ಬೆಲೆ ಏರಿಕೆ ಕಹಿಯಲ್ಲಿ ಯುಗಾದಿ ಸಂಭ್ರಮ
ಖರೀದಿ ಬಲು ಜೋರು
ಬೆಂಗಳೂರು, ಎ. 7: ಹೊಸ ವರ್ಷಾರಂಭ ಯುಗಾದಿ ಹಬ್ಬದಲ್ಲಿ ಸುಖ ದುಃಖಗಳ ಸಂಕೇತವಾಗಿ ಬೇವು-ಬೆಲ್ಲ ಹಂಚಿ ತಿನ್ನುವ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರಿಗೆ ಕೇವಲ ಬೇವಿನ ಕಹಿಯುಂಡ ಅನುಭವವಾಗಿದೆ.
ಈ ಮೊದಲೆ ವಿದ್ಯುತ್, ನೀರು, ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೈರಾಣಾಗಿದ್ದ ನಗರದ ಜನತೆಗೆ, ಈ ಬಾರಿ ಯುಗಾದಿ ಹಬ್ಬವನ್ನು ಆಚರಿಸಲು ಹಬ್ಬದ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಜನರು ಬಸವಳಿದಿದ್ದಾರೆ.
ಹಬ್ಬದ ದಿನ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಮುಂದಾಲೋಚನೆಯಿಂದ ಜನರು ಬುಧವಾರ ಮತ್ತು ಗುರುವಾರದಂದೇ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಹಬ್ಬದ ಸರಕುಗಳನ್ನು ಕೊಳ್ಳಲು ಮಾರುಕಟ್ಟೆಗಳಲ್ಲಿ ಜನರು ಮುಗಿಬಿದ್ದಿರುವ ಚಿತ್ರಣ ಸರ್ವೇ ಸಾಮಾನ್ಯವಾಗಿದೆ.
ನಗರದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಕೆ.ಆರ್.ಪುರಂ ಮಾರುಕಟ್ಟೆಗಳಲ್ಲಿ ಹಬ್ಬದ ಸರಕುಗಳ ಖರೀದಿ ಬಲು ಜೋರಾಗಿ ನಡೆಯುತ್ತಿತ್ತು. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಸಾಮಾನ್ಯ ದಿನಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಬೆಲೆ ಏರಿಕೆಯಾದರೆ. ಕಳೆದ ವರ್ಷ 5ರೂ. ಗಳಿಗೆ ಸಿಗುತ್ತಿದ್ದ ಬೇವು ಒಂದು ಕಟ್ಟಿಗೆ 10-20 ರೂ.ಗಳ ವರೆಗೂ ಮಾರಾಟವಾಗುತ್ತಿತ್ತು. ಬೆಲ್ಲ ಕೆಜಿಗೆ ಈ ವರ್ಷ 10 ರೂ.ಗಳು ಹೆಚ್ಚಳವಾಗಿ 45-50 ರೂ. ದರದಲ್ಲಿ ಗುಣಮಟ್ಟದ ಅನುಗುಣವಾಗಿ ಮಾರಾಟವಾಗುತ್ತಿದೆ.
ಅದೇ ರೀತಿ ತೊಗರಿ ಬೇಳೆ, ನಿಂಬೆಹಣ್ಣು, ತೋರಣದ ಮಾವು-ಬೇವಿನ ಎಲೆ ಸೇರಿದಂತೆ ಇತರೆ ಸರಕು ಪದಾರ್ಥಗಳ ಬೆಲೆ ದ್ವಿಗುಣಗೊಂಡಿದೆ. ಯುಗಾದಿ ಮಾರನೆ ದಿನ ಆಚರಣೆ ಮಾಡುವ ವರ್ಷ ತೊಡುಕು ಸಂಭ್ರಮಕ್ಕೂ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ. ಮೊಟ್ಟೆ, ಮಾಂಸ, ಸೌತೇಕಾಯಿ ಹಾಗೂ ಮಸಾಲೆ ಪದಾರ್ಥಗಳ ಬೆಲೆಯು ತುಸು ಏರಿಕೆಯಾಗಿದೆ.
ಬೆಲೆ ಏರಿಕೆಯಿಂದ ಜನತೆಗೆ ಬೇಸರ ತಂದಿದ್ದರೂ, ಹಬ್ಬದ ಆಚರಣೆಗೆ ಯಾವುದೇ ಪ್ರಭಾವ ಬೀರುವುದಿಲ್ಲ. ಎಷ್ಟೇ ಹಣ ಖರ್ಚಾದರೂ ಯುಗಾದಿ ಹಬ್ಬವನ್ನು ಎಂದಿನಂತೆ ಹೆಚ್ಚು ಸಂಭ್ರಮದಿಂದಲೇ ಆಚರಣೆ ಮಾಡಲಾಗುವುದು ಎಂದು ಮಾರುಕಟ್ಟೆಯಲ್ಲಿ ಜನ ಪ್ರತಿಕ್ರಿಯಿಸಿದ್ದಾರೆ. ಹಬ್ಬ ಹರಿದಿನಗಳ ಸಮಯದಲ್ಲಿ ನಗರದ ಮಾರುಕಟ್ಟೆ ಸುತ್ತಮುತ್ತ ಕಸದ ಸಮಸ್ಯೆ ಸಾಮನ್ಯ ದಿನಗಳಿಗಿಂತ ದುಪ್ಪಟ್ಟಾಗಲಿದೆ. ಯುಗಾದಿ ಹಬ್ಬದ ಸರಕು ಸಾಮಗ್ರಿಗಳಾದ ಬಾಳೆ, ಮಾವಿನ ಎಲೆ, ಬೇವಿನ ಸೊಪ್ಪು, ಹೂಗಳ ತ್ಯಾಜ್ಯದಿಂದ ಕಸದ ರಾಶಿ ಹೆಚ್ಚಾಗಲಿದೆ. ಈ ಕಸದ ರಾಶಿಯನ್ನು ವಿಲೇವಾರಿ ಮಾಡಲು ಪಾಲಿಕೆಗೆ ಬೇವಿನ ಕಹಿ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.