ಸಂಗೀತ ಕ್ಷೇತ್ರಕ್ಕೆ ಅರ್ಪಣಾ ಮನೋಭಾವ ಅಗತ್ಯ: ದೊಡ್ಡರಂಗೇಗೌಡ
ಬೆಂಗಳೂರು, ಮಾ. 20: ಸುಗಮ ಸಂಗೀತ ಕ್ಷೇತ್ರಕ್ಕೆ ಕಾಲಿಡುವ ಕಲಾವಿದರು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತೇವೆಂಬ ಮನೋಭಾವದಿಂದ ತಯಾರಾಗಿರಬೇಕು. ಕಾಟಾಚಾರಕ್ಕೆ ಸಂಗೀತವನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು ಅಭಿಪ್ರಾಯಿಸಿದ್ದಾರೆ. ರವಿವಾರ ನಗರದ ಕಸಾಪದಲ್ಲಿ ಪಲ್ಲವಿ ಸಾಂಸ್ಕೃತಿಕ ವೇದಿಕೆ ಟ್ರಸ್ಟ್ ಹಮ್ಮಿಕೊಳ್ಳಲಾಗಿದ್ದ ಸುಗಮ ಸಂಗೀತ ಸಮಾವೇಶ ಪ್ರಯುಕ್ತ ‘ಸುಗಮ ಸಂಗೀತದಲ್ಲಿ ಯುವ ಕಲಾವಿದರ ಮುಂದಿರುವ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಯುವ ಕಲಾವಿದರ ಅಭಿರುಚಿಗಳು ಬದಲಾಗಿವೆ. ಇನ್ನೂ ಸಂಗೀತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಹಲವರು ಸುಗಮ ಸಂಗೀತ ಕಛೇರಿ ಮಾಡಬೇಕೆಂಬ ಹಂಬಲ ಜಾಸ್ತಿಯಾಗಿದೆ. ಇದರಿಂದಾಗಿ ಸಂಗೀತದ ಮೂಲ ದಾರಿ ತಪ್ಪುತ್ತಿದೆ. ಕಲಾವಿದರಿಗೆ ವಿನಯ, ಸಭ್ಯತೆ ಅತಿಮುಖ್ಯ. ಆದರೆ ಇತ್ತೀಚಿನ ಯುವ ಕಲಾವಿದರಲ್ಲಿ ಮರೆಯಾಗುತ್ತಿದೆ. ಆದುದರಿಂದ ಬೆಳೆದಷ್ಟು ಎಲ್ಲವೂ ಕಾಳು ಆಗುವುದಿಲ್ಲ, ಕಾಳು ಆದದ್ದೆಲ್ಲಾ ಕೈ ಸೇರುವುದಿಲ್ಲ ಎಂಬುದನ್ನು ಯುವ ಕಲಾವಿದರು ಅರ್ಥ ಮಾಡಿಕೊಳ್ಳಬೇಕೆಂದರು.
ಪ್ರತಿಯೊಂದು ಕೆಲಸದಲ್ಲಿಯೂ ನಮ್ಮದು ಎಂಬುದು ಅತಿ ಮುಖ್ಯವಾದುದಾಗಿರುತ್ತದೆ. ಬೇರೆಯವರನ್ನು ಅನುಕರಣೆ ಮಾಡಬಾರದು. ಬದಲಿಗೆ ನಮ್ಮ ಸ್ವಂತಿಕೆ, ಸೃಜನಶೀಲತೆಯಿಂದ ಹುಡುಕುತ್ತಾ ಹೋಗಬೇಕು. ಅಂತಹ ಹುಡುಕಾಟದಲ್ಲಿ ಜ್ಞಾನದ ಹಸಿವು ಮತ್ತು ಅಂತರಂಗದ ಹಸಿವು ಆಗಬೇಕು. ಇಲ್ಲವಾದರೆ ನಾವು ಸಾಹಿತ್ಯ ಮತ್ತು ಸಂಗೀತವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಯೊಬ್ಬ ಹಾಡುಗಾರರು ವಚನಕಾರರನ್ನು, ದಾಸನಕಾರರನ್ನು, ಸರ್ವಜ್ಞರನ್ನು ಮತ್ತು ಜಾನಪದವನ್ನು ಅಭ್ಯಾಸ ಮಾಡಬೇಕಿದೆ. ಇಲ್ಲವಾದರೆ ಅವರು ಹಾಡುಗಾರರಾಗಲು ಸಾಧ್ಯವಿಲ್ಲ ಎಂದು ದೊಡ್ಡರಂಗೇಗೌಡ ಹೇಳಿದರು. ಗಾಯಕ ಶಂಕರ್ ಶಾನುಬೋಗ್ ಮಾತನಾಡಿ, ಸುಗಮ ಸಂಗೀತ ಮೂಲಕ ಸಮಾಜಕ್ಕೆ ಮಾಹಿತಿಯನ್ನು ನೀಡಿದ ಪುರಂದರದಾಸರು ಸುಗಮ ಸಂಗೀತದ ಪಿತಾಮಹ. ಆ ಹಿನ್ನ್ನೆಲೆಯುಳ್ಳ ಸುಗಮ ಸಂಗೀತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದರು.
ಆಧುನಿಕ ಕಾಲದಲ್ಲಿ ಸುಗಮ ಸಂಗೀತ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ, ಸರಿಯಾದ ರಾಗ, ಶೃತಿಗಳನ್ನು ಮೈಗೂಡಿಸಿಕೊಳ್ಳದ ಹಾಗೂ ಪೂರ್ವ ಸಿದ್ಧತೆ ಇಲ್ಲದೆ ಸಂಗೀತ ಕ್ಷೇತ್ರ ಪ್ರವೇಶ ಮಾಡುತ್ತಿರುವ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ಒಬ್ಬರು ಸಂಗೀತ ಕಲಾವಿದರಾಗಬೇಕಾದರೆ ಸಂಪೂರ್ಣ ಸಾಹಿತ್ಯದ ಅಧ್ಯಯನ ಮಾಡಿರಬೇಕು ಮತ್ತು ಸಂಗೀತವನ್ನು ಮೈಗೂಡಿಸಿಕೊಂಡಿರಬೇಕು. ಆದರೆ ಇತ್ತೀಚಿನ ಸುಗಮ ಸಂಗೀತ ಕಲಾವಿದರಲ್ಲಿ ಇಂತಹ ಬೆಳವಣಿಗೆ ಕಾಣುತ್ತಿಲ್ಲ ಎಂದು ಹೇಳಿದರು. ಸುಗಮ ಸಂಗೀತ ವನ್ನು ಬೆಳೆಸಲು ವಿಶೇಷವಾಗಿ ಕೆಲಸ ಮಾಡಬೇಕಾದ ಅಗತ್ಯವಿಲ್ಲ. ಹಿಂದಿನ ತಲೆಮಾರಿನ ಕಲಾವಿದರು ನಡೆಸಿಕೊಂಡು ಬಂದಿರುವುದನ್ನು ಮುಂದುವರಿಸಿದರೆ ಸಾಕು ಎಂದರು. ಶಾಸ್ತ್ರೀಯ ಸಂಗೀತ ಎಷ್ಟೇ ಎತ್ತರವಾಗಿ ಬೆಳೆದರೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದು ಮಾತ್ರ ಸುಗಮ ಸಂಗೀತವಾಗಿದೆ. ಅಂತಹ ಸುಗಮ ಸಂಗೀತ ಕ್ಷೇತ್ರಕ್ಕೆ ಕಾಲಿಡುವ ಕಲಾವಿದರು ಬದ್ಧತೆಯನ್ನು ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ನಮ್ಮ ಕ್ಷೇತ್ರಕ್ಕೆ ಅರ್ಪಿಸಿಕೊಳ್ಳುತ್ತೇವೆ ಎಂದು ಪಣ ತೊಡಬೇಕು. ಈ ಕುರಿತು ಕಲಾವಿದರು ಮೊದಲಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಇಲ್ಲವಾದರೆ ಸುಗಮ ಸಂಗೀತ ಅಳಿಸಿದ್ದುಇತಿಹಾಸದ ಪುಟಗಳು ಸೇರಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಗಾಯಕ ಪಾರ್ವತಿಸುತ, ಎಂ. ಎಸ್.ಗಿರಿಧರ್, ಹಿರಿಯ ಕಲಾವಿದ ಚಂದ್ರಶೇಖರ್ ಜೋಯಿಸ್ ಉಪಸ್ಥಿತರಿದ್ದರು.