ನೀವು ದೇಶವನ್ನು ದೋಚಲು ಸಾಧ್ಯವಿಲ್ಲ....
‘‘ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗುತ್ತಾರೆ’’ ಎಂದು 500 ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್ ಎಂಬ ಫ್ರೆಂಚ್ ಜ್ಯೋತಿಷಿ ಹೇಳಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಘೋಷಿಸಿದ್ದೇ ಪತ್ರಕರ್ತ ಎಂಜಲು ಕಾಸಿ ರೋಮಾಂಚಿತನಾದ. ಅಷ್ಟರಲ್ಲಿ ಟಿವಿಯವರೆಲ್ಲ ಬಿಜೆಪಿ ನಾಯಕರನ್ನು ಸಂಪರ್ಕಿಸಿ ‘‘ಸಾರ್, ನಮಗೂ ಅವರನ್ನು ಪರಿಚಯ ಮಾಡಿಕೊಡಿ...ನಮ್ಮಲ್ಲಿ ವಾಸ್ತು, ಭವಿಷ್ಯ ಹೇಳೋದಕ್ಕೆ ಅವರು ಬರಬಹುದೇ?...’’ ಎಂದೆಲ್ಲ ವಿಚಾರಿಸತೊಡಗಿದರು. ‘‘ಅಯ್ಯೋ ಅವನು ಸತ್ತು ಹೋಗಿದ್ದಾನೆ ಕಣ್ರೀ...ಅವನೀಗ ಇಲ್ಲ...’’ ಎಂದು ಬಿಜೆಪಿ ನಾಯಕರು ಉತ್ತರಿಸಿದರು. ‘‘ಅಲ್ಲ ಸಾರ್...ಅವರ ಶಿಷ್ಯರು ಯಾರಾದರೂ ಇದ್ದಾರೆಯೇ?’’ ಎಂದು ಟಿವಿಯವರು ಅಂಗಲಾಚತೊಡಗಿದರು.
ಪತ್ರಕರ್ತ ಎಂಜಲು ಕಾಸಿ ನೇರವಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನೇ ಭೇಟಿ ಮಾಡಿದ
‘‘ಸಾರ್...ಹೌದಾ ಸಾರ್?’’
‘‘ಸುಳ್ಳು...ಕಣ್ರೀ....ಇದು ಮೋದಿ ವಿರುದ್ಧ ಮಾಡಿರುವ ಸಂಚು...’’ ಅಮಿತ್ ಶಾ ಅಲ್ಲಗಳೆದೇ ಬಿಟ್ಟರು.
‘‘ಅಂದ್ರೆ ನಾಸ್ಟ್ರಾಡಾಮಸ್ ಮೋದಿಯ ಬಗ್ಗೆ ಹೇಳಿರುವುದು ಸುಳ್ಳ...?’’ ಕಾಸಿ ಆತಂಕದಿಂದ ಕೇಳಿದ.
‘‘ಯಾರ್ರೀ ಅದು ನಾಸ್ಟ್ರಾಡಾಮಸ್...ಜೆಎನ್‌ಯು ಪ್ರೊೆಸರ? ಅವರೆಲ್ಲ ದೇಶದ್ರೋಹಿಗಳು ಕಣ್ರೀ...’’ ಅಮಿತ್ ಶಾ ಘೋಷಿಸಿಯೇ ಬಿಟ್ಟರು.
‘‘ಹಾಗಲ್ಲ...500 ವರ್ಷಗಳ ಹಿಂದೆ ಫ್ರೆಂಚ್ ಜ್ಯೋತಿಷಿಯೊಬ್ಬರು ಮೋದಿ ಪ್ರಧಾನಿಯಾಗುತ್ತಾರೆ...ಭಾರತ ಬದಲಾವಣೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು ಎಂದು ಬಿಜೆಪಿ ನಾಯಕರೊಬ್ಬರು ಹೇಳಿಕೆ ನೀಡಿದ್ದಾರಲ್ಲ ಸಾರ್...ಅದರ ಬಗ್ಗೆ....’’ ಎಂಜಲು ಕಾಸಿ ಅಮಿತ್ ಶಾ ಅವರಿಗೆ ವಿವರಿಸಿದ.
‘‘ಓಹ್ ಹೌದೇನ್ರೀ..? ನನಗೆ ಗೊತ್ತೇ ಇರಲಿಲ್ಲ....ನಾನೇನೋ ಮತ್ತೆ ಮೋದಿ ಬಗ್ಗೆ ಟೀಕೆಗಳನ್ನು ಹಿಡಿದುಕೊಂಡು ಬಂದಿದ್ದೀರೋ ಎಂದು ತಿಳಿದುಕೊಂಡಿದ್ದೆ. ಅದಿರ್ಲಿ...ಆ ಜ್ಯೋತಿಷಿ ನನ್ನ ಬಗ್ಗೆ ಏನಾದ್ರೂ ಭವಿಷ್ಯ ಹೇಳಿದ್ದಾನಾ ಅಂತ ಕೇಳ್ಕೊಂಡು ಬನ್ರಿ....ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗುವ ಬಗ್ಗೆ, ಅಥವಾ ಭವಿಷ್ಯದಲ್ಲಿ ಪ್ರಧಾನಿಯಾಗುವ ಬಗ್ಗೆ ಏನಾದರೂ ಭವಿಷ್ಯ ಹೇಳಿದ್ದಾನ ಎನ್ನೋದು ಗೊತ್ತೇನ್ರೀ...?’’ ಅಮಿತ್ ಶಾ ಕುತೂಹಲದಿಂದ ಪ್ರಶ್ನಿಸಿದರು.
‘‘ಗೊತ್ತಿಲ್ಲ ಸಾರ್...ನಿಮ್ ಬಿಜೆಪಿಯೋರೆ ಇದನ್ನು ಹೇಳ್ತಾ ಇರೋದು...’’ ಕಾಸಿ ಹಲ್ಲು ಕಿರಿದ.
‘‘ಛೆ...ಏನಿದ್ರೂ ಮೊದಲು ನನಗೆ ತಿಳಿಸಬೇಕು ಎಂದಿದ್ದೆ. ಇರಲಿ ಬಿಡಿ....ಜೋತಿಷಿಗಳು ಹೇಳಿದ ಮೇಲೆ ಮುಗೀತು...ಅದೂ ಫಾರಿನ್ ಜೋತಿಷಿಗಳು ಹೇಳಿದ ಮೇಲೆ ಇನ್ನೇನ್ರಿ?’’ ಅಮಿತ್ ಶಾ ಕೇಳಿದರು.
‘‘ಅಲ್ಲಾ ಸಾರ್...ಅಸ್ಟ್ರಾಡಾಮಸ್ ಹೇಳಿದ್ದಾನೆ ಅನ್ನೋದು ನಿಮಗೆ ಹೇಗೆ ಗೊತ್ತಾಯಿತು?’’ ಕಾಸಿ ಚುಚ್ಚಿದ.
‘‘ನೋಡ್ರೀ...ಮೊದಲು ಕಾಂಗ್ರೆಸ್‌ನೋರು ಫಾರಿನ್ ಟೂರಿಗೆ ಹೋಗಿದ್ದಾಗಲೇ ಇದನ್ನು ಅವನು ಹೇಳಿದ್ದನಂತೆ. ಆದರೆ ಅವರೆಲ್ಲ ಈ ಸುದ್ದಿಯನ್ನು ಮುಚ್ಚಿಟ್ಟಿದ್ದರು. ಈಗ ನೋಡಿ...ನಮ್ಮ ಮೋದಿಯವರು ಫಾರಿನ್ನಿಗೆ ಅದರಲ್ಲೂ ಫ್ರಾನ್ಸಿಗೆ ಹೋದಾಗ ಆ ಜ್ಯೋತಿಷಿ ಹೇಳಿರೋದು ಬಹಿರಂಗವಾಗಿದೆ.....ಅದಿರ್ಲಿ ಇದು ನಿಮಗೆ ಹೇಗೆ ಗೊತ್ತಾಯಿತು...?’’ ಅಮಿತ್ ಶಾ ಕುತೂಹಲದಿಂದ ಕೇಳಿದರು.
‘‘ಸಾರ್ ನಿಮ್ಮ ಬಿಜೆಪಿಯ ಮುಖಂಡ ಸಚಿವ ರಿಜಿಜು ಹೇಳಿಕೆ ನೀಡಿದ್ದಾರೆ....ಪೇಪರಿನಲ್ಲಿ ಎಲ್ಲ ಬಂದಿದೆ...’’ ಕಾಸಿ ವಿವರಿಸಿದ.
ಅಮಿತ್ ಶಾ ತಕ್ಷಣ ರಿಜಿಜು ಅವರಿಗೆ ಫೋನ್ ಮಾಡಿದರು ‘‘ಅದೇನ್ರಿ...ನನಗೆ ಒಂದು ಸುದ್ದಿಯೂ ಹೇಳದೆ ಮೀಡಿಯಾದಲ್ಲಿ ಅದೇನೋ ಹೇಳಿದ್ದೀರಂತಲ್ಲ...’’
ಆ ಕಡೆಯಿಂದ ಸಚಿವರು ಸ್ಪಷ್ಟೀಕರಣ ನೀಡಿದರು ‘‘ನಾನು ಹೇಳಿದ್ದು ಅಲ್ಲ ಸಾರ್...ಸಂಘ ಪರಿವಾರದಿಂದ ಬರೆದು ಕಳುಹಿಸಿದ್ರು. ನಾನು ಅದನ್ನು ಓದಿದ್ದು ಅಷ್ಟೇ...
‘‘ನನಗೊಂದು ಕಾಪಿ ಕೊಡಬೇಕು ಎನ್ನಿಸಲಿಲ್ವಾ ನಿಮಗೆ? ಅದಿರ್ಲಿ...ಆ ಜ್ಯೋತಿಷಿ ಈಗಲೂ ಫ್ರಾನ್ಸಿನಲ್ಲಿದ್ದಾನಂತೆಯೋ...?’’
‘‘ಗೊತ್ತಿಲ್ಲ ಸಾರ್....500 ವರ್ಷಗಳ ಹಿಂದೆ ಅದೇನೋ ಹೇಳಿದ್ದಾನೆ ಅಂತ ಹೇಳ್ತಾರೆ...ಸಾರ್...’’
‘‘ಏನೋ ಹೇಳುವುದನ್ನು ಹೇಳಿದ. ನನ್ನ ಬಗ್ಗೆಯೂ ಹೇಳಬಾರದಿತ್ತ....ಸಂಘ ಪರಿವಾರದೋರು ಅದೇನು ಆಟ ನಡೆಸಿದರೂ ನಡೆಯೋದಿಲ್ಲ...ನಾನು ಹೊಸತಾಗಿ ಪ್ರೆಸ್‌ಮೀಟ್ ಕರೀತೀನಿ. ನಾಸ್ಟ್ರಾಡಾಮಸ್ ನನ್ನ ಬಗ್ಗೇನೂ ಹೇಳಿದ್ದಾನೆ...ಅದನ್ನು ನಾನು ವಿವರವಾಗಿ ಪತ್ರಿಕೆಗಳ ಮುಂದಿಡುವೆ...’’ ಎಂದು ಫೋನ್ ಕತ್ತರಿಸಿದರು.
ಕಾಸಿಗೆ ಖುಷಿಯಾಯಿತು. ‘‘ಸಾರ್ ನಾಸ್ಟ್ರಾಡಾಮಸ್ ನಿಮ್ಮ ಬಗ್ಗೆ ಏನೇನು ಹೇಳಿದ್ದಾನೆ ಸಾರ್...’’
‘‘ಇನ್ನು ಮುಂದಿನ 25 ವರ್ಷ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ಹೇಳಿದ್ದಾನೆ...’’ ಎಂದು ಅಮಿತ್ ಶಾ ಗಡ್ಡ ಸವರಿದರು.
‘‘ಇನ್ನೇನು ಹೇಳಿದ್ದಾನೆ ಸಾರ್...?’’ ಕಾಸಿ ಇನ್ನಷ್ಟು ಕೆದಕಿದ.
‘‘ಈ ದೇಶವನ್ನು ದೋಚುವ ಅವಕಾಶ ನನಗೂ ಒದಗಬಹುದು ಎಂದು ಹೇಳಿದ್ದಾನೆ....’’ ಅಮಿತ್ ಶಾ ಕಣ್ಣು ಹೊಡೆದು, ಮೀಸೆಯ ಮರೆಯಲ್ಲಿ ನಕ್ಕರು.
‘‘ಅದು ಹೇಗೆ ಸಾಧ್ಯ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಯಾಕೆ ಸಾಧ್ಯವಿಲ್ಲ...ನಾನು ಪ್ರಧಾನಿಯಾಗುವುದು ಯಾಕೆ ಸಾಧ್ಯವಿಲ್ಲ...?’’
‘‘ಪ್ರಧಾನಿಯಾಗುವುದು ಸಾಧ್ಯವಿದೆ. ಆದರೆ ದೇಶವನ್ನು ದೋಚುವುದು ಸಾಧ್ಯವಿಲ್ಲ...’’ ಕಾಸಿ ವಿವರಿಸಿದ.
‘‘ಯಾಕ್ರೀ ಸಾಧ್ಯವಿಲ್ಲ?’’ ಅಮಿತ್ ಶಾ ಅಬ್ಬರಿಸಿದರು.
‘‘ಅಷ್ಟರಲ್ಲಿ ನರೇಂದ್ರ ಮೋದೀಜಿ ಇಡೀ ದೇಶವನ್ನು ದೋಚಿ ದಿವಾಳಿ ಮಾಡಿಟ್ಟಿರುತ್ತಾರೆ ಸಾರ್. ನಿಮಗೆ ಇಲ್ಲಿ ದೋಚುವುದಕ್ಕೆ ಏನೂ ಇರುವುದಿಲ್ಲ....’’ ಎಂದವನೇ ಕಾಸಿ ಅಲ್ಲಿಂದ ಓಡತೊಡಗಿದ.
‘‘ತಥ್...ಅಡ್ವಾಣಿ ಪಕ್ಷದ ಬೇಹುಗಾರನಿರಬೇಕು....’’ ಎಂದು ಅಮಿತ್ ಶಾ ಬಾಗಿಲು ಹಾಕಿ, ಚಿಲಕ ಭದ್ರ ಮಾಡಿಕೊಂಡರು.