ಕೈಗೆಟಕುವ ದರದಲ್ಲಿ ಶ್ರವಣ ಯಂತ್ರ: ಇಂಡಿಯನ್ ಅಮೆರಿಕನ್ ಹುಡುಗನ ಸಾಧನೆ
ಹೌಸ್ಟನ್:
ಅಮೆರಿಕದ 16 ವರ್ಷದ ಹುಡುಗ ದುಬಾರಿ ಸಾಧನಗಳನ್ನು ಖರೀದಿಸಲು ಸಾಧ್ಯವಾಗದವರಿಗಾಗಿ 60 ಡಾಲರ್ ಬೆಲೆ ಬಾಳುವ ಕಡಿಮೆ ವೆಚ್ಚದ ಶ್ರವಣ ಸಾಧನವನ್ನು ನಿರ್ಮಿಸಿದ್ದಾರೆ. ಕೆಂಟುಕಿಯ ಲೌಸ್ವಿಲ್ಲೆ ನಗರದ ಮುಕುಂದ್ ವೆಂಕಟ ಕೃಷ್ಣನ್ ಕಳೆದ ಎರಡು ವರ್ಷಗಳಿಂದ ಈ ಶ್ರವಣ ಸಾಧನದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅದನ್ನು ಜೆಫ್ರೆಸನ್ ಕೌಂಟಿ ಪಬ್ಲಿಕ್ ಸ್ಕೂಲ್ಸ್ ಐಡಿಯಾ ಫೆಸ್ಟಲ್ಲಿ ಪ್ರದರ್ಶಿಸಿದ್ದಾರೆ. ಕೆಂಟುಕಿ ರಾಜ್ಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಜಾತ್ರೆಯಲ್ಲಿ ಅವರ ಶ್ರವಣ ಸಾಧನಕ್ಕೆ ಪ್ರಥಮ ಪ್ರಶಸ್ತಿ ದೊರೆತಿದೆ.
ಈ ಸಾಧನವು ಅತೀ ಅಗ್ಗದ ಹೆಡ್ ಫೋನುಗಳಲ್ಲೂ ಬಳಸಬಹುದಾಗಿದೆ. ಹೆಡ್ ಫೋನುಗಳ ಮೂಲಕ ಹಲವು ವಿಭಿನ್ನ ಧ್ವನಿಗಳಲ್ಲಿ ಏಳು ಭಿನ್ನ ತರಂಗಗಳಲ್ಲಿ ಕೇಳುವ ಮೂಲಕ ಸಾಧನವು ಧ್ವನಿ ಪರೀಕ್ಷೆ ಮಾಡಿಕೊಳ್ಳುತ್ತದೆ. ನಂತರ ಅದು ಸ್ವತಃ ಶ್ರವಣ ಸಾಧನವಾಗಿ ಪ್ರೋಗ್ರಾಂ ಆಗುತ್ತದೆ. ಪರೀಕ್ಷೆಯಲ್ಲಿ ಪಡೆದುಕೊಂಡ ಫಲಿತಾಂಶಕ್ಕೆ ತಕ್ಕಂತೆ ಧ್ವನಿಯನ್ನು ವರ್ಧಿಸಿಕೊಳ್ಳುತ್ತದೆ.
ಇದು ವೈದ್ಯರ ಅಗತ್ಯವನ್ನು ಪೂರ್ಣವಾಗಿ ನಿವಾರಿಸುತ್ತದೆ. ಎಷ್ಟರ ಮಟ್ಟಿಗೆ ಶ್ರವಣ ಸಮಸ್ಯೆ ವ್ಯಕ್ತಿಗೆ ಇದೆ ಎಂದು ತಿಳಿದುಕೊಂಡು ಧ್ವನಿಯ ಶಕ್ತಿಯನ್ನು ಇದು ವಿಸ್ತರಿಸುತ್ತದೆ. ಈ ಸಾಧನವನ್ನು 60 ಡಾಲರುಗಳಲ್ಲಿ ಮಾಡಬಹುದಾಗಿರುವಾಗ ಅವರು ಪ್ರತೀ ಶ್ರವಣ ಸಾಧನಕ್ಕೆ 1500 ಡಾಲರ್ ನಿಗದಿಪಡಿಸಿರುವುದು ನಿಜಕ್ಕೂ ವಿಚಿತ್ರ ಎಂದು ಡುಪಾಂಟ್ ಮ್ಯಾನುವಲ್ ಹೈಸ್ಕೂಲ್ ವಿದ್ಯಾರ್ಥಿ ಮುಕುಂದ್ ಹೇಳಿದ್ದಾರೆ. ಒಳಬರುವ ಸಂಕೇತದ ಧ್ವನಿಯನ್ನು ಏರಿಸಿ ಕೇಳಿಸಲು ಶ್ರವಣ ಸಾಧನದಲ್ಲಿರುವ ಪ್ರೊಸೆಸರ್ ಸಹಾಯ ಮಾಡುತ್ತದೆ. ಇದಕ್ಕೆ 45 ಡಾಲರ್ ಬೆಲೆ ಇದೆ. ಉಳಿದ ಭಾಗಗಳನ್ನು 15 ಡಾಲರಿಗೆ ಪಡೆಯಬಹುದು ಎನ್ನುತ್ತಾರೆ ಮುಕುಂದ್.
ಎರಡು ವರ್ಷಗಳ ಹಿಂದೆ ಭಾರತದಲ್ಲಿರುವ ತಮ್ಮ ತಾತನ ಮನೆಗೆ ಹೋದ ಸಮಯದಲ್ಲಿ ಮುಕುಂದ್ ಈ ಶ್ರವಣ ಸಾಧನವನ್ನು ತಯಾರಿಸಲು ಪ್ರೇರಣೆ ಪಡೆದುಕೊಂಡಿದ್ದರು. ತಮ್ಮ ತಾತನಿಗೆ ಶ್ರವಣ ಪರೀಕ್ಷೆಗೆ ಕರೆದೊಯ್ದು ಶ್ರವಣ ಸಾಧನ ಜೋಡಿಸುವಾಗ ಜೊತೆಯಲ್ಲಿದ್ದ ಮುಕುಂದ್, ಸಾಧನ ದುಬಾರಿಯಾಗಿದ್ದ ಕಾರಣ ಖರೀದಿಸಲು ಸಾಧ್ಯವಾಗಿರದೆ ಇದ್ದುದು ತಿಳಿದುಕೊಂಡಿದ್ದರು. ಹೀಗಾಗಿ ಪರ್ಯಾಯ ಸಾಧನ ತಯಾರಿಸಲು ನಿರ್ಧರಿಸಿದ್ದರು. ಆಡಿಯಾಲಜಿಸ್ಟ್ ವಿಶೇಷಜ್ಞರಾಗಿರುವ ಕಾರಣ ಭಾರತದಲ್ಲಿ ಅವರನ್ನು ಭೇಟಿಯಾಗುವುದೇ ಕಠಿಣ. ಆಮೇಲೆ ದುಬಾರಿ ಸಾಧನ ಖರೀದಿಸಬೇಕಾಗುತ್ತದೆ ಎನ್ನುತ್ತಾರೆ ಮುಕುಂದ್.
ತಾತನ ಚಿಕಿತ್ಸೆಗಾಗಿ ವೈದ್ಯರ ಭೇಟಿಗೇ 400-500 ಡಾಲರ್ ತೆತ್ತಿದ್ದರು. ಶ್ರವಣ ಸಾಧನಕ್ಕೆ ಮತ್ತೆ 1900 ತೆರಬೇಕಾಗಿತ್ತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಷ್ಟೊಂದು ಹಣವನ್ನು ಒಗ್ಗೂಡಿಸುವುದು ಬಹುತೇಕರಿಗೆ ಸಾಧ್ಯವಾಗದು ಎನ್ನುವುದನ್ನು ಮುಕುಂದ್ ತಿಳಿದಿದ್ದರು. ಭಾರತದಲ್ಲಿ ಕೆಳ ವರ್ಗದ ಆದಾಯವೇ ವಾರ್ಷಿಕ 616 ಡಾಲರ್ ಆಗಿರುವಾಗ ಶ್ರವಣ ಸಾಧನ ಪಡೆಯುವುದು ಸಾಧ್ಯವಾಗದು. ನಾನು ತಯಾರಿಸಿದ ಶ್ರವಣ ಸಾಧನದಲ್ಲಿ ಇತರ ಪಾರಂಪರಿಕ ಸಾಧನಗಳಂತಲ್ಲದೆ, ಇಯರ್ ಪೀಸ್ ಹಾಳಾದಲ್ಲಿ ಬದಲಿಸುವುದು ದುಬಾರಿಯಾಗುವುದಿಲ್ಲ. ಮಾಮೂಲಿ ಮತ್ತೊಂದು ಸೆಟ್ ಇಯರ್ ಬಡ್ ಖರೀದಿಸಬಹುದು. ಈಗಿನ ರೂಪದಲ್ಲಿ ಸಾಧನ ಎರಡು ಇಂಚುಗಳಿದ್ದು ಕಂಪ್ಯೂಟರ್ ಪ್ರೊಸೆಸರ್ ತರಹ ಕಾಣುತ್ತದೆ ಎನ್ನುತ್ತಾರೆ.
1000 ಡಾಲರ್ ತೆತ್ತು ಶ್ರವಣ ಸಾಧನ ಖರೀದಿಸಲಾಗದವರಿಗೆ ಈ ಸಾಧನ ಎನ್ನುವುದು ಮುಕುಂದ್ ಗುರಿ. ಹಲವಾರು ಸಂಸ್ಥೆಗಳು ಮುಕುಂದರನ್ನು ಸಂಪರ್ಕಿಸಿ ಈ ಶ್ರವಣ ಸಾಧನವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಅನುಮತಿ ಕೋರಿವೆ. ಈ ಬೇಸಗೆಯಲ್ಲಿ ಬೆಂಗಳೂರಿಗೆ ಬರಲಿರುವ ಮುಕುಂದ್ ತಮ್ಮ ತಾತನಿಗೆ ತಾನು ತಯಾರಿಸಿದ ಶ್ರವಣ ಸಾಧನ ಕೊಡಲು ಬಯಸಿದ್ದಾರೆ.