ವಿರೋಧಗಳ ನಡುವೆಯೂ ನೆಲೆಯೂರಲು ಹವಣಿಸುತ್ತಿರುವ ಉರುಂಬಿ ಜಲವಿದ್ಯುತ್ ಯೋಜನೆ
ಕಡಬ, ಎ.5. ಕಳೆದ ಹಲವು ವರ್ಷಗಳಿಂದ ಕಡಬ ಪರಿಸರದ ನಾಲ್ಕೈದು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಉರುಂಬಿ ಜಲವಿದ್ಯುತ್ ಯೋಜನೆಯನ್ನು ಅನುಷ್ಠಾನಿಸಲು ಕಂಪೆನಿಯವರು ತೆರೆಮರೆಯ ಕಸರತ್ತು ನಡೆಸುವ ಮೂಲಕ ಜನರನ್ನು ಹಾದಿತಪ್ಪಿಸುತ್ತಿದ್ದಾರೆ. ಆಂಧ್ರ ಮೂಲದ ಗ್ರೀನ್‌ಕೊ ಎಂಬ ಕಂಪೆನಿಯು ಕುಮಾರಧಾರಾ ಹಾಗೂ ಗುಂಡ್ಯ ಹೊಳೆಯ ಸಂಗಮ ಸ್ಥಳವಾದ ಕೂಡಿಗೆ ಸಮೀಪದ ಉರುಂಬಿ ಎಂಬಲ್ಲಿ ಕುಕ್ಕೇ ಹೈಡಲ್ ಪವರ್ ಪ್ರಾಜೆಕ್ಟ್ ಎಂಬ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿತ್ತು. ದ.ಕ. ಜಿಲ್ಲೆಯವರೇ ಆದ ಶೋಭಾ ಕರಂದ್ಲಾಜೆಯವರು ಇಂಧನ ಸಚಿವೆಯಾಗಿದ್ದಾಗ ಈ ಯೋಜನೆಯ ಕಾರ್ಯಯೋಜನೆಯನ್ನು ಸಿದ್ಧಪಡಿಸಿದ್ದು, ಅಂದಿನಿಂದ ಸ್ಥಳೀಯರ ವಿರೋಧಗಳ ನಡುವೆಯೂ ಕಂಪೆನಿಯವರು ಪರಿಸರದ ನಾಲ್ಕೈದು ಭೂಮಾಲೀಕರನ್ನು ತಮ್ಮ ಬಲೆಗೆ ಕೆಡವಿ, ಅವರ ಫಲವತ್ತಾದ ಕೃಷಿ ಭೂಮಿಯನ್ನು ಖರೀದಿಸಿದ್ದರು.
ಪ್ರಾರಂಭದಲ್ಲಿ ಯೋಜನೆಯನ್ನು ವಿರೋಧಿಸಿ ಆರಂಭವಾದ ಉರುಂಬಿ ಜಲವಿದ್ಯುತ್ ವಿರೋಧಿ ಹೋರಾಟ ಸಮಿತಿಯ ಕೆಲವು ನಾಯಕರುಗಳಿಗೆ ವಿವಿಧ ಆಮಿಷ ತೋರಿಸಿ ಅಣೆಕಟ್ಟು ಅನುಷ್ಠಾನ ಸಮಿತಿಯನ್ನು ರಚಿಸಿ ರೈತರನ್ನು ತಮ್ಮ ತಮ್ಮೊಳಗೆ ಎತ್ತಿಕಟ್ಟುವಲ್ಲಿ ಯಶಸ್ವಿಯಾದ ಕಂಪೆನಿಯವರು ಇದೀಗ ಸ್ಥಳೀಯರಿಂದ ಖರೀದಿಸಿದ ಕೃಷಿ ಭೂಮಿಗಳಿಗೆ ಬೇಲಿ ಹಾಕಿಸಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದ್ದಾರೆ. ಇದರಿಂದಾಗಿ ಆ ಪರಿಸರದ ಮೂಲಕ ತೆರಳುವ ಉಳಿದ ಜಮೀನಿನ ರೈತಾಪಿ ವರ್ಗದವರಿಗೆ ನಡೆದಾಡಲೂ ಕಷ್ಟಕರದ ವಾತಾವರಣ ನಿರ್ಮಾಣವಾಗಿದೆ. ಅಣೆಕಟ್ಟು ನಿರ್ಮಾಣವಾದಲ್ಲಿ ಕಡಬ, ಕೋಡಿಂಬಾಳ, ಕುಟ್ರುಪ್ಪಾಡಿ, ಪೆರಾಬೆ, ಕಾಣಿಯೂರು ಹಾಗೂ ಎಡಮಂಗಲ ಗ್ರಾಮಕ್ಕೊಳಪಟ್ಟ 800 ಎಕರೆಯಷ್ಟು ಕೃಷಿಭೂಮಿಗಳು ಮುಳುಗಡೆಯಾಗಲಿದ್ದು, ಸುಮಾರು 400 ರೈತ ಕುಟುಂಬಗಳು ಬೀದಿಗೆ ಬರಲಿವೆ. ಕೃಷಿ ಭೂಮಿಗಿಂತಲೂ ಹೆಚ್ಚಾಗಿ ನದಿಯ ಎರಡೂ ತಟಗಳಲ್ಲಿರುವ ಅರಣ್ಯ ಪ್ರದೇಶವು ಮುಳುಗಡೆಯಾಗಲಿದ್ದು, ಬೃಹತ್ ಪ್ರಮಾಣದ ಅರಣ್ಯ ನಾಶ ಸಂಭವಿಸಲಿದೆ.
ನಾಲ್ಕೈದು ಇಲಾಖೆಗಳು 2013ರಲ್ಲಿ ನೀಡಿದಂತಹ ಅನುಮತಿ ಪತ್ರಗಳನ್ನು ಹಿಡಿದುಕೊಂಡು ಬಂದು ಕಳೆದ ಚುನಾವಣೆಯ ದಿವಸ ಹೊಳೆಬದಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದು, ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಕಡಬ ತಹಶೀಲ್ದಾರ್ ಆಗಮಿಸಿ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಯೋಜನೆಯನ್ನು ವಿರೋಧಿಸಿ ನದಿ ಮಧ್ಯದಲ್ಲಿ ರೈತರು ಪೂಜೆಯನ್ನು ನಡೆಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಬಂಡೆಕಲ್ಲುಗಳ ಮಧ್ಯ ಭಾಗದಲ್ಲಿ ಆಳವಾದ ಕೆರೆಯೊಂದಿದ್ದು, ಪಾಂಡವರು ಅಲ್ಲಿ ಸ್ನಾನ ಮಾಡುತ್ತಿದ್ದರೆಂಬ ಪ್ರತೀತಿ ಹಿಂದಿನಿಂದಲೂ ಇದೆ. ಪಕ್ಕದಲ್ಲಿನ ಬಂಡೆ ಕಲ್ಲಿನ ಮೇಲೆ ಸೀರೆಯನ್ನು ಹಾಸಿದಂತೆ ಕಪ್ಪಗಿನ ಗುರುತೊಂದಿದ್ದು, ಅದು ದ್ರೌಪದಿಯ ಸೀರೆಯಾಗಿದೆ ಎನ್ನುವ ನಂಬಿಕೆಯಿದೆ. ಪುರಾತನ ಹಿನ್ನೆಲೆಯನ್ನು ಹೊಂದಿರುವ ಈ ಸ್ಥಳದಲ್ಲಿ 24 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿ ಮಳೆಗಾಲದಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಿ ಪರಿಸರದಲ್ಲಿನ ಕೃಷಿ ಭೂಮಿ ಸೇರಿದಂತೆ ಅಪಾರ ಅರಣ್ಯ ಭೂಮಿ ಮುಳುಗಡೆಗೊಂಡು ನಾಶಕ್ಕೆ ಕಾರಣವಾಗುವಂತಹ ಯೋಜನೆಗಳನ್ನು ಕೈಬಿಡಬೇಕೆನ್ನುವುದು ಸ್ಥಳೀಯರ ಆಗ್ರಹ.
ಜಿಲ್ಲಾಧಿಕಾರಿಗಳ ಮೂಲಕ ಕುಟ್ಟುಪ್ಪಾಡಿ ಗ್ರಾಮ ಪಂಚಾಯತಿನ ಅನುಮತಿ ಕೇಳಿದ್ದು, ರೈತ ವಿರೋಧಿಯಾದ ಈ ಯೋಜನೆಗೆ ಅನುಮತಿ ನೀಡಲಾಗುವುದಿಲ್ಲವೆಂದು ನಿರ್ಣಯಿಸಲಾಗಿದೆ.
ಶ್ರೀಮತಿ ವಿದ್ಯಾ ಕೆ. ಗೋಗಟೆ,
ಸದಸ್ಯರು, ಕುಟ್ರುಪ್ಪಾಡಿ ಗ್ರಾ.ಪಂ.
ಸಾಮಾನ್ಯ ಮಳೆಗೆ ಕೃಷಿ ತೋಟಕ್ಕೆ ನೀರು ಬರುತ್ತಿದ್ದು, ಇನ್ನು ಅಣೆಕಟ್ಟು ಕಟ್ಟಿದ್ದಲ್ಲಿ ಕೃಷಿಭೂಮಿ ಮುಳುಗಡೆಗೊಂಡು ನಾಶವಾಗಲಿದೆ. ಆದುದರಿಂದ ಈ ಯೋಜನೆಯನ್ನು ಕೈಬಿಟ್ಟು ಪರ್ಯಾಯ ವ್ಯವಸ್ಥೆಯಾದ ಸೋಲಾರ್ ಘಟಕಗಳ ಮೂಲಕ ವಿದ್ಯುತ್ ಉತ್ಪಾದಿಸಲಿ.
ಕರುಣಾಕರ ಗೋಗಟೆ,
ಅಧ್ಯಕ್ಷರು, ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕೆಲವು ಕಂಪೆನಿಯವರು ಅಕ್ರಮವಾಗಿ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಹೊರಟಿದ್ದು, ಅದನ್ನು ವಿರೋಧಿಸಿ ಇಲ್ಲಿನ ರೈತರು ನಡೆಸುವ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದೇನೆ.
ಅನಂತ ಹೆಗ್ಗಡೆ ಆಶೀಸರ
ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷರು,
ವೃಕ್ಷಲಕ್ಷ ಆಂದೋಲನ ಸಂಘಟನೆಯ ರಾಜ್ಯಾಧ್ಯಕ್ಷರು