ದಲಿತರು ಮತ್ತು ಮಾಧ್ಯಮ
ನೋವುಂಡವರ ನೋವು ನೋವುಂಡವರಿಗೆ ಮಾತ್ರ ಗೊತ್ತಾಗುತ್ತದೆ ಎಂಬ ಮಾತಿದೆ. ಇದು ಈ ದೇಶದ ದಲಿತರ ವಿಷಯದಲ್ಲಿ ಅಕ್ಷರಶಃ ಸತ್ಯವಾದ ಮಾತು. ಸಹಸ್ರಾರು ವರ್ಷಗಳಿಂದ ನಮ್ಮ ಸಮಾಜದಲ್ಲಿ ದಲಿತರನ್ನು ಪ್ರಾಣಿಗಿಂತಲೂ ಕಡೆಯಾಗಿ ಕಂಡು ಅವರ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಇತ್ಯಾದಿ ಮನುಷ್ಯ ವಿರೋಧಿ ನಡವಳಿಕೆಗಳು ಸ್ವಾತಂತ್ರಾ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಲ್ಲಿ ದಲಿತರನ್ನು ಶೋಷಣೆಯಿಂದ ಮುಕ್ತ ಮಾಡಲು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮೀಸಲಾತಿ ಸೌಲಭ್ಯ ಸೇರಿದಂತೆ ಹಲವಾರು ಪ್ರಗತಿಪರ ಕ್ರಮಗಳಿಗೆ ಆದ್ಯತೆ ನೀಡಿದರೂ ಇನ್ನೂ ಒಂದಿಲ್ಲೊಂದು ರೀತಿಯಲ್ಲಿ ಮುಂದುವರಿಯುತ್ತಲೇ ಇವೆ.
ಈ ನಿಟ್ಟಿನಲ್ಲಿ ಮಾಧ್ಯಮಗಳು ಎಷ್ಟು ಗಮನ ಕೊಡಬೇಕಿತ್ತೋ, ಸರಕಾರ ಹಾಗೂ ಸಮಾಜದ ಕಿವಿ ಹಿಂಡಬೇಕಿತ್ತೋ ಅದರಲ್ಲಿ ಅವು ವಿಫಲವಾಗಿವೆ ಎಂಬುವುದು ವಿಷಾದದ ಸಂಗತಿ. ಇದಕ್ಕೆ ಪ್ರಮುಖ ಕಾರಣ ಬಹುಪಾಲು ಮಾಧ್ಯಮಗಳು ಉಳ್ಳವರ ಹಾಗೂ ಮೇಲ್ಜಾತಿಯವರ ಹಿಡಿತದಲ್ಲಿರುವುದು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ದಲಿತರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವುದೇ ಆಗಿದೆ. ದಲಿತರನ್ನು ಹಾಗೂ ಸಮಾನತೆ ಬಯಸುವ ಜನರನ್ನು ಕಾಡುತ್ತಿರುವ ಈ ಸಂಗತಿಯನ್ನು ಸ್ವತಃ ಮಾಧ್ಯಮ ಕ್ಷೇತ್ರದಲ್ಲಿದ್ದು ಪಿಎಚ್‌ಡಿಗಾಗಿ ಸಂಶೋಧನೆ ನಡೆಸುತ್ತಿರುವ ದಿಲೀಪ್ ಕುಮಾರ್ ಎಂ. (ದಿಲೀಪ್ ನರಸಯ್ಯ) ಅವರು ‘ ದಲಿತರು ಮತ್ತು ಮಾಧ್ಯಮ’ ಎಂಬ ತಮ್ಮ ಕೃತಿಯ ಲೇಖನದಲ್ಲಿ ಬಹು ಪರಿಣಾಮಕಾರಿಯಾಗಿ ವಿಶ್ಲೇಷಿಸಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಹಾಗೂ ದಲಿತರು ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಅಗತ್ಯವನ್ನು ಮನಗಾಣಿಸಿದ್ದಾರೆ. ಇದಲ್ಲದೆ ದೇಶವನ್ನು ಕಿತ್ತು ತಿನ್ನುತ್ತಿರುವ ಹಲವಾರು ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ ಅಂಕಿ-ಅಂಶಗಳ ಸಮೇತ ಅವರು ಬರೆದಿರುವ ಲೇಖನಗಳನ್ನು ಈ ಕೃತಿ ಒಳಗೊಂಡಿವೆೆ. ನಮ್ಮ ದೇಶದ ಬಹು ಸಂಖ್ಯೆಯ ದಲಿತರ ಸ್ಥಿತಿಗತಿಗಳ ಬಗೆಗಿನ ಹಾಗೂ ಒಟ್ಟಾರೆ ದೇಶದ ಒಳಿತಿನ ಬಗೆಗಿನ ಅವರ ಚಿಂತನೆ ಹಾಗೂ ಕಾಳಜಿಗಾಗಿ ಅವರನ್ನು ಅಭಿನಂದಿಸುತ್ತೇನೆ.