ಆಸ್ಪತ್ರೆಗಳೇ ಮೃತ್ಯುಕೂಪಗಳಾದಾಗ...
ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿ ಆಗುವ ಪ್ರಮಾದಗಳಿಂದಾಗಿ ರೋಗಿಗಳು ಸಾವಿಗೀಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ನಮ್ಮ ಸರಕಾರ ಹಾಗೂ ರಾಜಕಾರಣಿಗಳು ಪ್ರದರ್ಶಿಸಬೇಕಾಗಿದೆ.
ಜನರ ಪ್ರಾಣಗಳನ್ನು ಉಳಿಸುವ ಕಾರ್ಯದ ಹೊರತಾಗಿಯೂ ವೈದ್ಯಕೀಯ ಶುಶ್ರೂಷೆ ಕ್ಷೇತ್ರವು ಅಂತರ್ಗತವಾಗಿ ಅಪಾಯಕಾರಿಯಾಗಿದೆ. ತಡೆಯಲು ಸಾಧ್ಯವಿರುವಂತಹ ಆಸ್ಪತ್ರೆ ಪ್ರಮಾದಗಳಿಂದಾಗಿ ಅಮೆರಿಕದಲ್ಲಿ ಪ್ರತಿ ದಿನ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ನಮ್ಮ ದೇಶದ ಜನಸಂಖ್ಯೆಯು ಅಮೆರಿಕಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ವೈದ್ಯಕೀಯ ಶುಶ್ರೂಷೆಗೆ ಸಂಬಂಧಿಸಿದ ಕಾನೂನು ಮತ್ತು ನಿಯಮಗಳು, ಭಾರತದಲ್ಲಿ ಅಷ್ಟು ಕಠಿಣವಾಗಿಲ್ಲ. ಸಾವಿರಾರು ವೈದ್ಯಕೀಯ ಶುಶ್ರೂಷಕರು ಅದರಲ್ಲಿ ವಿಶೇಷವಾಗಿ ಹಳ್ಳಿಗಳಲ್ಲಿರುವವರು ಸುಶಿಕ್ಷಿತರಲ್ಲ. ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿ ಉತ್ತರದಾಯಿತ್ವ ಅಥವಾ ನೈತಿಕ ಕಾಳಜಿ ಇಲ್ಲಿ ಕಂಡುಬರುತ್ತಿಲ್ಲ. ಹೀಗೆ ತಡೆಯಬಹುದಾದ ಆಸ್ಪತ್ರೆ ಪ್ರಮಾದಗಳಿಂದಾಗಿ ಪ್ರತಿ ದಿನ ಕಡಿಮೆಯೆಂದರೂ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆಂದು ನಾವು ಅಂದಾಜಿಸಬಹುದು.
ಗಂಭೀರವಾದ ಶಸ್ತ್ರಕ್ರಿಯೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಪ್ರತಿ 10 ಮಂದಿ ರೋಗಿಗಳಲ್ಲಿ ಓರ್ವ ತಡೆಯಬಹುದಾದ ವೈದ್ಯಕೀಯ ಪ್ರಮಾದಗಳಿಂದಾಗಿ ಮೃತಪಟ್ಟಿದ್ದಾರೆ ಹಾಗೂ ಹಲವರು ಗಂಭೀರವಾದ ಆರೋಗ್ಯ ಹಾನಿಯನ್ನು ಅನುಭವಿಸಿದ್ದಾರೆಂದು 2009ರಲ್ಲಿ ದಿಲ್ಲಿ ಆಸ್ಪತ್ರೆಯಲ್ಲಿ ನಡೆಸಲಾದ ಅಧ್ಯಯನವರದಿಯೊಂದು ಬಹಿರಂಗಪಡಿಸಿದೆ. ವಿವಿ ವಿದ್ಯಾರ್ಥಿಗಳ ವಿವಾದ, ಜಾತಿ ಸಂಘರ್ಷ ಮತ್ತಿತರ ಜ್ವಲಂತ ಸಮಸ್ಯೆಗಳ ಬಗ್ಗೆ ದೇಶಾದ್ಯಂತ ಬಿಸಿಬಿಸಿ ಚರ್ಚೆಯಾಗುತ್ತಿರುವಂತೆಯೇ, ವೈದ್ಯಕೀಯ ಚಿಕಿತ್ಸೆಯ ಸಂದರ್ಭಗಳಲ್ಲಿ ನಡೆಯುವ ಪ್ರಮಾದಗಳು ಸದ್ದಿಲ್ಲದೆ ನಿತ್ಯವೂ ಹಲವು ಜೀವಗಳನ್ನು ಬಲಿತೆಗೆದುಕೊಳ್ಳುತ್ತಲೇ ಇದೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ,
ಇಂತಹ ಚಿಕಿತ್ಸಾ ಪ್ರಮಾದಗಳು ಕೇವಲ ವೈದ್ಯರು ಹಾಗೂ ನರ್ಸ್‌ಗಳು ಎಸಗುವ ತಪ್ಪಿನಿಂದಷ್ಟೇ ಅಲ್ಲ. ಕಳಪೆಯಾಗಿ ನಿರ್ವಹಿಸಲಾಗುತ್ತಿರುವ ಶುಶ್ರೂಷಾ ವ್ಯವಸ್ಥೆಯಿಂದಲೂ ಆಗುತ್ತವೆ. ಕಳಪೆಗುಣಮಟ್ಟದ ಔಷಧಿಗಳು,ಚಿಕಿತ್ಸಾ ಉಪಕರಣಗಳ ಲೋಪ ಅಥವಾ ಅವುಗಳ ಅಲಭ್ಯತೆ, ಕೆಳಮಟ್ಟದ ಸೋಂಕು ರೋಗ ನಿಯಂತ್ರಣ ನೀತಿಗಳು, ಅಸಮರ್ಪಕ ಅಥವಾ ಸೂಕ್ತ ಜ್ಞಾನದ ಕೊರತೆಯ ವೈದ್ಯರು ಹಾಗೂ ನರ್ಸ್‌ಗಳು, ರೋಗಿಗಳು ಮತ್ತು ಆರೋಗ್ಯ ಸಿಬ್ಬಂದಿ ನಡುವೆ ದುರ್ಬಲ ಸಂವಹನಶೀಲತೆ ಇವುಗಳಿಂದಲೂ ಚಿಕಿತ್ಸಾ ಪ್ರಮಾದಗಳು ಸಂಭವಿಸುತ್ತವೆ.
ಭಾರತದ ಹಲವು ಖಾಸಗಿ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜ್‌ಗಳು ತಾವು ವಸೂಲಿ ಮಾಡುತ್ತಿರುವ ಶುಲ್ಕದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡುವ ಕುಖ್ಯಾತಿ ಹೊಂದಿವೆ. ಹೀಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಇರಬೇಕಾದ ಮೂಲಭೂತ ಜ್ಞಾನದ ಕೊರತೆಯಿರುವ ಹಲವಾರು ಆರೋಗ್ಯ ವೃತ್ತಿಪರರು ನಮ್ಮ ದೇಶದಲ್ಲಿದ್ದಾರೆ.
ಶುಶ್ರೂಷಾ ಪ್ರಮಾದದಿಂದ ಸಂಭವಿಸುವ ಸಾವುಗಳಿಗೆ ಇನ್ನೊಂದು ಉದಾಹರಣೆ ಇಲ್ಲಿದೆ. ಕೆಲವು ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ವಾರ್ಡ್‌ಗಳಲ್ಲಿ ತೊಟ್ಟಿಲುಗಳ ಕೊರತೆಯಿಂದಾಗಿ ನವಜಾತ ಶಿಶುಗಳು ತಾಯಂದಿರ ಜೊತೆಗೆ ಮಲಗಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತಾಯಿಯ ದೇಹದಭಾರಕ್ಕೆ ಸಿಲುಕಿ ಉಸಿರುಕಟ್ಟಿ ಸಾವನ್ನಪ್ಪಿದ ಘಟನೆಗಳು ಹಲವಾರಿವೆ.
ವೈದ್ಯಕೀಯ ಕ್ಷೇತ್ರವು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ವೈದ್ಯಕೀಯ ವೃತ್ತಿಯನ್ನೂ ಒಳಪಡಿಸಿದ ಬಳಿಕವೂ ಆಸ್ಪತ್ರೆಗಳಲ್ಲಿ ಸುರಕ್ಷತೆಯೆಂಬುದು ಬಹುದೊಡ್ಡ ಸಮಸ್ಯೆಯಾಗಿದೆ (ಪ್ರತಿಕೂಲ ಘಟನೆಗಳಲ್ಲಿ ಆಸ್ಪತ್ರೆಗಳನ್ನು ಕಾನೂನಾತ್ಮಕವಾಗಿ ಉತ್ತರದಾಯಿಯನ್ನಾಗಿಸುವುದು). 2014ರಲ್ಲಿ ನ್ಯಾಶನಲ್ ಮೆಡಿಕಲ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯವೊಂದರಲ್ಲಿ ರೋಗಿಗಳ ಸುರಕ್ಷತೆಗೆ ಸಂಬಂಧಿಸಿ ಭಾರತದಲ್ಲಿ ಯಾವುದೇ ಗಂಭೀರವಾದ ರಾಜಕೀಯ ಬದ್ಧತೆ ಇಲ್ಲವೆಂದು ಪ್ರಮುಖ ಆರೋಗ್ಯಪಾಲನಾ ವೃತ್ತಿಪರರು ತಿಳಿಸಿದ್ದಾರೆ.
ರೋಗಿಗಳ ವಿಪರೀತ ದಟ್ಟಣೆಯಿರುವ ಹಾಗೂ ಕಡಿಮೆ ಆರ್ಥಿಕ ನಿಧಿಯಿರುವ ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟ ನಿಯಂತ್ರಣ ಹಾಗೂ ಚಿಕಿತ್ಸಾ ಸುರಕ್ಷತೆಯನ್ನು ಅನುಷ್ಠಾನಗೊಳಿಸುವುದು ಅತ್ಯಂತ ಸವಾಲಿನದ್ದಾಗಿದೆ. ಸರಕಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ಈವರೆಗಿನ ಸರಕಾರಗಳು ನಿರ್ಲಕ್ಷ ವಹಿಸುತ್ತಲೇ ಬಂದಿವೆ. ಬಡವರ ಜೊತೆಗಿರುವುದಾಗಿ ಹೇಳಿಕೊಳ್ಳುವ ನಮ್ಮ ರಾಜಕೀಯ ನಾಯಕರು ಕೂಡಾ ತಮ್ಮ ಭಾಷಣಗಳಲ್ಲಿ ಈ ವಿಷಯದ ಬಗ್ಗೆ ವೌನ ತಾಳುತ್ತಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸಮರ್ಪಕವಾದ ಸಂಪನ್ಮೂಲಗಳನ್ನು ಮೀಸಲಿಡಲು ಸೂಕ್ತ ನಿಯಮಾವಳಿಗಳು ಇಲ್ಲದಿರುವುದರಿಂದ, ಭಾರತದ ಹಲವಾರು ಪೌರರಿಗೆ ರೋಗಿಗಳ ಸುರಕ್ಷತೆಯೆಂಬುದು ಗಗನಕುಸುಮವಾಗಿಯೇ ಉಳಿದಿದೆ.
ಈ ಸಮಸ್ಯೆಗೆ ಸಮಗ್ರವಾಗಿ ಸ್ಪಂದಿಸುವಂತೆ ಮಾಡಲು ಉದಾಸೀನ ಮನೋಭಾವದ ನಮ್ಮ ಸರಕಾರಗಳಿಗೆ ಚುರುಕು ಮುಟ್ಟಿಸುವ ಕೆಲಸವಾಗಬೇಕಾಗಿದೆ. ಉದಾಹರಣೆಗೆ 2000 ದಶಕದ ಆರಂಭದಲ್ಲಿ 44,000-98,000 ಮಂದಿ ತಡೆಯಲು ಸಾಧ್ಯವಿರುವ ವೈದ್ಯಕೀಯ ಲೋಪಗಳಿಂದಾಗಿ ಸಾವನ್ನಪ್ಪುತ್ತಿದ್ದಾರೆಂಬ ಅಂಕಿಅಂಶಗಳು ಬಹಿರಂಗಗೊಂಡ ಬಳಿಕ ಅಮೆರಿಕದ ಆರೋಗ್ಯ ನೀತಿಯಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಮಾಡಲಾಯಿತು.
ಈ ವರದಿಯ ಹಿನ್ನೆಲೆಯಲ್ಲಿ ಅಮೆರಿಕದ ರಾಜಕಾರಣಿಗಳು ರೋಗಿಗಳ ಸುರಕ್ಷತೆಯ (ಆರೋಗ್ಯಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಜೊತೆಗೆ) ಬಗ್ಗೆ ಹೆಚ್ಚಿನ ಗಮನ ಹರಿಸತೊಡಗಿದರು. ಈಗ ಅಮೆರಿಕದ ಆರೋಗ್ಯ ಶುಶ್ರೂಷಾ ಸಂಸ್ಥೆಗಳು ತಮ್ಮಿಂದಾಗಬಹುದಾದ ವೈದ್ಯಕೀಯ ಪ್ರಮಾದಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಹೆಚ್ಚಿಸಿವೆ. ಅಮೆರಿಕ ಬಹಿರಂಗಪಡಿಸಿದ ಈ ಅಂಕಿಸಂಖ್ಯೆಗಳು ಅಪಾರ ಜಾಗತಿಕ ಪರಿಣಾಮವನ್ನು ಬೀರಿವೆ. ಆರೋಗ್ಯಶುಶ್ರೂಷಾ ಕ್ಷೇತ್ರಕ್ಕೆ ಸಂಬಂಧಿಸಿದ ಲೋಪಗಳನ್ನು ರಾಜಕೀಯ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸುವ ನಿಟ್ಟಿನಲ್ಲಿ ಅಮೆರಿಕದ ಜೊತೆಗೆ ಇತರ ಪಾಶ್ಚಾತ್ಯ ರಾಷ್ಟ್ರಗಳು ಕೂಡಾ ಕೈಜೋಡಿಸಿವೆ.
ಭಾರತದಲ್ಲಿಯೂ ರೋಗಿಗಳ ಸುರಕ್ಷತೆಯನ್ನು ಪೌರರು, ರಾಜಕಾರಣಿಗಳು ಹಾಗೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದಕ್ಕಾಗಿ ನಮ್ಮ ದೇಶದ ಆರೋಗ್ಯ ಶುಶ್ರೂಷಾ ಕ್ಷೇತ್ರದಲ್ಲಿ ವೈದ್ಯಕೀಯ ಲೋಪಗಳಿಂದಾಗಿ ಸಂಭವಿಸುವ ಸಾವಿನ ಸಂಖ್ಯೆಗಳ ಬಗ್ಗೆ ನಿಖರವಾದ ಅಂಕಿಸಂಖ್ಯೆಗಳನ್ನು ಕಂಡುಹಿಡಿಯುವ ಅಗತ್ಯವಿದೆ. ಸದ್ಯಕ್ಕೆ ನಮ್ಮಲ್ಲಿ ಈ ಕುರಿತು ಅಂಕಿಅಂಶಗಳಿದ್ದರೂ, ಅವು ಅಸಮರ್ಪಕವಾಗಿವೆ ಹಾಗೂ ಕೀಳಾಗಿ ಅಂದಾಜಿಸಲ್ಪಟ್ಟಿವೆ.. 2013ರಲ್ಲಿ ನಡೆಸಲಾದ ಅಂತಾರಾಷ್ಟ್ರೀಯ ಅಧ್ಯಯನ ವರದಿಯೊಂದು, ಅಸುರಕ್ಷಿತ ವೈದ್ಯಕೀಯ ಶುಶ್ರೂಷೆಯಿಂದಾಗಿ ಭಾರತದಲ್ಲಿ ಪ್ರತಿ ವರ್ಷ 50.20 ಲಕ್ಷಕ್ಕೂ ಅಧಿಕ ಮಂದಿ ‘ಹಾನಿ’ಗೀಡಾಗುತ್ತಿದ್ದಾರೆಂದು ತಿಳಿಸಿತ್ತು. 1960ನೆ ಇಸವಿಯಿಂದ ಹಿಡಿದು 2014ರವರೆಗೆ ರೋಗಿಗಳ ಸುರಕ್ಷತೆ ಕುರಿತು ಭಾರತದಲ್ಲಿ ಪ್ರಕಟವಾದ ಲೇಖನಗಳ ಸಂಖ್ಯೆಯು ಕೇವಲ 13 ಎಂಬುದಾಗಿ ವೈಜ್ಞಾನಿಕ ಪ್ರಕಟಣೆಗಳ ಪರಾಮರ್ಶನಾ ವರದಿ ತಿಳಿಸಿದೆ.
ಭಾರತದಲ್ಲಿ ಆರೋಗ್ಯಶುಶ್ರೂಷೆಗೆ ಸಂಬಂಧಿಸಿ ನಡೆದಿರುವ ಪ್ರತಿಕೂಲಕರ ಘಟನೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲವೆಂಬುದನ್ನು ಈ ಅಂಕಿಅಂಶಗಳು ಬಹಿರಂಗಪಡಿಸಿವೆ. ಇಂತಹ ಸಂಶೋಧನೆಯು ರೋಗಿಗಳ ಸುರಕ್ಷತೆಯನ್ನು ಉತ್ತೇಜಿಸುವ ಭಾರತದ ಪ್ರಯತ್ನಗಳಿಗೆ ಸಹಕಾರಿಯಾಗಲಿದೆ. ಇಂತಹ ಸಂಶೋಧನೆಗಳನ್ನು ಕೈಗೊಳ್ಳಲು ಬೇಕಾದ ಸಿಬ್ಬಂದಿ ಬಲ ಹಾಗೂ ತಾಂತ್ರಿಕ ಜ್ಞಾನ ನಮ್ಮಲ್ಲಿದೆ. ಆದರೆ ಅವುಗಳನ್ನು ಆಯೋಜಿಸಲು ಹಾಗೂ ಅವುಗಳಿಗೆ ಅರ್ಥಿಕ ನೆರವು ನೀಡುವ ರಾಜಕೀಯ ಇಚ್ಛಾಶಕ್ತಿ ನಮಗೆ ಈಗ ಬೇಕಾಗಿದೆ.