ಕವನ
ಭಾರತಾಂಬೆ ಯಾರು?
ಹುಡುಕಾಟದಲ್ಲಿ ನಾನು;
ತಡಕಾಡಿದೆ ನಾಡು
ಏರಿದೆ ಹಲವು ಗುಡ್ಡ ಕಾಡು;
ಎಲ್ಲಿಯೂ ನಾ ಅವಳ ಕಾಣಲಿಲ್ಲ!!
ನಾನವಳಿಗೆ ಕೃತಘ್ನನಂತೆ,
ಅಚ್ಚರಿಯೆನಗೆ!
ಪರಿಚಯವಿಲ್ಲದವಳಿಗೇಕೆ
ನನ್ನ ವಂದನೆ?
ವಂದಿಸದಿದ್ದರೇಕೆ ನಿಂದನೆ!!
ಅವಳ ಹುಡುಕಾಟದಲಿಂದು
ಹಳ್ಳಿಗೆ ಬಂದೆ;
ನೀರಡಿಕೆ ನೆರಳಾದವಳು
ನೆರೆದ ಕೂದಲಿನಜ್ಜಿ!
ನನಗರಿವಿಲ್ಲದ ಜಿಜ್ಞಾಸೆ
‘ಅಮ್ಮಾ...ನೀನೇದಾರೂ
ಭಾರತ ಮಾತೆಯೇ?’
ಛೀ, ತಮಾಷೆ ಮಗೂ
ಎಂದಷ್ಟೇ ಹಲುಬಿದಳು!
ಪೇಟೆಗೆ ಹೋದೆ,
ತುಂಬಾ ವಿಚಾರಿಸಿದೆ!
ಸೈಕೋ ಎಂದು ಮೂದಲಿಸಿದರಷ್ಟೆ...
ನಿಲ್ದಾಣದ ಬದಿಯಲಿದ್ದ
ನಿರ್ಗತಿಕ ಅಮ್ಮನಲ್ಲೂ ಕೇಳಿದೆ
ಅವಳು ಕೆಕ್ಕರಿಸಿ ನೋಟವಿತ್ತಳಷ್ಟೆ!
ನಾ ಕಲಿತ ಶಾಲೆಗೆ ಹೋದೆ,
ಅಲ್ಲಿ ನನ್ನ ಟೀಚರಿದ್ದರು;
‘‘ಎಲ್ಲಿ ನಮ್ಮ ಭಾರತ ಮಾತೆ?’’
ಕಣ್ಭಾಷೆಯಲ್ಲೇ ಬೆರಳೆತ್ತಿ
ತೋರಿಸಿದ ಛಾಯಕ್ಕೆ
ನೈಜತೆಯಿರಲಿಲ್ಲ...
ಬೇಡವಾಯಿತೋ?
ಹುಡುಕಿ ಸಾಕಾಯಿತೋ?
ಇಂದು ಸಿಕ್ಕಿದವರೆನ್ನೆಲ್ಲಾ
ಪ್ರೀತಿಸಿದ್ದೆ!
ಅವರಲ್ಲೆರೂ ಭಾರತಾಂಬೆ ಯಾಕಾಗಬಾರದೆನಿಸಿ
ಹೊಸ್ತಿಲು ದಾಟಿದೆ;
ನನ್ನವ್ವ ‘ಊಟ ಮಾಡು ಮಗಾ’
ಎನ್ನುವಷ್ಟಕ್ಕೆ ನಾನೇ ಬೆಪ್ಪನಾದೆ!
‘‘ಹೆಗಲ ಕೊಡಲಿಗೆ ಜಗವ
ಸುತ್ತಿದನೆಂದೆನಿಸಿ’’
ಮನೆಯೊಳಗಿನ ಭಾರತಾಂಬೆಯ
ಹಸ್ತ ಚುಂಬಿಸಿದೆ...