ರವಿಶಂಕರ್ ಸಮಾವೇಶದ ವಿವಾದದ ಸುತ್ತ...
ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ 35ನೆ ವರ್ಷಾಚರಣೆಯ ಅಂಗವಾಗಿ ನಡೆಸಲು ಉದ್ದೇಶಿಸಲಾಗಿರುವ ‘ವಿಶ್ವ ಸಂಸ್ಕೃತಿ ಹಬ್ಬ’ವನ್ನು ಯಮುನಾ ನದಿಯ ಪ್ರಸ್ಥಭೂಮಿಯಿಂದ ಬೇರೆಡೆ ಸ್ಥಳಾಂತರಿಸುವಂತೆ ಒಪ್ಪಿಸುವ ಒಂದೇ ಉದ್ದೇಶದಿಂದ ನಾನು ಕೆಲದಿನಗಳ ಹಿಂದೆ ಶ್ರೀ ರವಿಶಂಕರ್ ಅವರನ್ನು ಭೇಟಿಯಾಗಿದ್ದೆ.
ಆದರೆ ಅವರು, ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿ ಮಾಡುವುದು ದೂರದ ಮಾತು, ಯಮುನೆಯ ದಡದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಿದ ಕಾರಣವೆಂದರೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಂದು ತಿಳಿಸಿದ್ದರು. ತಮ್ಮ ಸಂಸ್ಥೆಯು ಏಕಾಂಗಿಯಾಗಿ ನದಿಯಿಂದ ಈವರೆಗೆ 500 ಟನ್ ಹೂಳನ್ನು ತೆಗೆದಿದೆ ಎಂದು ಅವರು ತಿಳಿಸಿದ್ದರು. ಸುಮಾರು 35 ಲಕ್ಷ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು, ನನ್ನದೊಂದು ಸ್ಟಾಲ್ ಹಾಕುವ ಬಗ್ಗೆಯೂ ಪ್ರಸ್ತಾವನೆಯಿಟ್ಟರು ಮತ್ತು ಏಳು ಎಕರೆ ವಿಸ್ತಾರವಾದ ವೇದಿಕೆಯಿಂದ ಮಾತನಾಡುವ ಅವಕಾಶವನ್ನೂ, ಜೊತೆಗೆ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ ಎಂದು ಜಾಹೀರಾತುಗಳಲ್ಲಿ ತಿಳಿಸಲಾಗಿರುವ ಈ ಕಾರ್ಯಕ್ರಮಕ್ಕೆ ವಿಐಪಿ ಪಾಸ್ ಕೂಡಾ ಒದಗಿಸುವುದಾಗಿ ತಿಳಿಸಿದರು. ಸೋಮವಾರದಂದು ದಿಲ್ಲಿಯ ಎಲ್ಲಾ ಪತ್ರಿಕೆಗಳಲ್ಲಿ ಮೇಲೆ ಕಾಣಿಸಿದಂಥಾ ಬೃಹತ್ ಜಾಹೀರಾತುಗಳು ಕಂಡುಬಂದರೆ ಮಧ್ಯಾಹ್ನದ ಹೊತ್ತಿಗೆ ರಾಷ್ಟ್ರಪತಿ ಭವನದ ಅಧಿಕಾರಿಗಳು ರಾಷ್ಟ್ರಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದರು.
ಪ್ರಾಯಶಃ ಭೂಸೇನೆಯ ಇಂಜಿನಿಯರಿಂಗ್ ವಿಭಾಗದ ಜವಾನರು ಯಮುನಾ ನದಿಯ ಮೇಲೆ ದೋಣಿಯಾಧಾರಿತ ತೇಲುವ ಸೇತುವೆಯನ್ನು ನಿರ್ಮಿಸುತ್ತಿರುವ ಸುದ್ದಿಯಿಂದ ಸಶಸ್ತ್ರಪಡೆಯ ಅತ್ಯುನ್ನತ ಕಮಾಂಡರ್ ಸಂತೋಷಗೊಂಡವರಂತೆ ಕಂಡುಬರುತ್ತಿಲ್ಲ. ಟಿವಿ ಸುದ್ದಿವಾಹಿನಿ ಎನ್‌ಡಿಟಿವಿ ವರದಿ ಮಾಡಿದಂತೆ ಒಂದಲ್ಲ ಎರಡು ಇಂತಹ ಸೇತುವೆಗಳನ್ನು ಸೇನಾ ಸಿಬ್ಬಂದಿ ಒಂದು ವಾರದಲ್ಲಿ ನಿರ್ಮಿಸಿದ್ದರು. ಈ ಬಗ್ಗೆ ಎನ್‌ಡಿಟಿವಿಗೆ ಮಾಹಿತಿ ನೀಡಿದ ಹೆಸರು ತಿಳಿಸಲು ನಿರಾಕರಿಸಿದ ಸೇನಾ ಸಿಬ್ಬಂದಿ, 120 ಜವಾನರನ್ನು ಸೇತುವೆ ನಿರ್ಮಾಣದ ಕಾರ್ಯಕ್ಕೆ ಕರೆಸಲಾಗಿದೆ. ಈ ಬಗ್ಗೆ ಒಂದಷ್ಟು ವಿರೋಧ ವ್ಯಕ್ತಪಡಿಸಿದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಯಾವುದೇ ಅಪಘಾತದಿಂದ ಉಂಟಾಗುವ ಗಾಯ ಅಥವಾ ಆಪತ್ತುಗಳಿಗೆ ಕಾರ್ಯಕ್ರಮದ ಆಯೋಜಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಔಟ್ ಲುಕ್ ಪತ್ರಿಕೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ವಿಚಿತ್ರವಾದ ದೃಶ್ಯವು ಕಣ್ಣಿಗೆ ಬಿತ್ತು. ಖಾಸಗಿ ಗುತ್ತಿಗೆದಾರರ ಬದಲಾಗಿ ಸಾಮಾನ್ಯ ಬಟ್ಟೆ ಧರಿಸಿದ್ದ ಸೇನಾ ಜವಾನರು ದೋಣಿಯ ಸೇತುವೆಯನ್ನು ನಿರ್ಮಿಸುವಲ್ಲಿ ವ್ಯಸ್ಥವಾಗಿದ್ದರು. ಓರ್ವ ದೇವಮಾನವ, ಬಹುಶಃ ಉಚಿತವಾಗಿ, ಸೇನಾ ಜವಾನರನ್ನು ತನ್ನ ತಾತ್ಕಾಲಿಕ ಪುಟ್ಟ ನಗರವನ್ನು ಸ್ಥಾಪಿಸುವಲ್ಲಿ ನೆರವಾಗಲು ಬಳಸಿಕೊಳ್ಳಲು ಸಾಧ್ಯವಾಗುತ್ತದೆಯಾದರೆ, ಅದು ಶ್ರೀ ಹೊಂದಿರುವ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಇದು ಬೆಳಕಿಗೆ ಬರುವ ಮುನ್ನ, ನಾನೇ ಖುದ್ದಾಗಿ ಕಾರ್ಯಕ್ರಮ ನಡೆಯುವ ಪ್ರದೇಶಕ್ಕೆ ತೆರಳಿ ಶ್ರೀ ಹೇಳಿರುವುದು ನಿಜವೇ, ಯಮುನಾ ನದಿಯ ರಕ್ಷಕನನ್ನು ಸಾವಿನ ದೇವತೆ ಯಮರಾಜನಂತೆ ತಪ್ಪಾಗಿ ಅರ್ಥೈಸಲಾಗುತ್ತಿದೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿದೆ. ಈ ಕಾರ್ಯಕ್ರಮದ ವಿರುದ್ಧ ಅಭಿಯಾನ ನಡೆಸುತ್ತಿರುವ ಮನೋಜ್ ಮಿಶ್ರಾ ಮತ್ತಿತರರು ಹೂಡಿರುವ ದಾವೆಯಲ್ಲಿ ಆ ಪ್ರದೇಶದ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಉಂಟಾಗುವ ಹಾನಿಯನ್ನು ವಿವರಿಸಲಾಗಿದೆ-ಬಹುಶಃ ಆ ಹಾನಿಯನ್ನು ಈಗಾಗಲೇ ಮಾಡಿಯಾಗಿದೆ.
ಆದರೆ ನಾನು ಕಂಡಂತೆ ಮತ್ತು ಚಿತ್ರಗಳಲ್ಲಿ ತೋರಿಸಿರುವಂತೆ, ತನ್ನ ರಕ್ಷಣೆಯಲ್ಲಿ ಆರ್ಟ್ ಆಫ್ ಲಿವಿಂಗ್ ನೀಡಿರುವ ಯಾವುದೇ ವಿವರಣೆ ಕೂಡಾ ಸರಿ ಎಂದು ಕಾಣುವುದಿಲ್ಲ. ಇದಕ್ಕೆ ಪರಿಣತರೇ ಬೇಕಾಗಿಲ್ಲ, ಕಾಣುತ್ತಿರುವ ಸಾಕ್ಷಿಗಳೇ ಬೇಕಾದಷ್ಟಿವೆ. ಮೊದಲನೆಯದಾಗಿ ಗಮನಿಸಬೇಕಾದ ಅಂಶವೆಂದರೆ, ರಾಷ್ಟ್ರೀಯ ಹಸಿರು ಪೀಠ ಜನವರಿ 2015ರಲ್ಲಿ ಹೇರಿದ ಕಟ್ಟುನಿಟ್ಟಿನ ನಿಷೇಧದ ಹೊರತಾಗಿಯೂ ಒಂದು ಸಾವಿರ ಎಕರೆ ಪ್ರಸ್ಥಭೂಮಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿಯನ್ನು ನೀಡಲಾಯಿತು. 35 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿರುವ ಈ ಕಾರ್ಯಕ್ರಮಕ್ಕಾಗಿ ಪ್ರಸ್ಥಭೂಮಿಯನ್ನು ಸಮತಟ್ಟುಗೊಳಿಸಲು ಕಳೆದ ಒಂದು ತಿಂಗಳಿಂದ ಬೃಹತ್ ಕ್ರೇನ್‌ಗಳು ಹಾಗೂ ಇತರ ಯಂತ್ರಗಳ ಮೂಲಕ ಕೆಲಸ ಜೋರಾಗಿ ಸಾಗುತ್ತಿದೆ. ಈ 35 ಲಕ್ಷ ಜನರು ವಿಶ್ವಶಾಂತಿಯ ಶ್ಲೋಕ ಜಪಿಸಲೆಂದು ನೂರಾರು ಕೆಲಸಗಾರರು ಕಾರ್ಯಕ್ರಮದ ಸ್ಥಳದಲ್ಲಿ ದುಡಿಯುತ್ತಿದ್ದಾರೆ. ಟನ್ ಗಟ್ಟಲೆ ಸ್ಟೀಲ್ ಹಾಗೂ ಇತರ ಲೋಹಗಳನ್ನು ತುಂಡರಿಸುತ್ತಿರುವ ಯಾವನೇ ಒಬ್ಬ ಕೂಡಾ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಂಡಿರುವುದು ಕಂಡುಬರುವುದಿಲ್ಲ. ಈ ಕಾರ್ಯಕ್ರಮಕ್ಕಾಗಿ ನಡೆಯುತ್ತಿರುವ ತಯಾರಿಯಿಂದಾಗಿ ಇಡೀ ಪ್ರದೇಶ ಲೋಹದ ತುಂಡುಗಳಿಂದ ತುಂಬಿಹೋಗಿದೆ.
ರಾಷ್ಟ್ರೀಯ ಹಸಿರು ಪೀಠ ಕಂಡುಕೊಂಡಂತೆ ನಮ್ಮ ತಂಡ ಕೂಡಾ, ನೂರಾರು ಬೃಹತ್ ಯಂತ್ರಗಳು ಮತ್ತು ಕ್ರೇನ್‌ಗಳು ಪ್ರಸ್ಥಭೂಮಿಯನ್ನು ಸಮತಟ್ಟು ಮಾಡುವ ಮತ್ತು ಸಣ್ಣಸಣ್ಣ ನೀರಿನ ತೊರೆಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದ್ದವು. ಬಹುತೇಕ ಮರಗಳನ್ನು ಕಡಿದು ಹಾಕಲಾಗಿದೆ. ಈ ಪ್ರದೇಶವು ನೂರಾರು ಅಪರೂಪದ ಜಾತಿಯ ಹಕ್ಕಿಗಳ ಮೊಟ್ಟೆಯಿಡುವ ಮೆಚ್ಚಿನ ತಾಣವಾಗಿತ್ತು. ಆದರೆ ಸದ್ಯ ಮರಗಳೇ ಇಲ್ಲವಾಗಿರುವುದರಿಂದ, ಅದೆಲ್ಲವೂ ಬೃಹತ್ ಸಂಸ್ಕೃತಿ ಹಬ್ಬದ ಹೆಸರಲ್ಲಿ ನಾಶವಾಗಿದೆ. ಸಂಸ್ಕೃತಿ ಎಂಬುದೇ ಇಲ್ಲಿ ಅವನತಿಯಂತಾಗಿದೆ. ಜಾಗತಿಕ ಮಟ್ಟದ್ದು ಎಂದು ಹೇಳಲಾಗುತ್ತಿರುವ ವೇದಿಕೆಯು ಏಳು ಎಕರೆ ಜಾಗದಲ್ಲಿ ಹರಡಿಕೊಂಡಿದ್ದು ಇದರ ಮೇಲೆ ಒಂದು ಸಮಯದಲ್ಲಿ 35,000 ಸಂಗೀತಗಾರರು ಉಪಸ್ಥಿತರಿರಲಿದ್ದಾರೆ. ಆಯೋಜಕರ ವಾದಕ್ಕೆ ವಿರುದ್ಧವಾಗಿ, ಇಲ್ಲಿ ನಿರ್ಮಿಸಲಾಗಿರುವ ವೇದಿಕೆ ಅಥವಾ ಜನರು ಕುಳಿತುಕೊಳ್ಳುವ ಪ್ರದೇಶದಲ್ಲಿ ಯಾವುದೇ ಪರಿಸರ ಸ್ನೇಹಿ ಸಾಧನಗಳನ್ನು ಉಪಯೋಗಿಸಲಾಗಿಲ್ಲ.
ಇಷ್ಟೊಂದು ಬೃಹತ್ ವೇದಿಕೆಯನ್ನು ಮತ್ತು ಅದರ ಮೇಲಿನ ಸಂಗೀತಗಾರರನ್ನು ಹಿಡಿದಿಡುವ ಸಲುವಾಗಿ ಎಕರೆಗಟ್ಟಲೆ ಜಾಗಗಳಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಹೊಂಡಗಳನ್ನು ತೋಡಲಾಗಿದೆ. ಗ್ರಾಮದ ಆಡುವ ಮಕ್ಕಳಿಗೆ ಮಾತ್ರ ಈ ಬೃಹತ್ ಸರ್ಕಸ್ ಒಂದಷ್ಟು ಮನರಂಜನೆಯನ್ನು ನೀಡಿದೆ. ಈ ಪ್ರದೇಶವನ್ನು ಮೊದಲು ಇಲ್ಲಿನ ರೈತರು ತರಕಾರಿ ಮತ್ತು ಇತರ ಬೆಳೆಗಳನ್ನು ಬೆಳೆಯುವ ಸಲುವಾಗಿ ಉಪಯೋಗಿಸುತ್ತಿದ್ದರು. ಅವರ ಎಲ್ಲಾ ಗದ್ದೆಗಳನ್ನು ನಾಶಪಡಿಸಲಾಗಿದೆ, ಇದನ್ನು ವಿರೋಧಿಸಿದವರನ್ನು ಪೊಲೀಸರು ವಿವಿಧ ಆರೋಪಗಳಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಈ ಆರೋಪಗಳಲ್ಲಿ ‘ದೇಶದ್ರೋಹ’ದ ಆರೋಪವೂ ಇದೆಯೇ ಎಂಬುದನ್ನು ಸದ್ಯ ತಿಳಿದುಕೊಳ್ಳಬೇಕಷ್ಟೇ. ಆರ್ಟ್ ಆಪ್ ಲಿವಿಂಗ್ ಪ್ರಕಾರ ವೇದಿಕೆಯ ಎತ್ತರ 40 ಅಡಿಯಾಗಿದೆ. ಅದು ಹೇಗೆ ಕಾಣಬಹುದು ಎಂಬುದನ್ನು ನೀವೇ ಊಹಿಸಬೇಕು. ಇಂಥಾ ಅಗಾಧ ವೇದಿಕೆಯನ್ನು ಆಧರಿಸಲು ಕಬ್ಬಿಣದ ಆಧಾರಕಂಬಗಳನ್ನು ಬಳಸಲಾಗಿದೆ. ಆದರೆ ಪ್ರತಿಷ್ಠಾನ ನಾವು ಪರಿಹಾರ ಸ್ನೇಹಿ ವಸ್ತುಗಳಾದ ಮರ, ಮಣ್ಣು ಮತ್ತು ಬಟ್ಟೆಯನ್ನು ಮಾತ್ರ ಉಪಯೋಗಿಸಿದ್ದೇವೆ ಎಂದು ವಾದಿಸುತ್ತದೆ. ವಾಹನಗಳನ್ನು ನಿಲುಗಡೆ ಮಾಡುವ ಸ್ಥಳಕ್ಕಾಗಿ ಹಲವು ಎಕರೆ ಜಾಗವನ್ನು ನಿರ್ಮಾಣ ತ್ಯಾಜ್ಯ ಮತ್ತು ಕಾಂಕ್ರಿಟ್ ಬಳಸಿ ಸಮತಟ್ಟುಗೊಳಿಸಲಾಗಿದೆ. ವಿಐಪಿಗಳು ವೇದಿಕೆಗೆ ಆರಾಮವಾಗಿ ತಲುಪುವಂತೆ ಮಾಡಲು ದಿಲ್ಲಿ-ನೊಯ್ಡಿ ಮೇಲ್ಸೇತುವೆಗೆ ಕಾಂಕ್ರಿಟ್ ಮತ್ತು ನಿರ್ಮಾಣ ತ್ಯಾಜ್ಯಗಳನ್ನು ಬಳಸಿ ರ್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಗೋಜಲುಗಳ ಮಧ್ಯೆ, ನಾವು ವಾಪಸ್ ತೆರಳುತ್ತಿದ್ದಂತೆ ಆ ಪ್ರದೇಶವನ್ನು ಗೋಮೂತ್ರದಿಂದ ಶುದ್ಧೀಕರಿಸುತ್ತಿರುವ ಹಸು ನಮ್ಮನ್ನು ಸ್ವಾಗತಿಸಿತು.