ಅಂಬೇಡ್ಕರ್ ಪ್ರಶಸ್ತಿ ಮೌಲ್ಯ ಕಳೆದುಕೊಳ್ಳುತ್ತಿದೆಯೇ?
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಅದ್ದೂರಿ ಆಚರಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆಯೇ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿ ತನ್ನ ವೌಲ್ಯ ಕಳೆದುಕೊಳ್ಳುತ್ತಿದೆ ಎಂಬ ‘ಅಪಸ್ವರ’ ವ್ಯಕ್ತವಾಗಿದೆ.
ರಾಜ್ಯ ಸರಕಾರ ನೀಡುವ ಪ್ರಶಸ್ತಿಗಿಂತಲೂ ‘ಸ್ಫೂರ್ತಿಧಾಮ’ ಸಂಸ್ಥೆಯಿಂದ ಕೊಡ ಮಾಡುವ ಡಾ.ಅಂಬೇಡ್ಕರ್ ಪ್ರಶಸ್ತಿ ಹೆಚ್ಚು ವೌಲ್ಯ ಪಡೆದುಕೊಳ್ಳುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು. ಅಂಬೇಡ್ಕರ್ ಪ್ರಶಸ್ತಿಗೆ ತನ್ನದೇ ಆದ ಘನತೆಯಿದೆ. ಆದರೆ, ಆ ಪ್ರಶಸ್ತಿಗೆ ‘ಅರ್ಹ’ರನ್ನು ಆಯ್ಕೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ನಡುವೆಯೇ ವಿಧಾನಸಭೆ ಮತ್ತು ಲೋಕಸಭಾ ಚುನಾ ವಣಾ ನೀತಿ ಸಂಹಿತೆ ನೆಪದಲ್ಲಿ 2013 ಮತ್ತು 2014ನೆ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಿಲ್ಲ. 2015ರಲ್ಲಿ ಮಾಜಿ ಶಾಸಕ ಹಾಗೂ ಹಿರಿಯ ಮುಖಂಡ ಪ್ರೊ.ಎಸ್.ಎಸ್. ಅರಕೇರಿ ಅವರಿಗೆ ಡಾ. ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿತ್ತು.
ಆದರೆ, ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಉಳಿಸಿಕೊಂಡ ಎರಡೂ ವರ್ಷಗಳ ಪ್ರಶಸ್ತಿಯನ್ನು ಅರ್ಹರಿಗೆ ಆಯ್ಕೆ ಮಾಡಿ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಕನಿಷ್ಠ ನಾಲ್ಕೈದು ಮಂದಿ ಅರ್ಹರಿಗಾದರೂ ಅಂಬೇಡ್ಕರ್ ಪ್ರಶಸ್ತಿ ನೀಡಬೇಕೆಂಬ ಆಗ್ರಹ ದಲಿತ ಸಮುದಾಯದ ವಲಯದಿಂದ ಕೇಳಿಬಂದಿದೆ.
ಹೆಚ್ಚು ಜನರಿಗೆ ಪ್ರಶಸ್ತಿ ನೀಡಿದರೆ ಅದು ವೌಲ್ಯ ಕಳೆದುಕೊ ಳ್ಳುತ್ತದೆ. ಹೀಗಾಗಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಸೀಮಿತಗೊ ಳಿಸಿದ್ದು, ಆಯ್ಕೆ ಸಮಿತಿ ಸೂಚಿಸುವವರಿಗೆ ಪ್ರಶಸ್ತಿ ನೀಡಲಾಗು ತ್ತಿದೆ ಎಂದು ರಾಜ್ಯ ಸರಕಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಅಭಿಪ್ರಾಯ.
ಆದರೆ, ಹೀಗೆ ವರ್ಷಕ್ಕೆ ಒಬ್ಬ ಅಸ್ಪಶ್ಯ ಸಮುದಾಯದ ವ್ಯಕ್ತಿಯನ್ನಷ್ಟೇ ಗುರುತಿಸಿದರೆ ‘ಎಲೆ ಮರೆ ಕಾಯಿಗಳಂತೆ’ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಶೋಷಿತರನ್ನು ಯಾವಾಗ ಗುರುತಿಸುವುದು. ಉಳಿದವರಿಗೆ ‘ಮರಣೋತ್ತರ’ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಕನಿಷ್ಠ ಐದು ಮಂದಿ ಅರ್ಹರನ್ನು ಆಯ್ಕೆ ಮಾಡಬೇಕು. ಶೋಷಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸಿ ರಾಜ್ಯ ಸರಕಾರ ಗೌರವಿಸುವ ಮೂಲಕ ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆಯನ್ನು ಮತ್ತಷ್ಟು ಅರ್ಥಪೂರ್ಣ ಗೊಳಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಪ್ರಶಸ್ತಿ ತನ್ನ ವೌಲ್ಯ ಕಳೆದುಕೊಳ್ಳುತ್ತಿದ್ದು, ಸರಕಾರ ಹಾಗೂ ಆಯ್ಕೆ ಸಮಿತಿ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು. ಪ್ರಶಸ್ತಿ ಒಬ್ಬರಿಗೆ ಸೀಮಿತ ಸಲ್ಲ. ಕನಿಷ್ಠ ನಾಲ್ಕೈದು ಮಂದಿ ಶೋಷಿತರನ್ನು ಗುರುತಿಸಿ ಗೌರವಿಸುವ ಮೂಲಕ ರಾಜ್ಯ ಸರಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು
-ಅಣ್ಣಯ್ಯ, ದಸಂಸ ರಾಜ್ಯ ಪ್ರಧಾನ ಸಂಚಾಲಕ
ಡಾ.ಅಂಬೇಡ್ಕರ್ ಅವರೊಬ್ಬ ರಾಷ್ಟ್ರೀಯ ನಾಯಕರು. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ವೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಆಲೋಚಿಸಬೇಕು. ಪ್ರಶಸ್ತಿಗಳಿಗೆ ಹಣಕ್ಕಿಂತ ವೌಲ್ಯ ಮುಖ್ಯ. ಹೀಗಾಗಿ ಅರ್ಹರನ್ನು ಗುರುತಿಸುವ ಕೆಲಸ ಆಗಬೇಕು
-ಮಾವಳ್ಳಿ ಶಂಕರ್, ದಸಂಸ ಪ್ರಧಾನ ಸಂಚಾಲಕ