ಭಾರತ ಮಾತೆಯ ಮೂಕ ಮನಸ್ಥಿತಿ
ಮುನಿಸಿಪಾಲಿಟಿಯವರು ನಾಯಿಗಳನ್ನು ಹೊಡೆದು ಹಾಕಿದಂತೆ ಛತ್ತೀಸ್‌ಗಡದಲ್ಲಿ ಇಬ್ಬರು ಯುವಕರನ್ನು ಮರಕ್ಕೆ ನೇತುಹಾಕಿ ಕೊಲ್ಲಲಾಗಿದೆ. ಉತ್ತರಖಂಡದಲ್ಲಿ ಪ್ರಜಾತಂತ್ರವನ್ನು ನೇಣುಹಾಕಲಾಗಿದೆ. ಪಂಜಾಬಿನ ಶಾಸನ ಸಭೆಯು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸುವ ರಾಜ್ಯಾಭಿಮಾನಿ ನಿರ್ಣಯವನ್ನು ಅಂಗೀಕರಿಸಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಹೇಳುವಂತೆ ಒಬ್ಬ ಶಾಸಕನನ್ನು ಒತ್ತಾಯಿಸಿ ಅದನ್ನು ಮಾನ್ಯ ಮಾಡದ ಅಪರಾಧಕ್ಕಾಗಿ ಸದನದಿಂದ ಅಮಾನತ್ತು ಮಾಡಲಾಗಿದೆ. ಇನ್ನುಳಿದೆಡೆ ಭಾರತ್ ಮಾತಾ ಕೀ ಜೈ ಘೋಷಿಸದವರನ್ನು ಪಾಕಿಸ್ಥಾನಕ್ಕೆ ಕಳಿಸಿ ಎಂಬ ಹುಯ್ಲು ಎದ್ದಿದೆ. (ಅಮೆರಿಕಕ್ಕೆ ಕಳಿಸುವುದಾದರೆ ಬಹಳಷ್ಟು ಭಾರತೀಯರು ಸಿದ್ಧವಿರಬಹುದು!) ಭಾರತಕ್ಕೆ ಫ್ಯಾಶಿಸಂ ಈಗಲೇ ಬರುತ್ತಿದೆಯೆಂದು ಹೇಳುವುದು ಅವಸರದ ಅಭಿಪ್ರಾಯವಾಗಬಹುದೆಂಬ ರಾಮಚಂದ್ರ ಗುಹ ಅವರ ಮಾತನ್ನು ಒಪ್ಪಬಹುದಾದರೂ ಒಂದು ಆತಂಕದ ವಾತಾವರಣವಂತೂ ಸೃಷ್ಟಿಯಾಗಿದೆ. ದೇಶದ ಅಂಧಶಕ್ತಿ ಒಂದು ವಿಕೃತ ಸ್ಥಿತಿಯನ್ನು ತಲುಪುತ್ತಿದೆ. ಯಾಕಾದರೂ ಈ ದೇವರು, ಧರ್ಮ ಇತ್ಯಾದಿ ಅಮೂರ್ತಗಳು ಇವೆಯೆಂಬ ಉತ್ತರವಿಲ್ಲದ ಪ್ರಶ್ನೆಗಳು ಉದ್ಭವಿಸುತ್ತವೆ.
ಕವಿ ರಾಮಚಂದ್ರ ಶರ್ಮರ ಕ್ರಿಸ್‌ಮಸ್ ಪ್ರತಿಮೆ ಕವಿತಾಗುಚ್ಛದ 2ನೆ ಕವಿತೆ ಲಂಡಂಡೆರಿ ಹೀಗಿದೆ:
ಹಠಾತ್ತನೆ ಬಿಸಿಲು
ತಗುಲಿ ಥಳಥಳ ಹೊಳೆದ
ಪಿಸ್ತೂಲು ಕಂಡು ಯೋಧ ಕೂಗಿದ: ನೆಲಕ್ಕೆಸೆದು ಕೈಯೆತ್ತಿ ನಿಲ್ಲು.
ಮಾತು ಕೇಳದೇ ನಡೆದ
ಹುಟ್ಟುಕಿವುಡ ಹುಡುಗನೆದೆ ಹೊಕ್ಕ ಗುಂಡು
ಬೆನ್ನಿಂದ ಹೊರಬಂತು.
ಓಡಿ ಮುಗ್ಗರಿಸಿ ಓಡೋಡಿ ಬಂದ ಮುದುಕಿ
ಕೆಂಪು ತಿರುಗುತ್ತಿದ್ದ ಹುಲ್ಲೊಳಗೆ ಹುಡುಕಿ
ಹಬ್ಬಕ್ಕೆ ಕೊಂಡು
ತಂದಿದ್ದ ನಿಗಿನಿಗಿ ಬೊಂಬೆ
ಹಿಡಿದೆದ್ದು ನಿಂತು
ತಲೆಯೆತ್ತಿದಾಗ ಸೂಜಿ ಬಿಸಿಲು
ಚುಚ್ಚಿ ಕಣ್ಣಲ್ಲಿ ನೀರೊಡೆಯಿತು,
ಅವಳ ಮುಖದ ಹತ್ತು ಕಾಲುವೆ ತುಂಬಿ ಕೋಡಿ ಹರಿಯಿತು.
ಸಂವಾದವೇ ಸಾಧ್ಯವಾಗದ ಸ್ಥಿತಿಯಲ್ಲಿ ಅಮಾಯ ಕರು ಬಲಿಯಾಗುವ ವಿಲಕ್ಷಣ ಕ್ರೂರ ಸನ್ನಿವೇಶ ಹೀಗೆ ಸೃಷ್ಟಿಯಾಗುತ್ತದೆ. ಶಕ್ತಿಯಿರುವವನಿಗೆ, ಕೈಯಲ್ಲಿ ಅಪಾ ಯಕಾರಿ ಆಯುಧಗಳಿರುವ ಮೂರ್ಖ- ಧೂರ್ತ ಶಕ್ತಿವಂತರಿಗೆ ಪ್ರಜಾತಂತ್ರವಲ್ಲ, ಯಾವ ತಂತ್ರವೂ ಬಾಸದು. ಒಂದೆರಡು ವಿಚಾರಗಳನ್ನು ಪ್ರಸ್ತಾವಿಸಬಹುದು: ಭಾರತ್ ಮಾತಾ ಕೀ ಜೈ ಎಂಬುದು ಹೇಳಿ ಕೇಳಿ ಒಂದು ಘೋಷಣೆ. ಒಂದು ಕಾಲಕ್ಕೆ ವಂದೇ ಮಾತರಂ ಎಂಬ ಘೋಷಣೆಯು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರೇರಣದಾಯಿಯಾಗಿತ್ತು. ಅದನ್ನೇ ಇಂದು ಜೈಹಿಂದ್ ಎನ್ನುತ್ತಾರೆ. ನಮ್ಮ ರಾಜಕಾರಣಿಗಳು ಏನೇ ಅಪದ್ಧ ಹೇಳಿದರೂ ಅದಕ್ಕೆ ಕಲಶವಿಟ್ಟಂತೆ ಕೊನೆಗೆ ಜೈಹಿಂದ್ ಜೈ ಕರ್ನಾಟಕ ಎಂದು ಹೇಳಿ ವಿರಮಿಸಿದಾಗ ಅವರ ಎಲ್ಲ ಮೋಸಗಳನ್ನೂ ಮರೆತು ಭರ್ಜರಿ ಕರತಾಡನವಾಗುತ್ತದೆ. ಹೀಗೆ ಮರುಳು ಮಾಡಬಲ್ಲ ಚೈತನ್ಯ ಈ ಘೋಷವಾಕ್ಯಗಳಿಗಿವೆಯೆಂಬುದು ಅವರಿಗೆ ಗೊತ್ತಿರುವುದರಿಂದಲೇ ಈ ಘೋಷಣೆಗಳು ಇನ್ನೂ ಉಳಿದಿವೆ. ಕೆಲವು ವರ್ಷಗಳ ಹಿಂದೆ ಜೈ ಶ್ರೀರಾಮ್ ಎಂಬ ಘೋಷಣೆ ದೇಶದ ಎಲ್ಲೆಡೆ ಮೊಳಗುತ್ತಿತ್ತು. ಆದರೆ ಶ್ರೀರಾಮನು ರಾಜಕೀಯಕ್ಕೆ ಅನರ್ಹನೆಂಬ ಕಾರಣಕ್ಕೋ ಏನೋ ಈಗ ಈ ಘೋಷಣೆ ಅಷ್ಟಾಗಿ ಕೇಳಿಬರುತ್ತಿಲ್ಲ. ಅದೀಗ ಪಾರಂಪರಿಕ ಸಾಧುಸಂತರ ಮತ್ತು ಕೆಲವು ಮಠಾೀಶರ ಕ್ಷೀಣದನಿಯಾಗಿ ಉಳಿದಿದೆ. ಇನ್ನು ಕೆಲವೆಡೆ ರಾಮ್‌ರಾಮ್ ಎಂಬ ಪದಗಳು ಪ್ರಚಲಿತವಿವೆ. ಜೈ ಹನುಮಾನ್ ಎನ್ನುವವರೂ ಇದ್ದಾರೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ದೇಶವನ್ನು, ಇಷ್ಟದೈವವನ್ನು ಪೂಜಿಸಬಹುದು; ಭಾವನಾತ್ಮಕವಾಗಿ ಒಂದು ಸಂಬಂಧವನ್ನು ಬೆಸೆಯಬಹುದು. ಆದರೆ ವೈಚಾರಿಕವಾಗಿ ಇವೆಲ್ಲ ಏನೂ ಅಲ್ಲ. ಯಾವುದೇ ಘೋಷಣೆಗೆ ಒಂದು ಚಾರಿತ್ರಿಕ ಪರಂಪರೆಯಿರುತ್ತದೆ. ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗೆ ಮುನ್ನ ಹತ್ತಾರು ಘೋಷಣೆಗಳಿದ್ದವು. ಸಾಮ್ರಾಟ್ ಅಶೋಕನಿಂದ ಮೊದಲ್ಗೊಂಡು ರಾಣಾಪ್ರತಾಪ, ಶಿವಾಜಿ, ಮುಂತಾದ ವರ ಮೂಲಕ ಝಾನ್ಸಿ ರಾಣಿ ಲಕ್ಷ್ಮೀ ಭಾಯಿ, ಕನ್ನಡದ ಕಿತ್ತೂರು ಚೆನ್ನಮ್ಮನ ನಂತರವೂ ಹರಿದು ಬಂದ ಅವಿರತ ಅರಸೊತ್ತಿಗೆಗಳು ವಿವಿಧ ಘೋಷಣೆಗಳನ್ನು ಬಳಸಿದ್ದವು. ಇವೆಲ್ಲವೂ ಮುಖ್ಯವಾಗಿ ಸೈನಿಕರಿಗೆ ಉತ್ಸಾಹ ತುಂಬಲು ಇದ್ದ ಸಾಧನಗಳು. ಇದರಿಂದಾಚೆಗೆ ಇವನ್ನು ಬಳಸಲು ಯತ್ನಿಸಿದರೆ ಪ್ರಯೋಜನವೇನೂ ಇಲ್ಲ; ಇನ್ನೊಬ್ಬರಿಗೆ ಹಾನಿಮಾಡಬಹುದಷ್ಟೇ. ಬಾಲಗಂಗಾಧರ ತಿಲಕರು ಗಣೇಶನ ಹಬ್ಬದ ಮೂಲಕ ಜನ ಜಾಗೃತಿಗೊಳಿಸಿದರು ಮತ್ತು ಅವರನ್ನು ಸ್ವಾತಂತ್ರ್ಯ ಹೋರಾಟದ ಸಾವಿರಾರು ತೊರೆಗಳಾಗಿ ಪರಿವರ್ತಿಸಿದರು. ದೇವರಿಗಿಂತಲೂ ದೇಶ ಮುಖ್ಯವೆಂಬಂತೆ ನಡೆದ ಈ ಕ್ರಾಂತಿಯು ನಿರೀಕ್ಷಿತ ಬದಲಾವಣೆಗೆ ಆಸರೆಯಾಯಿತು. ಸುಭಾಸರು ಆನೆ ನಡೆದದ್ದೇ ದಾರಿ ಎಂಬ ಹಾಗೆ ಒಂಟಿಯಾಗಿಯೇ ಮುಂದುವರಿದು ಹುತಾತ್ಮರಾದರು. ಇವೆಲ್ಲ ಜನರನ್ನು ಒಂದು ನಿರ್ದಿಷ್ಟ ಪ್ರೇರಣೆಗೊಳಪಡಿಸುವುದಕ್ಕೆ ಬಳಸಲ್ಪಟ್ಟವೇ ಹೊರತು ಶಾಶ್ವತ ಧಾರ್ಮಿಕ ಅಥವಾ ರಾಷ್ಟ್ರೀಯ ವೌಲ್ಯಗಳಾಗಿ ಅಲ್ಲ. ಯಾರನ್ನಾದರೂ ಭಾವನಾತ್ಮಕವಾಗಿ ಶೋಷಿಸಬೇಕಾದರೆ ಧರ್ಮ, ದೇಶ ಹೀಗೆ ಕೆಲವು ವೌಲ್ಯಗಳನ್ನು ಸೃಷ್ಟಿಸುವುದು ಒಂದು ರಾಜಕೀಯ ದಾಳದ ಕಸರತ್ತೇ ವಿನಾ ವೈಚಾರಿಕವಾದ್ದಲ್ಲ. ವಿದೇಶಗಳಲ್ಲಿ ದೇಶವನ್ನು ಪುರುಷನಾಗಿ ಗುರುತಿಸುತ್ತಾರೆ. ಭಾರತದಲ್ಲೂ ಟಾಗೋರರು ಜನಗಣಮನ ಅನಾಯಕ ಜಯ ಹೇ, ಭಾರತ ಭಾಗ್ಯ ವಿಧಾತ ಎಂದಾಗ ಅವರಿಗೆ ಭಾರತ ವೆಂದರೆ ಒಬ್ಬ ತಂದೆಯ, ಜಗದೀಶನ, ವಿರಾಟ್‌ಪುರುಷನ ಕಲ್ಪನೆಯಿದ್ದಿರಬೇಕು. ಭಾರತ ಎಂಬುದು ಭರತ ಎಂಬ ಪದದ ವಿಕಾಸ. (ಈ ದೇಶದ ಭೂಭಾಗಕ್ಕೆ ಭರತ ಖಂಡ ಎಂದು ಹೆಸರು.) ಭಾರತಿ ಎಂಬುದು ವಿದ್ಯಾದೇವತೆ ಸರಸ್ವತಿಯ ಸಂಕೇತ. ಪ್ರಾಯಃ ಬಂಕಿಮಚಂದ್ರರು ಭಾರತ ವನ್ನು ಶಾಶ್ವತವಾಗಿ ಭಾರತಿಯಾಗಿಸಿದರು. ಈ ಲಿಂಗ ಪರಿವರ್ತನೆಯ ಇತಿಹಾಸಕ್ಕೆ ಇನ್ನಷ್ಟು ಸಂಶೋಧನೆ, ಅಧ್ಯಯನ ಅಗತ್ಯ.
ಸದ್ಯ ಭಾರತ್ ಮಾತಾ ಕೀ ಜೈ ಘೋಷಣೆ ಉತ್ಸಾಹವನ್ನು ನೀಡುವುದರ ಬದಲು ವಿವಾದವನ್ನು, ಭಯವನ್ನು ಸೃಷ್ಟಿಸುತ್ತಿದೆ.ನಮ್ಮ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಅಭಿಯೋಜಕ (ಪ್ರಾಸಿಕ್ಯೂಷನ್) ಸಾಕ್ಷಿಗಳ ವಿಚಾರಣೆಯ ನಂತರ ಆರೋಪಿ ಗಳ ವಿಚಾರಣೆ ನಡೆಯುತ್ತದೆ. ಆದರೆ ಆರೋಪಿಯು ವೌನವಾಗಿರಲು ಅಂದರೆ ಉತ್ತರಿಸಲು ನಿರಾಕರಿಸುವ ಸ್ವಾತಂತ್ರ್ಯವಿದೆ. ವೌನದ ಕಾರಣಕ್ಕೆ ನ್ಯಾಯಾಲಯವು ಆತನನ್ನು ದಂಡಿಸುವುದಿಲ್ಲ. ಆದರೆ ಈಗ ಒಂದು ಭಯಾನಕ ಸನ್ನಿವೇಶ ಉಂಟಾಗುತ್ತಿದೆ. ನೀವೇನೂ ಹೇಳದೆ ಇದ್ದರೆ ನಿಮ್ಮನ್ನು ಮೂಕನೆಂದೋ ಕಿವುಡನೆಂದೋ ತಿಳಿಯದೆ, ಅಥವಾ ನಿಮಗೆ ವೌನವಾಗಿರಲು ಹಕ್ಕಿದೆಯೆಂಬುದನ್ನೂ ಗೌರವಿಸದೆ ನಿಮ್ಮ ವೌನವನ್ನೇ ಅಪರಾಧವೆಂದೋ ದಾರ್ಷ್ಟ ವೆಂದೊ ಬಗೆದು ನಿಮ್ಮನ್ನು ಜೀವಸಹಿತ/ರಹಿತವಾಗಿ ಮಣಿಸುವ ಒಂದು ಸಮಾಜವನ್ನು ನಾವು ಸೃಷ್ಟಿ ಸುತ್ತಿದ್ದೇವೆ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ನೀವು ನಮ್ಮಿಂದಿಗೆ ಇರಬೇಕು ಇಲ್ಲವೆ ಎದುರಾಳಿಗಳೊಂದಿಗೆ ಎಂಬ ಹಾಗೆ ಒಂದು ಅನಿವಾರ್ಯತೆ ಯನ್ನು ಸೃಷ್ಟಿಸಿದ್ದರು. ಹಾಗೆಯೇ ಈಗ ನೀವು ನಮ್ಮಿಂದಿಗಿದ್ದರೆ ದೇಶಭಕ್ತರು, ಇಲ್ಲವಾದರೆ ದೇಶದ್ರೋಹಿಗಳು ಎಂಬ ಹಾಗೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯ ಪರ ವಾದ ನಡೆಯುತ್ತಿದೆ. ಇದನ್ನೇ ಧಾರ್ಮಿಕವಾಗಿ ಜ್ಯಾರಿಗೊಳಿಸಿದರೆ ದೇವರ ಭಜನೆ ಮಾತ್ರ ಸಾಧ್ಯವಾದೀತು; ಧ್ಯಾನವಲ್ಲ. ಯೋಗವೆಂಬ ಅಪೂರ್ವ ಕಲ್ಪನೆಯನ್ನು ವಿಶ್ವಕ್ಕೆ ಹೇಳಿದ ಈ ದೇಶದಲ್ಲಿ ಈ ಪ್ರಜ್ಞೆ ಬೆಳೆದರೆ ಮನಸ್ಸು, ಬುದ್ಧಿಗಳ ವ್ಯವಹಾರಕ್ಕೆ ಬೆಲೆಯಿಲ್ಲದೆ, ಆಚಾರವಿಲ್ಲದ ನಾಲಗೆಯ ನೀಚಬುದ್ಧಿಯಷ್ಟೇ ದೇಶವನ್ನಾಳೀತು. ರಾಜಕೀಯ ಎಲ್ಲ ಸಿದ್ಧಾಂತಗಳನ್ನೂ ಒಡೆದು ಹಾಕುತ್ತದೆಯೆಂಬುದಕ್ಕೆ ಈ ಸಂದರ್ಭದಲ್ಲಿ ಕಾಂಗ್ರೆಸ್ ತೋರುತ್ತಿರುವ ಆತ್ಮಹತ್ಯಾ ಆಷಾಢಭೂತಿತನವೇ ಸಾಕ್ಷಿ. ಹೀಗೆ ದೇಶಭಕ್ತಿಯನ್ನು ಘೋಷಿಸುವವರೆಲ್ಲರೂ ನ್ಯಾಯವಾಗಿ ಬದುಕುತ್ತ್ತಾರೆ ಎಂದೇನಿಲ್ಲ. ನಮ್ಮ ನಡುವಣ ಅಕಾರಿಗಳು, ರಾಜಕಾರಣಿಗಳು ಹೀಗೆ ಹೇಳುತ್ತಲೇ ಅಪಾರ ಹಣವನ್ನು ಸಂಪಾದಿಸುತ್ತಾರೆ. ಮೊನ್ನೆ ಮೊನ್ನೆ ಭಾರತವನ್ನು ಬಿಟ್ಟು ಬ್ರಿಟನ್‌ಗೆ (ಪ್ರಾಯಃ ಶಾಶ್ವತವಾಗಿ) ತೆರಳಿದ ವಿಜಯ ಮಲ್ಯ ತಿರುಪತಿಗೆ ಮೂರು ಕೆಜಿ ಬಂಗಾರವನ್ನು ದಾನ ನೀಡಿದ್ದರು. ತಿರುಪತಿ ತಿಮ್ಮಪ್ಪನಿಗೆ ನಲ್ವತ್ತು ಕೋಟಿಯ ಕಿರೀಟ ಕೊಟ್ಟ ಜನಾರ್ದನ ರೆಡ್ಡಿಯೂ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿ ಭಾಷಣ ಮಾಡಿದವರೇ. (ಈ ದಾನವನ್ನು ಕೊಟ್ಟವರು ದೇಶದ್ರೋಹಿ ಗಳೆಂದಾ ಗಲಿ ಮೋಸಗಾರರೆಂದಾಗಲಿ ಯಾವುದೇ ಕಾರಣಕ್ಕೂ ದೇವರು ವಾಪಸು ಮಾಡುವುದಿಲ್ಲ!) ಇವರೆಲ್ಲರೂ ಶಾಸಕರಾಗಿ, ಸಂಸದರಾಗಿ ಜನಾನುರಾಗಿಯಾಗಿದ್ದು ತಮ್ಮ ಸಂವಿಧಾನಬದ್ಧತೆಯನ್ನು ಪ್ರದರ್ಶಿಸಿದವರೇ. ಇವರ ಹಿಂದೆ ಅಪಾರ ದೇಶಭಕ್ತರಿದ್ದರು. ಆದರೆ ಇವರ ಹಡಗುಗಳು ಮುಳುಗುತ್ತಬಂದಾಗ ಎಲ್ಲರೂ ಹಾರಿ ದಡ ಸೇರಿಕೊಂಡರು. ಇವರಷ್ಟೇ ಉಳಿದು (!) ಅಳಿದರು. ಪಲಾಯನವಾದಿ ಬುದ್ಧಿಜೀವಿಗಳು ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ ಎಂದು ವರ್ತಿಸುವುದು ಸಹಜವೇ. ಇವರಿಗೆ ಭಯವೂ ಕಾರಣ; ಲಾಭಸಾಧ್ಯತೆಗಳೂ ಕಾರಣವೇ. ಶಕ್ತ ಸೈದ್ಧಾಂತಿಕ ಧೂರ್ತರು ಗಟ್ಟಿ ನಿಲುವಿದ್ದೂ ಭಯಪೀಡಿತರಾದ ಬುದ್ಧಿಜೀವಿಗಳನ್ನು ಮಣಿಸುತ್ತಾರೆ. ನಿಧಾನವಾಗಿ ಇವರೆಲ್ಲರ ಬೆಂಬಲವು ಉಳಿದ ಕೆಲವೇ ಮಂದಿಗಳನ್ನು ನಾಶಮಾಡುವುದಕ್ಕೆ ಕಾರಣವಾಗುತ್ತದೆ. ಜರ್ಮನಿಯಲ್ಲಿ ಹಿಟ್ಲರ್ ಮಾಡಿದ್ದೂ ಇದನ್ನೇ. ಉಳಿದ ಸರ್ವಾಕಾರಿಗಳೂ ಮಾಡುವುದು ಇದನ್ನೇ. ಡಿ.ಕೆ.ಬರುವಾ ಎಂಬ ಕಾಂಗ್ರೆಸ್ ವಿಧೂಷಕ ಇಂದಿರಾ ಈಸ್ ಇಂಡಿಯಾ ಎಂದು ಕೂಗಿ ತನ್ನ ಗುಲಾಮಗಿರಿಯನ್ನು ಸಾಬೀತು ಮಾಡಿದ್ದ. ಈಗ ವೆಂಕಯ್ಯ ನಾಯ್ಡುವಿನಂತಹವರು ಮೋದಿಯವರನ್ನು ದೇವರ ಉಡುಗೊರೆ; ಎಂದು ಬಣ್ಣಿಸುತ್ತಾರೆ. ಸತ್ಯಸಾಯಿಬಾಬಾ ಸ್ವಿಸ್ ವಾಚನ್ನು ಸೃಷ್ಟಿಸಿ ಭಕ್ತರಿಗೆ ನೀಡಿದಾಗ ಎಚ್.ನರಸಿಂಹಯ್ಯನವರು ಅದನ್ನು ಪ್ರಶ್ನಿಸಿದ್ದರು. ಈಗ ದೇವರ ವರವಾದ ನಮ್ಮ ಪ್ರಧಾನಿ ಇನ್ನೊಮ್ಮೆ ವಿದೇಶಕ್ಕೆ ಹೋಗಿ ಬರುವಾಗ ಈ ಮಕ್ಕಳಿಗೆ ಸ್ವಿಸ್ ಕಪ್ಪು ಹಣ, ಲಲಿತ್ ಮೋದಿ, ವಿಜಯ ಮಲ್ಯ ಮುಂತಾದವುಗಳನ್ನು ಉಡುಗೊರೆಯಾಗಿ ತರುತ್ತಾರೆಂದು ಆಶಿಸೋಣ!
ಭಾರತ್ ಮಾತಾ ಕೀ ಜೈ ಎಲ್ಲ ಬಗೆಯ ಮೋಸ, ವಂಚನೆ, ದ್ರೋಹ, ಭ್ರಷ್ಟತೆ, ನೀಚತನ ಪೊಳ್ಳುತನ, ಮತಾಂಧತೆ ಇವನ್ನೆಲ್ಲ ಮುಚ್ಚುವ ಸಂಜೀವಿನಿಯಲ್ಲ; ಪಾಪಿ ಗಳನ್ನು ಪುನೀತರಾಗಿಸುವ ಗಂಗೆಯಲ್ಲ. ಹಾಗಿದ್ದಿದ್ದರೆ ಹೀಗೆ ಘೋಷಣೆ ಹಾಕಿದ ಎಲ್ಲ ಕೈದಿಗಳನ್ನು ಬಿಡುಗಡೆಮಾಡಬಹುದಿತ್ತು. ಎಲ್ಲವೂ ಸರಿಯಿರುವ ಭಾರತೀಯನಿಗೆ ಅದು ಭೂಷಣ. ಉಳಿದವರಿಗೆ ಅದೊಂದು ಚಕ್ರವ್ಯೆಹ; ಜೇಡರ ಬಲೆ. ಭಾರತ್ ಮಾತಾ ಕೀ ಜೈ ಎಂದು ಹೇಳಬೇಕೋ ಬೇಡವೋ ಮುಖ್ಯವಲ್ಲ. ಅದು ಸ್ವಯಿಚ್ಛೆಯಿಂದ ಪ್ರಕಟವಾದರೆ ಸಂತೋಷ. ಆದರೆ ಅದು ಕರುಳು ಬಗೆದು ಹೊರತರುವ ರಕ್ತಮಾಂಸವಲ್ಲ. ಈಗಾಗಲೇ ಈ ದೇಶದಲ್ಲಿ ನಡೆಯುವ ಅಧರ್ಮ- ಅನೀತಿಗಳನ್ನು ತಾಳಿಕೊಳ್ಳಲು ಸಾಧ್ಯವಾಗದ ತಾಯಿ ಭಾರತಿ ತನ್ನ ಹೆಸರಲ್ಲಿ ನಡೆಯುತ್ತಿರುವ ಈ ರಾಜಕೀಯದ ರಾಕ್ಷಸರ ಭಾರವನ್ನು ತಾಳಲಾರದೆ ಇನ್ನಷ್ಟು ಕುಸಿದು ಹೋಗುತ್ತಾಳೆ ಅಷ್ಟೇ!
ಭಾರತ್ ಮಾತಾ ಕೀ ಜೈ ಎಲ್ಲ ಬಗೆಯ ಮೋಸ, ವಂಚನೆ, ದ್ರೋಹ, ಭ್ರಷ್ಟತೆ, ನೀಚತನ ಪೊಳ್ಳುತನ, ಮತಾಂಧತೆ ಇವನ್ನೆಲ್ಲ ಮುಚ್ಚುವ ಸಂಜೀವಿನಿಯಲ್ಲ; ಪಾಪಿಗಳನ್ನು ಪುನೀತರಾಗಿಸುವ ಗಂಗೆಯಲ್ಲ. ಹಾಗಿದ್ದಿದ್ದರೆ ಹೀಗೆ ಘೋಷಣೆ ಹಾಕಿದ ಎಲ್ಲ ಕೈದಿಗಳನ್ನು ಬಿಡುಗಡೆಮಾಡಬಹುದಿತ್ತು.