ್ದು ಅಂದು ಯಾವುದೆ ಸದ್ದುಗದ್ದಲ, ಆಕ್ಷೇಪಣೆಗಳಿಲ್ಲದೆ ಸುಖಾಂತ್ಯಗೊಂಡಿತ್ತು! ಇದರ ನಂತರ ಏನೆಲ್ಲ ಭಯಾನಕ ಘಟನೆಗಳು ಸಂಭವಿಸಿದವು ಎಂಬುದನ್ನು ನಾವೆಲ್ಲರೂ ಚೆನ್ನಾಗಿ ಬಲ್ಲೆವು. ದಿಲ್ಲಿ ಪೊಲೀಸರು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ನ ಮೇಲೆ ರಾಷ್ಟ್ರದ್ರೋಹ ಅಥವಾ ರಾಷ್ಟ್ರದ ವಿರುದ್ಧ ಪಿತೂರಿಯ ಆರೋಪ ಹೊರಿಸಿ ಆತನನ್ನು ಬಂಧಿಸಿದರು. ಈ ರೀತಿ ಪೊಲೀಸರು ಜೆಎನ್‌ಯು ಕ್ಯಾಂಪಸ್ ಪ್ರವೇಶಿಸಿ ಕ್ಷಣಮಾತ್ರದಲ್ಲಿ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿರುವುದು; ಪಟಿಯಾಲಾ ಹೌಸ್ ನ್ಯಾಯಾಲಯದ ಆವರಣದಲ್ಲಿ ಬಿಜೆಪಿ ಪ್ರೇರಿತ ಲಾಯರುಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು; ಹಲ್ಲೆಯ ವೇಳೆ ಪೊಲೀಸರು ಉದ್ದೇಶಪೂರ್ವಕವಾಗಿ ಕೈಕಟ್ಟಿಕೊಂಡು ನಿಂತಿರುವುದು; ಕೆಲವು ವಕೀಲರು ಪೊಲೀಸ್ ವಶದಲ್ಲಿದ್ದ ಕನ್ಹಯ್ಯಿನ ಮೇಲೆ ಸುಮಾರು ಮೂರು ಗಂಟೆಗಳ ಕಾಲ ನಿರಂತರ ದೌರ್ಜನ್ಯ ಎಸಗಿರುವುದು ಮುಂತಾದ ಘಟನೆಗಳು ಈ ದೇಶದ ಕಾನೂನುಪಾಲನಾ ವ್ಯವಸ್ಥೆ ಎಷ್ಟೊಂದು ಕುಳಗೆೆಟ್ಟುಹೋಗಿದೆ ಎನ್ನುವುದನ್ನು ನಿಚ್ಚಳವಾಗಿ ಬಿಂಬಿಸುತ್ತವೆ.
ಕೇಂದ್ರ ಗೃಹಸಚಿವರನ್ನೂ ಒಳಗೊಂಡಂತೆ ಬಿಜೆಪಿಯ ಹಲವಾರು ನಾಯಕಮಣಿಗಳಂತೂ ಎಂದಿನಂತೆ ಎಲುಬಿಲ್ಲದ ನಾಲಿಗೆಗಳನ್ನು ಮನಬಂದಂತೆ ಹರಿಯಬಿಟ್ಟಿದ್ದಾರೆ. ಇವರಲ್ಲಿ ಕೆಲವರು ಜೆಎನ್‌ಯು ವಿದ್ಯಾರ್ಥಿಗಳಿಗೆ ಪಾಕಿಸ್ತಾನದ ತಾಲಿಬಾನಿ ಸಂಘಟನೆಗಳೊಂದಿಗೆ ಸಂಪರ್ಕ ಇರುವುದಾಗಿ ಆರೋಪಿಸುತ್ತಾರೆ! ಇನ್ನು ಕೆಲವರು ಪಿಡುಗು ನಿಯಂತ್ರಣ ಮೂಲಕ ಜೆಎನ್‌ಯುವನ್ನು ಶುದ್ಧೀಕರಿಸಬೇಕೆಂದು ಕರೆನೀಡುತ್ತಾರೆ! ಒಬ್ಬ ಮಹನೀಯರಂತೂ ಜೆಎನ್‌ಯು ಕ್ಯಾಂಪಸ್‌ನಲ್ಲಿರುವ ಕಾಂಡೋಮ್, ಸಾರಾಯಿ ಬಾಟಲ್ ಇತ್ಯಾದಿಗಳನ್ನು ಲೆಕ್ಕಹಾಕುವ ಮಟ್ಟಕ್ಕೆ ಇಳಿದಿದ್ದಾರೆ! ಕೆಲವರು ದೇಶದ್ರೋಹಿಗಳಿಗೆ ಶಿಕ್ಷೆ ಆಗದಿದ್ದರೆ ಜಾಗರೂಕ ಯುವಕರಾದ ನಾವು ಕ್ಯಾಂಪಸ್‌ಗೆ ನುಗ್ಗಿ ಅಂಥವರನ್ನು ಗುಂಡಿಕ್ಕಿ ಕೊಲ್ಲುವೆವು ಎನ್ನುತ್ತಾರೆ! ಇನ್ನೂ ಹಲವರು ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಸಂಘ ಪರಿವಾರದ ವಿರುದ್ಧ ಮಾತನಾಡುವವರನ್ನೆಲ್ಲ ರಾಷ್ಟ್ರವಿರೋಧಿಗಳೆಂದು ಪರಿಗಣಿಸಲಾಗುವುದೆಂದು ಎಚ್ಚರಿಕೆ ನೀಡುತ್ತಾರೆ! ಅತ್ಯಂತ ಆತಂಕದ ವಿಚಾರವೆಂದರೆ ಕೆಲವು ಮಾಜಿ ಸೈನಿಕರೂ ಚೆಡ್ಡಿಗಳ ತಾಳಕ್ಕೆ ಕುಣಿಯುತ್ತ ಜೆಎನ್‌ಯು ಒಳಗಿರುವ ದೇಶದ್ರೋಹಿಗಳ ವಿರುದ್ಧ ಯುದ್ಧ ಟ್ಯಾಂಕುಗಳನ್ನು ಬಳಸುವಂತೆ ಕರೆ ನೀಡುತ್ತಾರೆ.
ಇದೇ ವೇಳೆ ಇವರಿಗೆಲ್ಲಾ ಕಾಶ್ಮೀರದಲ್ಲಿ ಇವರದೇ ಬಿಜೆಪಿ ಅಫ್ಝಲ್ ಹುತಾತ್ಮನೆಂದು ಪರಿಗಣಿಸುವ ಪಿಡಿಪಿ ಜೊತೆಗೂಡಿ ಸಮ್ಮಿಶ್ರ ಸರಕಾರ ನಡೆಸುವ ಬಗ್ಗೆ ಯಾವ ಆಕ್ಷೇಪವೂ ಇಲ್ಲದಿರುವುದು ದೊಡ್ಡ ವಿಪರ್ಯಾಸವೆ ಸರಿ! ಇನ್ನು ಕೆಲವೊಂದು ಟಿವಿ ಸಮನ್ವಯಕಾರರು ತಿರುಚಿದ ವೀಡಿಯೊ ಮತ್ತು ಏಕಪಕ್ಷೀಯ ಚರ್ಚೆಗಳ ಮೂಲಕ ಜನರನ್ನು ಉದ್ರೇಕಿಸುವ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ. ಒಂದು ದೃಷ್ಟಿಯಲ್ಲಿ ಇದು ದೇಶವಿರೋಧಿ ಚಟುವಟಿಕೆ ಆಗುವುದಿಲ್ಲವೇ? ಪತ್ರಿಕಾಧರ್ಮವನ್ನು ಪೂರ್ತಿ ಮರೆತುಬಿಟ್ಟು ತಮ್ಮ ರಾಜಕೀಯ ಒಲವುಗಳನ್ನು ಇಷ್ಟೊಂದು ನಿರ್ಲಜ್ಜ ವಾಗಿ ಪ್ರದರ್ಶಿಸುವ ಇಂಥವರು ಪತ್ರಿಕಾವೃತ್ತಿಗೆ ದೊಡ್ಡ ಕಳಂಕವಷ್ಟೆ ಅಲ್ಲ ಪ್ರಜಾಸತ್ತೆಗೂ ಅಪಾಯಕಾರಿ ಎನ್ನುವುದರಲ್ಲಿ ತಪ್ಪಿಲ್ಲ. ಈ ವಿದ್ಯಮಾನಗಳನ್ನೆಲ್ಲ ನೋಡುವಾಗ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಅದೇನೆಂದರೆ ಸಂಘ ಪರಿವಾರ ಇದೆಲ್ಲವನ್ನೂ ಉದ್ದೇಶ ಪೂರ್ವಕವಾಗಿ ಮತ್ತು ಯೋಜನಾಬದ್ಧವಾಗಿ ನಡೆಸುತ್ತಿದೆ. ಜೆಎನ್‌ಯು ವಿದ್ಯಾರ್ಥಿಗಳು ಎಡಪಂಥೀಯರ ಹಿಡಿತದಲ್ಲಿದ್ದಾರೆ; ಅವರು ದೇಶದ ಸಮಗ್ರತೆ ಹಾಗೂ ಸಾರ್ವಭೌಮತೆಯನ್ನು ನಾಶಗೊಳಿಸಲು ಸಂಚು ಹೂಡುತ್ತಿದ್ದಾರೆ ಎಂದು ದೇಶಾದ್ಯಂತ ಗುಲ್ಲೆಬ್ಬಿಸುವುದೆ ಸಂಘಿಗಳ ಮುಖ್ಯ ಗುರಿಯಾಗಿದೆ. ಈ ರಾಷ್ಟ್ರೀಯವಾದಿಗಳು ತಾವು ಮಾತ್ರ ಧರ್ಮಿಷ್ಟರು ಮತ್ತು ದೇಶಪ್ರೇಮಿಗಳು ಎಂದು ಭಾವಿಸಿದ್ದಾರೆ. ವಾಸ್ತವದಲ್ಲಿ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಕ್ಷಣವೂ ಭಾಗವಹಿಸದವರು. ತದ್ವಿರುದ್ಧವಾಗಿ ಬ್ರಿಟಿಷರ ಜೊತೆ ಕೈಜೋಡಿಸಿ ಸ್ವಾತಂತ್ರ್ಯ ಹೋರಾಟವನ್ನು ಬಗ್ಗುಬಡಿಯಲು ಸಹಕರಿಸಿದವರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎನ್ನುತ್ತ ಅವನಿಗೆ ಗುಡಿ ಕಟ್ಟಲು ಹೊರಡುವವರು. ಗಾಂಧಿ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸುವವರು.
ಯಾವ ಮಾನದಂಡವನ್ನು ಅನ್ವಯಿಸಿದರೂ ದೇಶ ಪ್ರೇಮಿಗಳೆಂದು ಕರೆಯಲು ನಾಲಾಯಕ್ಕಾಗಿರುವ ಇಂಥವರು ಈಗ ತಮ್ಮನ್ನು, ತಮ್ಮ ಹಿಂದೂತ್ವ ಸಿದ್ಧಾಂತವನ್ನು ವಿರೋಧಿಸುವವರಿಗೆಲ್ಲ ರಾಷ್ಟ್ರವಿರೋಧಿ, ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿ ಇವರನ್ನೆಲ್ಲ ಕೊಲ್ಲಲು ಹಿಂಜರಿಯೆವು ಎಂಬಂತಹ ಭಯೋತ್ಪಾದಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಬೌದ್ಧಿಕ ಹಾಗೂ ದೈಹಿಕ ಭಯೋತ್ಪಾದನೆಯ ಮೂಲಕ ದೇಶದೆಲ್ಲೆಡೆ ಭಯದ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ. ಏತನ್ಮಧ್ಯೆ ರಾಷ್ಟ್ರದ್ರೋಹ ಅಥವಾ ರಾಷ್ಟ್ರದ ವಿರುದ್ಧ ಪಿತೂರಿ ಎಂಬ ಅಪರಾಧದ ಕುರಿತು ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಏನು ಹೇಳುತ್ತವೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇಂತಹ ಘೋಷಣೆಗಳು ನೇರವಾಗಿ ಜನರನ್ನು ಹಿಂಸೆಗಿಳಿಯುವಂತೆ ಪ್ರಚೋದಿಸಿದಾಗಷ್ಟೇ ಅದು ಅಪರಾಧ ಆಗುತ್ತದೆ ಎಂದು ಕಾನೂನುತಜ್ಞರು ಪದೇಪದೇ ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿಯೂ ಕನ್ಹಯ್ಯಾ ಕುಮಾರ್ ಮತ್ತಿತರ ವಿದ್ಯಾರ್ಥಿಗಳನ್ನು ರಾಷ್ಟ್ರೀಯವಾದದ ಬಲಿಪೀಠಕ್ಕೆ ಸಮರ್ಪಿಸುವ ಸಕಲ ಸಿದ್ಧತೆಗಳಾಗುತ್ತಿರುವಂತಿದೆ. (ಆಧಾರ: ಸಬ್‌ರಂಗ್‌ನಲ್ಲಿ ತಪನ್ ಬೋಸ್‌ರವರ ಲೇಖನ‘Afzal Guru’s execution has made him a martyr’; ಸಂಶುಲ್ ಇಸ್ಲಾಂರವರ ‘Know the RSS’; ಎ.ಜಿ.ನೂರಾನಿಯವರ ಆರೆಸ್ಸೆಸ್ ಮತ್ತು ಬಿಜೆಪಿ )