ಶ್ರೀಗಳಿಗೆ ಭಾರತರತ್ನ ಪ್ರಶಸ್ತಿಗೆ ಶಿಫಾರಸು: ಸಿಎಂ
ಸಿದ್ದಗಂಗಾ ಶ್ರೀಗಳ 109ನೆ ಹುಟ್ಟುಹಬ್ಬ; ರಾಜ್ಯ ಸರಕಾರದಿಂದ ಶುಭಾಶಯ
ತುಮಕೂರು, ಎ.1: ಸಿದ್ಧಗಂಗಾ ಮಠದ ಡಾ:ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿದ್ದಗಂಗಾ ಶ್ರೀಗಳ 109ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಿದ್ಧಗಂಗಾಮಠಕ್ಕಿಂದು ಭೇಟಿ ನೀಡಿ ಶುಭಾಶಯ ಕೋರಿ ಮಾತನಾಡಿದ ಅವರು,1908ರಲ್ಲಿ ಜನ್ಮ ತಾಳಿದ ಶ್ರೀಗಳು 108 ವರ್ಷಗಳನ್ನು ಪೂರೈಸಿ 109ನೆ ವಸಂತಕ್ಕೆ ಕಾಲಿಟ್ಟ್ಟಿರುವ ಶುಭ ಸಂದರ್ಭದಲ್ಲಿ ಇನ್ನೂ ದೀರ್ಘಕಾಲ ಅವರು ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಶ್ರೀಗಳು ಸಮಾಜದ ಎಲ್ಲ ವರ್ಗದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಅನ್ನದಾಸೋಹ, ವಸತಿ ಸೌಕರ್ಯ ಕಲ್ಪಿಸಿ ಉತ್ತಮ ಸಂಸ್ಕಾರ ನೀಡುವ ಮಹತ್ತರ ಕಾಯಕ ರೂಢಿಸಿಕೊಂಡು ಬಂದಿದ್ದಾರೆ. ಮಠದಲ್ಲಿ ಕಲಿತವರು ದೇಶ-ವಿದೇಶಗಳಲ್ಲಿ ನೆಲೆಸಿದ್ದು, ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ.
ಈ ಇಳಿ ವಯಸ್ಸಿನಲ್ಲಿಯೂ ಇವರಿಗಿರುವ ಸಾಮಾಜಿಕ ಕಳಕಳಿ ಯುವಕರನ್ನು ನಾಚಿಸುತ್ತದೆ. ಕಾಯಕಯೋಗಿ ಬಸವಣ್ಣನವರ ತತ್ವವನ್ನು ಕಾಯಾ ವಾಚ ಪಾಲಿಸಿಕೊಂಡು ಬಂದಿರುವ ಶ್ರೀಗಳು, ನಮ್ಮಿಡನಿರುವುದೇ ನಮಗೆ ದೊಡ್ಡ ನೈತಿಕಶಕ್ತಿ ಎಂದು ಹೇಳಿದ ಸಿದ್ದರಾಮಯ್ಯ, ಸರಕಾರಗಳು ಬಡವರಪರ, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಡಳಿತ ನಡೆಸಬೇಕೆಂದು ಬಹಳಷ್ಟು ಬಾರಿ ತಮಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು. ಸಚಿವರಾದ ಡಾ.ಜಿ.ಪರಮೇಶ್ವರ್, ಟಿ.ಬಿ.ಜಯ ಚಂದ್ರ, ಎಚ್.ಎಸ್.ಮಹದೇವಪ್ರಸಾದ್, ಎಚ್.ಆರ್.ಆಂಜನೇಯ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಶಾಸಕ ಡಾ:ರಫೀಕ್ ಅಹ್ಮದ್, ಮೇಯರ್ ಯಶೋಧ ಮೊದಲಾದವರು ಈ ಸಂದರ್ಭದಲ್ಲಿದ್ದರು.