ಅಹಿಂದ ವರ್ಗಗಳ ವಿರುದ್ಧ ಮೇಲ್ಜಾತಿಗಳ ಸಂಘಟಿತ ದಾಳಿ
ಹಾಗೆ ನೋಡಿದರೆ ಕೋಮುವಾದ ಕರ್ನಾಟಕದ ಮಟ್ಟಿಗೆ ಹೊಸತೆನಿಸಿದರೂ ಜಾತಿರಾಜಕಾರಣವೇನು ಇಲ್ಲಿನ ನೆಲಕ್ಕೆ ಹೊಸತೂ ಅಲ್ಲ, ಅಪರಿಚಿತವೂ ಅಲ್ಲ. ಸರಿಯಾಗಿ ನೋಡಿದರೆ ತೊಂಬತ್ತರ ದಶಕದ ಆರಂಭದಲ್ಲಿ ಭಾಜಪದ ಮಾಜಿ ಅಧ್ಯಕ್ಷರೂ, ಮಾಜಿ ಉಪಪ್ರಧಾನಿಗಳೂ ಆಗಿದ್ದ ಲಾಲ್ಕೃಷ್ಣ ಅಡ್ವ್ವಾಣಿಯವರು ಹಮ್ಮಿಕೊಂಡಿದ್ದ ರಥಯಾತ್ರೆಯು ಕರ್ನಾಟಕಕ್ಕೆ ಕೋಮುವಾದದ ಮೊದಲ ಸೊಂಕನ್ನು ಅಂಟಿಸಿತು. ಅಲ್ಲಿಯವರೆಗೂ ಸ್ಥಳೀಯ ಕಾರಣ ಗಳಿಗಾಗಿ ನಡೆಯುತ್ತಿದ್ದ ಕೋಮುಗಲಭೆಗಳಿಗೆ ಒಂದು ವಿಶಾಲ ತಳಹದಿಯೂ ಲಭ್ಯವಾಗತೊಡಗಿತು. ಇಷ್ಟಾದರೂ ಕೋಮು ಸಾಮ ರಸ್ಯದ ವಿಷಯದಲ್ಲಿ ದೇಶದ ಉಳಿದೆಲ್ಲ ರಾಜ್ಯಗಳಿಗೆ ಹೋಲಿಸಿದರೆ ನಾವು ಹೆಮ್ಮೆ ಪಡಬೇಕಾದ ಪರಿಸ್ಥಿತಿ ನಮ್ಮಲ್ಲಿದೆ.
ಆದರೆ ಜಾತಿವೈಷಮ್ಯ, ಮತ್ತು ಜಾತಿಯಾಧಾರಿತ ರಾಜಕಾರಣದ ವಿಚಾರದಲ್ಲಿ ನಾವು ಬಿಹಾರ ರಾಜ್ಯಕ್ಕಿಂತ ಹೆಚ್ಚೇನು ಹಿಂದೆ ಬಿದ್ದಿಲ್ಲ. ಆದರೆ ಬಿಹಾರದಷ್ಟು ಹಿಂಸಾತ್ಮಕ ರೂಪದ ಜಾತಿ ರಾಜಕಾರಣವನ್ನು ನಾವು ಹೊಂದಿಲ್ಲವೆಂದು ಹೇಳಬಹುದು. ಆದರೆ ಕರ್ನಾಟಕದ ರಾಜಕಾರಣ ದಲ್ಲಿ ಇವತ್ತಿಗೂ ಮೇಲ್ಜಾತಿಗಳು ರಾಜ್ಯ ರಾಜಕಾರಣದಲ್ಲಿ ಬಹಳ ಮುಖ್ಯ ಪಾತ್ರವನ್ನು ನಿಭಾಯಿಸುತ್ತ ತಮ್ಮ ಇಚ್ಚೆಗನುಗುಣವಾಗಿ ಸರಕಾರಗಳ ರಚನೆಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಾ ಬರುತ್ತಿವೆ.
ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಸರಕಾರ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಮತ್ತು ಪಡೆಯುತ್ತಿರುವ ಬಹಳಷ್ಟು ನಕಾರಾತ್ಮಕ ಪ್ರಚಾರಗಳಿಗೆ ಕಾರಣವಾಗಿರುವುದು ಕೂಡ ಮೇಲ್ಜಾತಿಗಳ ಹುನ್ನಾರದ ಒಂದು ಭಾಗವಾಗಿಯೇ. ಸರಕಾರದ ಸಣ್ಣ ಪುಟ್ಟ ತಪ್ಪುಗಳನ್ನು ಭೂತಗನ್ನಡಿಯಲ್ಲಿಟ್ಟು ಅವನ್ನು ಭೀಕರ ಅಪರಾಧಗ ಳೆಂಬಂತೆ ಚಿತ್ರಿಸುತ್ತ ಮಂತ್ರಿಗಳ, ಮುಖ್ಯಮಂತ್ರಿಯವರ ವೈಯುಕ್ತಿಕ ಕಾರ್ಯಶೈಲಿಯನ್ನು ಅವಹೇಳನಕಾರಿಯಾಗಿ ಚಿತ್ರಿಸುತ್ತಾ, ಜನರಲ್ಲಿ ಸರಕಾರದ ಬಗ್ಗೆ ಕೆಟ್ಟ ಇಮೇಜನ್ನು ಸೃಷ್ಟಿಸುವ ಯತ್ನದಲ್ಲ್ಲಿ ಇವತ್ತು ಮೇಲ್ಜಾತಿಗಳು ಮತ್ತು ಅವುಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಅವುಗಳಿಗೆ ಪೂರಕವಾಗಿ ಮಾಧ್ಯಮಗಳಲ್ಲಿರುವ ಬಲಾಢ್ಯ ಶಕ್ತಿಗಳು ತಮ್ಮ ನೆರವನ್ನು ನೀಡುತ್ತಿವೆ. ಸಿದ್ದರಾಮಯ್ಯನವರ ಸರಕಾರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳು ಕೇವಲ ಕಾಂಗ್ರೆಸ್ಸಿನ ಒಂದು ಸರಕಾರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವೆಂದು ನಾವು ಭಾವಿಸಿದರೆ ಅದು ಮೂರ್ಖತನವಾಗುತ್ತದೆ. ಇಲ್ಲಿ ಸರಕಾರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವಾಗಲಿ ರಾಜಕೀಯ ಷಡ್ಯಂತ್ರವಾಗಲಿ ಕೇವಲ ಒಂದು ಪಕ್ಷದ ಸರಕಾರವೆಂದೇನು ಅಲ್ಲ, ಬದಲಿಗೆ ಸರಕಾರದ ಮುಖ್ಯಮಂತ್ರಿ ಒಂದು ಹಿಂದುಳಿದ ಜಾತಿಗೆ ಸೇರಿದವರು ಎನ್ನುವ ಕಾರಣಕ್ಕೆ. ಜೊತೆಗೆ ಆರಂಭದಿಂದಲೂ ತಾನು ಅಹಿಂದಪರ ಸರಕಾರವೆಂದು ಹೇಳಿಕೊಂಡು ಬಂದ ಒಂದು ಸರಕಾರದ ವಿರುದ್ಧ. ಇಲ್ಲಿ ಮೇಲ್ನೋಟಕ್ಕೆ ಮೇಲ್ಜಾತಿಗಳ ಗುರಿ ಸರಕಾರವೆಂದೆನಿಸದಿದ್ದರೂ ಮೂಲದಲ್ಲಿ ಅವುಗಳ ಗುರಿಯಿರುವುದು ಹಿಂದುಳಿದ ವರ್ಗದ ಮುಖ್ಯಮಂತ್ರಿಯ ಮೇಲೆ ಹಾಗೂ ಈ ಸರಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದು ಕೆಲಸ ಮಾಡುತ್ತಿರುವ ದಲಿತ ಮತ್ತು ಹಿಂದುಳಿದ ನಾಯಕರುಗಳ ಮೇಲೆ.
ಕರ್ನಾಟಕ ರಾಜ್ಯದ ಕಳೆದ ನಾಲ್ಕು ದಶಕಗಳ ರಾಜಕೀಯ ಇತಿಹಾಸ ವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಯಾರಿಗೇ ಆದರೂ ಇದು ಸುಲಭವಾಗಿ ಅರ್ಥವಾಗುವ ವಿಷಯವಾಗಿದೆ. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನುದುದ್ದಕ್ಕೂ ಅಹಿಂದ ವರ್ಗಗಳ ಪರವಾದ ರಾಜಕೀಯ ಮಾಡುತ್ತಾ ಬಂದವರು. ಜನತಾದಳದಲ್ಲಿದ್ದಾಗ ಉಪಮುಖ್ಯಮಂತ್ರಿಯಾಗಿ ಅವರು ಹಿಂದುಳಿದ ವರ್ಗಗಳ ನಾಯಕ ರೆಂದೇ ಗುರುತಿಸಿಕೊಂಡು ಬಂದವರು. ತದನಂತರ ಅವರು ಜನತಾದಳವನ್ನು ತೊರೆದು ಹೊರಬಂದಾಗ ಅಹಿಂದ ವೇದಿಕೆಗೆ ಪುನಶ್ಚೇತನ ನೀಡಿ ಅಹಿಂದ ವರ್ಗವನ್ನು ಒಂದು ರಾಜಕೀಯ ಶಕ್ತಿಯನ್ನಾಗಿಸಂಘಟಿಸುತ್ತ ಬಂದರು. ಅಮೇಲೆ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ಮೇಲೂ ಅಹಿಂದ ಪರವಾಗಿ ನಿಂತು ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ಮುಖ್ಯಮಂತ್ರಿಯಾದವರು. ಮುಖ್ಯಮಂತ್ರಿಯಾದ ಮೊದಲ ಕ್ಷಣದಿಂದಲೇ ಅವರು ಅಹಿಂದ ವರ್ಗದ ಪರವಾಗಿ ಆಡಳಿತ ನಡೆಸಲು ಪ್ರಾರಂಬಿಸಿದ್ದು ಮತ್ತು ತಾವು ಅಹಿಂದ ಮುಖ್ಯಮಂತ್ರಿಯೆಂದು ಯಾವ ಮುಜುಗರವೂ ಇಲ್ಲದೇ ಸಾರ್ವಜನಿಕವಾಗಿಯೇ ಹೇಳಿಕೊಂಡರು. ಇದು ಸಹಜವಾಗಿಯೇ ಮೇಲ್ಜಾತಿಗಳ ಕಣ್ಣಿಗೆ ತಮ್ಮ ವಿರುದ್ಧ ಒಂದು ಸಂಚಾಗಿ ಕಂಡಿದ್ದರೆ ಅಚ್ಚರಿಯಿಲ್ಲ. ವರ್ಷಗಳ ಕಾಲ ತಮ್ಮ ಹಿಡಿತದಲ್ಲಿದ್ದ ರಾಜ್ಯದ ರಾಜಕೀಯ ಶಕ್ತಿ ತಮ್ಮ ಕೈತಪ್ಪಿಹೋಗಿದ್ದನ್ನು ಕಂಡು ಮೊದಲೇ ಹತಾಶೆಯಿಂದ ಕುದಿಯುತ್ತಿದ್ದ ಮೇಲ್ಜಾತಿಗಳಿಗೆ, ಸಿದ್ದರಾಮಯ್ಯ ತಮ್ಮ ಸರಕಾರ ಅಹಿಂದ ಸರಕಾರವೆಂದು ಬಹಿರಂಗವಾಗಿ ಹೇಳಿಕೊಂಡಿದ್ದು ಇನ್ನಷ್ಟು ಹತಾಶೆಗೆ ದೂಡಿತು. ಸರಿ, ಅಲ್ಲಿಂದಲೇ ಸಿದ್ದರಾಮಯ್ಯನವರ ವಿರುದ್ಧ ಮೇಲ್ಜಾತಿಯ ರಾಜಕೀಯ ಶಕ್ತಿಗಳು ಪಕ್ಷಾತೀತವಾಗಿ ಒಂದಾಗತೊಡಗಿದವು. ಇದಕ್ಕೆ ಪೂರಕವಾಗಿ ಮೇಲ್ಜಾತಿಯ ಹಿಡಿತದಲ್ಲಿನ ಮಾಧ್ಯಮಗಳು ಕಾರ್ಯನಿರ್ವಹಿಸಲು ಶುರು ಮಾಡಿದವು. ಹಿಂದುಳಿದ ವರ್ಗಗಳ ವಿರುದ್ಧ ಮೇಲ್ಜಾತಿಗಳ ಇಂತಹ ಅಸಹನೆಯನ್ನು ಅರ್ಥ ಮಾಡಿಕೊಳ್ಳಲು ನಾವು ಕಳೆದ ನಾಲ್ಕು ದಶಕಗಳ ಕಾಲದ ರಾಜ್ಯದ ರಾಜಕೀಯ ಇತಿಹಾಸವನ್ನು ಅವಲೋಕಿಸಬೇಕು.
ಇದರಲ್ಲಿ ಇನ್ನೂ ಒಂದು ಅಂಶ ಸ್ಪಷ್ಟವಾಗಿದೆ. ಕಾಂಗ್ರೆಸ್ಸನ್ನು ಹೊರತುಪ ಡಿಸಿದರೆ ಉಳಿದಂತೆ ಜನತಾದಳ ಮತ್ತು ಭಾಜಪಗಳು ಯಾವುದೇ ಸಂಕೋಚವಿಲ್ಲದೆ ಮೇಲ್ಜಾತಿಗಳ ಪರವಾದ ರಾಜಕೀಯ ಮಾಡಿಕೊಂಡು ಬಂದಿವೆ ಮತ್ತು ಕಾಂಗ್ರೆಸ್ ಹಿಂದುಳಿದ ವರ್ಗಗಳ ಪರವಾದ ರಾಜಕಾರಣ ಮಾಡುತ್ತ ಬಂದಿದೆ. ಯಾವಾಗೆಲ್ಲ ಕಾಂಗ್ರೆಸ್ ಹಿಂದುಳಿದ ವರ್ಗಗಳ ವ್ಯಕ್ತಿಗಳನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿತೋ ಆಗೆಲ್ಲ ಮೇಲ್ಜಾತಿಗಳು ಅಗೋಚರವಾಗಿ ಒಂದಾಗುತ್ತ ಕಾಂಗ್ರೆಸ್ಸನ್ನು ತನ್ಮೂಲಕ ಅಹಿಂದ ವರ್ಗವನ್ನು ಸೋಲಿಸುತ್ತಾ ಬಂದಿವೆ. ಎಪ್ಪತ್ತರ ದಶಕದ ಆರಂಭದಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು, ದೇವರಾಜ ಅರಸರನ್ನು ಮುಖ್ಯಮಂತ್ರಿಯ ನ್ನಾಗಿ ನೇಮಕ ಮಾಡಿದಾಗ ಮೊದಲ ಬಾರಿಗೆ ಮೇಲ್ಜಾತಿಗಳ ಕಣ್ಣು ಕೆಂಪಗಾಯಿತು. ಆಗ ಇಂದಿರಾ ಗಾಂಧಿಯವರ ವಿರುದ್ಧವಿದ್ದ ಶಕ್ತಿಗಳು ವ್ಯಕ್ತಿಗಳು ಸಹ ಮೇಲ್ಜಾತಿಗಳವೇ ಆಗಿದ್ದವು ಎನ್ನುವುದು ವಿಶೇಷ ವೇನಲ್ಲ. ವೀರಶೈವ ಜನಾಂಗದ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರು ಆಗ ಕಾಂಗ್ರೆಸ್ಸಿನ ವಿರೋಧಿಪಾಳಯದಲ್ಲಿದ್ದು ಅಧಿಕಾರ ಕಳೆದುಕೊಂಡಾಗ ಸಹಜವಾಗಿ ಮೇಲ್ಜಾತಿಗಳಲ್ಲಿ ಅಸಹನೆ ಮೊಳಕೆಯೊ ಡೆಯತೊಡಗಿತು. ಅದಕ್ಕೆ ತಕ್ಕಂತೆ ದೇವರಾಜ ಅರಸರು ಸಮಾಜದಲ್ಲಿ ಅದುವರೆಗೂ ಮುಖ್ಯವಾಹಿನಿಗೆ ಗೊತ್ತೆ ಇರದ ಹಲವು ಜಾತಿಗಳನ್ನು ಗುರುತಿಸಿ ಅವುಗಳಿಗೆ ರಾಜಕೀಯ ಪ್ರಾಧಾನ್ಯತೆ ದೊರಕಿಸಿಕೊಟ್ಟರು. ಜೊತೆಗೆ ಇಂಡಿಯಾದಲ್ಲೇ ಮೊದಲ ಬಾರಿಗೆ ಜಾತಿಯಾಧಾರಿತ ಮೀಸ ಲಾತಿಯನ್ನು ಜಾರಿಗೆ ತಂದು ಮೇಲ್ಜಾತಿಗಳ ಆಕ್ರೋಶಕ್ಕೆ ಕಾರಣರಾ ದರು. ತುರ್ತು ಪರಿಸ್ಥಿತಿಯಲ್ಲಿ ದೇಶದಾದ್ಯಂತ ಜಾರಿಗೆ ಬಂದ ಭೂಸುಧಾರಣೆಯನ್ನು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದ ಕೀರ್ತಿಯೂ ಅರಸರದೇ. ಅದುವರೆಗೂ ರಾಜ್ಯದ ಬಹುತೇಕ ಭೂಮಿಯ ಒಡೆತನ ಹೊಂದಿದ್ದ ಮೇಲ್ಜಾತಿಗಳು ತಮ್ಮ ಜಮೀನಾರೀ ಪ್ರತಿಷ್ಠೆಯನ್ನು ಬಿಡಬೇಕಾಗಿ ಬಂದು, ಕಾಂಗ್ರೆಸ್ ವಿರುದ್ಧ, ಅಹಿಂದ ವರ್ಗದ ವಿರುದ್ಧ ಕತ್ತಿ ಮಸೆಯ ತೊಡಗಿದವು. ಹೀಗೆ ಎಂಭತ್ತರ ದಶಕದ ಪ್ರಾರಂಭದ ವೇಳೆಗೆ ಕಾಂಗ್ರೆಸ್ ಮತ್ತು ಅಹಿಂದ ವರ್ಗಗಳ ವಿರುದ್ಧ ಮೇಲ್ಜಾ ತಿಗಳ ಸಿಟ್ಟು ರಾಜಕೀಯ ದ್ವೇಷವಾಗಿ ಮಾರ್ಪಾಡಾಗ ತೊಡಗಿತು.
ಇದೇ ಸಮಯದಲ್ಲಿ ದೇವರಾಜ ಅರಸುರವರನ್ನು ಅಧಿಕಾರದಿಂದ ಕೆಳಗಿಳಿಸಿದ ಇಂದಿರಾ ಗಾಂಧಿಯವರ ತಪ್ಪು ನಿರ್ಧಾರ ಮೇಲ್ಜಾತಿಯ ಗುಂಡೂರಾಯರನ್ನು ಮುಖ್ಯಮಂತ್ರಿಯನ್ನಾಗಿಸಿತು. ವಿಶೇಷವೆಂದರೆ ಗುಂಡೂರಾಯರೆಂದೂ ಮೇಲ್ಜಾತಿಗಳ ಮರ್ಜಿಗೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ ಮತ್ತು ಅವರ ವಿಶ್ವಾಸವನ್ನೂ ಸಂಪಾದಿಸಲಿಲ್ಲ. ಇದರಿಂದ ಇನ್ನಷ್ಟು ಹತಾಶೆಗೆ ಒಳಗಾದ ಮೇಲ್ಜಾತಿಗಳು ಕಾಂಗ್ರೆಸ್ ವಿರುದ್ಧ ಒಂದಾಗ ತೊಡಗಿದವು. ಇದೇ ಸಮಯದಲ್ಲಿ ಕಾಂಗ್ರೆಸ್ಸಿನಿಂದ ಹೊರಬಂದ ಹಿಂದುಳಿದ ವರ್ಗಗಳ ನಾಯಕ ಬಂಗಾರಪ್ಪ ಕ್ರಾಂತಿರಂಗ ಎಂಬ ಪಕ್ಷವನ್ನು ಕಟ್ಟಿ ಕಾಂಗ್ರೆಸ್ಸಿಗೆ ತೊಡೆತಟ್ಟಿದರು. ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರು ಜನತಾ ಪಕ್ಷವನ್ನು ಸಂಘಟಿಸಿ ಮೇಲ್ಜಾತಿಗಳ ಬೆಂಬಲ ಗಿಟ್ಟಿಸಲು ಪ್ರಯತ್ನಿಸಿದರು. ಅದೇ ಸಮಯದಲ್ಲಿ ಹೊಸದಾಗಿ ರೂಪುಗೊಂಡಿದ್ದ ಭಾರತೀಯ ಜನತಾ ಪಕ್ಷದ ನೇತೃತ್ವವನ್ನು ವೀರಶೈವ ಜನಾಂಗದವರಾದ ಯಡಿಯೂರಪ್ಪನವರು ಮತ್ತು ಬಿ.ಬಿ. ಶಿವಪ್ಪನವರು ವಹಿಸಿದ್ದರು. ಕ್ರಾಂತಿರಂಗ ಮತ್ತು ಜನತಾಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದವು.
ಕಾಂಗ್ರೆಸ್ಸಿನ ಬಗ್ಗೆ ಆಕ್ರೋಶಗೊಂಡಿದ್ದ ಮೇಲ್ಜಾತಿಗಳು ಮತ್ತು ಬಂಗಾರಪ್ಪನವರ ಕಾರಣಕ್ಕಾಗಿ ಹಿಂದುಳಿದ ವರ್ಗಗಳು ಕಾಂಗ್ರೆಸ್ಸಿಗೆ ವಿರುದ್ಧವಾಗಿ ಮತ ಚಲಾಯಿಸಿದರೂ, ಕ್ರಾಂತಿ ರಂಗ ಮತ್ತು ಜನತಾಪಕ್ಷದ ಮೈತ್ರಿಕೂಟಕ್ಕೆ ಸ್ಪಷ್ಟವಾದ ಬಹುಮತ ಸಿಗದೇ ಹೋಯಿತು. ಆಗ ಅದು ಭಾಜಪದಿಂದ ಬಾಹ್ಯಬೆಂಬಲ ಪಡೆದು ಬ್ರಾಹ್ಮಣರಾದ ಶ್ರೀ ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿಯಾಗಿ ಆರಿಸಿತು. ಹೀಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಂದರ್ಭ ದಲ್ಲಿ ನಿಜಕ್ಕೂ ಜನಬೆಂಬಲ ಹೊಂದಿದ್ದ ಹಿಂದುಳಿದ ವರ್ಗದ ಬಂಗಾರಪ್ಪ ನವರನ್ನು ಕಡೆಗಣಿಸಿ, ವಿಧಾನಸಭೆಯ ಸದಸ್ಯರೆ ಅಲ್ಲದ ಹೆಗಡೆಯವರನ್ನು ಕರೆತಂದು ಮುಖ್ಯಮಂತ್ರಿ ಮಾಡುವಲ್ಲಿ ಮೇಲ್ಜಾತಿಗಳು, ಅವುಗಳ ಪ್ರಭಾವ ಹೊಂದಿದ್ದ ಮಾಧ್ಯಮಗಳು ಮುಖ್ಯ ಪಾತ್ರ ನಿರ್ವಹಿಸದವು. ಹೀಗೆ ಅಧಿಕಾರ ಪಡೆದ ಹೆಗಡೆಯವರು ಎರಡೇ ವರ್ಷಗಳಲ್ಲಿ ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆ ನಡೆಸಿದರು. ಇಂತಹ ಸದಾವಕಾಶವನ್ನು ಬಿಟ್ಟುಕೊಡಲಿಚ್ಚಿಸದ ಮೇಲ್ಜಾತಿಗಳು ಜನತಾಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ಕಾಂಗ್ರೆಸ್ಸನ್ನು, ತನ್ಮೂಲಕ ಅಹಿಂದ ವರ್ಗವನ್ನು ಅಧಿಕಾರದಿಂದ ದೂರವಿಡುವಲ್ಲಿ ಯಶಸ್ವಿಯಾದವು.
ಮೇಲ್ಜಾತಿಗಳ ಇಂತಹ ಅಸಹನೆಯನ್ನು ಅರ್ಥ ಮಾಡಿಕೊಡ ಕಾಂಗ್ರೆಸ್ 1989ರಲ್ಲಿ ವೀರಶೈವರಾದ ಶ್ರೀ ವೀರೇಂದ್ರ ಪಾಟೀಲರನ್ನು ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ನೇಮಿಸಿತು. ತನ್ನ ಒಳಜಗಳಗಳಿಂದ, ಕಿತ್ತಾಟಗಳಿಂದ ಜನರನ್ನು ಭ್ರಮನಿರಸರನ್ನಾಗಿ ಮಾಡಿದ್ದ ಜನತಾ ಪಕ್ಷವನ್ನು ನಂಬುವುದರಲ್ಲಿ ಯಾವುದೇ ಸಾರ್ಥಕತೆಯಿಲ್ಲವೆಂಬುದನ್ನು ಮನಗಂಡ ಮೇಲ್ಜಾತಿಗಳು ವೀರೇಂದ್ರಪಾಟೀಲ್ ಮುಖ್ಯಮಂತ್ರಿಯಾಗುತ್ತಾರೆನ್ನುವ ಖಾತ್ರಿಯಿಂದ ಕಾಂಗ್ರೆಸ್ಸಿಗೆ ಅಭೂತ ಪೂರ್ವ ಬಹುಮತ ಕೊಡುವಲ್ಲಿ ಯಶಸ್ವಿಯಾದವು. ಅದುವರೆಗೂ ಕಾಂಗ್ರೆಸ್ಸನ್ನು ಶತಾಯಗತಾಯ ವಿರೋಧಿಸುತ್ತ ಬಂದಿದ್ದ ಮೇಲ್ಜಾತಿಗಳು ಮೊದಲ ಬಾರಿಗೆ ಕಾಂಗ್ರೆಸ್ಸಿನ ಪರ ನಿಂತಿದ್ದವು. ಆದರೆ ತಮ್ಮವರೊಬ್ಬರನ್ನು ಮುಖ್ಯಮಂತ್ರಿ ಮಾಡಿದ ಸಂತೋಷ ಅವುಗಳಿಗೆ ಬಹಳ ದಿನ ಉಳಿಯಲಿಲ್ಲ. ಅನಾರೋಗ್ಯದಿಂದ ಹಾಸಿಗೆ ಹಿಡಿದ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಇಳಿಸಿದ ರಾಜೀವ್ ಗಾಂಧಿಯವರು ಹಿಂದುಳಿದ ಜಾತಿಯ ಒಬ್ಬರನ್ನು ಮುಖ್ಯ ಮಂತ್ರಿಯ ಖುರ್ಚಿಯಲ್ಲಿ ಕೂರಿಸಿ ಮತ್ತೆ ಮೇಲ್ಜಾತಿಗಳ ಕೆಂಗಣ್ಣಿಗೆ ಗುರಿಯಾದರು. ಅಂದು ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿದ ಸನ್ನಿವೇಶ ಮತ್ತು ರೀತಿಯನ್ನು ಇವತ್ತಿನವರೆಗೂ ವೀರಶೈವರು ಮರೆತಿಲ್ಲ. ಈ ಕುರಿತಾಗಿ ವೀರಶೈವರಲ್ಲಿ ಇವತ್ತಿಗೂ ಅಪಾರವಾದ ನೋವು ಮತ್ತು ಕೋಪ ಎರಡೂ ಇವೆ.
ನಂತರ ಮೇಲ್ಜಾತಿಗಳ ಈ ಕೋಪದ ಫಲವನ್ನು ತಮ್ಮ ಅನುಕೂ ಲಕ್ಕೆ ಬಳಸಿಕೊಂಡ ದೇವೇಗೌಡರು ಮತ್ತು ಜೆ.ಹೆಚ್.ಪಟೇಲರು ಮುಖ್ಯ ಮಂತ್ರಿಗಳಾಗಿ ಅಧಿಕಾರ ಅನುಭವಿಸಿದರು. ಆದರೆ ಜನತಾ ಪಕ್ಷದೊಳಗಿನ ಎಂದಿನ ಒಳಜಗಳಗಳು ಜನರನ್ನು ಭ್ರಮನಿರಸನಗೊಳಿಸಿದವು. ಅದನ್ನು ಅರಿತ ಕಾಂಗ್ರೆಸ್ 1999ರಲ್ಲಿ ಒಕ್ಕಲಿಗ ಜಾತಿಯ ಎಸ್.ಎಂ.ಕೃಷ್ಣ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿತು. ಕಾಂಗ್ರೆಸ್ ನೀಡಿದ ಪಾಂಚಜನ್ಯವನ್ನು ಮೊಳಗಿಸಿ ನಾಡಿನಾದ್ಯಂತ ತಿರುಗಿದ ಕೃಷ್ಣರವರನ್ನು ಮೇಲ್ಜಾತಿಗಳು ಕೈಬಿಡಲಿಲ್ಲ. ಅತ್ಯಧಿಕ ಬಹುಮತದೊಂದಿಗೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂತು. ಆದರೆ ಬಹುಶ: ಕೃಷ್ಣರವರ ಅದೃಷ್ಟವೇ ಸರಿಯಿರಲಿಲ್ಲವೆನಿಸುತ್ತೆ. ರಾಜ್ಯವು ಸತತ ಬರಗಾಲಗಳನ್ನು ಎದುರಿಸಬೇಕಾಗಿ ಬಂತು. ಇದೇ ಸಮಯದಲ್ಲಿ ನಡೆದ ರಾಜಕುಮಾರರ ಅಪಹರಣ ಕೃಷ್ಣ ಸರಕಾರಕ್ಕೆ ಕೆಟ್ಟ ಹೆಸರನ್ನು ತಂದು ಕೊಟ್ಟಿತು. ಇದೆಲ್ಲದರ ನಡುವೆಯೂ ಕೃಷ್ಣರವರು ಬೆಂಗಳೂರನ್ನು ಮಾಹಿತಿ ತಂತ್ರ ಜ್ಞಾನದ ಕೇಂದ್ರವನ್ನಾಗಿಸಿದರು. ಬೆಂಗಳೂರು ಅವರ ಆಡಳಿತಾವಧಿ ಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳದು ನಿಂತಿತು.
ಆದರೆ ಒಟ್ಟಾರೆ ರಾಜ್ಯದ ಅಭಿವೃದ್ದಿ ನಿರೀಕ್ಷಿತ ರೀತಿಯಲ್ಲಿ ಆಗಲಿಲ್ಲ. ಇದಕ್ಕೆ ಕೃಷ್ಣರವರು ಹೊಣೆಯಾ ಗಿರದಿದ್ದರು ಜನರಲ್ಲಿ ಕಾಂಗ್ರೆಸ್ ಸರಕಾರದ ಬಗ್ಗೆ ಸ್ವಲ್ಪ ಮಟ್ಟಿನ ಅಸಮಾಧಾನ ಮೂಡಿದ್ದಂತು ಸತ್ಯ. ನಂತರದ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಬೇಕಾಯಿತು. ಕಾರಣ: ಕಾಂಗ್ರೆಸ್ ಈ ಅವಧಿಯಲ್ಲಿ ಹಿಂದುಳಿದ ವರ್ಗದ ಧರ್ಮಸಿಂಗ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಅವರೇ ಮುಂದಿನ ಮುಖ್ಯ ಮಂತ್ರಿಯೆನ್ನುವ ಅಭಿಪ್ರಾಯ ಜನರಲ್ಲಿ ಮೂಡಿತ್ತು. ಮತ್ತೊಮ್ಮೆ ರಾಜ್ಯದಲ್ಲಿ ಹಿಂದುಳಿದ ಜಾತಿಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾ ಗುವುದನ್ನು ಸಹಿಸದ ಮೇಲ್ಜಾತಿಗಳು ಪರೋಕ್ಷವಾಗಿ ಕಾಂಗ್ರೆಸ್ಸಿನ ಸೋಲಿಗೆ ಶ್ರಮಿಸಿದವು. ಈ ಸಮಯದಲ್ಲಿ ಜನತಾದಳ ಬಹುಮತ ಪಡೆಯುವ ಸಾಧ್ಯತೆಯಿದ್ದರೂ ಅಷ್ಟರಲ್ಲಿ ಬಲಾಢ್ಯವಾಗಿ ಬೆಳೆದು ನಿಂತಿದ್ದ ಭಾಜಪದ ಬೆನ್ನಿಗೆ ವೀರಶೈವರು ನಿಂತಿದ್ದು ಅತಂತ್ರ ವಿಧಾನಸಭೆಯ ನಿರ್ಮಾಣಕ್ಕೆ ಕಾರಣವಾಯಿತು.
ಈ ಸಮಯದಲ್ಲಿ ಕಾಂಗ್ರೆಸ್ ಜನತಾದಳ ಮೈತ್ರಿಮಾಡಿಕೊಂಡವು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರೆ ಪಕ್ಷದಲ್ಲಿ ತಮ ಗಿಂತ ಹೆಚ್ಚು ಪ್ರಭಾವಶಾಲಿಯಾಗುತ್ತಾರೆಂಬ ದೇವೇಗೌಡರ ಭಾವನೆ ಯಂತೆ ತಾವು ಹೇಳಿದಂತೆ ಕೇಳಬಲ್ಲ ಸೌಮ್ಯಸ್ವಭಾವದ ಧರ್ಮ ಸಿಂಗ್ ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡರು. ಇದು ಮೇಲ್ಜಾತಿಗಳನ್ನು ಇನ್ನಷ್ಟು ಕೆರಳಿಸಿತು. ಮೇಲ್ಜಾತಿಗಳ ಕುತಂತ್ರ ಮತ್ತು ಕುಮಾರಸ್ವಾಮಿಯವರ ಅಧಿಕಾರ ದಾಹಕ್ಕೆ ಸಿಂಗ್ ಅವರ ಸರಕಾರ ಬಲಿಯಾಗಿ ಭಾಜಪ ಮತ್ತು ಜನತಾದಳ ಒಳಗೊಳಗೆ ಮೈತ್ರಿಮಾಡಿ ಕೊಂಡು ತಲಾ ಇಪ್ಪತ್ತು ತಿಂಗಳ ಅವಧಿಗೆ ಅಧಿಕಾರ ನಡೆಸುವ ಷರತ್ತಿ ನಂತೆ ನೂತನ ಸರಕಾರ ರಚಿಸಿದರು. ಮೊದಲ ಅವಧಿಗೆ ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿಯೂ, ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸತೊಡಗಿದರು. ಆದರೆ ರಾಜಕೀಯದ ಒಳಸುಳಿಗಳನ್ನು ಬಲ್ಲವರ ಪ್ರಕಾರ ಇದೇನು ದಿಢೀರನೆ ನಡೆದ ಬೆಳವಣಿಗೆಯೇನೂ ಅಲ್ಲ. ಕೆಲವು ಪಕ್ಷಾತೀತ ಮೇಲ್ಜಾತಿಗಳ ನಾಯಕರುಗಳು ಮತ್ತು ಕೆಲವು ಬಲಾಢ್ಯ ಮಠಗಳ ಮಧ್ಯಪ್ರವೇಶದಿಂದಲೇ ಇಂತಹದೊಂದು ರಾಜಕೀಯ ಹೊಂದಾಣಿಕೆ ಸಾಧ್ಯವಾಯಿತೆಂಬುದು ವಾಸ್ತವ.
ನಂತರ ನಡೆದದ್ದು ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಹಿಂದೆಂದು ಕಂಡು ಕೇಳಿರದ ರೀತಿಯ ಅಸಹ್ಯಕರ ಬೆಳವಣಿಗೆಗಳು. ಇಪ್ಪತ್ತು ತಿಂಗಳ ನಂತರ ಅಧಿಕಾರ ಬಿಟ್ಟುಕೊಡಲು ಕುಮಾರಸ್ವಾಮಿಯವರು ನಿರಾಕರಿಸಿದಾಗ ವಚನಭ್ರಷ್ಟತೆಯ ಗೋಳಿನ ಕತೆಯನ್ನು ಸಾರ್ವಜನಿ ಕವಾಗಿ ಜನರ ಮುಂದೆಕಣ್ನೀರಿಡುತ್ತಾ ಅನುಕಂಪವನ್ನು ಗಿಟ್ಟಿಸಲು ಯಡಿಯೂರಪ್ಪನವರು ನಡೆದುಕೊಂಡ ರೀತಿಗೆ ಇಡಿ ದೇಶದ ಕಣ್ಣು ಕರ್ನಾಟಕದ ಮೇಲೆ ಬಿದ್ದಿದ್ದು ಸುಳ್ಳಲ್ಲ! ಪರಸ್ಪರರ ಕೆಸರೆರಚಾಟ, ಆಣೆಪ್ರಮಾಣಗಳ ಭರಾಟೆಯಿಂದ ರಾಜಕಾರಣದ ಎಲ್ಲ ಹೊಲಸು ಮುಖಗಳೂ ಬಹಿರಂಗಗೊಂಡದ್ದೀಗ ಇತಿಹಾಸ.
ನಂತರ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪನವರಿಗಾದ ವಿಶ್ವಾಸ ದ್ರೋಹವನ್ನು ಚುನಾವಣೆಯ ಮುಖ್ಯವಿಷಯವನ್ನಾಗಿಸಿಕೊಂಡ ಭಾಜಪ ಮೇಲ್ಜಾತಿಗಳ ಬೆಂಬಲವನ್ನು ಹಿಂದುಳಿದ ವರ್ಗಗಳ ಸಹಾನುಭೂತಿಯನ್ನು ಗಳಿಸುವಲ್ಲಿ ಯಶಸ್ವಿಯಾದರೂ ಕೇವಲ ಸರಳ ಬಹುಮತ ಪಡೆಯಿತು. ತದನಂತರ ಅಧಿಕಾರ ಉಳಿಸಿಕೊಳ್ಳಲು ಭಾಜಪ ನಡೆಸಿದ ಆಪರೇಷನ್ ಕಮಲದ ಪಕ್ಷಾಂತರಗಳ ನಾಟಕಗಳು ಪ್ರಜಾಪ್ರಭುತ್ವದ ಬಗ್ಗೆಯೇ ಬೇಸರ ಹುಟ್ಟಿಸುವಂತೆ ಮಾಡಿದವು.
ನಂತರ 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆಯಿತಾದರೂ ಸ್ವತಃ ಪರಮೇಶ್ವರ್ ಅವರು ಸೋಲುವ ಮೂಲಕ ಸಿದ್ದರಾಮಯ್ಯನವರು ಯಾವ ಅಡಚಣೆಯೂ ಇಲ್ಲದೆ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದರು. ಬಹುಶಃ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸನ್ನು ಸೋಲಿಸಲು ಮೇಲ್ಜಾತಿಗಳು ವಿಫಲವಾದವು. ಇದಕ್ಕೆ ಕಾರಣ ಹಿಂದಿನ ಭಾಜಪ ಸರಕಾರದ ಮಂತ್ರಿಗಳು ಮಾಡಿಕೊಂಡ ಭ್ರಷ್ಟಾಚಾರದ ಹಗರಣಗಳು, ವೈಯುಕ್ತಿಕವಾಗಿ ಅವರುಗಳು ನಡೆದು ಕೊಂಡ ರೀತಿ, ಇದೆಲ್ಲದರ ಜೊತೆಗೆ ಭಾಜಪದಿಂದ ಹೊರಬಂದ ಯಡಿಯೂರಪ್ಪನವರು ಕಟ್ಟಿದ ಕೆಜೆಪಿ, ಶ್ರೀರಾಮುಲು ಕಟ್ಟಿದ ಹೊಸ ಪಕ್ಷಗಳು ಭಾಜಪದ ಮತಗಳನ್ನು ಒಡೆದು ಹಾಕಿದ್ದು. ಜನತಾದಳ ಜನರ ವಿಶ್ವಾಸರ್ಹತೆಯನ್ನು ಕಳೆದುಕೊಂಡಿದ್ದು ಸಹ ಕಾಂಗ್ರೆಸ್ ಗೆಲುವಿಗೆ ಮುಖ್ಯವಾಯಿತು.
ಹೀಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ವಿರುದ್ಧ ದೇವೇಗೌಡರ ಕುಟುಂಬದವರಿಗೆ ವೈಯಕ್ತಿಕವಾದ ಅಸಹನೆಯಿದೆ. ಇದರೊಂದಿಗೆ ಅಧಿಕಾರ ಕೈತಪ್ಪಿಹೋದ ಆಕ್ರೋಶದಲ್ಲಿರುವ ಮೇಲ್ಜಾತಿಗಳು ಮೊದಲ ದಿನದಿಂದಲೇ ಸಿದ್ದರಾಮಯ್ಯನವರ ವಿರುದ್ಧ ಯುದ್ದಕ್ಕೆ ಇಳಿದಂತಿವೆ. ಅವರು ಪ್ರಕಟಿಸುವ ಪ್ರತೀ ಯೋಜನೆಗೂ ಕಟಕಿಯಾಡುತ್ತಾ ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ಪಡೆಗಳಿಂದ ಲೇವಡಿ ಮಾಡಿಸುತ್ತಾ, ಜನರಲ್ಲಿ ಸರಕಾರದ ಬಗ್ಗೆ ಕೆಟ್ಟ ಭಾವನೆ ಮೂಡಿಸುವ ತಂತ್ರವೊಂದು ಯಶಸ್ವಿಯಾಗಿ ನಡೆಯುತ್ತಿದೆ. ಬಹುತೇಕ ಮಾಧ್ಯಮಗಳು ಮೇಲ್ಜಾತಿಯ ಹಿಡಿತದಲ್ಲಿದ್ದು ಸಣ್ಣಪುಟ್ಟ ತಪ್ಪುಗಳನ್ನು ಅಗಾಧವಾಗಿ ಮಾಡುತ್ತಾ ಸಿದ್ದರಾಮಯ್ಯನವರ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಲೇ ಇವೆ. ಬಹುಶಃ ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ: ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯ ಬಗ್ಗೆ ನಮ್ಮ ಮಾಧ್ಯಮಗಳು ನಡೆಸಿದಷ್ಟು ಅಪಪ್ರಚಾರ ವನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿರುವ ನಮ್ಮ ವಿದ್ಯಾವಂತ ವರ್ಗ ಮಾಡಿದ ಲೇವಡಿಗಳನ್ನು ಯಾವ ಸರಕಾರದ ವಿರುದ್ಧವೂ ಇದುವರೆಗೂ ಮಾಡಿದ್ದನ್ನು ನಾನಂತು ಕಂಡಿಲ್ಲ. ಒಟ್ಟಿನಲ್ಲಿ ಹಿಂದುಳಿದ ವರ್ಗದವರೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದನ್ನು ಸಹಿಸದ ಮೇಲ್ಜಾತಿಗಳು ಎಂದಿನಂತೆ ತಮ್ಮ ಕುತಂತ್ರಗಳನ್ನು ಮಾಡುತ್ತಿವೆ.
ಈ ಲೇಖನವನ್ನು ಬರೆದ ಮಾತ್ರಕ್ಕೆ ನಾನು ಸಿದ್ದರಾಮಯ್ಯನವರ ಬೆಂಬಲಿ�