ಮಹಾರಾಷ್ಟ್ರ ಪೊಲೀಸರಿಂದ ಗುಡ್ ಬೈ ರೈಫಲ್ಸ್
ಮಹಾರಾಷ್ಟ್ರ ಪೊಲೀಸರ ಸದಾಕಾಲದ ಜೊತೆಗಾರ ಆಗಿದ್ದ ರೈಫಲ್ಸ್ ಗಳು ಇನ್ನು ಇತಿಹಾಸದ ಪುಟ ಸೇರಲಿವೆ. ರಾಜ್ಯ ಸರಕಾರವು ಪೊಲೀಸರಿಗೆ ರೈಫಲ್ಸ್‌ನ ಸ್ಥಳದಲ್ಲಿ ಎಸ್.ಎಲ್.ಆರ್. ಕಾರ್ಬೈನ್ ನೀಡಲು ತೀರ್ಮಾನಿಸಿದೆ. ಈ ಬಗ್ಗೆ ಸರಕಾರವು ಆದೇಶವನ್ನೂ ಹೊರಡಿಸಿದೆ ಎಂದು ಡಿಸಿಪಿ ಧನಂಜಯ ಕುಲಕರ್ಣಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ಸಿಪಾಯಿಗಳು ಎರಡು ರೀತಿಯ ರೈಫಲ್ಸ್ ಬಳಸುತ್ತಿದ್ದರು. ಇದರಲ್ಲಿ ಒಂದು -ಪಾಯಿಂಟ್ 303 ಬೋರ್‌ನ ರೈಫಲ್ಸ್. ಮತ್ತೊಂದು- ಪಾಯಿಂಟ್ 410 ಬೋರ್‌ನ ರೈಫಲ್ಸ್. ಎರಡನೆ ರೈಫಲ್ಸ್‌ನ್ನು ಮಶ್‌ಕೆಟ್ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಆದರೆ 26/11 ರ ಮುಂಬೈ ಹಲ್ಲೆಯ ನಂತರ ಪೊಲೀಸ್ ಮತ್ತು ಸರಕಾರ ಇಬ್ಬರಿಗೂ ಅತ್ಯಾಧುನಿಕ ಶಸ್ತ್ರಗಳು ಇನ್ನು ಅಗತ್ಯವಿದೆ ಎಂದು ಅನಿಸಿತು. ಅನಂತರ ಸಿಪಾಯಿಗಳಿಗೆ ರೈಫಲ್ಸ್‌ನ ಜಾಗದಲ್ಲಿ ಎಸ್.ಎಲ್.ಆರ್. ನೀಡುವ ತೀರ್ಮಾನ ಮಾಡಲಾಗಿತ್ತು. ಆದರೆ ಅದು ಈಗಷ್ಟೇ ಜಾರಿಗೆ ಬರುತ್ತಿದೆ.
ಮುಂಬೈ ಪೊಲೀಸ್ ಇಲಾಖೆಯಲ್ಲಿ 40 ಸಾವಿರ ಸಿಬ್ಬಂದಿ ಇದ್ದಾರೆ. ಮಹಾರಾಷ್ಟ್ರ ಪೊಲೀಸರ ಒಟ್ಟು ಸಂಖ್ಯೆ 2 ಲಕ್ಷ 5 ಸಾವಿರವಿದೆ. ಆದರೆ ಪ್ರತೀ ಪೊಲೀಸ್ ಸಿಪಾಯಿಗೆ ರೈಫಲ್ಸ್ ನೀಡುವುದಿಲ್ಲ. ಅಷ್ಟೇ ಅಲ್ಲ, ಪ್ರತೀ ಸಿಪಾಯಿಗೂ ಎಸ್.ಎಲ್.ಆರ್ ಕೂಡಾ ನೀಡಲಾಗುವುದಿಲ್ಲ ಎನ್ನುತ್ತಾರೆ ಧನಂಜಯ ಕುಲಕರ್ಣಿ. ಆದರೆ ಪ್ರತೀ ಪೊಲೀಸ್ ಠಾಣೆಗೆ ಅಗತ್ಯವಿದ್ದ ಸಂಖ್ಯೆಯಲ್ಲಿ ಎಸ್.ಎಲ್.ಆರ್ ಉಪಲಬ್ಧಗೊಳಿಸಲಾಗುವುದು. ಸೀನಿಯರ್ ಇನ್‌ಸ್ಪೆಕ್ಟರ್ ಮತ್ತೆ ಅಗತ್ಯಕ್ಕೆ ಅನುಸಾರವಾಗಿ ಸಿಪಾಯಿಗಳಿಗೆ ಅದನ್ನು ನೀಡುವರು. ಯಾವುದೇ ಪೊಲೀಸ್ ಠಾಣೆಯಲ್ಲಿ ನೂರೈವತ್ತರಷ್ಟು ಫೋರ್ಸ್ ಇರುತ್ತದೆ. ಇವರಲ್ಲಿ ಶೇ.80 ಸಿಪಾಯಿಗಳಿರುತ್ತಾರೆ. ಅಪರಾಗಳ ತುಲನೆಯಲ್ಲಿ ಪೊಲೀಸರಲ್ಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇಂದು ಅಗತ್ಯವಿದೆ. ಅಲ್ಲದೆ, ಈ ತನಕದ ರೈಲ್ಸ್ ಭಾರವೂ ಇದೆ.
ಥಾಣೆಯ ಪತ್ರಕಾರ್ ಭವನ; ಅಪಾಯಕಾರಿ ಕಟ್ಟಡಗಳ ಸೂಚಿಯಲ್ಲಿ
ಮುಂಬೈ ಪಕ್ಕದ ಥಾಣೆಯ ಪತ್ರಕರ್ತರ ಭವನವನ್ನು ಥಾಣೆ ಮನಪಾ ಅಪಾಯಕಾರಿ ಕಟ್ಟಡಗಳ ಸೂಚಿಯಲ್ಲಿ ಘೋಷಿಸಿದೆ. ಈ ಪತ್ರಕರ್ತರ ಭವನ ಸಹಿತ ನೌಪಾಡಾ ಪ್ರಭಾಗ ಸಮಿತಿಯ ಪ್ರಾಚೀನ ಮಂದಿರ ಸಹಿತ ಸುಮಾರು 382 ಕಟ್ಟಡಗಳನ್ನು ಅಪಾಯಕಾರಿ ಎಂದು ಮಹಾನಗರ ಪಾಲಿಕೆ ಘೋಷಿಸಿದೆ. 30 ವರ್ಷಗಳಿಗೂ ಅಕ ಶಿಥಿಲ ಕಟ್ಟಡಗಳ ಸೂಚಿಯನ್ನು ಮನಪಾ ತಯಾರಿಸುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಸೊಸೈಟಿಗಳ ಸ್ಟ್ರಕ್ಚರಲ್ ಆಡಿಟ್ ನಡೆಸುವ ಅಗತ್ಯವನ್ನು ಮನಪಾ ಹೇಳಿದೆ.
ಈ ವರ್ಷ ಅಪಾಯಕಾರಿ ಕಟ್ಟಡಗಳನ್ನು ಘೋಷಿಸುತ್ತಿದ್ದು, 382 ಕಟ್ಟಡಗಳನ್ನು ಈ ತನಕ ಅಪಾಯಕಾರಿ ಸೂಚಿಯಲ್ಲಿ ಘೋಷಿಸಿದೆ. ಹಾಗೂ ಎಲ್ಲರಿಗೂ ನೋಟಿಸ್ ನೀಡಿದೆ. ಇದರಲ್ಲಿ ಶರ್ಮಾ ಬಂಧುಗಳು ಅನಕೃತ ರೂಪದಿಂದ ವಶಪಡಿಸಿದ ವಿವಾದಿತ ಪತ್ರಕಾರ್ ಭವನ್ ಕೂಡಾ ಸೇರಿದೆ. ಕಳೆದ ವರ್ಷ ನೌಪಾಡಾ ಪ್ರಭಾಗ ಸಮಿತಿಯ ವ್ಯಾಪ್ತಿಯಲ್ಲಿ 269 ಕಟ್ಟಡಗಳನ್ನು ಅಪಾಯಕಾರಿ ಎಂದು ಘೋಷಿಸಿತ್ತು.
ಪೊಲೀಸ್ ಯೂನಿಯನ್ ಸ್ಥಾಪನೆಗೆ ಕಾನ್‌ಸ್ಟೇಬಲ್‌ನ ಆಂದೋಲನ
ಮುಂಬೈಯ ಆಝಾದ್ ಮೈದಾನದಲ್ಲಿ ಪ್ರತೀ ದಿನ ಒಂದಲ್ಲ ಒಂದು ಆಂದೋಲನದ ದೃಶ್ಯ ಕಂಡು ಬರುವುದು ಮಾಮೂಲಿ. ಆದರೆ ಈ ದಿನಗಳಲ್ಲಿ ಪೊಲೀಸ್ ವಿಭಾಗದ ನೌಕರರೊಬ್ಬರು ಆಂದೋಲನ ಮಾಡುತ್ತಿದ್ದಾರೆ. ಇದು ಪೊಲೀಸ್ ವಲಯದಲ್ಲೂ ಚರ್ಚೆಯ ಸಂಗತಿಯಾಗಿದೆ. ತನ್ನ ವರಿಷ್ಟ ಅಕಾರಿಗಳ ಒತ್ತಡದಿಂದ ತೊಂದರೆ ಅನುಭವಿಸುತ್ತಿರುವ ಪೊಲೀಸ್ ಕಾನ್‌ಸ್ಟೇಬಲ್ ಪ್ರಮೋದ್ ಪಾಟೀಲ್ ಪರಿವಾರ ಸಹಿತ ಆಝಾದ್ ಮೈದಾನಕ್ಕೆ ಆಂದೋಲನ ನಡೆಸಿದರು. ಅವರ ಬೇಡಿಕೆ ಏನೆಂದರೆ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೂ ಐಪಿಎಸ್ ಅಧಿಕಾರಿಗಳ ಯೂನಿಯನ್ ತರಹ ಯೂನಿಯನ್ ಸ್ಥಾಪನೆ ಆಗಬೇಕು. ತಮ್ಮ ಬೇಡಿಕೆಗಳನ್ನು ವಿಭಾಗ ಮತ್ತು ಸರಕಾರದ ಮುಂದಿಡಲು ಇದರಿಂದ ಸಾಧ್ಯವಾಗಬಹುದು ಎನ್ನುತ್ತಾರೆ.
ಪ್ರಮೋದ್ ಪಾಟೀಲ್ 2005 ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಸೇವೆಗೆ ಸೇರಿದ್ದರು. ಅವರು ಪುಣೆಯ ಬಾರಾಮತಿಯವರು. ಈ ದಿನಗಳಲ್ಲಿ ಅವರು ಸಹಾರ ಪೊಲೀಸ್ ಠಾಣೆಯಲ್ಲಿ ಡ್ಯೂಟಿ ಮಾಡುತ್ತಾರೆ. ಎಂಟು ತಿಂಗಳ ಹಿಂದೆ ಅವರನ್ನು ಡಿ.ಎನ್. ನಗರ ಟ್ರಾಫಿಕ್‌ನಿಂದ ಮಲಬಾರ್ ಹಿಲ್ ಟ್ರಾಫಿಕ್ ವಿಭಾಗದಲ್ಲಿ ಡ್ಯೂಟಿಗೆ ಹಾಕಿದ್ದರು. ಆದರೆ ತನ್ನ ವರ್ಗಾವಣೆ ನಿಯಮಗಳಂತೆ ನಡೆದಿಲ್ಲವೆಂದು ಅವರ ಆರೋಪ. ಮಾನಸಿಕವಾಗಿ ನೊಂದ ಪ್ರಮೋದ್ ಪಾಟೀಲ್ ಪರಿವಾರ ಸಹಿತ ಆಝಾದ್ ಮೈದಾನದಲ್ಲಿ ಆಂದೋಲನ ನಡೆಸಲು ಮುಂದಾದರು. ಪತ್ನಿ ಮತ್ತು ನಾಲ್ಕು ವರ್ಷದ ಮಗಳು ಇದರಲ್ಲಿ ಪಾಲುಗೊಂಡಿದ್ದಾರೆ. ಪ್ರಮೋದ್ ಹೇಳುವಂತೆ ಕಳೆದ ನವೆಂಬರ್ ತಿಂಗಳಲ್ಲಿ ಅನಾರೋಗ್ಯ ಬಿದ್ದಾಗ ರಜೆಯ ಅರ್ಜಿ ನೀಡಿದರೂ ಸಂಬಳ ಕಡಿತ ಮಾಡಲಾಗಿದೆ. ಪೊಲೀಸ್ ಕಮಿಷನರ್ ಅವರಿಗೂ ಇದರ ಬಗ್ಗೆ ಪತ್ರ ಬರೆದಿದ್ದಾರೆ. ಅನಂತರ ಇವರಿಗೆ ಕಿರಿಕಿರಿ ಹೆಚ್ಚಾಗುತ್ತಲೇ ಬಂದಿದೆಯಂತೆ.
ಅಕ್ರಮ ಮೊಬೈಲ್ ಟವರ್‌ಗಳ ಸಕ್ರಮದಿಂದ ಮನಪಾಕ್ಕೆ ಹೆಚ್ಚುವರಿ ಆದಾಯ
ಮುಂಬೈ ಮಹಾನಗರ ಪಾಲಿಕೆಯು ಗಾರ್ಡನ್, ಬಯಲು ಕ್ಷೇತ್ರ, ಆಟದ ಮೈದಾನ, ಮೀಸಲು ಜಮೀನಿನಲ್ಲಿ ಮೊಬೈಲ್ ಟವರ್ ತಾಗಿಸಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಅಕ್ರಮವಾಗಿ ಮೊಬೈಲ್ ಟವರ್ ತಾಗಿಸಿದ್ದರೆ ಅಂತವರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಲಾಗುವುದು. ಇದೀಗ ಮೊಬೈಲ್ ಟವರ್‌ನ ಹೊಸ ಪಾಲಿಸಿಯನ್ನು ಮನಪಾ ಸುಧಾರ್ ಸಮಿತಿ ಮಂಜೂರು ಮಾಡಿದೆ. ಅದರಲ್ಲಿ ಕಾನೂನು ಬಾಹಿರವಾಗಿ ಮೊಬೈಲ್ ಟವರ್ ತಾಗಿಸಿದ್ದರೆ ಅದನ್ನು ಸಕ್ರಮಗೊಳಿಸಲೂ ಮನಪಾ ರೆಡಿಯಾಗಿದೆ. ಇದರಿಂದ ಮಹಾನಗರ ಪಾಲಿಕೆಗೆ ಹೆಚ್ಚುವರಿ ಆದಾಯ ಪ್ರಾಪ್ತಿಯಾಗಲಿದೆಯಂತೆ.
ಮನಪಾ ಶಹರದಾದ್ಯಂತ 3,800 ಕ್ಕೂ ಹೆಚ್ಚು ಅಕ್ರಮ ಮೊಬೈಲ್ ಟವರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು. ಸ್ಥಳೀಯ ನಾಗರಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಅಕ್ರಮ ಮೊಬೈಲ್ ಟವರ್‌ಗಳಿಗೆ ಭಾರೀ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಮೊಬೈಲ್ ಟವರ್‌ಗಳಿಂದ ಹೊರಬರುವ ರೇಡಿಯೇಶನ್ ಜನರಿಗೆ ಅಪಾಯಕಾರಿ ಆಗಿದೆ. ಮೊಬೈಲ್ ಟವರ್‌ಗಳನ್ನು ಯಾವ ಕಟ್ಟಡಗಳಲ್ಲಿ ತಾಗಿಸಲಾಗುವುದೋ ಅದರ ಅಕೃತ ಪ್ರಮಾಣ ಪತ್ರ, ಮ್ಹಾಡಾದ ಎನ್.ಒ.ಸಿ. ಇಂತಹ ಕೆಲವು ದಾಖಲೆ ಪತ್ರಗಳನ್ನು ಕಂಪೆನಿ ಪೂರ್ಣಗೊಳಿಸಬೇಕು. ಮೊಬೈಲ್ ಟವರ್‌ಗಳಿಂದ ನೆಟ್‌ವರ್ಕ್ ಸಿಗುತ್ತದೆ ನಿಜ. ಆದರೆ ಜೊತೆಗೆ ಅಪಾಯಕಾರಿ ರೇಡಿಯೇಶನ್ ಕಿರಿಕಿರಿ ಹುಟ್ಟಿಸುತ್ತದೆ. ಮೊಬೈಲ್ ಕಂಪೆನಿಗಳು 4 ಜಿ ನೆಟ್‌ವರ್ಕ್‌ನ ಪ್ರಸ್ತಾವ ಮಾಡುತ್ತಿದೆಯಾದರೂ ಸರಿಯಾದ ಮೊಬೈಲ್ ಟವರ್ ಇಲ್ಲದಿದ್ದರೆ ಸಮಸ್ಯೆ ಉದ್ಭವಿಸುತ್ತದೆ. ಹೊಸ ಮೊಬೈಲ್ ಟವರ್ ಪಾಲಿಸಿಯಿಂದ ಮೊಬೈಲ್ ಕಂಪೆನಿಗಳಿಂದ ಮೊಬೈಲ್ ಟವರ್‌ಗಳಿಗಾಗಿ ಬಾಡಿಗೆ ವಸೂಲಿ ಮಾಡಬಹುದಾಗಿದೆ. ಅಕ್ರಮ ಮೊಬೈಲ್ ಟವರ್‌ಗಳನ್ನು ಸಕ್ರಮಗೊಳಿಸಲೂಬಹುದು. ಇದರಿಂದ ಮನಪಾಕ್ಕೆ ಕೋಟಿಗಟ್ಟಲೆ ರೂಪಾಯಿ ಹೆಚ್ಚುವರಿ ಆದಾಯ ಬರುವ ಸಾಧ್ಯತೆಗಳಿವೆಯಂತೆ.
ತ್ಯಾಜ್ಯದ ಸಮಸ್ಯೆಗೆ ವೈಜ್ಞಾನಿಕ ರೀತಿಯ ಪರಿಹಾರ
ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀದಿನ 9,500 ಮೆಟ್ರಿಕ್ ಟನ್ ತ್ಯಾಜ್ಯ ರಾಶಿ ಬೀಳುತ್ತಿದ್ದು, ಅದನ್ನು ವೈಜ್ಞಾನಿಕ ರೀತಿಯಲ್ಲಿ ಬಳಸುವುದಕ್ಕೆ ಮನಪಾ ರೆಡಿಯಾಗಿದೆ. ಐರೋಲಿ ಮತ್ತು ತಲೋಜಾದಲ್ಲಿ ಹೊಸ ಡಂಪಿಂಗ್ ಗ್ರೌಂಡ್ ಮಂಜೂರು ಮಾಡುವ ಸಮಯ ಮಹಾನಗರ ಪಾಲಿಕೆಯ ಮುಂದೆ ಈ ಶರತ್ತು ಇರಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ವಿಧಾನ ಸಭೆಯಲ್ಲಿ ಈ ಮಾಹಿತಿ ನೀಡಿದರು.
ದೇವನಾರ್ ಡಂಪಿಂಗ್ ಗ್ರೌಂಡ್‌ನಲ್ಲಿ ಇತ್ತೀಚೆಗೆ ಬೆಂಕಿ ಹತ್ತಿಕೊಂಡ ಘಟನೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ಇದೀಗ ಡಂಪಿಂಗ್ ಗ್ರೌಂಡ್‌ನಲ್ಲಿ ಸಿಸಿಟಿವಿ ಮತ್ತು ವಿದ್ಯುತ್ ಬೆಳಕಿನ ಟವರ್ ತಾಗಿಸಲಾಗಿದೆ. ಎರಡು ಯರ್ ಬ್ರಿಗೇಡ್ ವಾಹನಗಳನ್ನು 24 ಗಂಟೆಯೂ ಅಲ್ಲಿರಿಸಲಾಗಿದೆ. ಖಾಸಗಿ ಗಾರ್ಡ್‌ಗಳ ಸಂಖ್ಯೆ ಹೆಚ್ಚಿ ಸಲಾಗಿದೆ. ಇವರನ್ನು ಮೂರು ಶಿಫ್ಟ್‌ಗಳಲ್ಲಿ ಹಾಕಲಾಗಿದೆ. ಮುಂಬೈ ಹೈಕೋರ್ಟ್ 30 ಜೂನ್ 2017 ರ ತನಕ ದೇವನಾರ್ ಮತ್ತು ಮುಲುಂಡ್ ಡಂಪಿಂಗ್ ಗ್ರೌಂಡ್‌ಗಳನ್ನು ಬಳಸುವಂತೆ ಅನುಮತಿ ನೀಡಿದೆ. ಇವುಗಳು ಸಾಕಾಗದ ಕಾರಣ ತಲೋಜಾದ ಬಳಿ 52 ಹೆಕ್ಟೇರ್ ಮತ್ತು ಮುಲುಂಡ್ ಪೂರ್ವದಲ್ಲಿ 32.77 ಹೆಕ್ಟೇರ್ ಸ್ಥಳ ಇದಕ್ಕಾಗಿ ಡಿಮಾರ್ಕ್ ಮಾಡಲಾಗಿದೆ.
ಲವ್ ಮುಂಬೈ ಅನಾವರಣ
ಮುಂಬೈ ಮಹಾನಗರ ಸುಂದರವಾಗಿದೆ. ಇದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಪ್ರಮುಖ ತಾಣಗಳಲ್ಲಿ ಸೌಂದರ್ಯ ಶಿಲ್ಪ ಸ್ಥಾಪಿಸಲು ಯುವಸೇನೆಯ ಪ್ರಮುಖ ಆದಿತ್ಯ ಠಾಕ್ರೆ ಮುಂದಾಗಿದ್ದಾರೆ. ಬಾಂದ್ರಾ ರಿಕ್ಲಮೇಶನ್ ಬಳಿಯ ಸಮುದ್ರ ತೀರದ ಬಳಿ ಇತ್ತೀಚೆಗೆ ಲವ್ ಮುಂಬೈ ಸೌಂದರ್ಯ ಶಿಲ್ಪವನ್ನು ಅನಾವರಣಗೊಳಿಸಿದ್ದಾರೆ.
ವಿದೇಶಗಳ ಶಹರಗಳಲ್ಲಿ ಅಲ್ಲಲ್ಲಿ ಸೌಂದರ್ಯ ಶಿಲ್ಪ ಸ್ಥಾಪಿಸುತ್ತಾರೆ. ಅವುಗಳು ಅಲ್ಲಿನ ಸೆಲ್ಫಿ ಪಾಯಿಂಟ್ ಆಗುತ್ತವೆ. ಇದೀಗ ಮುಂಬೈಯಲ್ಲೂ ಲವ್ ಮುಂಬೈ ಸೆಲ್ಫಿ ಪಾಯಿಂಟ್ ಆಗಲಿದೆಯಂತೆ. ಮುಂಬೈ ಶಹರದ ವಿಭಿನ್ನ ಸ್ಥಳಗಳಲ್ಲಿ ಈ ಲವ್ ಮುಂಬೈ ಸೌಂದರ್ಯ ಶಿಲ್ಪ ಸ್ಥಾಪಿಸಲಾಗುವುದು. ಈ ಸೌಂದರ್ಯ ಶಿಲ್ಪ ಮರದ್ದಾಗಿದೆ. ಇದರಲ್ಲಿ ಲವ್ ಶಬ್ದ ದೇವನಾಗರಿ ಲಿಪಿಯಲ್ಲಿದ್ದು ಕೆಂಪು ಬಣ್ಣದಲ್ಲಿದೆ. ಮುಂಬೈಯನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ ಹಾಗೂ ಬಿಳಿ ಬಣ್ಣದಲ್ಲಿದೆ. ಲವ್ ಅಕ್ಷರವನ್ನು ಹೃದಯದ ಆಕಾರದಲ್ಲಿ ಕೆತ್ತಲಾಗಿದೆ. ಸ್ಮಾರ್ಟ್ ಇಂಡಿಯಾ ಫೌಂಡೇಶನ್‌ನ ಹನೀಫ್ ಕುರೇಶಿ ಸಹಾಯದಿಂದ ಹಿತೇಶ್ ಮಾಲವೀಯ ಈ ಶಿಲ್ಪದ ಡಿಸೈನ್ ಮಾಡಿದ್ದಾರೆ. ಈ ಶಿಲ್ಪ 20 ಅಡಿ ಉದ್ದ, 7 ಅಡಿ ಎತ್ತರ, ಒಂದೂವರೆ ಅಡಿ ಅಗಲವಿದೆ.
ಮನಪಾ ಬೈಠಕ್‌ಗಳ ಸಂಖ್ಯೆ ಹೆಚ್ಚಿಸಲು ಆಗ್ರಹ
ಮುಂಬೈ ವಾಸಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಮುಂಬೈ ಮಹಾನಗರ ಪಾಲಿಕೆಯಲ್ಲಿ ನಡೆಯುವ ಬೈಠಕ್‌ಗಳು ಕೂಡಾ ಸಂಸತ್‌ನ ಕಾರ್ಯ ಕಲಾಪಗಳಲ್ಲಿ ಕಂಡು ಬರುವ ಗದ್ದಲ, ಅನ್ಯ ಕಾರಣಗಳಿಂದ ಸ್ಥಗಿತಗೊಳ್ಳುವಂತೆ ಅದೇ ದೃಶ್ಯ ಪುನರಾವರ್ತನೆಯಾಗುತ್ತಿದೆ.
ಮುಂಬೈ ಮನಪಾ ಸಭಾಗೃಹದಲ್ಲಿ ಮಾರ್ಚ್ 9, 2012 ರಿಂದ 4 ಮಾರ್ಚ್ 2016 ರ ನಡುವೆ ಆಯೋಜಿಸಿದ 174 ಬೈಠಕ್‌ಗಳಲ್ಲಿ 24 ಬೈಠಕ್‌ಗಳು ವಿಭಿನ್ನ ಕಾರಣಗಳಿಂದ ಆರಂಭವಾಗುತ್ತಿದ್ದಂತೆಯೇ ಸ್ಥಗಿತಗೊಂಡಿದೆ. ಅರ್ಥಾತ್ ಶೇ.13 ರಷ್ಟು ಬೈಠಕ್‌ಗಳಲ್ಲಿ ಯಾವುದೇ ಕೆಲಸ ಕಾರ್ಯ ನಡೆಯಲೇ ಇಲ್ಲ. ಇವುಗಳಲ್ಲಿ 12 ಜುಲೈ 2012 ರಲ್ಲಿ ಮಹಾರಾಷ್ಟ್ರ -ಕರ್ನಾಟಕ ಸೀಮಾ ವಿವಾದದ ಸುಪ್ರೀಂ ಕೋರ್ಟ್‌ನ ಪರಿಣಾಮ ಬರುವ ತನಕ ವಿವಾದಾಸ್ಪದ ಕ್ಷೇತ್ರಗಳನ್ನು ಕೇಂದ್ರ ಶಾಸಿತ ಪ್ರದೇಶವೆಂದು ಘೋಷಣೆ ಮಾಡಬೇಕು. ಈ ಸಂಬಂಧವಾಗಿ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಆಗ್ರಹಿಸಬೇಕು ಎಂದು ಬೈಠಕ್ ಕರೆಯಲಾಗಿತ್ತು.
ಅದೇ ರೀತಿ ಜನವರಿ 9, 2014 ರಂದು ಸಹಾರದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಸರಕಾರದ ವತಿಯಿಂದ ಮೇಯರ್‌ಗೆ ಆಮಂತ್ರಣ ನೀಡದ ನಿರ್ಣಯದ ವಿರೋಧ ಪ್ರದರ್ಶನಕ್ಕಾಗಿ ಬೈಠಕ್ ನಡೆದಿದೆ. 22 ಜೂನ್ 2015 ರಂದು ನಾಲೆ ಸ್ವಚ್ಛತೆಯ ಹಗರಣದ ವಿಷಯವಾಗಿಯೂ ಬೈಠಕ್ ನಡೆದಿದೆ. ಮನಪಾ ಸಭಾಗೃಹದ ಬೈಠಕ್‌ಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಇದರಿಂದ ನಾಗರಿಕರ ಸಮಸ್ಯೆಗಳ ಮೇಲೆ ಚರ್ಚೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಬೈಠಕ್‌ಗಳ ಸಂಖ್ಯೆ ಹೆಚ್ಚಬೇಕಾಗಿದೆ. ಎನ್ನುತ್ತಾರೆ ಬಿಜೆಪಿ ನಗರ ಸೇವಕ ದಿಲೀಪ್ ಪಟೇಲ್.
ಆದರೆ ಸ್ಥಗಿತಗೊಂಡಿರುವ 24 ಬೈಠಕ್‌ಗಳಲ್ಲಿ 20 ವಿಭಿನ್ನ ಗಣ್ಯರ ನಿಧನದ ಕಾರಣ ಸ್ಥಗಿತಗೊಳಿಸಬೇಕಾಗಿ ಬಂದಿದೆ. 4 ಬೈಠಕ್‌ಗಳು ಅನ್ಯ ಕಾರಣಗಳಿಂದ ರದ್ದುಗೊಂಡಿವೆ. ಹೀಗಾಗಿ ಬೈಠಕ್‌ಗಳು ಸಂಖ್ಯೆ ಏರಿಸಬೇಕಾದ ಆವಶ್ಯಕತೆ ಇದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅನಿಲ್ ಗಲಗಲಿ. ಈ ಮೊದಲು ಸಾಮಾನ್ಯವಾಗಿ ತಿಂಗಳಿಗೆ 5 ಬೈಠಕ್‌ಗಳು ಆಯೋಜಿಸಲಾಗುತ್ತಿತ್ತು. ಈಗೀಗ ಈ ಸಂಖ್ಯೆ ಕಡಿಮೆ ಯಾಗುತ್ತಿದೆ. 4 ವರ್ಷಗಳಲ್ಲಿ 174 ಬೈಠಕ್‌ಗಳಷ್ಟೇ ಕರೆಯಲಾಗಿದೆ.
ಸ್ವಚ್ಛ ಭಾರತ ಅಭಿಯಾನ ಮನಪಾ ಮತ್ತು ಪಶ್ಚಿಮ ರೈಲ್ವೆ ವಿವಾದದಲ್ಲಿ 25 ಲಕ್ಷ ರೂ. ವೆಚ್ಚದ ಶೌಚಾಲಯ ಧ್ವಂಸ!
ಮುಂಬೈ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದಂತೆ ಪಶ್ಚಿಮ ರೈಲ್ವೆಯ ಬಾಂದ್ರಾ ಪೂರ್ವದಲ್ಲಿ ಕಟ್ಟಿಸಿದ 25 ಲಕ್ಷ ರೂ. ವೆಚ್ಚದ ಪೇ ಅಂಡ್ ಯೂಸ್ ಪದ್ಧತಿಯ ಸಾರ್ವಜನಿಕ ಶೌಚಾಲಯವನ್ನು ಪಶ್ಚಿಮ ರೈಲ್ವೆ ಅಕಾರಿಗಳು ಬುಲ್ಡೋಜರ್ ತಂದು ಮಾರ್ಚ್ ಮೂರನೆ ವಾರದಲ್ಲಿ ಧ್ವಂಸ ಮಾಡಿದ್ದಾರೆ. ಕಳೆದ 2 ತಿಂಗಳಿನಿಂದ ಈ ಶೌಚಾಲಯ ಕೆಲಸ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆ ಮೊದಲೇ ಅದನ್ನು ರೈಲ್ವೆ ಅಕಾರಿಗಳು ಕೆಡವಿ ಹಾಕಿದ್ದಾರೆ. ರೈಲ್ವೆ ಅಕಾರಿಗಳು ಹೇಳುತ್ತಾರೆ -ಇದು ಅನಕೃತ. ಯಾಕೆಂದರೆ ಮನಪಾ ರೈಲ್ವೆಯ ಜಮೀನಿನಲ್ಲಿ ಕಟ್ಟಿಸಿದೆ ಎಂದು. ಆದರೆ ಮಹಾನಗರ ಪಾಲಿಕೆ ಅಕಾರಿಗಳು ಹೇಳುತ್ತಾರೆ- ಸ್ವಚ್ಛಭಾರತ ಅಭಿಯಾನದಂತೆ ಶೌಚಾಲಯ ಕಟ್ಟಿಸಲಾಗಿದೆ. ಇದಕ್ಕಾಗಿ ರೈಲ್ವೆ ಪೊಲೀಸರ ಎನ್.ಒ.ಸಿ. ಅಗತ್ಯವಿಲ್ಲ ಎಂದು.
ಕ್ರೆಡಿಟ್ ಕಾರ್ಡ್ ವಂಚನೆಗಳ ಸುತ್ತ
ಮುಂಬೈ ಪೊಲೀಸರು ಕಳೆದ ಎರಡು ತಿಂಗಳಲ್ಲಿ ಮುಂಬೈಯಲ್ಲಿ 84 ಕ್ರೆಡಿಟ್ ಕಾರ್ಡ್ ವಂಚನೆಯ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸೈಬರ್ ತಜ್ಞರ ಪ್ರಕಾರ ಇದು ಕೇವಲ ಸೈಬರ್ ಪ್ರಕರಣಗಳಲ್ಲಿ 2 ಪ್ರತಿ ಶತ ಮಾತ್ರ. ಬಹಳ ಕಡಿಮೆ ಕಾರ್ಪೊರೇಟ್ ಮತ್ತು ಬ್ಯಾಂಕುಗಳು ಈ ಪ್ರಕರಣಗಳ ವರದಿಯನ್ನು ದಾಖಲಿಸುತ್ತಾರಂತೆ. ತಮ್ಮ ಪ್ರತಿಷ್ಠೆ ಕಡಿಮೆ ಯಾಗುವ ಭಯದಲ್ಲಿ ಅವರೆಲ್ಲ ದೂರು ದಾಖಲಿಸಲು ಹಿಂಜರಿಯುವುದೇ ಹೆಚ್ಚು. ಸೈಬರ್ ಪೊಲೀಸರು ಹೇಳುವಂತೆ ಆರ್ಥಿಕ ಸಂಸ್ಥೆಗಳು ವಂಚನೆಗೆ ಸಂಬಂಸಿ ಮಾಹಿತಿ ನೀಡಲು ಆಸಕ್ತಿ ವಹಿಸುತ್ತಿಲ್ಲ. ಈ ಕಾರಣ ತನಿಖೆ ನಿಧಾನ ಗತಿಯಲ್ಲಿ ಸಾಗುತ್ತದೆ. ಸೈಬರ್ ವಕೀಲ ವಿಕ್ಕಿ ಶಾಹ ಹೇಳುತ್ತಾರೆ-ಸಾಮಾನ್ಯವಾಗಿ ಎಲ್ಲಾ ವಂಚನೆಗಳೂ ದಾಖಲಾಗುತ್ತವೆ. ಆದರೆ ಅದರಲ್ಲಿ ಕೇವಲ ಕೆಲವಷ್ಟೇ ಎಫ್‌ಐಆರ್ ದಾಖಲಾಗುತ್ತದೆ. 2015 ರಲ್ಲಿ ಪ್ರತೀ ತಿಂಗಳೂ ವಂಚನೆಯ ಸರಾಸರಿ 26 ಪ್ರಕರಣಗಳು ದಾಖಲಾಗುತ್ತಿತ್ತು.
ಹೋಳಿ ಮತ್ತು ಪ್ಲಾಸ್ಟಿಕ್ ಚೀಲಗಳು
ಹೋಳಿಯ ಸೀಸನ್‌ನಲ್ಲಿ ಈ ಬಾರಿ ಪ್ಲ್ಯಾಸ್ಟಿಕ್‌ನ ಚೀಲಗಳ ಮಾರಾಟದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ದಾಳಿ ನಡೆಸಿದ್ದು ನಿಷೇದಿತ ಚೀಲಗಳು ಕಂಡು ಬಂದರೆ ತೀವ್ರ ಕ್ರಮ ಕೈಗೊಂಡಿತು. ಯಾಕೆಂದರೆ ನಿಷೇತ ಪ್ಲ್ಯಾಸ್ಟಿಕ್ ಚೀಲಗಳಲ್ಲಿ ನೀರು ತುಂಬಿಸಿ ಅಥವಾ ಬಣ್ಣ ತುಂಬಿಸಿ ಎಸೆಯುವ ಪ್ರಕರಣಗಳನ್ನು ತಡೆಯುವಲ್ಲಿ ಮನಪಾ ಈ ಬಾರಿ ಇಂತಹ ಹೆಜ್ಜೆ ಇರಿಸಿತು. ನವಿ ಮುಂಬೈ ಮಹಾನಗರ ಪಾಲಿಕೆಯಂತೂ ಈಗಾಗಲೇ ಶಹರವನ್ನು ಪ್ಲ್ಯಾಸ್ಟಿಕ್ ಮುಕ್ತ ಶಹರವೆಂದು ಕರೆಸಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಮಾ.24 ರಂದು ಹೋಳಿ, ರಂಗ್‌ಪಂಚಮಿಯ ಸಂದರ್ಭದಲ್ಲಿ ನಿಷೇತ ಪ್ಲ್ಯಾಸ್ಟಿಕ್ ಚೀಲಗಳ ಮಾರಾಟ ತಡೆಯಲು ಅಂಗಡಿಗಳಿಗೆ ದಾಳಿ ನಡೆಸಿತು. ನವಿ ಮುಂಬೈ ಮನಪಾ ಪ್ರತೀ ಮಳೆಗಾಲ ಆರಂಭವಾಗುವ ಮೊದಲು ಪ್ಲ್ಯಾಸ್ಟಿಕ್ ಚೀಲಗಳ ವಿರುದ್ಧ ತನ್ನ ವಿಶೇಷ ಅಭಿಯಾನ ನಡೆಸುತ್ತಿದೆ.
ರೈನ್ ಡ್ಯಾನ್ಸ್‌ಗೆ ದಂಡ
ಮುಂಬೈ ಮನಪಾ ಈ ಬಾರಿ ಹೋಳಿಯ ಸಂದರ್ಭದಲ್ಲಿ ರೈನ್ ಡ್ಯಾನ್ಸ್‌ಗೆ ನಿಷೇಧ ಹೇರಿತ್ತು. ಇದಕ್ಕೆ ಮುಖ್ಯ ಕಾರಣ ನೀರಿನ ಕೊರತೆ. ಈ ಬಗ್ಗೆ ಕೆಲವು ಶಾಸಕರೂ ಒಪ್ಪಿಗೆ ನೀಡಿದ್ದರು. ಆದರೆ ಹೋಳಿಯ ರಂಗ್ ಪಂಚಮಿ ದಿನ ಮುಂಬೈಯಲ್ಲಿದ್ದ ನಂತರ ಸುಮ್ಮನೆ ಇರುವುದಾದರೂ ಸಾಧ್ಯವೇ? ಬಣ್ಣ ಎರಚಿಕೊಂಡ ನಂತರ ಅದನ್ನು ತೊಳೆಯುವುದು ಬೇಡವೇ? ಹಬ್ಬದ ನೆಪದಲ್ಲಿ ನೀರಿನ ದುರುಪಯೋಗ ತಡೆಯುವಂತೆ ಮನಪಾ ಪ್ರತೀ ಬಾರಿಯೂ ಎಚ್ಚರಿಕೆ ನೀಡುತ್ತಾ ಬಂದಿದೆ. ಮುಂಬೈಯಲ್ಲಿ ಹೋಳಿ - ರಂಗ್ ಪಂಚಮಿಯ ದಿನ ದೊಡ್ಡ ಪ್ರಮಾಣದಲ್ಲಿ ರೈನ್ ಡ್ಯಾನ್ಸ್ ಮಾಡುತ್ತಾ ಬಂದಿದ್ದಾರೆ. ಕೆಲವೆಡೆ ಈ ಎಚ್ಚರಿಕೆಯನ್ನು ಮುರಿದು ರೈನ್‌ಡ್ಯಾನ್ಸ್ ಮಾಡಿದ ಘಟನೆಗಳು ವರದಿಯಾಗಿದ್ದು ದಂಡವನ್ನೂ ವಿಸಲಾಗಿದೆ. ಅನೇಕ ಕಡೆ ರೈನ್‌ಡ್ಯಾನ್ಸ್ ನಾಪತ್ತೆಯಾಗಿತ್ತು. ಹೋಳಿಯ ದಿನ 9128 ಪ್ರಕರಣಗಳನ್ನು ಪೋಲೀಸರು ದಾಖಲಿಸಿದ್ದರು.
ಹೋಳಿ ಬಂತು ಎಂದರೆ ನೀರಿನ ಟ್ಯಾಂಕರ್‌ಗೂ ವಿಪರೀತ ಬೇಡಿಕೆ. ಈ ಬಾರಿ ಮುಂಬೈಯಲ್ಲಿ ಮಳೆಯೂ ಕಡಿಮೆ. ಬೇಸಿಗೆಯಲ್ಲಿ ನೀರಿನ ಅಪವ್ಯಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಶಾಸಕರು ಮಹಾನಗರ ಪಾಲಿಕೆ ಆಡಳಿತಕ್ಕೆ ಪತ್ರವನ್ನೂ ಬರೆದಿದ್ದಾರೆ.