ಭಾರತೀಯ ಫ್ಯಾಶಿಸಂಗೆ ಆಹಾರವೇ ಆಧಾರ
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ವೈದಿಕ ಆಧಿಪತ್ಯ ಮತ್ತು ಬ್ರಾಹ್ಮಣ್ಯದ ಪ್ರಾಧಾನ್ಯತೆಗೆ ಮೂಲ ನೆಲೆ ಇರುವುದೇ ಆಹಾರ ಪದ್ಧತಿಯಲ್ಲಿ. ಮಾನವನ ಸಾತ್ವಿಕತೆ, ತಾತ್ವಿಕತೆ, ರಜೋಗುಣ, ತಮೋಗುಣಗಳಿಗೆ ಅವನ ಆಹಾರ ಪದ್ಧತಿಯೇ ಕಾರಣ ಎಂಬ ನಂಬಿಕೆ ಈ ದೇಶದಲ್ಲಿ ಪರಂಪರಾನುಗತವಾಗಿ ಬಂದಿದೆ. ಪುರಾಣ ಕಥನಗಳಲ್ಲೂ ಸಹ ಜಾತಿ ಸ್ಪರ್ಶ ಇಲ್ಲದೇ ಹೋದರೂ ದೇವಾಸುರರ ಸಂಘರ್ಷದಲ್ಲಿ ಆಹಾರ ಪದ್ಧತಿಯೂ ಒಂದು ಅಂಗವಾಗಿ ಬರುವುದನ್ನು ಕಾಣಬಹುದು.
ಕೆಲವು ನಿರ್ದಿಷ್ಟ ಆಹಾರ ಪದ್ಧತಿಯನ್ನು ಅನುಸರಿಸಿದರೆ ಮಾತ್ರವೇ ಮಾನವನಲ್ಲಿ ಸಾತ್ವಿಕತೆ ಬೆಳೆಯುತ್ತದೆ ಎಂಬ ನಂಬಿಕೆ ವೈದಿಕ ಪರಂಪರೆಗೆ ಬುನಾದಿಯಾದರೆ, ಮಾಂಸಾಹಾರ ಸೇವನೆಯಿಂದ ಕ್ರೌರ್ಯ ಹೆಚ್ಚಾಗುತ್ತದೆ ಎಂಬ ಪ್ರತೀತಿ ಮತ್ತು ಗಾಢ ನಂಬಿಕೆ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಬುನಾದಿಯಾಗಿದೆ.
ಹಾಗಾಗಿಯೇ 21ನೆಯ ಶತಮಾನದ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಭಾರತದ ಸುಶಿಕ್ಷಿತ ಸಮಾಜದಲ್ಲಿ ಅಗ್ರಹಾರ ಸಂಸ್ಕೃತಿ ಭದ್ರವಾಗಿ ನೆಲೆಯೂರಿದೆ. ಭಾರತದ ಯಾವುದೇ ನಗರದಲ್ಲಿ ಒಬ್ಬ ವ್ಯಕ್ತಿಯ ಅಸ್ಮಿತೆಗೂ ಅವನ/ಅವಳ ಆಹಾರ ಸಂಸ್ಕೃತಿ ಭೂಮಿಕೆಯಾಗುವುದನ್ನೂ ಕಾಣುತ್ತಿದ್ದೇವೆ. ನೀವು ಯಾವ ಜಾತಿ ಅಥವಾ ಯಾವ ಜನ ಎಂದು ಕೇಳುವುದಿಲ್ಲ. ಮನುಷ್ಯನನ್ನು ಜಾತಿ ಆಧಾರದ ಮೇಲೆ ಗುರುತಿಸಬಾರದು ಎಂಬ ಪ್ರಜ್ಞೆ ಅಥವಾ ಮನೋಭಾವ ಇದಕ್ಕೆ ಕಾರಣವಲ್ಲ. ಕಾನೂನಿನ ಭಯ ಅಷ್ಟೆ. ಆದರೂ ನೀವು ವೆಜ್ಜಾ ನಾನ್ ವೆಜ್ಜಾ ಎಂಬ ಪ್ರಶ್ನೆ ರಿಂಗಣಿಸಿದಾಗ ಇದೇ ಅಸ್ಮಿತೆಯ ಪ್ರಶ್ನೆ ಉದ್ಭವಿಸುತ್ತದೆ.
ವೈದಿಕ ಮನೋಭಾವದಿಂದ ಹೊರತಾಗಿ ನೋಡಿದರೂ ಕೆಲವು ಪ್ರಾಣಿಗಳ ಮಾಂಸ ತಿನ್ನುವವರು ನಿರ್ದಿಷ್ಟವಾಗಿ ಗುರುತಿಸಲ್ಪಡುತ್ತಾರೆ. ಅವಕೃಪೆಗೊಳಗಾಗುವುದೂ ಉಂಟು. ಇದಕ್ಕೆ ದಾದ್ರಿ ಒಂದು ನಿದರ್ಶನ.
ಶಿಷ್ಟ ಮತ್ತು ಜನಪದ ಸಂಪ್ರದಾಯಗಳ ನಡುವೆ ಇರುವ ಸಂಘರ್ಷ ಮತ್ತು ಗೊಂದಲಗಳನ್ನೂ ಸಹ ಆಹಾರ ಪದ್ಧತಿಯ ನೆಲೆಯಲ್ಲೇ ವಿಶ್ಲೇಷಿಸಿದಾಗ ಕಪ್ಪಡಿ ಜಾತ್ರೆಯಲ್ಲಿನ ಮಾಂಸಾಹಾರ ನಿಷೇಧ ಪ್ರಕರಣದ ಹಿನ್ನೆಲೆಯನ್ನು ಗ್ರಹಿಸಬಹುದು. ಭಾರತೀಯ ಸಂಸ್ಕೃತಿಯನ್ನು ವೈದಿಕ ಹಿಂದೂ ಸಂಸ್ಕೃತಿಯೊಡನೆ ಸಮೀಕರಿಸುವ ಪ್ರಯತ್ನಗಳ ಒಂದು ಭಾಗವಾಗಿ ಇದನ್ನು ಕಾಣಬಹುದು.
ಭಾರತೀಯ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮತ್ತು ಸಾಮಾಜಿಕ ಸ್ತರದಲ್ಲಿ ವೈದಿಕ ಸಂಪ್ರದಾಯದ ನಿಯಂತ್ರಣ ಮತ್ತು ಬ್ರಾಹ್ಮಣ್ಯದ ಆಧಿಪತ್ಯ ಎಷ್ಟೇ ಪ್ರಬಲವಾಗಿದ್ದರೂ ಜನಸಾಮಾನ್ಯರ ಸ್ಥಳೀಯ ಸಂಪ್ರದಾಯ ಮತ್ತು ನಂಬಿಕೆಗಳ ನೆಲೆಯಲ್ಲಿ ನಡೆಯುವ ಜಾತ್ರೆಗಳಲ್ಲಿ ಈ ಪ್ರಾಬಲ್ಯ ನಗಣ್ಯವಾಗಿರುತ್ತದೆ. ಬಹುಪಾಲು ಜಾತ್ರೆಗಳು ಬ್ರಾಹ್ಮಣ್ಯದ ಸಾಂಪ್ರದಾಯಿಕ ಮಡಿವಂತಿಕೆಯಿಂದ ಹೊರತಾಗಿರುವುದರಿಂದಲೇ ಸೆಕ್ಯುಲರ್ ಆಗಿರುವುದನ್ನು ಗಮನಿಸಬಹುದು.
ಪ್ರಾಣಿಬಲಿಯಂತಹ ಅಮಾನವೀಯ ಪ್ರಾಚೀನ ಪದ್ಧತಿಗಳನ್ನು ಹೊರತುಪಡಿಸಿದರೆ ಬಹುತೇಕ ಜಾತ್ರೆಗಳು ಜನಸಾಮಾನ್ಯರ ಮೂಲ ಸಾಂಪ್ರದಾಯಿಕ ನೆಲೆಯಲ್ಲೇ ನಡೆಯುತ್ತವೆ. ಹಿಂದೂ ಧರ್ಮವನ್ನು ವೈದಿಕ ತತ್ವಗಳ ನೆಲೆಯಲ್ಲೇ ವ್ಯಾಖ್ಯಾನಿಸುವ ಬ್ರಾಹ್ಮಣ್ಯದ ಪ್ರತಿಪಾದಕರಿಗೆ ಈ ಜನಸಂಸ್ಕೃತಿ ಸದಾ ಅಪಥ್ಯವಾಗಿರುವುದು ಸಹಜ. ಏಕೆಂದರೆ ಇಲ್ಲಿ ದೇವರು ಮತ್ತು ಭಕ್ತರ ನಡುವೆ ಒಂದು ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ. ಗರ್ಭಗುಡಿ ಸಂಸ್ಕೃತಿಯಿಂದ ಜಾತ್ರೆಗಳು ಹೊರತಾಗಿರುತ್ತವೆ. ಗರ್ಭಗುಡಿ ಸಂಸ್ಕೃತಿ ಇಲ್ಲದೆ ಬ್ರಾಹ್ಮಣ್ಯ ಉಳಿಯವುದೂ ಇಲ್ಲ. ಹಾಗಾಗಿ ಜಾತ್ರೆಗಳ ಮೇಲೆ ತನ್ನ ನಿಯಂತ್ರಣ ಸಾಧಿಸುವ ತುರ್ತು ಅಗತ್ಯತೆಯನ್ನು ಬ್ರಾಹ್ಮಣ್ಯದ ಪ್ರತಿಪಾದಕರು ಮನಗಾಣುತ್ತಿದ್ದಾರೆ.
ಈಗಾಗಲೇ ದೇಶದ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದ ಸುತ್ತ ತನ್ನ ಪ್ರಭಾವಳಿ ನಿರ್ಮಿಸಿರುವ ವೈದಿಕ ಶಕ್ತಿಗಳು ಗ್ರಾಮೀಣ ನೆಲೆಯ ಜನಸಂಸ್ಕೃತಿಯ ಮೇಲೆ ಆಧಿಪತ್ಯ ಸಾಧಿಸಲು ಜಾತ್ರೆಗಳನ್ನು ಚಿಮ್ಮುಹಲಗೆಯನ್ನಾಗಿ ಬಳಸಿಕೊಳ್ಳುತ್ತಿರುವುದನ್ನು ಎಲ್ಲೆಡೆ ಕಾಣಬಹುದು. ಹಾಗಾಗಿ ದೇಶದ ಬಹುಸಂಖ್ಯಾತ ಜನತೆಯ ನಂಬಿಕೆ ಮತ್ತು ಧಾರ್ಮಿಕ ನೆಲೆಯನ್ನು ಆಹಾರ ಪದ್ಧತಿಯ ಭೂಮಿಕೆಯ ಮೇಲೆ ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಕಪ್ಪಡಿ ಜಾತ್ರೆಯ ಸಂದರ್ಭದಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.
ಕಪ್ಪಡಿ ಜಾತ್ರೆಯ ಸಂದರ್ಭದಲ್ಲಿ ಮಾಂಸಾಹಾರ, ಬಾಡೂಟವನ್ನು ನಿಷೇಧಿಸುವ ರಾಜ್ಯ ಸರಕಾರದ ಕ್ರಮವನ್ನು ಭಾರತೀಯ ಪ್ರಭುತ್ವದ ಕೆಲವು ಅಪ್ರಬುದ್ಧ ನಿಲುವುಗಳ ನೆಲೆಯಲ್ಲೂ ಕಾಣಬಹುದು. ಹಿಂಸೆ ಮತ್ತು ಅಹಿಂಸೆಯ ಸಂಕಥನದಲ್ಲಿ ಜನರ ಆಹಾರ ಪದ್ಧತಿಯನ್ನು ಒಂದು ಮುಖ್ಯ ಭೂಮಿಕೆಯನ್ನಾಗಿ ಪರಿಗಣಿಸುವ ಪರಂಪರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಂಡುಬರುತ್ತಿದೆ. ಆಹಾರ ಸೇವನೆಯ ಸಾಂವಿಧಾನಿಕ ಹಕ್ಕು ಈವರೆಗೂ ಗಂಭೀರ ಚರ್ಚೆಗೊಳಗಾಗಿಲ್ಲ. ಹಾಗಾಗಿಯೇ ಸೆಕ್ಯುಲರ್ ಎಂದು ಕರೆಯಲಾಗುವ ಸರಕಾರಗಳೂ ಸಹ ಗಾಂಧಿ ಜಯಂತಿಯಂದು, ಕೆಲವು ಹಬ್ಬಗಳ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧಿಸುತ್ತವೆ, ಸಾಂವಿಧಾನಿಕವಾಗಿ ಇದು ಸ್ವೀಕೃತವೂ ಆಗಿದೆ.
ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ನೆಲೆಯಲ್ಲಿ ಹಿಂಸೆ ಮತ್ತು ಅಹಿಂಸೆಯನ್ನು ವ್ಯಾಖ್ಯಾನಿಸುವಾಗ ಸಮಾಜದ ಬೌದ್ಧಿಕ ಧೋರಣೆ ಮತ್ತು ಲೌಕಿಕ ನಿಲುವುಗಳು ಪ್ರಧಾನವಾಗಬೇಕೇ ಹೊರತು ಜನ ಸಾಮಾನ್ಯರ ಆಹಾರ ಪದ್ಧತಿ ಅಲ್ಲ. ಗಾಂಧಿ ಅಹಿಂಸೆಯನ್ನು ಬೋಧಿಸಿದರು ನಿಜ. ಆದರೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶದ ಜನರು ಮಾಂಸಾಹಾರ ಸೇವಿಸಬಾರದು ಎಂದು ಹೇಳುವುದು ಅತಾರ್ಕಿಕವಷ್ಟೇ ಅಲ್ಲ ಅಪ್ರಬುದ್ಧ ನಿಲುವೂ ಹೌದು. ಆದರೆ ಯಾವುದೇ ರಾಜಕೀಯ ಪಕ್ಷ ಈ ಕುರಿತು ಪ್ರಶ್ನಿಸುವುದಿಲ್ಲ
ಯಾವುದೇ ಸಂದರ್ಭದಲ್ಲಿ ಜನರ ಆಹಾರ ಪದ್ಧತಿಯನ್ನು ನಿಯಂತ್ರಿಸುವ ಹಕ್ಕನ್ನು ಈ ದೇಶದ ಸಂವಿಧಾನ ಆಳುವ ವರ್ಗಗಳಿಗೆ ನೀಡಿದೆಯೇ ಎಂಬ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ. ಈ ಅಸಾಂವಿಧಾನಿಕ ಹಕ್ಕನ್ನು ಸರಕಾರಗಳು ಪ್ರಯೋಗಿಸುತ್ತಲೇ ಇವೆ. ಆದ್ದರಿಂದಲೇ ದಾದ್ರಿಯಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಘಟನೆಗಳು ಕಾನೂನು ವಿರೋಧಿ ಎಂದೂ ಭಾವಿಸಲಾಗುವುದಿಲ್ಲ. ಏಕೆಂದರೆ ಈ ದೇಶದ ಕಾನೂನು ಅಗೋಚರ ಶಕ್ತಿಯ ನಿಯಂತ್ರಣದಲ್ಲಿದೆ. ಈ ಅಗೋಚರ ಶಕ್ತಿಯೇ ಕಪ್ಪಡಿ ಜಾತ್ರೆಯಲ್ಲೂ ತನ್ನ ಕರಾಳ ಛಾಯೆ ಹರಡಿದೆ.
ಯಾವುದೇ ಒಂದು ಗ್ರಾಮದ ಜನತೆ ಪ್ರತಿವರ್ಷ ನಡೆಸುವ ಜಾತ್ರೆಯಲ್ಲಿ ತಮ್ಮದೇ ಆದ ಮೂಲ ಜನಸಂಸ್ಕೃತಿಯ ನೆಲೆಯನ್ನು ಕಂಡುಕೊಳ್ಳುತ್ತಾರೆ. ಗಣಪತಿ ಉತ್ಸವ, ರಾಮನವಮಿ ಮುಂತಾದ ಮೇಲ್ಜಾತಿಯ ನಿಯಂತ್ರಣದಲ್ಲಿನ ಸಂದರ್ಭದಲ್ಲಿ ನಡೆಯುವಂತಹ ಕೋಮು ಗಲಭೆಗಳು ಭಾರತದ ಯಾವುದೇ ಭಾಗದಲ್ಲಿ ಜಾತ್ರೆಯ ಸಂದರ್ಭದಲ್ಲಿ ಸಂಭವಿಸಿಲ್ಲ. ಇಲ್ಲಿಯೂ ಹಿಂದೂ, ಮುಸ್ಲಿಂ ಮತ್ತಿತರ ಸಮುದಾಯಗಳಿರುತ್ತವೆ. ಏಕೆ ಹೀಗೆ ಎಂಬ ಪ್ರಶ್ನೆ ಸಹಜ. ಉತ್ತರ ಸುಲಭ . ಏಕೆಂದರೆ ಇಲ್ಲಿ ವೈದಿಕತೆಯ ನೆರಳು ಇರುವುದಿಲ್ಲ. ಜಾತಿ ತಾರತಮ್ಯ ಸೂಕ್ಷ್ಮವಾಗಿ ಇದ್ದರೂ, ಪ್ರಧಾನವಾಗಿ ಕಂಡುಬರುವುದಿಲ್ಲ. ಬ್ರಾಹ್ಮಣ್ಯದ ಆಧಿಪತ್ಯ ಇರುವುದಿಲ್ಲ. ಹಾಗಾಗಿ ಬಾಡೂಟ ಮಾಡುವವರು, ಸಂಪ್ರದಾಯವಾದಿಗಳು, ಮಡಿವಂತರು, ನಾಸ್ತಿಕರು, ಅನ್ಯ ಧರ್ಮದ ಜನರು ಎಲ್ಲರೂ ಜಾತ್ರೆಗಳಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಧರ್ಮ, ಜಾತಿ ಮತ್ತು ದೈವಿಕ ಭಾವನೆಗಳಿಗಿಂತಲೂ ಒಂದು ಸಾಂಸ್ಕೃತಿಕ ನೆಲೆ ಸೃಷ್ಟಿಯಾಗುತ್ತದೆ. ಸಾಂಸ್ಕೃತಿಕ ಸಮಾನತೆ ಜನಸಂಸ್ಕೃತಿಯ ಮೂಲ. ಈ ಸಮಾನತೆಯನ್ನು ಜಾತ್ರೆಗಳಲ್ಲಿ ಕಾಣಬಹುದಾಗಿದೆ.
ಬಹುಶಃ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಫ್ಯಾಶಿಸ್ಟ್ ಶಕ್ತಿಗಳು ಈ ಸಮಾನತೆ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಧ್ವಂಸಗೊಳಿಸಲು ಸಜ್ಜಾಗುತ್ತಿರುವಂತಿದೆ. ಈ ಕಾರ್ಯಾಚರಣೆಯನ್ನು ಧರ್ಮ ಕೇಂದ್ರಿತ ಕೋಮುವಾದಿ ನೆಲೆಯಲ್ಲಾಗಲಿ, ಜಾತಿ ಕೇಂದ್ರಿತ ಜಾತಿವಾದಿ ನೆಲೆಯಲ್ಲಾಗಲಿ ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಫ್ಯಾಶಿಸಂನ ಮೂಲ ಸೆಲೆಯಾಗಿರುವ ಬ್ರಾಹ್ಮಣ್ಯದ ಪ್ರತಿಪಾದಕರಿಗೆ, ವೈದಿಕ ಶಕ್ತಿಗಳಿಗೆ ಜನಸಂಸ್ಕೃತಿಯಲ್ಲಿ ನೆಲೆ ಕಂಡುಕೊಳ್ಳಲಾಗುವುದಿಲ್ಲ. ಹಾಗಾಗಿ ಮಾಂಸಾಹಾರ, ಬಾಡೂಟವನ್ನು ನಿಷೇಧಿಸುವ ಮೂಲಕ ತಮ್ಮ ನಿಯಂತ್ರಣ ಸಾಧಿಸಲೆತ್ನಿಸುತ್ತಿವೆ. ನನ್ನ ತಟ್ಟೆಯಲ್ಲಿರುವ ಅನ್ನ ನನ್ನ ಆಯ್ಕೆ ಎಂಬ ಪ್ರಜಾಸತ್ತಾತ್ಮಕ ಧೋರಣೆಯ ನೆಲೆಯಲ್ಲಿ ಈ ಫ್ಯಾಶಿಸ್ಟ್ ಆಕ್ರಮಣವನ್ನು ವಿರೋಧಿಸಬೇಕಿದೆ. ಕೇವಲ ಕಪ್ಪಡಿ ಜಾತ್ರೆಯಲ್ಲಿ ಅಲ್ಲ. ನಿರಂತರ ಪ್ರತಿರೋಧ ಅಗತ್ಯ.