ಇದು ಅಸಲಿಯಲ್ಲ, ಮೂಲ ಭಾರತಮಾತೆಯ ಚಿತ್ರದ ಕಳ್ಳಮಾಲು
ಭಾರತ ಮಾತೆ ಅನ್ನುತ್ತಿದ್ದಂತೆಯೇ.. ಸರ್ವಾಲಂಕಾರ ಭೂಷಿತೆಯಾದ, ಭಗವಾಧ್ವಜ ಹಿಡಿದ, ಸಿಂಹವಾಹಿನಿ ಸ್ಪುರದ್ರೂಪಿ ದೇವತೆಯ ಚಿತ್ರ ಕಣ್ಣೆದುರು ಬರುತ್ತದೆ. ಈ ಭಾರತಮಾತೆಯ ಐಕಾನ್ ಒಂದನ್ನ ಎಲ್ಲರ ಮುಂದಿಟ್ಟು " ಇದೇ ಭಾರತ ಮಾತೆ ಇದಕ್ಕೆ ಜೈ ಅನ್ನು, ಇಲ್ಲವಾದಲ್ಲಿ ನೀನು ದೇಶದ್ರೋಹಿ " ಎಂಬ ರೌಡಿಯಿಸಂ ಧಮಕಿಗಳು ಶುರುವಾಗುತ್ತವೆ. ಆಕ್ಚುಯಲಿ ನಮ್ಮ ಮುಂದಿಡಲಾಗುತ್ತಿರುವ ಭಾರತಮಾತೆಯ ಚಿತ್ರ ಅಸಲಿ ಚಿತ್ರವಲ್ಲ.. ಬದಲಾಗಿ ರವೀಂದ್ರನಾಥ್ ಠಾಗೋರ್ ರಕ್ತಸಂಬಂಧಿಯಾದ ಬೆಂಗಾಲಿ ಚಿತ್ರಕಾರ "ಅಬನೀಂದ್ರ ನಾಥ್ ಠಾಗೋರ್ " ರಚಿಸಿದ ಮೂಲ ಭಾರತಮಾತೆಯ ಚಿತ್ರದ ಇಂಪ್ರೂವ್ಡ್ ವರ್ಷನ್ ಕಳ್ಳಮಾಲು.
1905ರಲ್ಲಿ ಬಂಗಾಳ ವಿಭಜನೆಯ ಸಂದರ್ಭದಲ್ಲಿ ಸ್ವದೇಶಿ ಆಂದೋಳನದ ಹೋರಾಟಗಾರರನ್ನು ಬಂಗಾಳದಲ್ಲಿ ಪ್ರೋತ್ಸಾಹಿಸಲು ಚಿತ್ರಕಲಾವಿದ ಅಬನೀಂದ್ರ ಠಾಗೋರರು "ಬೆಂಗಾಳಿ ಮಾತೆ, ಅಥವ ಬಂಗಮಾತ" ಎಂಬ ಚಿತ್ರ ರಚಿಸುತ್ತಾರೆ. ಈ ಚಿತ್ರದಲ್ಲಿ ಸಾಧ್ವಿ ಬೆಂಗಾಳಿ ಮಹಿಳೆಯೋರ್ವಳು ನಾಲ್ಕು ಕೈಗಳಲ್ಲಿ ಆಹಾರ, ಶಿಕ್ಷಣ, ವಸ್ತ್ರ, ಶಾಂತಿ ಪ್ರತೀಕವಾಗಿ ತಪೋಮಣಿಗಳನ್ನು ಹಿಡಿದಿರುತ್ತಾಳೆ. ಈ ಚಿತ್ರದ ಮೂಲಕ ವಿಭಜನೆಯ ಅಪಾಯದಲ್ಲಿರುವ ತಾಯಿ ಬೆಂಗಾಲಿ ಮಾತೆಯನ್ನು ಬಂಗಾಳದ ಪ್ರಜೆಗಳು ರಕ್ಷಿಸುವ ಕರ್ತವ್ಯ ನಿಭಾಯಿಸಬೇಕು ಎಂಬ ವಿನಂತಿಯ ಸಂದೇಶವನ್ನು ಕಟ್ಟಿ ಕೊಟ್ಟವರು ಅಬನೀಂದ್ರನಾಥ್ ಠಾಗೋರ್. ಈ ಚಿತ್ರ ಬಂಗಾಳದ ಜನತೆಯಲ್ಲಿ ಹೋರಾಟದ ಕಿಚ್ಚು ಹಚ್ಚುವಲ್ಲಿ ಬಹುಮುಖ್ಯ ಪಾತ್ರ ವಹಿಸಿತು. ತದನಂತರ ಸ್ವಾತಂತ್ರ್ಯ ಹೋರಾಟಕ್ಕೂ ಇದು ಬಳಕೆಯಾಗಲೆಂದು ಈ ಚಿತ್ರಕ್ಕೆ ಬೆಂಗಾಲಿ ಮಾತೆ ಎಂಬ ಶೀರ್ಷಿಕೆ ತೆಗೆದು " ಭಾರತಮಾತಾ " ಎಂದು ಅಬನೀಂದ್ರನಾಥ್ ಮರುನಾಮಕರಣ ಮಾಡಿದರು.
ಚಿತ್ರವೊಂದರ ಮೂಲಕ ಭಾವನಾತ್ಮಕವಾಗಿ ಜನರನ್ನು ಒಗ್ಗೂಡಿಸಬಹುದೆಂಬ ಸುಳಿವು ಸಿಕ್ಕ ಕೂಡಲೇ ಇದೇ ಚಿತ್ರವನ್ನು ಆಧಾರವಾಗಿಟ್ಟುಕೊಂಡ ಧರ್ಮ ಹೋರಾಟಗಾರರು (ಸ್ವಾತಂತ್ರ್ಯ ಹೋರಾಟಗಾರರಲ್ಲ) ಕುರೂಪಗೊಳಿಸಿಟ್ಟರು. ಸಾಧಾರಣ ಬೆಂಗಾಲಿ ಸಾಧ್ವಿ ಮಹಿಳೆಯ ಜಾಗದಲ್ಲಿ ಕಿರೀಟ, ಕಂಠಾಭರಣ, ಸರ್ವಾಲಂಕಾರ ಭೂಷಿತೆಯನ್ನಾಗಿಸಿ, ಕೈಗೊಂದು ಭಗವಾ ಧ್ವಜ ಕೊಟ್ಟು, ಸಿಂಹದ ಮೇಲೆ ಕೂರಿಸಿ ದೇವರನ್ನಾಗಿಸಿದರು. ಅಬನೀಂದ್ರರ ಚಿತ್ರದಲ್ಲಿ ಬೆಂಗಾಲಿ ಮಾತೆಯನ್ನು ಪ್ರಜೆಗಳು ರಕ್ಷಿಸಬೇಕೆಂಬ ವಿನಂತಿಯಿದ್ದರೆ, ಈ ವಿರೂಪಗೊಂಡ ಚಿತ್ರದಲ್ಲಿ ಭಾರತಮಾತೆಯೇ ಪ್ರಜೆಗಳನ್ನು ರಕ್ಷಿಸುವ ಅಧಿಕಾರ ಪಡೆದುಕೊಂಡಳು. ಅನ್ನ, ಶಿಕ್ಷಣ, ಬಟ್ಟೆ, ಶಾಂತಿಯನ್ನು ಹಿಡಿದಿದ್ದ ನಾಲ್ಕು ಕೈಗಳಿಗೆ ನಾಲ್ಕು ವೆಪನ್ನುಗಳು ಬಂದವು. ಅಬನೀಂದ್ರರ ಚಿತ್ರದಲ್ಲಿ ನೆಲದ ಮೇಲೆ ಓಡಾಡುವ ಸಾಧಾರಣ ಮಹಿಳೆಯಿದ್ದರೆ, ಧರ್ಮಕೋರರ ಚಿತ್ರದೊಳಗೆ ಶಿಕ್ಷಿಸುವ ದೇವತೆ ಬಂದು ಕುಳಿತಳು.
ಹೀಗೆಲ್ಲ ಇರುವಾಗ ನಮಗೆ ನಮ್ಮಂತೆಯೇ, ನಮ್ಮಗಳ ತಾಯಿಯಂತೆಯೇ ಕಾಣುವ ಅಬನೀಂದ್ರ ಠಾಗೋರರ ಮಾತೆ ಸಹನಾಶೀಲತೆಯ, ತಾಳ್ಮೆಯ ಪ್ರತೀಕವಾಗಿ, ಅನ್ನವಿಟ್ಟು, ಬಟ್ಟೆ ಹಾಕಿ ಓದಿಸುವ ತಾಯಿ ಹೃದಯದವಳಾಗಿ ಮುಖ್ಯವಾಗುತ್ತಾಳೆ..
ಕೈಯಲ್ಲಿ ರಾಷ್ಟ್ರಧ್ವಜವೂ ಇಲ್ಲದ ಸಿಂಹವಾಹಿನಿ ಸಾಹುಕಾರ ಮಾತೆ.. ಉಹುಂ.. ನಮಗೆ ಯಾವ ಬಗೆಯಲ್ಲೂ ನಮ್ಮ ಸಂವೇದನೆಯನ್ನು ಮುಟ್ಟುವುದೇ ಇಲ್ಲ. ಸಾಧ್ವಿ ನೆಲದವ್ವನಿಗೆ ಶರಣು. ಅಬನೀಂದ್ರರ ಮೂಲ ಚಿತ್ರದಲ್ಲಿನ ಒರಿಜಿನಲ್ ಭಾರತವ್ವನಿಗೆ ಜೈ.
( ಫೆಸ್ಬುಕ್ ನಿಂದ.)