varthabharthi


ಒರೆಗಲ್ಲು

ಬೇಕು: ವಿದ್ಯಾರ್ಥಿನಿಷ್ಠ ವೌಲ್ಯಮಾಪನ

ವಾರ್ತಾ ಭಾರತಿ : 24 Mar, 2016

ಶಿಕ್ಷಕರ ಕರ್ತವ್ಯದ ಭಾಗವೇ ಆಗಿರುವ ಪಬ್ಲಿಕ್ ಪರೀಕ್ಷಾ ಉತ್ತರಪತ್ರಿಕೆಗಳ ವೌಲ್ಯಮಾಪನ ಒಂದು ಮಹತ್ವದ ಜವಾಬ್ದಾರಿಯಾಗಿದೆ. ವೌಲ್ಯಮಾಪನಕ್ಕೆ ಸಂಬಂಸಿ ಆಕರ್ಷಕ ಸಂಭಾವನೆ, ದಿನಭತ್ತೆ, ಪ್ರಯಾಣವೆಚ್ಚ ಸಂದಾಯವಾಗುತ್ತದೆ. 2000ದ ವರೆಗೆ ವೌಲ್ಯಮಾಪನ ಕಡ್ಡಾಯವಾಗಿರಲಿಲ್ಲ. ನೇಮಕಾಜ್ಞೆ ಬಂದ ಕೂಡಲೇ ಏನಾದರೂ ಅನನುಕೂಲವಿದ್ದರೆ ತಿಳಿಸಿದರಾಯಿತು. ನಾನು 1978ರಲ್ಲಿ ವೌಲ್ಯಮಾಪನ ಕಾರ್ಯಕ್ಕೆ ಹಾಜರಾದವನು, ನಂತರ ಆ ಕಾರ್ಯದಿಂದ ನುಣುಚಿಕೊಂಡರೆ ವಿಚಾರಣೆ, ಶಿಕ್ಷೆ ಇತ್ಯಾದಿ ಇದ್ದದ್ದೆ ಎಂಬುದಕ್ಕೆ 2000 ದಿಂದ ಕೆಸ್ಮಾದಿಂದ ಪಾರಾಗಲು ವೌಲ್ಯಮಾಪನಕ್ಕೆ ಹೋಗುತ್ತಿದ್ದೆ. 1978-2000ದ ನಡುವೆ ನಾನು ವೌಲ್ಯಮಾಪನಕ್ಕೆ ಹಾಜರಾಗಿರಲಿಲ್ಲ. ಆ ವೇಳೆ ಗಂಭೀರ ಅಧ್ಯಯನ, ಬರವಣಿಗೆ ಅಥವಾ ಸಂಘಟನೆಯ ಕಾರ್ಯದಲ್ಲಿ ಗರ್ಕಾಗಿರುತ್ತಿದ್ದೆ.

ಉತ್ತರಪತ್ರಿಕೆ ಪರಿಶೀಲಿಸುವವರು ಸಹ ವೌಲ್ಯಮಾಪಕರು(ಎಇ); ಐವರು ಎಇಗಳ ಮೇಲೆ ಉಪಮುಖ್ಯವೌಲ್ಯಮಾಪಕರು; ಎಲ್ಲರಿಗಿಂತ ಮೇಲೆ ಮುಖ್ಯವೌಲ್ಯಮಾಪಕರು(ಸಿಇ). ಈ ಸಿಇಗಳು ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರಿರಬಹುದು; ಅಥವಾ ಆ ತಂಡದಲ್ಲಿರುವ ಮೂವರಲ್ಲಿ ಒಬ್ಬರಿರಬಹುದು.

ಉಪಮುಖ್ಯವೌಲ್ಯಮಾಪಕರು(ಡಿಸಿಇ) ಮತ್ತು ಸಿಇಗಳು ವೌಲ್ಯಮಾಪನದ ದಿನಾಂಕಕ್ಕಿಂತ ಎರಡು ದಿನಗಳ ಮೊದಲು ನಿರ್ದಿಷ್ಟ ವೌಲ್ಯಮಾಪನ ಕೇಂದ್ರದಲ್ಲಿ ಸಮಾವೇಶಗೊಳ್ಳುತ್ತಾರೆ. ಪ್ರಶ್ನೆಪತ್ರಿಕೆ, ಉತ್ತರದ ಕೀಲಿ ಕೈ ಮತ್ತಿತರ ಸಂಗತಿಗಳ ಬಗ್ಗೆ ಚರ್ಚಿಸಿ ವೌಲ್ಯಮಾಪನ ವೈಜ್ಞಾನಿಕ ರೀತಿಯಲ್ಲಿ ಜರಗಲು ಬೇಕಾದ ಸಿದ್ಧತೆ ಮಾಡುತ್ತಾರೆ. ಬೇರೆ ಜಿಲ್ಲೆಗಳಿಂದ ಬರುವ ಉತ್ತರಪತ್ರಿಕೆಗಳ ಕಟ್ಟುಗಳನ್ನು ‘ಡಿಕೋಡ್’ ಮಾಡುವುದೂ ಇದೇ ವೇಳೆ. ವೌಲ್ಯಮಾಪನದ ತಂಡಗಳ ಸಂಖ್ಯೆಯನ್ನೂ ಇದೇ ವೇಳೆ ನಿರ್ಧರಿಸಲಾಗುತ್ತದೆ.

ಪಿಯುಸಿ ವೌಲ್ಯಮಾಪನ ಮುಗಿದು ಫಲಿತಾಂಶ ಪ್ರಕಟವಾಗುವ ವೇಳೆ ಗೊಂದಲ ಲಾಗಾಯ್ತಿನಿಂದ ಇದ್ದದ್ದೆ. ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳೂ ಪೋಷಕರೂ ಗದ್ದಲಮಾಡಿದುದು ಆತಂಕದಿಂದ ಎನ್ನಬಹುದಾದರೂ ಇದು ಹೊಸತೇನಲ್ಲ. ಪಿಯುಸಿ ಫಲಿತಾಂಶ -ಅಲ್ಲೂ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯುವ ನಿರ್ಣಾಯಕ ಘಟ್ಟವಾದುದರಿಂದ-ಸಕಾಲದಲ್ಲಿ ವೈಜ್ಞಾನಿಕವಾಗಿ ಗೊಂದಲಕ್ಕೆಡೆಯಿಲ್ಲದಂತೆ ಪ್ರಕಟವಾಗುವಂತೆ ಪಿಯು ಶಿಕ್ಷಣ ಮಂಡಳಿ ಜತನವಹಿಸುತ್ತಾ ಬಂದಿದೆ. ಸುಮಾರು 6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುವ ಹಂತ ಇದು. ವೌಲ್ಯಮಾಪನ ಕಾರ್ಯಕ್ಕೆ ಹಾಜರಾದರೆ ಎಷ್ಟು ಚುರುಕಾಗಿ, ವೈಜ್ಞಾನಿಕವಾಗಿ ಈ ಕಾರ್ಯದ ಉಸ್ತುವಾರಿಯನ್ನು ಪಿಯು ಶಿಕ್ಷಣ ವಹಿಸುತ್ತ ಬಂದಿದೆ ಎಂಬುದು ಮನವರಿಕೆಯಾದೀತು.

ಮುಖ್ಯವಾಗಿ ವಿಜ್ಞಾನ ಸಂಯೋಜನೆಯ ಪ್ರಶ್ನೆಪತ್ರಿಕೆಗಳಲ್ಲಿ ಗೊಂದಲ ಸಹಜ. ಒಂದೋ ಪ.ಪೂ. ತರಗತಿಗಳಿಗೆ ಪಾಠ ಮಾಡದ ತಜ್ಞರು ಪತ್ರಿಕೆ ಸಿದ್ಧಪಡಿಸುತ್ತಾರೆ; ಒಂದೋ ಪಾಠ ಮಾಡಿದ ಶಿಕ್ಷಕರಲ್ಲೂ ಕೆಲವರಿಗೆ ತಮ್ಮ ಪಾಂಡಿತ್ಯವನ್ನು ಪ್ರಶ್ನೆಪತ್ರಿಕೆಯಲ್ಲಿ ಶ್ರುತಪಡಿಸುವ ಗೀಳು ಇರುತ್ತದೆ. ಪಠ್ಯ ಕ್ರಮದಿಂದ ಹೊರಗಿನ ಪ್ರಶ್ನೆಗಳನ್ನು ಕೇಳುವಂತಿಲ್ಲ; ಸಂದಿಗ್ಧತೆಗೆಡೆ ಮಾಡುವ ಪ್ರಶ್ನೆಗಳನ್ನು ಕೇಳುವಂತಿಲ್ಲ. ಪಠ್ಯಕ್ರಮದಲ್ಲಿ ನಿಗದಿ ಮಾಡಿದಂತೆ ‘ಕಷ್ಟದ ವೌಲ್ಯ’ ವನ್ನು ಪರಿಗಣಿಸಿ, ವಿವಿಧ ಪ್ರಶ್ನೆಗಳನ್ನು ಎಲ್ಲಾ ಅಧ್ಯಾಯಗಳಿಗೂ ಮಹತ್ವ ದೊರಕುವಂತೆ ಕೇಳಬೇಕಾಗುತ್ತದೆ.

 ಗಣಿತಶಾಸ್ತ್ರಕ್ಕಿಂತ ಹೆಚ್ಚು ಪ್ರಶ್ನೆಗಳು ಕನ್ನಡದಲ್ಲಿ ಕೇಳುವುದಿದೆ. ಹದಿನೈದು ವರ್ಷಗಳಾಚೆ 74-76 ಪ್ರಶ್ನೆಗಳು; ಸದ್ಯ 55 ಪ್ರಶ್ನೆಗಳು. ಈ ಪ್ರಶ್ನೆಗಳಲ್ಲಿ 1,2, 3, 4 ಅಂಕಗಳ ಪ್ರಶ್ನೆಗಳಲ್ಲದೆ 5 ಅಂಕದ ಪ್ರಶ್ನೆಗಳೂ ಇರುತ್ತವೆ. ಹೆಚ್ಚೆಚ್ಚು ಪ್ರಶ್ನೆಗಳಿದ್ದಂತೆ ವೌಲ್ಯಮಾಪಕರ ಹೊಣೆ ಹೆಚ್ಚಾಗುತ್ತದೆ. ಏಕೆಂದರೆ, ಎಲ್ಲಾ ಪುಟಗಳಡಿ ಬಂದ ಅಂಕಗಳು; ಮುಖಪುಟದ ಚೌಕುಳಿಗಳಲ್ಲಿ ನಿರ್ದಿಷ್ಟ ಕ್ರಮಸಂಖ್ಯೆಯ ಪ್ರಶ್ನೆಗಳ ಅಂಕಗಳು ಮತ್ತು ಒಟ್ಟು ಪಡೆದ ಅಂಕಗಳು-ಇವನ್ನೆಲ್ಲಾ ಕ್ರಮಬದ್ಧವಾಗಿ ನಮೂದು ಮಾಡಬೇಕಾಗುತ್ತದೆ. ಪುಟ ಮಗುಚುತ್ತಾ ಮುಖಪುಟಕ್ಕೆ ಅಂಕಗಳನ್ನು ತಂದು ನಮೂದಿಸುವಾಗ ತಪ್ಪಾಗುವುದು ಸಹಜ. ಕೆಲವೊಮ್ಮೆ ಹೊಸ ವೌಲ್ಯಮಾಪಕರಿಗೆ ಎಲ್ಲಿ ತಪ್ಪಾಗಿದೆ ಎಂದು ಶೋಸಲು ಒಂದು ಹೊತ್ತೇ ನಷ್ಟವಾಗುತ್ತದೆ. ಆಗ ತಂಡದ ಇತರರು ಸಹಾಯ ಮಾಡುವುದಿದೆ. ಡಿಸಿಇಗಳು ಒಂದು ಲಕೋಟೆಯಲ್ಲಿರುವ ಒಬ್ಬ ಎಇಯ 12 ಪತ್ರಿಕೆಗಳ ವೌಲ್ಯಮಾಪನದ ಕ್ರಮವನ್ನೂ ಅಂಕ ನೀಡಿಕೆಯ ಸಮರ್ಪಕತೆಯನ್ನೂ ಪರಿಶೀಲಿಸಬೇಕಾಗುತ್ತದೆ; ಸರಿಯಿದ್ದರಷ್ಟೇ ಎದುರು ರುಜು ಹಾಕಬಹುದು. ಡಿಸಿಇಗಳು ಒಬ್ಬೊಬ್ಬ ಎಇಯ ಒಂದೊಂದು ಲಕೋಟೆಯಲ್ಲಿ ಒಂದೊಂದು ಪತ್ರಿಕೆಯ ಅಂಕಗಳನ್ನಾದರೂ ಪರಿಶೀಲಿಸಿ, ಅಂಕ ನೀಡಿಕೆಯ ದೋಷವನ್ನು ಸರಿಪಡಿಸಬೇಕು; ಈ ಬಗ್ಗೆ ಲಿಖಿತ ದಾಖಲೆ ಇಟ್ಟುಕೊಳ್ಳಬೇಕು.

ಉತ್ತರ ಪತ್ರಿಕೆಯ ವೌಲ್ಯಮಾಪನ ವಿಷಯಾನುಸಾರ ಜರಗಬೇಕು, ನಿಜ. ಆದರೆ, ಕನ್ನಡ ಮಾತೃಭಾಷೆಯಾಗಿದ್ದು, ಹನ್ನೆರಡು ವರ್ಷ ಕಲಿತು ದ್ವಿತೀಯ ಪಿಯು ಪಬ್ಲಿಕ್ ಪರೀಕ್ಷೆಯ ಪ್ರಶ್ನೆಗಳಲ್ಲಿ ಹೊಸ ಮಾದರಿ ಪ್ರಶ್ನೆಗಳಿಗೆ (1X10) ಉತ್ತರಿಸುವಾಗ, ಪೂರ್ಣ ವಾಕ್ಯದಲ್ಲಿ ಉತ್ತರಿಸಬೇಕೆಂಬ ನಿಯಮ ಚಾಲ್ತಿಗೆ ಬಂತು. ಇದು 10-12 ವರ್ಷಗಳ ಹಿಂದಿನ ಮಾತು. ಡಿಸಿಇ ಮತ್ತು ಸಿಇಗಳು ಚರ್ಚೆ ಮಾಡುತ್ತಾ ಉತ್ತರ ಸರಿಯಿದ್ದರೂ ಪೂರ್ಣ ವಾಕ್ಯದಲ್ಲಿ ಬರೆಯದಿದ್ದರೆ ತಪ್ಪು ಗುರುತು ಹಾಕಿ ಸೊನ್ನೆ ಅಂಕ ಕೊಡಬೇಕೆಂಬ ತೀರ್ಮಾನವಾಯಿತು! ಇದು ನಮ್ಮ ಕನ್ನಡ ಶಿಕ್ಷಕರ ಕನ್ನಡ ಪ್ರೇಮ! ‘ಕನ್ನಡಪ್ರೇಮ’ ವೇ ಇರಲಿ, ಪರೀಕ್ಷೆಯಲ್ಲಿ ಉತ್ತರಿಸಿದ ವಿದ್ಯಾರ್ಥಿಯ ಹಿತಾಸಕ್ತಿಯನ್ನು ಗಮನಿಸುವುದು ಬೇಡವೇ? ವಿದ್ಯಾರ್ಥಿ, ಪರೀಕ್ಷೆಯ ವೇಳೆ ಗೊಂದಲಾತಂಕಗಳಿಗೊಳಗಾಗುವುದು ಸಹಜ. ಹೊಸ ಮಾದರಿ ಪ್ರಶ್ನೆಗಳಲ್ಲಿ ಹತ್ತೂ ಉತ್ತರ ಸರಿಯಿದ್ದು, ಪೂರ್ಣ ವಾಕ್ಯದಲ್ಲಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಹತ್ತಂಕ ನೀಡದಿದ್ದರೆ ವಿದ್ಯಾರ್ಥಿಯ ಕೊಲೆ ಮಾಡಿದಂತೆ. ಏಕೆಂದರೆ, ಈ ವಿದ್ಯಾರ್ಥಿಗಳನ್ನು ನೀವು ಇಂಗ್ಲಿಷ್‌ನಲ್ಲಿ ಅನುತ್ತೀರ್ಣ ಮಾಡಿದಂತಾಗುತ್ತದೆ. ಪಿಯುಸಿಯಲ್ಲಿ ಮೊದಲ ಭಾಗ ಎರಡು ಭಾಷೆಗಳು; ಎರಡನೆಯಭಾಗ ಆಯ್ಕೆಯ ಸಂಯೋಜನೆಗಳು. ಮೊದಲ ಭಾಗದಲ್ಲಿ 70 ಅಂಕ; ಎರಡನೆಯ ಭಾಗದಲ್ಲಿ 140 ಅಂಕ ದೊರಕಲೇ ಬೇಕು. ಮೊದಲ ಭಾಗದಲ್ಲಿ 30 + 40/ 35+35 ಅಂಕ ಬರಬಹುದು. ಒಮ್ಮೆ ಒಬ್ಬ ವಿದ್ಯಾರ್ಥಿ ಕ್ಲಿಷ್ಟವೆನಿಸುವ ಇಂಗ್ಲಿಷ್‌ಗೆ ತುಸು ಹೆಚ್ಚು ಗಮನನೀಡಿ 35 ಅಂಕ ಗಳಿಸಿದ; ಕನ್ನಡದಲ್ಲಿ 30 ಮಾತ್ರ ಗಳಿಸಿದ. ಅವನು ಅನುತ್ತೀರ್ಣನಾದ ಅನುಭವ ನನ್ನಲ್ಲಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಅಥವಾ ಕನ್ನಡ ಮಾಧ್ಯಮದ ಬಡ ಕಲಾ/ವಾಣಿಜ್ಯ ಸಂಯೋಜನೆಯ ವಿದ್ಯಾರ್ಥಿಗಳು ಭಾಷಾ ಭಾಗದಲ್ಲಿ ಕನ್ನಡವನ್ನು ಆಯ್ಕೆ ಮಾಡುತ್ತಾರೆ. ಹೆಚ್ಚಿನವರು ಇಂಗ್ಲಿಷ್‌ನಲ್ಲಿ 30 ಅಂಕ ಮಾತ್ರ ಗಳಿಸುತ್ತಾರೆ; ಅವರು ಇಂಗ್ಲಿಷ್‌ನಲ್ಲಿ ಉತ್ತೀರ್ಣರಾಗಬೇಕಾದರೆ ಕನ್ನಡದಲ್ಲಿ 40 ಅಂಕ ಸಿಗಲೇ ಬೇಕು. ಈ ಶಿಕ್ಷಕರು ಯಾವಾಗ ಮಾನವೀಯ ನೆಲೆಯಿಂದ ವಿದ್ಯಾರ್ಥಿನಿಷ್ಠರಾಗುತ್ತಾರೋ, ತಿಳಿಯದು. ಈ ಅಮಾನವೀಯ ತೀರ್ಮಾನದ ವಿರುದ್ಧ ತಾತ್ತ್ವಿಕ ಘರ್ಷಣೆಗಿಳಿದು, ಅವೈಜ್ಞಾನಿಕ ಸೂತ್ರಗಳನ್ನು ವಾಪಾಸು ತೆಗೆದುಕೊಳ್ಳುವಂತೆ ಮಾಡಿದುದು ಅಷ್ಟೇ ಅಲ್ಲ; ಉಳಿದ ಮೂರು ವೌಲ್ಯಮಾಪನ ಕೇಂದ್ರಗಳ ಮುಖ್ಯ ವೌಲ್ಯಮಾಪಕರಿಗೂ ಪೂರ್ಣವಾಕ್ಯವಿಲ್ಲದಿದ್ದರೂ ಹೊಸ ಮಾದರಿ ಪ್ರಶ್ನೆಗಳಿಗೆ ಒಂದು ಪದದಲ್ಲಿ ಉತ್ತರಿಸಿದರೂ ಅಂಕ ನೀಡುವಂತೆ ಫ್ಯಾಕ್ಸ್ ಮೂಲಕ ಸೂಚನೆ ನೀಡಲು ಒತ್ತಾಯಿಸಿದ್ದಿದೆ. ಈ ಸಂಗತಿ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಮನದಟ್ಟಾಗಬೇಕು. ವೌಲ್ಯಮಾಪನ ಕೇಂದ್ರದಲ್ಲಿ ವಿದ್ಯಾರ್ಥಿನಿಷ್ಠವಾದ ತೀರ್ಮಾನ ಸ್ವೀಕರಿಸಲು ಬಲವಂತಮಾಡುವ ನನ್ನಂಥವರು ಕೆಲವರಾದರೂ ಇರುತ್ತಾರೆ.

ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ನೀಡಬಾರದು. ಏಕೆಂದರೆ, ಭಾಷೆಯಲ್ಲಿ ಪರಿಪೂರ್ಣತೆ ಅಸಾಧ್ಯ. 1971ರಲ್ಲಿ ಮೈಸೂರು ವಿ.ವಿ.ಯ ಬಿ.ಎ. ಕನ್ನಡ ಐಚ್ಛಿಕದಲ್ಲಿ ಪ್ರಥಮ ರ್ಯಾಂಕ್ ಬಂದಾಗಲೂ ನನಗೆ ಲಭಿಸಿದ ಅಂಕ ಶೇ. 64.16 ಪಿಯುಸಿಯ ಅಂತಿಮ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ನೀಡುವುದನ್ನು ಸಿಇ ಅನುಮೋದಿಸಬೇಕು. ಸಿಇ ತನ್ನ ಕಚೇರಿ ಸಹಾಯಕರಾದ ಡಿಸಿಇಗಳಿಂದ ಅದನ್ನು ಪರಿಶೀಲಿಸಿ ಅಂಕವನ್ನು ಕಡಿಮೆ ಮಾಡಿಸುವುದುಂಟು. ನಾನು ಡಿಸಿಇ ಅಥವಾ ಸಿಇಯ ಕಚೇರಿಯ ವೌಲ್ಯಮಾಪಕನಾಗಿದ್ದಲ್ಲಿ ಸುಲಭವಾಗಿ 95ಕ್ಕೆ ಅಂಕವನ್ನು ನಿಲ್ಲಿಸುತ್ತಿದ್ದೆ. ಪತ್ರ ಬರವಣಿಗೆ, ಗಾದೆ ಮಾತಿನ ವಿಸ್ತರಣೆ, ಪ್ರಬಂಧ ರಚನೆಯಲ್ಲಿ ಕಾಗುಣಿತ ಅಥವಾ ಒಕ್ಕಣೆ ದೋಷ ಹುಡುಕಲು ಕಷ್ಟಪಡಬೇಕಾಗಿಲ್ಲ. ಹಿಂದೆ ಸರಕಾರವೇ ಮುದ್ರಿಸಿದ ಗೆಯ್ಮೆ ಪುಸ್ತಕದಲ್ಲಿ ತಂದೆಗೆ ಪತ್ರ ಬರೆಯುವಾಗ ಮೊದಲ ಒಕ್ಕಣೆಯೇ ತಪ್ಪಾಗಿತ್ತು. ನಾವು ಒಪ್ಪಲಿ, ಬಿಡಲಿ; ತಂದೆಗೆ ಬರೆಯುವ ಪತ್ರದ ಆರಂಭದ ಒಕ್ಕಣೆ ‘ತೀರ್ಥರೂಪರಲ್ಲಿ ನಿಮ್ಮ ಮಗ/ಮಗಳು ಬೇಡಿಕೊಳ್ಳುವ ಆಶೀರ್ವಾದಗಳು’ ; ಅಂತ್ಯದ ಒಕ್ಕಣೆ ಕೂಡ ‘ಇತಿ ಬೇಡುವ ಆಶೀರ್ವಾದಗಳು’. ಈ ಭಾಗ ಹೆಚ್ಚಿನ ಮಕ್ಕಳು ಸರಿಯಾಗಿ ಬರೆಯುವುದಿಲ್ಲ. ಪತ್ರ ಬರವಣಿಗೆಯಲ್ಲಿ ಒಕ್ಕಣೆಗೆ ಎರಡಂಕ; ಅಡಕಕ್ಕೆ ಎರಡಂಕ. ಈ ದೋಷಕ್ಕಾಗಿ ನಾಲ್ಕರಲ್ಲಿ ಎರಡಂಕ ಕಳೆಯಲಡ್ಡಿಯಿಲ್ಲ.

ನಾನು ಮಾತ್ರ ನನ್ನ ಕೈಕೆಳಗಿನ ವೌಲ್ಯಮಾಪಕರಿಗೆ ಕನ್ನಡದಲ್ಲಿ ನೂರಕ್ಕೆ ನೂರು ನೀಡುವುದಕ್ಕಿಂತ 25ರಿಂದ 30/30ರಿಂದ 35/35ರಿಂದ 40 ಹೀಗೆ ಅಂಕಗಳನ್ನು ಹೆಚ್ಚಿಸುವ ಬಗ್ಗೆ ತಾಕೀತು ಮಾಡುತ್ತಿದ್ದೆ. ಹೀಗೆ ಎಲ್ಲ ಶಿಕ್ಷಕರು ಮಾಡಿದ್ದಾದರೆ ಮತ್ತು ಎಲ್ಲಾ ಪತ್ರಿಕೆಗಳಲ್ಲೂ ಹೆಚ್ಚೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಾಧ್ಯ.

ವೌಲ್ಯಮಾಪನ ಕಾರ್ಯ ನಡೆಯುತ್ತಿರುವಾಗ ಸರಕಾರಿ ರಜೆ ಅನ್ವಯವಾಗುವುದಿಲ್ಲ; ಮತ್ತು ರವಿವಾರ ಅಪರಾಹ್ನದ ಪತ್ರಿಕೆಗಳ ಕಟ್ಟನ್ನು ವೌಲ್ಯಮಾಪನಕ್ಕೆ ನೀಡಲಾಗುತ್ತದೆ. ಒಎಂಆರ್ ಹಾಳೆಯಲ್ಲಿ ಪತ್ರಿಕೆಗಳ ಅಂಕವನ್ನು ಅಂಕೆಯಲ್ಲೂ ಶಬ್ದದಲ್ಲೂ ಸರಿಯಾಗಿ ನಮೂದಿಸತಕ್ಕದ್ದು. ಇಲ್ಲಿ ಯಾವ ಪ್ರಮಾದವೂ ಆಗಕೂಡದು. ಅಕಸ್ಮಾತ್ ಹಾಗೇನಾದರೂ ಆದರೆ ವೌಲ್ಯಮಾಪಕನೊಂದಿಗೆ ಡಿಸಿಇಯೂ ದಂಡನೆಗೊಳಗಾಗಬೇಕಾಗುತ್ತದೆ; ವಿಚಾರಣೆ ಎದುರಿಸಬೇಕಾಗುತ್ತದೆ. 2010ರ ವೌಲ್ಯಮಾಪನದಲ್ಲಿ ನನ್ನ ತಂಡದಲ್ಲಿದ್ದ ಶಿಕ್ಷಕರೊಬ್ಬರು (ತಾಳಮದ್ದಲೆ ಅರ್ಥದಾರಿ ಕೂಡ) ಒಎಂಆರ್ ಹಾಳೆಯಲ್ಲಿ ಅಂಕ ತಪ್ಪಾಗಿ ನಮೂದಿಸಿದ್ದರು. ನಾನು ಪ್ರಾಂಶುಪಾಲನೂ, ಅನಾರೋಗ್ಯಪೀಡಿತನೂ ಆಗಿದ್ದರೂ ವಿಚಾರಣೆಗೆ ಹಾಜರಾದೆ. ಆತ ಹಾಜರಾಗಲಿಲ್ಲ. ಆದರೆ ಪ.ಪೂ. ಶಿಕ್ಷಣ ಮಂಡಳಿ ನನ್ನಂತೆಯೇ ಅವರಿಂದಲೂ ದಂಡ ವಸೂಲು ಮಾಡಿರುತ್ತದೆ. ಶಿಕ್ಷಕರಾದವರು ಎಲ್ಲ ವೃತ್ತಿಯಂತೆ ಈ ವೃತ್ತಿಯಲ್ಲ; ಇದರಲ್ಲಿ ಮಕ್ಕಳ ಭವಿಷ್ಯ ರೂಪಣೆಯ ಹೊಣೆ ನಮ್ಮ ಮೇಲೂ ಇರುತ್ತದೆ; ವೌಲ್ಯಮಾಪನದಂಥ ಕಾರ್ಯದಲ್ಲಿ ಗರಿಷ್ಠ ನಿಷ್ಠೆ, ಕರ್ತವ್ಯ ಕ್ಷಮತೆ ನಮ್ಮಲ್ಲಿರತಕ್ಕದ್ದು-ಎಂಬುದನ್ನು ಮರೆಯಬಾರದೆಂದು ನನ್ನ ಕಳಕಳಿಯ ವಿನಂತಿ.

ಸಾಮಾನ್ಯವಾಗಿ ಪ.ಪೂ. ವೌಲ್ಯಮಾಪನ ಜರಗುವಾಗ ಕೆಲವರಾದರೂ ವಿಜ್ಞಾನ ಶಿಕ್ಷಕರು ರವಿವಾರ ವೌಲ್ಯಮಾಪನ ಕಾರ್ಯಕ್ಕೆ ಹಾಜರಾಗದೆ ಮಂಗಳೂರಿಗೆ ದೌಡಾಯಿಸಿ ಸಿಇಟಿ ತರಬೇತು ನೀಡಿ ಜೇಬು ತುಂಬಿಸಿಕೊಂಡು ಮರುದಿನ ವೌಲ್ಯಮಾಪನ ಕೇಂದ್ರದಲ್ಲಿ ಹಾಜರಾಗುವುದನ್ನು ಗಮನಿಸಿದ್ದೇನೆ. ಇಂಥ ಭಂಡತನವನ್ನು ಪ.ಪೂ. ಶಿಕ್ಷಣ ಮಂಡಳಿಯಾದರೂ ಹೇಗೆ ತಡೆಗಟ್ಟುವುದು?

ವೇತನ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಶಿಕ್ಷಕರು ವೌಲ್ಯಮಾಪನ ಕೇಂದ್ರದಲ್ಲಿ ಧರಣಿ ನಡೆಸುವುದಿದೆ. ಮಂತ್ರಿಗಳು ಶಾಸಕರು ಪೋಷಕರೊಂದಿಗೆ ಕೂಡಿ ಶಿಕ್ಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿಯಿಲ್ಲವೆಂದು ಘೋಷಿಸಿ ಖಂಡನಾ ಹೇಳಿಕೆ ನೀಡುವುದಿದೆ. ಈ ಸಾಲಿನಲ್ಲೂ ಎಸೆಸೆಲ್ಸಿ-ಪಿಯುಸಿ-ಪದವಿ ಶಿಕ್ಷಕರು ವೌಲ್ಯಮಾಪನದ ವೇಳೆ ಮುಷ್ಕರ ನಡೆಸಲಿದ್ದಾರೆ. ಹಲವಾರು ಬಾರಿ ಮನವಿ ಮಾಡಿದಾಗ್ಯೂ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಶಿಕ್ಷಕರು ಅನಿವಾರ್ಯವಾಗಿ ವೌಲ್ಯಮಾಪನವನ್ನು ಬಹಿಷ್ಕರಿಸಬೇಕಾಗುತ್ತದೆ. ಸರಕಾರಕ್ಕೆ, ಶಿಕ್ಷಣ ಇಲಾಖೆಗೆ ಪ್ರಸಂಗಾವಧಾನ ಅಗತ್ಯ; ಶಿಕ್ಷಕರಿಗೂ ವಿದ್ಯಾರ್ಥಿಗಳ ಭವಿಷ್ಯದ ಚಿಂತನೆ ಇಲ್ಲದಿಲ್ಲ. ಶಿಕ್ಷಕ ಸಂಘಟನೆಗಳೊಂದಿಗೆ ಅಕಾರಿಗಳು ಮುಖಾಮುಖಿ ನಡೆಸಿ ಸಹನೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಎಲ್ಲರಿಗೂ ಒಳಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)