‘ಮೊದಲು ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸಿ’
ಬೆಂಗಳೂರು, ಎ.15: ಬೀಡಿ ಕಾರ್ಮಿಕರಿಗೆ ಮೊದಲು ಪರ್ಯಾಯ ಉದ್ಯೋಗ ಕಲ್ಪಿಸಿದ ನಂತರವೇ ದೇಶದಲ್ಲಿ ಧೂಮಪಾನ ನಿಷೇಧಿಸಬೇಕೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸರಕಾರಕ್ಕೆ ಆಗ್ರಹಿಸಿದೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯುನ ರಾಜ್ಯಾಧ್ಯಕ್ಷ ವಿ.ಜೆ.ಕೆ.ನಾಯರ್ ಮಾತನಾಡಿ, ಯಾವುದೇ ಪೂರ್ವ ಯೋಜನೆಯಿಲ್ಲದೆ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಚಿಂತಿಸಿವೆ. ಈ ಪರಿಣಾಮ ಲಕ್ಷಾಂತರ ಬೀಡಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ 23 ಜಿಲ್ಲೆಗಳಲ್ಲಿ 10 ಲಕ್ಷಕ್ಕೂ ಅಧಿಕ ಕಾರ್ಮಿಕರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಪರ್ಯಾಯ ಉದ್ಯೋಗ ಕಲ್ಪಿಸಿದ ನಂತರ ಧೂಮಪಾನ ನಿಷೇಧಿಸಲಿ ಎಂದು ಒತ್ತಾಯಿಸಿದ ಅವರು, ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯಲ್ಲಿನ ಹಲವು ಅಂಶಗಳನ್ನು ವಿರೋಧಿಸಿ ಅಖಿಲ ಬೀಡಿ ಮಾಲಕರ ಸಂಘ ಎ.1ರಿಂದ ಬೀಡಿ ತಯಾರಿಕೆಯನ್ನು ನಿಲ್ಲಿಸಿ, ಏಕಾಏಕಿ ಕಾರ್ಮಿಕರನ್ನು ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.
ಬೀಡಿ ಸೇವನೆಯಿಂದ ದೇಹದಲ್ಲಿ ಕ್ಯಾನ್ಸರ್ ಕಾರಕಾಂಶಗಳು ಉತ್ಪತ್ತಿಯಾಗುವುದಿಲ್ಲ. ಆದರೆ ತಂಬಾಕು ಜಿಗಿಯುವ ಮತ್ತು ಸಿಗರೇಟ್ ಸೇದುವುದರಿಂದ ಕ್ಯಾನ್ಸರ್ ರೋಗ ಬರುತ್ತದೆ ಎಂದು ಹಲವು ಪ್ರಯೋಗಗಳ ಮೂಲಕ ತಿಳಿದು ಬಂದಿದೆ. ಹೀಗಾಗಿ ಸಂಪೂರ್ಣ ಧೂಮಪಾನ ನಿಷೇಧದಲ್ಲಿ ಬೀಡಿಗೆ ವಿನಾಯಿತಿ ನೀಡಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೆಲಸದ ನಿರಾಕರಣೆಯ ದಿನಗಳಲ್ಲಿ ಕನಿಷ್ಠ ವೇತನ ಕಾಯ್ದೆ ಆಧಾರದಲ್ಲಿ ಉದ್ಯೋಗ ವಂಚಿತ ಬೀಡಿ ಕಾರ್ಮಿಕರಿಗೆ ಶೇ.40ರಷ್ಟು ಖಾತ್ರಿ ವೇತನ ನೀಡಬೇಕು. ಅಲ್ಲದೆ, ಅಕ್ರಮವಾಗಿ ತಡೆಹಿಡಿದಿರುವ ತುಟ್ಟಿಭತ್ತೆಯನ್ನು ಶೀಘ್ರದಲ್ಲಿ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಎ.18ರಿಂದ ಪ್ರತಿಭಟನೆ: ಬೀಡಿ ಕಾರ್ಮಿಕರ ಕಡೆಗಣಿಸಿರುವ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಬೀಡಿ ಮಾಲಕರ ಧೋರಣೆಯನ್ನು ಖಂಡಿಸಿ ಎ.18ರಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮೀ, ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಉಪಸ್ಥಿತರಿದ್ದರು.