varthabharthi


ಒರೆಗಲ್ಲು

ಚಿಂತನಾರ್ಹ, ಅರ್ಥಪೂರ್ಣ ಸಂಪಾದಕೀಯ

ವಾರ್ತಾ ಭಾರತಿ : 11 Mar, 2016
ಡಾ. ಆರ್ಕೆೆ, ಮಣಿಪಾಲ

ತಮ್ಮ ಪತ್ರಿಕೆಯ 3.3.16ರ ಸಂಪಾದಕೀಯ ‘ಸೇನೆಗೆ ಬಡವರೇ ಯಾಕೆ ಸೇರಬೇಕು’ ಅರ್ಥಪೂರ್ಣವೂ ಸಂವೇದನಾಶೀಲವೂ ಆಗಿತ್ತು. ಅದಕ್ಕಾಗಿ ತಮಗೆ ಅಭಿನಂದನೆಗಳು. ನನಗೆ ಮುಖಸ್ತುತಿ ಮಾಡುವ ರೂಢಿಯಿಲ್ಲ; ಅದರ ಅಗತ್ಯವೂ ನನಗಿಲ್ಲ. ನನ್ನದೇನಿದ್ದರೂ ನೇರ ಸತ್ಯ ನಿಷ್ಠುರವಾದಿ ಪ್ರತಿಕ್ರಿಯೆ. ರಾಷ್ಟ್ರೀಯ ಪತ್ರಿಕೆಗಳಲ್ಲಿ ನಾನು ದಶಕಗಳಿಂದ ಓದುತ್ತಿರುವ ‘ದ ಹಿಂದೂ’ ಬಿಟ್ಟರೆ, ಕನ್ನಡ ದೈನಿಕಗಳಲ್ಲಿ ಯಾವ ಪತ್ರಿಕೆಯೂ ನಿಮ್ಮ ಪತ್ರಿಕೆಯಂತೆ ಸಾರ್ಥಕವಾದ, ಪ್ರಗತಿಪರವೂ ಸಕಾರಾತ್ಮಕವೂ ಆದ, ಸಂಪಾದಕೀಯ ಬರೆಯುತ್ತಿಲ್ಲವೆಂದು ಧೈರ್ಯವಾಗಿ ಹೇಳಬಲ್ಲೆ. ನಿಮ್ಮೀ ಸಕಾಲಿಕವೂ ಸಕಾರಾತ್ಮಕವೂ ಆದ ಧ್ಯೇಯನಿಷ್ಠ ಧೋರಣೆ ಮುಂದುವರಿಯುವಂತಾಗಲಿ ಎಂದು ಹಾರೈಸುತ್ತೇನೆ.


ತಮ್ಮ ಪತ್ರಿಕೆ ಮುಸ್ಲಿಮರ ಮಾಲಕತ್ವವೆಂಬ ಕಾರಣಕ್ಕೆ ಅಸಹನೆಯಿಂದ, ಹೇವರಿಕೆಯಿಂದ ಪ್ರತಿಕ್ರಿಯಿಸುವವರನ್ನು ಕಂಡಿದ್ದೇನೆ. ಅದೇಕೆ, ಮೂರ್ನಾಲ್ಕು ದಶಕಗಳಿಂದ ಯಾವುದೇ ವಿಚಾರಗೋಷ್ಠಿಯಲ್ಲಿ ಮತಧರ್ಮವನ್ನು ಉದ್ದೇಶಪೂರ್ವಕವಾಗಿ ಎಳೆದುತರುವ ಆಸಾಮಿಗಳು ವೇದಿಕೆಯಲ್ಲೂ ಕೆಳಗೂ ಇರುವುದನ್ನು ಗಮನಿಸಿದ್ದೇನೆ. ಗಟ್ಟಿಮುಟ್ಟಾದ ಮೂರ್ತನಿಷ್ಠವಾದ ಕಾರಣಗಳಿಲ್ಲದೆ ಮುಸ್ಲಿಮರನ್ನು ದೂಷಿಸುವುದನ್ನು ಖಂಡಿಸುವುದರಿಂದಾಗಿ ನನ್ನಂಥವರಿಗೆ ‘ಬ್ಯಾರಿಗೆ ಹುಟ್ಟಿದವ’ ನೆಂಬ ವಿಶೇಷಣ ದೊರಕುವುದೂ ಇದೆ. ಅದಕ್ಕಾಗಿ ನಾನೇನೂ ಆಕ್ರೋಶಗೊಂಡದ್ದಿಲ್ಲ.


ಪ.ಬಂಗಾಳದ ಬಿಜೆಪಿ ಅಧ್ಯಕ್ಷ, ಸಿ.ಟಿ. ರವಿ, ಸ್ಮತಿ ಇರಾನಿ, ಬಂಡಾರು ದತ್ತಾತ್ರೇಯ ಮುಂತಾದ ಪಿಂಡಗಳು ಈ ದೇಶದಲ್ಲಿ ಧಾರಾಳವಾಗಿವೆ; ಹೆಚ್ಚುತ್ತಲೂ ಇವೆ. ಮೇಲಿನ ಸಂಪಾದಕೀಯದಲ್ಲಿ ನೀವು ಆರಂಭದಲ್ಲಿ ಪ್ರಸ್ತಾಪಿಸಿದ ದಿನೇಶ್ ಅಮೀನ್ ಮಟ್ಟು ‘ಮುಂಗಾರು’ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದವರು; ನಾನು ಆ ಪತ್ರಿಕೆಗೆ ಬರೆಯುತ್ತಿದ್ದು, ಅವರು ನನಗೆ ಆತ್ಮೀಯರು. ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿರುವ ಅವರಿಗೆ ಹಿರಿಯ ಪತ್ರಕರ್ತನೂ ಪ್ರಜ್ಞಾವಂತನೂ ಆಗಿ ಮಾತನಾಡುವ ಹಕ್ಕಿದೆ; ಈ ಸಂವಿಧಾನಾತ್ಮಕವಾದ ಹಕ್ಕು ಬಿಜೆಪಿ ಕೊಡುವಂತಹದ್ದಲ್ಲ. ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಲವಲೇಶ ಗೌರವವಿಲ್ಲದ ಸಂಘಪರಿವಾರದ ಯಾವುದೇ ಪ್ರತಿಕ್ರಿಯೆಗೆ ನಾವು ಸೊಪ್ಪು ಹಾಕುವ ಅಗತ್ಯವಿಲ್ಲ. ಗಾಂಧಿಯನ್ನು ಕೊಂದವನನ್ನು ‘ಹುತಾತ್ಮ’ ಎಂದು ಕರೆಯುವ, ಬಾಬರಿ ಮಸೀದಿ ಕೆಡಹುವಂಥ ಇನ್ನೊಂದು ಹೀನಕೃತ್ಯವೆಸಗಿ ‘ಆ ದಿನ ನನ್ನ ಜೀವನದಲ್ಲೆ ಅತ್ಯಂತ ದುಃಖದ ದಿನ’; ‘ಆ ಘಟನೆ ತನ್ನಷ್ಟಕ್ಕೆ ಘಟಿಸಿತು’ ಎಂದು ಉದ್ಗರಿಸಿದ ಅಡ್ವಾಣಿಯಂಥ ಧೂರ್ತಶಿಖಾಮಣಿಗಳ ಪಕ್ಷದಿಂದ ದೂರವಿದ್ದಷ್ಟು ನಮ್ಮ ಮಾನಸಿಕ ಸ್ವಾಸ್ಥ ಸುಸ್ಥಿತಿಯಲ್ಲಿದ್ದೀತು!


ನಿಮ್ಮ ಸಂಪಾದಕೀಯದಲ್ಲಿ ‘ಕೋಮುಗಲಭೆಗಳನ್ನು ಪ್ರಚೋದಿಸುವ ನಾಯಕರ ಮಕ್ಕಳು ಯಾಕೆ ಈ ಗಲಭೆಗಳಲ್ಲಿ ಸಂತ್ರಸ್ತರಾಗುವುದಿಲ್ಲ?’ ‘ಯಾವ ಶ್ರೀಮಂತ ಅಥವಾ ಆರೆಸ್ಸೆಸ್ ಸ್ವಯಂಘೋಷಿತ ದೇಶಪ್ರೇಮಿ ನಾಯಕರು ತಮ್ಮ ಮನೆಯಲ್ಲಿ ಒಬ್ಬ ಮಗನನ್ನು ಸೇನೆಗೆಂದು ಮೀಸಲಿಟ್ಟ ಉದಾಹರಣೆಗಳಿಲ್ಲ’ ಮುಂತಾದ ಹೇಳಿಕೆಗಳಿಗೆ ಪೂರಕವಾಗಿ ಕೆಲವು ಮಾತುಗಳು. ಉಡುಪಿಯ ಬಿಜೆಪಿಯ ಹಿರಿಯ ನಾಯಕ, ಸಚಿವರೂ ಆಗಿದ್ದವರ ಇಬ್ಬರು ಸುಪುತ್ರರೂ ಮಣಿಪಾಲದ ಕೆಎಂಸಿಯಲ್ಲಿ ವೈದ್ಯರು; ಉಪಪ್ರಾಧ್ಯಾಪಕರು. ದೇಶಪ್ರೇಮದ ಬಗ್ಗೆ ಕೊರೆಯುವ ಈ ಆಸಾಮಿಗಳಿಗೆ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಾಗಲಿ, ಪೊಲೀಸರನ್ನಾಗಿಸುವುದಾಗಲಿ ಬೇಕಿಲ್ಲ. ಕಸ ಗುಡಿಸಲಿಕ್ಕೆ ಹೆಮ್ಮಕ್ಕಳನ್ನು ಬ್ರಹ್ಮ ಸೃಷ್ಟಿಸಿದ್ದಾನೆಂದು ಪರಿಗಣಿಸುವ ಈ ಪೈಕಿಗಳು ಬಡವರ್ಗದ ಯುವಕರು ಸೈನ್ಯಕ್ಕೋ, ಆರಕ್ಷಕರಾಗಿಯೋ ಸೇರಿ ಕೆಲಸಮಾಡಲಿ ಎಂಬುದೇ ಶ್ರೇಷ್ಠ ಚಿಂತನೆಯ ಗೊಂಚಲು ಎಂದು ತಿಳಿದಂತಿದೆ.

ನಿಮಗೆ ತಿಳಿದಂತೆ ಸ್ವಾತಂತ್ರ ಹೋರಾಟದಲ್ಲಿ ಭಾಗಿಗಳಾಗದ, 15.8.1947ರ ಸ್ವಾತಂತ್ರ ದಿನವನ್ನು ‘ಕರಾಳದಿನ’ ವೆಂದು ಆಚರಿಸಿದ, ಸ್ವತಂತ್ರ ಭಾರತದ ರಾಷ್ಟ್ರಧ್ವಜವನ್ನು ನಾಗ್ಪುರದ ತಮ್ಮ ಕೇಂದ್ರ ಕಚೇರಿಯಲ್ಲಿ ಹಾರಿಸದ, ಈ ಕೀಟಗಳಿಗೆ ಕಡುಬಡವರ ದಾರಿದ್ರವೇ ಬಂಡವಾಳ; ತಮಗೆ ಅರ್ಥವಾಗದ ಧರ್ಮದ ಮೂಲತತ್ತ್ವವನ್ನು ಬದಿಗಿರಿಸಿ ‘ನಾವು’ ‘ಅವರು’ ಎಂದು ಪ್ರಜೆಗಳನ್ನು ಒಡೆದಾಳುವುದೇ ಪ್ರವೃತ್ತಿ.


 ನಾನು ಇಷ್ಟೆಲ್ಲಾ ಟೀಕಾಪ್ರಹಾರ ಮಾಡುವಾಗ ನನ್ನ ಮಗನನ್ನು ಭಾರತೀಯ ನೌಕಾ ಸೇನೆಯಲ್ಲಿ ಅಲ್ಪಾವಧಿ ಸೇವಾ ನಿಯೋಗದಡಿ (ಎಸ್ಸೆಸ್ಸಿ) ಸೇರಿಸಿದ್ದೆ. ಆಳ ಸಮುದ್ರದಲ್ಲಿ (ಸು.200-300 ಕಿ.ಮೀ. ದೂರದಲ್ಲಿ) ನೌಕೆಯಲ್ಲಿ ಸಂಚರಿಸುತ್ತಾ, ಮನೆಗೆ ದೂರವಾಣಿ ಮೂಲಕ ಸಂಪರ್ಕಿಸಬೇಕಾದರೆ ಆತ ದೋಣಿಗಳನ್ನು ತರಿಸಿ, ಕನ್ಯಾಕುಮಾರಿಯಲ್ಲೊ, ತಮಿಳ್ನಾಡಿನ ಇತರ ಪಟ್ಟಣಗಳಲ್ಲೊ ಎಸ್‌ಟಿಡಿ ಮಾಡಬೇಕಿತ್ತು. ಇಂಜಿನಿಯರ್ ಪದವಿ ಹೊಂದಿದ್ದ ಆತ ನನ್ನ ಒತ್ತಾಯದಿಂದ ನೌಕಾ ಸೇನೆಗೆ ಸೇರಿದ್ದಲ್ಲ; ಅದು ಅವನದ್ದೇ ಆಯ್ಕೆ. ಶ್ರೀಲಂಕಾ ಗಡಿಯಲ್ಲಿ ಎಲ್‌ಟಿಟಿಇಗಳ ವಿರುದ್ಧ ಜಾಗೃತನಾಗಬೇಕಾಗಿದ್ದ ಆತ ಪಾಕ್ ಜಲಸಂಧಿನಲ್ಲಿ 22 ಬಾರಿ ಓಡಾಡಿದ್ದ. ರಾಡಾರ್ ಮೂಲಕ ಹಡಗು ಚಲಿಸುವ ದಾರಿಯಲ್ಲಿರಬಹುದಾದ ಬಂಡೆಗಳ ಇರವಿನ ಬಗ್ಗೆ ಮುಂಚಿತವಾಗಿ ಜಾಗೃತನಾಗುತ್ತಿದ್ದ. ಭಾರತ-ಶ್ರೀಲಂಕಾ ಗಡಿಯಲ್ಲಿ ‘ರಾಮಸೇತು’ ಎಂದು ಕೇಸರಿಗಳು ಕೀರ್ತಿಸುವ ಯಾವ ಸೇತುವೆಯಾಗಲಿ ಅದರ ಅವಶೇಷವಾಗಲಿ ಕಂಡಿಲ್ಲವೆನ್ನುತ್ತಾನೆ ಆತ. ಶೌರ್ಯಪ್ರಶಸ್ತಿ ಗಳಿಸಿದ ಆತ 60 ವಯಸ್ಸಿನವರೆಗೂ ನೌಕಾಸೇನೆಯಲ್ಲಿ ಶಾಶ್ವತ ಸೇವಾ ನಿಯೋಗದಡಿ ಹುದ್ದೆ ಮುಂದುವರಿಸಲು ಅವಕಾಶವಿತ್ತಾದರೂ ಅದನ್ನು ಬಳಸಿಕೊಳ್ಳಲಿಲ್ಲ. ರಾಷ್ಟ್ರೀಯ ಭದ್ರತೆಯ ಗೋಪ್ಯತೆಯನ್ನು ಕಾಪಾಡಬೇಕಿರುವುದರಿಂದ ಎಲ್ಲ ರಹಸ್ಯಗಳನ್ನು ಬಹಿರಂಗಪಡಿಸುವುದು ಸಾಧುವಲ್ಲ. ರಾಷ್ಟ್ರದ ಬಗ್ಗೆ ಭಾವುಕ ಸನ್ನಿಯಿಂದ ಮಾತಾಡುವ ಕೇಸರಿ ಗಣಗಳಿಗೆ ಸೈನಿಕರ ಕಷ್ಟನಷ್ಟಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿಯಾಗಲಿ ಮಾನವೀಯತೆಯಾಗಲಿ ಇಲ್ಲವೆಂಬುದನ್ನು ಅರ್ಥಮಾಡಿಕೊಂಡಷ್ಟೂ ವಿಹಿತ.


ಉ.ಕ.ದ ಸಂಸದ ಅನಂತಕುಮಾರ ಹೆಗಡೆ ಉನ್ಮಾದದಿಂದ ಮಾತಾಡಿದ್ದಾರೆ. ಇಸ್ಲಾಮ್ ಇರುವವರೆಗೂ ಭಯೋತ್ಪಾದಕರಿರುತ್ತಾರೆ ಎಂಬುದು ಅವರ ಉದ್ಗಾರ. ಸೂರ್ಯನ ಕೆಳಗೆ ಎಲ್ಲ ಮಾನವರೂ ಸಮಾನರೆಂಬ ನಿಷ್ಠೆಯ ಸಾಕಾರ ಇಸ್ಲಾಮಿನದೆಂಬುದನ್ನು ಮನಗಂಡ ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಭಾವುಕರಾಗಿ ರೋಮಾಂಚಿತರಾಗಿ ಮಾತನಾಡಿದ್ದು, ಈ ನೊರಜುಗಳಿಗೆ ಪ್ರಸ್ತುತವಾಗುವುದಿಲ್ಲವೇಕೋ!
ನಿಮ್ಮ ಸಂಪಾದಕೀಯದಲ್ಲಿ ವ್ಯಕ್ತವಾದ ಎರಡು ಮಾತುಗಳು ತುಂಬ ಚಿಂತನೀಯ. ಒಂದು, ಕೊಡಗಿನವರು ಸೈನ್ಯದಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರುತ್ತಾರೆ ವಿನಾ ಸಾಮಾನ್ಯ ಸೈನಿಕರಾಗಿಯಲ್ಲ; ಇನ್ನೊಂದು, ಯೋಧರನ್ನು ಸ್ಮರಿಸುವುದಕ್ಕೆ ಅವರು ಹುತಾತ್ಮರಾಗುವವರೆಗೆ ನಾವು ಕಾಯಬಾರದು. ಈ ಸಂಗತಿ ಮಾನವೀಯತೆಯುಳ್ಳವರ ಮಿಡಿತ. ಮಾನವೀಯತೆ, ಅಂತಃಕರಣ, ಆತ್ಮಸಾಕ್ಷಿಯಿಲ್ಲದ ಸಂಘಪರಿವಾರದ ಕಡೆಯಿಂದ ಈ ಸಂಸ್ಕಾರವನ್ನು ಕನಸುಮನಸ್ಸಿನಲ್ಲಿಯೂ ನಿರೀಕ್ಷಿಸುವಂತಿಲ್ಲ.


ಬಡಪಾಯಿ ಯುವಕರು ಅರ್ಹತಾಸುತ್ತಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿನಂತರ ತರಬೇತಿ ಪಡೆದು ಸೈನಿಕರಾಗುತ್ತಾರೆ. ಕೆಲವು ಸೈನಿಕರಂತೂ ಸ್ವಂತ ಇಚ್ಛೆಯಿಂದ ಸಿಯಾಚಿನ್ ಕಾವಲಿಗೆ ಹೋಗಲು ಮುಂದಾಗುತ್ತಾರೆ. ನಮ್ಮ ರಾಜಕೀಯ ಪುಢಾರಿಗಳಿಗಾಗಲಿ, ಸಂಘಪರಿವಾರಕ್ಕಾಗಲಿ, ಈ ಯೋಧರಿಗೂ ಒಂದು ಅಂತಃಕರಣವಿದೆ, ಕುಟುಂಬ ಬಂಧುಗಳ ಬಗ್ಗೆ ಮಿಡಿತವಿದೆ ಎಂದು ಎಂದಾದರೂ ಅರ್ಥವಾಗಲಿದ್ದೀತೆ? ಎಳೆಯ ವಯಸ್ಸಿನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗುವ ಇಲ್ಲವೆ ಪ್ರಾಕೃತಿಕ ವಿಕೋಪಗಳಿಗೆ ಆಹುತಿಯಾಗುವ ಯೋಧರ ಬಗ್ಗೆ ಕಂಬನಿ ಮಿಡಿಯುವುದಕ್ಕಿಂತ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕುವಂತೆ ಮಾಡೋಣ; ಪುನರ್ ವಸತೀಕರಣಕ್ಕೆ ವ್ಯವಸ್ಥೆ ಕಲ್ಪಿಸೋಣ. ಅದನ್ನು ಬಿಟ್ಟು ನಾಯಕರೆಂದಾಕ್ಷಣ ಎಲುಬಿಲ್ಲದ ನಾಲಗೆಯನ್ನು ಹರಿಯಬಿಡುವ, ಆತ್ಮವಂಚನೆಯೆಸಗುವ ಅಮಾನವೀಯ ನಡತೆಯನ್ನು ಎಂದೆಂದಿಗೂ ಬಿಟ್ಟುಬಿಡೋಣ.     

ಆಗಾಗ ದೈನಿಕಗಳಲ್ಲಿ ಭಾರತೀಯ ನೌಕಾಸೇನೆಯ ನೇಮಕಾತಿಯ ಬಗ್ಗೆ ಜಾಹೀರಾತು ಪ್ರಕಟವಾಗುತ್ತಿರುತ್ತದೆ. ತಾಂತ್ರಿಕ ಅಥವಾ ಸಾಮಾನ್ಯ ಹುದ್ದೆಗೆ ಸೇರಿಕೊಳ್ಳಲು ಕರಾವಳಿ ಜಿಲ್ಲೆಗಳ ಯುವಕರು ಯಾಕೆ ಮುಂದಾಗುತ್ತಿಲ್ಲ ಎಂಬುದು ವಿಚಾರಣೀಯ. ಅತ್ಯುತ್ತಮ ವೇತನ, ಸವಲತ್ತುಗಳನ್ನು ಕೇಂದ್ರ ಸರಕಾರ ನೀಡುತ್ತ ಬಂದರೂ ಯುವಕರು ನೌಕಾಸೇನೆಯಲ್ಲಿ ಸೇರಲು ಇಷ್ಟಪಡುತ್ತಿಲ್ಲ. ಸಬ್‌ಮೆರಿನ್‌ಗಳಲ್ಲಿ ದುಡಿಯುವ ನೌಕಾಸೇನೆಯ ಯುವಕರು ಕ್ರಮೇಣ ಪಡುವ ಯಾತನೆಯನ್ನು ಹೇಳುವಂತಿಲ್ಲ. ಸಾಮಾನ್ಯ ತಂತ್ರಜ್ಞ ನೌಕಾ ಸೈನಿಕನಿಗಿಂತ ಸಬ್‌ಮೆರಿನ್ ಸೈನಿಕನಿಗೆ ವೇತನ ಹೆಚ್ಚು. ಇಂಥವರೊಂದಿಗೆ ನೌಕೆಯಲ್ಲಿ ಇಂಜಿನ್ ಕೊಠಡಿಯಲ್ಲಿ ದುಡಿಯುವವರ ಹಿಂಸೆ ದೇವರಿಗೆ ಪ್ರೀತಿ! ಎಂಥ ಗಟ್ಟಿಮನಸ್ಸಿನವರಿಗೂ ಆಳ ಸಮುದ್ರದಲ್ಲಿ ನೌಕೆ ಏರಿಳಿಯುತ್ತಾ ಸಾಗುವಾಗ ವಾಂತಿಯಾಗುವುದು ಸಾಮಾನ್ಯ. ಆಹಾರ ಸೇರುವಂತಿಲ್ಲ. ಸೇರಿದರೂ ಅಜೀರ್ಣ ಇತ್ಯಾದಿ ಸಮಸ್ಯೆ, ದೇಹಬಾಧೆ ತೀರಿಸುವ ಮತ್ತಿತರ ಶೌಚದ ಸಮಸ್ಯೆ. ಉಸಿರುಗಟ್ಟಿ ಸತ್ತರೂ ಹೇಳುವಂತಿಲ್ಲ. ಎಲ್ಲವೂ ಭದ್ರತೆಯ ಗೋಪ್ಯತೆ! ಪುಢಾರಿಗಳೇ ಇದು ನಿಮಗೆಂದಾದರೂ ಅರ್ಥವಾದೀತೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)