ಇದು ಮನುವಾದಿ ರಾಷ್ಟ್ರವಾದ
ಇಡೀ ಕರ್ನಾಟಕ ಮಾತ್ರವಲ್ಲ, ದೇಶದ ಬಹುಭಾಗ ಬೇಸಿಗೆಯ ಬಿಸಿಲಿನಿಂದ ತತ್ತರಿಸಿ ಹೋಗಿದೆ. ಆದರೆ ರಾಜ್ಯದ ಉಳಿದೆಡೆಯ ಬಿಸಿಲಿಗೂ ಉತ್ತರ ಕರ್ನಾಟಕದ ಬಿಸಿಲಿಗೂ ವ್ಯತ್ಯಾಸವಿದೆ. ಕಳೆದವಾರ ನಾನು ಹೈದರಾಬಾದ್ ಕರ್ನಾಟಕದ ರಾಯಚೂರಿಗೆ ಹೋಗಿದ್ದೆ. ಅಲ್ಲಿ ಕೇವಲ ಎರಡೇ ಎರಡು ದಿನವಿದ್ದರೂ ನೆತ್ತಿಸುಡುವ ಬಿಸಿಲಿಗೆ ಸುಸ್ತಾಗಿ ಹೋದೆ. ಈ ಭಾಗದ ಬಹುತೇಕ ಕಡೆ ಉಷ್ಣಾಂಶ 40ರ ಗಡಿ ದಾಟಿದೆ. ಅಪರಾಹ್ನ 12ರಿಂದ ಸಂಜೆ 5ರವರೆಗೆ ರಸ್ತೆಗಳು ನಿರ್ಜನವಾಗಿರುತ್ತವೆ. ಎಲ್ಲೆಡೆ ಕರ್ಫ್ಯೂ ಜಾರಿ ಮಾಡಿದಂತಿರುತ್ತಿತ್ತು. ಮುಂಜಾನೆ 6 ಗಂಟೆಗೆ ಬಿಸಿಲಿನ ಪ್ರಖರತೆ ಆರಂಭವಾಗುತ್ತದೆ.
ನಂತರ ಸಂಜೆಯ ವರೆಗೆ ಹೆಚ್ಚುತ್ತಲೇ ಹೋಗುತ್ತವೆ. ಮಳೆ ಇಲ್ಲದೆ ಉತ್ತರಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ನದಿ, ಹಳ್ಳ, ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ರಾಯಚೂರನ್ನು ಕೃಷ್ಣೆ ಮತ್ತು ತುಂಗಭದ್ರೆ ಸುತ್ತುವರಿದಿದ್ದರೂ ಕುಡಿಯುವ ನೀರಿಗಾಗಿ ಜನ ಕಂಗಾಲಾಗಿದ್ದಾರೆ. ಬತ್ತಿ ಹೋದ ಹೊಳೆಗಳಿಂದ ಮೊಸಳೆಗಳು ದಿಕ್ಕು ಕಾಣದೆ ರೈತರ ಹೊಲಕ್ಕೆ ಬರುತ್ತಿದ್ದರೆ ಮೀನುಗಳು ವಿಲಿವಿಲಿ ಒದ್ದಾಡಿ ಸತ್ತು ಹೋಗುತ್ತಿವೆ.
ಕಳೆದ ಫೆಬ್ರವರಿಯಲ್ಲಿ ಹೊಸಪೇಟೆ, ಕೊಪ್ಪಳ ಮತ್ತು ದಾವಣಗೆರೆಗೆ ಹೋದಾಗಲೂ ಇಂಥದೇ ಅನುಭವವಾಗಿತ್ತು. ಕೊಪ್ಪಳ ಮತ್ತು ರಾಯಚೂರು ನಗರಗಳನ್ನು ಬಂಡೆಕಲ್ಲು ಆವರಿಸಿರುವುದರಿಂದ ರಾತ್ರಿಯೂ ವಿಪರೀತ ಸೆಖೆ ವಾತಾವರಣ ಇರುತ್ತದೆ. ಸಂಜೆ 4ರ ನಂತರ ಹೊರಗೆ ಹೋದರೂ ಬಿಸಿಗಾಳಿ ಮುಖಕ್ಕೆ ರಾಚುತ್ತದೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪರಿಸ್ಥಿತಿ ಇನ್ನೂ ಉಲ್ಬಣಗೊಳ್ಳಲಿದೆ. ಬೆಂಗಳೂರು ಕೂಡ ಮುಂಚಿನಂತಿಲ್ಲ. 70ರ ದಶಕದಲ್ಲಿ ನಾನು ಎಪ್ರಿಲ್ ತಿಂಗಳಲ್ಲಿ ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಪರದಾಡಿದೆ.
ಇಂಥ ಉರಿ ಬಿಸಿಲಿನಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಹೈದರಾಬಾದ್ ಮತ್ತು ವಿಜಯವಾಡಾಗಳಿಗೆ ಭೇಟಿ ನೀಡಿದ ದೃಶ್ಯಗಳನ್ನು ಟಿವಿಯಲ್ಲಿ ನೋಡಿದೆ. ರೋಹಿತ್ ವೇಮುಲಾ ತಾಯಿಯನ್ನು ಭೇಟಿಯಾಗಿ ಸಂತೈಸಲು ಬಂದಿದ್ದ ಕನ್ಹಯ್ಯಾರನ್ನು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಒಳಗೆ ಬಿಡಲಿಲ್ಲ. ವಿವಿಯ ಗೇಟ್ ಬಳಿ ನಿಂತು ಕನ್ಹಯ್ಯಾ ಮಾಡಿದ ಭಾಷಣ ಕೇಳಿದೆ.
ಈ ಉರಿ ಬಿಸಿಲು ಆಂಧ್ರ, ತೆಲಂಗಾಣ, ಹೈದರಾಬಾದ್, ವಿಜಯವಾಡಾಗಳಲ್ಲಿ ಅತಂತ್ಯ ಪ್ರಖರವಾಗಿರುತ್ತದೆ. ಇಂಥ ಉರಿ ಬಿಸಿಲಿನಲ್ಲಿ ಕಳೆದ ಗುರುವಾರ ಕನ್ಹಯ್ಯಾ ಕುಮಾರ್ ಹೈದರಾಬಾದ್‌ಗೆ ಬಂದು ರೋಹಿತ್ ವೇಮುಲಾ ತಾಯಿಯನ್ನು ಸಂತೈಸಿದರು. ಹೈದರಾಬಾದ್, ವಿಜಯವಾಡಾಗಳಲ್ಲಿ ಭಾರೀಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಉಸ್ಮಾನಿಯಾ ವಿ.ವಿ. ಪ್ರವೇಶಿಸಲು ಕನ್ಹಯ್ಯಾರಿಗೆ ಅವಕಾಶ ನೀಡಲಿಲ್ಲ. ವಿ.ವಿ. ದ್ವಾರದಲ್ಲೇ ನಿಂತು ಅವರು ಮಾತಾಡಿದರು.
ಕನ್ಹಯ್ಯಾ ಬಂದ ದಿನವೇ ಹೈದರಾಬಾದ್ ವಿ.ವಿ. ಕುಲಪತಿ ಅಪ್ಪರಾವ್ ಮತ್ತೆ ಕ್ಯಾಂಪಸ್‌ಗೆ ವಾಪಸಾದರು. ಅವರ ವಿರುದ್ಧ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದರು. ಆದರೂ ಆರೆಸ್ಸೆಸ್ ಆದೇಶದಂತೆ ಇವರನ್ನು ಕೇಂದ್ರ ಸರಕಾರ ಹೈದರಾಬಾದ್ ವಿ.ವಿ. ಮೇಲೆ ಹೇರಿದೆ.
ಕನ್ಹಯ್ಯಾ ಬಂದಾಗ ಹೈದರಾಬಾದ್ ವಿವಿಯಲ್ಲಿ ಭಯಾನಕ ವಾತಾವರಣವಿತ್ತು, ಆವರಣದಿಂದ ನುಗ್ಗಿದ ಪೊಲೀಸರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದರು. ಮಂಗಳವಾರ ರಾತ್ರಿಯಿಂದಲೇ ಹಾಸ್ಟೆಲ್‌ಗಳಿಗೆ ನೀರು, ವಿದ್ಯುತ್ ಮತ್ತು ಅಂತರ್ಜಾಲ ಸಹಿತ ಎಲ್ಲ ಸೌಕರ್ಯಗಳನ್ನು ಕಡಿತಗೊಳಿಸಲಾಗಿತ್ತು. ಕ್ಯಾಂಪಸ್ ಒಳಗಿನ 24 ಹಾಸ್ಟೆಲ್‌ಗಳಲ್ಲಿ 3,500 ವಿದ್ಯಾರ್ಥಿಗಳು 24 ತಾಸು ಅನ್ನ ನೀರಿಲ್ಲದೆ ಕಳೆದರು.
ಇದು ಹೈದರಾಬಾದ್ ವಿವಿ ಕತೆ. ಮಾತ್ರವಲ್ಲ ಇಡೀ ದೇಶದಲ್ಲಿ ಸಂಘಪರಿವಾರದ ಮನುವಾದಕ್ಕೆ ತಿರುಗಿ ಬಿದ್ದಿರುವ ವಿದ್ಯಾರ್ಥಿ ಯುವಜನರ ಮೇಲೆ ಇದೇ ರೀತಿ ದೌರ್ಜನ್ಯ ಆರಂಭವಾಗಿದೆ. ಬರೀ ಜೆಎನ್‌ಯು ಮಾತ್ರವಲ್ಲ ಅಲಹಾಬಾದ್, ಜಾಧವಪುರ, ಪುಣೆ ವಿಶ್ವವಿದ್ಯಾನಿಲಯಗಳಲ್ಲಿ, ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಪೊಲೀಸರ ಮತ್ತು ಸಂಗಳ ಬೂಟಿನ ಸದ್ದು ಕೇಳಿ ಬರುತ್ತಿದೆ.
ಜೆಎನ್‌ಯುನಲ್ಲಿ ಕಮ್ಯೂನಿಸ್ಟ್‌ರ ಹಾವಳಿ ಎಂದು ಸಂಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಉತ್ತರಪ್ರದೇಶದ ಅಲಹಾಬಾದ್ ವಿವಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಇಲ್ಲ. ಆದರೆ ಅಲ್ಲಿನ ವಿದ್ಯಾರ್ಥಿ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿ ಬಂದರು. ಉಳಿದ ನಾಲ್ಕು ಸ್ಥಾನಗಳಿಗೆ ಎಬಿವಿಪಿ ಅಭ್ಯರ್ಥಿಗಳು ಗೆದ್ದು ಬಂದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಎಬಿವಿಪಿಯನ್ನು ಸೋಲಿಸಿ ರೀಚಾ ಸಿಂಗ್ ಆರಿಸಿ ಬಂದದ್ದು ಸಂಗಳಲ್ಲಿ ಹೊಟ್ಟೆಯುರಿ ಉಂಟು ಮಾಡಿತು.
ರೀಚಾಸಿಂಗ್ ಮೇಲೆ ಸೇಡು ತೀರಿಸಿಕೊಳ್ಳಲು ಎಬಿವಿಪಿ ವಿವಿ ಆಡಳಿತ ವರ್ಗದ ಮೇಲೆ ಒತ್ತಡ ಹೇರಿತು. ಪಿಎಚ್‌ಡಿಗೆ ಈಕೆಯ ಪ್ರವೇಶಕ್ಕೆ ಕೊಕ್ಕೆ ಹಾಕುವ ಹುನ್ನಾರ ನಡೆಯಿತು. ಈಕೆಯ ಮೇಲೆ ಸಂಗಳು ಈ ಪರಿ ಹಗೆ ಸಾಸಲು ಕಾರಣ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ರೀಚಾ ಸಿಂಗ್ ಸಂಗಳ ಹಿಡನ್ ಅಜೆಂಡಾ ವಿರೋಸಿರು. ವಿಶ್ವವಿದ್ಯಾನಿಲಯದಲ್ಲಿ ಬಿಜೆಪಿ ಎಂಪಿ ಯೋಗಿ ಆದಿತ್ಯನಾಥ (ಪ್ರಚೋಧನಕಾರಿ ಭಾಷಣಕಾರ) ಭೇಟಿ ಮಾಡಲು ರೀಚಾ ಆಕ್ಷೇಪಿಸಿದರು.
ಇದರಿಂದ ರೋಸಿ ಹೋದ ಎಬಿವಿಪಿಗಳು ರೀಚಾಸಿಂಗ್ ಎಂಬ ಹೆಣ್ಣು ಮಗಳನ್ನು ಕಾಡತೊಡಗಿದರು. ವಿಶ್ವವಿದ್ಯಾನಿಲಯಕ್ಕೆ ಭಾಷಣ ಮಾಡಲು ಬಂದ ಹಿರಿಯ ಪತ್ರಕರ್ತರಾದ ಸಿದ್ಧಾರ್ಥ ವರದರಾಜನ್ ಭಾಷಣ ಮಾಡದಂತೆ ತಡೆದರು. ಸಿದ್ಧಾರ್ಥ ಅವರಿಗೆ ಘೇರಾವ್ ಮಾಡಿದರು. ಮಾವೋವಾದಿಗೆ ಧಿಕ್ಕಾರ ಎಂದು ಕೂಗಿದರು. ‘ಹಿಂದೂ’ ಪತ್ರಿಕೆಯ ಸಂಪಾದಕರಾಗಿದ್ದ ಸಿದ್ಧಾರ್ಥ, ಎಬಿವಿಪಿಗಳ ದೃಷ್ಟಿಯಲ್ಲಿ ಮಾವೋವಾದಿಯಾದರು. ಅಲಹಾಬಾದ್‌ನಲ್ಲಿ ಈ ರೀತಿ ಕುಚೇಷ್ಟೆ ಮಾಡಿದರೆ ಪುಣೆಯ ಪರ್ಗ್ಯೂಸನ್ ಕಾಲೇಜಿನಲ್ಲಿ ಜೆಎನ್‌ಯು ವಿದ್ಯಮಾನಗಳ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದ ಎಬಿವಿಪಿ ಕಿಡಿಗೇಡಿಗಳ ಕುತಂತ್ರವನ್ನು ದಲಿತ ಮತ್ತು ಎಡಪಂಥೀಯ ವಿದ್ಯಾರ್ಥಿಗಳು ವಿರೋಸಿದರು. ಆಗ ಎಬಿವಿಪಿಗಳ ಒತ್ತಡಕ್ಕೆ ಒಳಗಾದ ಕಾಲೇಜಿನ ಪ್ರಿನ್ಸಿಪಾಲ್ ದಲಿತ ಮತ್ತು ಎಡಪಂಥೀಯ ವಿದ್ಯಾರ್ಥಿಗಳು ದೇಶದ್ರೋಹಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದರು.
ಆಗ ಈ ಕಾಲೇಜಿನ ವಿದ್ಯಾರ್ಥಿಗಳು ತಿರುಗಿ ಬಿದ್ದರು. ಈ ಪ್ರತಿರೋಧಕರಿಗೆ ಹೆದರಿದ ಬಿಜೆಪಿ ಸರಕಾರ ದೂರನ್ನು ವಾಪಸ್ ಪಡೆಯುವಂತೆ ಮಾಡಿತು. ಈ ಕಾಲೇಜಿನಲ್ಲಿ ಎಬಿವಿಪಿ ವಿರುದ್ಧ ತಿರುಗಿ ಬಿದ್ದ ಪ್ರಗತಿಪರ ವಿದ್ಯಾರ್ಥಿಗಳ ನೇತೃತ್ವವನ್ನು ಡಾ. ಅಂಬೇಡ್ಕರ್ ಮರಿ ಮೊಮ್ಮಗ ಸುಜಾತ್ ವಹಿಸಿಕೊಂಡಿದ್ದರು ಎಂಬುದು ಗಮನಾರ್ಹ.
ಈ ಎಲ್ಲ ಅಂಶಗಳನ್ನು ಗಮನಿಸಿದರೆ ಒಂದು ಸ್ಪಷ್ಟವಾಗುತ್ತದೆ. ಸಂಘಪರಿವಾರದ ಕೋಮುವಾದದ ವಿರುದ್ಧ ಎಲ್ಲೆಡೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಇಂಥ ಪ್ರತಿರೋಧ ಹಿಂದೆಂದೂ ವ್ಯಕ್ತವಾಗಿರಲಿಲ್ಲ ಎಂದಲ್ಲ. ಆದರೆ ಹಿಂದಿನ ಪ್ರತಿರೋಧ ಬರೀ ಸಾಂಕೇತಿಕವಾಗಿತ್ತು. ಬಾಬರಿ ಮಸೀದಿ ನೆಲಸಮವಾದಾಗ, ಗುಜರಾತ್ ಹತ್ಯಾಕಾಂಡ ವಾದಾಗ, ಸಂಘಪರಿವಾರ ಹಿಂದೂ ಓಟುಗಳ ಧ್ರುವೀಕರಣ ಮಾಡಿಕೊಂಡು ಲಾಭ ಮಾಡಿಕೊಂಡಿತು.
ಆದರೆ ಈ ಬಾರಿ ಇಷ್ಟೊಂದು ಪ್ರಬಲ ಪ್ರತಿರೋಧ ವಿದ್ಯಾರ್ಥಿ ಸಮುದಾದಿಂದ ವ್ಯಕ್ತವಾಗಲು ಕಾರಣ ಅಲ್ಪಸಂಖ್ಯಾತರ ನಂತರ ದಲಿತರನ್ನು ಮುಗಿಸಲು ಸಂಘಪರಿವಾರ ಮಸಲತ್ತು ನಡೆಸಿತು. ಹೈದರಾಬಾದ್ ವಿವಿಯ ರೋಹಿತ್ ವೇಮುಲಾ ಸಾವು ದಮನಿತ ಸಮುದಾಯದ ವಿದ್ಯಾರ್ಥಿಗಳನ್ನು ಕೆರಳಿಸಿತು.
ಇದೇ ಸಂದರ್ಭದಲ್ಲಿ ದಿಲ್ಲಿಯ ಜೆಎನ್‌ಯು ಪ್ರಕರಣ ನಡೆಯಿತು. ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್‌ರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಬಂಸಲಾಯಿತು. ಆಗ ಜೆಎನ್‌ಯು ವಿದ್ಯಾರ್ಥಿಗಳು ಅಪೂರ್ವ ಒಗ್ಗಟ್ಟನ್ನು ಪ್ರದರ್ಶಿಸಿದರು. ದಲಿತ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಒಂದುಗೂಡಿದವು.
ಎಡಪಂಥೀಯರು ಸಂಘಪರಿವಾರದ ಕೋಮುವಾದವನ್ನು ವಿರೋಧಿಸಿ ಮುಂಚಿನಿಂದ ಹೋರಾಡುತ್ತಿದ್ದರೂ ಅದರ ಮನುವಾದಿ ಹುನ್ನಾರಗಳ ಬಗ್ಗೆ ಬಹಿರಂಗವಾಗಿ ಮಾತಾಡುತ್ತಿರಲಿಲ್ಲ. ಹಳೆಯ ತಲೆಮಾರಿನ ಕಮ್ಯೂನಿಸ್ಟ್ ನಾಯಕರಿಗೆ ಜಾತಿ ಕ್ರೌರ್ಯದ ವಾಸ್ತವ ಅರ್ಥವಾಗಿರಲಿಲ್ಲ. ಆದರೆ ಹೊಸ ತಲೆಮಾರಿನ ಕನ್ಹಯ್ಯಾ ಕುಮಾರ್‌ಗೆ ಈ ವಾಸ್ತವ ಅರ್ಥವಾಗಿದೆ. ಅಂತಲೇ ಮನುವಾದದ ವಿರುದ್ಧ, ಬ್ರಾಹ್ಮಣ್ಯವಾದದ ವಿರುದ್ಧ ಆತ ಮಾತಾಡುತ್ತಿದ್ದಾರೆ.
ಜಾತಿವಾದಿಗಳಲ್ಲದಿದ್ದರೂ ಮನುವಾದದ ವಿರುದ್ಧ, ಬ್ರಾಹ್ಮಣವಾದದ ವಿರುದ್ಧ ಬಹಿರಂಗವಾಗಿ ಮಾತನಾಡದ ಹಿಂದಿನ ತಲೆಮಾರಿನ ಕಮ್ಯೂನಿಸ್ಟರನ್ನು ದಲಿತರು ನಂಬುತ್ತಿರಲಿಲ್ಲ. ಆದರೆ ಈ ತಲೆಮಾರಿನ ಕನ್ಹಯ್ಯಾ ಜಾತಿವಾದ, ಮನುವಾದದ ವಿರುದ್ಧ ಮಾತಾಡುತ್ತಾರೆ. ಪ್ರತೀ ಭಾಷಣದ ಕೊನೆಯಲ್ಲಿ ‘‘ಜೈ ಭೀಮ್’’, ‘‘ಲಾಲ್ ಸಲಾಂ’’ ಎಂದು ಘೋಷಣೆ ಕೂಗುತ್ತಾರೆ.
ಅಂತಲೆ ಕೆಂಬಾವುಟಗಳು ಮತ್ತು ನೀಲಿ ಬಾವುಟಗಳು ಈಗ ಜೊತೆಗೂಡಿವೆ. ಆರೆಸ್ಸೆಸ್ ರಾಷ್ಟ್ರವಾದ ಬರೀ ಹಿಂದುತ್ವ ರಾಷ್ಟ್ರವಾದವಲ್ಲ. ಹಿಂದುತ್ವದ ಸೋಗಿನಲ್ಲಿ ಮನುವಾದವನ್ನು ಹೇರುವ ಫ್ಯಾಶಿಸ್ಟ್ ರಾಷ್ಟ್ರವಾದ ಅದಾಗಿದೆ. ಇದನ್ನು ಕನ್ಹಯ್ಯಾ ಕುಮಾರ್ ಅರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟವಾಗಿ ಮಾತಾಡುತ್ತಿದ್ದರು.
ಹಿಂದಿನ ಕಮ್ಯೂನಿಸ್ಟ್ ನಾಯಕರಾದ ಡಾಂಗೆ, ಇ.ಎಂ.ಎಸ್., ಜ್ಯೋತಿಬಸು, ಭೂಪೇಶ ಗುಪ್ತ ಸಂಘಪರಿವಾರವನ್ನು ಫ್ಯಾಶಿಸ್ಟ್ ವಿಷಸರ್ಪ ಎಂದು ಗುರುತಿಸಿ ದೂರವಿಟ್ಟಿದ್ದರು. ಆದರೆ, ಅದು ಬರೀ ಫ್ಯಾಶಿಸ್ಟ್ ವಿಷಸರ್ಪ ಮಾತ್ರವಲ್ಲ. ಮನುವಾದಿ ಫ್ಯಾಶಿಸ್ಟ್ ವಿಷಸರ್ಪ ಎಂದು ಕನ್ಹಯ್ಯ್ ಬಹಿರಂಗವಾಗಿ ಹೇಳುತ್ತಿರುವುದರಿಂದ ಶತ್ರು ಯಾರು ಮಿತ್ರರು ಯಾರು ಎಂಬುದು ಸ್ಪಷ್ಟವಾಗಿದೆ.
ಈ ಬ್ರಾಹ್ಮಣಶಾಹಿ, ಮನುವಾದಿ ರಾಷ್ಟ್ರವಾದಿಗಳ ವಿರುದ್ಧ ದಲಿತ, ಹಿಂದುಳಿದ, ಎಡಪಂಥೀಯರ ಐಕ್ಯತೆ ಇಂದಿನ ಅನಿವಾರ್ಯವಾಗಿದೆ. ಬಾಬಾ ಸಾಹೇಬರು ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್, ಲೋಹಿಯಾ, ನಾರಾಯಣಗುರು, ಬಸವಣ್ಣ, ಗಾಂಧೀಜಿ, ಕನಕದಾಸ, ಭಗತ್ ಸಿಂಗ್ ಈ ಎಲ್ಲ ಬೆಳಕಿನ ದೀವಟಿಗೆಗಳನ್ನು ಹಿಡಿದು ಮನುವಾದಿ ಫ್ಯಾಶಿಸ್ಟ್ ಅಂಧಕಾರವನ್ನು ನಾವು ತೊಲಗಿಸಬೇಕಾಗಿದೆ.
ಈಗ ಡಾ. ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ ಸೆಕ್ಯುಲರ್ ರಾಷ್ಟ್ರವಾದ ಮತ್ತು ಆರೆಸ್ಸೆಸ್ ದೇಶದ ಮೇಲೆ ಹೇರಲು ಹೊರಟಿರುವ ಮನುವಾದಿ ರಾಷ್ಟ್ರವಾದದ ನಡುವೆ ಸಂಘರ್ಷ ಆರಂಭವಾಗಿದೆ. ಇದು ಕತ್ತಲಿನ ವಿರುದ್ಧ ಬೆಳಕಿನ ಸಂಘರ್ಷ.
ಈ ಬ್ರಾಹ್ಮಣಶಾಹಿ, ಮನುವಾದಿ ರಾಷ್ಟ್ರವಾದಿಗಳ ವಿರುದ್ಧ ದಲಿತ, ಹಿಂದುಳಿದ, ಎಡಪಂಥೀಯರ ಐಕ್ಯತೆ ಇಂದಿನ ಅನಿವಾರ್ಯವಾಗಿದೆ. ಬಾಬಾ ಸಾಹೇಬರು ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್, ಲೋಹಿಯಾ, ನಾರಾಯಣಗುರು, ಬಸವಣ್ಣ, ಗಾಂಧೀಜಿ, ಕನಕದಾಸ, ಭಗತ್ ಸಿಂಗ್ ಈ ಎಲ್ಲ ಬೆಳಕಿನ ದಿವಟಿಗೆಗಳನ್ನು ಹಿಡಿದು ಮನುವಾದಿ ಫ್ಯಾಶಿಸ್ಟ್ ಅಂಧಃಕಾರವನ್ನು ನಾವು ತೊಲಗಿಸಬೇಕಾಗಿದೆ.