ಜಪಾನ್ಗೆ ಲಕ್ಷ ಕೋಟಿ ರೂ.ಸಾಲ ಮರುಪಾವತಿಸಲು ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ಎಷ್ಟು ಟ್ರಿಪ್ ಮಾಡಬೇಕು ಗೊತ್ತೇ?
ಅಹ್ಮದಾಬಾದ್: ಮುಂಬೈ ಹಾಗೂ ಅಹ್ಮದಾಬಾದ್ ನಡುವೆ ಆರಂಭಿಸಲು ಉದ್ದೇಶಿಸಿರುವ ಬುಲೆಟ್ ರೈಲು ಯೋಜನೆ ಆರ್ಥಿಕವಾಗಿ ಲಾಭದಾಯಕವಾಗಬೇಕಾದರೆ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರನ್ನು ಪ್ರತಿದಿನ ಹೊತ್ತೊಯ್ಯಬೇಕು ಅಥವಾ ದಿನಕ್ಕೆ 100 ಟ್ರಿಪ್ ಮಾಡಬೇಕು ಎಂದು ಅಹ್ಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಡೆಡಿಕೇಟೆಡ್ ಹೈಸ್ಪೀಡ್ ರೈಲ್ವೆ ನೆಟ್ ವರ್ಕ್ಸ್ ಇನ್ ಇಂಡಿಯಾ: ಇಶ್ಯೂಸ್ ಇನ್ ಡೆವಲಪ್ಮೆಂಟ್" ಎಂಬ ಶೀರ್ಷಿಕೆಯ ಈ ಅಧ್ಯಯನ ವರದಿಯಲ್ಲಿ, "300 ಕಿಲೋಮೀಟರ್ ದೂರದ ಪ್ರಯಾಣಕ್ಕೆ ರೈಲ್ವೆ 1500 ರೂಪಾಯಿ ದರ ನಿಗದಿಪಡಿಸಬೇಕು. ಹದಿನೈದು ವರ್ಷಗಳ ಕಾಲ ಕಾರ್ಯಾಚರಣೆ ಬಳಿಕ ಕನಿಷ್ಠ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ದರೆ ಮಾತ್ರ ಸಾಲ ಹಾಗೂ ಬಡ್ಡಿಯನ್ನು ಸಕಾಲಕ್ಕೆ ಪಾವತಿಸಲು ಸಾಧ್ಯವಾಗುತ್ತದೆ" ಎಂದು ವಿವರಿಸಲಾಗಿದೆ.
ಈ ಯೋಜನೆಗೆ ಜಪಾನ್ 97,636 ಕೋಟಿ ರೂಪಾಯಿಗಳ ರಿಯಾಯ್ತಿದರದಲ್ಲಿ ಸಾಲ ನೀಡಿದೆ. ಅಂದರೆ ಇಡೀ ಯೋಜನೆಯ ಶೇಕಡ 80ರಷ್ಟು ಹಣವನ್ನು ಜಪಾನ್ ಭರಿಸಿದ್ದು, 50 ವರ್ಷಗಳಲ್ಲಿ ಇದನ್ನು ಮರುಪಾವತಿ ಮಾಡಬೇಕಾಗುತ್ತದೆ. ಕಾರ್ಯಾಚರಣೆ ಆರಂಭಿಸಿದ ಹದಿನಾರನೆ ವರ್ಷದಿಂದ ಶೇಕಡ 0.1ರ ಬಡ್ಡಿಯೊಂದಿಗೆ ಇದರ ಮರುಪಾವತಿ ಆರಂಭಿಸಬೇಕಾಗುತ್ತದೆ.
ಯೋಜನಾ ವೆಚ್ಚದ ಶೇಕಡ 20ರಷ್ಟು ಹಣಕ್ಕೆ ಶೇಕಡ 8ರಷ್ಟು ಬಡ್ಡಿ ನೀಡಬೇಕಾಗುತ್ತದೆ. ಈ ಸಾಲವನ್ನು ಕೂಡಾ 15 ವರ್ಷಗಳ ಅವಧಿಗೆ ನೀಡಲು ಜಪಾನ್ ಮುಂದೆ ಬಂದಿದೆ. ಈ ರೈಲು ಮಾರ್ಗ 534 ಕಿಲೋಮೀಟರ್ ಉದ್ದ ಇರುತ್ತದೆ.