ಭಾರತದಲ್ಲಿ ಎಲ್ಲಿ ನೋಡಿದರೂ ಶೌಚಾಲಯಗಳು, ಆದರೆ ಎಲ್ಲ ಕೊಳಕುಗಳು... ಹೋಗುವುದಾದರೂ ಎಲ್ಲಿಗೆ?
ಭಾರತವು ಮಿಲಿಯನ್‌ಗಟ್ಟಲೆ ಶೌಚಾಲಯಗಳನ್ನು ನಿರ್ಮಿಸುತ್ತಿದೆ, ಆದರೆ ಬಹುತೇಕ ಭಾಗಗಳಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮಾತ್ರ ಅಸಮರ್ಪಕವಾಗಿದೆ. 2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ, ಶೌಚಾಲಯಗಳ ನಿರ್ಮಾಣ ಮತ್ತು ದೇಶದ ಒಟ್ಟಾರೆ ಸ್ವಚ್ಛತೆಯ ಮಟ್ಟವನ್ನು ಏರಿಸುವುದು ತಮ್ಮ ಮೊದಲ ಆದ್ಯತೆ ಎಂದು ಹೇಳಿಕೊಂಡಿದ್ದರು. 2014ರ ಅಕ್ಟೋಬರ್‌ನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿ ಗಣ್ಯಾತಿಗಣ್ಯರು ಅದನ್ನು ಬೆಂಬಲಿಸುವಂತೆ ಮಾಡಿ, ರೂ. 170 ಕೋಟಿ ಜಾಹೀರಾತಿಗಾಗಿ ವೆಚ್ಚ ಮಾಡಿ, 2014-15ರ ವೇಳೆಗೆ ನಿರ್ಮಿಸಲು ಯೋಜಿಸಲಾಗಿದ್ದ ಐದು ಮಿಲಿಯನ್ ಶೌಚಾಲಯಗಳ ಗುರಿಯನ್ನು ದಾಟಿ 5.8 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸಲಾಯಿತು. ಆದರೆ ಇತ್ತೀಚೆಗೆ ಬಿಡುಗಡೆಯಾದ ಸರಕಾರಿ ವರದಿಯೊಂದು ದೇಶದ ಅಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ. ಬಹಳಷ್ಟು ಹಳ್ಳಿಗರಿಗೆ ಕೊಳಚೆ ನೀರನ್ನು ವಿಸರ್ಜಿಸಲು ಸರಿಯಾದ ವ್ಯವಸ್ಥೆಯಿಲ್ಲ, ನಗರ ಪ್ರದೇಶಗಳಿಗೆ ತಮ್ಮ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಸಮುದಾಯ ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿಲ್ಲ.
ಈ ಸರಕಾರಿ ವರದಿಯಲ್ಲಿ ನ್ಯಾಶನಲ್ ಸ್ಯಾಂಪಲ್ ಸರ್ವೇ ಆಫೀಸ್ (ಎನ್‌ಎಸ್‌ಎಸ್‌ಒ) 2015ರ ಮೇ ಮತ್ತು ಜೂನ್ ಮಧ್ಯೆ 3,788 ಹಳ್ಳಿಗಳಲ್ಲಿ ಮತ್ತು 2,907 ನಗರ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶ ಸೇರಿತ್ತು. ಗ್ರಾಮೀಣ ಭಾರತದಲ್ಲಿ ದ್ರವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆಯಿಲ್ಲ. ಕೇವಲ ಶೇ.56.4 ನಗರ ಪ್ರದೇಶಗಳಲ್ಲಿ ಮಾತ್ರ ಚರಂಡಿ ವ್ಯವಸ್ಥೆಯಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಚರಂಡಿಯ ಶೇ.80 ಭಾಗ ನದಿ, ಸರೋವರ ಮತ್ತ ಕೆರೆ-ಬಾವಿಗಳನ್ನು ಸೇರುತ್ತದೆ. ಪರಿಷ್ಕರಿಸದ ಈ ಕೊಳಚೆಗಳು ಇತರ ನೀರಿನ ಮೂಲಗಳನ್ನೂ ಮಲಿನಗೊಳಿಸುತ್ತವೆ. ಬಹಳಷ್ಟು ಬಾರಿ ಇವು ಭೂಮಿಯಡಿಗೆ ಸೇರುತ್ತಿರುವುದು ಚಿಂತೆಗೀಡು ಮಾಡುವ ವಿಷಯವಾಗಿದೆ ಯಾಕೆಂದರೆ ಕುಡಿಯುವ ನೀರನ್ನು ಮುಖ್ಯವಾಗಿ ಅಂತರ್ಜಲದಿಂದಲೇ ಪಡೆಯಲಾಗುತ್ತದೆ. ಕಸ ವಿಲೇವಾರಿ ಎಂಬ ದುಃಸ್ವಪ್ನ
ಭಾರತದ ಕೆಲವು ಹಳ್ಳಿಗಳಲ್ಲಿ ಕಸ ವಿಲೇವಾರಿ ವ್ಯವಸ್ಥೆಯಿದೆ. ಬಹಳಷ್ಟು ಜನರು ತಮ್ಮ ಮನೆಯ ಹೊರಗಡೆ ಕಸವನ್ನು ಬಿಸಾಡುತ್ತಾರೆ ಅಥವಾ ಸ್ವಲ್ಪ ಪ್ರಯಾಸಪಟ್ಟು ಸಮೀಪದ ಕೃಷಿ ಜಮೀನಿನಲ್ಲಿ ಕಸ ಎಸೆಯುತ್ತಾರೆ. ನಗರಗಳಲ್ಲಿ ತ್ಯಾಜ್ಯ ವಿಲೇವಾರಿ
ಕೇವಲ ಶೇ.43 ನಗರ ಪ್ರದೇಶಗಳಲ್ಲಿ ಮಾತ್ರ ಕಸವನ್ನು ಕೊಂಡೊಯ್ಯಲು ಮನೆ ಬಾಗಿಲಿಗೆ ವಾಹನ ಬರುತ್ತದೆ. ಅದಾಗ್ಯೂ 2016ರ ಜನವರಿಯ ವರದಿಯ ಪ್ರಕಾರ ಇದರಲ್ಲಿ ಕೇವಲ ಶೇ.18 ಕಸವನ್ನು ಮಾತ್ರ ಪರಿಷ್ಕರಿಸಲಾಗುತ್ತದೆ. ಭಾರತದ ನಗರಗಳಲ್ಲಿ ತ್ಯಾಜ್ಯ ವಿಲೇವಾರಿ
ಒಟ್ಟಾರೆ ಪ್ರದೇಶಗಳು-78,633
ಮನೆ ಬಾಗಿಲಿಗೆ ಬರುವ ವ್ಯವಸ್ಥೆ-34,259
ಉತ್ಪತ್ತಿಯಾಗುವ ಒಟ್ಟಾರೆ ತ್ಯಾಜ್ಯ-147,381 ಟನ್/ಒಂದು ದಿನಕ್ಕೆ
ತ್ಯಾಜ್ಯ ವಿಲೇವಾರಿಯ ಕೊರತೆ ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶವನ್ನೇ ಹಾಳುಮಾಡುತ್ತದೆ. ಅಸಮರ್ಪಕ ತ್ಯಾಜ್ಯ ವಿಲೇವಾರಿ ಭಾರತದಲ್ಲಿ ಕನಿಷ್ಠ 22 ರೀತಿಯ ರೋಗಗಳನ್ನು ಉಂಟುಮಾಡುತ್ತದೆ ಎಂದು ಸಮೀಕ್ಷೆ ತಿಳಿಸುತ್ತದೆ. ಎಪ್ರಿಲ್ 10 ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಯಲ್ಲಿ ದಿಲ್ಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ಪರಿಸರತಜ್ಞೆ ಸುನೀತಾ ನರೈನ್ ಈ ರೀತಿ ಬರೆದಿದ್ದಾರೆ:
ನನ್ನ ಸಹೋದ್ಯೋಗಿಗಳು ವಿವಿಧ ನಗರಗಳ ಶೌಚದ ಪ್ರಮಾಣವನ್ನು ಅಧ್ಯಯನ ಮಾಡಿದರು. ಈ ಬಗ್ಗೆ ತಯಾರಿಸಲಾದ ನಕಾಶೆಯು ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂಬುದನ್ನು ಸೂಚಿಸುತ್ತದೆ, ಯಾಕೆಂದರೆ ಎಲ್ಲ ನಗರಗಳೂ ಮಾನವ ಶೌಚವನ್ನು ಒಂದೋ ಪರಿಷ್ಕರಿಸುವುದಿಲ್ಲ ಅಥವಾ ಸುರಕ್ಷಿತವಾಗಿ ವಿಲೇವಾರಿ ಮಾಡುವುದಿಲ್ಲ. ಇದು ಯಾಕೆಂದರೆ ನಾವು ಶೌಚಾಲಯಗಳು ಮತ್ತು ಸ್ವಚ್ಛತೆಯ ಮಧ್ಯೆ ಗೊಂದಲಕ್ಕೀಡಾಗಿದ್ದೇವೆ. ಶೌಚಾಲಯಗಳು ತ್ಯಾಜ್ಯವನ್ನು ಪಡೆಯುವ ಒಂದು ಸಾಧನವಷ್ಟೇ, ನಾವು ನೀರು ಹಾಕಿದಾಗ ಈ ತ್ಯಾಜ್ಯ ಪೈಪ್‌ಗಳ ಮೂಲಕ ಚರಂಡಿ ಸೇರುತ್ತದೆ, ಈ ಚರಂಡಿಯನ್ನು ಎಸ್ಟಿಪಿ ಅಂದರೆ ಚರಂಡಿ ಪರಿಷ್ಕರಣಾ ಘಟಕಕ್ಕೆ ಜೋಡಿಸಿಯೂ ಇರಬಹುದು, ಇಲ್ಲದೆಯೂ ಇರಬಹುದು. ಈ ಎಸ್ಟಿಪಿ ಕಾರ್ಯನಿರ್ವಹಿಸುತ್ತಲೂ ಇರಬಹುದು, ಇಲ್ಲದೆಯೂ ಇರಬಹುದು. ಹೀಗಾದಾಗ ಮಾನವ ತ್ಯಾಜ್ಯವನ್ನು ಚರಂಡಿಗೆ ಸಾಗುವಂತೆ ಮಾಡಿದರೂ ಸರಿಯಾಗಿ ವಿಲೇವಾರಿ ಮಾಡದ ಕಾರಣ ಸಮೀಪದ ನದಿಗೋ ಸರೋವರಕ್ಕೋ ಬಿಡಲಾಗುವುದು. ಇವೆಲ್ಲವೂ ಮತ್ತಷ್ಟು ಮಾಲಿನ್ಯವನ್ನು ಹರಡುತ್ತವೆ.
ನಗರ ಪ್ರದೇಶದ ಕಸದ ಕೊಂಪೆ
ಭಾರತದ ನಗರ ಪ್ರದೇಶಗಳು ಹಳ್ಳಿಪ್ರದೇಶಗಳಿಗಿಂತ ಕೇವಲ ಕೊಂಚ ಉತ್ತಮವಾಗಿವೆ. ಶೇ.64 ನಗರ ಪ್ರದೇಶಗಳಲ್ಲಿ ಗಟ್ಟಿ ಕಸ ಎಸೆಯಲು ಸ್ಥಳಗಳನ್ನು ನಿಗದಿ ಮಾಡಲಾಗಿದೆಯಾದರೂ, ಇವುಗಳಲ್ಲಿ ಶೇ.48 ಮಾತ್ರ ಪ್ರತಿದಿನ ಸ್ವಚ್ಛಗೊಳಿಸಲಾಗುತ್ತದೆ.
ಈಗಾಗಲೇ ಜಾಗದ ಕೊರತೆಯನ್ನು ಅನುಭವಿಸುತ್ತಿರುವ ಭಾರತದ ದೊಡ್ಡ ನಗರಗಳಾದ ದಿಲ್ಲಿ ಮತ್ತು ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ತೆರೆದ ಬಯಲು ಪ್ರದೇಶಗಳಲ್ಲಿ ಕಸವನ್ನು ಎಸೆಯಲಾಗುತ್ತದೆ. ಈ ಪ್ರದೇಶಗಳು ನಿಧಾನವಾಗಿ ಸಣ್ಣಸಣ್ಣ ಕಸದ ಗುಡ್ಡೆಗಳಾಗಿ ಮಾರ್ಪಟ್ಟಿವೆ.
ಕೊಳಕು ಶೌಚಾಲಯಗಳು
ಶೇ.22.6 ಗ್ರಾಮಗಳಲ್ಲಿ ಮತ್ತು ಶೇ.8.6 ನಗರ ಪ್ರದೇಶಗಳಲ್ಲಿ ಸ್ಥಳೀಯರು ಬಳಸುವ ಸಮುದಾಯ ಶೌಚಾಲಯ ಗಳನ್ನು ಸ್ವಚ್ಛಗೊಳಿಸಲು ಯಾರೂ ಇಲ್ಲ ಎಂದು ಸಮೀಕ್ಷೆಯು ಬೆಟ್ಟು ಮಾಡುತ್ತದೆ. ಕೊಳಕು ಶೌಚಾಲಯಗಳು ಚರ್ಮವ್ಯಾಧಿ ಮತ್ತು ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿಗೆ ಪ್ರಮುಖ ಕಾರಣವಾಗಿದೆ. ಅಷ್ಟುಮಾತ್ರವಲ್ಲದೆ ಶೌಚದ ತ್ಯಾಜ್ಯದಲ್ಲಿ 200 ರೀತಿಯ ವೈರಸ್‌ಗಳು ಉತ್ಪತ್ತಿಯಾಗುತ್ತವೆ.