ಸೂಜಿಯ ನೋವಿಲ್ಲದೆಯೇ ರಕ್ತ ಪರೀಕ್ಷೆ!
ಅಲಿಗಢ್ ಮುಸ್ಲಿಂ ವಿವಿ ವಿದ್ಯಾರ್ಥಿಗಳ ಸಂಶೋಧನೆ
ಅಲಿಗಢ ವಿಶ್ವವಿದ್ಯಾಲಯದ ಜಾಕೀರ್ ಹುಸೇನ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸೂಜಿ ಇಲ್ಲದೆಯೇ ರಕ್ತ ಕೋಶಗಳ ಇಲೆಕ್ಟ್ರಿಕಲ್ ತತ್ವಗಳನ್ನು ಬಳಸಿಕೊಂಡು ಕೆಂಪು ರಕ್ತಕಣಗಳು ಮತ್ತು ಬಿಳಿ ರಕ್ತಕಣಗಳನ್ನು ಲೆಕ್ಕ ಹಾಕುವ ವಿಶಿಷ್ಟ ಪ್ರೊಟೊಟೈಪ್ ಅಭಿವೃದ್ಧಿಪಡಿಸಿದ್ದಾರೆ. ಬಿಟೆಕ್ ವಿದ್ಯಾರ್ಥಿಗಳಾದ ರೋಹನ್ ಮಹೇಶ್ವರಿ, ಸಿಮ್ರನ್ ಕೌರ್, ಸೋಮ್ಯಾ ಅಗರ್ವಾಲ್ ಮತ್ತು ವಾಣಿ ದಯಾಲ್ ಶರ್ಮಾ ಈ ಸಾಧನ ರಚಿಸಲು ನಾಲ್ಕು ತಿಂಗಳು ತೆಗೆದುಕೊಂಡಿದ್ದಾರೆ. ರೋಹನ್ ಮತ್ತು ಸಿಮ್ರನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದುತ್ತಿದ್ದರೆ, ಸೋಮ್ಯಾ ಮತ್ತು ವಾಣಿ ಕಂಪ್ಯೂಟರ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ದೇಶಿ ಆರೋಗ್ಯ ಚೆಕಪ್ ವಿಧಾನಕ್ಕೆ ನೀಡಿರುವ ಡಿಜಿಟಲ್ ಪರಿಹಾರಕ್ಕಾಗಿ ಈ ವಿದ್ಯಾರ್ಥಿಗಳು ಜಿಇ ಎಡಿಸನ್ ಚಾಲೆಂಜ್ 2016ರಲ್ಲಿ ರೂ 10 ಲಕ್ಷ ಪ್ರಶಸ್ತಿ ಮೊತ್ತ ಗೆದ್ದಿದ್ದಾರೆ.
ಜಿಇ ಇಂಡಿಯಾ ಟೆಕ್ನಾಲಜಿ ಸೆಂಟರ್ ಇತ್ತೀಚೆಗೆ ಚಾಲೆಂಜ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ಅವರಿಗೆ ರೂ 2 ಲಕ್ಷದ ಪ್ರಶಸ್ತಿ ಮತ್ತು ಅವರ ವಿಶ್ವವಿದ್ಯಾಲಯಕ್ಕೆ ಇನ್‌ಕ್ಯುಬೇಶನ್ ಅನುದಾನವಾಗಿ ರೂ 8 ಲಕ್ಷ ದೊರೆತಿದೆ. ಅವರ ಅನ್ವೇಷಣೆಯ ಮಹತ್ವದ ಬಗ್ಗೆ ಮಾತನಾಡಿದ ನಗರದ ಸ್ತ್ರೀರೋಗ ತಜ್ಞೆ ಡಾ ಜ್ಯೋತ್ಸ್ನಾ ಮೆಹ್ತಾ, ಡಬ್ಲ್ಯುಬಿಸಿ ಕೌಂಟ್ ಹೆಚ್ಚಾದರೆ ಬ್ಯಾಕ್ಟೀರಿಯ ಸೋಂಕಾಗಿದೆ ಎಂದು ಅರ್ಥ. ಅಂತಹ ಸೋಂಕುಗಳನ್ನು ಪತ್ತೆ ಹಚ್ಚಲು ಪ್ರೊಟೊಟೈಪ್ ನೆರವಾಗಬಹುದು ಎಂದಿದ್ದಾರೆ.
ಒಮ್ಮೆ ಅಂಕಿ ಅಂಶಗಳನ್ನು ಸಂಗ್ರಹಿಸಿದ ಮೇಲೆ ಅದನ್ನು ಸಾಫ್ಟವೇರ್‌ಗೆ ವರ್ಗಾಯಿಸಿ ವಿಶ್ಲೇಷಣೆ ಮಾಡಲಾಗುವುದು. ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನದ ಮೂಲಕ ಸಾಫ್ಟವೇರ್ ರೋಗಿಯ ಫೋನಿಗೆ ಸಂದೇಶ ಕಳುಹಿಸುತ್ತದೆ. ಬದಲಾವಣೆ ಇದ್ದರೆ ವೈದ್ಯರು ವಿವರಗಳನ್ನು ಪರಿಶೀಲಿಸುತ್ತಾರೆ. ಮನೆಯಿಂದಲೇ ರೋಗಿಯ ಚೆಕಪ್ ಮಾಡಿ ವೈದ್ಯರು ಔಷಧ ಸೂಚಿಸಬಹುದು ಎಂದು ರೋಹನ್ ಮಹೇಶ್ವರಿ ವಿವರಿಸುತ್ತಾರೆ. ಈ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಕಾರ ರಕ್ತದ ಭೌತಶಾಸ್ತ್ರ, ರಾಸಾಯನಿಕ, ರಚನಾತ್ಮಕ ಮತ್ತು ಇತರ ತತ್ವಗಳನ್ನು ವಿವರವಾಗಿ ಅಧ್ಯಯನ ಮಾಡಲಾಗಿದೆ. ಆದರೆ ಇಲೆಕ್ಟ್ರಿಕಲ್ ತತ್ವಗಳನ್ನು ಅಧ್ಯಯನ ಮಾಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆ ಬಗ್ಗೆ ಸಂಶೋಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸಂಶೋಧನೆಯ ಸಂದರ್ಭದಲ್ಲಿ ಪ್ರಯೋಗಾಲಯಗಳಿಗೆ ಹೋಗಿ ರೋಗಿಗಳ ರಕ್ತ ಪರೀಕ್ಷೆ ವಿಧಾನ ಗಮನಿಸಿದ್ದಾರೆ. ಕೆಲವು ರೋಗಿಗಳು ವೈದ್ಯರ ಸಲಹೆಯಂತೆ ಪ್ರಯೋಗಾಲಯಕ್ಕೆ ಹೋಗಿಯೇ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಕಾರಣ ಸಮಸ್ಯೆ ಪರಿಹರಿಸಲು ವಿದ್ಯಾರ್ಥಿಗಳು ನಿರ್ಧರಿಸಿದರು. ಸಂಶೋಧನೆಗೆ ನಾಲ್ಕು ತಿಂಗಳು ಹಿಡಿಯಿತು. ಜಿಇ ಎಡಿಶನ್ ಗೆದ್ದ ಮೇಲೆ ವಿದ್ಯಾರ್ಥಿಗಳು ಈ ಕಲ್ಪನೆಯ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಸ್ಪರ್ಧೆ ಕಠಿಣವಾಗಿತ್ತು. ಅತ್ಯುತ್ತಮ ಬುದ್ಧಿಮತ್ತೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ನಮ್ಮ ಜ್ಞಾನವನ್ನು ಹಿರಿಯ ವಿಜ್ಞಾನಿಗಳು ಮತ್ತು ಇಂಜಿನಿಯರುಗಳ ಮುಂದೆ ಇಡುವ ಅವಕಾಶ ಸಿಕ್ಕಿದೆ ಎನ್ನುತ್ತಾರೆ ಸೋಮ್ಯಾ. ಜಾಕೀರ್ ಹುಸೇನ್ ಕಾಲೇಜಿನ ವಿದ್ಯಾರ್ಥಿಗಳ ತಂಡದ ದೇಶಿ ಚೆಕಪಿಗೆ ಡಿಜಿಟಲ್ ಪರಿಹಾರ ತೀರ್ಪುಗಾರರ ಮನಸೆಳೆಯಿತು. ಇದರಲ್ಲಿ ರಕ್ತಕೋಶಗಳ ಲೆಕ್ಕಾಚಾರವನ್ನು ಇಲೆಕ್ಟ್ರಿಕಲ್ ತತ್ವಗಳನ್ನು ಆಧರಿಸಿ ಮಾಡುವ ವ್ಯವಸ್ಥೆ ಇದೆ. ಯುವ ಬುದ್ಧಿವಂತರು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವಂತಹ ಇಂತಹ ಪರಿಹಾರವನ್ನು ತಂದಿರುವುದು ನಮಗೆ ಹೆಮ್ಮೆಯಾಗಿದೆ ಎಂದು ಗ್ಲೋಬಲ್ ರೀಸರ್ಚ್ ಸೆಂಟರ್ ನಿರ್ದೇಶಕ ಶುಕ್ಲಾ ಚಂದ್ರ ಹೇಳಿದ್ದಾರೆ.
ವಿಜೇತರಿಗೆ ಬೆಂಗಳೂರಿನ ಜಿಇ ಜಾನ್ ಎಫ್ ವೆಲ್ಚ್ ಟೆಕ್ನಾಲಜಿ ಕೇಂದ್ರವನ್ನು ಭೇಟಿ ನೀಡಿ ಸಂಶೋಧನಾ ಮತ್ತು ಅಧ್ಯಯನ ವಿಭಾಗ ನೋಡುವ ಅವಕಾಶ ಸಿಕ್ಕಿದೆ. ಅಲ್ಲದೆ ಜಿಇ ತಜ್ಞರ ಜೊತೆಗೆ ವ್ಯವಹರಿಸುವ ಅವಕಾಶವೂ ಇದೆ.