ಆಮಂತ್ರಣ ಪತ್ರಿಕೆ, ಮುಸ್ಲಿಂ ಹೆಸರು ಮತ್ತು ತುಳುನಾಡ ಪರಂಪರೆ
ಈ ಹೊತ್ತು ಬಾರಿ ವಿವಾದ ಸೃಷ್ಟಿಸಿರುವ ಪುತ್ತೂರು ದೇವಸ್ಥಾನದ ಜಾತ್ರೆಯ ಆಹ್ವಾನಪತ್ರಿಕೆ ಪ್ರಕರಣ ಮೇ 2014ರ ನಂತರ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಕೋಮು ಧ್ರುವೀಕರಣ ಎಂತಹ ಅಪಾಯಕಾರಿ ಮಟ್ಟ ತಲುಪಿದೆ ಎನ್ನುವುದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿದೆ.
ಈ ಸಂದರ್ಭದಲ್ಲಿ ಡಾ. ಬಾರ್ಕೂರು ಉದಯರು ಬರೆದ ಇತಿಹಾಸದ ಶೋಧ ಗತದ ಹುಡುಕಾಟ ಎಂಬ ಪುಸ್ತಕ ತುಂಬಾ ಪ್ರಸ್ತುತವಿದೆ. ತುಳುನಾಡಿನ ಸಂಸ್ಕೃತಿಯ ಚರಿತ್ರೆಯನ್ನು ಪರಿಚಯಿಸುವ ಈ ಕೃತಿಯ ಒಂದು ಅಧ್ಯಾಯದ ಹೆಸರು ತುಳುನಾಡಿನ ಇತಿಹಾಸ ಹೇಳುವ ಸತ್ಯಗಳು. ಆ ಅಧ್ಯಾಯ ತುಳುನಾಡಿನ ಸಹಬಾಳ್ವೆ ಪರಂಪರೆಯ ಕುರಿತಾಗಿದ್ದು ಸುಮಾರು 500-600 ವರ್ಷಗಳಷ್ಟು ಹಿಂದೆ ತುಳುನಾಡಿನಲ್ಲಿ ವಿವಿಧ ಧರ್ಮೀಯರು ಸಾಮರಸ್ಯದಲ್ಲಿ ಬಾಳುತ್ತಿದ್ದ ವಾಸ್ತವವನ್ನು ದಾಖಲೆ ಸಮೇತ ನಮ್ಮ ಮುಂದಿಡುತ್ತದೆ. ಇದನ್ನೆಲ್ಲ ನಾವು ಶಾಲೆಗಳಲ್ಲಿ ಕಲಿಯಬೇಕಾಗಿತ್ತು. ಆದರೆ ಕಲಿತಿಲ್ಲ ಅಥವಾ ಕಲಿಸಲಾಗಿಲ್ಲ. ಕಲಿತಿದ್ದರೆ ಆ ಇತಿಹಾಸದಿಂದ ಪಾಠ ಕಲಿಯಬಹುದಾಗಿತ್ತೇನೋ ಎಂದು ಅನಿಸುತ್ತಾ ಇದೆ.
ಇಂತಹ ಅತ್ಯಂತ ಮಹತ್ವದ ವಿಷಯಗಳು ಪಠ್ಯಗಳಲ್ಲಿ ಸೇರ್ಪಡೆಯಾಗದೆ ಉಳಿದುದು ಹೇಗೆ ಮತ್ತು ಯಾಕೆ, ಅನುದ್ದಿಷ್ಟವಾಗಿಯೇ ಅಥವಾ ಉದ್ದೇಶಪೂರ್ವಕವಾಗಿಯೇ ಎಂಬ ಪ್ರಶ್ನೆಗೆ ಬಲ್ಲವರು ಉತ್ತರಿಸಬೇಕು. ಸರಕಾರ ಇನ್ನು ಮುಂದಿನ ಪಠ್ಯಪುಸ್ತಕಗಳನ್ನಾದರೂ ಹಿಂದಿನ ಲೋಪದೋಷಗಳಿಂದ ಮುಕ್ತವಾಗಿಸಲಿ ಮತ್ತು ಕನಿಷ್ಠ ಭವಿಷ್ಯದ ಪೀಳಿಗೆಗಳಲ್ಲಾದರೂ ಸಂವಿಧಾನ, ಜಾತ್ಯತೀತತೆ, ಲಿಂಗ ಸಮಾನತೆ, ಮಾನವೀಯತೆಗಳಂತಹ ಸಕಾರಾತ್ಮಕ ವೌಲ್ಯಗಳನ್ನು ಬೆಳೆಸುವಂತಾಗಲಿ. ಈಗ ತುಳುನಾಡಿನ ಸಹಬಾಳ್ವೆ ಪರಂಪರೆಯ ದಾಖಲೆಗಳ ವಿಷಯಕ್ಕೆ ಬರೋಣ.ಅಂದಿನ ತುಳುನಾಡು ದಕ್ಷಿಣದಲ್ಲಿ ಚಂದ್ರಗಿರಿ ಹೊಳೆಯಿಂದ ಉತ್ತರದಲ್ಲಿ ಕಲ್ಯಾಣಪುರ ಹೊಳೆ ವರೆಗೂ ವಿಸ್ತರಿಸಿತ್ತು. ತುಳುನಾಡನ್ನು ಮುಖ್ಯವಾಗಿ ಆಳಿರುವ ರಾಜವಂಶಗಳೆಂದರೆ ಆಳುಪರು, ಹೊಯ್ಸಳರು ಮತ್ತು ವಿಜಯನಗರ. ಇವರ ರೀತಿನೀತಿಗಳು ಇತರ ರಾಜರುಗಳಿಗಿಂತ ವಿಶೇಷ ಭಿನ್ನವಾಗೇನೂ ಇರಲಿಲ್ಲ. ದೇಶದ ಇತರ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿದ್ದ ನೀತಿನಿಯಮಗಳು ತುಳುನಾಡಿನಲ್ಲೂ ಇದ್ದುವು. ತುಳುನಾಡಿನ ಪ್ರಭುತ್ವಗಳು ಮತ್ತು ಅವುಗಳ ಸ್ಥಳೀಯ ಪ್ರತಿನಿಗಳು ಕೋಮು ಸಾಮರಸ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು ಮಾತ್ರವಲ್ಲ ಸೌಹಾರ್ದ ಬದುಕನ್ನು ಖಾತರಿಪಡಿಸಲು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆಂದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ. ಅಂದರೆ ರಾಜಧರ್ಮವನ್ನು ಅಕ್ಷರಶಃ ಪಾಲಿಸಲಾಗುತ್ತಿತ್ತು ಎನ್ನಬಹುದು.
ಆದರೆ ವಸಾಹತುಶಾಹಿ, ರಾಷ್ಟ್ರೀಯವಾದಿ ಇತಿಹಾಸಕಾರರು ಪ್ರಾಚೀನ ಭಾರತದ ಚರಿತ್ರೆಯನ್ನು ತಮಗೆ ಅನುಕೂಲಕರವಾಗುವ ರೀತಿಯಲ್ಲಿ ದಾಖಲಿಸಿದ್ದಾರೆ. ಉದಾಹರಣೆಗೆ ದಕ್ಷಿಣ ಭಾರತವನ್ನು ಮತ್ತು ಹಿಂದೂ ಸಂಸ್ಕೃತಿಯನ್ನು ಮುಸ್ಲಿಮರ ದಾಳಿಯಿಂದ ರಕ್ಷಿಸುವುದಕ್ಕೋಸ್ಕರ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲಾಯಿತೆಂಬುದು ಅವರ ಪ್ರತಿಪಾದನೆ. ಆದರೆ ವಿದೇಶೀ ಪ್ರವಾಸಿಗರ ಕಥನಗಳಿಂದ ತಿಳಿದುಬರುವುದೆ ಬೇರೆ. ವಾಸ್ತವವಾಗಿ ವಿಜಯನಗರದ ಅರಸರ ಸೈನ್ಯದಲ್ಲಿ ಹಿಂದೂಗಳು ಮಾತ್ರವಲ್ಲ ಮುಸ್ಲಿಮ್ ಯೋಧರೂ ಇದ್ದರು. ಜನಜೀವನದಲ್ಲಿ ಸಾಮರಸ್ಯ ಇತ್ತು.ಅಂದು ತುಳುನಾಡಿನಲ್ಲಿ ಹೇಗೆ ರಾಜಧರ್ಮವನ್ನು ಪರಿಪಾಲಿಸಲಾಗುತ್ತಿತ್ತು, ಸಹಬಾಳ್ವೆಯನ್ನು ಕಾಪಾಡಲಾಗುತ್ತಿತ್ತು, ಎಲ್ಲಾ ಧರ್ಮೀಯರನ್ನೂ ಗೌರವದಿಂದ ಕಾಣಲಾಗುತ್ತಿತ್ತು ಎಂಬುದನ್ನು ತಿಳಿಯಲು ಮೇಲೆ ಪ್ರಸ್ತಾಪಿಸಿದ ಪುಸ್ತಕದಲ್ಲಿರುವ ಎರಡು ಉದಾಹರಣೆಗಳು ಸಾಕು. ಇವು ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ನಡೆದ ನೈಜ ಘಟನೆಗಳಾಗಿದ್ದು ಶಿಲಾಶಾಸನಗಳಲ್ಲಿ ದಾಖಲಿಸಲ್ಪಟ್ಟಿವೆ. ಆಗ ತುಳುನಾಡನ್ನು ಎರಡು ರಾಜ್ಯಗಳಾಗಿ ವಿಭಾಗಿಸಲಾಗಿತ್ತು. ದಕ್ಷಿಣ ಭಾಗದಲ್ಲಿ ಮಂಗಳೂರು ರಾಜ್ಯ ಇದ್ದರೆ ಉತ್ತರ ಭಾಗದಲ್ಲಿ ಬಾರ್ಕೂರು ರಾಜ್ಯ. ಪ್ರತಿರಾಜ್ಯಕ್ಕೆ ಒಬ್ಬ ರಾಜ್ಯಪಾಲನಿದ್ದ. ಅವನಿಗೆ ಒಡೆಯ ಎಂಬ ಬಿರುದು. ಮೊದಲನೆಯ ಘಟನೆ ನಡೆದ ದ್ದು ಮಂಗಳೂರು ರಾಜ್ಯದ ಮಂಗಳೂರಿನ ಕೊಡಿಯಾಲ್‌ಬೈಲು ಎಂಬಲ್ಲಿ. 1419ನೆ ಇಸವಿಯಲ್ಲಿ. ವಿಜಯನಗರದ ದೇವರಸನ ಕಾಲದಲ್ಲಿ. ಎರಡನೆ ಘಟನೆ ಬಾರ್ಕೂರು ರಾಜ್ಯದಲ್ಲಿನ ಕೋಟೇಶ್ವರದಲ್ಲಿ 1549-51ರ ಅವಯಲ್ಲಿ ಸದಾಶಿವರಾಯನ ಆಡಳಿತಾವಯಲ್ಲಿ ನಡೆದದ್ದು. ಮೊದಲನೆಯ ಘಟನೆಯನ್ನು ನೋಡೋಣ. ಆ ಕಾಲದಲ್ಲಿ ತಿಮ್ಮಣ್ಣ ಒಡೆಯ ಎಂಬಾತ ಮಂಗಳೂರು ರಾಜ್ಯದ ರಾಜ್ಯಪಾಲ ಆಗಿದ್ದ. ಅಂದು ಮಂಗಳೂರಿನಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತ ಇದ್ದುದು ನಖರ ಹಂಜಮಾನ ಎಂಬ ಮುಸ್ಲಿಂ ಸಂಸ್ಥೆ. ಒಮ್ಮೆ ತಿಮ್ಮಣ್ಣ ಒಡೆಯ ಅದ್ಯಾವುದೋ ಕಾರಣಕ್ಕೆ ನಖರ ಹಂಜಮಾನದವರ ಮೇಲೆ ಸೇನಾ ದಾಳಿ ನಡೆಸಿದ. ಅವರ ವ್ಯಾಪ್ತಿಯಲ್ಲಿದ್ದ ಕೆಲವು ಗ್ರಾಮಗಳನ್ನು ನಾಶಪಡಿಸಿದ. 5 ಮಸೀದಿಗಳನ್ನು ಧ್ವಂಸಗೊಳಿಸಿದ. ಇದು ರಾಜದೇವರಾಯನ ಗಮನಕ್ಕೆ ಬಂದಾಕ್ಷಣ ರಾಜ್ಯಪಾಲನಿಗೆ ದಾಳಿ ನಿಲ್ಲಿಸುವಂತೆ ಆದೇಶಿಸಿದ್ದಲ್ಲದೆ ಹಂಜಮಾನದವರಿಗೆ ಸೂಕ್ತ ಪರಿಹಾರ ಕೊಟ್ಟು ಅವರ ಒಕ್ಕಲುತನ ಮರಳಿಸಬೇಕೆಂದು ಆಜ್ಞಾಪಿಸಿದ. ಘಟನೆಯ ತನಿಖೆಗಾಗಿ ಚೌಟರು, ಬಂಗರು, ಅಜಿಲರು ಮೊದಲಾದ ಸ್ಥಳೀಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದ. ಸಮಿತಿ ರಾಜ್ಯಪಾಲನ ದೋಷಿತ್ವವನ್ನು ಕಂಡುಕೊಂಡಿತು. ಕೂಡಲೇ ದೇವರಾಯನು ನಿರ್ಣಯ ಕೈಗೊಂಡು ತಿಮ್ಮಣ್ಣ ಒಡೆಯ ಮಸೀದಿಗಳ ದುರಸ್ತಿ ಮತ್ತು ಹಾನಿಗೊಳಗಾದ ಹಳ್ಳಿಗಳ ಪುನರುಜ್ಜೀವನಕ್ಕೆ ಲವತ್ತಾದ ಭೂಮಿಯನ್ನು ದಾನ ನೀಡಬೇಕೆಂದು ಆದೇಶಿಸಿದ. ತಿಮ್ಮಣ್ಣ ಒಡೆಯ ತಲೆಬಾಗಿಸಿ ರಾಜಾಜ್ಞೆಯನ್ನು ಪರಿಪಾಲಿಸಿದ. ಆತ ಎಲ್ಲಾದರೂ ಇದೇರೀತಿ ಮತ್ತೊಮ್ಮೆ ದಾಳಿ ನಡೆಸಿದರೆ ಅವನಿಗೆ ಕಾಶಿಯಲ್ಲಿ ಸಾವಿರ ಗೋವುಗಳನ್ನು ಕೊಂದ ಪಾಪ ಅಂಟಿಕೊಳ್ಳಲಿದೆ ಎಂದು ಎಚ್ಚರಿಸಿರುವುದಾಗಿ ಶಿಲಾಶಾಸನ ಹೇಳುತ್ತದೆ.
ಈಗ ಬಾರ್ಕೂರು ರಾಜ್ಯದ ಕೋಟೇಶ್ವರದಲ್ಲಿ ನಡೆದಂತಹ ಘಟನೆ ಕುರಿತು ಒಂದಿಷ್ಟು ತಿಳಿಯೋಣ. ಆ ಕಾಲದಲ್ಲಿ ವಿಜಯ ನಗರದ ಅರಸನಾಗಿದ್ದವನು ಸದಾಶಿವರಾಯ. ಆತ ಏಕದಳ್‌ಖಾನ್ ಒಡೆಯ ಎಂಬ ಮುಸ್ಲಿಮನನ್ನು ರಾಜ್ಯದ ರಾಜ್ಯಪಾಲನಾಗಿ ನೇಮಿಸಿದ್ದ. ಒಮ್ಮೆ ಏನಾಯಿತೆಂದರೆ ಎಂದಿನಂತೆ ಕೋಟೇಶ್ವರದ ಕೋಟಿಲಿಂಗೇಶ್ವರ ಮಂದಿರದ ವಾರ್ಷಿಕ ಕುಡಿ ಉತ್ಸವ ನಡೆಯುತ್ತಾ ಇತ್ತು. ಆಗ ಯಾವುದೋ ಕಾರಣಕ್ಕಾಗಿ ಬ್ರಾಹ್ಮಣರು ಮತ್ತು ಶೂದ್ರರ ನಡುವೆ ಜಗಳ ಶುರುವಾಯಿತು. ಅದು ತಾರಕಕ್ಕೇರಿ ಹಲವಾರು ಜನ ಪ್ರಾಣ ಕಳೆದುಕೊಂಡರು. ಗೋವುಗಳ ಹತ್ಯೆಯೂ ನಡೆಯಿತು. ದೇವಾಲಯ ಅಪವಿತ್ರಗೊಂಡ ಪರಿಣಾಮವಾಗಿ ಅದನ್ನು ಮುಚ್ಚಲಾಯಿತು. 6 ತಿಂಗಳ ಕಾಲ ಮುಚ್ಚಿದ್ದ ಮಂದಿರವನ್ನು ಮತ್ತೆ ತೆರೆಸಿ ಯಥಾಪ್ರಕಾರ ಪೂಜೆಪುನಸ್ಕಾರ ಪುನರಾರಂಭವಾಗುವಂತೆ ಮಾಡಿದವನು ಏಕದಳ್‌ಖಾನ್ ಒಡೆಯ. ಅವನು ಸರಕಾರದ ವತಿಯಿಂದ ದೇವಳವನ್ನು ಶುದ್ಧೀಕರಿಸಿಕೊಟ್ಟದ್ದಷ್ಟೆ ಅಲ್ಲ, ಮಂದಿರಕ್ಕೆಂದು ಭೂಮಿಯನ್ನೂ ದಾನವಾಗಿ ನೀಡಿದ. ಇದೆಲ್ಲವೂ ಶಿಲಾಶಾಸನದಲ್ಲಿ ದಾಖಲಿಸಲ್ಪಟ್ಟಿದೆ.
ಇವತ್ತು ಪುತ್ತೂರು ಮಹಾಲಿಂಗೇಶ್ವರ ದೇವಳದ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಿಲ್ಲಾಕಾರಿಯವರ ಹೆಸರು ಮುದ್ರಿಸಿರುವುದಕ್ಕೆ ಕ್ಯಾತೆ ತೆಗೆದಿರುವ ತುಳುನಾಡಿನ ತಥಾಕಥಿತ ಸಂಸ್ಕೃತಿ ರಕ್ಷಕರು ತಮ್ಮ ನಾಡಿನ ನೈಜ ಪರಂಪರೆಯನ್ನು ಆದಷ್ಟು ಬೇಗನೆ ಅರಿತುಕೊಂಡರೆ ತುಳುನಾಡಿಗಷ್ಟೇ ಅಲ್ಲ, ಇಡೀ ದೇಶಕ್ಕೆ ಮಹದುಪಕಾರ ಮಾಡಿದಂತಾಗುತ್ತದೆ.