ಕಡಬ : ಅಧಿಕಾರಿಗಳ ಇಚ್ಛಾಶಕ್ತಿಯಿಂದಾಗಿ ಅಭಿವೃದ್ಧಿ ಮರೀಚಿಕೆ, ಒಡೆದು ಹೋದ ಹಲವು ವರುಷಗಳ ಕನವರಿಕೆ
ನಾಮಫಲಕದಲ್ಲಿ ಮಾತ್ರ ಮೇಲ್ದರ್ಜೆಗೇರಿರುವ ಕಡಬ ಸಮುದಾಯ ಆಸ್ಪತ್ರೆ
ಕಡಬ, ಪರಿಸರದಲ್ಲಿ ಯಾವುದೇ ರೀತಿಯ ಅವಘಡಗಳಾದರೂ ಮೊದಲು ನೆನಪಿಗೆ ಬರುವುದು ಸರಕಾರಿ ಆಸ್ಪತ್ರೆ. ಮನುಷ್ಯನಿಗೆ ಪ್ರಥಮ ಚಿಕಿತ್ಸೆಯಿಂದ ಹಿಡಿದು ಉನ್ನತ ಮಟ್ಟದ ಚಿಕಿತ್ಸೆಯವರೆಗೂ ಸರಕಾರಿ ಆಸ್ಪತ್ರೆಯನ್ನು ಅವಲಂಬಿಸುವವರಿದ್ದಾರೆ. ಆದರೆ ಕಡಬ ಪರಿಸರದ ಸುಮಾರು 25 ಕಿ.ಮೀ. ವ್ಯಾಪ್ತಿಯಲ್ಲಿ ರಾತ್ರಿ-ಹಗಲೆನ್ನದೆ ಅಪಘಾತ, ಹೆರಿಗೆಯಂತಹ ಸಂದರ್ಭಗಳಲ್ಲಿ ಏಕೈಕ ಆಸ್ಪತ್ರೆಯಾಗಿರುವ ಕಡಬ ಸಮುದಾಯ ಆರೋಗ್ಯ ಕೇಂದ್ರವನ್ನು ಅವಲಂಬಿಸಬೇಕಾಗುತ್ತದೆ. ಸುಮಾರು ಹಿಂದಿನಿಂದಲೂ ಗಂಡಸರ ವಿಭಾಗದಲ್ಲಿ 4 ಹಾಸಿಗೆ, ಹೆಂಗಸರ ವಿಭಾಗದಲ್ಲಿ 2 ಹಾಸಿಗೆ ಸೇರಿದಂತೆ ಪ್ರಸೂತಿ ಕೊಠಡಿಯೊಂದಿಗೆ ಕಾರ್ಯಾಚರಿಸುತ್ತಿದ್ದ ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2007ರಲ್ಲಿ 30 ಹಾಸಿಗೆಗಳ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದರೂ, ಇವುಗಳಲ್ಲಿ ಯಾವುದೂ ಕಾರ್ಯರೂಪಕ್ಕೆ ಬರದೆ ಆಸ್ಪತ್ರೆಯ ನಾಮಫಲಕವನ್ನು ಮಾತ್ರ ಸಮುದಾಯ ಆಸ್ಪತ್ರೆಯೆಂದು ಮೇಲ್ದರ್ಜೆಗೇರಿಸಲಾಗಿದೆ.
ಪ್ರಸೂತಿ ತಜ್ಞರು, ಶಿಶು ತಜ್ಞರು ಸೇರಿದಂತೆ 4 ಮಂದಿ ವೈದ್ಯಾಧಿಕಾರಿಗಳು, ಓರ್ವ ದಂತ ವೈದ್ಯರು ಹೀಗೆ ಒಟ್ಟು 34 ಹುದ್ದೆಗಳು ಮಂಜೂರುಗೊಂಡಿದ್ದು, ಆದರೆ ಇಲ್ಲಿ ಓರ್ವ ಮಹಿಳಾ ವೈದ್ಯಾಧಿಕಾರಿ ಸೇರಿದಂತೆ ಒಟ್ಟು 17 ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 5 ಮಂದಿ ಸ್ಟಾಫ್ ನರ್ಸ್‌ಗಳು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. 2.29 ಎಕರೆ ಪ್ರದೇಶದಲ್ಲಿರುವ ಈ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ ತ್ರಿಮೂರ್ತಿಯವರನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದ್ದು, ಇದೀಗ ಮಹಿಳಾ ವೈದ್ಯಾಧಿಕಾರಿಯೊಬ್ಬರೇ ಇಲ್ಲಿ ರಾತ್ರಿ ಹಗಲೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಡಬ ಪರಿಸರದ ಏಕೈಕ ಆಸ್ಪತ್ರೆ:
ಕಡಬ ವ್ಯಾಪ್ತಿಯಲ್ಲಿ ಸರಕಾರಿ ಆಸ್ಪತ್ರೆಯನ್ನು ಬಿಟ್ಟರೆ ಖಾಸಗಿ ಕ್ಲಿನಿಕ್‌ವೊಂದಿದ್ದು, ಅಲ್ಲಿನ ವೈದ್ಯರು ತನ್ನ ಇಳಿವಯಸ್ಸಿನಲ್ಲೂ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಹೆಚ್ಚಿನ ಜನರು ಸರಕಾರಿ ಆಸ್ಪತ್ರೆಯನ್ನೇ ನಂಬಿ ಬರುತ್ತಿದ್ದು, ದಿನಾಲೂ ಸುಮಾರು 300 ಮಂದಿ ಹೊರರೋಗಿಗಳು ಆಗಮಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಾ ಲ್ಯಾಬ್ ಮತ್ತು 2013ರಲ್ಲಿ ಕಡಬ ರೋಟರಿ ಕ್ಲಬ್‌ನವರು ಆಸ್ಪತ್ರೆಗೆ ಕೊಡಮಾಡಿದ ಎಕ್ಸ್‌ರೇ ಯಂತ್ರಗಳು ಮಾತ್ರವಿದ್ದು, ಹೆಚ್ಚಿನ ಸೌಲಭ್ಯಗಳಿಲ್ಲದೆ ಇರುವುದರಿಂದ ಸಾಮಾನ್ಯ ಹೆರಿಗೆ ಹಾಗೂ ಅಪಘಾತಗಳಾದಂತಹ ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಮಾತ್ರ ಇಲ್ಲಿ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ 40 ಕಿ.ಮೀ. ದೂರವಿರುವ ಪುತ್ತೂರಿಗೋ ಮಂಗಳೂರಿಗೋ ಕಳುಹಿಸಿಕೊಡಲಾಗುತ್ತಿದೆ. ಕಡಬ, ಕೋಡಿಂಬಾಳ, ಕುಟ್ರುಪ್ಪಾಡಿ, ನೂಜಿಬಾಳ್ತಿಲ, ಬಲ್ಯ, ಮರ್ಧಾಳ, 102 ನೆಕ್ಕಿಲಾಡಿ, ಐತ್ತೂರು ಕೊಣಾಜೆ, ಕೊಂಬಾರು, ಬಿಳಿನೆಲೆ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಈ ಆಸ್ಪತ್ರೆಗೆ ರಾತ್ರಿ ವೇಳೆಯಲ್ಲಿ ರೋಗಿಗಳನ್ನು ಕರೆತಂದರೆ ವೈದ್ಯಾಧಿಕಾರಿಗಳಿಲ್ಲವೆಂಬ ಉಡಾಫೆಯಿಂದ ವರ್ತಿಸುತ್ತಾರೆ ಎನ್ನುವುದು ಸರ್ವೀಸ್ ಜೀಪು ಚಾಲಕರಾದ ಲತೀಫ್‌ರವರ ಆರೋಪ. ಸುಮಾರು ಎರಡು ವರ್ಷಗಳ ಹಿಂದೆ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಕಡಬ ಮೂಲದವರೇ ಆದ ರಾಜ್ಯದ ಆರೋಗ್ಯ ಸಚಿವರಾದ ಯು.ಟಿ.ಖಾದರ್‌ರವರು ಹಲವು ಭರವಸೆಗಳನ್ನು ನೀಡಿ ಹೋಗಿದ್ದು, ಯಾವುದೂ ಈಡೇರಿಲ್ಲ. ಅವರು ಮುತುವರ್ಜಿ ವಹಿಸಿದ್ದರೆ ಯಾವಾಗಲೋ ಜನೋಪಯೋಗಿ ಆಸ್ಪತ್ರೆಯಾಗಿ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಹಲವು ಸಾವುಗಳನ್ನಾದರೂ ತಡೆಗಟ್ಟಬಹುದೆನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೋರ್ವರು.
ಆಂಬ್ಯುಲೆನ್ಸ್ ಸೇವೆ:
ಆಸ್ಪತ್ರೆಯಲ್ಲಿ ಸರಕಾರಿ ಆಂಬ್ಯುಲೆನ್ಸ್ ಸೇವೆಯನ್ನು ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ಮತ್ತು ಇನ್ನುಳಿದವರಿಗೆ ದರ ವಿಧಿಸಿ ಕಳುಹಿಸಲಾಗುತ್ತಿದ್ದು, 108 ಆಂಬ್ಯುಲೆನ್ಸ್ ಹತ್ತಿರದಲ್ಲಿಯೇ ಇರುವುದರಿಂದಾಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಹೆಚ್ಚಿನ ದಿನಗಳಲ್ಲಿ ಶೆಡ್‌ನಲ್ಲಿಯೇ ಕಂಡುಬರುತ್ತಿದೆ. ಆದರೆ ಹೆಚ್ಚು ಜನೋಪಯೋಗಿಯಾಗಿರುವ 108 ಆಂಬ್ಯುಲೆನ್ಸನ್ನು ಗಾಳಿ, ಮಳೆ ಲೆಕ್ಕಿಸದೆ ಮರದಡಿಯಲ್ಲೋ, ಬಿಸಿಲಿಗೋ ನಿಲ್ಲಿಸುತ್ತಿದ್ದು, ಯಾರಿಗೂ ಬೇಡವಾದ ಸರಕಾರಿ ಆಂಬ್ಯುಲೆನ್ಸನ್ನು ಶೆಡ್ ಮಾಡಿ ಭದ್ರವಾಗಿ ನಿಲ್ಲಿಸಲಾಗಿರುವುದು ಕಂಡು ಬರುತ್ತಿದೆ. ತಾಲೂಕಾಗಿ ಘೋಷಣೆಯಾಗಿರುವ ಕಡಬದಲ್ಲಿ ಲಾಭದ ಉದ್ದೇಶದಿಂದವಾದರೂ ಖಾಸಗಿ ಆಸ್ಪತ್ರೆ ತಲೆಯೆತ್ತುತ್ತಿದ್ದಲ್ಲಿ ಹಲವು ಜೀವಗಳನ್ನು ಉಳಿಸಬಹುದಿತ್ತೇನೋ. ತುರ್ತು ಸಂದರ್ಭಗಳಲ್ಲಿ ನೆರೆಯ ಪುತ್ತೂರು ಅಥವಾ ಮಂಗಳೂರಿನ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾದ ವ್ಯವಸ್ಥೆಗೆ ಯಾವಾಗ ಕಡಿವಾಣ ಬೀಳಬಹುದೆನ್ನುವುದು ದೇವನೇ ಬಲ್ಲ.
ಕಡತಗಳಲ್ಲಿ ಮಾತ್ರ ಮೇಲ್ದರ್ಜೆಗೇರಿರುವ ಕಡಬ ಸಮುದಾಯ ಆಸ್ಪತ್ರೆಗೆ ಕಾಯಕಲ್ಪ ನೀಡಲು ರಾಜ್ಯದ ಆರೋಗ್ಯ ಸಚಿವರು ಮುತುವರ್ಜಿ ವಹಿಸಿ 4.85 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಎರಡು ತಿಂಗಳ ಒಳಗಡೆ ಕಟ್ಟಡ ಕಾವಗಾರಿ ಪ್ರಾರಂಭಿಸಲಾಗುವುದು.
- ಪಿ.ಪಿ. ವರ್ಗೀಸ್, ಜಿಲ್ಲಾ ಪಂಚಾಯತ್ ಸದಸ್ಯರು, ಕಡಬ ಕ್ಷೇತ್ರ
ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂಜೆ 5 ಗಂಟೆಯ ನಂತರ ತುರ್ತು ಚಿಕಿತ್ಸೆಗೆ ಆಗಮಿಸಿದರೆ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿರುವುದಿಲ್ಲ. ವೈದ್ಯಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನರ್ಸ್‌ಗಳೇ ಚಿಕಿತ್ಸೆ ನೀಡುತ್ತಿದ್ದು, ವೈದ್ಯಾಧಿಕಾರಿಯವರು ಆಗಮಿಸುವುದೇ ಇಲ್ಲ.
- ಕ್ಸೇವಿಯರ್ ಬೇಬಿ, ಕುಟ್ರುಪ್ಪಾಡಿ ಗ್ರಾ.ಪಂ. ಮಾಜಿ ಸದಸ್ಯ