ಎಲ್ಲಿ ಸಲ್ಲುವರಯ್ಯಾ ಗಾಂಧಿ ತಾತ?
ನಿನ್ನೆಯ ಸಂಚಿಕೆಯಿಂದ.....
ಎರಡನೆಯದಾಗಿ ಜಗತ್ತಿನಲ್ಲೇ ಪ್ರಥಮಬಾರಿಗೆ ಬೃಹತ್ ಹಾಗೂ ಸುದೀರ್ಘ ಅಹಿಂಸಾ ಮತ್ತು ಶಾಂತಿಯುತ ಚಳವಳಿ (ಅಂದರೆ ಕನಿಷ್ಠ ಸಾವು ನೋವುಗಳ) ಮೂಲಕ ಒಂದು ಬೃಹತ್ ಸಾಮ್ರಾಜ್ಯಶಾಹೀ ಶಕ್ತಿಯನ್ನು ಮಣಿಸಿ ದೇಶವನ್ನು ಸ್ವತಂತ್ರಗೊಳಿಸಿರುವ ವಿಚಾರ ಜಗತ್ತಿಗೇ ಒಂದು ಮಾದರಿ ಹೋರಾಟವಾಗಿ ಕಂಡಿತ್ತು.
ಮೂರನೆಯದಾಗಿ ಮೇಲೆ ವಿವರಿಸಿರುವಂತೆ ಭಾರತೀಯ ಸಮಾಜ ಎಂದೂ ಒಂದು ಸಮಾನ ತಳಹದಿಯ ಏಕತೆಯ ಸಮಾಜವಾಗಿರದೆ ಸಾವಿರಾರು ಜಾತಿ, ಉಪಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳ ವೈರುಧ್ಯವುಳ್ಳ ಸಮಾಜವಾಗಿತ್ತು ಅಥವಾ ಆರೀತಿ ಮಾಡಲಾಗಿತ್ತು. ಇದೂ ಅಲ್ಲದೆ ದೇಶದ ಉದ್ದಗಲಕ್ಕೂ ತಮ್ಮ ತಮ್ಮ ನೂರಾರು ಸಾಮ್ರಾಜ್ಯಗಳನ್ನು ಸ್ಥಾಪಿಸಿ ರಾಜ್ಯಭಾರ ಮಾಡುತ್ತಿದ್ದ ರಾಜ /ಮಹಾರಾಜರು, ಹೀಗೆ ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಒಂದಾಗಿಸಿ ಆ ಮಹಾನ್ ಸ್ವಾತಂತ್ರ್ಯ ಚಳವಳಿಯನ್ನು ಗಾಂಧೀಜಿ ಸಂಘಟಿಸಿದ ರೀತಿ ಒಂದು ಅಪೂರ್ವ ಮಾದರಿ ಹೌದು, ಈ ಮೂರನೆಯ ಅಂಶದಲ್ಲೇ ಅಡಗಿದೆ ಗಾಂಧೀಜಿ ವಿರುದ್ಧದ ಆರೋಪಗಳಿಗೆ ಉತ್ತರ. ಗಾಂಧೀಜಿಯವರ ಪ್ರಥಮ ಆದ್ಯತೆ ದೇಶದ ಸ್ವಾತಂತ್ರ್ಯ:
ಹೌದು, ಗಾಂಧೀಜಿಯವರು ದೇಶದ ಉದ್ದಗಲ ಸುತ್ತಿದ್ದಾಗ ದೇಶದ ಅನಿಷ್ಟ, ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಗಮನಿಸಿಲ್ಲ ಎನ್ನಲು ಸಾಧ್ಯವಿಲ್ಲ. ಅಂದಿನ ಶಿಕ್ಷಣ ವ್ಯವಸ್ಥೆ ಮೇಲ್ವರ್ಗಗಳಿಗೆ ಸೀಮಿತವಾಗಿದ್ದರಿಂದ ಸ್ರ್ಯಾತಂತ್ರ್ಯ ಚಳವಳಿಯ ಸ್ಥಳೀಯ ನಾಯಕತ್ವ ಹೆಚ್ಚಾಗಿ ಸುಶಿಕ್ಷಿತರಾಗಿದ್ದ ಮೇಲ್ಜಾತಿಯವರ ಕೈಯಲ್ಲೆ ಇದ್ದರೆ ಅದು ಸ್ವಾಭಾವಿಕವಾಗಿತ್ತು. ಇಂತಹ ಸನ್ನಿವೇಶದಲ್ಲಿ ತನ್ನ ಆದ್ಯತೆಯ ಸ್ವಾತಂತ್ರ ಚಳವಳಿಯೊಂದಿಗೆ ಸಮಾಜ ಸುಧಾರಣೆಯತ್ತ ಗಾಂಧೀಜಿ ಮನಸ್ಸು ಮಾಡಿದ್ದೇ ಆದರೆ ಬಹುತೇಕ ಮೇಲ್ಜಾತಿ ನಾಯಕರ ಕೈಯಲ್ಲೇ ಇದ್ದ ಸ್ವಾತಂತ್ರ ಚಳವಳಿ ದಿಕ್ಕು ತಪ್ಪುವ ಸಾಧ್ಯತೆ ಇತ್ತು. ಹೀಗೆ ಅವರು ತಮ್ಮ ಆದ್ಯತೆಯನ್ನು ಸ್ವಾತಂತ್ರ ಚಳವಳಿಗೆ ಸೀಮಿತಗೊಳಿಸಿ, ಅವಕಾಶ ಲಭಿಸಿದಾಗ ಗ್ರಾಮ ಸ್ವರಾಜ್ಯ (ದೀನ ದಲಿತರು ಹಳ್ಳಿಗಳಲ್ಲೇ ಬಹು ಸಂಖ್ಯೆಯಲ್ಲಿ ವಾಸಿಸುವ ಕಾರಣಕ್ಕೆ ಅವರು ಗ್ರಾಮಸ್ವರಾಜ್ಯ ಅಂದರೆ ಆ ದೀನ ದಲಿತರ ಸ್ವರಾಜ್ಯ ಎಂದೇ ಹೇಳಿರಲು ಸಾಧ್ಯ) ಸ್ವಚ್ಛಗ್ರಾಮ ಇತ್ಯಾದಿ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರೇ ವಿನಹ ಸಾಮಾಜಿಕ ಸುಧಾರಣೆಯಂತಹ ವಿಚಾರವನ್ನು ಬಹುತೇಕ ಮತ್ತೊಂದು ಅನುಕೂಲ ಸಂದರ್ಭಕ್ಕಾಗಿ ಅವರು ಮುಂದೂಡಿರಬಹುದೆಂದು ಹೇಳಬಹುದು. ಅಸ್ಪಶ್ಯರನ್ನು ಇತರೇ ಸಮಾಜದ ಎಲ್ಲರೂ ಗೌರವದಿಂದ ಕಾಣುವಂತಾಗಲಿ ಎಂಬ ಉದ್ದೇಶದಿಂದ ಗಾಂಧೀಜಿ ಅವರನ್ನೂ ಹರಿಜನ ಅಥವಾ ದೇವರ ಮಕ್ಕಳೆಂದು ಕರೆದು ಆ ಮೂಲಕ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತಿಳಿದಿದ್ದೇನೆ ಎಂದು ಸೂಚಿಸಿರಬಹುದೇ? ಇನ್ನೊಂದು ಮಹತ್ವದ ವಿಚಾರವೇನೆಂದರೆ, ಗಾಂಧೀಜಿ ಎಂದೂ ತಮ್ಮ ಸ್ವಾರ್ಥದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಅವರಿಗೆ ಸ್ವಾರ್ಥ ಇಲ್ಲ ಎಂದಾದರೆ ಅವರು ಯಾರನ್ನಾದರೂ, ಅದರಲ್ಲೂ ಶೋಷಿತವರ್ಗಗಳನ್ನು ಉದ್ದೇಶ ಪೂರ್ವಕವಾಗಿ ಉಪೇಕ್ಷಿಸುವ ಆವಶ್ಯಕತೆ ಇತ್ತೇ?
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್: ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಪಂಡಿತ್ ಜವಾಹರಲಾಲ್ ನೆಹರೂ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಡಾ.ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟಂತೆ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಕೆಲ ಮಹತ್ವದ ತೀರ್ಮಾನ ಕೈಗೊಳ್ಳುತ್ತದೆ. ಪ್ರಥಮವಾಗಿ ಡಾ. ಅಂಬೇಡ್ಕರ್ ಅವರನ್ನು ದೇಶದ ನೂತನ ಸಂವಿಧಾನ ರಚನಾ ಸಮಿತಿಗೆ ಸೇರಿಸುವುದು ಮಾತ್ರವಲ್ಲದೆ ಅವರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು. ಇದು ಸ್ವಯಂ ಡಾ. ಅಂಬೇಡ್ಕರ್ ಮಾತ್ರವಲ್ಲ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟಿದ್ದ ಸಮಗ್ರ ದಲಿತ ವರ್ಗಕ್ಕೆ ಅಮೂಲ್ಯ ವರದಾನವಾಗಿ ಪರಿಣಮಿಸಿತು ಎಂದು ಧಾರಾಳವಾಗಿ ಹೇಳಬಹುದು. ಈ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರೂ ಹಾಗೂ ಕಾಂಗ್ರೆಸ್ ಪಕ್ಷವನ್ನು ಟೀಕಿಸುವವರು ಗಮನಿಸಲೇಬೇಕಾದ ಕೆಲ ಮಹತ್ವದ ವಿಚಾರಗಳಿವೆ. ಮೊದಲನೆಯದಾಗಿ, ಸ್ವಯಂ ಓರ್ವ ದಲಿತನಾಗಿ ಹುಟ್ಟಿ ತಾನು ಭಾರತೀಯ ಹಿಂದೂ ಸಮಾಜದಲ್ಲಿ ಅನುಭವಿಸಿದ ಅಸ್ಪಶ್ಯತೆ, ನೋವು, ಅವಮಾನವೇ ಮೊದಲಾದ ಅನಿಷ್ಟ ಶೋಷಣೆಗಳನ್ನು ಮೂಲೋತ್ಪಾಟನೆ ಮಾಡುವುದೇ ಅಂಬೇಡ್ಕರ್ ಪಾಲಿಗೆ ಪ್ರಥಮ ಆದ್ಯತೆಯಾಗಿತ್ತು. ಈ ಕಾರಣಗಳಿಂದಾಗಿಯೇ ಅವರಿಗೆ ಅಂದು ಕಾಂಗ್ರೆಸ್ ಸೇರುವುದು, ಸ್ವಾತಂತ್ರ ಚಳವಳಿಯಲ್ಲಿ ಭಾಗಿಯಾಗುವುದು ಆದ್ಯತೆ ಆಗಿರಲಿಲ್ಲ. ಗಾಂಧೀಜಿಗೆ ದೇಶದ ಸ್ವಾತಂತ್ರವೇ ಹೇಗೆ ಪ್ರಥಮ ಆದ್ಯತೆ ಆಗಿತ್ತೊ, ಅದೇ ತೆರನಾಗಿ ಡಾ.ಅಂಬೇಡ್ಕರ್‌ಗೆ ಮೇಲಿನ ಆದ್ಯತೆ. ಈ ಇಬ್ಬರೂ ಮಹಾನಾಯಕರು ಅವರವರ ಚಿಂತನೆ ಮತ್ತು ಆದ್ಯತೆಗಳಿಗುಣವಾಗಿ ದೇಶ ಸೇವೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾತ್ಮಾಗಾಂಧಿ ಮತ್ತು ಪಂಡಿತ್ ನೆಹರೂರವರ ಟೀಕಾಕಾರರು ಅವಶ್ಯವಾಗಿ ಗಮನಿಸಲೇಬೇಕಾದ ವಿಚಾರ ಏನೆಂದರೆ ಗಾಂಧೀಜಿ ಮತ್ತು ನೆಹರೂ ಅವರು ಡಾ. ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಗಳ ಬಗ್ಗೆ ಅಸಹನೆಯಿಂದಿದ್ದರೆ ಮೇಲಿನ ಮಹತ್ವದ ನೇಮಕಾತಿಗಳನ್ನು ಮಾಡುತ್ತಿದ್ದರೇ? ಅವರನ್ನೇ ಮಾಡಬೇಕೆಂಬ ಒತ್ತಡ ಸನ್ನಿವೇಶ ಅಂದು ಇರಲಿಲ್ಲ, ಒಂದು ವೇಳೆ ಇದ್ದಾಗ್ಯೂ ಇವರಷ್ಟು ತೀವ್ರಗಾಮಿಯಲ್ಲದ ಇನ್ನೋರ್ವ ನಾಯಕನನ್ನು ಆಯ್ದು ನೇಮಕ ಮಾಡಬಹುದಿತ್ತು. ಇದಲ್ಲದೆ ಡಾ. ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ಅಸಹನೆ ಇದ್ದರೆ ಮತ್ತೆ ಅವರನ್ನೇ ಕಾನೂನು ಸಚಿವರನ್ನಾಗಿ ನೇಮಿಸಿ ಅವರು ದಲಿತ ಸಬಲೀಕರಣ ಕಾರ್ಯಗಳನ್ನು ಸಂವಿಧಾನದ ರಕ್ಷಣೆಯೊಂದಿಗೆ ಜಾರಿಗೊಳಿಸಲು ಅವಕಾಶ ನೀಡಬೇಕೆಂದಿರಲಿಲ್ಲ. ಒಟ್ಟಾರೆ ಈ ಎಲ್ಲಾ ಆಗು ಹೋಗುಗಳು ಗಾಂಧೀಜಿ ಮತ್ತು ನೆಹರೂ ಅವರು ಪೂರ್ಣ ಸಮ್ಮತಿ, ಸಹಕಾರದೊಂದಿಗೆ ಜಾರಿಗೊಂಡಿವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಒಂದು ವೇಳೆ ಮೇಲಿನ ಮಹಾನಾಯಕರು, ಅಂದು ಕಾಂಗ್ರೆಸಿಗರಲ್ಲ ಎಂಬ ಕಾರಣಕ್ಕೆ ಡಾ. ಅಂಬೇಡ್ಕರವರಿಗೆ ಮೇಲಿನ ಅವಕಾಶ ನೀಡದೇ ಇರುತ್ತಿದ್ದರೆ, ಅವರಿಗೆ ಮೇಲಿನಂತೆ ದಲಿತರ ಸಬಲೀಕರಣ ಕಾರ್ಯ ಯೋಜನೆಗಳನ್ನು ಸಾಂವಿಧಾನಿಕ ಬದ್ಧ್ದತೆಯೊಂದಿಗೆ ಜಾರಿಗೊಳಿಸಲು ಸಾಧ್ಯವಾಗುತ್ತಿತ್ತೇ? ಅಂದು ಅದು ಸಾಧ್ಯವಾಗದೇ ಇರುತ್ತಿದ್ದರೆ ಈ ದೇಶದಲ್ಲಿ ಇಂದು ದಲಿತರ ಹಿಂದುಳಿದವರ್ಗಗಳ ಪಾಡೇನಾಗುತ್ತಿತ್ತು? ಹೀಗೆ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ ಗಳಿಸುವ ಆದ್ಯತೆಯಲ್ಲಿ ಸಾಮಾಜಿಕ ಸುಧಾರಣೆಗಳ ಬಗ್ಗೆ ಹೇಗೆ ಮೆದು ಧೋರಣೆತಾಳಿದ್ದರೂ ಅದೇ ತೆರನಾಗಿ ಡಾ. ಅಂಬೇಡ್ಕರ್ ಅವರು ಎಂದೂ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸದೇ ಇದ್ದರೂ ತನ್ನ ಆದ್ಯತೆಯನ್ನು ಈಡೇರಿಸಲು ಮೇಲಿನ ಹುದ್ದೆಗಳನ್ನು ನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಜತೆ ಅಂತರ ಕಾಯುವ ತನ್ನ ಮೂಲ ನಿಲುವನ್ನು ಸ್ವಲ್ಪ ಸಡಿಲಗೊಳಿಸಿ ರಾಜಿ ಮಾಡಿದ್ದರೆ ಅದು ಎಂದೂ ಅವರ ಸ್ವಾರ್ಥ ಆಗಲಾರದು, ಏಕೆಂದರೆ ಅವರು ತನ್ನ ಜನರ ಹಿತಕ್ಕಾಗಿ ಒಂದು ಘನ ಉದ್ದೇಶ ಸಾಧಿಸಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರು ಭಿನ್ನ ವಿಚಾರಧಾರೆಗಳನ್ನು ಪರಸ್ಪರ ತುಲನೆಮಾಡಿ ಇಬ್ಬರ ಮಹಾನ್ ಕಾರ್ಯಗಳನ್ನೇಕೆ ನಾವು ಹಗುರವಾಗಿ ಕಾಣಬೇಕು. ಈ ಮಹಾನಾಯಕರ ವಿಚಾರಧಾರೆಗಳ ಮಧ್ಯೆ ಘರ್ಷಣೆ ತಂದಿಕ್ಕುವ ಬದಲು ಎಲ್ಲಾ ಪ್ರಗತಿಪರ ಚಿಂತಕರು ಅಗತ್ಯವಾಗಿ ಮಾಡಲೇಬೇಕಾದ ಕಾರ್ಯಗಳಿವೆ. ಇದೀಗ ಹೈದರಾಬಾದ್‌ನ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಮತ್ತು ಪ್ರಸ್ತುತ ದಿಲ್ಲಿ ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಪ್ರಕರಣಗಳನ್ನು ಬಿಜೆಪಿ ಮತ್ತು ಸಂಘ ಪರಿವಾರ ಯಾವ ರೀತಿ ನಿಭಾಯಿಸುತ್ತಿವೆ ಎಂಬುದು ಜಗಜ್ಜಾಹೀರಾಗಿದೆ. ಈ ಪ್ರಕರಣಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್‌ವಾದ ಎರಡರ ಮೇಲೂ ಪ್ರಹಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷ, ಪಂಗಡ ಭೇದ ಮರೆತು ಎಲ್ಲಾ ಪ್ರಗತಿಪರರು ಅವಶ್ಯ ಮಾಡಲೇ ಬೇಕಾದ ಎರಡು ಕಾರ್ಯಗಳಿವೆ. ಒಂದನೆಯದಾಗಿ ಭಾರತೀಯ ಜನತಾಪಕ್ಷ ಮತ್ತು ಅವರ ಪರಿವಾರದಲ್ಲಿರುವ ಎಲ್ಲಾ ದಲಿತ ಮತ್ತು ಹಿಂದುಳಿದ ವರ್ಗದ ನಾಯಕರನ್ನು ಗುರುತಿಸಿ ಅವರನ್ನು ಆಪಕ್ಷ ಬಿಟ್ಟು ಹೊರಬರುವಂತೆ ಮನಪರಿವರ್ತಿಸಲು ಯತ್ನಿಸುವುದು. ಇನ್ನು ಎರಡನೆಯದಾಗಿ ಸಂಘ ಪರಿವಾರ ಯಾವತ್ತೂ ಮುಗ್ಧ ಯುವ ಪೀಳಿಗೆಯನ್ನು ಗುರಿಯಾಗಿರಿಸಿ ತನ್ನ ಹಿಂದುತ್ವದ ಅಜೆಂಡಾವನ್ನು ಬಹು ಸುಲಭವಾಗಿಯೇ ಪ್ರಚುರಪಡಿಸುತ್ತಿದೆ. ಈ ಹಾವಳಿಯನ್ನು ನೀಗಿಸಲು ಎಲ್ಲಾ ಪಕ್ಷ ಪಂಗಡಗಳು ಒಂದಾಗಿ ಕನಿಷ್ಠ ಒಪ್ಪಿತ ಕಾರ್ಯಸೂಚಿಯಂತೆ ಈ ಯುವ ಸಮುದಾಯವನ್ನು ವಿಶೇಷವಾಗಿ ವಿದ್ಯಾರ್ಥಿ ಸಮುದಾಯವನ್ನು ಪ್ರಗತಿಪರ ವಿಚಾರಧಾರೆಗಳತ್ತ ಸೆಳೆಯುವ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಇನ್ನು ಲೇಖಕರ ಕೊನೆಯ ಪ್ರಶ್ನೆ.
ಎಲ್ಲಿ ಸಲ್ಲುವರಯ್ಯ ಈ ಗಾಂಧಿ ತಾತ?
ಮೇಲೆ ವಿವರಿಸಿರುವಂತೆ ಬಲ ಪಂಥೀಯರೆನಿಸಿರುವ ಹಿಂದುತ್ವವಾದಿಗಳು ಎಂದೂ ಗಾಂಧಿವಾದವನ್ನು ಮಾನ್ಯ (ರಾಜಕೀಯ ಲಾಭಕ್ಕೆ ಬಳಸುವುದರ ಹೊರತಾಗಿ) ಮಾಡಿದ್ದೇ ಇಲ್ಲ. ಮಾನ್ಯ ಮಾಡುವುದು ಬಿಡಿ, ಬ್ರಿಟಿಷರಿಗೆ ಸಾಧ್ಯವಾಗದ ಗಾಂಧೀಜಿ ಅವರ ಬರ್ಬರ ಹತ್ಯೆ ಮಾಡಿದ ಇವರು ಸಮಗ್ರ ಗಾಂಧಿವಾದವೆನ್ನೇ ಮುಗಿಸಲು ಯತ್ನಿಸುತ್ತಿರುವವರು. ಇನ್ನು ಎಡ ಪಂಥೀಯರು ಗಾಂಧಿವಾದವನ್ನು ತೀವ್ರವಾಗಿ ಟೀಕಿಸದಿದ್ದರೂ ಅವರನ್ನು ಎಂದೂ ಪೂರ್ತಿ ಸಮರ್ಥಿಸಿಕೊಂಡವರೂ ಅಲ್ಲ. ಇನ್ನೊಂದೆಡೆ ಅಂಬೇಡ್ಕರ್‌ವಾದಿಗಳು ಇತ್ತೀಚೆಗಿನ ದಿನಗಳಲ್ಲಿ ಗಾಂಧಿವಾದದ ಉಗ್ರ ವಿರೋಧಿಗಳಾಗುತ್ತಿದ್ದಾರೆ. ಈ ಹಿನ್ನ್ನೆಲೆಯಲ್ಲಿ ಲೇಖಕನ ಪ್ರಶ್ನೆ ಇಷ್ಟೆ- ಎಲ್ಲಿ ಸಲ್ಲುವರಯ್ಯ ಈ ಗಾಂಧಿ ತಾತಾ?