ಭಾರತದ ಅತೀ ವೇಗದ ರೈಲು ಗತಿಮಾನ್‌ಗೆ ಚಾಲನೆ
ತಾಸಿಗೆ 160 ಕಿ.ಮೀ. ವೇಗದ ರೈಲು; ದಿಲ್ಲಿ- ಆಗ್ರಾ ನಡುವೆ ಸಂಚಾರ
ಭಾರತದ ಅತೀ ವೇಗದ ರೈಲೆಂಬ ಹೆಗ್ಗಳಿಕೆಯನ್ನು ಪಡೆದಿರುವ ಗತಿಮಾನ್ ಎಕ್ಸ್‌ಪ್ರೆಸ್‌ಗೆ ರೈಲ್ವೆ ಸಚಿವ ಸುರೇಶ್ ಪ್ರಭು ಮಂಗಳವಾರ ಹೊಸದಿಲ್ಲಿಯ ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು. ತಾಸಿಗೆ 160 ಕಿ.ಮೀ. ವೇಗದಲ್ಲಿ ಓಡುವ ಈ ರೈಲು ಹಝ್ರತ್ ನಿಝಾಮುದ್ದೀನ್ ಹಾಗೂ ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣಗಳ ನಡುವೆ ಸಂಚರಿಸಲಿದೆ. ಗತಿಮಾನ್ ಎಕ್ಸ್‌ಪ್ರೆಸ್‌ನ ಚಾಲನೆಯೊಂದಿಗೆ ಭಾರತದಲ್ಲಿ ಅತಿ ವೇಗದ ರೈಲು ಪ್ರಯಾಣದಲ್ಲಿ ಹೊಸ ಶಕೆಯೊಂದು ಆರಂಭಗೊಂಡಂತಾಗಿದೆ.
ಈ ರೈಲಿನ ಕೆಲವು ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ.
1. ತಾಸಿಗೆ 160 ಕಿ.ಮೀ. ವೇಗದಲ್ಲಿ ಓಡುವ ಗತಿಮಾನ್ ಎಕ್ಸ್‌ಪ್ರೆಸ್, ಈವರೆಗೆ ಭಾರತದ ಅತೀ ವೇಗದ ರೈಲೆಂದು ಪರಿಗಣಿಸಲ್ಪಟ್ಟಿದ್ದ, ಗಂಟೆಗೆ 150 ಕಿ.ಮೀ. ವೇಗದ ಭೋಪಾಲ್ ಶತಾಬ್ದಿಯನ್ನು ಹಿಂದಿಕ್ಕಿದೆ. ‘ಗತಿಮಾನ್’ ದಿಲ್ಲಿ ಹಾಗೂ ಆಗ್ರಾ ನಡುವಿನ 184 ಕಿ.ಮೀ. ದೂರವನ್ನು ಕೇವಲ 100 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ದೂರವನ್ನು ಕ್ರಮಿಸಲು ಭೋಪಾಲ್ ಶತಾಬ್ದಿಗೆ 110 ನಿಮಿಷಗಳು ಬೇಕಾಗುತ್ತದೆ.
2. ‘ಗತಿಮಾನ್ ಎಕ್ಸ್‌ಪ್ರೆಸ್’ ಶುಕ್ರವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಕಾರ್ಯಾಚರಿಸುತ್ತದೆ. ದಿಲ್ಲಿಯ ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ನಿರ್ಗಮಿಸುವ ರೈಲು ಬೆಳಗ್ಗೆ 9:50ಕ್ಕೆ ಆಗ್ರಾ ತಲುಪುತ್ತದೆ. ಅದೇ ದಿನ ಸಂಜೆ 5:50ಕ್ಕೆ ಆಗ್ರಾದಿಂದ ಮರುಪ್ರಯಾಣವನ್ನು ಆರಂಭಿಸುವ ರೈಲು 7:30ಕ್ಕೆ ಹೊಸದಿಲ್ಲಿ ತಲುಪುತ್ತಿದೆ.
3. ಗತಿಮಾನ್ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಬೋಗಿಯ ಪ್ರಯಾಣದರವು 750 ರೂ. ನಿಗದಿಪಡಿಸಲಾಗಿದೆ. ಈ ಶ್ರೇಣಿಯಲ್ಲಿ ಭೋಪಾಲ್ ಶತಾಬ್ದಿಯ ದರವು 515 ರೂ. ಆಗಿದೆ. ಗತಿಮಾನ್‌ನ ವಿಶೇಷ (ಎಕ್ಸಿಕ್ಯೂಟಿವ್) ದರ್ಜೆಯ ದರ 1,500 ರೂ. ಆಗಿದ್ದರೆ, ಭೋಪಾಲ್ ಶತಾಬ್ದಿ ಪ್ರಯಾಣದರ 1,010 ರೂ.
4. ಗತಿಮಾನ್ ಎಕ್ಸ್‌ಪ್ರೆಸ್‌ನಲ್ಲಿ 12 ಬೋಗಿಗಳಿದ್ದು, ಎರಡು ವಿಶೇಷ ದರ್ಜೆಯ ಕಂಪಾರ್ಟ್‌ಮೆಂಟ್‌ಗಳು, ಎಂಟು ಎಸಿ ಚೇರ್ ಕಾರ್ ಹಾಗೂ ಎರಡು ಪ್ಯಾಂಟ್ರಿ (ಪಾಕಶಾಲೆ) ಬೋಗಿಗಳನ್ನು ಒಳಗೊಂಡಿದೆ.
5. ಗತಿಮಾನ್ ಎಕ್ಸ್‌ಪ್ರೆಸನ್ನು ತಂತ್ರಜ್ಞಾನ ಕ್ಷೇತ್ರದ ಅದ್ಭುತ ಎಂಬುದಕ್ಕಿಂತ ಸಂಚಾರ ನಿರ್ವಹಣೆಯಲ್ಲಾದ ಮಹತ್ತರ ಪ್ರಗತಿ ಎಂದು ಪರಿಗಣಿಸಲಾಗಿದೆ. ಜನಜಂಗುಳಿಯ ಹೊಸದಿಲ್ಲಿಯ ಟರ್ಮಿನಲ್ ಬದಲು ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣದಿಂದ ನಿರ್ಗಮನವನ್ನು ನಿಗದಿಪಡಿಸುವ ಮೂಲಕ ಸಮಯ ಪಾಲನೆಗೆ ಆದ್ಯತೆ ನೀಡಲಾಗಿದೆ. ಜೊತೆಗೆ ದಾರಿ ಮಧ್ಯೆಯ ನಿಲ್ದಾಣಗಳಿಗೂ ರೈಲು ಕರಾರುವಕ್ಕಾದ ಸಮಯಕ್ಕೆ ಆಗಮಿಸಲು ವ್ಯವಸ್ಥೆ ಮಾಡಲಾಗಿದೆ.
6. ಈ ನೂತನ ರೈಲು, ಭವಿಷ್ಯದಲ್ಲಿ ಭಾರತದ ಅತ್ಯಾಧುನಿಕ ರೈಲು ಸಂಚಾರ ವ್ಯವಸ್ಥೆಯ ಮುನ್ನೋಟವೆಂದು ಪರಿಗಣಿಸಲಾಗಿದೆ. ಈ ರೈಲಿನ ಪ್ರತಿಬೋಗಿಯಲ್ಲೂ ಪರಿಚಾರಕರು ಹಾಗೂ ಪರಿಚಾರಕಿಯರಿದ್ದು, ಗುಲಾಬಿ ಹೂಗಳನ್ನು ನೀಡಿ ಅವರು ಪ್ರಯಾಣಿಕರನ್ನು ಸ್ವಾಗತಿಸಲಿದ್ದಾರೆ. ಜೈವಿಕ ಶೌಚಾಲಯ ವ್ಯವಸ್ಥೆಯ ಜೊತೆಗೆ ಎಲ್‌ಇಡಿ ಲೈಟ್‌ಗಳು ಹಾಗೂ ಸುವಾಸನೆಯನ್ನು ಹೊರಸೂಸುವ ಮೈಕ್ರೋ ಬಸ್ಟರ್‌ಗಳನ್ನು ಒಳಗೊಂಡಿದೆ. ಈ ರೈಲಿನಲ್ಲಿ ಉಚಿತ ವೈಫೈ ಸೌಲಭ್ಯ ಹಾಗೂ ಬೇಡಿಕೆಯ ವೀಡಿಯೋ ಸೌಲಭ್ಯವನ್ನು ಒದಗಿಸಲು ರೈಲ್ವೆಯು, ಮೈ ಫ್ರೀ ಟಿವಿ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.
7. ಪಾಲಂ ವಿಮಾನನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರಿಗೆ ಆಹಾರ ಪೂರೈಕೆಯನ್ನು ಮಾಡುತ್ತಿರುವ‘ ಟ್ರಾವೆಲ್ ಫುಡ್ ಸರ್ವಿಸಸ್’ ಸಂಸ್ಥೆಯು, ಗತಿಮಾನ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರಿಗೆ ಉತ್ಕೃಷ್ಟ ದರ್ಜೆಯ ಆಹಾರವನ್ನು ಒದಗಿಸಲಿದೆ. ಭಾರತೀಯ ಹಾಗೂ ಕಾಂಟಿನೆಂಟಲ್ ಆಹಾರಗಳೆರಡೂ ಇಲ್ಲಿ ಲಭ್ಯವಿದೆ. ಪಥ್ಯಾಹಾರವನ್ನು ಒದಗಿಸುವ ಬಗ್ಗೆಯೂ ಯೋಚಿಸಲಾಗುತ್ತಿದೆ.
8. ಗತಿಮಾನ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಒಂದು ಹಾಗೂ ಎರಡು ದಿನಗಳ ಅವಧಿಯ ಪ್ಯಾಕೇಜ್ ಪ್ರವಾಸದ ಕೊಡುಗೆಯನ್ನು ನೀಡಲಾಗುತ್ತದೆ. ಇದಕ್ಕಾಗಿ ಸ್ವದೇಶಿ ಹಾಗೂ ವಿದೇಶಿ ಪ್ರಯಾಣಿಕರಿಗೆ ವಿಭಿನ್ನ ದರಗಳನ್ನು ನಿಗದಿಪಡಿಸಲಾಗಿದೆ. ಈ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಂಡವರಿಗೆ ತಾಜ್‌ಮಹಲ್ ಹಾಗೂ ಫತೇಹ್‌ಪುರ್ ಸಿಕ್ರಿ ಸೇರಿದಂತೆ ಆಗ್ರಾದ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳಿಗೆ ಗೈಡ್ ಸಮೇತ ಪ್ರವಾಸದ ಏರ್ಪಾಡು ಮಾಡಲಾಗುವುದು.
9. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ನಿರ್ಮಾಣಗೊಂಡ ಈ ರೈಲನ್ನು ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದೆ. ಪಂಜಾಬ್‌ನ ಕಪೂರ್ತಲಾದ ರೈಲು ಕೋಚ್ ಕಾರ್ಖಾನೆಯಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
10. ಭಾರತದ ಪ್ರಪ್ರಥಮ ಸೆಮಿ ಹೈ ಸ್ಪೀಡ್ ರೈಲೆಂದು ಬಣ್ಣಿಸಲ್ಪಟ್ಟಿರುವ ಗತಿಮಾನ್ ಎಕ್ಸ್‌ಪ್ರೆಸನ್ನು ಶೀಘ್ರದಲ್ಲೇ ದೇಶಾದ್ಯಂತ ಇತರ ಎಂಟು ರೈಲ್ವೆ ಮಾರ್ಗಗಳಲ್ಲೂ ಓಡಾಡಲಿದೆ.