ತನ್ನ ಪ್ರಾಣ ರಕ್ಷಿಸಿದ ಮನುಷ್ಯನನ್ನು ಕಾಣಲು ಪ್ರತಿವರ್ಷ 8,000 ಕಿ.ಮೀ. ಈಜಿ ಬರುವ ಪೆಂಗ್ವಿನ್!
ಮನುಷ್ಯ ಮನುಷ್ಯನ ನಡುವಿನ ಸ್ನೇಹ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಂದು ಮನುಷ್ಯ ಹಾಗೂ ಪೆಂಗ್ವಿನ್ ನಡುವಿನ ಅಪೂರ್ವ ಸ್ನೇಹದ ಕಥೆ ನಮ್ಮನ್ನು ಬೆರಗುಗೊಳಿಸದಿರದು.
ಈ ಸ್ನೇಹದ ಕಥೆ ನಡೆದದ್ದು ಬ್ರೆಝಿಲ್‌ನ ನಿವಾಸಿ ಜೋಯೋ ಪೆರೇರಾ ಡಿಸೋಝ (71) ಹಾಗೂ ಡಿನ್‌ಡಿಂ ಎಂಬ ಪೆಂಗ್ವಿನ್ ನಡುವೆ.
ದಕ್ಷಿಣ ಆಫ್ರಿಕನ್ ಮಗೆಲ್ಲನಿಕ್ ವಿಭಾಗಕ್ಕೆ ಸೇರಿದ ಡಿನ್‌ಡಿಂ ಪೆಂಗ್ವಿನ್ ಸುಮಾರು 8,000 ಕಿ.ಮೀ.ಗಳನ್ನು ದಾಟಿ ಬ್ರೆಝಿಲ್‌ನ ರಿಯೋ ಡಿ ಜೆನೀರೋದ ಪುಟ್ಟ ದ್ವೀಪದಲ್ಲಿರುವ ಜೋಯೋ ಪೆರೇರಾ ಅವರ ಮನೆಗೆ ಪ್ರತಿ ವರ್ಷವೂ ಬರುತ್ತದೆ.
ಸಾವಿನ ನೆರಳಲ್ಲಿ ಪೆಂಗ್ವಿನ್...
2011ರಲ್ಲಿ ತನ್ನ ಮನೆಯ ಮುಂದಿನ ಕಡಲ ತೀರದಲ್ಲಿ ಮರಣವನ್ನು ಎದುರು ನೋಡುತ್ತಾ ಬಿದ್ದಿದ್ದ ಪುಟ್ಟ ಪೆಂಗ್ವಿನ್ ಜೋಯೋ ಪೆರೇರಾ ಕಣ್ಣಿಗೆ ಬೀಳುತ್ತದೆ. ರೆಕ್ಕೆಗಳಿಗೆ ತೈಲ ಹಾಗೂ ಥಾರು ಮೆತ್ತಿಕೊಂಡಿದ್ದರಿಂದ ಈಜಲು ಸಾಧ್ಯವಾಗದೆ ಅಸ್ವಸ್ಥಗೊಂಡು ಬಿದ್ದಿದ್ದ ಪೆಂಗ್ವಿನ್ ಅನ್ನು ಜೋಯೋ ಪೆರೇರಾ ತನ್ನ ಮನೆಗೆ ಎತ್ತಿಕೊಂಡು ಬರುತ್ತಾರೆ. ವಾರಗಳ ಕಾಲ ಪೆಂಗ್ವಿನ್‌ನ ರೆಕ್ಕೆಗಳಿಗೆ ಮೆತ್ತಿಕೊಂಡ ಎಣ್ಣೆ, ಥಾರುಗಳನ್ನೆಲ್ಲ ಅವರು ಸಂಪೂರ್ಣವಾಗಿ ಸ್ವಚ್ಛ ಮಾಡುತ್ತಾರೆ.
ಚೇತರಿಸಿದ ಪೆಂಗ್ವಿನ್
ಪೆರೇರಾ ತನ್ನ ಮನೆಗೆ ಹೊಂದಿ ಕೊಂಡಿರುವ ನೆರಳಿನಲ್ಲಿ ಪೆಂಗ್ವಿನ್ ಅನ್ನು ಬಿಟ್ಟು ಹೊಟ್ಟೆ ತುಂಬಾ ಮೀನುಗಳನ್ನು ನೀಡುತ್ತಾರೆ. ಕೊನೆಗೆ ಪೆಂಗ್ವಿನ್ ಚೇತರಿಸಿಕೊಂಡಾಗ ಅದನ್ನು ಹೊರಬಿಡುತ್ತಾರೆ. ಆದರೆ ತನ್ನ ಪ್ರಾಣವನ್ನು ರಕ್ಷಿಸಿದ ಮನುಷ್ಯನನ್ನು ಬಿಟ್ಟು ಹೋಗಲು ಮೊದ ಮೊದಲು ಡಿನ್‌ಡಿಂ ಸಿದ್ಧವಿರಲಿಲ್ಲ. ಹಾಗೆ ಹನ್ನೊಂದು ತಿಂಗಳು ಗಳ ಕಾಲ ತನ್ನ ಮನುಷ್ಯ ಸ್ನೇಹಿತನೊಂದಿಗೆ ಕಳೆದ ಬಳಿಕ ಡಿನ್‌ಡಿಂ ಪೆಂಗ್ವಿನ್ ಹೊರಟುಹೋಗುತ್ತದೆ.
ಮರಳಿ ಬಂದ ಡಿನ್‌ಡಿಂ!
ಜೋಜೋ ಪೆರೇರಾ ಸೇರಿದಂತೆ ಎಲ್ಲರನ್ನೂ ಅಚ್ಚರಿಗೊಳಿಸುವಂತೆ ಮುಂದಿನ ವರ್ಷ ಡಿನ್‌ಡಿಂ ಪೆಂಗ್ವಿನ್ ಮರಳಿಬಂತು. ಜೂನ್‌ನಲ್ಲಿ ದ್ವೀಪಕ್ಕೆ ಬಂದ ಡಿನ್‌ಡಿಂ ಫೆಬ್ರವರಿಯಲ್ಲಿ ಮತ್ತೆ ತೆರಳಿತು. ಕಳೆದ ನಾಲ್ಕು ವರ್ಷಗಳಿಂದಲೂ ಇದು ಪುನರಾವರ್ತನೆಯಾಗುತ್ತಿದೆ. ವಿಶೇಷವೇನೆಂದರೆ ಜೋಜೋ ಪೆರೇರಾ ಹೊರತುಪಡಿಸಿ ಬೇರೆ ಯಾರನ್ನೂ ಪೆಂಗ್ವಿನ್ ತನ್ನ ಹತ್ತಿರಕ್ಕೂ ಸೇರಿಸುವುದಿಲ್ಲ.
ಭೂಮಿಯಲ್ಲಿ ನನಗೆ ಇಷ್ಟದ ಜೀವಿ...
ಈ ಭೂಮಿಯಲ್ಲಿ ನಾನು ಹೆಚ್ಚು ಇಷ್ಟಪಡುವ ಜೀವಿ ಡಿನ್‌ಡಿಂ ಪೆಂಗ್ವಿನ್ ಎಂದು ಜೋಯೋ ಹೇಳುತ್ತಾರೆ. ಪೆರೇರಾರ ಸ್ನೇಹಕ್ಕೆ ಪ್ರತಿಯಾಗಿ ಪ್ರತಿ ವರ್ಷವೂ ಎಂಟು ಸಾವಿರ ಕಿ.ಮೀ.ಗಿಂತಲೂ ಹೆಚ್ಚು ಸಂಚರಿಸಿ ರಿಯೋ ಡಿ ಜನೀರೋದ ಪುಟ್ಟ ದ್ವೀಪದ ಮನೆಗೆ ಡಿನ್‌ಡಿಂ ತಪ್ಪದೆ ಬರುತ್ತದೆ. ಸ್ವಂತ ಮಗುವಿನಂತೆ ಡಿನ್‌ಡಿಂನನ್ನು ನಾನು ಪ್ರೀತಿಸುತ್ತೇನೆ ಎಂದು ಜೋಯೋ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಜೋಯೋರ ಮಡಿಲಲ್ಲಿ ತಲೆಯಿಟ್ಟು, ಅವರು ಪ್ರೀತಿಯಿಂದ ನೀಡುವ ಮೀನನ್ನು ತಿಂದು ರೆಕ್ಕೆಗಳನ್ನು ಕೊಡವಿ ಡಿನ್‌ಡಿಂ ಸ್ನೇಹವನ್ನು ಪ್ರಕಟಿಸುತ್ತದೆ.
ಕೃಪೆ: ಮನೋರಮಾ ಆನ್‌ಲೈನ್