ಹೊಸ ಪಕ್ಷಿ ರಾಗ: ಹೆಣ್ಣು ಮನಸಿನ ಹಲವು ಮುಖಗಳು
ಲೇಖಕಿ, ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಅವರು ‘ಸಂವಾದ’ ಮಾಸ ಪತ್ರಿಕೆಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಬರೆದ ಅಂಕಣಗಳು ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಬರೆದ ಅಂಕಣಗಳ ಸಂಗ್ರಹವೇ ‘ಹೊಸ ಪಕ್ಷಿ ರಾಗ’. ಹೆಚ್ಚಿನ ಬರಹಗಳು ಮಹಿಳಾ ಕೇಂದ್ರಿತವಾಗಿದ್ದರೂ ಅದು ತನಗೆ ಯಾವುದೇ ಒಂದು ಗೆರೆಯನ್ನು ಹಾಕಿಕೊಳ್ಳದೆ, ಮಾನವ್ಯಧ್ವನಿಯ ಹಪಹಪಿಕೆಯಾಗಿ ವಿಸ್ತರಿಸಿಕೊಳ್ಳುತ್ತದೆ. ಅಂತೆಯೇ ಧರ್ಮ, ಅರ್ಥ, ಕಾಮ, ರಾಜಕಾರಣ, ಶಿಕ್ಷಣ, ಸಮಾಜ, ಸಿನೆಮಾ ಮೊದಲಾದ ವೈವಿಧ್ಯ ವಿಷಯಗಳನ್ನು ಸಣ್ಣ ಚೌಕಟ್ಟಿನೊಳಗೆ ಹಂಚಿಕೊಳ್ಳುವ ಪ್ರಯತ್ನವನ್ನು ಲೇಖಕಿ ಮಾಡುತ್ತಾರೆ. ರಾಜಕೀಯದ ಕುರಿತಂತೆಯೂ ಯಾವ ಮಡಿಯನ್ನಿಟ್ಟುಕೊಳ್ಳದೆ ಲೇಖಕಿ ಇಲ್ಲಿ ಚರ್ಚಿಸುತ್ತಾರೆ. ‘ಪದ್ಮಪ್ರಿಯಾ’ ಲೇಖನ ವರ್ತಮಾನದ ರಾಜಕೀಯದ ಜೊತೆಗೆ, ಹೇಗೆ ಹೆಣ್ಣು ರಾಜಕೀಯದಲ್ಲಿ ಸುಲಭದ ಬಲಿಪಶುವಾಗುತ್ತಾಳೆ ಎನ್ನುವುದನ್ನು ಹೇಳುತ್ತದೆ.
ಪಂಚಪತಿವ್ರತೆಯ ಜೊತೆಗೆ ಪದ್ಮಪ್ರಿಯಾ ಅವರ ಹೆಸರನ್ನೂ ಇಟ್ಟು ಚರ್ಚಿಸುವ ಲೇಖಕಿ, ಪದ್ಮಪ್ರಿಯಾಳ ಒಳಗುದಿ, ಇಂದಿನ ಎಲ್ಲ ಹೆಣ್ಮಕ್ಕಳ ಒಳಗುದಿಯೂ ಆಗಿದೆ ಎನ್ನುವುದನ್ನು ವಿವರಿಸುತ್ತಾರೆ. ಹಾಗೆಯೇ ಅಕಾಲದಲ್ಲಿ ಬಲಿಯಾದ ತನ್ನ ಮಗು ಪೂರ್ಣನ ಕುರಿತಂತೆಯೂ ಹೃದಯಸ್ಪರ್ಶಿ ಬರಹವೊಂದು ಇಲ್ಲಿದೆ. ತನ್ನ ಮಗುವಿನ ಮೂಲಕ, ಜಗತ್ತನ್ನು ಮುಟ್ಟುವ ಪ್ರಯತ್ನವನ್ನು ಲೇಖಕಿ ಮಾಡುತ್ತಾರೆ. ನಾವು ಕಾಣದ್ದನ್ನು ಮಗು ಹೇಗೆ ಕಾಣ ಬಲ್ಲುದು ಎನ್ನುವುದನ್ನು ಈ ಲೇಖನ ಹೇಳುತ್ತದೆ.
ಸಹಜಹೆರಿಗೆಗಾಗಿ ಹೆಣ್ಣಿನ ಕೆನ್ನೆಗೆ ಬಾರಿಸಿದ ವೈದ್ಯರ ಕುರಿತಂತೆ ಎಷ್ಟು ನಿಷ್ಠುರವಾಗಿ ಲೇಖಕರು ಬರೆಯಬಲ್ಲರೋ, ನಟಿ ಮೈನಾವತಿಯ ಮಂದಹಾಸವನ್ನು ಅಷ್ಟೇ ಆತ್ಮೀಯವಾಗಿ ಓದುಗರ ಮುಂದಿಡಬಲ್ಲರು ಜ್ಯೋತಿ ಗುರುಪ್ರಸಾದ್. ಸೃಷ್ಟಿ ಪಬ್ಲಿಕೇಶನ್ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂ. ಆಸಕ್ತರು 2315 3558 ದೂರವಾಣಿಯನ್ನು ಸಂಪರ್ಕಿಸಬಹುದು.