ಎಸ್‌ಬಿಐ ಅನ್ನು ಹಿಂದಿಕ್ಕಿದ ಭಾರತೀಯ ಸಂಸ್ಥೆ ಸರ್ಕಾರದ ಬಳಿ ಇದೆ!
ದೇಶದ ಅತಿದೊಡ್ಡ ಕೋರ್ ಬ್ಯಾಂಕಿಂಗ್ ಜಾಲ
ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಲು ಇನ್ನೆರಡೇ ತಿಂಗಳು ಬಾಕಿ. ಇದೀಗ ಎಲ್ಲಾ ಸಚಿವರ ಬಾಯಲ್ಲೂ ಸಾಧನೆಗಳ ತುತ್ತೂರಿ. ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಕೂಡಾ ತಮ್ಮ ಬೆನ್ನು ತಟ್ಟಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.
ತಮ್ಮ ಅವಧಿಯಲ್ಲಿ ದೇಶದ 20,494 ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸುವ ಮೂಲಕ ದೇಶದ ಅಗ್ರಗಣ್ಯ ಬ್ಯಾಂಕಿಂಗ್ ಸಂಸ್ಥೆಯಾದ ಭಾರತೀಯ ಸ್ಟೇಟ್ ಬ್ಯಾಂಕನ್ನು ಕೂಡಾ ಹಿಂದಿಕ್ಕಿದೆ ಎನ್ನುವುದು ಸಚಿವರ ಸಮರ್ಥನೆ. ಕೋರ್ ಬ್ಯಾಂಕಿಂಗ್ ಹೊಂದಿರುವ ಎಸ್‌ಬಿಐ ಶಾಖೆಗಳ ಸಂಖ್ಯೆ 16,333.
ಅಂಚೆ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದೇನೆ. ಏಕೆಂದರೆ ಅಂಚೆ ಡಿಜಿಟಲೀಕರಣ, ಡಿಜಿಟಲ್ ಇಂಡಿಯಾದ ಅವಿಭಾಜ್ಯ ಅಂಗ. ಮೊದಲ ಹಂತದಲ್ಲಿ ಕೋರ್ ಬ್ಯಾಂಕಿಂಗ್. ನಾನು ಅಧಿಕಾರ ವಹಿಸಿಕೊಂಡಾಗ ಕೋರ್ ಬ್ಯಾಂಕಿಂಗ್ ಸೌಲಭ್ಯ ಇದ್ದುದು ಕೇವಲ 230ರಲ್ಲಿ. ನಮ್ಮ ಗುರಿ 25 ಸಾವಿರ. ಏಪ್ರಿಲ್ ವೇಳೆಗೆ ಎಲ್ಲಾ ಅಂಚೆ ಕಚೇರಿಗಳೂ ಕೋರ್ ಬ್ಯಾಂಕಿಂಗ್ ಜಾಲ ಸೇರುತ್ತವೆ ಎನ್ನುವುದು ಅವರ ವಿಶ್ವಾಸ.
ಸಾಧನೆ ಪಟ್ಟಿ ಇಷ್ಟಕ್ಕೇ ಮುಗಿದಿಲ್ಲ. ಎರಡು ವರ್ಷದ ಹಿಂದೆ ಇದ್ದ ಅಂಚೆ ಎಟಿಎಂ ಸಂಖ್ಯೆ ಇದೀಗ 850 ದಾಟಿದೆ. ಪಾರ್ಸೆಲ್ ಆದಾಯ ಶೇಕಡ 45ರಷ್ಟು ಹೆಚ್ಚಿದೆ. ಡಿಜಿಟಲ್ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಸಮರೋಪಾದಿ ನಡೆಯುತ್ತಿದೆ. 1.10 ಲಕ್ಷ ಕಿಲೋ ಮೀಟರ್ ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಸಾಮಾನ್ಯ ಸೇವಾ ಕೇಂದ್ರಗಳು 1.57 ಲಕ್ಷ ತಲುಪಿವೆ. ಹೇಗಿದೆ ಪ್ರಗತಿ ವೇಗ?