ಸೊಪ್ಪು ಮಾರುವ ಗೋಮಾತೆ ...
ಎಲ್ಲ ಗೋಪ್ರೇಮಿಗಳಿಗೆ ಇದು MUST READ
ಪ್ರೇ
ನೈಟ್ ಶಿಫ್ಟ್ ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದೆ. ಆನ್ ದಿ ವೇ ನಮ್ " ಮನ್ಸೋರೆ" ಮನೆಗೋಗಿ ಬೇಗ ಎಬ್ಬಿಸಿ ಕಾಟ ಕೊಟ್ಟು ಹೋಗಣ ಅಂತ ಮನ್ಸೋರೆ ಮನೆ ಮುಂದೆ ಗಾಡಿ ಪಾರ್ಕ್ ಮಾಡ್ತಿದ್ದೆ. ಅಲ್ಲಿ ತಳ್ಳೋಗಾಡೀಲಿ ಸೊಪ್ಪುತರಕಾರಿ ಮಾರೋ ಹೆಂಗಸೊಬ್ರು, ಸೊಪ್ಪಿಗೆ ಚಿಮುಕಿಸೋಕೆ ಅಂತ ಇಟ್ಕೊಂಡಿದ್ದ ಒಂದು ಪಾತ್ರೇಲಿ ನೀರು ತುಂಬ್ಕೊಂಡು ಒಂದ್ಕಡೆ ಓಡ್ತಿದ್ರು. ಎಲ್ಲಿಗೋಗ್ತಿದೆ ಈಯಮ್ಮ ಅಂತ ನೋಡ್ದೆ. ಅಲ್ಲೊಂದು ಕರು ಕುಡಿಯಲು ನೀರಿಲ್ಲದೆ ಬಾಯಲ್ಲಿ ನೊರೆ ಕಕ್ಕಿಕೊಂಡು ಫುಟ್ ಪಾತಲ್ಲಿ ಬಿದ್ದು ಒದ್ದಾಡ್ತಿತ್ತು. ಒಂದಷ್ಟು ಹಸುಗಳು ಅದನ್ನ ಅವುಗಳ ಮೂಗಭಾಷೇಲಿ ಮಾತಾಡಿಸ್ತ ಗಾಬರಿಯಾಗಿ ನಿಂತಿದ್ವು.
ಏನಾಯ್ತೋ ಏನೋ ಅಂತ ನಾನೂ ಹೋದೆ. ಸೊಪ್ಪು ಮಾರೋ ಹೆಂಗಸು ಬಿದ್ದ ಕರುವಿನ ಪಕ್ಕ ಪಾತ್ರೆಯಿಟ್ಟು ಹಸು ಸಾಕಿ ಕರುವನ್ನ ಹಸುಗಳ ಸಮೇತ ನೀರು ಕೊಡದೆ ಬೀದಿಗೆ ಬಿಟ್ಟವನನ್ನು ತಾರಾಮಾರಾ ಬೈಯುತ್ತ ನೀರು ಕುಡಿಸ್ತು. ನೀರು ಕುಡಿದ ಕರು ಎದ್ದೇಳಲೂ ಶಕ್ತಿಯಿಲ್ಲದೆ ಹಂಗೇ ಬಿದ್ದಿತ್ತು. ಮನ್ಸೋರೆ ಮನೆಗೋಡಿ ವೀರೂ, ಮನ್ಸೋರೆನ ಕರ್ಕೊಂಬಂದು ಕಾರ್ಪೊರೇಷನ್ ಅನಿಮಲ್ ರೆಸ್ಕ್ಯೂ ಸೆಕ್ಷನ್ ನವರಿಗೆ ಸುದ್ದಿ ಮುಟ್ಟಿಸಿ ಕರುವಿಗೇನಾದ್ರೂ ಹೆಲ್ಪ್ ಮಾಡೋಣ ಅಂತ ಮನ್ಸೋರೆ ಮನೆಗೋಡಿ ಕರೆತಂದೆ. ಅಷ್ಟರೊಳಗೆ ಚೇತರಿಸಿಕೊಂಡಿದ್ದ ಕರು ತಪ್ಪು ಹೆಜ್ಜೆ ಹಾಕ್ತ ಹಸುಗಳೊಟ್ಟಿಗೆ ದೂರದಲ್ಲೆಲ್ಲೋ ಹೋಗ್ತಿತ್ತು.. ಚೂರು ಸಮಾಧಾನ ಅನುಸ್ತು.
ತಿರುಗಿ ಸೊಪ್ಪು ಮಾರೋ ಹೆಂಗಸೆಲ್ಲಿ ಅಂತ ಅತ್ತಿತ್ತ ನೋಡ್ದೆ. ಆಕೆ ನೀರಿನ ಪಾತ್ರೆಯನ್ನ ಅಲ್ಲೇ ಬಿಟ್ಟು ಸೊಪ್ಪಿನಗಾಡಿ ತಳ್ಕೊಂಡು ಹೋಯ್ತು.. ಆಕೆ ಬಿಟ್ಟು ಹೋದ ಅಲ್ಯೂಮಿನಿಯಂ ಪಾತ್ರೆಯತ್ತ ನೋಡಿದರೆ.. ಅದು ಅಪ್ಪಟ ಮನುಷ್ಯತ್ವದಂತೆ, ಹೆಂಗಸಿನ ಪೊರೆಯುವ ಶಕ್ತಿಯಂತೆ, ಹಸು ಸಾಕಿದ ಮನುಷ್ಯನ ಕ್ರೂರತೆಗೆ ಎದುರಿಟ್ಟ ಕನ್ನಡಿಯಂತೆ, ಯಾರೆಂದರೆ ಯಾರೂ ಬರೆಯಲಾಗದ ಅದ್ಭುತ ಜೀವಕಾವ್ಯದಂತೆ ಕಾಣಿಸ್ತು..
ಈ ನೆಗ್ಗುಬಿದ್ದ ಪಾತ್ರೆ, ಅದರೊಳಗಿನ ಸೊಪ್ಪಿಗೆ ಚಿಮುಕಿಸೋ ನೀರು, ಅದನ್ನಿಟ್ಟ ಸೊಪ್ಪು ಮಾರುವ ದೇವತೆ.. ನೀರು ಕುಡಿದು ಬದುಕುಳಿದ ಕರು.. ಮೂಕಮಾತಿನ ಹಸುಗಳು.. ಮನುಷ್ಯನ ಅಪರಿಮಿತ ಕ್ರೌರ್ಯ...
ಇದಕ್ಕಿಂತ ಬೇರೆ ಕಾವ್ಯ ಬೇಕೆ..