varthabharthi


ಮಾತು ಮೌನದ ಮುಂದೆ

ಕಿ.ರಂ. ಕಾವ್ಯ ಶಿವರಾತ್ರಿಯ ಸುತ್ತ...

ವಾರ್ತಾ ಭಾರತಿ : 11 Mar, 2016
ಶೂದ್ರ ಶ್ರೀನಿವಾಸ್

‘‘ಕಾವ್ಯವೆನ್ನುವುದೇ ಒಂದು ಇಡೀ ಸಂಸ್ಕೃತಿಯ ಪ್ರಾಣರೂಪಿಯಾಗಿರತಕ್ಕಂಥ ಒಂದು ಚೈತನ್ಯ. ಅದರ ಎಲ್ಲ ರೀತಿಯಾದಂಥ ಸತ್ಯಗಳು ಹರಿಯುವುದು ಸಂಸ್ಕೃತಿಯ ಮೂಲಕ ಎನ್ನುವ ಹಿನ್ನೆಲೆಯಲ್ಲಿಯೇ ‘ರಾಮಾಯಣ ದಶನಂ’ನಲ್ಲಿ ಲೌಕಿಕವನ್ನು ಪ್ರತಿಮಿಸತಕ್ಕಂಥ ಕಥನ ಕವನ ಇದು ಎಂದು ಕುವೆಂಪು ಹೇಳುತ್ತಾರೆ. ಈ ಪ್ರತಿಮಿಸುವ ಕ್ರಿಯೆ ಅನ್ನೋದನ್ನು ಅವರು ಪ್ರಬಂಧಗಳಲ್ಲೂ ಹೇಳುತ್ತಾರೆ. ಈ ಪ್ರತಿಮಾವಿಧಾನ ಅನ್ನುವುದೇ ಒಂದು ರೀತಿಯಾದಂಥ ನವ ಸಾಂಸ್ಕೃತಿಕತೆಯ ವಿಧಾನ. ಎಲ್ಲವನ್ನೂ ಸಂಸ್ಕೃತಿ ನಿಷ್ಠವಾಗಿ ಪರಿವರ್ತಿಸುವಂಥ ಕ್ರಮವನ್ನು ಪ್ರತಿಮಾವಿಧಾನದಲ್ಲಿ ಗುರ್ತಿಸುತ್ತೇವೆ. ಆದ್ದರಿಂದ ಸಂಸ್ಕೃತಿ ಎನ್ನುವುದು ಒಂದು ಬುದ್ಧಿಪೂರ್ವಕವಾದಂಥ ಪ್ರಯತ್ನಕ್ಕೆ ಸಿಕ್ಕುವುದಿಲ್ಲ ಅಥವಾ ಒಂದು ರೀತಿಯಲ್ಲಿ, ಸಂಸ್ಕೃತಿ ಎನ್ನುವುದು ಕುವೆಂಪು ಅವರ ಮಾತಲ್ಲೇ ಹೇಳುವುದಾದರೆ, ‘‘ಅದು ತ್ಯಾಗಪೂರ್ಣ ಮನಸ್ಸುಗಳಿಲ್ಲದೆ ಕೈ ಸೇರುವುದಿಲ್ಲ.’’ ಸಂಸ್ಕೃತಿ ಎನ್ನುವುದು ಬುದ್ಧ್ದಿಪೂರ್ವಕವಾದಂಥ ವಿಶ್ಲೇಷಣಾ ಕ್ರಮದಿಂದ ನೋಡುವಂಥದ್ದಲ್ಲ’’. ಈ ರೀತಿಯ ನಿಗೂಢ ಚಿಂತನಾ ಕ್ರಮವನ್ನು ಕಿ.ರಂ. ನಾಗರಾಜ ಅವರು ಸುಮಾರು ನಾಲ್ಕು ದಶಕಗಳಿಗೂ ಮೇಲ್ಪಟ್ಟು ನನ್ನಂಥವರ ಬಾಲ್ಯ ಕಾಲದ ನೆನಪುಗಳನ್ನು ಜೀವಂತವಾಗಿಟ್ಟವರು. ಬರ್ಫಿ, ಕೊಬ್ಬರಿ ಮಿಠಾಯಿ ಮತ್ತು ಶಿವರಾತ್ರಿಯಂಥ ಹಬ್ಬ-ಹುಣ್ಣಿಮೆಗಳ ಸಾಂಸ್ಕೃತಿಕ ನೆಲೆಗಳನ್ನು ವಿಸ್ತರಿಸಿದವರು. ಹಾಗೆಯೇ ಸಂಸ್ಕೃತಿ ಎನ್ನುವುದು ಅಮೂರ್ತತೆಯಿಂದ ಮೂರ್ತತೆಯತ್ತ ಚಲಿಸಿ ಸ್ಥಾಯಿಯಾಗದೆ; ಅದರ ಅರಿವಿಗೆ ಬೇಕಾದದ್ದು ಇನ್ನೂ ವಿಫುಲವಾಗಿದೆ ಎಂಬ ಮನಸ್ಥಿತಿಯನ್ನು ಚೈತನ್ಯಪೂರ್ಣವಾಗಿಟ್ಟವರು. ಇದಕ್ಕಾಗಿ ಕೇವಲ ‘ಪುಸ್ತಕ ಸಂಸ್ಕೃತಿ’ ಮಾತ್ರವಲ್ಲ ಇನ್ನೂ ಎಂತೆಂಥದ್ದರ ಬಗ್ಗೆಯೋ ದಾಹವನ್ನು ಬೆಳೆಸಿದವರು. ಎಷ್ಟೋ ವಿಷಯಗಳಲ್ಲಿ ನಾವು ಕೆಲವರನ್ನು ಬಿಟ್ಟು ಯೋಚಿಸಲು ಆಗುವುದಿಲ್ಲ ಎಂಬ ವಿಷಯ ಬಂದಾಗ, ಕಿ.ರಂ. ಅವರು ವ್ಯಾಪಿಸಿಕೊಳ್ಳುವ ಕ್ರಮವೇ ಮಹತ್ವಪೂರ್ಣವಾದದ್ದು.
ಈ ಎಲ್ಲದರ ಮೊತ್ತವೆಂಬಂತೆ ಇತ್ತೀಚೆಗೆ ‘ಕಿ.ರಂ.: ಕಾವ್ಯಶಿವರಾತ್ರಿ’ ಧುತ್ತನೆ ನಾನಾ ಸಂಗತಿಗಳನ್ನು ಮುಖಾಮುಖಿಯಾಗಿಸಿತು. ಕಳೆದ ಹನ್ನೊಂದು ವರ್ಷಗಳಿಂದ ನಡಕೊಂಡು ಬರುತ್ತಿರುವ ಕಾವ್ಯ ಶಿವರಾತ್ರಿಯು ‘ಮಂಟೆಸ್ವಾಮಿ, ಮಾದಪ್ಪನ ಕಾವ್ಯಗಳ ಜೊತೆಗೆ ಶರೀಫರ ಗೀತೆಗಳನ್ನು ಅಹೋರಾತ್ರಿ ಕೇಳುವ ಸೌಭಾಗ್ಯ ದೊರಕುತ್ತ ಬಂದಿದೆ. ಇದಕ್ಕೆ ಮುಖ್ಯ ಕಾರಣ: ಕಿ.ರಂ. ಅವರ ಕಾವ್ಯಚಿಂತನೆ ಬಹುಮುಖೀ ನೆಲೆಗಳಲ್ಲಿ ಆಕಾರ ಪಡೆದಿರುವಂಥದ್ದು. ಅದಕ್ಕೆ ಪರೋಕ್ಷವಾಗಿ ಜೀವ ತುಂಬುವುದಕ್ಕಾಗಿಯೇ ‘ಕಾವ್ಯಮಂಡಲ’ದಂಥ ಸಂಸ್ಥೆಯ ಹುಟ್ಟಿಗೆ ಕಾರಣವಾದದ್ದು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದು ಪ್ರತಿವರ್ಷ ಒಂದಷ್ಟು ಮಂದಿ ಎಂಫಿಲ್ ಮತ್ತು ಪಿಎಚ್‌ಡಿ ಪ್ರಮಾಣ ಪತ್ರ ಪಡೆದು ಹೊರಗೆ ಬರುತ್ತಿರುವುದು ಕೂಡ ಮಹತ್ವಪೂರ್ಣವಾದದ್ದು. ಅದರಲ್ಲೂ ಇಂದು ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ನಕಲಿ ಪಿಎಚ್‌ಡಿಗಳನ್ನು ಹೇಗೋ ಪಡೆದು ಬರುವ ಮಂದಿಗೆ ಕೊರತೆ ಇಲ್ಲ. ಅಂಥದ್ದಿರಲಿ ಅದಕ್ಕೆ ಘನತೆಯನ್ನು ತರುವ ಹಂತದಲ್ಲಿ ಕಾವ್ಯಮಂಡಲ ಪ್ರಾಮಾಣಿಕವಾದ ಕೆಲಸವನ್ನು ಮಾಡುತ್ತ ಬಂದಿದೆ. ಅಲ್ಲಿ ತಯಾರಾದ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ನಾವು ಇಂಥ ಘನತೆವೆತ್ತ ಸಂಸ್ಥೆಯಿಂದ ಪಡೆದಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗಿದೆ. ಹಾಗೆಯೇ ಅವರೆಲ್ಲ ಸಣ್ಣ ಪ್ರಮಾಣದಲ್ಲಿಯಾದರೂ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿ ನಿರ್ಮಾಣಕಾರರು. ಕಿ.ರಂ. ಅವರು ಇಂಥ ನೂರಾರು ಮಂದಿಯನ್ನು ಕರ್ನಾಟಕದ ಉದ್ದಗಲಕ್ಕೂ ತಯಾರು ಮಾಡಿ ಹೋಗಿದ್ದಾರೆ. ಆದ್ದರಿಂದ ಆ ನಿಜದ ನಾಡೋಜ ಅವರ ನೆನಪನ್ನು ಪ್ರಾಮಾಣಿಕವಾಗಿ ಉಳಿಸಿಕೊಂಡು ಹೋಗುವ ಒಂದಷ್ಟು ಕಾರ್ಯಕ್ರಮಗಳಲ್ಲಿ ‘ಕಾವ್ಯ ಶಿವರಾತ್ರಿ’ಯೂ ಒಂದು. ಕಿ.ರಂ. ಅವರಂತೂ ತಮ್ಮ ಬದುಕಿನ ಕಾಲಘಟ್ಟದಲ್ಲಿ ಒಬ್ಬ ಅವಧೂತನಂತೆ ಬದುಕಿದವರು. ತಮ್ಮ ದೃಷ್ಟಿಯಿಂದ ನಾವೆಲ್ಲ ಎಷ್ಟು ಅದೃಷ್ಟವಂತರು ಎಂಬ ಧ್ವನಿಯು ಅಂತರಾಳದಲ್ಲಿ ನಿರಂತರ ಗುನುಗುನಿಸುತ್ತಲೇ ಇರುತ್ತದೆ. ಯಾವುದಕ್ಕೂ ಏಕಾಏಕಿ ತೀರ್ಮಾನವನ್ನು ಕೊಡದೆ; ಇದು ಹಾಗೆ ಇರಲು, ಹೀಗೆ ಇರಲು ಎಂಬ ಜಿಜ್ಞಾಸೆಯನ್ನು ಸದಾ ಜೀವಂತವಾಗಿರಲು ಸಾಧ್ಯವಾಗಿಸಿದವರು.
ಹಾಗೆ ನೋಡಿದರೆ ಮೊನ್ನೆ ಶಿವರಾತ್ರಿಯ ದಿವಸ ಬೆಂಗಳೂರಿನ ಪ್ರೆಸ್‌ಕ್ಲಬ್‌ನ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡಗವಿಬಸಪ್ಪ ಮತ್ತು ತಂಡದವರು ಮಂಟೆಸ್ವಾಮಿ ಕಾವ್ಯವನ್ನು ಸಾದರಪಡಿಸಿದರು. ಆಗ ಇವರಂತೆ ಕಳೆದ ಕೆಲವು ವರ್ಷಗಳಿಂದ, ಈ ದೇಸಿ ಮಹಾಕಾವ್ಯಗಳನ್ನು ಅದ್ಭುತವೆನ್ನುವಂತೆ; ಹಾಡು ಮತ್ತು ನಿರೂಪಣೆಯ ಮೂಲಕ ಹೊಸ ಕಾವ್ಯಾನುಭವವನ್ನು ನಮಗೆ ಉಣಬಡಿಸಿದವರು. ಅದರಲ್ಲೂ ತಂಬೂರಿ ರಾಜಯ್ಯ ಸಂಗಡಿಗರು ವೇದಿಕೆಗೆ ಒಂದು ಅಮೋಘವಾದ ಸಂಚಲನವನ್ನೇ ತಂದುಕೊಡುತ್ತಿದ್ದರು. ತಂಬೂರಿ ರಾಜಯ್ಯನಂತೂ ಎಂಥ ಅದ್ಭುತ ಕಂಠದ ಸಿರಿಯನ್ನು ಹೊಂದಿದ್ದರು. ಅದನ್ನು ಕಥಾ ರೂಪಕಗಳಿಗೆ ಅನುಗುಣವಾಗಿ ಏರುತಗ್ಗುಗಳಿಗೆ ತುಂಬುತ್ತಿದ್ದ ಧ್ವನಿ ಸಂವರ್ಧನೆಯನ್ನು ವಿಸ್ತರಿಸುತ್ತಿದ್ದರು. ತಂಬೂರಿಯನ್ನು ಮೀಟುತ್ತ ನಟನೆಯ ಮತ್ತು ಧ್ವನಿಯ ವಿವಿಧ ಆಯಾಮಗಳಲ್ಲಿ ಮಂಟೆಸ್ವಾಮಿ ಹಾಗೂ ಮಾದಪ್ಪನ ಕಾವ್ಯದ ಸಿರಿಯನ್ನು ತಲುಪಿಸುತ್ತಿದ್ದ ಕ್ರಮವೇ ವೈವಿಧ್ಯಮಯವಾಗಿತ್ತು. ಕಿ.ರಂ. ಅವರು ಇಂಥವರನ್ನು ಎಲ್ಲಿಂದ ಹುಡುಕಿ ತರುತ್ತಿದ್ದರು ಎಂಬುದು ತರ್ಕಬದ್ಧವಾಗಿ ನಮ್ಮಲ್ಲಿ ಗುನುಗುನಿಸುತ್ತಲೇ ಇತ್ತು. ಹಾಗೆ ನೋಡಿದರೆ 2004ರಲ್ಲಿ ಅವರು ಈ ‘ಕಾವ್ಯ ಶಿವರಾತ್ರಿ’ಯನ್ನು ಶುರುಮಾಡುವ ಮುನ್ನ ನಮ್ಮನ್ನೆಲ್ಲ ಅಹೋ ರಾತ್ರಿ ಬೆಂಗಳೂರಿನ ಹೊರ ವಲಯಗಳಲ್ಲಿ ಹೇಗೆ ಶಿವರಾತ್ರಿಯ ಸಂಭ್ರಮವನ್ನು ಆಚರಿಸುತ್ತಾರೆ ಎಂಬ ಅಪೂರ್ವ ಅನುಭವಲೋಕವನ್ನು ತೆರೆದು ತೋರಿಸುತ್ತಿದ್ದರು. ಜೊತೆಗೆ ಅವರ ಕಲ್ಪನೆಯ ಎಂತೆಂಥದೋ ತಿಂಡಿತೀರ್ಥಗಳ ಸಮಾಗಮ. ಆದರೆ ಈ ಮಹಾನುಭವಗುರು, ಅವಧೂತ ಏನೇನು ತಿನ್ನುತ್ತಿರಲಿಲ್ಲ. ಸಿಗರೇಟ್‌ನ ಅಥವಾ ಬೀಡಿಯ ಹೊಗೆಯನ್ನು ಪುಸಪುಸ ಬಿಡುತ್ತ; ಅಲ್ಲಿ ಹೀಗೆ ನಡೆಯುತ್ತದಂತೆ ಎಂದು ಕರ್ನಾಟಕದ ಮೂಲೆಮೂಲೆಯನ್ನು ಎಷ್ಟು ಸಾಂದರ್ಭಿಕವಾಗಿ ಪರಿಚಯಿಸುತ್ತ ಮಾರ್ಮಿಕಗೊಳಿಸಿಬಿಡುತ್ತಿದ್ದರು.
  ಒಂದು ಬಹುಮುಖೀ ಸಮಾಜದಲ್ಲಿ ಮಾತ್ರ ಇಂಥ ಶ್ರೀಮಂತವಾದ ಆಚರಣೆಗಳು ಜೀವಪಡೆದಿರಲು ಸಾಧ್ಯ ಎಂಬ ಗಾಢ ನಂಬಿಕೆಯನ್ನು ಹೊಂದಿದವರು. ಕೆಲವು ಮೂಢನಂಬಿಕೆಗಳು ಹಾಗೂ ಕಂದಾಚಾರಗಳನ್ನು ಕುರಿತು ನಾವು ಕ್ರಾಂತಿಕಾರಿಗಳಂತೆ ಮಾತಾಡಿದಾಗ, ನಮಗೆ ಸಿಟ್ಟಿನಿಂದಲೇ ಅಥವಾ ನಗುತ್ತಲೇ ಯಾವ ವಿಶ್ವವಿದ್ಯಾನಿಲಯದಿಂದ ಓದಿ ಬಂದಿರಿ? ಎಂದು ಛೀಮಾರಿ ಹಾಕುತ್ತಿದ್ದರು. ಆಗ ಅದಕ್ಕೆ ಸಂಬಂಧಿಸಿದ ಸಂಗತಿಗಳನ್ನೆಲ್ಲ ವಿಸ್ತರಿಸಿ ಹೇಳುವಾಗ, ಮುಖಾಮುಖಿಯಾಗುತ್ತಿದ್ದ ಚಿಂತನೆಗಳು ಆಪ್ತವಾಗಿ ಬಿಡುತ್ತಿದ್ದವು. ಅಷ್ಟೇ ಅಲ್ಲ: ಅಹೋರಾತ್ರಿ ಜನ ಸಾಮಾನ್ಯರು ತಲ್ಲೀನರಾಗಿರುತ್ತಿದ್ದ ಆಟಗಳ ಮನೋಲೋಕವನ್ನು ಪರಿಚಯಿಸುತ್ತಿದ್ದರು. ಅದು ಕಬಡ್ಡಿ, ಕೊಕ್ಕೋ ಅಥವಾ ಗೋಲಿ ಮತ್ತು ಚಿನ್ನೀದಾಂಡು ಆಟಗಳನ್ನು ಪ್ರತ್ಯಕ್ಷಗೊಳಿಸುವಾಗಲೂ ಮುಸುಮುಸು ನಗುತ್ತ ‘ನೋಡ್ರಯ್ಯ’ ಎಂದು ತಮ್ಮ ನೇತಾಡುವ ಬ್ಯಾಗಿನಿಂದ ಬರ್ಫಿ, ಕೊಬ್ಬರಿ ಮಿಠಾಯಿ ಅಥವಾ ಮತ್ತೆಂಥದ್ದನ್ನೋ ತೆಗೆದುಕೊಡುತ್ತ; ಅದಕ್ಕೆ ತುಂಟತನದ ಮಾತನ್ನು ಹೇಳಿ ಆನಂದಮಯಗೊಳಿಸಿಬಿಡುತ್ತಿದ್ದರು. ಇಂಥ ಅನುಭವ ಲೋಕವನ್ನು ಅವರು ಕ್ರಿಕೆಟ್ ನೋಡುವಾಗಲೂ, ಬೇರೆಬೇರೆ ಆಟಗಳನ್ನು ಟಿ.ವಿ. ಪರದೆಯ ಮೇಲೆ ನೋಡುವಾಗಲೂ; ಸಮಯ ಸಿಕ್ಕಿದಾಗಲೆಲ್ಲ ಅದರ ಇತಿಹಾಸವನ್ನು ಪರಿಚಯಿಸುತ್ತಿದ್ದರು. ಈ ಪರಿಚಯಕ್ಕೆ ಇಂಥದ್ದೇ ಎಂಬುದು ಬೇಕಿಲ್ಲ. ಸಾಹಿತ್ಯ ಲೋಕದ ಈ ಅವದೂತ ಅಥವಾ ಸಂತ ವ್ಯಕ್ತಿತ್ವದ ಈ ಕಿ.ರಂ. ಅವರಿಗೆ ಇಂಥದ್ದೆಲ್ಲ ಹೇಗೆ ದಕ್ಕಿದೆ ಎಂದು ಅಚ್ಚರಿಗೊಂಡಿದ್ದೇವೆ. ಆದ್ದರಿಂದಲೇ ಅವರ ಪರಿಚಯ ಲೋಕದ ವ್ಯಾಪ್ತಿಯೇ ವಿಶಾಲವಾದದ್ದಾಗಿತ್ತು. ಯಾವುದಕ್ಕೂ ಇದೇ ಕೊನೆಯೆಂಬುದನ್ನು ನುಡಿಮುತ್ತನ್ನು ಪದೇ ಪದೇ ಹೇಳುತ್ತಲೇ ಇದ್ದರು. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ‘ಶ್ರೀರಾಮ ನವಮಿಯ’ ಸಂದರ್ಭದ ರಾಮೋತ್ಸವದ ಸ್ಮರಣೀಯ ಕಾರ್ಯಕ್ರಮಗಳ ಮೂಲಕ, ನಾವು ಮರೆಯಲು ಸಾಧ್ಯವಾಗದಂಥ ಕಲಾವಿದರನ್ನೆಲ್ಲ ಪರಿಚಯಿಸಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ಧರ್ಮಮೂಲದವರು ಹಬ್ಬ ಹುಣ್ಣಿಮೆಗಳಲ್ಲಿ ಯಾವ ವಿಧವಾದ ಆಚಾರ ವಿಚಾರಗಳಿಂದ ಪಾಲ್ಗೊಳ್ಳುತ್ತಾರೆ ಎಂಬುದರ ಬಗ್ಗೆಯೂ ಅಗಾಧವಾದ ಕಳಕಳಿ. ಈ ದೃಷ್ಟಿಯಿಂದ ಕೆಲವು ವರ್ಷ ನಾವು ಒಂದಷ್ಟು ಮಂದಿ ಇಡೀ ರಾತ್ರಿ ಬೆಂಗಳೂರಿನ ಎಷ್ಟೋ ಚರ್ಚು ಮತ್ತು ಮಸೀದಿಗಳ ಬಳಿ ನಡೆಯುವ ಕಾರ್ಯಕ್ರಮಗಳನ್ನು ಒಳಗೆ ಬಿಟ್ಟುಕೊಂಡು, ಇಂಥ ಕಡೆ ಎಂಥದೋ ತಿಂಡಿ ಸಿಗುತ್ತೆ ಎಂದು ಕರೆದುಕೊಂಡು ಹೋಗುತ್ತಿದ್ದರು.
 ನನ್ನ ಅರಿವಿನ ಮಟ್ಟಿಗೆ ಕಿ.ರಂ. ಅವರು ನಾವು ವರ್ಣಿಸಲು ಸಾಧ್ಯವಾಗದಂಥ ‘ವಿಶ್ವವಿದ್ಯಾನಿಲಯ’ವೇ ಆಗಿ ಬಿಟ್ಟಿದ್ದರು. ಅವರ ಅನುಭವಲೋಕದ ದಾಹದ ತುಡಿತ ಎಷ್ಟು ತೀವ್ರವಾಗಿತ್ತು. ಎಲ್ಲ ವಿಷಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಕೃತಿಗಳ ಜೊತೆಗೆ ಅತ್ಯುತ್ತಮ ಸಿಡಿಗಳು ಮತ್ತು ಕ್ಯಾಸೆಟ್‌ಗಳು ಅವರ ಕೊಠಡಿಯಲ್ಲಿ ತುಂಬಿಕೊಂಡಿದ್ದುವು. ಅದನ್ನು ಅವಲೋಕಿಸುವುದರಲ್ಲಿಯೇ ದೊರಕುತ್ತಿದ್ದ ಸುಖಾನುಭವವನ್ನು ಹೇಗೆ ವರ್ಣಿಸುವುದು ಅನ್ನಿಸುತ್ತದೆ. ಹಾಗೆ ನೋಡಿದರೆ ಎಲ್ಲ ವಿಧವಾದ ಗುಣವಾಚಕಗಳಿಗೆ ಅರ್ಹರಾಗಿದ್ದವರು. ಈ ನೆಲೆಯಲ್ಲಿ ನಾನು ಶೂದ್ರರ ‘ಕನಸಿಗೊಂದು ಕಣ್ಣು’ವಿನಲ್ಲಿ ಸುಮಾರು 25 ಪುಟಗಳ ದೀರ್ಘ ಲೇಖನವನ್ನು ಬರೆದಾಗ; ‘‘ಶೂದ್ರ ನನ್ನನ್ನು ಚೆನ್ನಾಗಿ ಫಿನಿಷ್ ಮಾಡಿದ್ದಾನೆ’’ ಎಂದು ಹೇಳಿದಾಗ; ನಾನು ಖುಷಿಪಟ್ಟಿದ್ದೆ. ಅವರ ಹತ್ತಿರ ಆಪ್ತವಾಗಿ ಸುಳಿದಾಡಿದವರೆಲ್ಲ ಒಂದೊಂದು ಜೀವನ ಚರಿತ್ರೆಯನ್ನು ಬರೆಯಲು ಸಾಧ್ಯವಾದ ಮಹಾನ್ ಶಕ್ತಿಯನ್ನು ತುಂಬಿಕೊಂಡಿದ್ದವರು. ಆದ್ದರಿಂದಲೇ ಲಂಕೇಶ್, ಅನಂತಮೂರ್ತಿ, ಎಂ.ಡಿ. ನಂಜುಂಡಸ್ವಾಮಿ, ಎಸ್. ವೆಂಕಟರಾಮ್, ರಾಜೀವ ತಾರಾನಾಥ್ ಮುಂತಾದವರು ಕಿ.ರಂ. ಅವರ ಮುಂದೆ ಶಿಷ್ಯರ ರೀತಿಯಲ್ಲಿ ಕೂತು ಒಟ್ಟು ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಎಲ್ಲ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯ ಕೊರತೆಯನ್ನು ತುಂಬುವುದಕ್ಕಾಗಿಯೇ ಎಂಬಂತೆ ರೆಫರೆನ್ಸ್ ಕೃತಿಗಳು ಅವರಲ್ಲಿ ದತ್ತಗೊಂಡಿದ್ದವು. ಅಷ್ಟೇ ಏಕೆ, ಅವರ ನೆನಪಿನ ಲೋಕದಿಂದ ಬರುತ್ತಿದ್ದ ಜೀವನ ವೈವಿಧ್ಯತೆಯ ವಿಷಯಗಳು ಪಡೆದುಕೊಳ್ಳುತ್ತಿದ್ದ ಆಕಾರವೇ ಮಾರ್ಮಿಕವಾದದ್ದು.
 ಈ ಎಲ್ಲ ಕಿ.ರಂ. ಅವರ ಮನೋಲೋಕವನ್ನು ಗಣನೆಗೆ ತೆಗೆದುಕೊಂಡು ‘ಕಾವ್ಯ ಶಿವರಾತ್ರಿ’ ನೆಪದಲ್ಲಿ ‘ಮಂಟೆಸ್ವಾಮಿ ಹಾಗೂ ಮಾದಪ್ಪನ ಕಾವ್ಯ’ಗಳ ಮಹತ್ವಪೂರ್ಣತೆಯನ್ನು ಅನುಭವಿಸುವ ಸಮಯದಲ್ಲಿ ನಟರಾಜ್ ಹುಳಿಯಾರ್, ಎಂ.ಎಸ್. ಆಶಾದೇವಿ, ಎಲ್.ಎನ್. ಮುಕುಂದರಾಜ್, ಟಿ. ವೆಂಕಟೇಶ ಮೂರ್ತಿ, ಜಯಶಂಕರ ಹಲಗೂರು, ಡಾ. ಸಿದ್ದಲಿಂಗಯ್ಯ ಮುಂತಾದವರು ತಮ್ಮ ಅನುಭವಲೋಕವನ್ನು ತೆರೆದಿಟ್ಟಿದ್ದರು. ಅಲ್ಲೆಲ್ಲ ಕಿ.ರಂ. ಅವರ ಜೊತೆಯಲ್ಲಿ ಅಲ್ಲಮಪ್ರಭು, ಮಂಟೆಸ್ವಾಮಿ, ಶರೀಫರ ಜೀವನಗಾಥೆಗಳು ಹೇಗೆ ಸಾದರಗೊಳ್ಳುತ್ತಿದ್ದವು ಅನ್ನಿಸಿದೆ. ಇದರ ಮಧ್ಯೆ ಈ ಬಾರಿ ವೇದಿಕೆಯ ಮೇಲೆ ತಂಬೂರಿ ರಾಜಮ್ಮನಂಥ ಮಹಾನ್ ಕಲಾವಿದೆಯ ಕೊರತೆ ಎದ್ದು ಕಾಣುತ್ತಿತ್ತು. ಆಗ ಆಕೆಯ ಓಡಾಟ, ನಟನೆ, ಹಾಡಿನ ಗತ್ತು ಕುರಿತು ಚರ್ಚಿಸುತ್ತಿರುವಾಗ; ಈ ಬಾರಿಯೂ ಆಕೆಯನ್ನು ಕರೆಸಬೇಕಾಗಿತ್ತು ಎಂದಾಗ, ‘‘ಇಲ್ಲ ಸಾರ್, ಆಕೆ ಕಾಲವಾಗಿ ಎರಡು ವರ್ಷವಾಯಿತು’’ ಎಂದು ಮುಕುಂದರಾಜ್ ಹಾಗೂ ಕುರುವ ಬಸವರಾಜ್ ಹೇಳಿದಾಗ; ನಾನು ಪೆಚ್ಚಾಗಿ ಬಿಟ್ಟಿದ್ದೆ. ಒಂದು ಕ್ಷಣ ಅಂಥ ಅಪ್ರತಿಮ ಕಲಾವಿದೆಗೆ ಹೇಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದು ಎಂದು ಯೋಚಿಸುವಾಗ, ಶಬ್ದಗಳಿಗೆ ಅವಕಾಶ ಕೊಡದೆ ನನ್ನ ಮನೋಲೋಕದಲ್ಲಿ ನಟಿಸತೊಡಗಿದ್ದಳು. ಮತ್ತೊಮ್ಮೆ ಮಂಟೆಸ್ವಾಮಿಯಂಥವರ ಜೀವನ ಗಾಥೆಯನ್ನು ವಿಸ್ತರಿಸಿ ಬಿಟ್ಟಿದ್ದಳು. ನನಗೆ ಗೊತ್ತಿಲ್ಲದೆಯೇ ಗುನುಗುನಿಸತೊಡಗಿದ್ದೆ. ‘ಅಮ್ಮ ತಾಯಿ ನೀನು ಕಲಾ ಲೋಕದ ನಿಜವಾದ ಭಾರತ ಮಾತೆ’ ಎಂದು ಹೀಗೆ ಆಕೆಯ ಬಗ್ಗೆ ಹೇಗೇಗೋ ಅನ್ನಿಸುವಂತೆ ಕರ್ನಾಟಕದ ಉದ್ದಗಲಕ್ಕೂ ಬದುಕಿದವನಲ್ಲವೇ? ಹೀಗೆ ‘ಕಿ.ರಂ. ಕಾವ್ಯ ಶಿವರಾತ್ರಿ’ ಸಮೃದ್ಧವಾಗಿ ಮುಂದುವರಿಯಬೇಕು. ಸಾಧ್ಯವಾದರೆ ಪಕ್ಕದ ಜಿಲ್ಲೆಗಳಿಗೂ ವಿಸ್ತರಿಸಬೇಕು.

ಕಿ.ರಂ. ಅವರು ನಾವು ವರ್ಣಿಸಲು ಸಾಧ್ಯವಾಗದಂಥ ‘ವಿಶ್ವವಿದ್ಯಾನಿಲಯ’ವೇ ಆಗಿ ಬಿಟ್ಟಿದ್ದರು. ಅವರ ಅನುಭವಲೋಕದ ದಾಹದ ತುಡಿತ ಎಷ್ಟು ತೀವ್ರವಾಗಿತ್ತು. ಎಲ್ಲ ವಿಷಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಕೃತಿಗಳ ಜೊತೆಗೆ ಅತ್ಯುತ್ತಮ ಸಿಡಿಗಳು ಮತ್ತು ಕ್ಯಾಸೆಟ್‌ಗಳು ಅವರ ಕೊಠಡಿಯಲ್ಲಿ ತುಂಬಿಕೊಂಡಿದ್ದುವು. ಅದನ್ನು ಅವಲೋಕಿಸುವುದರಲ್ಲಿಯೇ ದೊರಕುತ್ತಿದ್ದ ಸುಖಾನುಭವವನ್ನು ಹೇಗೆ ವರ್ಣಿಸುವುದು ಅನ್ನಿಸುತ್ತದೆ. ಹಾಗೆ ನೋಡಿದರೆ ಎಲ್ಲ ವಿಧವಾದ ಗುಣವಾಚಕಗಳಿಗೆ ಅರ್ಹರಾಗಿದ್ದವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)