ಮನುವಾದದ ಕತ್ತಲಲ್ಲಿ ಬೆಳಕಾಗಿ ಬಂದ ಅಂಬೇಡ್ಕರ್
ಮಹಾಚೇತನದ ವಿರುದ್ಧ ಸಂಘ ಪರಿವಾರದ ಹುನ್ನಾರ
ಗಾಂಧಿ ಮತ್ತು ಅಂಬೇಡ್ಕರ್ ಸಂಘದ ಶಾಖೆಗಳಿಗೆ ಭೇಟಿ ನೀಡಿದ್ದರು ಎಂಬುದು ಬರೀ ಬೊಗಳೆ. ಭೇಟಿ ನೀಡಿದ್ದರು, ಸಂಘದ ಶಾಖೆಗಳನ್ನು ಹೊಗಳಿದ್ದರು ಎಂಬುದನ್ನು ಆರೆಸ್ಸೆಸ್ ಹೇಳಿಕೊಳ್ಳುವುದು ಬಿಟ್ಟರೆ ಇನ್ನ್ಯಾರೂ ಹೇಳುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ, ದ್ರೋಹ ಮಾಡಿದವರು ಮಾತ್ರ ಈ ರೀತಿಯ ಚರಿತ್ರೆ ತಿರುಚಲು ಸಾಧ್ಯ.
ಡಾ.ಬಾಬಾ ಸಾಹೇಬ ಅಂಬೇಡ್ಕರರ 125ನೆ ಜಯಂತಿಯನ್ನು ಈ ವರ್ಷ ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಬಾಬಾ ಸಾಹೇಬರ ಸಿದ್ಧಾಂತವನ್ನು ಕಂಡರೆ ಆಗದವರು ರಾಜಕೀಯ ಲಾಭ ಗಳಿಕೆಗಾಗಿ ದಲಿತ ಸೂರ್ಯ ಎಂದೆಲ್ಲ ಹಾಡಿ ಹೊಗಳುತ್ತಿದ್ದಾರೆ. ಬಾಬಾ ಸಾಹೇಬರನ್ನು ಹಾಡಿ ಹೊಗಳುತ್ತಲೇ, ಅವರ ಆಶಯಗಳನ್ನು, ಸಾಮಾಜಿಕ ನ್ಯಾಯವನ್ನು ಮತ್ತು ಸಂವಿಧಾನವನ್ನು ನಾಶ ಮಾಡುವ ಹುನ್ನಾರ ನಡೆಸಿದ್ದಾರೆ. ಡಾ. ಅಂಬೇಡ್ಕರ್ ಎಂಥ ಮಹಾಚೇತನ ಮತ್ತು ಅವರು ಏನಾಗಿದ್ದರು ಎಂಬುದು ಅವರು ಬರೆದ ಪುಸ್ತಕ, ಲೇಖನ ಮತ್ತು ಮಾಡಿದ ಹೋರಾಟಗಳಿಂದ ಸ್ಪಷ್ಟವಾಗಿದೆ. ಆದರೂ ಭಗತ್‌ಸಿಂಗ್‌ರಂತೆ ಬಾಬಾ ಸಾಹೇಬರನ್ನು ಹೈಜಾಕ್ ಮಾಡಿ ತಮ್ಮ ನಾಯಕರ ಫೋಟೊ ಪಕ್ಕದಲ್ಲಿ ಬಾಬಾ ಸಾಹೇಬರ ಫೋಟೊ ಇಟ್ಟು ಮನುವಾದಿ ಹಿಂದುತ್ವದ ವಿಷ ವರ್ತುಲದಲ್ಲಿ ದಲಿತರನ್ನು ಸೆಳೆದುಕೊಳ್ಳಲು ವಿಫಲ ಯತ್ನಗಳನ್ನು ಈ ಗೋಡ್ಸೆವಾದಿ ಶಕ್ತಿಗಳು ನಡೆಸುತ್ತಲೇ ಇವೆ.
ನಾನು ಹಿಂದೂ ಅಸ್ಪಶ್ಯ ಸಮುದಾಯದಲ್ಲಿ ಜನಿಸಿದ್ದು ಆಕಸ್ಮಿಕ. ಹುಟ್ಟು ನನ್ನ ಕೈಯಲ್ಲಿ ಇರಲಿಲ್ಲ. ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ. ಈ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ನನಗಿದೆ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಘೋಷಿಸಿದ್ದರು. 1935ರ ಅಕ್ಟೋಬರ್ 13ರಂದು ಮುಂಬೈ ಸಮೀಪದ ಯವೋಳದಲ್ಲಿ ನಡೆದ ಶೋಷಿತ ಸಮುದಾಯದ ಸಮ್ಮೇಳನದಲ್ಲಿ ಹಿಂದುತ್ವವಾದಿಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದರು. ನಾನು ಹಿಂದೂವಾಗಿ ಸಾಯುವುದಿಲ್ಲ ಎಂದು ಘೋಷಿಸಿದ ಕೆಲವೇ ತಿಂಗಳಲ್ಲಿ ಹಿಂದುತ್ವದ ಜನ್ಮಜಾಲಾಡುವ ಜಾತಿ ವಿನಾಶ ಎಂಬ ಗ್ರಂಥವನ್ನು ಬಾಬಾ ಸಾಹೇಬರು ರಚಿಸಿದರು. ಇದು ಬಾಬಾ ಸಾಹೇಬರು ಕೊನೆಯ ದಿನಗಳಲ್ಲಿ ಮಾಡಿದ ಭಾಷಣ ಮತ್ತು ಬರೆದ ಗ್ರಂಥ. ಇದರಿಂದ ಹಿಂದುತ್ವದ ಬಗ್ಗೆ ಬಾಬಾ ಸಾಹೇಬರ ನಿಲುವು ಏನಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ವಾಸ್ತವಾಂಶ ಹೀಗಿರುವಾಗ, ಆರೆಸ್ಸೆಸ್ ಎಂಬ ಮನುವಾದಿ ಸಂಘಟನೆ ನಾಚಿಕೆ ಇಲ್ಲದೆ ಅಂಬೇಡ್ಕರ್ ತಮ್ಮವರು ಎಂದು ಹೇಳಿಕೊಳ್ಳಲು ಹೊರಟಿದೆ. ಸಂಘದ ಪಥಸಂಚಲನಗಳಲ್ಲಿ ಹೆಡ್ಗೆವಾರ್, ಗೋಳ್ವಲ್‌ಕರ್ ಪಕ್ಕದಲ್ಲಿ ಅಂಬೇಡ್ಕರ್ ಫೋಟೊ ಇಟ್ಟು ಅಸ್ಪಶ್ಯ ಸಮುದಾಯವನ್ನು ಹಿಂದುತ್ವದ ವಿಷ ವರ್ತುಲದಲ್ಲಿ ಸೇರಿಸಿಕೊಳ್ಳುವ ಯತ್ನ ನಡೆಸಿದೆ.
ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಸತ್ಯವಾಗುತ್ತದೆ. ಜನ ಅದನ್ನು ನಂಬುತ್ತಾರೆ ಎಂದು ಜರ್ಮನಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಪ್ರಚಾರ ಮಂತ್ರಿ ಗ್ಯಾಬ್ರಿಯಲ್ ಹೇಳುತ್ತಿದ್ದ. ಅಂಥ ಹಿಟ್ಲರ್‌ನ ಆರಾಧಕರಾದ ಸಂಘ ಪರಿವಾರದವರು ಗ್ಯಾಬ್ರಿಯಲ್ ರೀತಿಯಲ್ಲಿ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನು ನಂಬಿಸಲು ಹೊರಟಿದ್ದಾರೆ. ಆದರೆ ಇದು ಅವರಿಗೆ ತಿರುಗುಬಾಣವಾಗುತ್ತದೆ. ಕಳೆದ ಶತಮಾನದ ಆರಂಭದಲ್ಲಿ ಜ್ಯೋತಿಭಾ ಫುಲೆ, ಅಗರಕರ್, ಶಾಹು ಮಹಾರಾಜರ ಹೊಡೆತದಿಂದ ತತ್ತರಿಸಿದ ಬ್ರಾಹ್ಮಣರ ರಕ್ಷಣೆಗಾಗಿ 1925ರಲ್ಲಿ ನಾಗಪುರದಲ್ಲಿ ಜನ್ಮದಾಳಿದ ಆರೆಸ್ಸೆಸ್ ಹಿಂದುತ್ವದ ಸೋಗು ಹಾಕಿ ಬಂಡೆದ್ದ ದಲಿತ ಮತ್ತು ಹಿಂದುಳಿದ ಸಮುದಾಯಗಳನ್ನು ವರ್ಣಾಶ್ರಮ ಧರ್ಮದ ಚೌಕಟ್ಟಿನಲ್ಲಿ ಕೂಡಿಸಲು ಸಂಚು ರೂಪಿಸಿತು.
ಈ ಸಂಚಿನ ಭಾಗವಾಗಿ ಪುರೋಹಿತಶಾಹಿ ವಿರುದ್ಧ ಬಂಡೆದ್ದವರನ್ನೆಲ್ಲ ತನ್ನವರೆಂದು ಹೇಳಿಕೊಳ್ಳಲು ಹೊರಟಿದೆ. ಕ್ರಾಂತಿಕಾರಿ ಅಲ್ಲದಿದ್ದರೂ ಮುಸ್ಲಿಂ ವಿರೋಧಿಯಾಗಿರದ ಮಹಾತ್ಮ ಗಾಂಧೀಜಿಯವರನ್ನು ಮುಗಿಸಿ ಈಗ 1933ರಲ್ಲಿ ವರ್ಧಾದ ಆರೆಸ್ಸೆಸ್ ಶಾಖೆಗೆ ಗಾಂಧಿ ಆಉಟಿ ನೀಡಿ ಸಂಘವನ್ನು ಹೊಗಳಿದ್ದರೆಂದು ಸುಳ್ಳು ಹೇಳುತ್ತಿದೆ. ಆದರೆ ಇದಕ್ಕೆ ಯಾವುದೇ ಚಾರಿತ್ರಿಕ ಆಧಾರವಿಲ್ಲ. ಗಾಂಧೀಜಿ ಬರೆದ ಪುಸ್ತಕದಲ್ಲಿ ಇದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.
ಇದೇ ರೀತಿ ಡಾ. ಅಂಬೇಡ್ಕರ್ ಬದುಕಿದ್ದಾಗ ಸಂಘದ ಶಾಖೆಗೆ ಭೇಟಿ ನೀಡಿ ಸಂಘದ ಸಾಧನೆಗಳನ್ನು ಹೊಗಳಿದ್ದರು ಎಂದು ಇನ್ನೊಂದು ಸುಳ್ಳನ್ನು ಸೃಷ್ಟಿಸಲಾಗಿದೆ. ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಗ್ಡೆವಾರ್‌ಗೆ ಬಾಬಾ ಸಾಹೇಬರು ಆತ್ಮೀಯ ಮಿತ್ರರಾಗಿದ್ದರು ಎಂದು ಇನ್ನೊಂದು ಸುಳ್ಳನ್ನು ಸೃಷ್ಟಿಸಲಾಗಿದೆ. ಇದಕ್ಕೂ ಯಾವುದೇ ಚಾರಿತ್ರಿಕ ಸಾಕ್ಷ್ಯಾಧಾರಗಳಿಲ್ಲ. ಫೋಟೊಗಳಿಲ್ಲ. ಅಂಬೇಡ್ಕರರು ತಮ್ಮ ಪುಸ್ತಕಗಳಲ್ಲಿ ಎಲ್ಲಿಯೂ ಇದರ ಪ್ರಸ್ತಾಪ ಮಾಡಿಲ್ಲ. ಗಾಂಧಿ ಮತ್ತು ಅಂಬೇಡ್ಕರ್ ಸಂಘದ ಶಾಖೆಗಳಿಗೆ ಭೇಟಿ ನೀಡಿದ್ದರು ಎಂಬುದು ಬರೀ ಬೊಗಳೆ. ಭೇಟಿ ನೀಡಿದ್ದರು, ಸಂಘದ ಶಾಖೆಗಳನ್ನು ಹೊಗಳಿದ್ದರು ಎಂಬುದನ್ನು ಆರೆಸ್ಸೆಸ್ ಹೇಳಿಕೊಳ್ಳುವುದು ಬಿಟ್ಟರೆ ಇನ್ನ್ಯಾರೂ ಹೇಳುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ, ದ್ರೋಹ ಮಾಡಿದವರು ಮಾತ್ರ ಈ ರೀತಿಯ ಚರಿತ್ರೆ ತಿರುಚಲು ಸಾಧ್ಯ.
ಡಾ. ಅಂಬೇಡ್ಕರ್ ಸ್ವತಂತ್ರ ಕಾರ್ಮಿಕ ಪಕ್ಷ ಕಟ್ಟಿದ್ದಕ್ಕೆ ದಾಖಲೆಗಳಿವೆ. ಕಮ್ಯುನಿಸ್ಟರ ಜೊತೆ ಸೇರಿ ಮುಂಬೈ ಜವಳಿ ಕಾರ್ಮಿಕರ ಮುಷ್ಕರ ನಡೆಸಿದ್ದಕ್ಕೆ ಸಾಕ್ಷ್ಯಾಧಾರಗಳಿವೆ. ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರಿಗೆ ಪತ್ರ ಬರೆದಿರುವ ಬಗ್ಗೆ ದಾಖಲೆಗಳಿವೆ. ಸಾವರ್ಕರರ ಹಿಂದೂ ಮಹಾಸಭೆಯ ಜೊತೆಗಿನ ಮೈತ್ರಿ ತಿರಸ್ಕರಿಸಿದ್ದಕ್ಕೆ ದಾಖಲೆಗಳಿವೆ. ಆದರೆ ಸಂಘದ ಶಾಖೆಗೆ ಭೇಟಿ ನೀಡಿದ ಮತ್ತು ಹೆಡ್ಗೆವಾರರ ಜೊತೆ ಸ್ನೇಹ ಸಂಬಂಧ ಹೊಂದಿದ್ದರ ಕುರಿತು ದಾಖಲೆಗಳಿಲ್ಲ.
ಅಂಬೇಡ್ಕರ್ ಶಾಖೆಗೆ ಬಂದು ಹೋಗಿದ್ದರೆಂದು ಹೇಳಿದಂತೆ ರೋಹಿತ್ ವೇಮುಲಾ ಸಾವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಒಬ್ಬ ರೋಹಿತ್ ಮಾತ್ರವಲ್ಲ ನೆಲ್ಗೊಂಡ ಜಿಲ್ಲೆಯ ಆಚಾರ್ಯ ಶ್ರೀಚಂದ್ರ, ಸ್ಕಂದಿಲ್ ಕುಮಾರ್ ಇದ್ದಾರೆ. ಹೀಗಾಗಿ ಅನೇಕ ದಲಿತ ಪ್ರತಿಭಾವಂತ ವಿದ್ಯಾರ್ಥಿಗಳು ಇವರ ಕಿರಿಕಿರಿ ಸಹಿಸಲಾಗದೆ ಸಾವಿನ ಮನೆಗೆ ಹೋಗಿದ್ದಾರೆ.
ಈಗಂತೂ ಮನುವಾದವನ್ನು ವಿರೋಧಿಸುವವರನ್ನೆಲ್ಲ ಸಾರಾಸಗಟಾಗಿ ರಾಷ್ಟ್ರದ್ರೋಹಿಗಳೆಂದು ಆರೆಸ್ಸೆಸ್ ಬಿಂಬಿಸುತ್ತಿದೆ. ‘ಭಾರತ ಮಾತಾ ಕಿ ಜೈ’ ಎಂದು ಹೇಳದವರ ರುಂಡ ಹಾರಿಸುವುದಾಗಿ ಕಾವಿವೇಷದ ಕಾರ್ಪೊರೇಟ್ ಉದ್ಯಮಿ ಬಾಬಾ ರಾಮದೇವ್ ಹೇಳುತ್ತಾರೆ. ರೋಹಿತ್ ವೇಮುಲಾ, ಕನ್ಹಯ್ಯಾ ಕುಮಾರ್ ಸೇರಿ ದಲಿತ ವಿದ್ಯಾರ್ಥಿಗಳು ಈ ಮನುವಾದಿಗಳ ಕಣ್ಣಿಗೆ ರಾಷ್ಟ್ರದ್ರೋಹಿಗಳಾಗಿದ್ದಾರೆ.
ಈ ಹಿಂದೆ ಮುಸ್ಲಿಮರು ಪ್ರತಿನಿತ್ಯ ತಮ್ಮ ರಾಷ್ಟ್ರನಿಷ್ಠೆಯನ್ನು ಈ ನಕಲಿ ದೇಶಭಕ್ತರ ಎದುರು ಸಾಬೀತುಪಡಿಸಬೇಕಿತ್ತು. ಈಗ ದಲಿತರಿಗೂ ಅಂತಹ ಸ್ಥಿತಿ ಬಂದಿದೆ. ಶ್ರೇಣೀಕೃತ ಜಾತಿ ಪದ್ಧತಿಯನ್ನು ವಿರೋಧಿಸುವ ದಮನಿತ ಸಮುದಾಯಗಳನ್ನೆಲ್ಲ ದೇಶದ್ರೋಹಿ ಎಂದು ಬಿಂಬಿಸುವ ಯತ್ನ ನಡೆದಿದೆ.
ಒಂದೆಡೆ ಅಂಬೇಡ್ಕರರ ಜಯಕಾರದ ನಾಟಕವಾಡುತ್ತಲೇ, ಇನ್ನೊಂದೆಡೆ ಅವರ ತೇಜೋವಧೆಯನ್ನು ಮಾಡಲಾಗುತ್ತದೆ. ಸಂಘ ಪರಿವಾರದ ಸಿದ್ಧಾಂತಿ ಅರುಣ್ ಶೌರಿ ಬರೆದ ಪುಸ್ತಕ ಇದಕ್ಕೆ ಉದಾಹರಣೆ. ಇಷ್ಟಲ್ಲದೇ ಉತ್ತರ ಪ್ರದೇಶದ ಬಿಜೆಪಿ ನಾಯಕಿಯೊಬ್ಬರು, ಒಂದು ಕಾಲದಲ್ಲಿ ನಮ್ಮ ಚಪ್ಪಲಿ ಒರೆಸುತ್ತಿದ್ದವರು ಸಂವಿಧಾನದ ಬಲದಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಛೇಡಿಸಿದ್ದಾರೆ. ಇನ್ನೊಂದೆಡೆ ಅಂಬೇಡ್ಕರ್‌ರು ಮುಸ್ಲಿಂ ವಿರೋಧಿಯಾಗಿದ್ದಾರೆಂದು ಸುಳ್ಳು ಇತಿಹಾಸ ಸೃಷ್ಟಿಸುವ ಮಸಲತ್ತು ನಡೆದಿದೆ. ಆದರೆ ಅಂಬೇಡ್ಕರ್ ಎಲ್ಲಿಯೂ ಈ ರೀತಿ ಹೇಳಿಲ್ಲ. ಇದಕ್ಕೆ ಬದಲಾಗಿ ಸಂಘ ಪರಿವಾರದ ಹಿಂದೂ ರಾಷ್ಟ್ರದ ಸಿದ್ಧಾಂತವನ್ನು ಬಾಬಾ ಸಾಹೇಬರು ಕಟುವಾಗಿ ವಿರೋಧಿಸಿದ್ದರು. ಒಂದು ವೇಳೆ ಹಿಂದೂರಾಷ್ಟ್ರ ಸ್ಥಾಪಿಸಲ್ಪಟ್ಟರೆ, ಅದು ದೇಶಕ್ಕೆ ಒಂದು ಆಪತ್ತು ಆಗುತ್ತದೆ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು.
ಉಳಿದವರನ್ನು ಮನುವಾದದ ಬುಟ್ಟಿಗೆ ಹಾಕಿಕೊಂಡಂತೆ, ಅಂಬೇಡ್ಕರ್‌ರನ್ನು ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಬಾಬಾ ಸಾಹೇಬರು ಬೆಂಕಿ ಇದ್ದಂತೆ. ಅವರನ್ನು ನುಂಗಲು ಹೊರಟರೆ ಗಂಟಲು ಸುಟ್ಟಕೊಳ್ಳಬೇಕಾಗುತ್ತದೆ. ಬಾಬಾ ಸಾಹೇಬರು ಸುಮ್ಮನೆ ಹೋಗಿಲ್ಲ. ತಮ್ಮ ಹಿಂದೆ ನೂರಾರು ಪುಸ್ತಕಗಳನ್ನು ಬರೆದು ಉಳಿಸಿ ಹೋಗಿದ್ದಾರೆ. ಈ ಪುಸ್ತಕಗಳೇ ದಲಿತ ಸಮುದಾಯಕ್ಕೆ ಬೆಳಕಿನ ಜ್ಯೋತಿಯಾಗಿವೆ. ಈ ದೀವಟಿಗೆ ಹಿಡಿದು ಹೊರಟಿದ್ದ ರೋಹಿತ್ ವೇಮುಲಾ ಮತ್ತು ಕನ್ಹಯ್ಯಾ ಕುಮಾರ್ ಅವರನ್ನು ಈ ಕರಾಳ ಶಕ್ತಿಗಳು ಸಹಿಸಲಿಲ್ಲ.
ಅಂದಿನ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಗಾಗಿ ಕೇಳಿದ್ದರು. ಇಂದಿನ ಈ ಚಡ್ಡಿ ದ್ರೋಣಾಚಾರ್ಯರು ಬೆರಳನ್ನಲ್ಲ, ಕೊರಳನ್ನೇ ಕೇಳುತ್ತಿದ್ದಾರೆ. ರೋಹಿತ್ ವೇಮುಲಾ ಇವರ ಹುನ್ನಾರಕ್ಕೆ ಬಲಿಯಾದರು. ಕನ್ಹಯ್ಯಾ ಕುಮಾರ್ ಜೀವ ಅಪಾಯದಲ್ಲಿದೆ. ಇದು ದೇಶದ ಇಂದಿನ ಸ್ಥಿತಿ.
ಈ ಸನ್ನಿವೇಶದಲ್ಲಿ ಬಾಬಾ ಸಾಹೇಬರ ಜಯಂತಿ ಮತ್ತೆ ಬಂದಿದೆ. ಮನುವಾದ, ಬಂಡವಾಳಶಾಹಿ, ಬ್ರಾಹ್ಮಣವಾದದಿಂದ ಆಝಾದಿ ಪಡೆದು ಜಾತಿ ಮುಕ್ತ ಮತ್ತು ವರ್ಗಭೇದವಿಲ್ಲದ ರಾಷ್ಟ್ರವನ್ನು ಎಲ್ಲರೂ ಕಟ್ಟಬೇಕಿದೆ.