ವಿವಿಗಳಲ್ಲಿ ಪೂರ್ಣಾವಧಿ ಅಧ್ಯಾಪಕರಿಲ್ಲದ್ದು ಶೋಚನೀಯ
ಅಲ್ಲಮಪ್ರಭು ಬೆಟ್ಟದೂರು ಆಕ್ಷೇಪ
ಬೆಂಗಳೂರು, ಮಾ. 19: ‘ಗುಣಮಟ್ಟದ ಶಿಕ್ಷಣ ನೀಡಲು ಗುಣಮಟ್ಟದ ಶಿಕ್ಷಕರು ಹಾಗೂ ಪೂರ್ಣಾವಧಿಯ ಶಿಕ್ಷಕರು ಅಗತ್ಯ. ವಿಪರ್ಯಾಸವೆಂದರೆ ಕಾಲೇಜು, ವಿವಿಗಳಲ್ಲಿ ಪೂರ್ಣಾವಧಿ ಅಧ್ಯಾಪಕರಿಲ್ಲದ ಶೋಚನೀಯ ಸ್ಥಿತಿಯಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳಿವೆ ಎಂದು ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಲೇಖಕ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ‘ವಿಶ್ವ ವಿದ್ಯಾನಿಲಯ ಉಳಿಸಿ, ಪ್ರಜಾತಂತ್ರ ಉಳಿಸಿ’ ಶೈಕ್ಷಣಿಕ ವಿಚಾರ ಸಂಕಿರಣದಲ್ಲಿ ‘ಶಿಕ್ಷಕರ ಕೊರತೆ-ಗುಣಮಟ್ಟದ ಶಿಕ್ಷಣ’ದ ವಿಷಯದ ಕುರಿತು ಮಾತನಾಡಿದ ಅವರು, ಜಾಗತೀಕರಣದ ಪ್ರಕ್ರಿಯೆಯಲ್ಲಿ ಅಮೆರಿಕದ ಮಾದರಿಯಲ್ಲಿ ಪ್ರಾಥಮಿಕ ಹಂತದಿಂದ ವಿವಿವರೆಗೂ ಅರೆಕಾಲಿಕ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ ಎಂದು ದೂರಿದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಿಗೆ ಪೂರ್ಣಾವಧಿ ಶಿಕ್ಷಕರು ಹಾಗೂ ಅಧ್ಯಾಪಕರ ನೇಮಕಾತಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಮಪ್ರಭು ಬೆಟ್ಟದೂರು ಆಗ್ರಹಿಸಿದರು.
ಕಾನೂನು ತಜ್ಞ ಎಂ.ಎ.ಸಿರಾಜ್ ‘ವಿವಿಗಳಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಶಿಕ್ಷಣದ ತಾರತಮ್ಯ’ ವಿಷಯದ ಕುರಿತು ಮಾತನಾಡಿ, ಶಿಕ್ಷಕರ ನೇಮಕದಿಂದ ವರ್ಗಾವಣೆಯವರೆಗೂ ಭ್ರಷ್ಟಾಚಾರ ಮಿತಿ ಮೀರಿದೆ. ಡಾಕ್ಟರೇಟ್ ಪ್ರಬಂಧವನ್ನು ಹಣಕ್ಕಾಗಿ ಬರೆದುಕೊಡುವವರಿದ್ದಾರೆ. ಹೊರದೇಶಗಳಿಂದ ಬಂದು ಭ್ರಷ್ಟಾಚಾರದ ಮೂಲಕ ಶಿಕ್ಷಣ ಪದವಿ ಪಡೆದು ಅಲ್ಲಿ ಶಿಕ್ಷಕರಾದವರಿದ್ದಾರೆ. ಹೀಗಾಗಿ ನಾವು ಶ್ರೇಷ್ಠ ವ್ಯಕ್ತಿತ್ವದ ಪ್ರತಿಭಾವಂತರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ ಎಂದರು.
ಮುಕ್ತ ವಿವಿ ಇತಿಹಾಸ ಪ್ರಾಧ್ಯಾಪಕ ಡಾ.ಪೃಥ್ವಿ ದತ್ತಚಂದ್ರ ಶೋಭಿ ಮಾತನಾಡಿ, ವಿವಿಗಳ ಬಿಕ್ಕಟ್ಟು ಕೇವಲ ಇಂದಿನ ಸವಾಲುಗಳ ಹಿನ್ನೆಲೆಯಲ್ಲಿ ಮಾತ್ರ ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತಿಲ್ಲ. ಭಾರತದ ಭವಿಷ್ಯವನ್ನು ರೂಪಿಸುವ ವೇಳೆ ಶಿಕ್ಷಣ ಕ್ಷೇತ್ರವನ್ನು ಸರಿಯಾಗಿ ಕಟ್ಟಿಕೊಳ್ಳುವುದು ದೊಡ್ಡ ಸವಾಲಿದೆ ಎಂದರು.
ವಿವಿಗಳು ನಮ್ಮ ಸಮಾಜವನ್ನೇ ಪ್ರತಿಫಲಿಸುವ ರೀತಿಯ ಸಂಸ್ಥೆಗಳಾಗಬಾರದು. ಅಂದರೆ, ನಮ್ಮ ಸಮಾಜವನ್ನು ಕಾಡುವ ಅಸಮಾನತೆ, ಬಡತನ, ಜಾತಿ, ಧರ್ಮ ಭೇದ ಪುರುಷ ಪ್ರಧಾನ ವ್ಯವಸ್ಥೆ, ಇತ್ಯಾದಿ ರಾಜಕೀಯ, ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಂದ ಹೊರತಾಗಿರುವ, ಅವುಗಳಿಂದ ಮುಕ್ತಿ ಪಡೆದ ಸಂಸ್ಥೆಗಳಾಗಿ ವಿವಿಗಳು ರೂಪುಗೊಳ್ಳಬೇಕು ಎಂದರು.
ಸಮಾನತೆ, ಪರಸ್ಪರರನ್ನು ಗೌರಸುವ ನಾಗರಿಕ ಸಂಸ್ಕೃತಿ, ನಮ್ಮ ಬದುಕುಗಳನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ, ಹೊಸ ಚಿಂತನೆಗಳನ್ನು ಪೋಷಿಸುವ, ಹೊಸ ಸಾಧ್ಯತೆಗಳಿಗೆ ಉತ್ತೇಜನ ನೀಡುವ ವ್ಯವಸ್ಥೆ, ಇವುಗಳೆಲ್ಲ ಇರುವ ತಾಣಗಳಾಗಿ ವಿವಿಗಳು ರೂಪುಗೊಳ್ಳಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು.
ಸಮಿತಿ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ಎಲ್ಲರಿಗೂ ಧರ್ಮನಿರಪೇಕ್ಷ ಶಿಕ್ಷಣ ನೀಡಬೇಕೆಂದು ರಾಜಾರಾಮ್ ಮೋಹನ್‌ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಮಹಾತ್ಮ ಜ್ಯೋತಿಬಾ ಫುಲೆ ಧ್ವನಿಯೆತ್ತಿದರು. ಇಂದು ಅಂತಹ ವಾತಾವರಣ ಹಾಳಾಗುವ ಮತ್ತು ಅವರ ಕನಸುಗಳು ಕಮರಿಹೋಗುವ ಸೂಚನೆಗಳು ಕಂಡುಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಕಾರವು ಕೈಗಾರಿಕೆಗೆ 6 ಲಕ್ಷ ಕೋಟಿ ರೂ.ಗಳಷ್ಟು ಸಾಲಮನ್ನಾ ಮಾಡುತ್ತದೆ. ಆದರೆ, ಶಿಕ್ಷಣಕ್ಕೆ ಧನಸಹಾಯ ನೀಡಲು ಹಣಕಾಸು ಇಲ್ಲವೆನ್ನುತ್ತದೆ. ವಿವಿಗಳಿಗೆ ಅಗತ್ಯವಾದ ಹಣಕಾಸು ಸಹಾಯ ಒದಗಿಸದೆ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಅನುದಾನ ಕಡಿತಗೊಳಿಸಲಾಗಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
‘ದೇಶವೆಂದರೆ ಭೂಮಿ, ಬೆಟ್ಟ, ನದಿಗಳಲ್ಲ, ಜನರು’ ಎಂಬ ವಿವೇಕಾನಂದರ ಮಾತುಗಳನ್ನು ನೆನೆಯುತ್ತ, ಸಮಾನತೆ, ಭ್ರಾತೃತ್ವ, ಶಾಂತಿ ಮತ್ತು ಪ್ರಗತಿಯ ಆಶಯಗಳ ಕನಸು ಕಾಣುವುದು, ನಿಮ್ನವರ್ಗದ ಹಾಗೂ ಜನತಾಂತ್ರಿಕ ಧ್ವನಿಗಳನ್ನು ಎತ್ತಿಹಿಡಿಯುವುದು ನಿಜವಾದ ದೇಶಪ್ರೇಮ ಎಂದರು. ಸಂಕಿರಣದಲ್ಲಿ ಪ್ರೊ. ಎಸ್. ಪಾಟೀಲ್, ಸಾಹಿತಿ ಶಶಿ ದೇಶಪಾಂಡೆ, ಪ್ರೊ. ಶರತ್ ಅನಂತಮೂರ್ತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.