ಜಾತಿಪದ್ಧತಿ ಹಾಗೂ ಜಾತಿವಿನಾಶ
ಅಂಬೇಡ್ಕರ್ ಚಿಂತನೆಗಳು
ಇಂಡಿಯಾದ ಜಾತಿಪದ್ಧತಿಯ ಯಜಮಾ ನಿಕೆಯ ಗುಣಗಳನ್ನು ಹಾಗೂ ಅದು ಮಾಡುತ್ತಾ ಬಂದಿರುವ ನಿಯಂತ್ರಣ, ದಮನ ಹಾಗೂ ಶೋಷಣೆಗಳ ಸ್ವರೂಪವನ್ನು ಆಳವಾಗಿ ಅರಿಯಲೆತ್ನಿಸಿದ ಬಾಬಾಸಾಹೇಬ್ ಅಂಬೇಡ್ಕರ್,ಚರಿತ್ರೆಯುದ್ದಕ್ಕೂ ಅಸ್ಪಶ್ಯ ಸಮುದಾಯ ಹಾಗೂ ಶೂದ್ರರು ಅನುಭ ವಿಸಿದ ಬಗೆಬಗೆಯ ಯಾತನೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದರು. ಜಾತಿಪದ್ಧತಿಯನ್ನು ನಿರ್ಣಾಯಕವಾಗಿ ಮುಖಾಮುಖಿ ಯಾಗಿ, ಅದನ್ನು ನಾಶ ಮಾಡಲೇಬೇಕೆಂಬ ತುರ್ತಿನಿಂದ ತಮ್ಮ ಚಿಂತನೆಯನ್ನು ರೂಪಿಸಿದರು. ಅಂಬೇಡ್ಕರ್ ಅವರು ಜಾತಿಪದ್ಧತಿಯನ್ನು ವಿಶ್ಲೇಷಿಸಿರುವ ಕ್ರಮದ ಮಹತ್ವವನ್ನು ಕುರಿತು ಸಂಸ್ಕೃತಿ ಚಿಂತಕ ಕಾಂಚಾ ಐಲಯ್ಯ ಬರೆಯುತ್ತಾರೆ: ಭಾರತದ ಜಾತಿಪದ್ಧತಿಯನ್ನು ಅನೇಕ ಚಿಂತಕರು ಹಾಗೂ ಬರಹಗಾರರು ವಿಶ್ಲೇಷಣೆ ಮಾಡುತ್ತಾ ಬಂದಿದ್ದರೂ ಜಾತಿಪದ್ಧತಿಯನ್ನು ವಿವರವಾಗಿ ವಿಶ್ಲೇಷಿಸಿದ ಮೊದಲ ರಾಜಕೀಯ ಚಿಂತಕರೆಂದರೆ ಅಂಬೇಡ್ಕರ್. ಅಂಬೇಡ್ಕರ್ ಅವರ ಪ್ರಕಾರ ಜಾತಿ ಒಂದು ಸಾಮಾಜಿಕ ವರ್ಗೀಕರಣ ಮಾತ್ರ ಅಲ್ಲ; ಅದು ಆರ್ಥಿಕ, ರಾಜಕೀಯ ವರ್ಗೀಕರಣ.
ಜಾತಿಪದ್ಧತಿಯ ಅಧ್ಯಯನಕಾರರು ಜನಾಂಗೀಯವಾದ, ಮೈಬಣ್ಣ ಮುಂತಾದವುಗಳ ಆಧಾರದ ಮೇಲೆ ಜಾತಿಪದ್ಧತಿಯನ್ನು ವಿವರಿಸಿದ ಕ್ರಮಗಳನ್ನು ಅಂಬೇಡ್ಕರ್ ತಿರಸ್ಕರಿಸಿದರು. ಅನುಕರಣೆ ಹಾಗೂ ಬಹಿಷ್ಕಾರ ಗಳಿಂದ ಜಾತಿಗಳು ಬೆಳೆದ ರೀತಿಯನ್ನು ಕಂಡುಕೊಂಡ ಅಂಬೇಡ್ಕರ್ ಅವರು ಜಾತಿ ಎನ್ನುವುದು ಒಂದು ಗೋಡೆಯಲ್ಲ; ಒಂದು ಮನಸ್ಥಿತಿ ಎಂಬುದನ್ನು ಆಧಾರಸಹಿತ ತೋರಿಸಿದರು. ಜಾತಿಪದ್ಧತಿಯನ್ನು ಶ್ರಮದ ವಿಭಜನೆ ಎಂದು ವಿದೇಶಿ ಅಧ್ಯಯನಗಳು ಗ್ರಹಿಸಿದ್ದವು. ಜಾತಿಪದ್ಧತಿ ಶ್ರಮದ ವಿಭಜನೆಯಲ್ಲ; ಶ್ರಮಿಕರ ವಿಭಜನೆ. ಆದ್ದರಿಂದಲೇ ಭಾರತದಲ್ಲಿ ಕಾರ್ಮಿಕರು ಕೂಡ ಒಗ್ಗೂಡಿ ಬದಲಾವಣೆಗೆ ಯತ್ನಿಸದಂತೆ ಜಾತಿಪದ್ಧತಿ ಅಡ್ಡಿಯಾಗಿದೆ ಎಂಬ ಹೊಸ ಒಳನೋಟವನ್ನು ಅಂಬೇಡ್ಕರ್ ಕೊಟ್ಟರು. ಜಾತಿಪದ್ಧತಿ ಏಕಕಾಲಕ್ಕೆ ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಹಾಗೂ ವಿವಿಧ ಬಗೆಯ ವಿಕಾರಗಳನ್ನು, ಭೇದಭಾವಗಳನ್ನು ಸೃಷ್ಟಿಸುವ ರೀತಿಯನ್ನು ಅವರು ಭಾರತದ ಭೂತ ಹಾಗೂ ವರ್ತಮಾನಗಳೆರಡನ್ನೂ ಶೋಧಿಸುವುದರ ಮೂಲಕ ತೋರಿಸಿ ಕೊಟ್ಟರು. ಧಾರ್ಮಿಕ ಮೂಲಗಳೂ ಸೇರಿದಂತೆ ವಿವಿಧ ಮೂಲ ಗಳಿಂದ ಜಾತಿಪದ್ಧತಿ ತನ್ನ ಅಸ್ತಿತ್ವಕ್ಕೆ ನ್ಯಾಯಬದ್ಧತೆಯನ್ನು ಸೃಷ್ಟಿಸಿಕೊಂಡಿರುವ ರೀತಿಯನ್ನು ಹಾಗೂ ಅದು ಬಗೆಬಗೆಯ ಅಧಿಕಾರಗಳನ್ನು ಗಳಿಸಿಕೊಂಡ ರೀತಿಯನ್ನು ಅಂಬೇಡ್ಕರ್ ತೋರಿಸಿದರು. ಸಮಾಜದ ಮೂಲಭೂತ ಬದಲಾವಣೆಗೆ ಜಾತಿ ಅಡ್ಡಿಯಾಗಿರುವುದನ್ನು, ಕೆಳಜಾತಿ ಗಳ ಪ್ರಗತಿಗೆ ಮೇಲುಜಾತಿಗಳು ಅಡ್ಡಿಯಾ ಗಿರುವ ರೀತಿಯನ್ನು ಅಂಬೇ ಡ್ಕರ್ ಗುರುತಿಸಿದರು.
ಸಮೂಹದ ಸರ್ವಾಧಿಕಾರವನ್ನು ಹೇರುವ ಜಾತಿಪದ್ಧತಿ ವ್ಯಕ್ತಿಪ್ರಜ್ಞೆಯ ವಿಕಾಸಕ್ಕೆ ಅಡ್ಡಿಯಾಗಿದೆ; ಜಾತಿ ಮೂಲತಃ ಒಂದು ನಕಾರಾತ್ಮಕ ವ್ಯವಸ್ಥೆ ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟರು. ವರ್ಣ ಹಾಗೂ ಜಾತಿಗಳು ಬೇರೆ ಬೇರೆ ಎಂದು ವಾದಿಸಿದ ಗಾಂಧೀಜಿ ಯವರಿಗೆ ವರ್ಣ ಹಾಗೂ ಜಾತಿಗಳ ನಡುವೆ ಇರುವ ಅನೇಕ ಸಾಮಾನ್ಯ ಅಂಶಗಳನ್ನು ಅಂಬೇಡ್ಕರ್ ಸ್ಪಷ್ಟವಾಗಿ ತೋರಿಸಿದರು. ಶಾಸ್ತ್ರಗಳನ್ನು ಹೊಸ ದಾಗಿ ವಿವರಿಸುವುದರಿಂದ ಏನೂ ಪ್ರಯೋಜನವಿಲ್ಲ. ಅವುಗಳನ್ನು ಜನ ಹೇಗೆ ಅರ್ಥ ಮಾಡಿಕೊಂಡಿದ್ದಾರೆಂಬುದೇ ಮುಖ್ಯ ಎಂದ ಅಂಬೇಡ್ಕರ್ ಜಾತಿಪದ್ಧತಿಯನ್ನು ವಿನಾಶ ಮಾಡುವುದೊಂದೇ ಜಾತಿಯಿಂದ ಬಿಡುಗಡೆಗೊಳ್ಳುವ ಮಾರ್ಗ ಎಂದು ನಂಬಿದ್ದರು. ಜಾತಿಗಳು ಯಾಂತ್ರಿಕವಾಗಿ ರೂಪುಗೊಂಡ ಬಗೆಯ ಚರ್ಚೆಯನ್ನು ಅಂಬೇಡ್ಕರ್ ಮುಂದುವರಿಸುತ್ತಾರೆ: ನನ್ನ ಪ್ರಕಾರ, ಜಾತಿ ಎಂಬ ಒಂದು ಗುಂಪಿರುವುದಿಲ್ಲ. ಇದ್ದರೆ ಹಲವು ಜಾತಿಗಳೇ ಇರುತ್ತವೆ. ಹೀಗೆ ಸೃಷ್ಟಿಗೊಂಡ ಜಾತಿಗಳಲ್ಲಿನ ಸದಸ್ಯನ ಯಾವುದೇ ಬಗೆಯ ಹೊಸ ಹೆಜ್ಜೆ ಜಾತಿಯ ನಿಯಮಗಳಿಗೆ ವಿರೋಧಿಯಾದರೆ, ಅವನು ಆ ಜಾತಿಯಿಂದ ಹೊರಗೆಸೆಯಲ್ಪಡುತ್ತಾನೆ. ಹೀಗೆ ಹೊರಗೆಸೆಯಲ್ಪಟ್ಟವನಿಗೆ ಮತ್ತೊಂದು ಜಾತಿಯ ಬಾಗಿಲುಗಳು ಮುಚ್ಚಿರುತ್ತವೆ. ಈ ಬಗೆಯ ಬಹಿಷ್ಕೃತರಿಂದ ಹೊಸ ಜಾತಿಗಳು ಹುಟ್ಟುತ್ತವೆ. ಈ ಬಗೆಯಲ್ಲಿ ಜಾತಿಗಳನ್ನು ಹುಟ್ಟು ಹಾಕಿಕೊಳ್ಳಲೇಬೇಕೆನ್ನುವುದು ವಿಶಿಷ್ಟವಾದ ಮನಸ್ಥಿತಿಯೇನಲ್ಲ. ಜಾತಿಗಳು ಮುಚ್ಚಿದ ಗುಂಪುಗಳಾದ್ದರಿಂದ ಹೀಗೆ ಹೊಸ ಜಾತಿಗಳು ತಾವಾಗಿಯೇ ಹುಟ್ಟುತ್ತವೆ.
ಜಾತಿ-ಶ್ರಮದ ವಿಭಜನೆಯೋ? ಶ್ರಮಿಕರ ವಿಭಜನೆಯೋ? ಎಂದು ಪ್ರಶ್ನಿಸುವ ಅಂಬೇಡ್ಕರ್ ಇವತ್ತು ಕೂಡ ಜಾತಿಯ ಸಮರ್ಥಕರಿರುವುದು ಕರುಣಾಜನಕ ಎನ್ನುತ್ತಾರೆ. ಜಾತಿಯ ಸಮರ್ಥಕರ ಪ್ರಕಾರ, ಜಾತಿ ವ್ಯವಸ್ಥೆಯೆಂದರೆ ಶ್ರಮದ ವಿಭಜನೆ ಮಾತ್ರ. ಆದರೆ ಅಂಬೇಡ್ಕರ್ ಅವರ ಪ್ರಕಾರ ಜಾತಿ ಕೇವಲ ಶ್ರಮದ ವಿಭಜನೆಯಲ್ಲ; ಅದು ಶ್ರಮಜೀವಿಗಳ ವಿಭಜನೆ ಕೂಡ. ಇದು ವಿಭಜನೆಯಷ್ಟೇ ಅಲ್ಲ; ಈ ವಿಭಜನೆಗಳನ್ನು ಒಂದರ ಕೆಳಗೊಂದು ಜೋಡಿಸಿರುವ ಶ್ರೇಣೀಕೃತ ವ್ಯವಸ್ಥೆ. ಯಾವ ದೇಶದಲ್ಲೂ ಕಾಣದ ಶ್ರೇಣೀಕರಣವಿದು. ಈ ಶ್ರೇಣೀಕರಣ ಕೂಡ ವ್ಯಕ್ತಿಯ ಸ್ವಂತ ಸಾಮರ್ಥ್ಯದ ಮೇಲೆ ನಿರ್ಧಾರವಾದದ್ದಲ್ಲ. ವ್ಯಕ್ತಿಯ ತಂದೆ, ತಾಯಂದಿರ ಸಾಮಾಜಿಕ ಸ್ಥಾನದ ಮೇಲೆ ನಿರ್ಧಾರವಾದದ್ದು. ಉದ್ಯೋ ಗಗಳ ಪುನರ್ಹೊಂದಾಣಿಕೆಯನ್ನೇ ಮಾಡದ ಜಾತಿ ನಿರುದ್ಯೋಗದ ಮೂಲವೂ ಹೌದು. ಜಾತಿಯ ಕಾರಣಕ್ಕಾಗಿಯೇ ಕೀಳೆಂದು ಕಾಣಲಾ ಗುವ ಎಷ್ಟೋ ಕಸುಬುಗಳು ಇಂಡಿಯಾದಲ್ಲಿವೆ. ಇಂಥ ಕಸುಬುಗಳಿಂದ ತಪ್ಪಿಸಿಕೊಳ್ಳುವ ಬಯಕೆ ಮಾನವರಲ್ಲಿ ನಿರಂತರವಾಗಿರುತ್ತದೆ. ಆದ್ದರಿಂದ ಮನಸ್ಸೂ ಬುದ್ಧಿಯೂ ತೊಡಗಲಾರದ ಕಸುಬುಗಳಲ್ಲಿ ಎಂಥ ಸಾಮರ್ಥ್ಯವೂ ವ್ಯಕ್ತವಾಗಲಾರದು. ಹೀಗಾಗಿಯೇ ಆರ್ಥಿಕ ವ್ಯವಸ್ಥೆಯಾಗಿ ಕೂಡ ಜಾತಿ ಒಂದು ಹಾನಿಕಾರಕ ಸಂಸ್ಥೆಯಾಗಿದೆ.
ಅಂಬೇಡ್ಕರ್ ಅವರ ಪ್ರಕಾರ ಹಿಂದೂ ಸಮಾಜವೆನ್ನುವುದು ಒಂದು ಮಿಥ್. ಹಿಂದೂ ಎಂಬ ಪದವೇ ಒಂದು ವಿದೇಶೀ ಪದ. ಅದು ಮಹಮ್ಮದೀಯರು ಸ್ಥಳೀಯರನ್ನು ಗುರುತಿಸಲು ಕೊಟ್ಟ ಪದ. ಮುಸ್ಲಿಮರ ಆಕ್ರಮಣದ ಮುನ್ನ ಇದ್ದ ಸಂಸ್ಕೃತ ಗ್ರಂಥಗಳಲ್ಲಿ ಈ ಪದದ ಸುಳಿವಿಲ.್ಲ ಹಿಂದೂ ಸಮಾಜವೆಂಬುದು ಅಸ್ತಿತ್ವದಲ್ಲೇ ಇಲ್ಲ. ಇರುವುದೇನಿದ್ದರೂ ಜಾತಿಗಳ ಒಂದು ಸಮೂಹ. ಇಲ್ಲಿ ಪ್ರತಿ ಜಾತಿಯೂ ತನ್ನ ಅಸ್ತಿತ್ವದ ಬಗ್ಗೆ ಜಾಗೃತವಾಗಿರುತ್ತದೆ. ಒಂದು ಜಾತಿಗೂ ಇನ್ನೊಂದು ಜಾತಿಗೂ ಸಂಪರ್ಕ ಉಂಟಾಗುವುದು ಹಿಂದೂ-ಮುಸ್ಲಿಂ ಜಗಳಗಳಾದಾಗ ಮಾತ್ರ. ಆದರ್ಶ ಹಿಂದೂ ಎಂದರೆ ಇತರರ ಜೊತೆ ಬೆರೆಯಲು ನಿರಾಕರಿಸುವ, ತನ್ನ ಬಿಲದೊಳಗೇ ಇರುವ ಇಲಿಯಂತಿರಬೇಕೆಂದೇ ಅರ್ಥ. ಹಾಗೆ ನೋಡಿ ದರೆ ಹಿಂದೂ ಪ್ರಜ್ಞೆ ಎಂಬುದೇ ಇಲ್ಲ. ಅಲ್ಲಿರುವುದು ಜಾತಿ ಪ್ರಜ್ಞೆ. ಆದ್ದರಿಂದಲೇ ಹಿಂದೂಗಳು ಒಂದು ದೇಶವನ್ನಾಗಲಿ ಸಮಾಜವನ್ನಾಗಲಿ ಕಟ್ಟಲಾರರು. ರಾಷ್ಟ್ರೀಯವಾದಿಗಳು ಭಿನ್ನತೆಯಲ್ಲೂ ಇರುವ ಸಾಮ್ಯತೆ ಹಾಗೂ ಏಕತೆಯನ್ನು ತೋರಿಸುತ್ತಾರೆ. ಆದರೆ ಈ ಸಾಮರ್ಥ್ಯಗಳ ಆಧಾರ ದ ಮೇಲೆ ಹಿಂದೂಗಳನ್ನು ಸಾಂವಿಧಾನಿಕ ಸಮಾಜ ಎನ್ನಲಾಗದು. ಈ ಬಗೆಯ ಸಾಮ್ಯತೆಗಳು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಇಟ್ಟಿಗೆಯಂತೆ ಸಾಗಿರಬಹುದು, ಅಷ್ಟೆ. ಸಂಸ್ಕೃತಿ ಪ್ರಸರಣದಿಂದಾಗಿ ಎಷ್ಟೋ ಬುಡಕಟ್ಟುಗಳ ನಡುವೆ ಸಾಮ್ಯವಿದೆ. ಆದರೆ ಈ ಕಾರಣದಿಂದಲೇ ಅವು ಸಮಾಜವೊಂದನ್ನು ರೂಪಿಸಲಾರವು. ಹಾಗೆ ನೋಡಿದರೆ ಹಬ್ಬಗಳಲ್ಲಿರುವ ಸಾಮ್ಯತೆಗಳು ವಿವಿಧ ಜಾತಿಗಳನ್ನು ಎಂದೋ ಒಂದಾಗಿ ಬೆಸೆಯಬೇಕಾ ಗಿತ್ತು. ಪರಸ್ಪರ ಸಮಾನವಾದ ಚಟುವಟಿಕೆಗಳಿಗೆ ಜಾತಿ ಅಡ್ಡಿಯಾಗಿರುವುದ ರಿಂದಲೇ ಹಿಂದೂಗಳು ಒಂದು ಸಮಾಜವಾಗದೇ ಹೋಗಿರುವುದು.
ಜಾತಿ ಒಂದು ನಕರಾತ್ಮಕ ವ್ಯವಸ್ಥೆ ಎನ್ನುವ ಅಂಬೇಡ್ಕರ್ ಈ ಅಂಶವನ್ನು ಚರಿತ್ರೆಯುದ್ದಕ್ಕೂ ಗುರುತಿಸುತ್ತಾರೆ: ಅನಾಗರಿಕರನ್ನು ಸುಧಾರಿಸುವುದಿರಲಿ, ಹಿಂದೂ ವಲಯದೊಳಗೇ ಕೆಳಜಾತಿಯ ಹಿಂದೂಗಳು ಸಾಂಸ್ಕೃತಿಕವಾಗಿ ತಮ್ಮ ಮಟ್ಟಕ್ಕೆ ಏರದಂತೆ ಮೇಲು ಜಾತಿಯ ಹಿಂದೂಗಳು ತಡೆದಿದ್ದಾರೆ. ಉದಾಹರಣೆಗೆ, ಬ್ರಾಹ್ಮಣರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲೆತ್ನಿಸಿದ ಪಥಾರೆ ಪ್ರಭು ಹಾಗೂ ಸೋನಾರರು ತಮ್ಮನ್ನು ದೈವಜ್ಞ ಬ್ರಾಹ್ಮಣರೆಂದು ಕರೆದುಕೊಳ್ಳಲಾ ರಂಭಿಸಿದರು. ಬ್ರಾಹ್ಮಣರ ಉಡುಗೆಗಳನ್ನೂ ನಡವಳಿಕೆಗಳನ್ನೂ ಅನುಸರಿ ಸಲಾರಂಭಿಸಿದರು. ಅವರು ಹಾಗೆ ಅನುಸರಿಸಿದ ಕೆಲವೇ ದಿನಗಳಲ್ಲಿ ಅವರ ಈ ಪ್ರಯತ್ನವನ್ನು ಬ್ರಾಹ್ಮಣರು ಪೇಶ್ವೆಗಳ ಅಧಿಕಾರವನ್ನು ಉಪಯೋಗಿಸಿಕೊಂಡು ಮುರಿದರು. ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ಸೋನಾರರ ವಿರುದ್ಧ ಪ್ರತಿಬಂಧಕಾಜ್ಞೆ ಹೊರಡಿಸಿದರು. ಮಹಮ್ಮದೀಯರು ಕತ್ತಿ ಹಿರಿದು ಧರ್ಮ ಪ್ರಸಾರ ಮಾಡುತ್ತಾರೆಂದು ಹಿಂದೂಗಳು ದೂರುತ್ತಾರೆ. ತಾವು ನಂಬಿದ್ದನ್ನು ಇತರರೂ ನಂಬ ಬೇಕೆಂದು ಕೊರಳು ಕತ್ತರಿಸಿದ ಅವರಿಗೂ, ಉಳಿದ ಜಾತಿಗಳು ಕತ್ತಲಲ್ಲೇ ಉಳಿಯಬೇಕೆಂದು ಬಯಸಿದ ಇವರಿಗೂ ವ್ಯತ್ಯಾಸವೇನು? ಕ್ರೌರ್ಯ ಕ್ಕಿಂತ ಹೀನವಾದದ್ದು ಕ್ಷುದ್ರತೆ. ಇತರರ ಬಗೆಗಿನ ಉಪೇಕ್ಷೆ ಕೂಡ ಹಿಂದೂ ಜಾತೀಯ ಮನಸ್ಸಿನ ಫಲ. ಹೀಗಾಗಿಯೇ ಸಹಕಾರ ಹಾಗೂ ಸಂಘಟನೆ ಇಲ್ಲಿ ಸಾಧ್ಯವಾಗದೇ ಹೋಗಿದೆ.
ಚಾತುರ್ವರ್ಣದ ಪ್ರತಿಪಾದಕರ ವಾದಗಳು ವಿಚಿತ್ರವಾಗಿವೆ ಎನ್ನುವ ಅಂಬೇಡ್ಕರ್, ಚಾತುರ್ವರ್ಣ ಪ್ರತಿಪಾದಕರ ವಾದಗಳನ್ನು ತಾರ್ಕಿಕವಾಗಿ ಮುಖಾಮುಖಿಯಾಗುತ್ತಾರೆ: ಇತರ ಮೂರು ವರ್ಣಗಳು ಶೂದ್ರನನ್ನು ನೋಡಿಕೊಳ್ಳುವಾಗ ಶೂದ್ರನೇಕೆ ಸಂಪತ್ತನ್ನು ಸಂಪಾದಿಸಬೇಕು ಎಂಬ ಚಾತುರ್ವರ್ಣ ಪ್ರತಿಪಾದಕರ ವಾದವೇನೋ ಹಿತವಾಗಿ ಕೇಳಿಸುತ್ತದೆ. ಆದರೆ ವಾಸ್ತವವಾಗಿ ಈ ಮೂರೂ ವರ್ಣಗಳು ಪರಸ್ಪರ ಒಂದಾಗಿ ಸೇರಿ ಶೂದ್ರ ತಲೆಯೆತ್ತದಂತೆ ಮಾಡಿವೆ. ಶೂದ್ರನಿಗೆ ಜ್ಞಾನ ಸಂಪಾದನೆಗೆ ಅವಕಾಶವೇ ಇರದಿದ್ದುದರಿಂದ ತನ್ನ ಹಿತಗಳೇನೆಂದು ಅವನಿಗೆ ಅರಿವೇ ಆಗಲಿಲ್ಲ. ಅಧಿಕಾರದ ವಿರುದ್ಧ ಉಸಿರೆತ್ತಲು ಅವನಲ್ಲಿ ಅಸ್ತ್ರಗಳಿರಲಿಲ್ಲ. ಜಗತ್ತಿನ ಎಲ್ಲೆಡೆ ಕ್ರಾಂತಿಯಾದರೂ ಇಂಡಿಯಾದಲ್ಲಿ ಆಗದೇ ಹೋದುದಕ್ಕೆ ಕೆಳಜಾತಿಯ ಹಿಂದೂಗಳು ಚಾತುರ್ವರ್ಣ ಪದ್ಧತಿಯಿಂದಾಗಿ ದುರ್ಬಲರಾಗಿರುವುದೇ ಕಾರಣ. ಶೂದ್ರರು ಅಧಿಕಾರದಲ್ಲಿದ್ದ ಮೌರ್ಯರ ಕಾಲ ಬಿಟ್ಟರೆ, ಉಳಿದೆಲ್ಲಾ ಘಟ್ಟದಲ್ಲಿ ಈ ದೇಶ ಸೋಲು ಮತ್ತು ಕತ್ತಲೆಯಲ್ಲಿ ನರಳಿದೆ. ಮುಸ್ಲಿಮರು, ಕ್ರಿಶ್ಚಿಯನ್ನರಲ್ಲಿ ಕೂಡ ಜಾತಿಗಳಿವೆ ಎಂದು ಹಿಂದೂಗಳು ಸಮಾಧಾನ ತಳೆಯುತ್ತಾರೆ. ಆದರೆ ಇದರಲ್ಲೂ ವ್ಯತ್ಯಾಸಗಳಿವೆ. ವಿವಿಧ ಜಾತಿಗಳನ್ನು ಒಟ್ಟಿಗೇ ಹಿಡಿದಿಡುವ ಕಟ್ಟುಗಳು ಹಿಂದೂಗಳಲ್ಲಿಲ್ಲ. ಹಿಂದೂ ನಾಗರಿಕತೆ ಸಹಸ್ರಾರು ವರ್ಷಗಳಿಂದ ಬದುಕಿ ಉಳಿದು ಬಂದಿದೆಯೆಂದು ಡಾ.ರಾಧಾಕೃಷ್ಣನ್ರಂಥವರು ಹೆಮ್ಮೆಯಿಂದ ಹೇಳುತ್ತಾರೆ. ಆದರೆ ಬದುಕುವುದಕ್ಕೂ ಸಾರ್ಥಕವಾಗಿ ಬದುಕುವುದಕ್ಕೂ ವ್ಯತ್ಯಾಸವಿಲ್ಲವೇ?
ತಮ್ಮ ಗ್ರಹಿಕೆಯಲ್ಲಿ ಧರ್ಮದ ನಾಶ ಎಂದರೇನು ಎಂಬ ಬಗ್ಗೆ ಅಂಬೇಡ್ಕರ್ ವಿವರಿಸುತ್ತಾರೆ: ನಾನು ಹೇಳುತ್ತಿರುವ ಧರ್ಮದ ನಾಶ ಎಂದರೇನು ಎಂಬುದು ಹಲವರಿಗೆ ಅರ್ಥವಾಗದಿರಬಹುದು. ಈ ಹಿಂದೂ ಧರ್ಮವನ್ನು ನೋಡಿ: ಅದು ಸಾಮಾಜಿಕ, ರಾಜಕೀಯ ನಿಯಮಗಳ, ಕಟ್ಟಳೆಗಳ ಒಂದು ಕಲಸುಮೇಲೋಗರ. ಹಿಂದೂ ಧರ್ಮವೆಂಬುದು ಕೇವಲ ನಿಯಮವಾಗಿಬಿಟ್ಟಿದೆ. ಈ ನಿಯಮಗಳೇ ನಿನ್ನೆ, ಇಂದು, ಎಂದೆಂದೂ ಒಂದೇ ಆಗಿ ಮುಂದುವರಿಯುವಂಥವು ಹಾಗೂ ಅಂತಿಮವಾದವು. ಇಂಥ ಧರ್ಮ ನಾಶವಾಗಲೇಬೇಕು. ಯಾವಾಗ ಜನರಿಗೆ ಇದು ಧರ್ಮವಲ್ಲ, ಬರೀ ನಿಯಮ ಎಂದು ಮನವರಿಕೆಯಾಗುತ್ತದೋ ಆ ಗಳಿಗೆಯೇ ಆ ನಿಯಮವನ್ನು ಬದಲಿಸಲು ಅವರು ಸಿದ್ಧರಾಗುತ್ತಾರೆ.
ಇದರರ್ಥ ಧರ್ಮದ ಅಗತ್ಯವೇ ಇಲ್ಲ ಎಂದಲ್ಲ ಎನ್ನುವ ಅಂಬೇಡ್ಕರ್,ಆದರೆ ಅದು ತತ್ವಗಳ ಧರ್ಮವಾಗಿರಬೇಕು ಎನ್ನುತ್ತಾರೆ. ಅವರ ಪ್ರಕಾರ: ವೇದಶಾಸ್ತ್ರ ಪುರಾಣಗಳು ನಿಷೇಧಿಸಲ್ಪಟ್ಟು ಪುರೋಹಿತತ್ವ ರದ್ದಾಗ ಬೇಕು; ಹಿಂದೂ ಧರ್ಮದ ಉಳಿವಿಗೆ ಬ್ರಾಹ್ಮಣತ್ವ ನಾಶವಾಗಲೇಬೇಕು; ಹಿಂದೂಗಳು ತಮ್ಮ ಧರ್ಮ ಮತ್ತು ನೈತಿಕತೆಯನ್ನು ತಮ್ಮ ಉಳಿವಿಗಾ ಗಿಯೇ ಪುನರ್ಪರಿಶೀಲಿಸಬೇಕು; ಬದಲಾಗುವುದೇ ಬದುಕಿನ ಧರ್ಮ ಎಂದು ತಿಳಿದು ಭೂತದ ಆದರ್ಶೀಕರಣವನ್ನು ನಿಲ್ಲಿಸಬೇಕು.
ಈ ಹಿನ್ನೆಲೆಯಲ್ಲಿ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಬದಲಾ ಯಿಸುವುದು ಹೇಗೆ? ಜಾತಿವಿನಾಶ ಹೇಗೆ?ಈ ಕುರಿತು ಅಂಬೇಡ್ಕರ್ ಬರೆಯುತ್ತಾರೆ: ಅಂತರ್ಜಾತೀಯ ವಿವಾಹ ಮಾತ್ರ ಜಾತಿವಿನಾಶಕ್ಕೆ ಸೂಕ್ತ ಕಾರ್ಯಕ್ರಮ. ರಕ್ತದ ಬೆರೆಯುವಿಕೆ ಮಾತ್ರ ತನ್ನವರೆಂಬ ಭಾವನೆ ಹುಟ್ಟು ಹಾಕಬಲ್ಲದು. ಛಿದ್ರಗೊಂಡ ಸಮಾಜದಲ್ಲಿ ವಿವಾಹ ಒಟ್ಟುಗೂಡಿಸುವ ಶಕ್ತಿಯಾಗಿ ಕೆಲಸ ಮಾಡುತ್ತದೆ. ಯಾಕೆಂದರೆ ಜಾತಿಯೆನ್ನುವುದು ಒಂದು ಗೋಡೆಯಲ್ಲ; ಒಂದು ಮನಸ್ಥಿತಿ. ಅಸ್ಪಶ್ಯತೆಯನ್ನು ತೊಡೆಯಲೆತ್ನಿಸುತ್ತಿರುವ ಗಾಂಧೀಜಿಯವರಂಥವರು ಅರಿಯಬೇಕಾಗಿರುವುದೇನೆಂದರೆ, ಜನರ ಕ್ರಿಯೆಗಳು ಅವರು ನಂಬುವ ಶಾಸ್ತ್ರಗಳಿಂದ ನಿಯಂತ್ರಿಸಲ್ಪಟ್ಟಿರುತ್ತವೆ. ಆ ಶಾಸ್ತ್ರಗಳಲ್ಲಿನ ನಂಬಿಕೆ ನಾಶವಾಗುವ ತನಕ ಅವರು ಬದಲಾಗುವುದಿಲ್ಲ. ಕಡೆಯದಾಗಿ, ಜಾತಿ ಹಿಂದೂಗಳ ಉಸಿರು ನಿಜ. ಆದರೆ ಈ ಉಸಿರು ಇಡೀ ಪರಿಸರವನ್ನೇ ಮಲಿನಗೊಳಿಸಿದೆ. ಕ್ರೈಸ್ತರು, ಸಿಖ್ಖರು, ಮುಸ್ಲಿಮರನ್ನು ಕೂಡ ಅದು ಮಲಿನಗೊಳಿಸಿದೆ. ಆದ್ದರಿಂದಲೇ ಈ ಜಾತಿವಿನಾಶ ಕಾರ್ಯಕ್ಕಾಗಿ ಉಳಿದವರೂ ಒಂದಾಗಬೇಕಾಗಿದೆ. ಜಾತಿರಹಿತವಾದ ಈ ಬಗೆಯ ಆಂತರಿಕ ಶಕ್ತಿ ಇಲ್ಲದಿದ್ದರೆ ಹಿಂದೂಗಳ ಸ್ವರಾಜ್ಯ ಕೂಡ ಗುಲಾಮಗಿರಿಯೆಡೆಗೆ ಇನ್ನೊಂದು ಹೆಜ್ಜೆಯಷ್ಟೇ ಆಗಿಬಿಡುತ್ತದೆ.
ಅಂಬೇಡ್ಕರ್ ಅವರ ಹೋರಾಟ ಹಾಗೂ ಚಿಂತನೆಯ ಆರಂಭ ಘಟ್ಟದಲ್ಲಿ ರೂಪುಗೊಂಡ ಜಾತಿವಿನಾಶದ ಪರಿಕಲ್ಪನೆ ಮುಂದೆ ಅವರನ್ನು ಅನೇಕ ಬಗೆಯ ಚಿಂತನೆಗಳನ್ನು ಹಾಗೂ ಹೋರಾಟಗಳನ್ನು ರೂಪಿಸಲು ಪ್ರೇರೇಪಿಸಿತು. ಜಾತಿಪದ್ಧತಿಯನ್ನು ಕುರಿತು ಈ ಗಂಭೀರ ವಿಶ್ಲೇಷಣೆಗಳನ್ನು ಮಂಡಿಸಿ, ಮುಂದೆ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸಿದ ಅಂಬೇಡ್ಕರ್ ಹಿಂದೂವಾಗಿ ಹುಟ್ಟಿದ್ದೇನೆ; ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಬಹು ಹಿಂದೆಯೇ ಘೋಷಿಸಿದರು. ಈ ಘೋಷಣೆಯ ನಂತರದ ಹುಡುಕಾಟ ಅವರ ಜೀವಿತದ ಕೊನೆಯ ಘಟ್ಟದಲ್ಲಿ ಬೌದ್ಧಧರ್ಮ ಸ್ವೀಕಾರ ಕುರಿತ ನಿರ್ಣಾಯಕ ಚಿಂತನೆಯವರೆಗೂ ಮುಂದುವರಿಯಿತು. ಹಿಂದೂ ಧರ್ಮದ ಒಳಗಿದ್ದುಕೊಂಡು ಜಾತಿವಿನಾಶ ಅಸಾಧ್ಯ ಎಂಬುದು ಅಂಬೇಡ್ಕರ್ ಅವರಿಗೆ ಸ್ಪಷ್ಟವಾದದ್ದರಿಂದ ಅವರು ಬೌದ್ಧ ಧರ್ಮವನ್ನು ಹೊಸ ರೀತಿಯಲ್ಲಿ ವಿವರಿಸಿ, ಬೌದ್ಧಧರ್ಮವನ್ನು ಜಾತಿವಿನಾಶದ ಮುಖ್ಯ ಸಾಧನವಾಗಿ ಕಂಡರು ಹಾಗೂ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಭಾರತೀಯ ಸಂವಿಧಾನದಲ್ಲಿ ಹಾಗೂ ಆನಂತರದ ದಶಕಗಳಲ್ಲಿ ಭಾರತದಲ್ಲಿ ರೂಪುಗೊಂಡಿರುವ ವಿವಿಧ ಚಿಂತಕ, ಚಿಂತಕಿಯರ ಜಾತ್ಯತೀತ ಚಿಂತನೆಗಳಲ್ಲಿ ಜಾತಿವಿನಾಶ ಕುರಿತ ಅಂಬೇಡ್ಕರ್ ಚಿಂತನೆಗಳು ಹಾಗೂ ಆಶಯಗಳು ಬೇರೆ ಬೇರೆ ರೀತಿಗಳಲ್ಲಿ ಮುಂದುವರಿದಿವೆ.