ಕಿಶೋರ್‌ಗೆ ಕಷ್ಟಕಾಲ
ಇದೀಗ ಪ್ರಶಾಂತ್ ಕಿಶೋರ್‌ಗೆ ಕಷ್ಟಕಾಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮರುಹುಟ್ಟು ನೀಡುವ ಮತ್ತು ಪಂಜಾಬ್‌ನಲ್ಲಿ ಸಾಧನೆ ಸುಧಾರಿಸುವ ಗುರುತರ ಹೊಣೆ ಅವರ ಹೆಗಲೇರಿದೆ. ಈ ಅವಳಿ ಸವಾಲು ದಿಗಿಲು ಹುಟ್ಟಿಸುವಂಥದ್ದು. ಆದರೆ ಕಿಶೋರ್‌ಗೆ ನಿಜವಾದ ಸವಾಲು, ಅವರನ್ನು ವಾಸ್ತವ ಅಪಾಯ ಎಂದುಕೊಂಡು ಕ್ರುದ್ಧರಾಗಿರುವ ಕಾಂಗ್ರೆಸ್ ಮುಖಂಡರನ್ನು ಪಳಗಿಸುವುದು. ಕಿಶೋರ್ ಬಗ್ಗೆ ಆತಂಕಗೊಂಡಿರುವ ಮತ್ತೊಬ್ಬ ವ್ಯಕ್ತಿ ಎಂದರೆ, ಜಗ್ಗೆರ್‌ನೌಟ್ ಬುಕ್ಸ್‌ನ ಸಿಇಓ ಚಿಕಿ ಸರ್ಕಾರ್. ಏಕೆಂದರೆ ಚುನಾವಣೆ ಗೆಲ್ಲುವುದು ಹೇಗೆ ಎಂಬ ಬಗ್ಗೆ ಕಿಶೋರ್ ಅವರಲ್ಲಿ ಪುಸ್ತಕ ಬರೆಸುತ್ತಿದ್ದಾರೆ. ಸಹಜವಾಗಿಯೇ ಕಿಶೋರ್‌ಗೆ ಈ ಪುಸ್ತಕದ ಒಂದು ಸಾಲು ಬರೆಯಲು ಕೂಡಾ ಬಿಡುವಿಲ್ಲ. ನಿಗದಿತ ಗಡುವನ್ನು ಆತ ಹೇಗೆ ಪೂರೈಸುತ್ತಾರೆ ಎನ್ನುವುದೇ ಪ್ರಕಾಶಕರ ತಲೆಬಿಸಿ. ಆದರೆ ಕಿಶೋರ್ ಮತ್ತೊಂದು ಅಚ್ಚರಿ ಚಿಮ್ಮಿಸಬಹುದು. ಬಹುಶಃ ನಿಮಗೆ ತಿಳಿಯದು; ಬಿಹಾರದ ನಿತೀಶ್ ಕುಮಾರ್ ಅವರನ್ನು ಕೇಳಿ!
ಮೋದಿ ಶೋಗೆ ತಟ್ಟದ ಬ್ರಸೆಲ್ಸ್ ಬಿಸಿ
ಮಾರ್ಚ್ 30ರ ಬ್ರಸೆಲ್ಸ್ ಮೋದಿ ಪ್ರದರ್ಶನದ ಪ್ರಭೆ ಕಳೆಗುಂದದಂತೆ ಅಂಥ್ರಾಪ್‌ನ ವಜ್ರ ವ್ಯಾಪಾರಿಗಳು ಶತಾಯ ಗತಾಯ ನೋಡಿಕೊಳ್ಳಲೇಬೇಕು. ಮಂಗಳವಾರದ ಸರಣಿ ಸ್ಫೋಟದ ಬಳಿಕ, ಮೋದಿ ಕಾರ್ಯಕ್ರಮ ಸಂಯೋಜಕರಲ್ಲಿ ದ್ವಂದ್ವ ಮೂಡಿದೆ. ಸುಮಾರು ಐದು ಸಾವಿರ ಮಂದಿ ಭಾರತ ಮೂಲದ ನಾಗರಿಕರಿಂದ ಮೋದಿಗೆ ಅದ್ದೂರಿ ಸ್ವಾಗತ ವ್ಯವಸ್ಥೆ ಮಾಡಬಹುದೇ ಬೇಡವೇ ಎಂಬ ದ್ವಂದ್ವ ಸಂಘಟಕರನ್ನು ಕಾಡುತ್ತಿದೆ. ಆದರೆ 2014ರ ಮೋದಿ ಫಾರ್ ಪಿಎಂ ಆಂದೋಲನದ ನಿರ್ದೇಶಕ ಮನೋಜ್ ಲದ್ವಾ, ಬಾಂಬ್‌ಗಿಂತ ಮೊದಲೇ ಬ್ರಸ್ಸೆಲ್ಸ್ ನಲ್ಲಿ ಬಂದಿಳಿದಿದ್ದಾರೆ. ಅಲ್ಲೇ ಬೀಡುಬಿಟ್ಟಿರುವ ಅವರು, ಮೋದಿ ಕಾರ್ಯಕ್ರಮ ನಿಗದಿಯಂತೆ ನಡೆಯುತ್ತಿದೆ ಎಂದು ಖಚಿತಪಡಿಸಿದ್ದಾರೆ. ಅಮೆರಿಕ ಭೇಟಿಯ ಸಂದರ್ಭದಲ್ಲಿ ಮೋದಿ ಕೆಲ ದಿನ ಬ್ರಸೆಲ್ಸ್‌ನಲ್ಲಿ ತಂಗುವ ಕಾರ್ಯಕ್ರಮವಿದೆ. ಬೆಲ್ಜಿಯಂನ ವಾಣಿಜ್ಯ ರಾಜಧಾನಿ ಆಂಥ್ರೂಪ್ ನಗರ ಬ್ರಸೆಲ್ಸ್‌ನಿಂದ 50 ಕಿಲೋಮೀಟರ್ ದೂರದಲ್ಲಿದ್ದು, ಭಾರತೀಯ ಮೂಲದವರ ಜತೆ ಮೋದಿ ನಡೆಸುವ ಸಂವಾದದ ಕೇಂದ್ರಸ್ಥಾನ. ಈ ಪೈಕಿ ಬಹುತೇಕ ಮಂದಿ ಗುಜರಾತ್ ಮೂಲದವರು. ಬೆಲ್ಜಿಯಂನಲ್ಲಿರುವ ಗುಜರಾತಿ ಭಾಷಿಗರ ಜತೆ ಆರಾಮದಾಯಕವಾಗಿ ಕಳೆಯಲು ಹಲವು ಕಾರಣಗಳಿವೆ. ಭಾರತದ ಪಾಕಪ್ರಕಾರದ ಅವಿಬಾಜ್ಯ ಅಂಗ ಎನಿಸಿದ ಜೈನ್ ಖಾದ್ಯಗಳನ್ನು ಮೋದಿಗಾಗಿ ಅಲ್ಲಿನ ಮಂದಿ ಸಿದ್ಧಪಡಿಸುತ್ತಿದ್ದಾರೆ. ಅದು ಕೂಡಾ ಐಷಾರಾಮಿ ರೆಸ್ಟುರಾಗಳಲ್ಲಿ. ಉಗ್ರರು ಬ್ರಸೆಲ್ಸ್ ನಗರವನ್ನು ನಡುಗಿಸಿರಬಹುದು. ಆದರೆ ಮೋದಿ ಶೋ ನಡುಗಿಸಲು ಸಾಧ್ಯವೇ?
ತ್ರಿವೇದಿ ಆನಂದ ಅನಂತ
ನಾರದ ಹಗರಣ ಪಶ್ಚಿಮ ಬಂಗಾಳದ ಚುನಾವಣಾ ಭೂತವಾಗಿ ಕಾಡತ್ತಿದೆ. ವ್ಯಾಪಾರಿಯ ಸೋಗಿನಲ್ಲಿ ಬಂದ ಪತ್ರಕರ್ತನಿಂದ ಸುಮಾರು 70 ಲಕ್ಷ ರೂಪಾಯಿ ಕಬಳಿಸಿದ ತಮ್ಮ ನಿಕಟವರ್ತಿಗಳನ್ನು ಸಮರ್ಥಿಸಿಕೊಳ್ಳುವುದು ಮಮತಾ ಬ್ಯಾನರ್ಜಿಗೆ ಕಷ್ಟ. ಆದರೆ ಈ ರಾಡಿಯಿಂದ ಹೊರಗುಳಿದ ತೃಣಮೂಲ ಕಾಂಗ್ರೆಸ್ ನಾಯಕರೆಂದರೆ ಕೇಂದ್ರದ ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ. ವ್ಯಾಪಾರಿಯ ವೇಷದಲ್ಲಿ ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯೆಲ್ಸ್ ತ್ರಿವೇದಿಯವರನ್ನು ಕೋಲ್ಕತ್ತಾದಲ್ಲಿ ಭೇಟಿಗೆ ಮುಂದಾದಾಗ, ಹಣದ ವಿಷಯದಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ತಿರಸ್ಕರಿಸಿ, ಭೇಟಿ ನಿರಾಕರಿಸಿದ್ದರು. ಈ ಕುಟುಕು ಕಾರ್ಯಾಚರಣೆ ಬಹಿರಂಗಗೊಳಿಸುವ ಸಂದರ್ಭದಲ್ಲಿ ಸ್ಯಾಮ್ಯುಯೆಲ್ಸ್, ತ್ರಿವೇದಿಗೆ ಕ್ಲೀನ್ ಚಿಟ್ ನೀಡಿದ್ದರು. ಇದಾದ ಬಳಿಕ ತ್ರಿವೇದಿ ತಮ್ಮ ಮಾಧ್ಯಮ ಮಿತ್ರರಲ್ಲಿ, ಇದೀಗ ತಮ್ಮನ್ನು ಪಕ್ಷದ ಅತ್ಯಂತ ಸ್ವಚ್ಛ ನಾಯಕ ಎಂದು ಗುರುತಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಮಮತಾ ಹಾಗೂ ತ್ರಿವೇದಿ ಮಧ್ಯೆ ಒಂದಷ್ಟು ತಿಕ್ಕಾಟ ನಡೆಯುತ್ತಲೇ ಇದೆ. ಇದೀಗ ತ್ರಿವೇದಿ ನಡತೆ ಪ್ರಮಾಣಪತ್ರ ಪಡೆದಿರುವುದರಿಂದ ಬಹುಶಃ ಅದು ಬದಲಾಗಬಹುದು!
ಹಿಮಾಚಲಕ್ಕೆ ಯಾರು ದೊರೆ?
ಬಿಸಿಸಿಐ ಅಧ್ಯಕ್ಷ ಗಾದಿ ಅತ್ಯಂತ ಪ್ರಭಾವಿ ಹುದ್ದೆ ಎಂದು ಪರಿಗಣಿಸಲಾಗುತ್ತಿದೆ ಕೆಲವೊಮ್ಮೆ ಸರಕಾರದ ಸಚಿವರಿಗಿಂತಲೂ ಪ್ರಭಾವಿ. ಆದರೆ ಬಿಸಿಸಿಐ ಕಾರ್ಯದರ್ಶಿ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್, ತಮ್ಮ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಕ್ಷಮೆ ಕೋರುವ ಪರಿಸ್ಥಿತಿ ಬಂತು. ಧರ್ಮಶಾಲಾದಲ್ಲಿ ನಡೆಯ ಭೇಟಿದ್ದ ಭಾರತ-ಪಾಕಿಸ್ತಾನ ಪಂದ್ಯ ಸ್ಥಳಾಂತರಗೊಂಡದ್ದು ಠಾಕೂರ್ ಅವರ ಮುಖಕ್ಕೆ ಮಸಿ. ಕಾಂಗ್ರೆಸ್ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಚತುರ ನಡೆಯಿಂದ ಹೀಗಾಯಿತು ಎಂದು ಕೆಲವರು ಹೇಳುತ್ತಾರೆ. ಪಾಕಿಸ್ತಾನ ತಂಡದ ಭೇಟಿ ವಿರುದ್ಧ ವ್ಯವಸ್ಥಿತ ಪ್ರಚಾರ ನಡೆಸಿ ಗದ್ದಲ ಎಬ್ಬಿಸಲು ಕೆಲ ಮಾಜಿ ಯೋಧರನ್ನು ಸಿಂಗ್ ಎತ್ತಿಕಟ್ಟಿದರು ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ತಾವೇ ರಾಜ ಎಂಬಂತೆ ಸಿಂಗ್ ಬೀಗಿದರು. ಅನುರಾಗ್ ಠಾಕೂರ್ ಮಾಜಿ ಸಿಎಂ ಪ್ರೇಮ್‌ಕುಮಾರ್ ಧುಮಾಲ್ ಅವರ ಪುತ್ರ. ಕೆಲ ಸಮಯ ಮೊದಲು ತಮ್ಮ ಪುತ್ರಿಯ ವಿವಾಹದಂದೇ ಸಿಬಿಐ ದಾಳಿ ಮಾಡಿಸಿದ ಕೇಂದ್ರ ಸರಕಾರ, ಧುಮಾಲ್ ಹಾಗೂ ಠಾಕೂರ್ ಅವರನ್ನು ಸಿಂಗ್ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದ್ದರಿಂದ ಅವರು ಮಾಡಲು ಸಾಧ್ಯವಾದದ್ದು ಎಂದರೆ ಭಾರತ- ಪಾಕಿಸ್ತಾನ ಪಂದ್ಯ ನಡೆಯದಂತೆ ನೋಡಿಕೊಂಡದ್ದು. ಇದೀಗ ಠಾಕೂರ್ ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಕಾದುನೋಡಬೇಕು.
ರಿಜಿಜು ಉನ್ಮಾದ!
ಮೋದಿ ಭಾರತದ ಪ್ರಧಾನಿಯಾಗುವ ಬಗ್ಗೆ ಪ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ 1555ರಲ್ಲೇ ಭವಿಷ್ಯ ನುಡಿದಿದ್ದರು ಎಂದು ಗೃಹಖಾತೆ ರಾಜ್ಯಸಚಿವ ಕಿರಣ್ ರಿಜಿಜು ಇತ್ತೀಚೆಗೆ ಪ್ರತಿಪಾದಿಸಿದರು. ಫ್ರಾನ್ಸ್‌ನ ಪ್ರವಾದಿ ನಾಸ್ಟ್ರಾಡಾಮಸ್ 2014 ರಿಂದ 2026ರವರೆಗೆ ಭಾರತದ ನಾಯಕತ್ವ ವಹಿಸುವ ವ್ಯಕ್ತಿಯನ್ನು ಜನ ಆರಂಭದಲ್ಲಿ ದ್ವೇಷಿಸಬಹುದು; ಆದರೆ ಅವರು ದೇಶದ ಭವಿಷ್ಯ ಮತ್ತು ದಿಕ್ಕನ್ನೇ ಬದಲಿಸುವಲ್ಲಿ ತೊಡಗಿಸಿಕೊಳ್ಳುವ ಅವರ ಕಾರ್ಯದಿಂದಾಗಿ ಜನರ ಪ್ರೀತಿಪಾತ್ರರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ತಕ್ಷಣ ಅದನ್ನು ಕಿತ್ತು ಹಾಕಿದರು. ಜತೆಗೆ ಅದು ತಮ್ಮ ಅಕೃತ ಫೇಸ್‌ಬುಕ್ ಪೇಜ್ ಅಲ್ಲ ಎಂದು ಸಮರ್ಥಿಸಿಕೊಳ್ಳುವ ಯತ್ನವನ್ನೂ ಮಾಡಿದರು. ಆದರೆ ಈ ಖಾತೆಯ ಮೂಲಕ ಸದಾ ಸಚಿವರು ಪೋಸ್ಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ವಾದವನ್ನು ಒಪಿತ್ತಕೊಳ್ಳುವುದು ಕಷ್ಟ. ಈ ಘಟನೆಯಿಂದ ರಿಜಿಜು ಮೋದಿಯವರ ಬಗೆಗಿನ ಅತಿಯಾದ ಭಕ್ತಿಯ ಯ ಉನ್ಮಾದ ಸಾಮಾಜಿಕವಾಗಿ ನಿಂದೆಗೆ ಕಾರಣವಾಗುತ್ತಿದೆ ಎಂಬ ಪಾಠ ಕಲಿತರು.