ನಿಮ್ಮ ಕನಸಿನ ಹಯಬುಸದ ಬೆಲೆ ಕಡಿಮೆಯಾಗುತ್ತಿದೆ, ಹೇಗೆ ಗೊತ್ತೆ?
GSX1300R ಕೊನೆಗೂ ಮೋಟಾರ್ ಬೈಕುಗಳ ದಂತಕತೆಯಂತಿರುವ ಸುಝುಕಿ ಹಯಬುಸವನ್ನು ಸ್ಥಳೀಯವಾಗಿ ಜೋಡಣೆ ಮಾಡುತ್ತಿರುವುದಾಗಿ ಸುಝುಕಿ ಮೋಟಾರ್ ಸೈಕಲ್ ಇಂಡಿಯಾ ದೃಢೀಕರಿಸಿದೆ.
ಆ ಮೂಲಕ ವೆಬ್‌ತಾಣಗಳಲ್ಲಿ ಹರಡಿದ್ದ ಊಹಾಪೋಹಗಳಿಗೆ ತಿಲಾಂಜಲಿ ಇತ್ತಿದೆ. ಸಂಸ್ಥೆಯ ಗುರುಗಾಂವ್‌ನ ಮಾನೆಸಾರ್ ಘಟಕದಲ್ಲಿ ಜೋಡಣೆ ಕಾರ್ಯ ನಡೆಯುತ್ತಿದೆ. ಸ್ಥಳೀಯವಾಗಿ ಜೋಡಣೆ ಮಾಡುತ್ತಿರುವ ಕಾರಣದಿಂದ ಜನರ ಕೈಗೆಟುಕದೆ ಇರುವ ದುಬಾರಿ ಹಯಬುಸದ ಬೆಲೆ ಕೆಳಗಿಳಿಯಲಿದೆ.
ಸುಝುಕಿ ಹಯಬುಸ ಭಾಗಶಃ ಶೇ 15ರಷ್ಟು ಅಗ್ಗವಾಗಿ ರೂ 13.57 ಲಕ್ಷಕ್ಕೆ ಸಿಗಬಹುದು. ಈ ಮುನ್ನ ಬಂದ ಮಾಡೆಲ್ ಬೆಲೆ ದೆಹಲಿಯಲ್ಲಿ ಶೋ ರೂಂ ಹೊರಗೆ ರೂ 16 ಲಕ್ಷವಿತ್ತು.
ಇಂತಹ ಉತ್ತಮ ಬೈಕ್ ಜೋಡಣೆಗೆ ಕರಾರುವಕ್ಕಾದ ಉತ್ತಮ ಪರಿಣತರ ಅಗತ್ಯವಿದೆ. ಆರಂಭದಲ್ಲಿ ಸುಝುಕಿಯ ಇನಜುಮಾ ಘಟಕದಲ್ಲಿಯೇ ಇದರ ಜೋಡಣೆಯಾಗುವ ಸುದ್ದಿಯಿತ್ತು. ಆದರೆ ಜಪಾನೀಸ್ ಸಂಸ್ಥೆ ಗುಣಮಟ್ಟ ಮತ್ತು ಮಾನದಂಡಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತ್ಯೇಕ ಲೈನ್ ಸ್ಥಾಪಿಸಿದೆ.
ಹಯಬುಸದ ಸಿಕೆಡಿ ವಿಭಾಗಗಳನ್ನು ಈಗಾಗಲೇ ದೇಶಕ್ಕೆ ಆಮದು ಮಾಡಿಕೊಳ್ಳಲಾಗಿದೆ ಮತ್ತು ಕೆಲ ತಿಂಗಳ ಹಿಂದೆಯೇ ಜೋಡಣೆ ಕಾರ್ಯವೂ ಆರಂಭವಾಗಿದೆ. ಪ್ರಾಯೋಗಿಕವಾಗಿ ಮಾನೆಸಾರ್ ಘಟಕದಲ್ಲಿ ಜೋಡಿಸಲಾದ ಹಯಬುಸಗಳನ್ನು ಈಗಾಗಲೇ ಡೀಲರುಗಳಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.