ಮೇಲ್ಜಾತಿಗಳ ಸಂಘಟಿತ ಹಿಂಸೆಗೆ ಬಲಿಯಾಗುತ್ತಿರುವ ಅಸಂಘಟಿತ ದಲಿತರು!
ಇತ್ತೀಚೆಗೆ ಕರ್ನಾಟಕವೂ ಸಹ ಉತ್ತರ ಇಂಡಿಯಾದ ಹಲವು ಹಿಂದುಳಿದ ರಾಜ್ಯಗಳ ರೀತಿಯಲ್ಲಿ ದಲಿತರ ಮೇಲಿನ ಭೀಕರ ಹಲ್ಲೆಗಳಿಗೆ ಸಾಕ್ಷಿಯಾಗುತ್ತಿದೆ. ನಮ್ಮದು ಸೌಹಾರ್ದಯುತ-ಸಹಬಾಳ್ವೆಯ ರಾಜ್ಯವೆಂದು ಹುಸಿ ಭ್ರಮೆಗಳನ್ನು ಬಿತ್ತುತ್ತಲೇ ತಮ್ಮ ಮೇಲ್ಜಾತಿಗಳ ಹಿತಕಾಯುತ್ತಿದ್ದ ಸವರ್ಣೀಯ ಮಾಧ್ಯಮಗಳೇ ಇಂತಹ ಹಲ್ಲೆಗಳು ಸಾಮಾನ್ಯವಾಗುತ್ತಿವೆಯೆಂಬುದನ್ನು ಒಪ್ಪಿಕೊಳ್ಳ ಲೇಬೇಕಾದ ಸನ್ನಿವೇಶವೊಂದು ನಿರ್ಮಾಣ ವಾಗುತ್ತಿದೆ. ಮೇಲ್ಜಾತಿಗಳ ಸಾಮರಸ್ಯದ ಢೋಂಗಿ ಮಾತುಗಳನ್ನು ತಿರಸ್ಕರಿಸಿ ಸಂಘರ್ಷದ ಹಾದಿ ಹಿಡಿಯ ಬೇಕಾದ ಅನಿವಾರ್ಯತೆಯೊಂದನ್ನು ಸ್ವತ: ಮೇಲ್ಜಾತಿಗಳೇ ಸೃಷ್ಟಿಸಿವೆ.
ಹಿಂದೆಲ್ಲ ವೈಯಕ್ತಿಕ ಮಟ್ಟದಲ್ಲಿ ನಡೆಯುತ್ತಿದ್ದ ದಲಿತರ ಮೇಲಿನ ಹಲ್ಲೆಗಳು ಇದೀಗ ಸಂಘಟಿತ ರೂಪ ಪಡೆದುಕೊಳ್ಳುತ್ತಿವೆ. ವರ್ಷಗಳ ಹಿಂದೆ: ಮಾಡಿದ ಕೆಲಸಕ್ಕೆ ಕೂಲಿ ಕೇಳಿದ ಕಾರಣಕ್ಕೆ, ಸವರ್ಣೀಯ ಯುವತಿಯನ್ನು ದಲಿತ ಯುವಕನೊಬ್ಬ ಛೇಡಿಸಿದ ಎಂಬ ಕಾರಣಕ್ಕೆ, ಕುಡಿಯುವ ನೀರಿನ ಬಾವಿಯ ಬಳಿಗೆ ದಲಿತ ಮಹಿಳೆಯೊಬ್ಬಳು ಬಂದಳೆಂಬ ಕಾರಣಕ್ಕೆ ನಡೆಯುತ್ತಿದ್ದ ವೈಯಕ್ತಿಕ ಸ್ವರೂಪದ ಹಲ್ಲೆಗಳಿವತ್ತು ತಮ್ಮ ಮಾದರಿ, ಗಾತ್ರ ಮತ್ತು ಸ್ವರೂಪಗಳನ್ನು ಬದಲಿಸಿಕೊಂಡಿವೆ. ಜೊತೆಗೆ ಬಲಾಢ್ಯಜಾತಿಗಳು ಬೆಂಬಲಿಸುವ ರಾಜಕೀಯ ಪಕ್ಷಗಳು ಸಹ ಪರೋಕ್ಷವಾಗಿ ಇಂತಹ ಹಲ್ಲೆಗಳಿಗೆ ಕುಮ್ಮಕ್ಕು ನೀಡುತ್ತ, ಹಲ್ಲೆಯ ನಂತರದಲ್ಲಿ ಸವರ್ಣೀಯರ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಪರಿಪಾಠವೂ ನಿರ್ಮಾಣವಾಗಿದೆ.
ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರ ದೇವಸ್ಥಾನ ಪ್ರವೇಶದ ಹಿನ್ನೆಲೆಯಲ್ಲಿ ನಡೆದ ದಲಿತರ ಮೆಲಿನ ಹಲ್ಲೆಯು ಮೇಲ್ಜಾತಿಗಳ ಸಂಘಟಿತ ಹಿಂಸೆಗೆ ಮತ್ತು ಪ್ರಭುತ್ವದ ಬೆಂಬಲಕ್ಕೆ ಬಲವಾದ ನಿದರ್ಶನವಾಗಿದೆ. ಸಾಂಸ್ಥಿಕ ಸ್ವರೂಪ ಪಡೆಯುತ್ತಿರುವ ದಲಿತರ ಮೇಲಿನ ಹಿಂಸೆಗಳು ಸಂಬಂಧಿಸಿದ ಇಡೀ ದಲಿತ ಸಮುದಾಯವೊಂದನ್ನು ಗುರಿಯಾಗಿಸಿಕೊಳ್ಳುವ ರೀತಿಗೆ ಸಿಗರನಹಳ್ಳಿಯ ಘಟನೆ ಸ್ಪಷ್ಟವಾದ ಒಂದು ನಿದರ್ಶನವಾಗಿದೆ. ಸಿಗರನಹಳ್ಳಿಯ ಈ ಹಿಂಸೆಯ ಬಗ್ಗೆ ಒಂದಿಷ್ಟು ನೋಡೋಣ:
ಆರು ತಿಂಗಳ ಹಿಂದೆ ದೇವಸ್ಥಾನ ಪ್ರವೇಶಿಸಿದ ದಲಿತ ಮಹಿಳೆಯರಿಗೆ ಸವರ್ಣೀಯರು ವಿಧಿಸಿದ ದಂಡದ ಬಗೆಗಿನ ಅಸಹನೆಯೊಂದಿಗೆ ಪ್ರಾರಂಭವಾದ ದಲಿತರ ಸಿಟ್ಟು ದೇವಸ್ಥಾನ ಪ್ರವೇಶಿಸಿ, ಈ ಅವಮಾನವನ್ನು ಗೆಲ್ಲಲೇಬೇಕೆಂಬ ಹಟಕ್ಕೆ ದಲಿತರು ಬೀಳುವಂತೆ ಮಾಡಿತು. ನಂತರ ವಾರಗಳ ಹಿಂದೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ತನ್ನ ಉಸ್ತುವಾರಿಯಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಕಲ್ಪಿಸಲು ಮುಂದಾದಾಗ ಸವರ್ಣೀಯರು ಇದಕ್ಕೆ ಆಸ್ಪದ ನೀಡಲಿಲ್ಲ. ಅಲ್ಲಿಗೆ ಬಂದ ಮಾಧ್ಯಮದವರ ಮೇಲೆ, ಪೊಲೀಸರ ಮೇಲೆ ಪ್ರಗತಿಪರರ ಮೇಲೆ ಹಲ್ಲೆ ನಡೆಸಲು ಮುಂದಾದ ಸವರ್ಣೀಯರ ಗುಂಪು ಜಿಲ್ಲಾಡಳಿತವನ್ನು ಹಿಮ್ಮೆಟ್ಟಿಸಲು ಬೇಕಾದ ಎಲ್ಲ ಮಾರ್ಗಗಳನ್ನು ಅನುಸರಿಸಿತು..ಈ ಸಂದರ್ಭದಲ್ಲಿ ಇಡೀ ಜಿಲ್ಲಾಡಳಿತವೇ ಸ್ತಬ್ಧವಾಗಿ ಮೂಕ ಪ್ರೇಕ್ಷಕರಂತೆ ನಿಲ್ಲಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.
ಹಾಸನ ಜಿಲ್ಲೆಯ ಸವರ್ಣೀಯ ಶಾಸಕರೂ ಮಾಜಿ ಮಂತ್ರಿಗಳೂ ಆದ ಬಲಾಢ್ಯ ನಾಯಕರೊಬ್ಬರು ಹಾಸನದ ಮಟ್ಟಿಗೆ ಪ್ರಭುತ್ವವಾಗಿದ್ದಾರೆ. ಸವರ್ಣೀಯರಿಗೆ ರಾಜಕೀಯವಾಗಿ ಸದರಿ ನಾಯಕರ ಅಭಯ ಹಸ್ತವಿದೆ. ಸದರಿ ಸರಕಾರದಲ್ಲಿ ಮಂತ್ರಿಯಾಗಿದ್ದು, ಪ್ರಭುತ್ವದ ಸಂಕೇತವಾಗಿರುವ ನಾಯಕರು ಕೂಡ ಎಲ್ಲಿ ತಮ್ಮ ಸ್ವಂತ ಜನಾಂಗ ತಮ್ಮಿಂದ ದೂರ ಸರಿಯುವುದೊ ಎಂಬ ಭಯದಿಂದ ನಿಷ್ಕ್ರಿಯರಾಗಿ ಉಳಿದು ಹೋದರು. ಇಷ್ಟೆಲ್ಲ ನಡೆದ ನಂತರ ಗ್ರಾಮದಲ್ಲಿ 144 ಸೆಕ್ಷನ್ ಹಾಕಿ 30 ಮಂದಿ ಸವರ್ಣೀಯರನ್ನು ಬಂಧಿಸಲಾಯಿತು, ಈ ನಡುವೆ ದಲಿತರಿಗೆ ದಂಡ ವಿಧಿಸಿದ್ದು ಮತ್ತು ದೇವಸ್ಥಾನದೊಳಗೆ ಪ್ರವೇಶವನ್ನು ನಿರಾಕರಿಸಿದ ಅಮಾನವೀಯ ಘಟನೆಗಳು ನೇಪಥ್ಯಕ್ಕೆ ಸರಿದು ಎರಡು ಪ್ರಬಲ ರಾಜಕೀಯ ಶಕ್ತಿಗಳ ಜಟಾಪಟಿಯೇ ಮುಖ್ಯವಾದ ವಿಷಯವಾಗಿ ಪರಿಣಮಿಸಿತು. ಎರಡು ಪಕ್ಷಗಳ ಇಬ್ಬರೂ ನಾಯಕರು ಹಾಸನದ ಮಟ್ಟಿಗೆ ಪ್ರಭುತ್ವದ ಪ್ರತಿನಿಧಿಗಳಾಗಿದ್ದು, ಅವರ ಆಸಕ್ತಿಯಿದ್ದುದು ಸವರ್ಣೀಯರನ್ನು ಕಾನೂನಿನಿಂದ ರಕ್ಷಿಸುವುದಾಗಿತ್ತೇ ಹೊರತು, ದಲಿತರಿಗಾದ ಅವಮಾನಗಳಿಗೆ ಉತ್ತರ ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದಾಗಿರಲಿಲ್ಲ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದಲಿತರ ದೇವಸ್ಥಾನ ಪ್ರವೇಶದ ವಿಷಯ ಸಂಘರ್ಷಕ್ಕೆಡೆ ಮಾಡಿಕೊಟ್ಟಿದ್ದರೂ, ಅದನ್ನು ಅಷ್ಟು ಖಡಕ್ಕಾಗಿ ಎದುರಿಸುವ ಮಟ್ಟಕ್ಕೆ ಸವರ್ಣೀಯರು ಸಿದ್ದರಾಗಿ ನಿಂತಿದ್ದು ಮಾತ್ರ ಪ್ರಭುತ್ವದ ಬೆಂಬಲ ತಮಗಿದೆಯೆನ್ನುವ ಕಾರಣಕ್ಕೆ. ಬಂಧಿತರಾದ ಸವರ್ಣೀಯರ ಬಿಡುಗಡೆಗೆ ಒತ್ತಾಯಿಸಿದ ಸವರ್ಣೀಯರೂ, ಮಾಜಿ ಮಂತ್ರಿಯೂ ಆದ ನಾಯಕರು ತದನಂತರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬಂಧಿತರ ಪರವಾಗಿ ಧರಣಿ ನಡೆಸಿ ಸವರ್ಣೀಯರಿಗೆ ಪ್ರಭುತ್ವದ ಬಲವಿರುವುದನ್ನು ಜಗಜ್ಜಾಹೀರು ಮಾಡಿದರು. ಪ್ರಭುತ್ವ ಹೇಗೆ ಸವರ್ಣೀಯರ ಪರವಾಗಿ ನಿಲ್ಲುತ್ತದೆಯೆಂಬುದಕ್ಕೆ ಇಲ್ಲಿಯೇ ಇನ್ನೊಂದು ಉದಾಹರಣೆ ನೀಡಬಹುದು: ಹಾಸನ ಜಿಲ್ಲೆಯ ಮೀಸಲು ಕ್ಷೇತ್ರದ ದಲಿತ ಶಾಸಕರೊಬ್ಬರು ಸಹ ಸವರ್ಣೀಯರ ಪರವಾಗಿ ನಡೆದ ಧರಣಿಯಲ್ಲಿ ಭಾಗವಹಿಸಿದ್ದು, ಇನ್ನು ಹಿಂದೂಗಳೆಲ್ಲ ಒಂದು ಎಂದು ಹೇಳುತ್ತ ಮತೀಯವಾದವನ್ನೇ ಉಸಿರಾಡುತ್ತಿರುವ ಬಲಪಂಥೀಯ ಪಕ್ಷವಾದ ಭಾಜಪ ಈ ಘಟನೆ ತನಗೆ ಸಂಬಂಧಿಸಿಯೇ ಇಲ್ಲವೇನೊ ಎಂಬಂತೆ ವರ್ತಿಸಿತು.
ಒಟ್ಟಿನಲ್ಲಿ ರಾಜ್ಯದ ಮೂರು ರಾಜಕೀಯ ಪಕ್ಷಗಳು ಸಹ ದಲಿತರ ಮೇಲಿನ ಹಲ್ಲೆಗೆ ನೀರಸವಾಗಿ ಪ್ರತಿಕ್ರಿಯಿಸುತ್ತ ಸವರ್ಣೀಯರಿಗೆ ಪ್ರತ್ಯಕ್ಷ, ಪರೋಕ್ಷ ಬೆಂಬಲ ನೀಡುತ್ತಾ ಬಂದಿದ್ದು ವಿಪರ್ಯಾಸ. ಇನ್ನು ನಮ್ಮ ಗೃಹಸಚಿವರು ಸ್ವತಃ ದಲಿತರಾಗಿದ್ದರೂ ಸಹ ಅವರೂ ಇದೀಗ ಪ್ರಭುತ್ವದ ಒಂದು ಭಾಗವಾಗಿ ಸವರ್ಣೀಯರನ್ನು ಬಲವಾಗಿ ಎದುರಿಸಿ ನಿಂತು ಕ್ರಮ ತೆಗೆದುಕೊಳ್ಳುವ ಛಾತಿಯನ್ನು ತೋರಿಸುತ್ತಿಲ್ಲ. ಮೂಲಭೂತವಾಗಿ ಇಲ್ಲಿ ನನ್ನ ಪ್ರಶ್ನೆಯಿರುವುದು: ಇಂತಹ ಘಟನೆಗಳ ಹಿಂದಿರುವ ಮೇಲ್ಜಾತಿಗಳ ಸಂಘಟಿತ ಹಿಂಸೆಯ ನೈಜ ಕಾರಣಗಳೇನು ಎಂಬುದರ ಬಗ್ಗೆ. ದಲಿತರಲ್ಲಿ ಹೆಚ್ಚುತ್ತಿರುವ ಅಕ್ಷರತೆ,ಉದ್ಯೋಗಾಂಕ್ಷತೆ, ತಮ್ಮ ಹಕ್ಕುಗಳನ್ನು ಎತ್ತರದ ದನಿಯಲ್ಲಿ ಕೇಳಿ ಪಡೆಯುತ್ತಿರುವ ಹೊಸ ಅರಿವಿನ ಪ್ರಜ್ಞೆಗಳಿಂದಾಗಿ ಮೇಲ್ಜಾತಿಯವರಲ್ಲಿ ದಲಿತರ ಬಗ್ಗೆ ಹೆಚ್ಚುತ್ತಿರುವ ಅಸಹನೆ ಮತ್ತು ಅಸೂಯೆಗಳು ಮೂಲಕಾರಣಗಳಾಗಿರಬಹುದಾದರು, ಎಲ್ಲಕ್ಕಿಂತ ಮುಖ್ಯವಾಗಿ ಬದಲಾಗುತ್ತಿರುವ ನಮ್ಮ ರಾಜಕೀಯ ಶೈಲಿ ಎಂದು ನನಗನಿಸುತ್ತದೆ.
ಯಾಕೆಂದರೆ ಕಳೆದ ಒಂದು ಒಂದೂವರೆ ದಶಕದ ನಮ್ಮ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಚುನಾವಣಾ ರಾಜಕಾರಣದ ಉದ್ದೇಶದಿಂದಾಗಿ ಮೇಲ್ಜಾತಿಗಳು ಹೆಚ್ಚೆಚ್ಚು ಸಂಘಟಿರಾಗುತ್ತಾ ಹೋಗುತ್ತಿರುವುದು ಕಾಣುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಮೇಲ್ಜಾತಿಗಳು ದೃವೀಕರಣಗೊಳ್ಳುತ್ತಿವೆ. ಹಲವು ರಾಜಕೀಯ ಅಧಿಕಾರಗಳು ದಲಿತ ಮತ್ತು ಹಿಂದುಳಿದವರ ಪಾಲಾಗುತ್ತಿರುವುದನ್ನು ಸಹಿಸದ ಮೇಲ್ಜಾತಿಗಳು ಒಂದಾಗುತ್ತ ತಮ್ಮ ವಿರುದ್ದ ಸೆಣೆಸಬಲ್ಲ ದಲಿತ ಶಕ್ತಿಗಳನ್ನು ಹಣಿಯಲು ಪ್ರಭುತ್ವದ ನೆರವು ಪಡೆಯುತ್ತಿವೆ. ಹಾಗೆಂದು ಹಿಂದೆಲ್ಲ ಜಾತಿ ರಾಜಕಾರಣವಿರಲಿಲ್ಲ ವೆಂದೇನೂ ಅಲ್ಲ. ಆದರೆ ಇಷ್ಟೊಂದು ಅಗಾಧ ಪ್ರಮಾಣದಲ್ಲಿರಲಿಲ್ಲ. ಹೆಚ್ಚೆಂದರೆ ಕ್ಷೇತ್ರವೊಂದರಲ್ಲಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವ ಇಲ್ಲ ಸೋಲಿಸುವ ಮಟ್ಟಿಗೆ ಸೀಮಿತವಾಗಿತ್ತು.ಆದರೆ ಇವತ್ತು ಜಾತಿಯ ಬೇರುಗಳು ಸಮಾಜದ ಉದ್ದಗಲಕ್ಕೂ ವ್ಯಾಪಿಸಿಕೊಂಡಿವೆ.ಸ್ವಲ್ಪಕಾಲ ಮೌನವಾಗಿದ್ದಂತೆ ಕಾಣುತ್ತಿದ್ದ ಮೇಲ್ಜಾತಿಗಳು ಪರಮಾಧಿಕಾರವನ್ನು ಪಡೆದು ಗತಕಾಲದ ತಮ್ಮ ಪಾಳೇಗಾರಿಕೆಯ ತೆವಲುಗಳನ್ನು ತೀರಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಸಂದರ್ಭದಲ್ಲಿ ನಡೆದ ಕೆಲವು ರಾಜಕೀಯ ಬದಲಾವಣೆಗಳು ಆ ಜಾತಿಗಳ ಆಶಯಕ್ಕೆ ನೀರೆರೆದವು.
ಇದಕ್ಕೆ ತಕ್ಕಂತೆ ರಾಜ್ಯದ ಎರಡು ಮುಖ್ಯಪಕ್ಷಗಳಾದ ಭಾಜಪ ಮತ್ತು ಜನತಾದಳಗಳು ರಾಜ್ಯದೆರಡು ಬಲಿಷ್ಠ ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳನ್ನು ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ಬಳಸಿಕೊಂಡು, ಭಾಜಪ ಲಿಂಗಾಯಿತರ ಪಕ್ಷವಾಗಿಯೂ ಜನತಾದಳ ಒಕ್ಕಲಿಗರ ಪಕ್ಷವಾಗಿಯೂ ಯಾವ ಲಜ್ಜೆಯೂ ಇಲ್ಲದೆ ಗುರುತಿಸಿಕೊಂಡವು. ಇದರ ನೇರ ಪರಿಣಾಮವಾಗಿದ್ದು ಉತ್ತರಕರ್ನಾಟಕದ ಮತ್ತು ಹಳೆ ಮೈಸೂರು ಪ್ರಾಂತ್ಯದ ದಲಿತರ ಮೇಲೆ. ಆ ಭಾಗದ ಪ್ರಬಲ ಜಾತಿಗಳು ತಲಾ ಒಂದು ಪಕ್ಷದ ಬೆಂಬಲ ಪಡೆದು ಅಧಿಕಾರ ಪಡೆಯುತ್ತ ತಮ್ಮ ಹೆಳೆಯ ಪಾಳೆಗಾರಿಕೆಯ ಶೈಲಿಗೆ ಹಿಂದಿರುಗಿ ದಲಿತರ ಪಾಲಿಗೆ ದುಸ್ವಪ್ನಗಳಾಗತೊಡಗಿದವು .ಇನ್ನುಳಿದಂತೆ ಕಾಂಗ್ರೆಸ್ ಎಡಬಿಡಂಗಿಯಂತೆ ಯಾವುದೇ ನಿರ್ಧಾರವನ್ನೂ ತಗೆದುಕೊಳ್ಳದೆ ದಲಿತರ ಹಿತಾಸಕ್ತಿಯನ್ನು ಕಾಯಲಾಗದ ಸ್ಥಿತಿಗೆ ಬಂದು ನಿಂತಿತು. ಸ್ವತ: ಒಂದು ರಾಜಕೀಯ ಶಕ್ತಿಯಾಗಿಬೆಳೆದು ನಿಲ್ಲದ ದಲಿತ ಸಮುದಾಯ ಅನಿವಾರ್ಯವಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸೇರಿ ಹೋಗಿ ದುರ್ಬಲವಾಗುತ್ತಾ ಹೋಯಿತು.
ಹೀಗೆ ತಮಗನುಕೂಲವಾಗಬಲ್ಲಂತಹ ರಾಜಕೀಯ ಅಧಿಕಾರ ಪಡೆದು ಕೂತಿರುವ ಮೇಲ್ಜಾತಿಗಳು ಗ್ರಾಮಗಳಲ್ಲಿ ದಲಿತರ ಪಾಲಿಗೆ ಖಳನಾಯಕರುಗಳಂತೆ ವರ್ತಿಸುತ್ತಿವೆ. ಇವತ್ತು ಹೆಸರಿಗೆ ಮಾತ್ರ ಅಹಿಂದ ಪರವಾದ ಸರಕಾರವಿರುವಂತೆ ಕಂಡರೂ ಆಯಕಟ್ಟಿನ ಜಾಗದಲ್ಲಿರುವ ಮೇಲ್ಜಾತಿಗಳ ಕೊಳಕು ಮನಸ್ಸುಗಳು ದಲಿತವಿರೋಧಿ ಧೋರಣೆಯನ್ನೇ ಅನುಸರಿಸುತ್ತಿವೆ.ಈಗಲಾದರೂ ದಲಿತ ಸಮುದಾಯ ತನ್ನೊಳಗಿನ ಆಂತರಿಕ ಭಿನ್ನಮತಗಳನ್ನೆಲ್ಲ ತೊರೆದು, ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳದೇ ಹೋದರೆ, ಮುಂದಿನ ಪೀಳಿಗೆಯ ದಲಿತರು ಇದಕ್ಕಿಂತ ಹೆಚ್ಚಿನ ರೀತಿಯ ಸಂಘಟಿತ ಹಿಂಸೆಗೆ ಬಲಿಯಾಗಬೇಕಾಗುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಒಂದೂವರೆ ಕೋಟಿಯಷ್ಟಿರುವ ದಲಿತರು ಮತ್ತು ಪರಿಶಿಷ್ಟ ವರ್ಗದವರು ಒಂದು ಬಲಿಷ್ಠ ರಾಜಕೀಯ ಶಕ್ತಿಯಾಗಬಲ್ಲ ಎಲ್ಲ ಅರ್ಹತೆ ಮತ್ತುಅವಕಾಶವನ್ನೂ ಹೊಂದಿರುವುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ.